17 Jan 2012

ಗಾಂಧಿಯ ಅಹಿಂಸೆ - ಒಂದು ರಾಜಕೀಯ ತಂತ್ರ

ಒಮ್ಮೆ ಒಬ್ಬರು ತುಂಬಿದ ಸಭೆಯಲ್ಲಿ ’ಗಾಂಧಿ ಹಾಗು ಅವರ ಅಹಿಂಸಾ ತತ್ವದ ಬಗ್ಗೆ ಏನು ಹೇಳುವಿರಿ?’ ಎಂದು ಕೇಳಿದರು. ಆಗ ನಾನು ’ಗಾಂಧಿ ಒಬ್ಬ ಕುತಂತ್ರ ರಾಜಕಾರಿಣಿ. ಅಹಿಂಸೆಯ ಹೆಸರಿನಲ್ಲಿ ತಮ್ಮ ಹಲವು ಉದ್ದೇಶಗಳನ್ನು ಸುಲಭವಾಗಿ ನೆರವೇರಿಸಿಕೊಂಡರು’ ಎಂದು ಹೇಳಿದ್ದೆ. ಮೊದಲಿಗೆ, ಗುಜರಾತ್‌ನ ಬಹುಸಂಖ್ಯಾತರಾದ ಜೈನ ಸಮುದಾಯವನ್ನು ತಮ್ಮತ್ತ ಸೆಳೆದುಕೊಂಡರು. ಗಾಂಧಿ ಶೇ.೯ ರಷ್ಟು ಜೈನರಾಗಿದ್ದರು. ನಾನು ಗಾಂಧಿಯ ವ್ಯಕ್ತಿತ್ವವನ್ನು ಶೇಕಡಾವಾರು ಲೆಕ್ಕದಲ್ಲಿ ಅಳೆಯಬಲ್ಲೆ. ಗಾಂಧಿ ಹುಟ್ಟಿನಿಂದ ಹಿಂದೂ ಆಗಿದ್ದರೂ ಅವರು ಶೇ. ೧ ರಷ್ಟು ಮಾತ್ರ ಹಿಂದು ಆಗಿದ್ದರು, ಶೇ.೯ ರಷ್ಟು ಅವರು ಜೈನರಾಗಿದ್ದರು. ಒಮ್ಮೆ ಜೈನನಾಗಿ ಮತಾಂತರ ಹೊಂದಲೂ ಬಯಸಿದ್ದರು. ಜೈನ ಗುರುವಾಗಿದ್ದ ಶ್ರೀಮತ್ ರಾಜಚಂದ್ರ ಗಾಂಧಿಯ ಮೊದಲ ಧಾರ್ಮಿಕಗುರು. ಹಾಗು ಶೇ.೯೦ ರಷ್ಟು ಕ್ರಿಶ್ಚಿಯನ್ ಆಗಿದ್ದರು. ಗಾಂಧಿಯ ಎರಡನೆಯ ಗುರು ಒಬ್ಬ ಕ್ರಿಶ್ಚಿಯನ್ - ಜಾನ್ ರಸ್ಕಿನ್. ತಮ್ಮ ಬದುಕಿನಲ್ಲಿ ಅವರಿಗೆ ಮೂರು ಬಾರಿ ಕ್ರೈಸ್ತಧರ್ಮಕ್ಕೆ ಮತಾಂತರ ಹೊಂದುವ ಸನ್ನಿವೇಶ ಎದುರಾಗಿತ್ತು. ಸಿ.ಎಫ್. ಆಂಡ್ರ್ಯೂಸ್ ಅವರನ್ನು ಒಂದೇ ಸಮನೆ ಮತಾಂತರವಾಗುವಂತೆ ಬಲವಂತ ಪಡಿಸುತ್ತಿದ್ದರು. ಕ್ರೈಸ್ತಧರ್ಮದ ಸೇವಾಭಾವವನ್ನು ಅಪಾರವಾಗಿ ಮೆಚ್ಚಿ, ಮತಾಂತರ ಹೊಂದಲೂ ನಿರ್ಧರಿಸಿದ್ದರು. ಆದರೆ ಆ ಸೇವಾಭಾವದ ಹಿಂದೆ ಮತಾಂತರದ ಹುನ್ನಾರವಿದ್ದುದನ್ನು ಕಂಡು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಅಹಿಂಸೆಯ ಹೆಸರಿನಲ್ಲಿ ಅವರು ಜೈನ ಸಮುದಾಯವನ್ನೂ, ಹಿಂದೂ ಧರ್ಮದ ಬಹುತೇಕ ಎಲ್ಲ ಮೇಲ್ವರ್ಗಗಳನ್ನೂ ಹಾಗೆಯೇ ಎಲ್ಲ ಕ್ರಿಶ್ಚಿಯನ್ನರನ್ನೂ ಸುಲಭವಾಗಿ ತಮ್ಮ ಬುಟ್ಟಿಗೆ ಹಾಕಿಕೊಂಡರು. ಎರಡು ಸಾವಿರ ವರ್ಷಗಳಿಂದ ಗುಲಾಮತನ ಅನುಭವಿಸಿರುವ ನಮ್ಮ ದೇಶವು ಯುದ್ಧವೆಂದರೆ ಹಿಮ್ಮೆಟ್ಟುವ ಪ್ರವೃತ್ತಿ ಬೆಳೆಸಿಕೊಂಡಿದೆ. ಇಂಥ ದೇಶದಲ್ಲಿ ಅಹಿಂಸೆಯ ನಾಣ್ಯ ಸುಲಭವಾಗಿ ಚಲಾವಣೆಯಾಗುತ್ತದೆ ಎಂದು ಅವರಿಗೆ ಗೊತ್ತಿತ್ತು.

ಎರಡನೆಯದಾಗಿ ಭಾರತೀಯರು ಯುದ್ಧದ ಪ್ರವೃತ್ತಿಯವರಲ್ಲ, ಒಂದು ವೇಳೆ ಯುದ್ಧಕ್ಕೆ ನಿಂತರೂ ನಮ್ಮ ಬಳಿ ಸುಸಜ್ಜಿತ ಶಸ್ತ್ರಾಸ್ತ್ರಗಳಿಲ್ಲ ಎಂಬುದು ಗಾಂಧಿಗೆ ತಿಳಿದಿತ್ತು. ಮೂರನೆಯದಾಗಿ ಬ್ರಿಟಿಷ್ ಸಾಮ್ರಾಜ್ಯ ಜಗತ್ತಿನ ಅತ್ಯಂತ ಶಕ್ತಿಶಾಲೀ ಪ್ರಭುತ್ವಗಳಲ್ಲೊಂದಾಗಿತ್ತು. ಅವರೊಡನೆ ಶಸ್ತ್ರಸಜ್ಜಿತ ಹೋರಾಟ ನಡೆಸುವುದು ಯಾರಿಗಾದರೂ ಅಸಾಧ್ಯದ ಮಾತಾಗಿತ್ತು. ಹಾಗಾಗಿ ನಮ್ಮ ಬಳಿ ಉಳಿದಿರುವುದು ’ಅಹಿಂಸೆ’ ಎಂಬ ಏಕಮೇವ ಅಸ್ತ್ರ ಎಂದು ಗಾಂಧಿ ಲೆಕ್ಕ ಹಾಕಿದರು. ಮತ್ತು ಅವರ ಲೆಕ್ಕಾಚಾರ ಸರಿಯಾಗಿಯೇ ಕೆಲಸ ಮಾಡಿತು. ಆದ್ದರಿಂದ ಗಾಂಧಿಯ ಅಹಿಂಸೆ ಒಂದು ಶುದ್ಧ ರಾಜಕೀಯ ಲೆಕ್ಕಾಚಾರವೇ ವಿನಃ ಅದಕ್ಕೆ ಯಾವ ಆಧ್ಯಾತ್ಮಿಕ ಮೌಲ್ಯವೂ ಇಲ್ಲ. ಏಕೆಂದರೆ ಅವರು ಸ್ವಾತಂತ್ರ್ಯ ಬಂದ ಮರುಗಳಿಗೆಯೇ ಎಲ್ಲ ಮಿಲಿಟರಿ ವ್ಯವಸ್ಥೆಯನ್ನೂ ವಿಸರ್ಜಿಸಬೇಕು, ಶಸ್ತ್ರಾಸ್ತ್ರಗಳನ್ನು ಸಮುದ್ರದಲ್ಲಿ ಎಸೆಯಬೇಕು ಎಂದು ಕರೆಕೊಟ್ಟಿದ್ದರು. ಆಗ ಕೆಲವು ಸಂಗಡಿಗರು ’ಮತ್ತೆ ಬೇರೆಯವರು ನಮ್ಮ ಮೇಲೆ ಆಕ್ರಮಣ ನಡೆಸಿದರೆ ಏನುಗತಿ?’ ಎಂದು ಆತಂಕ ವ್ಯಕ್ತಪಡಿಸಿದಾಗ ’ಅಂಥವರನ್ನು ಅತಿಥಿಗಳಂತೆ ಬರಮಾಡಿಕೊಳ್ಳೋಣ, ನಮ್ಮೊಂದಿಗೆ ಅವರೂ ಸಹಬಾಳ್ವೆ ನಡೆಸಲು ಅವಕಾಶ ಮಾಡಿಕೊಡೋಣ’ ಎಂದಿದ್ದರು. ಆದರೆ ಸ್ವಾತಂತ್ರ್ಯ ಬಂದ ಮರುಗಳಿಗೆಯೇ ಅವರಿಗೆ ಈ ಮಾತುಗಳೆಲ್ಲ ಮರೆತುಹೋಗಿದ್ದವು. ಸ್ವಾತಂತ್ರ್ಯಾನಂತರದ ಮೊದಲ ಭಾರತ ಪಾಕೀಸ್ಥಾನ ಯುದ್ಧಕ್ಕೆ ಗಾಂಧಿಯವರ ಆಶೀರ್ವಾದವಿತ್ತು. ವಾಯು ಸೇನೆಯ ಮೂರು ಯುದ್ಧ ವಿಮಾನಗಳು ಗಾಂಧಿ ಇದ್ದ ಜಾಗದಲ್ಲಿ ಇಳಿದು ಅವರ ಆಶೀರ್ವಾದ ಪಡೆದು ಹೊರಟವು. ನಾನು ಯಾರ ವಿಷಯದಲ್ಲೂ ಹಾಗೆ ತಲೆ ಹಾಕುವವನಲ್ಲ, ಆದರೆ ಒಮ್ಮೆ ಒಂದು ವಿಷಯವನ್ನು ತಿಳಿಯಲು ಮನಸ್ಸಾದರೆ ಅದನ್ನು ಬುಡಮಟ್ಟದವರೆಗೂ ಶೋಧಿಸದೇ ಬಿಡುವವನೂ ಅಲ್ಲ. ಗಾಂಧಿಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ ಮೇಲೆ ಅವರನ್ನು ಟೀಕಿಸದೇ ಬೇರೆಯ ರೀತಿಯಲ್ಲಿ ಅವರನ್ನು ವ್ಯಾಖ್ಯಾನಿಸಲು ನನಗೆ ಸಾಧ್ಯವೇ ಆಗಲಿಲ್ಲ. ಆಗ ನನ್ನ ವಲಯದಲ್ಲಿದ್ದ ಗಾಂಧೀವಾದಿಗಳಲ್ಲಿ ಈಗ ಶೇ.೧ರಷ್ಟೂ ಉಳಿದಿಲ್ಲ ಎಂದು ನಾನು ಬಲ್ಲೆ.

