17 Jan 2012

ಗಾಂಧಿಯ ದ್ವಂದ್ವಗಳು

ಗಾಂಧಿಯ ಕಾಳಜಿಗಳನ್ನು ನಾನು ಪ್ರಶ್ನಿಸುವವನಲ್ಲ. ಆದರೆ ಬರೀ ಕಾಳಜಿ ಇದ್ದರೆ ಸಾಲದು. ಗಾಂಧೀ ಕ್ಷಯರೋಗಿಗಳಿಗೆ ಪ್ರಕೃತಿ ಚಿಕಿತ್ಸೆಯ ಹೆಸರಿನಲ್ಲಿ ತಿಳಿನೀರು ಕುಡಿಸುತ್ತಿದ್ದವರು. ಕಾಯಿಲೆ ಗುಣವಾಗಲೆಂದು ಹಳ್ಳಿಯ ಮುಗ್ಧರು ತಾಯಿತ ಕಟ್ಟಿಕೊಳ್ಳುವುದಕ್ಕೂ ಇದಕ್ಕೂ ಏನು ವ್ಯತ್ಯಾಸ? ಗಾಂಧೀ ತತ್ವವನ್ನು ನಂಬಿಕೊಂಡರೆ ಭಾರತ ಶಾಶ್ವತವಾಗಿ ಬಡರಾಷ್ಟ್ರವಾಗಿ ಉಳಿದುಬಿಡುತ್ತದೆ. ಅದನ್ನೇನಾದರೂ ಪಾಲಿಸಿದಲ್ಲಿ ನೂರರಲ್ಲಿ ಮೂವತ್ತು ಕೋಟಿ ಜನ ನಿಸ್ಸಂಶಯವಾಗಿ ಈ ಕೂಡಲೆ ಸತ್ತುಹೋಗುತ್ತಾರೆ. ಹಿಟ್ಲರ್, ಸ್ಟಾಲಿನ್, ಮಾವೋತ್ಸೆ ತುಂಗ್ ಈ ಮೂವರೂ ಸೇರಿ ಎಷ್ಟು ಜನರನ್ನು ಕೊಂದರೋ ಅದಕ್ಕಿಂತ ಹೆಚ್ಚು ಜನರನ್ನು ಗಾಂಧೀತತ್ವಗಳು ಕ್ಷಣಮಾತ್ರದಲ್ಲಿ ಆಹುತಿ ತೆಗೆದುಕೊಳ್ಳುತ್ತವೆ. ಅವರು ಸೂಚಿಸುವ ಮಧ್ಯಯುಗ, ಪುರಾತನಯುಗಗಳ ಸಲಕರಣೆಗಳನ್ನು ಬಳಸಿ ಈ ಬೃಹತ್ ಜನಸಂಖ್ಯೆಯನ್ನು ಕಾಪಾಡಲಾರೆವು. ಆ ಪುರಾತನಯುಗವನ್ನೇ ಗಾಂಧೀ ’ರಾಮರಾಜ್ಯ’ ಎಂದು ಕರೆಯುತ್ತಿದ್ದರೋ ಏನೋ. ಗಾಂಧೀ ಎಂಥ ಅಪಾಯಕಾರಿ ಎಂದು ಈಗ ಮನಗಾಣದಿದ್ದರೆ ಮುಂಬರುವ ತಲೆಮಾರುಗಳು ’ಗಾಂಧೀ ಒಬ್ಬ ದೊಡ್ಡ ನರಹಂತಕ’ ಎಂದು ಚರಿತ್ರೆಯಲ್ಲಿ ಓದಲಿವೆ. ಈಗಾಗಲೇ ಗಾಂಧಿಯ ತತ್ವಗಳನ್ನು ನೆಚ್ಚಿಕೊಂಡು ಲಕ್ಷಾಂತರ ಜನರ ಪ್ರಾಣಗಳನ್ನು ಕಳೆದುಕೊಂಡಿದ್ದೇವೆ. ಈಗ ನಮಗೆ ತುರ್ತಾಗಿ ಕೋಟ್ಯಂತರ ಹಸಿದ ಹೊಟ್ಟೆಗಳನ್ನು ಒಂದೇ ಸಲಕ್ಕೆ ತುಂಬಬಲ್ಲ ಸಾಧನಗಳ ಅವಶ್ಯಕತೆ ಇದೆ. ಇಂದು ಹಸಿವು ಬಡತನಗಳಿಗೆ ತಂತ್ರಜ್ಞಾನವೇ ನೇರ ಮದ್ದು. ಗಾಂಧಿಯಾದರೂ ತಂತ್ರಜ್ಞಾನದ ಪರಮ ವಿರೋಧಿ. ಗಾಂಧಿಗೆ ಜಯಕಾರ ಹಾಕುವ ನಮ್ಮ ರಾಜಕಾರಣಿಗಳಿಗೂ ಆಂತರ್ಯದಲ್ಲಿ ಗಾಂಧಿಯ ಬಗ್ಗೆ ಪೂರ್ತಿ ಭರವಸೆ ಇಲ್ಲದಿರುವುದು ನಿಜಕ್ಕೂ ನಮ್ಮ ಸುದೈವ. ಈಗ ಮಾತ್ರವಲ್ಲ ಆ ಕಾಲದ ಕಾಂಗ್ರೇಸ್ಸಿಗರಲ್ಲಿಯೂ ಯಾರೊಬ್ಬರೂ ಗಾಂಧಿಯ ಅನುಯಾಯಿಯಾಗಿರಲಿಲ್ಲ. ಕಾಂಗ್ರೇಸ್‌ನ ಬಹುತೇಕ ಗಾಂಧೀ ಅನುಯಾಯಿಗಳು ಗಾಂಧೀವಾದವನ್ನು ಲೆಕ್ಕಿಸದೆ ಮದ್ಯಪಾನ, ಮಾಂಸಾಹಾರಗಳನ್ನು ಸೇವನೆ ಮಾಡುತ್ತಿದ್ದರು. ನೆಹರೂ ಹಾಗು ಇಂದಿರಾಗಾಂಧೀ ಕೂಡ ಇದಕ್ಕೆ ಅಪವಾದವಲ್ಲ.
ನಾವು ಬಡತನವನ್ನು ಪೂಜಿಸುತ್ತಲೇ ಬಂದುದರಿಂದ ಗಾಂಧಿಯಂಥವರು ನಮಗೆ ಸುಲಭವಾಗಿ ಇಷ್ಟವಾಗುತ್ತಾರೆ. ಯಾರಾದರೂ ’ಬಾಪು ನೀವೇಕೆ ಮೂರನೆಯ ದರ್ಜೆಯ ಬೋಗಿಯಲ್ಲೇ ಪ್ರಯಾಣಿಸುವಿರಿ?’ ಎಂದು ಕೇಳಿದರೆ ಅವರು ’ಏನು ಮಾಡಲಿ ಇಲ್ಲಿನ ರೈಲುಗಳಿಗೆ ನಾಲ್ಕನೆಯ ದರ್ಜೆಯ ಬೋಗಿಯನ್ನು ಅಳವಡಿಸಿಲ್ಲವಲ್ಲ’ ಎನ್ನುತ್ತಿದ್ದರಂತೆ. ಒಂದೆಡೆ ಮೂರನೆಯ ದರ್ಜೆಯಲ್ಲಿ ಪ್ರಯಾಣಿಸಲು ಒಪ್ಪದ ಜನ ಇನ್ನೊಂದೆಡೆ ಹಾಗೆ ಪ್ರಯಾಣಿಸುವವನನ್ನು ಹಾಗೆ ಪ್ರಯಾಣಿಸಿದ ಮಾತ್ರಕ್ಕೆ ಮಹಾತ್ಮಾ ಎಂದು ಗೌರವಿಸುವರು. ಇಲ್ಲಿ ನಮಗೆ ದ್ವಂದ್ವವೇ ಕಾಣಿಸುವುದಿಲ್ಲ. ಗಾಂಧೀ ತಮ್ಮ ’ಹಿಂದ್ ಸ್ವರಾಜ್’ನಲ್ಲಿ ಆಧುನಿಕತೆಯನ್ನು ವಿರೋಧಿಸುತ್ತಾರೆ. ೧೯೪೮ರಲ್ಲಿ ಸತ್ತ ವ್ಯಕ್ತಿಯನ್ನು ಅಷ್ಟು ಹಿಂದೆ ಪ್ರಕಟವಾದ (೧೯೦೫) ಒಂದು ಕೃತಿಯನ್ನು ಇಟ್ಟುಕೊಂಡು ಟೀಕಿಸುವುದು ಸರಿಯೇ ಎಂಬ ಪ್ರಶ್ನೆ ಏಳಬಹುದು. ೧೯೪೫ರಲ್ಲಿ ನೆಹರೂ ಗಾಂಧಿಗೆ ಒಂದು ಪತ್ರವನ್ನು ಬರೆದು ’ನೀವು ಈಗಲೂ ಹಿಂದ್ ಸ್ವರಾಜ್‌ನಲ್ಲಿ ಹೇಳಿರುವಂತೆ ರೈಲ್ವೇ, ಅಂಚೆ, ಇತ್ಯಾದಿ ಆಧುನಿಕ ಆವಿಷ್ಕಾರಗಳನ್ನು ವಿರೋಧಿಸುವಿರೇ?’ ಎಂದು ಕೇಳಿದ್ದರು. ಅದಕ್ಕೆ ಗಾಂಧೀ ’ಆ ಪುಸ್ತಕದ ಒಂದು ಸಾಲನ್ನೂ ನಾನು ಅಳಿಸಲಾರೆ’ ಎಂದು ಉತ್ತರಿಸಿದ್ದರಂತೆ. ಸ್ವತಃ ಗಾಂಧಿಯೇ ಅತ್ಯಂತ ಕಡಿಮೆ ಓದಿಕೊಂಡಿದ್ದ ವ್ಯಕ್ತಿ. ಗಾಂಧೀ ಫ್ರಾಯ್ಡ್, ಯೂಂಗ್‌ರಂತಹ ಆಧುನಿಕ ಮನೋವಿಶ್ಲೇಷಕರನ್ನು ಓದಿಕೊಂಡಿದ್ದರೆ ಮೂರು ಸಾವಿರ ವರ್ಷಗಳ ಹಿಂದಿನ ಬ್ರಹ್ಮಚರ್ಯದ ಪಳೆಯುಳಿಕೆ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಿರಲಿಲ್ಲ. ೧೯೪೨ರಲ್ಲಿ ಜೈಲಿನಲ್ಲಿದ್ದಾಗ ಕಾರ್ಲ್‌ಮಾರ್ಕ್ಸ್‌ನ ಕೃತಿಗಳನ್ನು ಓದಿದ್ದೆ ಎಂದು ಬರೆದುಕೊಳ್ಳುತ್ತಾರೆ. ಆದರೆ ಮಾರ್ಕ್ಸ್ ಅವರೊಳಗೆ ಎಷ್ಟರ ಮಟ್ಟಿಗೆ ಇಳಿದಿದ್ದಾನೆಯೋ ದೇವರಿಗೇ ಗೊತ್ತು. ಬಡತನವನ್ನು ಬೋಧಿಸಿದ ಗಾಂಧಿಯ

ಓದು, ತಿಳುವಳಿಕೆ, ವಿಚಾರ, ಎಲ್ಲವೂ ಬಡತನದಿಂದ ಸೊರಗಿತ್ತು.೩೭ ಹಾಗೆ ಅವರು ಸರಿಯಾಗಿ ಓದಿಕೊಂಡಿದ್ದು ಎರಡೇ ಕೃತಿಗಳನ್ನು: ಒಂದು ಭಗವದ್ಗೀತೆ, ಇನ್ನೊಂದು ಶ್ರೀಮದ್‌ರಾಮಾಯಣ. ಗೀತೆ ಎಂತಹ ಅಪಾಯಕಾರಿ ಗ್ರಂಥ ಎಂದು ಬಹುಶಃ ಗಾಂಧಿಗೆ ತಿಳಿದಿರಲಿಲ್ಲ. ಯುದ್ಧ ಹಾಗು ಹಿಂಸೆಯೇ ಗೀತೋಪದೇಶದ ಸಮಸ್ತ ಸಾರ. ಜಗತ್ತಿನಲ್ಲಿ ಕೊಲೆ, ಹಿಂಸೆಗಳನ್ನು ಉಪದೇಶಿಸುವ ಏಕೈಕ ಧಾರ್ಮಿಕ ಗ್ರಂಥ ಅದು. ಕೃಷ್ಣನ ಗೀತೋಪದೇಶವು ಒಂದು ಸಾಮಾನ್ಯವಾದ ಕೌಟುಂಬಿಕ ಕಲಹವನ್ನು ಕುರುಕ್ಷೇತ್ರದಂತಹ ಮಹಾಯುದ್ಧವನ್ನಾಗಿ ಪರಿವರ್ತಿಸಿತು. ಮೊದಲ ದಿನ ಯುದ್ಧರಂಗದ ಎರಡೂ ಕಡೆ ಅರ್ಜುನನಿಗೆ ತನ್ನ ಬಂಧುಗಳ, ಗುರುಹಿರಿಯರ ಮುಖಗಳೇ ಕಾಣಿಸಿದಾಗ ’ಇವರನ್ನೆಲ್ಲ ಕೊಂದು ಇವರ ಶವಗಳ ಮೇಲೆ ಚಿನ್ನದ ಸಿಂಹಾಸನವನ್ನು ಇರಿಸಿಕೊಂಡು ಕೂರುವುದಾದರೆ ನನಗೆ ಸಿಂಹಾಸನವೇ ಬೇಡ, ಮತ್ತೆ ಹಿಮಾಲಯಕ್ಕೆ ತಪಸ್ಸಿಗೆ ಹೊರಡುತ್ತೇನೆ’ ಎಂದು ಹೇಳಿದ. ಆದರೆ ಕೃಷ್ಣ ೧೮ ಅಧ್ಯಾಯಗಳಲ್ಲಿ ಸತತವಾಗಿ ಯುದ್ಧದ ಪರವಾಗಿ ವಾದಿಸಿ ಅರ್ಜುನನನ್ನು ಒಪ್ಪಿಸಿದ.

ಕೃಷ್ಣನ ಯಾದವೀ ಸೇನೆ ಯಾವ ರಾಜ್ಯದ ಮೇಲೆ ದಾಳಿ ಮಾಡಿದರೂ ಅವನ ಸೈನಿಕರು ಆ ಪ್ರಾಂತ್ಯದ ಎಲ್ಲ ಚೆಲುವೆಯರಾದ ಹೆಣ್ಣುಮಕ್ಕಳನ್ನೂ ಕೃಷ್ಣನ ಮುಂದೆ ತಂದು ನಿಲ್ಲಿಸುತ್ತಿದ್ದರಂತೆ. ಕೃಷ್ಣನು ಅವರಿಗೆ ಮಕ್ಕಳಿವೆಯೇ, ಮದುವೆಯಾಗಿದೆಯೇ, ಅವಿವಾಹಿತೆಯರೇ, ಅನಾಥರೇ ಇದಾವುದನ್ನೂ ಲೆಕ್ಕಿಸದೇ ಅವರನ್ನು ತನ್ನ ಅಂತಃಪುರಕ್ಕೆ ತಳ್ಳುತ್ತಿದ್ದ. ಅವನ ಅಂತಃಪುರದಲ್ಲಿ ಇಂತಹ ೧೬ ಸಾವಿರ ಹೆಂಗಸರು ವಾಸಿಸುತ್ತಿದ್ದರಂತೆ. ಅಷ್ಟೊಂದು ಹೆಣ್ಣುಗಳ ಹೆಸರುಗಳನ್ನಾದರೂ ನೆನಪಿನಲ್ಲಿಡಲಾಗುವುದೇ? ಹೀಗೆ ಕೃಷ್ಣನ ಲೋಲುಪತೆಗೆ ೧೬ ಸಾವಿರ ಕುಟುಂಬಗಳು ಬಲಿಯಾದವು. ಇಂಥವನು ಅರ್ಜುನನಿಗೆ ’ಎಲ್ಲವೂ ದೈವೇಚ್ಛೆ, ನೀನು ಯುದ್ಧ ಮಾಡಲೇ ಬೇಕು (ಮಾಮನುಸ್ಮರ ಯುದ್ಧ್ಯಚ)’ ಎಂದು ಬೋಧಿಸುತ್ತಾನೆ! ಕೊಲೆಗಡುಕತನವನ್ನು ಸಮರ್ಥಿಸಿಕೊಳ್ಳಲು ಎಷ್ಟು ಸುಲಭವಾಗಿ ದೇವರನ್ನು ಎಳೆದು ತರಲಾಗುತ್ತದೆ! ಕೊನೆಗೂ ಯುದ್ಧ ಜರುಗಿತು ಲಕ್ಷಾಂತರ ಜನ ಪ್ರಾಣ ಕಳೆದುಕೊಂಡರು. ಐದು ಸಾವಿರ ವರ್ಷಗಳ ಹಿಂದೆ ನಡೆದ ಈ ಯುದ್ಧದಿಂದ ಭಾರತದ ಬೆನ್ನುಮೂಳೆಯೇ ಮುರಿಯಿತು. ಅಂದು ಮಲಗಿದ ಭಾರತ ಮತ್ತೆ ಏಳಲೇ ಇಲ್ಲ; ಇಂದಿಗೂ ಮೇಲೇಳಲಾಗಿಲ್ಲ. ಅಂದು ನಡೆದ ಯುದ್ಧದಿಂದ ಭಾರತ ಎಷ್ಟೊಂದು ಹೆದರಿಬಿಟ್ಟಿತೆಂದರೆ ಪ್ರತಿಯೊಂದು ಮನೆಯಲ್ಲೂ ಒಬ್ಬ ಅಪ್ಪನೋ, ಅಣ್ಣನೋ, ಗಂಡನೋ, ಮಗನೋ ಸತ್ತಿದ್ದ. ಇಡೀ ದೇಶವನ್ನು ಎಂತಹ ಅನಾಥ ಪ್ರಜ್ಞೆ, ಅಸಹಾಯತೆಗಳು ಆವರಿಸಿತೆಂದರೆ ಸಣ್ಣ ಸಣ್ಣ ಬುಡಕಟ್ಟುಗಳಾದ ತುರ್ಕರು, ಹೂಣರು, ಗುಲಾಮಿಗಳು, ಮಂಗೋಲರು,..ಹೀಗೆ ಯಾರು ಬಂದು ಆಕ್ರಮಣ ಮಾಡಿದರೂ ನಾವು ಪ್ರತಿರೋಧಿಸಲೇ ಇಲ್ಲ. ಯುದ್ಧದ ದುರಂತಗಳನ್ನು ಚೆನ್ನಾಗಿಯೇ ಅನುಭವಿಸಿದ್ದ ನಮ್ಮಲ್ಲಿ ಎದ್ದು ನಿಂತು ಹೋರಾಡುವ ಉತ್ಸಾಹ ಉಳಿದಿರಲಿಲ್ಲ. ಕೇವಲ ಐನೂರು ಮಂದಿ ಸೈನಿಕರೊಂದಿಗೆ ತುರ್ಕರು ದಾಳಿ ನಡೆಸಿದಾಗ ದೇಶದ ಮೂವತ್ತು ಮೂರು ಕೋಟಿ ಮಕ್ಕಳು ಸುಮ್ಮನೆ ಶರಣಾಗಿಬಿಟ್ಟರು. ಇಂದು ಭಾರತದ ಗುಲಾಮತನಕ್ಕೆ ಕೃಷ್ಣನೇ ನೇರಹೊಣೆ ಎಂದು ನನ್ನ ಅಭಿಪ್ರಾಯ. ಪೂರ್ಣಾವತಾರ ಎಂದು ಇವರ ಕೈಲಿ ಪೂಜೆಗೊಳ್ಳುವ ಕೃಷ್ಣನಲ್ಲಿ ನನಗೆ ದೈವತ್ವವಿರಲಿ ಮನುಷ್ಯತ್ವ ಕೂಡ ಕಾಣಿಸುವುದಿಲ್ಲ. ಆದರೆ ಗಾಂಧಿ ಹಲವು ವಿಚಾರಗಳಿಗೆ ಸುಮ್ಮನೆ ಕಣ್ಮುಚ್ಚುತ್ತಾರೆ.೩೮

ಎತ್ತಿನ ಬಂಡಿ ಹಾಗು ವಿಮಾನಗಳ ಹಿಂದೆ ಇರುವ ತಾಂತ್ರಿಕ ತತ್ವ ಒಂದೇ. ವಿಮಾನದ ತಂತ್ರಜ್ಞಾನ ಎತ್ತಿನ ಗಾಡಿಯ ತಂತ್ರಜ್ಞಾನದ ವಿಸ್ತೃತ ರೂಪ ಅಷ್ಟೇ. ಇನ್ನು ಗಾಂಧೀ ಹೇಳುವ ವಿಕೇಂದ್ರೀಕರಣದ ಅರ್ಥವೇನು? ಸಣ್ಣ ಯಂತ್ರ ಸಾಕು, ದೊಡ್ಡದರ ಅವಶ್ಯಕತೆ ಇಲ್ಲ ಎಂಬುದು. ವಿಕೇಂದ್ರೀಕರಣವು ಎಲ್ಲ ಬಗೆಯ ಬೃಹತ್ ತಾಂತ್ರಿಕತೆಗಳನ್ನು ವಿರೋಧಿಸುತ್ತದೆ. ಮನುಷ್ಯ ಬುದ್ಧಿ ಎಷ್ಟು ದೊಡ್ಡ ಯಂತ್ರಗಳನ್ನು ತಯಾರು ಮಾಡುವುದೋ ಅದೇ ಅನುಪಾತದಲ್ಲಿ ಅದು ಸಂಕೀರ್ಣವಾಗುತ್ತ ಹೋಗುವುದು. ಜೀವನವಿಡೀ ಎತ್ತಿನ ಬಂಡಿ ನಡೆಸುವವನ ಮೆದುಳಿಗೆ ಆ ಎತ್ತಿನ ಬಂಡಿಯ ತಂತ್ರಜ್ಞಾನ ಯಾವ ಸವಾಲುಗಳನ್ನು ತಾನೇ ಒಡ್ಡಬಲ್ಲುದು? ಅದೇ ವ್ಯಕ್ತಿಯನ್ನು ವಿಮಾನ ನಡೆಸಲು ಹಚ್ಚಿದರೆ ಅವನ ಬುದ್ಧಿ ಪರಿಣಾಮಕಾರಿಯಾಗಿ ವಿಕಾಸವಾಗುತ್ತದೆ. ಬುದ್ಧಿಗೆ ಸವಾಲಾಗುವ ಪ್ರತಿಯೊಂದೂ ಬುದ್ಧಿಯನ್ನು ನಿರಂತರವಾಗಿ ಬೆಳೆಸುತ್ತದೆ. ಸಣ್ಣ ಪುಟ್ಟ ಯಂತ್ರಗಳಲ್ಲೇ ಸ್ಥಗಿತಗೊಂಡಿರುವ ಸಮಾಜಗಳು ಸಾಮಾಜಿಕವಾಗಿ, ಬೌದ್ಧಿಕವಾಗಿ ಬೆಳೆಯುವುದನ್ನು ಎಂದೋ ನಿಲ್ಲಿಸಿಬಿಟ್ಟಿವೆ. ಮಿಲಿಯಾಂತರ ವರ್ಷಗಳ ಹಿಂದೆ ಮೊದಲ ಬಾರಿಗೆ ಎರಡು ಕಾಲಿನ ಮೇಲೆ ನಿಂತ ಕೋತಿ ಉಳಿದ ಕೋತಿಗಳ ಎದುರು ಹಾಸ್ಯಾಸ್ಪದ ಎನಿಸಿಕೊಂಡಿತ್ತು. ಆದರೆ ಅದುವೆ ಮನುಷ್ಯಜಾತಿ ತಂತ್ರಜ್ಞಾನದತ್ತ ಇಟ್ಟ ಮೊದಲ ಹೆಜ್ಜೆಯಾಗಿತ್ತು. ಹಾಗೆ ನಿಂತದ್ದರ ಹಿಂದೆ ’ಎರಡು ಕಾಲಿನಿಂದಲೇ ಆಗುವ ಕೆಲಸಕ್ಕೆ ನಾಲ್ಕು ಕಾಲುಗಳನ್ನು ಏಕೆ ಬಳಸಬೇಕು’ ಎಂಬ ಜಿಜ್ಞಾಸೆಯಿದೆ. ಹೀಗೆ ನಿಂತ ಆ ಕೋತಿಯ ಎರಡು ಕಾಲುಗಳಿಗೆ ಸಂಪೂರ್ಣ ಬಿಡುವು ದೊರೆತಿತು. ಆ ಮೊದಲ ಕೋತಿ ಹೀಗೆ ದೃಢನಿರ್ಧಾರ ಮಾಡದೇ ಹೋಗಿದ್ದರೆ ನಮ್ಮ ಇಂದಿನ ನಾಗರೀಕತೆ ಹುಟ್ಟುತ್ತಲೇ ಇರಲಿಲ್ಲ. ಹೀಗೆ ಬಿಡುಗಡೆ ಪಡೆದ ಕೈಗಳೇ ಇಂದಿನ ಎಲ್ಲ ಸಂಸ್ಕೃತಿ, ಸಮಾಜ, ಕಲೆ, ಸಾಹಿತ್ಯ, ಧರ್ಮಗಳನ್ನು ನಿರ್ಮಿಸಿದವು. ನಾಲ್ಕೂ ಕಾಲುಗಳನ್ನು ದುಡಿಮೆಗೆ ತೊಡಗಿಸಿದ ಕೋತಿಗಳು ಕೋತಿಗಳಾಗೇ ಉಳಿದವು. ಇಂದು ಮನುಷ್ಯ-ಮಂಗಗಳ ಒಂದು ದೊಡ್ಡ ಅಂತರ ಏರ್ಪಟ್ಟಿರುವುದಾದರೆ ಅದಕ್ಕೆ ತಂತ್ರಜ್ಞಾನವೇ ಕಾರಣ.

