17 Jan 2012

ಕರಮಜೋವ್ ಸಹೋದರರು - ಫೋಯ್ದರ್ ದಸ್ತಯೇವ್‍ಸ್ಕಿ ಭಾಗ ೧, ಪುಸ್ತಕ ೧, ಅಧ್ಯಾಯ ೧



ಕರಮಜೋವ್ ಸಹೋದರರು - ಫೋಯ್ದರ್ ದಸ್ತಯೇವ್‌ಸ್ಕಿ
ಭಾಗ ೧
ಪುಸ್ತಕ ೧
ಒಂದು ಕುಟುಂಬದ ಇತಿಹಾಸ
ಅಧ್ಯಾಯ ೧
ಫೋಯ್ದರ್ ಪಾವ್ಲೋವಿಚ್ ಕರಮಜೋವ್
ಅಲೆಕ್ಸಿ ಫೋಯ್ದರೋವಿಚ್, ಫೋಯ್ದರ್ ಪಾವ್ಲೋವಿಚ್ ಕರಮಜೋವ್‌ನ ಮೂರನೆಯ ಮಗ. ಜಮೀನ್ದಾರನಾಗಿದ್ದ ಫೋಯ್ದರ್‌ನ ದುರಂತಮಯವಾದ ಸಾವನ್ನು ನಮ್ಮ ಜನ ಇಂದಿಗೂ ನೆನೆಯುತ್ತಾರೆ. ಹದಿಮೂರು ವರ್ಷಗಳ ಹಿಂದಿನ ಆ ದಾರುಣ ಕತೆಯನ್ನು ನಾನು ಮುಂದೆ ಹೇಳಲಿದ್ದೇನೆ. ಈಗ ಆ ಜಮೀನ್ದಾರನ ಬಗ್ಗೆ ಇಷ್ಟಂತೂ ಹೇಳಬಹುದು: ಜಮೀನ್ದಾರನಾಗಿದ್ದರೂ ತನ್ನ ಇಡೀ ಜೀವಮಾನದಲ್ಲಿ ಹೆಚ್ಚೆಂದರೆ ಒಂದು ದಿವಸವನ್ನಷ್ಟೇ ಅವನು ತನ್ನ ಜಮೀನಿನಲ್ಲಿ ಕಳೆದಿರಬಹುದು. ಆದರೂ ನಾವೆಲ್ಲ ಆತನನ್ನು ಜಮೀನ್ದಾರ ಎಂದೇ ಕರೆಯುತ್ತಿದ್ದುದು. ಅವನು ತುಂಬ ವಿಚಿತ್ರ ವ್ಯಕ್ತಿ; ಒಮ್ಮೆ ಭೇಟಿಯಾದರೆ ಇಂಥವರನ್ನು ಬದುಕಿನಲ್ಲಿ ಆಗಾಗ ನೋಡುತ್ತಿರಬೇಕು ಅನ್ನಿಸುತ್ತದೆ. ಕ್ಷುದ್ರಬುದ್ಧಿಯ, ಪರಮನೀಚ ಸ್ವಭಾವದ ಮತಿಹೀನ ವ್ಯಕ್ತಿ ಆತ. ಮತಿಹೀನನೆಂದರೆ, ಅವನು ತಮ್ಮ ಪ್ರಾಪಂಚಿಕ ವ್ಯವಹಾರಗಳನ್ನು ಚಾಣಾಕ್ಷತನದಿಂದ ನೋಡಿಕೊಳ್ಳಬಲ್ಲ ಮತಿಹೀನರ ಪೈಕಿಯವನು. ಉದಾಹರಣೆಗೆ, ಪಾವ್ಲೋವಿಚ್ ತನ್ನ ಬದುಕನ್ನು ಬರಿಗೈಯಿಂದ ಪ್ರಾರಂಭಿಸಿದ. ಅವನದ್ದು ಊರಲ್ಲೇ ಅತ್ಯಂತ ಚಿಕ್ಕ ಜಮೀನಾಗಿತ್ತು. ಒಮ್ಮೊಮ್ಮೆ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೇ ಅವರಿವರ ಮುಖಸ್ತುತಿ ಮಾಡಿ, ಗೋಗರೆದು ಆ ದಿನದ ತುತ್ತಿನ ಚೀಲವನ್ನು ತುಂಬಿಸಿ ಕೊಳ್ಳುತ್ತಿದ್ದ. ಆದರೆ ಸಾಯುವಾಗ ಕೋಟ್ಯಂತರ ರೂಬಲ್‌ಗಳನ್ನು ಬಿಟ್ಟು ಹೋಗಿದ್ದ. ಅಷ್ಟಾದರೂ ಅವನು ತನ್ನ ಇಡೀ ಬದುಕನ್ನು ಒಬ್ಬ ಮತಿಗೇಡಿಯಂತೆ ಬದುಕಿದ್ದ. ಇಂಥ ಬೇರೊಬ್ಬರು ನಮ್ಮ ಇಡೀ ಜಿಲ್ಲೆಯಲ್ಲಿ ಕಾಣಲು ಸಿಗುವುದಿಲ್ಲ. ಆದರೆ ಲೋಕದಲ್ಲಿ ಇಂಥವರೂ ಇರುತ್ತಾರೆ. ಇವರು ಮೂರ್ಖರಲ್ಲ, ಮಹಾ ಚಾಣಾಕ್ಷರು ಆದರೆ ಮತಿಗೇಡಿಗಳು.
ಎರಡು ಮದುವೆಯಾಗಿದ್ದ ಇವನಿಗೆ ಮೂವರು ಮಕ್ಕಳಿದ್ದರು. ಮೊದಲ ಹೆಂಡತಿಗೆ ಹುಟ್ಟಿದ್ದ ದಿಮಿತ್ರಿ ಹಿರಿಯವನು. ಇವಾನ್ ಹಾಗು ಅಲೆಕ್ಸಿ ಎಂಬಿಬ್ಬರು ಎರಡನೆಯ ಹೆಂಡತಿಗೆ ಹುಟ್ಟಿದ್ದರು. ಫೋಯ್ದರ್ ಪಾವ್ಲೋವಿಚ್‌ನ ಮೊದಲ ಹೆಂಡತಿ ಆಗರ್ಭ ಶ್ರೀಮಂತರ ಮನೆತನಕ್ಕೆ ಸೇರಿದವಳು. ಆಕೆಯ ತವರಿನವರು ನಮ್ಮ ಜಿಲ್ಲೆ ಮ್ಯುಸೋವ್‌ನ ಅತಿ ದೊಡ್ಡ ಭೂಮಾಲೀಕರಾಗಿದ್ದರು. ಚೆಲುವೆಯೂ, ಜಾಣೆಯೂ ಅಂತಹ ಒಳ್ಳೆಯ ಮನೆತನಕ್ಕೆ ಸೇರಿದವಳೂ ಆದ ಆಕೆ ಎಲ್ಲ ಬಿಟ್ಟು ಈ ಮೂರುಕಾಸಿನ ಮನುಷ್ಯನನ್ನು - ಹಾಗೆಂದೇ ನಾವೆಲ್ಲ ಅವನನ್ನು ಕರೆಯುತ್ತಿದ್ದುದು - ಹೇಗೆ ವರಿಸಿದಳೋ,..ಅದನ್ನೆಲ್ಲ ನಾನು ವಿಸ್ತರಿಸಲು ಹೋಗುವುದಿಲ್ಲ. ಕಳೆದ (ರೊಮ್ಯಾಂಟಿಕ್) ಯುಗದ ಒಬ್ಬ ನವ ತರುಣಿಯನ್ನು ನಾನು ಬಲ್ಲೆ. ಒಬ್ಬ ಯುವಕನಲ್ಲಿ ತೀವ್ರವಾಗಿ ಅನುರಕ್ತಳಾಗಿದ್ದ ಆಕೆ ಆತನನ್ನು