ವ್ಯಾಪಾರಿಗಳು ರಾಜೀ ಮನೋಧರ್ಮದವರಾಗಿರುತ್ತಾರೆ. ಒಬ್ಬ ವ್ಯಾಪಾರಿಗೆ ಸಹಜವಾಗಿಯೇ ಹಿಂಸೆ, ಗದ್ದಲಗಳು ಹಿಡಿಸುವುದಿಲ್ಲ. ಕ್ಷತ್ರಿಯನಾದ ಮಹಾವೀರನ ಅನುಯಾಯಿಗಳೆಲ್ಲರೂ ಏಕೆ ವ್ಯಾಪಾರಿಗಳೇ ಆಗಿದ್ದಾರೆ? ಮಹಾವೀರನಂಥವನಿಗೆ ಒಬ್ಬ ಕ್ಷತ್ರಿಯ ಅನುಯಾಯಿಯೂ ಇಲ್ಲವಲ್ಲ! ಹಾಗೆ ನೋಡಿದರೆ ಎಲ್ಲ ಇಪ್ಪತ್ತನಾಲ್ಕು ತೀರ್ಥಂಕರರೂ ಕ್ಷತ್ರಿಯರೇ. ಆದರೆ ಮಹಾವೀರನ ಅಹಿಂಸಾ ತತ್ವ ಎಲ್ಲ ವ್ಯಾಪಾರಿಗಳಿಗೂ ಸರಿ ಎನಿಸಿತು. ಆದ್ದರಿಂದ ಗಾಂಧಿಯ ಅಹಿಂಸಾ ಹೋರಾಟಕ್ಕೆ ಭಾರತದ ಎಲ್ಲ ಲೆಕ್ಕಾಚಾರದ ಮನಸ್ಸುಗಳೂ ಸಹಮತ ಸೂಚಿಸಿದವು. ನಾವು ಹಸುಗಳಂತಿದ್ದರೆ ಅವರೂ ನಮ್ಮನ್ನು ಹಸುಗಳಂತೆ ನಡೆಸಿಕೊಳ್ಳುತ್ತಾರೆ ಎಂಬ ಲೆಕ್ಕಾಚಾರ ಈ ಸಿದ್ಧಾಂತದ ಹಿಂದೆ ಕೆಲಸ ಮಾಡುತ್ತಿದೆ. ಇಷ್ಟೇ ಗಾಂಧಿಯ ಅಹಿಂಸಾ ತತ್ವದ ಹಿಂದಿರುವ ತಾತ್ವಿಕ ಮೌಲ್ಯ. ಈ ಮೂರು ಕಾಸಿನ ಸಿದ್ಧಾಂತವನ್ನು ನಂಬಿ ನಾವು ಭಾರಿ ದೊಡ್ಡ ಬೆಲೆಯನ್ನು ತೆತ್ತೆವು. ಬ್ರಿಟಿಷರ ವಿರುದ್ಧದ ಭಾರತೀಯರ ಸಾತ್ವಿಕ ಸಿಟ್ಟನ್ನು ಹಾಗು ಸಹಜ ಕ್ರೌರ್ಯವನ್ನು ಗಾಂಧೀ ವ್ಯವಸ್ಥಿತವಾಗಿ ದಮನ ಮಾಡಿದರು. ಯಾವುದೇ ಮೂಲೆಯಲ್ಲಿ ಒಂದು ಸಣ್ಣ ಗಲಭೆ ಉಂಟಾದರೂ ಅವರು ತಮ್ಮ ಅಹಿಂಸಾ ಚಳವಳಿಯನ್ನು ಹಿಂದೆಗೆದುಕೊಳ್ಳುತ್ತಿದ್ದರು. ’ಪೊಲೀಸರತ್ತ ಯಾರೂ ಕಲ್ಲು ತೂರಾಟ ನಡೆಸಕೂಡದು, ಯಾರೂ ರೈಲಿಗೆ ಬೆಂಕಿ ಹಚ್ಚಕೂಡದು, ಹಾಗೇನಾದರೂ ಮಾಡಿದರೆ ಸಾವಿರಾರು ಜನ ಯಾವ ಅನುಕಂಪವನ್ನೂ ಹೊಂದದೆ ಬ್ರಿಟಿಷರ ಗುಂಡೇಟಿಗೆ ಸಾಯುತ್ತಾರೆ’ ಎಂದು ಗಾಂಧಿ ಕರೆ ನೀಡುತ್ತಿದ್ದರು. ಬ್ರಿಟಿಷರಿಗೆ ನಿಜಕ್ಕೂ ಇಂತಹ ಸತ್ಯಾಗ್ರಹಿಗಳೊಂದಿಗೆ ಹೇಗೆ ವರ್ತಿಸ ಬೇಕೆಂದು ತೋಚುತ್ತಿರಲಿಲ್ಲ.೨೯ 

ಆದರೆ ಹೀಗೆ ಬಲವಂತದಿಂದ ನಿಗ್ರಹಿಸಲಾದ ಸಿಟ್ಟು ಕ್ರೌರ್ಯಗಳು ಸ್ವಾತಂತ್ರ್ಯ ಬರುತ್ತಿದ್ದಂತೆಯೆ ಒಮ್ಮೆಲೆ ಆಸ್ಫೋಟಿಸಿತು. ಹಿಂದೂ-ಮುಸಲ್ಮಾನರು ಸ್ವಾತಂತ್ರ್ಯಾನಂತರ ಕಾಡು ಮನುಷ್ಯರಂತೆ ಹತ್ಯಾಕಾಂಡಕ್ಕಿಳಿದರು. ಬ್ರಿಟಿಷ್ ಅಳ್ವಿಕೆಯಿಂದ ಬೇಸತ್ತಿದ್ದ ಭಾರತೀಯರ ಮನದಾಳದ ಸಿಟ್ಟು, ಕ್ರೌರ್ಯಗಳು ಗಾಂಧಿಯ ಅಹಿಂಸಾ ತತ್ವಕ್ಕೆ ಮಣಿಯದೆ ಬ್ರಿಟಿಷರ ಕಡೆಗೇ ತಿರುಗಿದ್ದರೆ ನಮ್ಮ ದೇಶ ಇಂದು ಹೀಗೆ ಹಿಂದೂ-ಮುಸಲ್ಮಾನರ ರಣಭೂಮಿಯಾಗುತ್ತಿರಲಿಲ್ಲ. ರಾಜಕೀಯ ದಾಳಿ, ಹಿಂಸೆಗಳಿಗೂ ಇದಕ್ಕೂ ಸಂಬಂಧವಿಲ್ಲ. ಈ ನಾಡಿನಲ್ಲಿ ಎಲ್ಲ ಧರ್ಮದ, ಎಲ್ಲ ಪಂಥದ ರಾಜ ಮಹಾರಾಜರುಗಳೂ ಪರಸ್ಪರ ಕಿತ್ತಾಡಿಕೊಂಡೇ ಬಂದಿದ್ದಾರೆ. ಆದರೆ ಸಾವಿರದ ನಾಲ್ಕು ನೂರು ವರ್ಷಗಳಿಂದ ಸಹಬಾಳ್ವೆ ಮಾಡಿದ ಎರಡು ಕೋಮುಗಳು ಗಾಂಧೀಯುಗದಲ್ಲೇ ಏಕೆ ಕಿತ್ತಾಡಿದವು? ಗಾಂಧೀ ಹಿಂದೂ-ಮುಸ್ಲಿಂ ಸೌಹಾರ್ದಕ್ಕಾಗಿ ಶ್ರಮಿಸಿದರು ಎಂದು ಎಲ್ಲೆಡೆ ಪ್ರಚಾರ ನಡೆಯುತ್ತಿದೆ. ಆದರೆ ಹಿಂದೂ-ಮುಸ್ಲಿಂ ನಡುವಣ ದ್ವೇಷಕ್ಕೆ ಗಾಂಧೀಯೇ ನೇರ ಹೊಣೆ ಎಂದು ನಾನು ಹೇಳುತ್ತೇನೆ. ನಾನು ಹೇಳುತ್ತಿರುವುದು ಆಧುನಿಕ ಮನೋವಿಜ್ಞಾನದ ಅತ್ಯಂತ ಪ್ರಾಥಮಿಕ ಪರಿಕಲ್ಪನೆಗಳನ್ನು: ನಿಗ್ರಹಿಸಲಾದ ಸಹಜ ಪ್ರವೃತ್ತಿಗಳು ಕ್ರಮೇಣ ನಿಗ್ರಹಿಸಿದವನ ಮೇಲೆ ಸೇಡು ತೀರಿಸಿಕೊಳ್ಳುತ್ತದೆ. ಮನುಷ್ಯನ ಸಹಜ ಪ್ರವೃತ್ತಿಗಳ ಬಗ್ಗೆ ಪ್ರಾಥಮಿಕ ತಿಳುವಳಿಕೆ ಇಲ್ಲದೆ ಗಾಂಧಿ ಭಾರತೀಯರ ಸಹಜವಾದ ಕ್ರೌರ್ಯ, ಸಿಟ್ಟುಗಳ ದಾರಿ ತಪ್ಪಿಸಿದರು. ಭಾರತೀಯರ ಕ್ರೌರ್ಯ ಬ್ರಿಟಿಷರ ವಿರುದ್ಧ ತಿರುಗಿದ್ದಿದ್ದರೆ ಅದು ನಿಜಕ್ಕೂ ಮಾನವೀಯವೂ ಸಾರ್ಥಕವೂ ಆಗುತ್ತಿತ್ತು. ಆಗ ಕೋಮುಗಲಭೆ ಎಂಬ ಹೆಸರೇ ಈ ನಾಡಿನಲ್ಲಿ ಇರುತ್ತಿರಲಿಲ್ಲ. ಮಾತ್ರವಲ್ಲ ಅಂತಹ ಹೋರಾಟ ನಮಗೆ ನಮ್ಮ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಿ ಇಡೀ ವಿಶ್ವದೆದುರು ನಮ್ಮ ಘನತೆಯನ್ನು ಹೆಚ್ಚಿಸುತ್ತಿತ್ತು. ಹೀಗೆ ಭಿಕ್ಷೆಯ ರೂಪದಲ್ಲಿ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ. ನಮ್ಮ ಕೋಮುಗಲಭೆಗೆ ಜಿನ್ನಾ ಕಾರಣನೆಂದೋ ಅಥವ ಬ್ರಿಟಿಷರ ಒಡೆದು ಆಳುವ ನೀತಿಯೇ ಮೂಲಕಾರಣ ಎಂದೋ ಹೇಳುವ ಯಾವ ಗಾಂಧೀವಾದಿಯೂ ಪ್ರಾಮಾಣಿಕನಲ್ಲ. ನಾವು ಅಹಿಂಸಾ ಹೋರಾಟದಿಂದ ಸ್ವಾತಂತ್ರ್ಯ ಗಳಿಸಲಿಲ್ಲ. ಸ್ವಾತಂತ್ರ್ಯದ ಭಿಕ್ಷೆ ಪಡೆಯಲು ಗಾಂಧಿಯನ್ನು ನಂಬಿಕೊಂಡು ಹತ್ತುಲಕ್ಷ ಜನ ಹಿಂದೂಗಳ ಹಾಗು ಮುಸ್ಲಿಮರ ಪ್ರಾಣದ ಬೆಲೆ ತೆತ್ತೆವು. ಇಷ್ಟೊಂದು ಜನ ಕತ್ತಿ ಹಿಡಿದು ಒಮ್ಮೆಲೆ ದಾಳಿ ಮಾಡಿದ್ದರೆ ಬ್ರಿಟಿಷರು ಎಂದೋ ಓಡಿಹೋಗುತ್ತಿದ್ದರು. ಆದರೆ ಗಾಂಧೀವಾದಿಗಳು ನನ್ನನ್ನು ಕೆಣಕಿ ಗಾಂಧಿಯನ್ನು ಕಾಪಾಡಿಕೊಳ್ಳಬಹುದೆಂದು ಯೋಚಿಸಿದರೆ ಅವರಿಗೇ ತೊಂದರೆ. ಗಾಂಧಿಯ ಬಗ್ಗೆ ಇನ್ನೂ ಕಹಿಯಾದ ಸತ್ಯಗಳು ಹೊರಬರುತ್ತವೆ ಅಷ್ಟೇ. ನನ್ನ ಮನಸ್ಸಿನಲ್ಲಿ ಗಾಂಧೀಜಿಯ ವಿಚಾರಗಳಿಗೆ ಕಿಂಚಿತ್ತೂ ಜಾಗವಿಲ್ಲ. ನನ್ನ ದೃಷ್ಟಿಯಲ್ಲಿ ಆತ ರೋಗಗ್ರಸ್ತ ವ್ಯಕ್ತಿತ್ವದವನು.೩೦