ಮುಂಬರುವ ದಿನಗಳಲ್ಲಿ ಎಲ್ಲ ಕೆಲಸಗಳನ್ನೂ ಯಂತ್ರಗಳೇ ನಿರ್ವಹಿಸಲಿರುವವು. ಸುಮ್ಮನೆ ಖಾಲಿಯಾಗಿ ಕುಳಿತು ಏನು ಮಾಡುವುದು ಎಂಬುದು ಮುಂದೆ ಮನುಷ್ಯ ಜಾತಿ ಎದುರಿಸಲಿರುವ ಒಂದು ದೊಡ್ಡ ಜಾಗತಿಕ ಸಮಸ್ಯೆಯಾಗುತ್ತದೆ. ದುಡಿಯುವ ಪ್ರಜ್ಞೆಗೂ, ದುಡಿಮೆಯಿಂದ ಸಂಪೂರ್ಣ ಬಿಡುಗಡೆ ಹೊಂದಿದ ಪ್ರಜ್ಞೆಗೂ ಅಪಾರವಾದ ವ್ಯತ್ಯಾಸ ಏರ್ಪಡುತ್ತದೆ. ಮನುಷ್ಯನ ಈವರೆಗಿನ ಎಲ್ಲ ಸಾಧನೆಗಳೂ ದುಡಿಮೆಯಿಂದ ಬಿಡುಗಡೆ ಹೊಂದಿದ ಸನ್ನಿವೇಶದಲ್ಲಿ ಸಂಭವಿಸಿದವು. ಅಥೆನ್ಸ್‌ನಲ್ಲಿ ವಿಜ್ಞಾನ, ತತ್ವಜ್ಞಾನ, ನೀತಿಶಾಸ್ತ್ರ, ಸಾಹಿತ್ಯಗಳು ತಮ್ಮ ಉತ್ತುಂಗಕ್ಕೆ ತಲುಪಲು ಕಾರಣಗಳಿವೆ. ಅಲ್ಲಿನ ಸಮಾಜವು ದುಡಿಯುವ ಗುಲಾಮ ವರ್ಗ ಹಾಗು ಅಭಿಜಾತ ವರ್ಗಗಳೆಂದು ವಿಭಜನೆಯಾಗಿತ್ತು. ಅವರನ್ನು ಮಾರ್ಕ್ಸಿಸ್ಟರು ಬೂರ್ಷ್ವಾಗಳೆಂದು ಕರೆಯುತ್ತಿದ್ದರು. ಈ ವರ್ಗವೇ ಸಾಕ್ರಟೀಸ್, ಅರಿಸ್ಟಾಟಲ್, ಪ್ಲೇಟೋರಂತಹ ತತ್ವಜ್ಞಾನಿಗಳಿಗೆ ಜನ್ಮ ನೀಡಿದ್ದು. ಭಾರತದಲ್ಲಿಯೂ ಶ್ರಮದಿಂದ ಸಂಪೂರ್ಣ ಬಿಡುಗಡೆ ಹೊಂದಿದ್ದ ಬ್ರಾಹ್ಮಣರದ್ದು ಇದೇ ಕತೆ. ಶ್ರಮದಿಂದ ಬಿಡುಗಡೆ ಹೊಂದಿದ ಬ್ರಾಹ್ಮಣನ ಚಿತ್ತ ಸುಲಭವಾಗಿ ಮುಂದಿನ ಹಂತವನ್ನು ಪ್ರವೇಶಿಸಿತು. ಇಡೀ ಮನುಷ್ಯಜಾತಿಯೇ ಹೀಗೆ ಶ್ರಮಸಾಧ್ಯ ದುಡಿಮೆಯಿಂದ ಮುಕ್ತವಾಗುವ ದಿನವೇ ನಿಜವಾದ ಕ್ರಾಂತಿ ಹಾಗು ಸಮಗ್ರ ವಿಕಾಸ ಸಂಭವಿಸುವುದು. ಮನುಷ್ಯನನ್ನು ಶ್ರಮಸಾಧ್ಯ ದುಡಿಮೆಯಿಂದ ಬಿಡುಗಡೆಗೊಳಿಸದೇ ವ್ಯಕ್ತಿಗೌರವ, ಸಾಮಾಜಿಕ ನ್ಯಾಯಗಳ ಬಗ್ಗೆ ಮಾತನಾಡುವುದು ಅರ್ಥಹೀನ. ಗಾಂಧಿಯನ್ನು ನಂಬಿದರೆ ಮನುಷ್ಯ ಜಾತಿ ಶ್ರಮದಿಂದ ಇನ್ನೆಂದಿಗೂ ಬಿಡುಗಡೆಯಾಗುವುದೇ ಇಲ್ಲ.