ಸುಲಭವಾಗಿಯೇ ಮದುವೆಯಾಗಬಹುದಿತ್ತು. ಆದರೆ ತನ್ನ ತಿಕ್ಕಲುತನವನ್ನು ತೃಪ್ತಿಪಡಿಸಿಕೊಳ್ಳಲು ತನ್ನ ಮದುವೆಗೆ ಇಲ್ಲಸಲ್ಲದ ಅಡೆತಡೆಗಳನ್ನು ಒಡ್ಡಿಕೊಂಡು ಕೊನೆಗೆ ಶೇಕ್ಸ್‌ಪಿಯರನ ಒಫೀಲಿಯಾಳಂತೆ ಒಂದು ಕಗ್ಗತ್ತಲೆಯ ರಾತ್ರಿಯಲ್ಲಿ ಎತ್ತರದ ದಡದ ಮೇಲೆ ನಿಂತು ಕೆಳಗೆ ಪ್ರಪಾತದಲ್ಲಿ ರಭಸವಾಗಿ ಹರಿಯುತ್ತಿದ್ದ ನದಿಗೆ ಹಾರಿಕೊಂಡು ಸತ್ತುಹೋದಳು. ಅವಳು ಅಷ್ಟೊಂದು ಇಷ್ಟ ಪಟ್ಟಿದ್ದ ಆ ಪ್ರಪಾತವು ನಿಜಕ್ಕೂ ಅಷ್ಟು ಆಕರ್ಷಕವಾಗಿ ಇರದೇ ಹೋಗಿದ್ದರೆ ಬಹುಶಃ ಆ ಆತ್ಮಹತ್ಯೆ ಸಂಭವಿಸುತ್ತಿರಲಿಲ್ಲವೇನೋ! ಇದು ನಿಜ. ಕಳೆದ ೨-೩ ತಲೆಮಾರುಗಳಲ್ಲಿ ಹಿಂದಿರುಗಿ ನೋಡಿದರೆ ಇಂತಹ ಮತ್ತೊಂದು ನಿದರ್ಶನ ಕಾಣಸಿಗದು. ಅಡೆಲಾಯ್‌ಡಾ ಇವಾನೋವ್ನಾ ಮ್ಯುಸೋವ್‌ಳ ಈ ಮದುವೆಯ ನಿರ್ಧಾರ ಬೇರೆಯವರ ವಿಚಾರಗಳಿಗೆ ಒಂದು ಪ್ರತಿಕ್ರಿಯೆಯಾಗಿತ್ತು. ಮಾನಸಿಕ ಸ್ವಾತಂತ್ರ್ಯವಿಲ್ಲದ ವಿಚಲಿತ ಮನಃಸ್ಥಿತಿಯು ತೆಗೆದುಕೊಂಡ ತೀರ್ಮಾನ ಅವಳದಾಗಿತ್ತು. ಈ ಮದುವೆಯಿಂದ ಅವಳಿಗೆ ಬಹುಶಃ ವರ್ಗಭೇದವನ್ನು ಮೀರಿ, ಕೌಟುಂಬಿಕ ಸರ್ವಾಧಿಕಾರವನ್ನು ಉಲ್ಲಂಘಿಸಿ, ತನ್ನ ಸ್ತ್ರೀಸಹಜ ಸ್ವಾತಂತ್ರ್ಯವನ್ನು ಸಾಬೀತುಮಾಡಬೇಕು ಎನಿಸಿತ್ತು. ಹಾಗಾಗಿ ಫಾಯ್ದರ್ ಪಾವ್ಲೋವಿಚ್‌ನಂತಹ ದುಷ್ಟನೂ, ವಿದೂಷಕನೂ, ಪರೋಪಜೀವಿಯೂ ಅವಳ ಕಲ್ಪನಾಲೋಕದಲ್ಲಿ ನವಯುಗದ ಧೀಮಂತ ಪುರುಷನ ರೂಪದಲ್ಲಿ ಗೋಚರಿಸಿದ. ಮದುವೆಗೆ ಮುನ್ನ ತನ್ನ ವರನೊಂದಿಗೆ ತಲೆಮರೆಸಿಕೊಂಡು ಓಡಿಹೋದ ಪ್ರಕರಣವು ಅಡೆಲಾಯ್‌ಡಾ ಇವಾನೋವ್ನಾಳ ಕಲ್ಪನಾಲೋಕವನ್ನು ಗಾಢವಾಗಿ ಪ್ರಭಾವಿಸಿಬಿಟ್ಟಿತು. ಫೋಯ್ದರ್ ಪಾವ್ಲೋವಿಚ್ ಆಗ ಇಂತಹ ಯಾವ ಹುಚ್ಚುತನಕ್ಕೆ ಬೇಕಾದರೂ ಕೈಹಾಕುವ ಪರಿಸ್ಥಿತಿಯಲ್ಲಿದ್ದ. ಆಗ ಅವನು ಹೇಗಾದರೂ ಮಾಡಿ ತನ್ನ ಜೀವನವನ್ನು ದೃಢವಾಗಿ ರೂಪಿಸಿಕೊಳ್ಳಬೇಕು ಎಂಬ ಆಲೋಚನೆಯಲ್ಲಿದ್ದ. ಅಂದರೆ ಒಂದು ಒಳ್ಳೆಯ ಕುಟುಂಬದೊಂದಿಗೆ ತನ್ನನ್ನು ಗುರುತಿಸಿಕೊಂಡು, ಒಳ್ಳೆಯ ಮೊತ್ತದ ವರದಕ್ಷಿಣೆಯನ್ನು ಪಡೆಯುವುದು ಅವನ ಲೆಕ್ಕಾಚಾರವಾಗಿತ್ತು. ಪ್ರೀತಿಯ ಸಂಬಂಧವನ್ನು ಬೆಳೆಸಿಕೊಳ್ಳುವ ಸಂದರ್ಭ ಅವಳಿಗಾಗಲಿ, ಅವನಿಗಾಗಲಿ ಏರ್ಪಡಲಿಲ್ಲ. ಅಡೆಲಾಯ್‌ಡಾ ಇವಾನೋವ್ನಾ ಅಪರೂಪದ ಸುಂದರಿಯಾಗಿದ್ದರೂ ಫೋಯ್ದರ್ ಪಾವ್ಲೋವಿಚ್ ಯಾವುದೇ ಹೆಣ್ಣಿನ ಕಣ್ಸನ್ನೆಗೆ ಮನಸೋತು ಅವಳನ್ನು ಹಿಂಬಾಲಿಸಿ ಹೋಗುವ ಮಹಾ ಲಂಪಟನೂ, ಕಾಮುಕನೂ ಆಗಿದ್ದ. ಇಂಥವನ ಕಣ್ಣುಗಳನ್ನು ಅಡೆಲಾಯ್‌ಡಾಳ ಬಿನ್ನಾಣವಿಲ್ಲದ ಸೊಬಗು ಅಷ್ಟಾಗಿ ಸೆಳೆಯಲಿಲ್ಲ.
ತನ್ನ ಗಂಡನ ಬಗ್ಗೆ ತನ್ನಲ್ಲಿ ತಿರಸ್ಕಾರವಲ್ಲದೆ ಬೇರೆ ಮತ್ತಾವ ಭಾವನೆಯೂ ಇಲ್ಲ ಎಂಬುದು ಅವನೊಂದಿಗೆ ಓಡಿ ಹೋದ ದಿನವೇ ಅಡೆಲಾಯ್‌ಡಾ ಇವಾನೋವ್ನಾಗೆ ಮನವರಿಕೆಯಾಯಿತು. ಮದುವೆಯಾದ ಸ್ವಲ್ಪಸಮಯದಲ್ಲೇ ಅದು ನಿಜವಾಯಿತು ಕೂಡ. ಆದರೆ ಸಂದರ್ಭವನ್ನು ಅರಿತ ಕುಟುಂಬದವರು ಓಡಿಹೋಗಿದ್ದ ಹೆಣ್ಣಿನ ಪಾಲಿಗೆ ಸಲ್ಲಬೇಕಾದ ವರದಕ್ಷಿಣೆಯನ್ನು ನೀಡಿ ಮದುವೆಯನ್ನು ನೆರವೇರಿಸಿದರು. ಮದುವೆಯಾದ ಮೇಲೆ ಗಂಡ ಹೆಂಡಿರು ತುಂಬ ಅಸ್ತವ್ಯಸ್ತವಾಗಿ ಜೀವನ ಮಾಡುತ್ತಿದ್ದರು. ಅವರಿಬ್ಬರ ನಡುವೆ ಪ್ರತಿದಿನವೂ ಕೊನೆಯಿಲ್ಲದಂತೆ ಜಗಳ, ಘರ್ಷಣೆಗಳು ನಡೆಯುತ್ತಿದ್ದವು. ತನ್ನ ಹೆಂಡತಿ ತನಗಿಂತ ಹೆಚ್ಚು ಉದಾರಿಯೂ, ಮರ್ಯಾದಸ್ಥೆಯೂ ಎಂದು ಅರಿತ ಫೋಯ್ದರ್ ಪಾವ್ಲೋವಿಚ್ ಹೆಂಡತಿಯ ಹಣವನ್ನೆಲ್ಲ ತನ್ನ ವಶದಲ್ಲಿರಿಸಿಕೊಂಡ. ಆಕೆಯ ಹೆಸರಿನಲ್ಲಿದ್ದ ಸ್ಥಿರಾಸ್ತಿಯನ್ನೂ ಉಪಾಯವಾಗಿ ತನ್ನ ಹೆಸರಿಗೆ ಮಾಡಿಸಿಕೊಂಡ. ತನ್ನ ಬಿಕನಾಸಿತನದಿಂದ ಹೆಂಡತಿಗೆ ಜಿಗುಪ್ಸೆ ಉಂಟುಮಾಡಿದ್ದ. ಅಡೆಲಾಯ್‌ಡಾ ಇವನ ಸಣ್ಣತನಕ್ಕೆ ಬೇಸತ್ತು ಇವನಿಂದ ದೂರಹೋಗುವ ಮನಸ್ಸು ಮಾಡಿದ್ದರೂ ಆಕೆಯ ಮನೆಯವರು ಮಧ್ಯೆ ಪ್ರವೇಶಿಸಿ ಅಡೆಲಾಯ್‌ಡಾಳಿಗೆ ಸಾಂತ್ವನ ಹೇಳದೇ ಫೋಯ್ದರ್ ಪಾವ್ಲೋವಿಚ್‌ನ ದುರಾಸೆಗೆ ರಹದಾರಿಗಳನ್ನು ಒದಗಿಸುತ್ತಿದ್ದರು. ಗಂಡಹೆಂಡಿರು ಬಡಿದಾಡಿಕೊಳ್ಳುತ್ತಿದ್ದ ಸುದ್ದಿಯ ಜೊತೆಗೆ ಗಂಡ ಹೆಂಡತಿಯ ಮೇಲೆ ಎಂದೂ ಕೈ ಎತ್ತುತ್ತಿರಲಿಲ್ಲ ಆದರೆ ಅವನಿಗಿಂತ ಗಟ್ಟಿಮುಟ್ಟಾಗಿದ್ದ ಅಡೆಲಾಯ್‌ಡಾಳೇ ಅವನನ್ನು ಆಗಾಗ ಥಳಿಸುತ್ತಿದ್ದಳು ಎಂಬ ವದಂತಿಯೂ ಕಿವಿಯಿಂದ ಕಿವಿಗೆ ಹರಡಿತ್ತು. ಕೊನೆಗೆ ಅಡೆಲಾಯ್‌ಡಾ ಒಬ್ಬ ನಿರ್ಗತಿಕ ಧರ್ಮಶಾಸ್ತ್ರದ ವಿದ್ಯಾರ್ಥಿಯ ಸಹವಾಸ ಮಾಡಿ ಗಂಡನನ್ನೂ ಮನೆಯನ್ನೂ ಬಿಟ್ಟು ಮೂರು ವರ್ಷದ ಮಗ ಮಿತ್ಯಾನನ್ನು ಗಂಡನ ಮಡಿಲಿಗೆ ಹಾಕಿ ಓಡಿಹೋದಳು. ಇದನ್ನು ನಿರೀಕ್ಷಿಸಿರದಿದ್ದ ಫೋಯ್ದರ್ ಪಾವ್ಲೋವಿಚ್ ಆಮೇಲೆ ತನ್ನ ಮನೆಗೆ ಎಲ್ಲ ರೀತಿಯ ಭದ್ರತೆಯನ್ನು ಒದಗಿಸಿಕೊಂಡುದಲ್ಲದೇ ತನ್ನ ಕುಡಿತದ ವ್ಯಸನವನ್ನೂ ತಹಬಂದಿಗೆ ತಂದುಕೊಂಡ. ಬಿಡುವಾದಾಗಲೆಲ್ಲ ಅಡೆಲಾಯ್‌ಡಾ ತನಗೆ ಎಸಗಿದ ದ್ರೋಹವನ್ನು ಊರಿನವರ ಮುಂದೆಲ್ಲ ನಾಚಿಕೆಯಿಲ್ಲದೆ ಹೇಳಿಕೊಳ್ಳುತ್ತ ಕಣ್ಣೀರು ಸುರಿಸುತ್ತಿದ್ದ. ’ಫೋಯ್ದರ್ ಪಾವ್ಲೋವಿಚ್, ಇಂತಹ ಕಣ್ಣೀರಿನ ಕತೆಯನ್ನೂ ಎಷ್ಟು ಉತ್ಸಾಹದಿಂದ ಹೇಳಿಕೊಳ್ಳುವೆಯಲ್ಲ’ ಎಂದು ಊರಿನವರು ಗೇಲಿ ಮಾಡುತ್ತಿದ್ದರು. ಇನ್ನೂ ಕೆಲವರು ತನ್ನ ಬದುಕಿನಲ್ಲಿ ತಾನೊಬ್ಬ ಹಾಸ್ಯಾಸ್ಪದ ವ್ಯಕ್ತಿಯಾಗಿದ್ದೇನೆ ಎಂದು ಅವನಿಗೆ ತಿಳಿದಿದೆ. ಅದನ್ನು ಮರೆಮಾಚಲು ಹೀಗೆ ಕಣ್ಣೀರಿಡುತ್ತಾ ಇನ್ನೂ ಹಾಸ್ಯಾಸ್ಪದನಂತ ಕಾಣಿಸುತ್ತಿದ್ದಾನೆ ಎಂದುಕೊಳ್ಳುತ್ತಿದ್ದರು. ಯಾರು ಬಲ್ಲರು! ಇದಕ್ಕೆಲ್ಲ ಅವನ ಮುಗ್ಧತೆಯೂ ಕಾರಣವಿರಬಹುದು. ಕೊನೆಗೂ ಅವನು ಓಡಿಹೋಗಿದ್ದ ತನ್ನ ಹೆಂಡತಿಯ ಜಾಡನ್ನು ಪತ್ತೆ ಮಾಡಿದ್ದ. ಆಕೆ ಪೀಟರ್ಸ್‌ಬರ್ಗ್‌ನಲ್ಲಿ ತನ್ನ ಧರ್ಮಶಾಸ್ತ್ರದ ವಿದ್ಯಾರ್ಥಿಯೊಂದಿಗೆ ಸ್ವೇಚ್ಛೆಯ ಜೀವನ ನಡೆಸುತ್ತಿದ್ದಳು ಎಂಬ ವಿಷಯ ತಿಳಿಯುತ್ತಿದ್ದಂತೆ ತಾನೂ ಪೀಟರ್ಸ್‌ಬರ್ಗ್‌ಗೆ ಹೋಗಬೇಕು ಎಂದು ಗದ್ದಲ ಮಾಡಲಾರಂಭಿಸಿದ. ಯಾತಕ್ಕಾಗಿ ಹೋಗಬೇಕು ಎಂದು ಯಾರಾದರೂ ಕೇಳಿದ್ದರೆ, ಖಂಡಿತವಾಗಿ ಅವನ ಬಳಿ ಉತ್ತರ ಸಿಗುತ್ತಿರಲಿಲ್ಲ. ಅವನು ನಿಜಕ್ಕೂ ಹೊರಟೇ ಬಿಡುತ್ತಿದ್ದ. ಆದರೆ ಅದಕ್ಕಾಗಿ ತನ್ನನ್ನು ತಾನು