ನಾನು ಗಾಂಧಿಯನ್ನು ’ಒಬ್ಬ ಬನಿಯಾ’ ಎಂದು ಕರೆದದ್ದು ಕೆಲವರ ಭಾವನೆಗೆ ನೋವಾಯಿತಂತೆ. ಆ ಸರಳಜೀವಿಯನ್ನು ಹೇಗೆ ಬನಿಯಾ ಎಂದು ಕರೆಯುತ್ತೀರಿ? ಅದಕ್ಕೆ ಪುರಾವೆ ಏನು? ಎಂದು ತುಂಬ ಜನ ನನ್ನನ್ನು ಕೇಳಿದರು. ಬನಿಯಾ ಎಂದರೆ ವ್ಯಾಪಾರಿ ಎಂದರ್ಥ. ಅದು ಜಾತಿಸೂಚಕ ಪದವಲ್ಲ. ಈ ವಿಷಯಗಳಲ್ಲಿ ನಾವು ಎಷ್ಟು ಅಸೂಕ್ಷ್ಮರಾಗಿದ್ದೇವೆ ಎಂದರೆ ನಮಗೆ ಹೊಗಳಿಕೆಯ ಭಾಷೆ ಅಥವ ತೆಗಳಿಕೆಯ ಭಾಷೆಗಳನ್ನು ಬಿಟ್ಟರೆ ಬೇರೆ ಮತ್ತೊಂದು ಭಾಷೆ ಅರ್ಥವಾಗುವುದೇ ಇಲ್ಲವಲ್ಲ! ನಾನು ಖಂಡಿತ ಜಾತಿವಾದಿಯಲ್ಲ. ಒಂದು ವೇಳೆ ಜಾತಿಯ ಪರಿಭಾಷೆಯಲ್ಲೇ ಹೇಳಬೇಕಾಗಿ ಬಂದರೆ ಗಾಂಧಿ ಬ್ರಾಹ್ಮಣನಲ್ಲ, ಒಬ್ಬ ಯೋಧನಲ್ಲ, ಶೂದ್ರನೂ ಅಲ್ಲ. ಆತ ಒಬ್ಬ ಶುದ್ಧ ವ್ಯಾಪಾರಿ, ವೈಶ್ಯ ಎಂದೇ ಹೇಳುತ್ತೇನೆ. ಇದಕ್ಕೆ ನಾನು ಸಾವಿರಾರು ನಿದರ್ಶನಗಳನ್ನು ನೀಡಬಲ್ಲೆ. ಮಹಾವೀರ್ ತ್ಯಾಗಿ ಎಂಬ ಒಬ್ಬ ಕಾಂಗ್ರೇಸ್ ನಾಯಕರ ಆತ್ಮ ಚರಿತ್ರೆಯನ್ನು ಓದುತ್ತಿದ್ದೆ. ಅದರಲ್ಲಿ ಒಂದು ಉಲ್ಲೇಖವಿದೆ: ಒಮ್ಮೆ ಮಹಾವೀರ್ ತ್ಯಾಗಿಯವರ ಊರಿನಲ್ಲಿ ನಡೆದ ಒಂದು ಸಭೆಗೆ ಗಾಂಧೀ ಆಗಮಿಸಿದ್ದರಂತೆ. ಯಾವ ಸಭೆಗೆ ಹೋದರೂ ವೇದಿಕೆಯ ಮೇಲೆ ತಮ್ಮ ಹುಂಡಿಯನ್ನಿರಿಸಿ ಹೆಣ್ಣುಮಕ್ಕಳ ಒಡವೆಗಳನ್ನು ಕೇಳುವುದು ಗಾಂಧೀಜಿಯ ಪದ್ಧತಿ. ಹೀಗೆ ಸಭೆ ಮಧ್ಯರಾತ್ರಿಯ ವೇಳೆಗೆ ಮುಗಿದ ಮೇಲೆ ತುಂಬಿದ ಹುಂಡಿಯೊಡನೆ ತ್ಯಾಗಿ ಗಾಂಧೀ ಇಳಿದುಕೊಂಡಿದ್ದ ಜಾಗಕ್ಕೆ ಹೋದರು. ’ಇಷ್ಟು ಹೊತ್ತಿಗಾಗಲೇ ಗಾಂಧೀಜಿ ಮಲಗಿರಬೇಕು’ ಎಂದುಕೊಂಡೇ ಬಾಗಿಲು ತಟ್ಟಿದರು. ತ್ಯಾಗಿಗೆ ವ್ಯಾಪಾರಿಯ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂದು ಗೊತ್ತಿಲ್ಲ ಎನಿಸುತ್ತದೆ. ದಿನದ ಲೆಕ್ಕ ಚುಕ್ತಾ ಆಗದೇ ಒಬ್ಬ ವ್ಯಾಪಾರಿಗೆ ನಿದ್ರೆ ಹೇಗೆ ಬರುತ್ತದೆ? ಗಾಂಧೀ ಹಾಸಿಗೆಯ ಮೇಲೆ ಎಚ್ಚರವಾಗಿಯೇ ಕುಳಿತಿದ್ದರಂತೆ. ತ್ಯಾಗಿ ಬಂದೊಡನೆ ಗಾಂಧೀ ತಮ್ಮ ಬಳಿ ಇದ್ದ ಬೀಗದ ಕೈಯಿಂದ ಹುಂಡಿಯನ್ನು ತೆರೆದು. ಆ ದಿನದ ಸಂಪಾದನೆಯನ್ನೆಲ್ಲ ಎಣಿಸತೊಡಗಿದರಂತೆ. ಕೊನೆಗೆ ಹುಂಡಿಯಲ್ಲಿ ಒಂದೇ ಒಂದು ಕಿವಿಯ ಓಲೆ ಇದ್ದುದನ್ನು ತ್ಯಾಗಿಗೆ ತೋರಿಸಿ ’ಯಾರೂ ಹೀಗೆ ಒಂದೇ ಓಲೆಯನ್ನು ದಾನ ಮಾಡುವುದಿಲ್ಲ. ಇನ್ನೊಂದು ಓಲೆಯೂ ವೇದಿಕೆಯ ಮೇಲೆಯೇ ಎಲ್ಲೋ ಬಿದ್ದಿರಬೇಕು, ಹುಡುಕಿ ತನ್ನಿ’ ಎಂದರಂತೆ. ತ್ಯಾಗಿ ಮತ್ತೆ ಹಿಂದಿರುಗಿ ಗ್ಯಾಸ್ ದೀಪದ ನೆರವಿನಿಂದ ಇನ್ನೊಂದು ಓಲೆಯನ್ನೂ ಪತ್ತೆ ಮಾಡಿ ತಂದ ಮೇಲೆಯೇ ಗಾಂಧೀ ನಿದ್ರೆ ಮಾಡಿದರಂತೆ. ನಾನು ಗಾಂಧೀ ಒಬ್ಬ ವ್ಯಾಪಾರಿ ಎನ್ನಲು ಕಾರಣಗಳಿವೆ. ಆತ ಒಬ್ಬ ವ್ಯಾಪಾರಿ ಎಂದು ಭಾವಿಸಿದಾಗಲೇ ಗಾಂಧೀವಾದವನ್ನು ಆರೋಗ್ಯಕರವಾಗಿ ಭಾವಿಸಲು ಸಾಧ್ಯವಾಗುವುದು ಹಾಗು ಆತನಿಗೂ ನ್ಯಾಯ ಸಲ್ಲಿಸಿದಂತಾಗುವುದು.

ನಾವು ದೇಶದ ನಾಯಕನೆಂದು ಯಾವುದೇ ವ್ಯಕ್ತಿಯನ್ನು ಒಪ್ಪಿಕೊಳ್ಳುವ ಮುನ್ನ ಆ ವ್ಯಕ್ತಿ ಎಂಥವನು ಎಂದು ಮುನ್ನವೇ ತಿಳಿದಿರುವುದು ಕ್ಷೇಮವಲ್ಲವೇ? ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್‌ರಂತಹ ಯೋಧರು ಮುನ್ನಡೆಸಬೇಕಾದ ದೇಶವನ್ನು ಒಬ್ಬ ವ್ಯಾಪಾರಿಯ ಕೈಗಿಟ್ಟರೆ ದೇಶದ ಗತಿ ಏನಾಗಬಹುದು? ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಗಾಂಧೀ ತಮ್ಮ ಜಾಯಮಾನಕ್ಕೆ ತಕ್ಕುದನ್ನೇ ಮಾಡಿದರು. ದೇಶ ವಿಭಜನೆಯಾಯಿತು. ಒಬ್ಬ ವ್ಯಾಪಾರಿ ಸದಾ ರಾಜಿ ಮಾಡಿಕೊಳ್ಳುವ ಅವಕಾಶಕ್ಕೇ ಕಾಯುತ್ತಿರುತ್ತಾನೆಯೇ ವಿನಃ ಎಂದಿಗೂ ತೀವ್ರವಾದಿಯಾಗಲಾರ. ಲೆಕ್ಕಾಚಾರದ ಮನಸ್ಸು ಎರಡೂ ಪಕ್ಷಗಳಿಗೆ ಲಾಭವಾಗಬೇಕು ಎಂದು ಯೋಚಿಸುತ್ತದೆ, ಗಲಾಟೆ ಹೋರಾಟಗಳನ್ನು ಎಂದಿಗೂ ಸಹಿಸುವುದಿಲ್ಲ. ಅದಕ್ಕೇ ವ್ಯಾಪಾರಿಗಳಾದ ಬ್ರಿಟಿಷರಿಗೆ ಗಾಂಧಿ ಹಿಡಿಸಿದ್ದು. ಅವರಿಗೆ ಕಾಂಗ್ರೇಸ್‌ನಲ್ಲಿ ಸುಭಾಷ್ ಚಂದ್ರ ಬೋಸ್‌ರಂತಹವರೊಡನೆ ಮಾತುಕತೆ, ಸಂಧಾನ ನಿಜಕ್ಕೂ ಕಷ್ಟವಾಗುತ್ತಿತ್ತು. ನೀವು ನಂಬಲಾರಿರಿ, ಬ್ರಿಟಿಷರು ಗಾಂಧಿಗೆ ಸಂಪೂರ್ಣ ಭದ್ರತೆ ಒದಗಿಸಿದ್ದರು. ಒಂದು ಪ್ರಭುತ್ವ ತನ್ನ ವಿರುದ್ಧ ದಂಗೆ ಎದ್ದವನಿಗೇ ಭದ್ರತೆ ಒದಗಿಸಿದ್ದ ನಿದರ್ಶನ ಜಗತ್ತಿನ ಇತಿಹಾಸದಲ್ಲಿ ಎಲ್ಲಾದರೂ ಉಂಟೇ? ಈ ಮನುಷ್ಯ ಇಂದಲ್ಲ ನಾಳೆ ನಮ್ಮ ಕೆಲಸಕ್ಕೆ ಬರುತ್ತಾನೆ ಎಂದು ಅವರಿಗೆ ತಿಳಿದಿತ್ತು. ಆದ್ದರಿಂದಲೇ ಅವರು ಈ ದೇಶ ಬಿಟ್ಟು ಹೋಗುತ್ತಿದ್ದಂತೆಯೇ ಗಾಂಧಿಗೆ ಆ ಮಟ್ಟದ ಭದ್ರತೆ ನೀಡಲು ನಮ್ಮಿಂದಾಗದೇ ಅವರು ಹತ್ಯೆಯಾದರು. ಅಂತರಂಗದಲ್ಲಿ ಗಾಂಧೀ-ಬ್ರಿಟಿಷರ ನಡುವೆ ಒಂದು ವಿಚಿತ್ರ ಬಾಂಧವ್ಯ ಏರ್ಪಟ್ಟಿತ್ತು. ಇಬ್ಬರೂ ವ್ಯಾಪಾರಿಗಳಾದುದರಿಂದ ಒಬ್ಬರ ಇಂಗಿತ ಇನ್ನೊಬ್ಬರಿಗೆ ಸುಲಭವಾಗಿ ತಿಳಿಯುತ್ತಿತ್ತು. ಆದ್ದರಿಂದಲೇ ಭಾರತ ಸ್ವಾತಂತ್ರ್ಯವನ್ನು ಸಂಪಾದಿಸಿಕೊಳ್ಳಲಿಲ್ಲ. ಅದನ್ನು ಒಂದು ಉಡುಗೊರೆಯಂತೆ ನೀಡಲಾಯಿತು. ಉಡುಗೊರೆಯಂತೆ ನೀಡಲಾದ ಸ್ವಾತಂತ್ರ್ಯಕ್ಕಿಂತ ಗುಲಾಮತನವೇ ಲೇಸು. ರಾಜಿ, ಮಾತುಕತೆ, ಒಪ್ಪಂದಗಳ ಮೂಲಕ ಪಡೆಯುವ ಸ್ವಾತಂತ್ರ್ಯ ನಿಜಕ್ಕೂ ತುಂಬ ಕುರೂಪವಾದುದು. ಸ್ವಾತಂತ್ರ್ಯ ಸಿಕ್ಕ ಮರುಗಳಿಗೆಯೇ ಆ ಕುರೂಪದ ಸಂಪೂರ್ಣ ಅನಾವರಣ ಆಯಿತು.

          ಇನ್ನು ಸ್ವಾತಂತ್ರ್ಯ ಗಾಂಧಿಯ ಅಹಿಂಸಾ ಹೋರಾಟದಿಂದ ಲಭಿಸಿತು ಎನ್ನುವುದೂ ತಿಳುವಳಿಕೆ ಇಲ್ಲದವರು ಮಾತ್ರ ಹೇಳುವ ಮಾತುಗಳು. ೧೯೪೨ರ ಕ್ವಿಟ್ ಇಂಡಿಯಾದಂತಹ ವ್ಯಾಪಕ ಚಳವಳಿ ಈ ಹಿಂದೆ ಜಗತ್ತಿನಲ್ಲೇ ನಡೆದಿರಲಿಲ್ಲ. ಅಂತಹ ಚಳವಳಿಯನ್ನು ಬ್ರಿಟಿಷರು ಒಂಬತ್ತೇ ದಿನಗಳಲ್ಲಿ ಸಂಪೂರ್ಣವಾಗಿ ಹತ್ತಿಕ್ಕಿದರು. ಭಾರತದ ಸ್ವಾತಂತ್ರ್ಯ ಖಂಡಿತ ಅಹಿಂಸಾ ಚಳುವಳಿಗೆ ಸಂದ ಜಯವಲ್ಲ. ನಿಜವೇನೆಂದರೆ ಭಾರತ ಬ್ರಿಟಿಷ್ ಸಾಮ್ರಾಜ್ಯಕ್ಕೆ ಕ್ರಮೇಣ ಆರ್ಥಿಕ ಹೊರೆಯಾಗಿ ಪರಿಣಮಿಸಲಾರಂಭಿಸಿತ್ತು. ಭಾರತದ ಜನಸಂಖ್ಯೆ ದಿನೇ ದಿನೇ ಏರತೊಡಗಿತ್ತು. ಶೋಷಣೆ ಮಾಡಲು ಅವರಿಗೆ ಭಾರತದಲ್ಲಿ ಇನ್ನಾವ ಸಂಪತ್ತೂ ಉಳಿದಿರಲಿಲ್ಲ. ಕ್ರಾಂತಿಯ ಸಮಯದಲ್ಲಿ ಸ್ವಾತಂತ್ರ್ಯ ನೀಡಿದರೆ ತಾವು ಸೋತಂತಾಗುತ್ತದೆ ಎಂದು ಕ್ವಿಟ್ ಇಂಡಿಯಾ ಚಳವಳಿಯನ್ನು ಹತ್ತಿಕ್ಕಿದ ಐದು ವರ್ಷಗಳ ತರುವಾಯ, ಎಲ್ಲವೂ ಸುಗಮವಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಖಾತ್ರಿ ಪಡಿಸಿಕೊಂಡು ಅವರು ಭಾರತವನ್ನು ಬಿಟ್ಟು ಪಲಾಯನ ಮಾಡಿದರು.  ಹೀಗೆ ಬ್ರಿಟಿಷರೊಂದಿಗೆ ಗಾಂಧಿಯ ಅಹಿಂಸಾವಾದವೂ ದೇಶದಿಂದ ಗಡಿಪಾರಾಯಿತು. ಭಾರತೀಯರ ಹಿಂಸಾ ಪ್ರವೃತ್ತಿಯನ್ನು ೪೦ ವರ್ಷಗಳ ಕಾಲ ಕೇವಲ ಅದುಮಿಡಲು ಮಾತ್ರ ಗಾಂಧಿಗೆ ಸಾಧ್ಯವಾಯಿತು. ಬ್ರಿಟಿಷರು ಹೋದ ಮರುಗಳಿಗೆಯೇ ಆ ಒತ್ತಡದಿಂದ ಮುಕ್ತರಾದ ಭಾರತದ ಪ್ರಜೆಗಳಲ್ಲಿ ಹಿಂಸೆ ಜ್ವಾಲಾಮುಖಿಯಂತೆ ಭುಗಿಲೆದ್ದಿತು. ಹಿಟ್ಲರ್ ಜರ್ಮನಿಯಲ್ಲಿ ಎಷ್ಟು ಮಂದಿ ಯಹೂದಿಗಳನ್ನು ಬಲಿ ತೆಗೆದುಕೊಂಡನೋ, ಗಾಂಧಿಯ ಅಹಿಂಸಾವಾದವು ಇಲ್ಲೂ ಅಷ್ಟೇ ಸಂಖ್ಯೆಯ ಹಿಂದೂ ಮುಸ್ಲಿಮರ ಪ್ರಾಣಗಳನ್ನು ಬಲಿ ತೆಗೆದುಕೊಂಡಿತು. ಇದರಲ್ಲಿ ಸ್ವತಃ ಗಾಂಧಿಯೂ ಬಲಿಯಾದರು. ಹಾಗೆ ನೋಡಿದರೆ ಹಿಟ್ಲರನ ಕೊಲೆಯ ವಿಧಾನ ಎಷ್ಟೋ ಸುಧಾರಿಸಿದ್ದು. ಅನಿಲ ಛೇಂಬರುಗಳಲ್ಲಿ ಕೆಲವೇ ಸೆಕೆಂಡುಗಳಲ್ಲಿ ಪ್ರಾಣ ಹೋಗಿಬಿಡುತ್ತಿತ್ತು. ಆದರೆ ಭಾರತದಲ್ಲಿ ನಡೆದ ಹಿಂಸಾಚಾರ ನಿಜಕ್ಕೂ ಕ್ರೂರವಾದುದು, ಅನಾಗರೀಕವಾದುದು. ದೇಶದಾದ್ಯಂತ ಯಾರನ್ನು ಬೇಕಾದರೂ ಕೊಲೆ ಮಾಡುವ ಸ್ವಾತಂತ್ರ್ಯ ವ್ಯಾಪಿಸಿಬಿಟ್ಟಿತು. ಆದ್ದರಿಂದಲೇ ಒಮ್ಮೆ ನಾನು ಗಾಂಧಿಯನ್ನು ಹಿಟ್ಲರನಿಗೆ ಹೋಲಿಸಿದ್ದು. ಗಾಂಧಿಯನ್ನು ಟೀಕಿಸಲೆಂದು ನಾನು ಅವರನ್ನು ಹಿಟ್ಲರನಿಗೆ ಹೋಲಿಸುವೆನೇ ವಿನಃ ಹಿಟ್ಲರನನ್ನು ಕೊಂಡಾಡುವ ಉದ್ದೇಶ ನನ್ನದಲ್ಲ.೩೦

ಗಾಂಧೀ ಎಂತಹ ನಿರ್ದಯಿ ಎಂದು ಅವರನ್ನು ಹತ್ತಿರದಿಂದ ಕಂಡವರೆಲ್ಲ ಬಲ್ಲರು. ಗಾಂಧಿಯ ಅಹಿಂಸಾತತ್ವ ತನ್ನ ಸ್ವಭಾವದಲ್ಲೇ ತುಂಬ ಹಿಂಸಾತ್ಮಕವಾದುದು. ಆ ಹಿಂಸೆಯನ್ನು ಸಹಿಸದೆ ಅವರ ಮಗ ಹರಿದಾಸ್ ಮದ್ಯ ಮಾಂಸಾದಿಗಳ ಮೊರೆ ಹೋದ, ಮುಸಲ್ಮಾನನಾಗಿ ಮತಾಂತರಹೊಂದಿದ. ಮಗನಿಗೆ ಸರಿಯಾದ ತಂದೆಯಾಗಲಾರದವನು ’ರಾಷ್ಟ್ರಪಿತ’ನಾಗುವನೇ? ದೇಶದ ತಂದೆಯಾಗುವುದು ಸುಲಭ, ಆದರೆ ಒಬ್ಬ ಮಗನಿಗೆ

ಸರಿಯಾದ ತಂದೆಯಾಗುವುದೇ ಮಹಾಕಷ್ಟ. ಗಾಂಧೀ ಎಂತಹ ನಿರ್ದಯಿ ಎಂದು ಅವರ ಪತ್ನಿ ಕಸ್ತೂರ್ ಬಾ ಬಲ್ಲರು. ಗಾಂಧೀ ಜೀವನಚರಿತ್ರೆ ಬರೆಯುವವರು ಅವರ ದಾಂಪತ್ಯವನ್ನು ’ಆದರ್ಶ ದಾಂಪತ್ಯ’ ಎಂದು ಬರೆದು ಸುಳ್ಳು ಹೇಳುತ್ತಾರೆ. ಅವರಿಬ್ಬರ ನಡುವೆ ಕೊನೆಯ ತನಕವೂ ಘರ್ಷಣೆ ಇದ್ದೇ ಇತ್ತು. ಗಾಂಧೀ ದಕ್ಷಿಣ ಆಫ್ರಿಕಾದಲ್ಲಿದ್ದಾಗ ಅತಿಥಿಗಳ ಶೌಚಪಾತ್ರೆಯನ್ನು ಕಸ್ತೂರಿಬಾ ಖುದ್ದಾಗಿ ತೊಳೆಯಬೇಕಾಗಿತ್ತಂತೆ. ಆಕೆ ಕಣ್ಣೀರಿಡುತ್ತ ಕೆಲಸ ಮಾಡುತ್ತಿದ್ದರೆ ’ಹಾಗೆಲ್ಲ ಕಣ್ಣೀರಿಡಬಾರದು. ಸೇವೆ ಮಾಡುವಾಗ ನಗುಮುಖವಿರಬೇಕು’ ಎಂದು ಹೇಳುತ್ತಿದ್ದರಂತೆ. ಆಕೆ ಇಂಥ ಕೆಲಸ ಮಾಡುತ್ತಿದ್ದುದು ತನ್ನ ಹೆದರಿಕೆಯಿಂದಲೇ ವಿನಃ ಸೇವಾಭಾವದಿಂದಲ್ಲ ಎಂಬ ಸಾಮಾನ್ಯ ತಿಳುವಳಿಕೆಯೂ ಅವರಿಗೆ ಇರಲಿಲ್ಲವೇ? ’ತನ್ನ ಮಾತಿನಂತೆ ನಡೆಯದಿದ್ದರೆ ತನ್ನ ಮನೆಯಲ್ಲಿ ಯಾರಿಗೂ ಇರಲು ಅವಕಾಶವಿಲ್ಲ’ ಎಂದು ಗದರಿ ಹಲವು ಸಲ ಹೆಂಡತಿಯ ರಟ್ಟೆ ಹಿಡಿದು ದರದರನೆ ಎಳೆದೊಯ್ದು ಬೀದಿಯಲ್ಲಿ ನಿಲ್ಲಿಸಿ ಬರುತ್ತಿದ್ದ ವ್ಯಕ್ತಿ ಈತ. ಒಮ್ಮೆಯಂತೂ ಆಕೆ ಬಸುರಿ ಎಂಬುದನ್ನೂ ಲೆಕ್ಕಿಸದೆ ಅರ್ಧರಾತ್ರಿಯ ಚಳಿಯಲ್ಲಿ ಹೊರಗೆ ನಿಲ್ಲಿಸಿದ್ದರು. ಕೊನೆಗೆ ಶೌಚಪಾತ್ರೆಯನ್ನು ಶುಚಿಗೊಳಿಸಲು ಆಕೆಯನ್ನು ಒಪ್ಪಿಸಿಯೇ ಒಳಗೆ ಸೇರಿಸಿದ್ದು. ಗಾಂಧಿ ತನ್ನ ಆಶ್ರಮದಲ್ಲಿ ಯಾವ ಪದಾರ್ಥವನ್ನೂ ವ್ಯರ್ಥಮಾಡುವಂತಿಲ್ಲ ಎಂದು ಕಟ್ಟುಪಾಡು ಮಾಡಿದ್ದರು. ಮಲವನ್ನೂ ಕೂಡ ಎಸೆಯದೇ ಮುಂದಿನ ವರ್ಷಕ್ಕೆ ಗೊಬ್ಬರವಾಗುವುದೆಂದು ಫೀನಿಕ್ಸ್ ಆಶ್ರಮದ ಒಂದು ಮೂಲೆಯಲ್ಲಿ ಸಂಗ್ರಹಿಸಲಾಗುತ್ತಿತ್ತು. ಇಂಥ ಜಿಪುಣ ವ್ಯಕ್ತಿಯನ್ನು ನಾನು ಇನ್ನೆಲ್ಲೂ ಕಂಡಿಲ್ಲ. ಗಾಂಧಿ ಜೀವನವಿಡೀ ಮಲಬದ್ಧತೆಯಿಂದ ನರಳುತ್ತಿದ್ದುದಕ್ಕೆ ಕಾರಣ ಇಲ್ಲದೇ ಇಲ್ಲ. ಯಾವುದೂ ವ್ಯರ್ಥವಾಗಬಾರದೆಂದು ಹೋದಲ್ಲೆಲ್ಲ ಶೌಚ ಸಂಗ್ರಹ ಪಾತ್ರೆಯನ್ನು ಹೊತ್ತೊಯ್ಯುತ್ತಿದ್ದರು. ಗಾಂಧಿಯ ಬಗ್ಗೆ ಸಿನೆಮಾ ತೆಗೆಯುವ ರಿಚರ್ಡ್ ಅಟೆನ್‌ಬರೋರಂಥವರಿಗೂ ಇದೆಲ್ಲ ಏಕೆ ಕಾಣಿಸುವುದಿಲ್ಲ ಎಂದು ನನಗೆ ಆಶ್ಚರ್ಯವಾಗುತ್ತದೆ. ಅಹಿಂಸೆಯನ್ನೇ ತನ್ನ ಪರಮೋಚ್ಚ ಆದರ್ಶವೆಂದು ಪ್ರಾಮಾಣಿಕತೆಯಿಂದ ಘೋಷಿಸಿಕೊಂಡಿದ್ದರಿಂದ ಈತನ ಆಂತರ್ಯವನ್ನು ಬೆದಕಿ ನೋಡಬೇಕೆಂದು ಯಾರಿಗೂ ಅನ್ನಿಸುವುದಿಲ್ಲ.೩೧

೧೯೩೪ರಲ್ಲಿ ಬಿಹಾರದಲ್ಲಿ ಭೂಕಂಪವಾದಾಗ ಮಹಾತ್ಮಾ ಗಾಂಧೀ ’ಭಗವಂತ ಪಾಪಿಗಳನ್ನು ಶಿಕ್ಷಿಸುತ್ತಿದ್ದಾನೆ’ ಎಂದು ಹೇಳಿಕೆ ನೀಡಿದ್ದರು. ಮುಂದೆ ನಾನು ಆ ಕುರಿತು ಅವರಿಗೊಂದು ಪತ್ರ ಬರೆದಿದ್ದೆ ’ಇದು ನಿಜಕ್ಕೂ ವಿಚಿತ್ರ, ಭಗವಂತ ಬರೀ ಬಿಹಾರದ ಪಾಪಿಗಳನ್ನು ಮಾತ್ರ ಶಿಕ್ಷಿಸಿದನಲ್ಲ! ಹಾಗಿದ್ದರೆ ಜಗತ್ತಿನ ಉಳಿದ ಪಾಪಿಗಳ ಗತಿಯೇನು? ಅಥವ ಜಗತ್ತಿನ ಪಾಪಿಗಳೆಲ್ಲಾ ಬಿಹಾರದಲ್ಲೇ ಇದ್ದರೇ?’ ಆ ಪತ್ರಕ್ಕೆ ಉತ್ತರಿಸುವ ಧೈರ್ಯವನ್ನಾಗಲಿ, ಕೊನೆಯ ಪಕ್ಷ ಪ್ರಾಮಾಣಿಕತೆಯನ್ನಾಗಲಿ ಅವರು ತೋರಿಸಲಿಲ್ಲ. ಅದೇ ದಿನ ಅವರ ಮಗ ರಾಮದಾಸನಿಗೂ ಬರೆದು (ಆತ ನನ್ನ ಆತ್ಮೀಯ ಗೆಳೆಯ) ನಿಮ್ಮ ತಂದೆಗೆ ನನ್ನ ಪತ್ರ ತಲುಪಿದೆಯೇ ಎಂದು ಕೇಳಿದೆ ’ತಲುಪಿದೆ, ಆದರೆ ಆ ಪತ್ರಕ್ಕೆ ಅವರ ಬಳಿ ಉತ್ತರವಿಲ್ಲ’ ಎಂದು ಉತ್ತರಿಸಿದ.೩೨ ಭಗವಂತನ ಅಪ್ಪಣೆ ಇಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡದು ಎನ್ನುವುದು ಭಾರತೀಯರ ನಂಬಿಕೆ. ಹಾಗಿದ್ದರೆ ಒಬ್ಬ ಕೊಲೆಗಾರನೂ ನಿರಪರಾಧಿಯೇ ಆಗುತ್ತಾನೆ. ಇದನ್ನೇ ಗೀತೆಯೂ ಬೋಧಿಸುವುದು. ಆದರೆ ಗಾಂಧಿಯಂತಹ ಅಹಿಂಸಾ ಬೋಧಕರೂ ಗೀತೆಯನ್ನು ’ಮಾತೆ’ ಎಂದು ಕರೆಯುವುದು ವಿಪರ್ಯಾಸ. ಆಗ ಹಿಂದೂ ಮುಸ್ಲಿಂರು ಒಂದೇ ಎಂದು ಕರೆ ನೀಡುತ್ತಿದ್ದ ಗಾಂಧೀಜಿಗೆ ೧೭ರ ಪ್ರಾಯದ ನಾನು ಒಂದು ಪತ್ರ ಬರೆದಿದ್ದೆ ’ಗೀತೆಯನ್ನು ತಾಯಿ ಎಂದು ಕರೆಯುವ ನಿಮಗೆ ಖುರಾನ್ ಏನಾಗಬೇಕು,.. ತಂದೆಯಾಗಬೇಕೇ?’ ಎಂದು ಕೇಳಿದ್ದೆ. ಆಗ ಗಾಂಧೀಜಿ ತುಂಬ ಸಿಟ್ಟು ಮಾಡಿಕೊಂಡು ಆ ಪತ್ರವನ್ನು ಹರಿದೆಸೆದುಬಿಟ್ಟರಂತೆ. ಆಮೇಲೆ ರಾಮದಾಸ್‌ನಿಂದ ನನಗೆ ತಿಳಿಯಿತು. ’ಅವನು ಕೇಳುವುದರಲ್ಲಿ ತಪ್ಪೇನಿದೆ? ಗೀತೆ ತಾಯಿಯಾದ ಮೇಲೆ ಕುರಾನ್ ತಂದೆಯೋ, ಮಲತಂದೆಯೋ, ಚಿಕ್ಕಪ್ಪನೋ ಆಗಲೇ ಬೇಕು. ಇಲ್ಲವಾದರೆ ’ಹಿಂದೂ ಮುಸ್ಲಿಮ್ ಭಾಯಿ ಭಾಯಿ’ ಎಂಬ ಮಾತಿಗೆ ಅರ್ಥವೇ ಇರುವುದಿಲ್ಲ’ ಎಂದು ರಾಮದಾಸ್ ತಂದೆಯ ಜೊತೆ ವಾದ ಮಾಡಿದ್ದನಂತೆ.೩೩

 ’ನೀವು ಹಿಂಸಾವಾದಿಗಳೋ ಅಥವ ಅಹಿಂಸಾವಾದಿಯೋ?’ ಎಂದು ಒಬ್ಬರು ಪ್ರಶ್ನೆಯನ್ನು ಕಳಿಸಿದ್ದಾರೆ. ನಾನು ಖಂಡಿತ ಹಿಂಸಾವಾದಿಯಲ್ಲ ಹಾಗೆಯೇ ಗಾಂಧಿ ಬೋಧಿಸುವ ಅಹಿಂಸಾವಾದವನ್ನು ಒಪ್ಪುವವನೂ ಅಲ್ಲ. ಗಾಂಧಿಯ ಅಹಿಂಸಾವಾದ ಮೇಲು ನೋಟಕ್ಕಷ್ಟೇ ಅಹಿಂಸಾವಾದ ಎನಿಸುತ್ತದೆ. ಗಾಂಧಿ ದಕ್ಷಿಣ ಆಫ್ರಿಕಾದಲ್ಲಿದ್ದಾಗ ಬೋಹ್‌ರ್ ಯುದ್ಧದಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೊದಲ ಮಹಾಯುದ್ಧದ ಸಮಯದಲ್ಲೂ ಭಾರತೀಯರು ಬ್ರಿಟಿಷರಿಗೆ ನೆರವಾಗಲು ಏಜೆಂಟ್‌ರಂತೆ ಕಾರ್ಯ ನಿರ್ವಹಿಸಿದವರು. ಪಂಜಾಬಿನಲ್ಲಿ ಮುಸಲ್ಮಾನರ ದಂಗೆ ಹುಟ್ಟಿಕೊಂಡಾಗ ಅದನ್ನು ಅಡಗಿಸಲು ಬ್ರಿಟಿಷರು ಗೋರಖ್ ಪಂಥದವರನ್ನು ಅಲ್ಲಿಗೆ ಕಳುಹಿಸಿದರು. ಬ್ರಿಟಿಷರ ಆಡಳಿತದಲ್ಲಿ ಹಿಂದೂ ಸಮಾಜದಲ್ಲಿ ದಂಗೆ ಎದ್ದಾಗ ಅದನ್ನು ಅಡಗಿಸಲು ಮುಸಲ್ಮಾನರನ್ನು ಕಳುಹಿಸುವುದು, ಮುಸ್ಲಿಮರ ಸಮಾಜದ ದಂಗೆಯನ್ನು ಅಡಗಿಸಲು ಹಿಂದೂ ಸೈನಿಕರನ್ನು ಕಳುಹಿಸುವುದು ಬ್ರಿಟಿಷರ ಒಂದು ಜಾಣ್ಮೆಯ ತಂತ್ರಗಳಲ್ಲೊಂದಾಗಿತ್ತು. ಆದರೆ ಪಂಜಾಬಿನ ಬೆಳವಣಿಗೆಯನ್ನು ಬ್ರಿಟಿಷರು ನಿರೀಕ್ಷಿಸಿರಲಿಲ್ಲ. ಗೋರಖ್ ಪಂಥಿಗಳು ಮುಸಲ್ಮಾನರ ಮೇಲೆ ಗುಂಡು ಹಾರಿಸಲು ನಿರಾಕರಿಸಿದರು. ಗೋರಖ್ ಪಂಥಿಗಳ ಈ ವರ್ತನೆಯನ್ನು ಗಾಂಧಿ ಖಂಡಿಸಿದರೆಂದರೆ ನಿಮಗೆ ಆಶ್ಚರ್ಯವಾಗಬಹುದು. ಆಗ ಗಾಂಧಿ ಇಂಗ್ಲೆಂಡಿನಲ್ಲಿದ್ದರು. ’ಸೈನಿಕರ ಅಶಿಸ್ತನ್ನು ನಾನು ಸಹಿಸಲಾರೆ. ನಾಳೆಯ ದಿನ ದೇಶ ಸ್ವತಂತ್ರವಾದ ಮೇಲೆ ಈ ಸೈನಿಕರನ್ನೇ ನಂಬಿ ನಾವು ಆಡಳಿತ ಮಾಡಬೇಕಲ್ಲವೇ?’ ಎಂದಿದ್ದರು. ಇದೆಂತಹ ಅಹಿಂಸಾವಾದವೋ ನನಗೆ ಅರ್ಥವಾಗದು. ಗಾಂಧಿ ಅವರ ಅಶಿಸ್ತನ್ನು ಮೆಚ್ಚಿಕೊಂಡಿದ್ದರೆ ಆಗ ದೇಶದ ಎಲ್ಲ ಕೋಮಿನ ಸೈನಿಕರೂ ಆಜ್ಞೆಯನ್ನು ಉಲ್ಲಂಘಿಸುವ ಧೈರ್ಯ ಮಾಡುತ್ತಿದ್ದರು. ನಾನು ಹಿಂಸಾವಾದಿಯಲ್ಲ. ಮೂರ್ಖರು ಮಾತ್ರ ಹಿಂಸೆಯ ಮೊರೆ ಹೋಗುತ್ತಾರೆ. ಬುದ್ಧಿಯಿರುವ ಯಾರೂ ಹಿಂಸಾವಾದಿಗಳಾಗಲು ಇಷ್ಟ ಪಡುವುದಿಲ್ಲ. ಪಶುಗಳು ಮಾತ್ರ ಹಿಂಸೆಯನ್ನು ನಂಬುತ್ತವೆ. ಈತನಕ ಪ್ರಭುತ್ವವನ್ನು ಪಶುಗಳ ಕೈಗೆ ಒಪ್ಪಿಸಿಕೊಂಡೇ ಬಂದಿರುವುದು ನಮ್ಮ ದುರಂತ. ’ಅಹಿಂಸೆ’ ಎಂಬ ಪದವೇ ತುಂಬ ವಿರೂಪವಾದುದು. ಏಕೆಂದರೆ ಲೋಕದಲ್ಲಿ ’ಹಿಂಸೆ’ಯೂ ಉಂಟು ಎಂಬುದನ್ನು ಅದು ನೆನಪಿಸುತ್ತದೆ. ಇನ್ನೊಬ್ಬರಿಗೆ ಹಿಂಸೆ ಮಾಡಬಾರದು ಎಂಬುದನ್ನು ಪ್ರತೀತಗೊಳಿಸುತ್ತದೆ. ಆದರೆ ಇನ್ನೊಬ್ಬರಿಗೆ ಹಿಂಸೆ ಮಾಡದೆ ಸುಮ್ಮನಿದ್ದುಬಿಟ್ಟರೆ ಸಾಕಾಗುವುದಿಲ್ಲ. ಇನ್ನೊಬ್ಬರಿಗೆ ಕ್ಷೇಮವನ್ನೂ ಉಂಟು ಮಾಡಿದಾಗಲೇ ಅಹಿಂಸೆಯ ಕಲ್ಪನೆ ಪರಿಪೂರ್ಣವಾಗುವುದು.