ಸಿದ್ಧತೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ವಿಪರೀತ ಕುಡಿದುಬಿಟ್ಟ. ಅದೇ ಸಮಯಕ್ಕೆ ಅವನ ಹೆಂಡತಿಯ ಮನೆಯವರಿಗೆ ಪೀಟರ್ಸ್‌ಬರ್ಗ್‌ನಲ್ಲಿ ಅವಳು ಸತ್ತುಹೋದಳು ಎಂಬ ಸುದ್ದಿ ಬಂದಿತು. ಒಂದು ಮನೆಯ ಅಟ್ಟದ ಮೇಲೆ ಅವಳು ಸತ್ತಿದ್ದಳು ಎಂದು ಕೆಲವರು ಹೇಳಿದರೆ, ಹಸಿವಿನಿಂದ ಸತ್ತಳು ಎಂದು ಮತ್ತೆ ಕೆಲವರು ಅಂದುಕೊಳ್ಳುತ್ತಿದ್ದರು. ಹೆಂಡತಿಯ ಸಾವಿನ ಸುದ್ದಿ ಬಂದಾಗ ಫೋಯ್ದರ್ ಪಾವ್ಲೋವಿಚ್ ಕಂಠಪೂರ್ತಿ ಕುಡಿದಿದ್ದ. ನಮ್ಮ ಊರಿನ ಜನ ಹೇಳುವುದೇನೆಂದರೆ ಸಾವಿನ ಸುದ್ದಿ ಕಿವಿಯ ಮೇಲೆ ಬಿದ್ದೊಡನೆ ಅವನು ಹುಚ್ಚನಂತೆ ಕುಣಿದು ಕುಪ್ಪಳಿಸಿ ಬೀದಿಯ ಕಡೆಗೆ ಓಡಿದನಂತೆ. ಆಕಾಶದತ್ತ ಮುಖ ಮಾಡಿ ’ದೇವರೇ ನಿನ್ನ ಸೇವಕನಾದ ನಾನು ಇನ್ನು ನೆಮ್ಮದಿಯಿಂದ ಪ್ರಾಣಬಿಡುತ್ತೇನೆ’ ಎಂದು ಉದ್ಗರಿಸಿದನಂತೆ. ಮತ್ತೆ ಕೆಲವರು ಅವನು ಸಣ್ಣ ಮಕ್ಕಳಂತೆ ಅತ್ತ, ಅವನ ಅಳು ನೆರೆದಿದ್ದವರಲ್ಲಿ ಜಿಗುಪ್ಸೆ ಉಂಟು ಮಾಡಿದರೂ ಅವನ ದುಃಖಕ್ಕಾಗಿ ಅವರೆಲ್ಲರೂ ಮರುಗಿದರು ಎಂದೂ ಹೇಳುತ್ತಾರೆ. ಎರಡೂ ಮಾತುಗಳು ನಿಜವಿರಬಹುದು. ತಾನು ಬಿಡುಗಡೆಯಾದೆನೆಂದು ಅವನು ಖುಷಿ ಪಟ್ಟಿರಬಹುದು. ಜೊತೆಗೆ ತನ್ನನ್ನು ಬಿಡುಗಡೆ ಗೊಳಿಸಿದವಳಿಗಾಗಿ ಮರುಗಿರಲೂ ಬಹುದು. ಎಲ್ಲರಿಗೂ ತಿಳಿದಿರುವಂತೆ, ಎಂತಹ ದುಷ್ಟರೂ ಆಂತರ್ಯದಲ್ಲಿ ತುಂಬ ಸರಳ ಜೀವಿಗಳಾಗಿರುತ್ತಾರೆ. ಮತ್ತು ನಾವೂ ಸಹ ಸರಳ ಜೀವಿಗಳಾಗಿರುತ್ತೇವೆ.

No comments:

Post a Comment