ಯಾವ ಕ್ರಾಂತಿ ಹಿಂಸಾತ್ಮಕವೋ, ನನ್ನ ದೃಷ್ಟಿಯಲ್ಲಿ ಅದು ಕ್ರಾಂತಿಯೇ ಅಲ್ಲ. ಅದೊಂದು ಗದ್ದಲ, ಉಪದ್ರವ ಅಷ್ಟೇ. ನಿಜವಾದ ಕ್ರಾಂತಿ ಯಾರಿಗೂ ಅರಿವಾಗದಂತೆ ಆಮೂಲಾಗ್ರ ಬದಲಾವಣೆಯನ್ನು ಉಂಟುಮಾಡುತ್ತದೆ. ಅದು ಸಾಧ್ಯವಾಗದಾಗ ಗದ್ದಲ, ಉಪದ್ರವ ಹುಟ್ಟಿಕೊಳ್ಳುತ್ತದೆ. ರಷ್ಯಾದಲ್ಲಿ ಸ್ಟಾಲಿನ್‌ನ ಆಡಳಿತ ಮುಗಿದ ಮೇಲೆ, ಖಾಸಗಿ ಆಸ್ತಿಯನ್ನು ಹೊಂದಲು ಮತ್ತೆ ಅನುಮತಿ ದೊರೆತ ಮೇಲೆ ಈಗ ಪ್ರಗತಿ ಎಂಬುದು ನಿಧಾನವಾಗಿ ತಲೆ ಎತ್ತುತ್ತಿದೆ. ಎಷ್ಟು ಕಾಲ ಹಿಂಸೆಯಿಂದ, ಒತ್ತಾಯದಿಂದ ಒಬ್ಬ ವ್ಯಕ್ತಿಯನ್ನು ಸುಮ್ಮನಿರಿಸಲು ಸಾಧ್ಯ? ದಬ್ಬಾಳಿಕೆ ತಾತ್ಕಾಲಿಕ ಉಪಾಯ ಆಗಬಹುದು ಅಷ್ಟೇ. ಕ್ರಾಂತಿಯ ಹೆಸರಿನಲ್ಲಿ ಹಿಂಸೆ ವಿಜೃಂಭಿಸಬಲ್ಲುದೇ ವಿನಃ ಹಿಂಸೆಯನ್ನು ನಂಬಿ ಈತನಕ ಯಾವ ಕ್ರಾಂತಿಯೂ ಸಾರ್ಥಕವಾಗಿಲ್ಲ. ನನ್ನ ಉಪನ್ಯಾಸವನ್ನು ನೀವು ಗಂಟೆ ಗಟ್ಟಲೆ ಕೇಳುವಿರಿ. ಆದರೆ ಎರಡು ಗಂಟೆಗಳ ಕಾಲ ನೀವು ಈ ಜಾಗ ಬಿಟ್ಟು ಕದಲ ಕೂಡದು ಎಂದು ಅಪ್ಪಣೆ ನೀಡಿ ಬಳಿಕ ಉಪನ್ಯಾಸವನ್ನು ಪ್ರಾರಂಭಿಸಿದರೆ ನಿಮಗೆ ಸುಮ್ಮನಿರಲಾಗುವುದೇ? ವ್ಯಕ್ತಿ ಸ್ವಭಾವತಃ ಕಟ್ಟುಪಾಡುಗಳ ವಿರುದ್ಧ ಸೆಟೆದು ನಿಲ್ಲುವ ಪ್ರವೃತ್ತಿ ಹೊಂದಿರುತ್ತಾನೆ. ಕಾರಣ ಒಳ್ಳೆಯದಾದರೂ ದಬ್ಬಾಳಿಕೆ ಎಂದಿಗೂ ಒಳ್ಳೆಯ ಪರಿಣಾಮ ಉಂಟುಮಾಡುವುದಿಲ್ಲ. ಒಳ್ಳೆಯ ಅಪ್ಪ-ಅಮ್ಮ ಎನಿಸಿಕೊಂಡವರ ಮಕ್ಕಳು ದಾರಿ ತಪ್ಪುವುದು ಒಳ್ಳೆಯ ಉದ್ದೇಶದಿಂದ ಹೇರಲಾದ ದಬ್ಬಾಳಿಕೆಯಿಂದಲೇ ಅಲ್ಲವೇ? ತಾತ್ವಿಕ ನೆಲೆಯಿಂದ ನೋಡುವುದಾದರೆ ಚೀನಾದ ಮಾವೋ ಕ್ರಾಂತಿಗೂ ಇಲ್ಲಿನ ಗಾಂಧಿಯ ಸತ್ಯಾಗ್ರಹಕ್ಕೂ ಯಾವ ವ್ಯತ್ಯಾಸವೂ ಕಾಣಿಸದು. ಬಿಳಿಯ ಬಣ್ಣದ ಖಾದಿ ಧರಿಸಿ ಗಾಂಧಿಯ ಜೊತೆ ಹೋರಾಡಿದ ನಾಯಕರುಗಳು ಬಳಿಕ ತಮ್ಮ ಆಂತರ್ಯ ಬಿಳುಪಿನದ್ದಲ್ಲ ಎಂಬುದನ್ನು ಬಯಲು ಮಾಡಿದರು. ಗಾಂಧಿ ಮಾರ್ಗ ಕೊನೆಗೆ ಹೀಗೆಯೇ ಪರ್ಯವಸಾನವಾಗುವುದು.೩೩
ಗಾಂಧಿಯ ಹಿಂದೂ-ಮುಸ್ಲಿಮ್ ಐಕ್ಯತೆಯ ಸಂದೇಶ ಬರೀ ಲೊಳಲೊಟ್ಟೆ, ಅವೆಲ್ಲ ಹಸಿ ಸುಳ್ಳುಗಳು ಎಂದು ಈಗ ರುಜುವಾತಾಗಿದೆ. ಅವರ ಮಗ ಹರಿಲಾಲ್ ನನ್ನ ಬಾಲ್ಯ ಸ್ನೇಹಿತ. ಆತ ಗಾಂಧಿಗಿಂತ ಎಷ್ಟೋ ಪಾಲು ಉತ್ತಮ ಎಂದು ನನಗನ್ನಿಸಿದೆ. ಹೊಸ ಶಿಕ್ಷಣ ಪದ್ಧತಿ ಜನರನ್ನು ಹಾಳು ಮಾಡುತ್ತದೆ ಎಂದು ಗಾಂಧಿ ಅವನನ್ನು ಶಾಲೆಗೇ ಸೇರಿಸಲಿಲ್ಲ. ಶಾಲಾಶಿಕ್ಷಣ ಮಕ್ಕಳಿಗೆ ವಿಜ್ಞಾನ, ತಂತ್ರಜ್ಞಾನಗಳನ್ನು ಕಲಿಸಿ ಅವರ ಧಾರ್ಮಿಕ ನಂಬಿಕೆಗಳನ್ನು ನಾಶ ಮಾಡಿ ಬಿಡುತ್ತದೆ ಎಂಬುದು ಅವರ ಹೆದರಿಕೆ. ಅತ್ಯಂತ ಸರಳವಾದ ಹಾಗು ಅಗತ್ಯವಾದ ತಂತ್ರಜ್ಞಾನಗಳನ್ನೂ ಅವರು ಬಹಿಷ್ಕರಿಸಿದ್ದರು. ಒಬ್ಬ ವ್ಯಕ್ತಿ ಅಣುವಿಜ್ಞಾನವನ್ನು ಬಹಿಷ್ಕರಿಸಿದರೆ ಅರ್ಥವಾಗುತ್ತದೆ. ಇಂದಿನ ಕಾಲಮಾನದಲ್ಲಿ ’ನಾನು ಟೆಲಿಫೋನನ್ನು ವಿರೋಧಿಸುತ್ತೇನೆ’ ಎಂದು ಹೇಳಿದರೆ ಏನೆಂದು ಹೇಳುವುದು? ಬರೀ ಧರ್ಮಗ್ರಂಥಗಳನ್ನು ಓದುವ ಮಟ್ಟಿಗೆ ಅವರು ತಮ್ಮ ಮಕ್ಕಳಿಗೆ ಅಕ್ಷರ ಜ್ಞಾನ ನೀಡಿದ್ದರು. ಹರಿಲಾಲ್, ನಾನು ಶಾಲೆಗೆ ಹೋಗಲೇ ಬೇಕು ಎಂದು ಹಟ ಹಿಡಿದಾಗ ’ನೀನು ಶಾಲೆಯ ಮೆಟ್ಟಿಲು ಏರಿದರೆ ನನ್ನ ಮನೆಯಲ್ಲಿ ನಿನಗೆ ಪ್ರವೇಶವಿಲ್ಲ’ ಎಂದು ಹೆದರಿಸಿದ್ದರು. ಇದು ಅಹಿಂಸೆಯ ಬೋಧಕನ ಬಾಯಿಂದ ಬರುವ ಮಾತುಗಳೇ, ಅದೂ ಒಂದು ಚಿಕ್ಕ ಮಗುವಿಗೆ! ಶಾಲೆಗೆ ಹೋಗಬೇಕು ಎನ್ನುವುದು ಅಪರಾಧವೇ, ಆ ಹುಡುಗನೇನು ’ಸೂಳೆಗಾರಿಕೆ’ಗೆ ಹೋಗಬೇಕು ಎಂದು ಕೇಳಿದನೇ? ’ನೀನೂ ಶಾಲೆಯ ಮೆಟ್ಟಿಲು ಏರಿದ್ದವನು, ನೀನೇನು ಕೆಟ್ಟು ಹೋಗಿರುವೆಯಾ? ನನ್ನ ಬಗ್ಗೆ ಏಕೆ ನಿನಗೆ ನಂಬಿಕೆ ಇಲ್ಲ?’ ಎಂದು ಕೇಳಿದ. ಆದರೆ ಗಾಂಧಿ ತಮ್ಮ ನಿರ್ಧಾರವನ್ನು ಕಿಂಚಿತ್ತೂ ಬದಲಿಸಲಿಲ್ಲ. ಆಗ ಕೂಡಲೆ ಹರಿಲಾಲ್ ತಂದೆಯ ಆಶೀರ್ವಾದವನ್ನು ಬಯಸಿ (ಆ ಆಶೀರ್ವಾದ ಅವನಿಗೇನೂ ಸಿಗಲಿಲ್ಲ) ಕಾಲುಗಳನ್ನು ಮುಟ್ಟಿ ನಮಸ್ಕರಿಸಿ ಮನೆಯಿಂದ ಹೊರನಡೆದನಂತೆ. ಅಪ್ಪ ಅಮ್ಮನಿದ್ದೂ ಹರಿಲಾಲ್ ತನ್ನನ್ನು ಮೆಟ್ರಿಕ್ಯುಲೇಷನ್ ತನಕವಾದರೂ ಓದಿಸಿ ಎಂದು ನಂಟರಿಷ್ಟರನ್ನು ಅಂಗಲಾಚಿದ. ಗಾಂಧಿಗೆ ಈ ವಿಷಯ ತಿಳಿದಾಗ ಅವನಿನ್ನು ನನ್ನ ಮಗನೇ ಅಲ್ಲ ಎಂದರಂತೆ. ಇಂಥ ತಂದೆ ತಾಯಿಗಳನ್ನು ವಿರೋಧಿಸಬೇಕೇ ಬೇಡವೇ? ನನಗೆ ಗಾಂಧಿಯಲ್ಲಿ ಯಾವ ಅಹಿಂಸೆ, ಪ್ರೀತಿಯೂ ಕಾಣಿಸುವುದಿಲ್ಲ. ದೊಡ್ಡ ದೊಡ್ಡ ಭಾಷಣಗಳು, ಸಾರ್ವಜನಿಕ ಚಳವಳಿಗಳು ಬೇರೆಯ ಮಾತು. ಇಂತಹ ಸಣ್ಣ ಪುಟ್ಟ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಯ ನಿಜವಾದ ಮುಖದ ದರ್ಶನವಾಗುತ್ತದೆ.

ಮುಂದೆ ಹರಿಲಾಲ್ ಬೇರೆಯ ಊರಿನಲ್ಲಿದ್ದ ತನ್ನ ಚಿಕ್ಕಪ್ಪನ ಮನೆಯಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡಿದ. ತುಂಬ ಸಲ ಅಮ್ಮನನ್ನು ನೋಡಬೇಕು ಎನಿಸಿದರೂ ಅದಕ್ಕೆ ಗಾಂಧಿ ಆಸ್ಪದ ಕೊಡುತ್ತಿರಲಿಲ್ಲವಂತೆ. ಪದವೀಧರನಾದ ಮೇಲೆ ಗಾಂಧಿ ಎಷ್ಟರ ಮಟ್ಟಿಗೆ ಹಿಂದೂ ಮುಸ್ಲಿಮ್ ಭಾಯಿ ಭಾಯಿ ಎಂಬ ಮಾತುಗಳನ್ನು ನಂಬಿರುವರೋ ಎಂದು ಪರೀಕ್ಷಿಸಲು ಇಸ್ಲಾಂಗೆ ಮತಾಂತರ ಹೊಂದಿದ, ಅಬ್ದುಲ್ಲಾ ಗಾಂಧಿ ಎಂದು ಹೆಸರು

ಬದಲಾಯಿಸಿಕೊಂಡ. ಗಾಂಧಿ ಕೆಂಡಾಮಂಡಲವಾದರಂತೆ, ’ಇದೇನು ತಮಾಷೆಯೇ, ನನ್ನ ಆಸ್ತಿಯ ಚಿಕ್ಕಾಸೂ ಅವನಿಗೆ ಸಿಗುವುದಿಲ್ಲ, ಅವನು ನನ್ನ ಮಗನೇ ಅಲ್ಲ, ಇನ್ನು ನಾನು ಅವನ ಮುಖ ನೋಡುವುದಿಲ್ಲ’ ಎಂದು ರೇಗಾಡಿದರಂತೆ. ತಮ್ಮ ವಿಲ್‌ನಲ್ಲೂ ಅವನು ನನ್ನ ಚಿತೆಗೆ ಬೆಂಕಿ ಇಡಬಾರದು ಎಂದು ಬರೆದಿದ್ದರಂತೆ. ಒಮ್ಮೆ ಮಧ್ಯ ಪ್ರದೇಶದ ಕಟ್ನಿ ಎಂಬಲ್ಲಿ ಹರಿಲಾಲ್ ಪ್ರಯಾಣಿಸುತ್ತಿದ್ದ ರೈಲು ಹಾಗು ಗಾಂಧಿ ಪ್ರಯಾಣಿಸುತ್ತಿದ್ದ ರೈಲು ಎರಡೂ ಒಂದೇ ಜಂಕ್ಷನ್‌ನಲ್ಲಿ ಸಂಧಿಸಿದವು. ಆಗ ತಾಯಿಯನ್ನು ನೋಡಲು ಹರಿಲಾಲ್ ಧಾವಿಸಿದನಂತೆ. ಅವನನ್ನು ದೂರದಿಂದಲೇ ಗುರುತಿಸಿದ ಗಾಂಧಿ ತಮ್ಮ ಬೋಗಿಯ ಎಲ್ಲ ಕಿಟಕಿಗಳನ್ನೂ ಮುಚ್ಚಿ ’ನೀನೇನಾದರೂ ಅವನನ್ನು ಮಾತನಾಡಿಸಲು ಪ್ರಯತ್ನಿಸಿದರೆ ನೀನೂ ಅವನ ಹಿಂದೆಯೇ ಹೊರಡಬಹುದು’ ಎಂದು ಕಸ್ತೂರ್‌ಬಾಗೆ ಎಚ್ಚರಿಕೆ ನೀಡಿದರಂತೆ. ಕಸ್ತೂರ್‌ಬಾರ ಕಣ್ಣೀರು, ಗೋಳಾಟಗಳು ಅವರ ಮನಸ್ಸನ್ನು ಕಿಂಚಿತ್ತೂ ಕರಗಿಸಲಿಲ್ಲ. ಈತ ಅಹಿಂಸಾ ಮೂರ್ತಿಯೇ, ಹೊಸಯುಗದ ಸಂತನೇ! ನಾನು ಗಾಂಧಿಯ ಚರಿತ್ರೆಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ್ದೇನೆ, ನನಗೆ ಅವರಲ್ಲಿ ಯಾವ ಸಂತತ್ವವೂ ಕಾಣಿಸಿಲ್ಲ. ಅವರ ನಿಜವಾದ ಮುಖವೇನೆಂದು ತೋರಿಸುವ ಇಂತಹ ಲೆಕ್ಕವಿಲ್ಲದಷ್ಟು ನಿದರ್ಶನಗಳನ್ನು ಉಲ್ಲೇಖಿಸಬಲ್ಲೆ.೩೪

ಅಹಿಂಸೆಯನ್ನು ಜಗತ್ತಿಗೆ ಬೋಧಿಸುತ್ತಿದ್ದ ಗಾಂಧೀ ಸ್ವಭಾವತಃ ಮಹಾ ನಿರ್ದಯಿಯಾಗಿದ್ದರು. ಶತ್ರುವನ್ನು ಇರಿಯಲು ಕತ್ತಿ ಎತ್ತುವವನು ನಿರ್ದಯಿ ನಿಜ. ಆದರೆ ಅದೇ ಕತ್ತಿಯನ್ನು ಆತ ತನ್ನ ಕುತ್ತಿಗೆಗೆ ಇರಿಸಿಕೊಂಡೊಡನೆ ಅಹಿಂಸೆಯ ಪ್ರವಾದಿಯಾಗಿ ಬಿಡುವನೇ? ಇಲ್ಲಿ ಮೊದಲನೆಯ ಹಿಂಸೆಗಿಂತ ಎರಡನೆಯ ಹಿಂಸೆ ಹೆಚ್ಚು ಅಪಾಯಕಾರಿ. ಏಕೆಂದರೆ ಅದು ಹಿಂಸೆ ಎಂದು ಯಾರಿಗೂ ಸುಲಭವಾಗಿ ಗೋಚರಿಸುವುದಿಲ್ಲ. ಆದರೆ ಇದುವೆ ಗಾಂಧಿಯ ಸತ್ಯಾಗ್ರಹದ ಮೂಲತತ್ವ. ಸತ್ಯಾಗ್ರಹದ ಹೆಸರಿನಲ್ಲಿ ಹೀಗೆ ಎಲ್ಲರನ್ನೂ ಬೆದರಿಸುತ್ತಲೇ ಗಾಂಧಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದರು. ಹೀಗೆ ಬೆದರಿಸಿಯೇ ಅವರು ಡಾ.ಅಂಬೇಡ್ಕರ್‌ರನ್ನು ಬಗ್ಗಿಸಿದ್ದು. ’ಸತ್ಯಾಗ್ರಹ ಹೃದಯಗಳನ್ನು ಪರಿವರ್ತನೆ ಮಾಡುತ್ತದೆ’ ಎಂದು ಹೇಳಿಕೊಳ್ಳುತ್ತಿದ್ದರೇ ವಿನಃ ಅವರ ಸತ್ಯಾಗ್ರಹದಿಂದ ಎಂದೂ ಯಾರ ಹೃದಯವೂ ಪರಿವರ್ತನೆಯಾಗಲಿಲ್ಲ. ’ಅಂತಹ ಭ್ರಮೆಗಳಲ್ಲಿ ಇರಬೇಡಿ’ ಎಂಬ ಮಾತುಗಳನ್ನು ಸ್ವತಃ ಅಂಬೇಡ್ಕರರೇ ಗಾಂಧಿಗೆ ಹೇಳಿದ್ದರು. ಒಂದು ವೇಳೆ ಗಾಂಧಿಯ ಪ್ರಾಣಕ್ಕೆ ಗಂಡಾಂತರವಾದರೆ ಇಡೀ ದೇಶವೇ ಬಡಪಾಯಿ ದಲಿತರ ಮೇಲೆ ಹಲ್ಲೆ ನಡೆಸುತ್ತದೆ ಎಂಬ ಒಂದೇ ಕಾರಣದಿಂದ ಅವರು ಗಾಂಧೀಜಿಯ ಸತ್ಯಾಗ್ರಹದ ಹಟಮಾರಿತನಕ್ಕೆಲ್ಲ ತಲೆಬಾಗಿದರು.

ಡಾ.ಅಂಬೇಡ್ಕರ್ ಆಗ ಭಾರತದ ಕಾಲುಭಾಗದಷ್ಟು ಜನಸಂಖ್ಯೆ ಹೊಂದಿದ್ದ ದಲಿತರಿಗೆ ಪ್ರತ್ಯೇಕ ಮೀಸಲು ಮತಕ್ಷೇತ್ರದ ಬೇಡಿಕೆ ಇಟ್ಟರು. ಮತ್ತು ಅವರ ಬೇಡಿಕೆ ತುಂಬ ನ್ಯಾಯಯುತವಾದುದು ಕೂಡ. ದಲಿತರೇಕೆ ತಮ್ಮನ್ನು ತಾವು ಹಿಂದೂಗಳೊಂದಿಗೆ ಗುರುತಿಸಿಕೊಳ್ಳಬೇಕೋ ನನಗರ್ಥವಾಗುವುದಿಲ್ಲ. ಈ ಹಿಂದೂಗಳೆನಿಸಿಕೊಂಡವರು ಬಿಟ್ಟಿಯಾಗಿ ಅವರ ಕೈಯಿಂದ ಮಾಡಬಾರದ ಕೆಲಸಗಳನ್ನು ಮಾಡಿಸಿಕೊಂಡಿದ್ದಾರೆ, ಪ್ರಾಣಿಗಳಿಗಿಂತ ಹೀನಾಯವಾಗಿ ನಡೆಸಿಕೊಂಡು ಅವರ ಘನತೆಯನ್ನೇ ನಾಶ ಮಾಡಿದ್ದಾರೆ. ತಾವು ವಾಸಿಸುತ್ತಿದ್ದ ನಗರಗಳಲ್ಲಿ ಸಂಚರಿಸಲೂ ಅವರಿಗೆ ಆಸ್ಪದ ನೀಡದೆ ’ನಾನೊಬ್ಬ ಅಸ್ಪೃಶ್ಯ, ಬರುತ್ತಿದ್ದೇನೆ. ಸವರ್ಣೀಯರೆಲ್ಲ ನನ್ನ ನೆರಳು ಸೋಕದಂತೆ ದೂರ ಸರಿದು ನಿಲ್ಲಿರಿ’ ಎಂದು ಗಟ್ಟಿಯಾಗಿ ಕೂಗಿಕೊಂಡು ನಡೆದಾಡುವಂತೆ ಮಾಡಿದ್ದಾರೆ. ಜಗತ್ತಿನಲ್ಲಿ ಎಷ್ಟೋ ಪಾತಕಿಗಳು ಜನ್ಮ ತಳೆದಿರಬಹುದು, ಆದರೆ ಮನು ಅವರಲ್ಲೆಲ್ಲ ಅಗ್ರಗಣ್ಯನಾಗಿದ್ದಾನೆ. ಅದಕ್ಕಾಗಿಯೇ ಅಡಾಲ್ಫ್ ಹಿಟ್ಲರ್ ಮನುವನ್ನು ಆರಾಧಿಸುತ್ತಿದ್ದುದು. ೫ ಸಾವಿರ ವರ್ಷಗಳಿಂದಲೂ ಮನು ಈ ದೇಶಗೆ ಪಾಲಿನ ಒಂದು ಶಾಪವಾಗಿದ್ದಾನೆ. ಆದರೆ ಇಂಥ ಹಿಂದೂ ಜನಾಂಗದಿಂದ ದಲಿತರು ಬೇರ್ಪಡಬಾರದು ಎಂಬುದು ಗಾಂಧಿಯ ಒತ್ತಾಯ. ಇದೂ ಕೂಡ ಗಾಂಧಿಯ ಮತ್ತೊಂದು ರಾಜಕೀಯ ಕುತಂತ್ರವೇ, ಅದು ದಲಿತಪರ ಕಾಳಜಿಯೇನಲ್ಲ. ಏಕೆಂದರೆ ಹಿಂದೂಧರ್ಮದ ಶೇ.೨೫ ಜನಸಂಖ್ಯೆ ಮತಾಂತರವಾಗಿಬಿಟ್ಟರೆ ಹಿಂದೂ ಸ್ಥಾನದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗಿಬಿಡುವರು ಎಂಬ ಭೀತಿ ಗಾಂಧಿಯದು. ನನ್ನ ದೃಷ್ಟಿಯಲ್ಲಿ ಗಾಂಧಿ ಒಬ್ಬ ಒಳ್ಳೆಯ ಧಾರ್ಮಿಕ ವ್ಯಕ್ತಿಯೂ ಅಲ್ಲ.

ಅಂಬೇಡ್ಕರ್ ತಮ್ಮ ಬೇಡಿಕೆಯನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯ ಪಡಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಿದರು. ವಿಧಿಯಿಲ್ಲದೆ ಅಂಬೇಡ್ಕರ್ ತಮ್ಮ ಬೇಡಿಕೆಯಿಂದ ಹಿಂದೆ ಸರಿದ ಕೂಡಲೆ ಅವರನ್ನು ಓಲೈಸಲು ಗಾಂಧಿ ದಲಿತರನ್ನು ’ಹರಿಜನರು’ ಎಂದು ಕರೆಯಲಾರಂಭಿಸಿದರು. ನಾನು ಅಂಬೇಡ್ಕರ್ ಜಾಗದಲ್ಲಿ ಇದ್ದಿದ್ದರೆ ’ನಿಮ್ಮ ಬದುಕು, ನಿಮ್ಮ ಸಾವು ನಿಮ್ಮ ಕೈಲಿದೆ. ಧಾರಾಳವಾಗಿ ಉಪವಾಸ ಮಾಡಿ

ಸಾಯಬಹುದು, ಸತ್ತ ಮೇಲೆಯೂ ಉಪವಾಸ ಮಾಡುತ್ತಲೇ ಇರಬಹುದು. ಆದರೆ ಒಂದು ಮಾತು, ನೀವು ಸತ್ತರೆ ನಿಮ್ಮ ಸಾವಿನ ಅಪವಾದ ನನ್ನ ಮೇಲೆ ಬರುತ್ತದೆ. ಇಡೀ ದೇಶ ನನಗೆ ಶಾಪ ಹಾಕುತ್ತದೆ. ಇದೇನು ಅಹಿಂಸೆಯೇ? ಇದು ತುಂಬ ಕ್ರೂರ ವಿಧಾನವಲ್ಲವೇ?’ ಎಂದು ಪ್ರಶ್ನಿಸುತ್ತಿದ್ದೆ. ಅಂಬೇಡ್ಕರ್ ಇದನ್ನೆಲ್ಲ ಬಾಯಿ ಬಿಟ್ಟು ಹೇಳದಿದ್ದರೂ ತೋರಿಕೆಗೆ ಗಾಂಧಿಯ ಕ್ಷಮಾಪಣೆ ಕೇಳಿದರು. ನಾನಾಗಿದ್ದರೆ ಖಂಡಿತ ಕೇಳುತ್ತಿರಲಿಲ್ಲ. ಇತಿಹಾಸದಲ್ಲಿ ಗಾಂಧಿಯ ಸಾವಿನ ಕಳಂಕವನ್ನು ಹೊತ್ತು ನಿಲ್ಲುತ್ತಿದ್ದೆ. ಮಾತ್ರವಲ್ಲ, ಗಾಂಧಿ ಮಹಾ ಕ್ರೂರ ವ್ಯಕ್ತಿ ಎಂದು ಎಲ್ಲೆಡೆ ಪ್ರಚಾರ ಮಾಡುತ್ತಿದ್ದೆ. ನಾವು ಸತ್ತ ಮೇಲೆ ಯಾರು ಇತಿಹಾಸವನ್ನು ಹೇಗೆ ಬರೆದುಕೊಂಡರೂ ನಮಗೇನು ಚಿಂತೆ? ಆದರೆ ಅಂಬೇಡ್ಕರ್ ಬೇರೊಂದು ದಾರಿ ಹಿಡಿದರು. ಅವರು ದಲಿತ ಸಮುದಾಯದೊಂದಿಗೆ ಬೌದ್ಧಧರ್ಮದತ್ತ ನಡೆದರು. ಆದ್ದರಿಂದ ಭಾರತದಲ್ಲಿ ಬೌದ್ಧರ ಸಂಖ್ಯೆ ಈಗ ಸ್ವಲ್ಪ ಹೆಚ್ಚಾಗಿದೆ. ಅಂಬೇಡ್ಕರರದೂ ಕೂಡ ಪುನಃ ರಾಜಕೀಯ ಪ್ರೇರಿತ ಮತಾಂತರವೇ, ಅದರಲ್ಲಿ ನನಗೆ ಯಾವುದೇ ಆಧ್ಯಾತ್ಮಿಕ ಮೌಲ್ಯ ಕಾಣಿಸುವುದಿಲ್ಲ. ಭಾರತದಲ್ಲಿ ದಲಿತರು ಸುಲಭವಾಗಿ ತಮ್ಮನ್ನು ತಾವು ಮಾರಿಕೊಂಡುಬಿಡುತ್ತಾರೆ ಎಂದು ಅಂಬೇಡ್ಕರ್ ಪುನಃ ರುಜುವಾತುಪಡಿಸಿದರು. ಭಾರತದ ಸಂವಿಧಾನ ರಚನೆಯ ಸಮಿತಿಯಲ್ಲಿ ಅವರಿಗೆ ಮುಖ್ಯವಾದ ಸ್ಥಾನಮಾನವನ್ನು ನೀಡಿ ಅವರನ್ನು ಕೊಂಡುಕೊಳ್ಳಲಾಯಿತು. ಆ ಸ್ಥಾನ ಮಾನ ಸಿಕ್ಕ ಮೇಲೆ ಅವರು ತಮ್ಮ ಬೌದ್ಧಧರ್ಮದ ನಿಷ್ಠೆಯನ್ನು ಸಂಪೂರ್ಣವಾಗಿ ಮರೆತು ಸಂವಿಧಾನ ರಚನೆಯಲ್ಲಿ ತೊಡಗಿದರು. ಇವರನ್ನು ನಂಬಿ ಬೌದ್ಧಧರ್ಮಕ್ಕೆ ಮತಾಂತರಗೊಂಡಿದ್ದ ಮಹಾರಾಷ್ಟ್ರದ ೩ ಲಕ್ಷಕ್ಕೂ ಅಧಿಕ ದಲಿತರು ಅನ್ಯಾಯಕ್ಕೊಳಗಾದರು. ಪರಿಶಿಷ್ಟ ಜನಾಂಗಗಳಿಗೆ ನೀಡಲಾಗುವ ಮೀಸಲಾತಿಯ ಪ್ರಯೋಜನವು ಅವರು ಹಿಂದೂಗಳಾಗಿದ್ದರೆ ಮಾತ್ರ ಸಿಗುತ್ತದೆ ಎಂಬುದನ್ನು ಅವರು ಮರೆತರು. ಹಾಗಾಗಿ ಮಹಾರಾಷ್ಟ್ರದ ಎಲ್ಲ ಬೌದ್ಧ ದಲಿತರೂ ಮೀಸಲಾತಿಯಿಂದ ವಂಚಿತರಾದರು.
ಆದರೂ ಅಂಬೇಡ್ಕರ್ ಗಾಂಧಿಗಿಂತ ಎಷ್ಟೋ ಒಳ್ಳೆಯ ಅಹಿಂಸಾವಾದಿ. ನನ್ನ ದೃಷ್ಟಿಯಲ್ಲಿ ನಮ್ಮನ್ನು ನಾವು ತಿಳಿಯುವುದೇ ಅಹಿಂಸೆ. ನಮ್ಮನ್ನು ನಾವು ಸರಿಯಾಗಿ ಅರಿತರೆ ಮನುಷ್ಯತ್ವದ ಮೂಲಧಾತುಗಳು ನಮಗೆ ತಿಳಿದುಬಿಡುತ್ತದೆ. ಇದರಿಂದ ಇಡೀ ಮನುಷ್ಯಜಾತಿಯ ಬಗ್ಗೆ ನಮ್ಮಲ್ಲಿ ಪ್ರೀತಿ ಮೊಳೆಯುತ್ತದೆ. ಇಂತಹ ಪ್ರೀತಿಗೆ ನೋವನ್ನು ಉಂಟು ಮಾಡಲು ಸಾಧ್ಯವಾಗುವುದಿಲ್ಲ, ಇದೇ ನಿಜವಾದ ಅಹಿಂಸೆ.೩೫

ಗಾಂಧಿಯ ಅಹಿಂಸಾತ್ಮಕ ಆಂದೋಲನ, ಸತ್ಯಾಗ್ರಹಗಳು ಒತ್ತಡವನ್ನು ಹೇರುವ ತಂತ್ರವನ್ನು ಆಧರಿಸಿದ ರಾಜಕೀಯ ಆಂದೋಲನಗಳಾಗಿವೆ. ಒತ್ತಡ, ಆಗ್ರಹಗಳು ಅಹಿಂಸೆಯ ಪರಿಭಾಷೆ ಹೇಗಾದಾವು? ಒತ್ತಡ ಹೇರುವ ರೀತಿ ಅಹಿಂಸಾತ್ಮಕವಾದರೂ ಒತ್ತಡ ಹೇರುವ ಧೋರಣೆ ಹಿಂಸಾತ್ಮಕವಾದುದು. ಗಾಂಧಿ ಕಲಿಸಿಕೊಟ್ಟ ಉಪವಾಸ ಸತ್ಯಾಗ್ರಹದಿಂದ ಇಂದು ನಮ್ಮ ದೇಶ ಸರ್ವನಾಶವಾಗುತ್ತಿದೆ. ಗಾಂಧಿಯ ಎಲ್ಲ ಅಹಿಂಸಾತ್ಮಕ ಹೋರಾಟಗಳೂ ಹಿಂಸೆಯಲ್ಲೇ ಪರ್ಯವಸಾನವಾಗುತ್ತದೆ. ಹೃದಯಪರಿವರ್ತನೆಯ ಹೆಸರಿನಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ತನ್ನ ಅಭಿಪ್ರಾಯಕ್ಕೆ ಮಣಿಸುವ ಆಲೋಚನೆಯೇ ಹಿಂಸಾತ್ಮಕವಾದುದು. ಈ ಸೃಷ್ಟಿಯಲ್ಲಿ ಇನ್ನಾವ ಬದಲಾವಣೆಯನ್ನೂ ಅಪೇಕ್ಷಿಸದವನೇ ನಿಜವಾದ ಅಹಿಂಸಾವಾದಿ. ನೀಷೆ ಯೇಸುವನ್ನು ಟೀಕಿಸುತ್ತ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ತೋರಿಸುವುದು ಪ್ರೀತಿಯ ಲಕ್ಷಣವಲ್ಲ. ಅಂಥವನಲ್ಲಿ ಹಾಗೆ ಹೊಡೆದವನನ್ನು ಕೊನೆಯ ಪಕ್ಷ ಮನುಷ್ಯತ್ವದಿಂದ ನೋಡುವ ಸಹನೆಯೂ ಇರುವುದಿಲ್ಲ. ಆ ವರ್ತನೆಯಲ್ಲಿ ’ನೀನೆಂಥ ಕ್ರಿಮಿ, ನಾನಾದರೂ ಎಂತಹ ಮಹಾತ್ಮ ಎಂದು ಈಗಲಾದರೂ ತಿಳಿಯಿತೇ’ ಎಂಬ ಧೋರಣೆ ಇದೆ. ಎನ್ನುತ್ತಾನೆ. ನಮ್ಮ ಸೂಕ್ಷ್ಮ ಅಹಂಕಾರವು ತಾನು ಇನ್ನೊಬ್ಬನಿಗಿಂತ ಉತ್ತಮ ಎಂದು ಸಾಬೀತು ಮಾಡಲು ಹಲವು ಒಳ ದಾರಿಗಳನ್ನು ಹುಡುಕಿಕೊಳ್ಳಬಲ್ಲದು. ಆದರೆ ಅವು ಕೊನೆಗೆ ಹಿಂಸೆಯತ್ತ ಕೊಂಡೊಯ್ಯುವ ದಾರಿಗಳು ಎಂಬುದನ್ನು ಮರೆಯಬಾರದು. ಅಹಿಂಸೆಯ ಇನ್ನೊಂದು ರೂಪ ಪ್ರೀತಿಯೇ ವಿನಃ ಒತ್ತಡವಲ್ಲ. ಸೂರ್ಯೋದಯದೊಂದಿಗೆ ಸೂರ್ಯನ ಕಿರಣಗಳು ಸದ್ದಿಲ್ಲದೆ ವ್ಯಾಪಿಸುವಂತೆ ಅಹಿಂಸೆಯು ಪ್ರೀತಿಯನ್ನು ಸದ್ದಿಲ್ಲದೆ ಪಸರಿಸುತ್ತದೆ. ಒತ್ತಡವನ್ನು ತರುವುದಿಲ್ಲ. ಅಹಿಂಸೆಯಿಂದ ಪರಿವರ್ತನೆ ಸಂಭವಿಸುತ್ತದೆ ಎಂಬ ಮಾತು ಬೇರೆ. ಆದರೆ ಪರಿವರ್ತನೆಯನ್ನು ಬಯಸುವವನು ಅಹಿಂಸಾವಾದಿ ಎನಿಸಿಕೊಳ್ಳಲಾರ.೩೬

No comments:

Post a Comment