ತನಗೆ ಇಷ್ಟವಾಗುವ ಬಟ್ಟೆಯನ್ನು ತಾನೇ ತನ್ನ ಕೈಯಾರೆ ತಯಾರಿಸಿಕೊಳ್ಳಬೇಕು ಎಂದು ಬಯಸುವ ವ್ಯಕ್ತಿ ಚರಕದ ಮುಂದೆ ವರ್ಷವಿಡೀ ಕುಳಿತು ಪ್ರತಿದಿನ ೪-೫ ಗಂಟೆಗಳ ಕಾಲ ಶ್ರಮ ಪಡಲೇ ಬೇಕು. ಒಂದು ಸಾಧಾರಣ ಬಟ್ಟೆಗಾಗಿ ಇಷ್ಟೊಂದು ಅಮೂಲ್ಯವಾದ ಸಮಯವನ್ನು ಪೋಲು ಮಾಡುವುದರಲ್ಲಿ ಅರ್ಥವಿದೆಯೇ? ನಮ್ಮ ಉತ್ಪಾದನಾ ಸಾಧನಗಳು ನಮ್ಮ ಬೌದ್ಧಿಕ ಕ್ಷಮತೆಯ ಮೇಲೆ ಪ್ರಭಾವ ಬೀರಬಲ್ಲವು. ಇಂದು ಪಶ್ಚಿಮ ದೇಶಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಯಾವ ತೀವ್ರತೆಯಿಂದ ಮುಂದುವರೆಯುತ್ತಿವೆ ಎಂದರೆ ಇನ್ನು ಕೆಲವೇ ವರ್ಷಗಳಲ್ಲಿ ಮನುಷ್ಯನಿಗೂ ಕೋತಿಗೂ ನಡುವಣ ಅಂತರದ ಅನುಪಾತದಷ್ಟೇ ಪೂರ್ವ-ಪಶ್ಚಿಮ ದೇಶಗಳ ಮಾನವತೆಗಳ ನಡುವಣ ಅನುಪಾತ ಏರ್ಪಡಲಿದೆ. ನಾವಾದರೂ ಸ್ವಾವಲಂಬನೆ, ಸಾಮೂಹಿಕ ದುಡಿಮೆ ಎಂಬ ಸಿದ್ಧಾಂತಗಳನ್ನು ನಂಬಿಕೊಂಡು ಕುಳಿತಿದ್ದೇವೆ. ಅಲೆಕ್ಸಾಂಡರ್ ಕುದುರೆಯೇರಿ ದಾಳಿ ನಡೆಸಿದಾಗ ಪೌರವ ಆನೆಯ ಮೇಲೆ ಕುಳಿತು ಮುಖಾಮುಖಿಯಾದ. ಆನೆ ಅಂಬಾರಿಗೆ ಚಂದ, ಯುದ್ಧಕ್ಕಲ್ಲ. ಪೌರವನ ಆನೆ ಯುದ್ಧರಂಗದಲ್ಲಿ ಕುಸಿಯಿತು. ಬಾಬರ್ ಬಾಂಬುಗಳಿಂದ ಆಕ್ರಮಣ ನಡೆಸಿದಾಗ ನಮ್ಮ ಯುದ್ಧಶಸ್ತ್ರಗಳು ನಿಷ್ಪ್ರಯೋಜಕವಾದವು. ತಂತ್ರಜ್ಞಾನದ ಕೊರತೆಯಿಂದ ನಾವು ಈತನಕ ಸೋಲುತ್ತಲೇ ಬಂದಿದ್ದೇವೆ.

ನನಗೇನೂ ಚರಕಗಳ ಬಗ್ಗೆ ದ್ವೇಷವಿಲ್ಲ. ನಾನು ಚರಕ ತಕಲಿಗಳ ವಿರುದ್ಧ ಯುದ್ಧ ಹೂಡುತ್ತಿಲ್ಲ. ಬೇರೆ ವಿಧಿಯಿಲ್ಲದಿದ್ದರೆ ಖಂಡಿತ ಅವನ್ನು ಬಳಸೋಣ. ಅವು ಬೇರೆ ದಾರಿಯಿಲ್ಲದೆ ಬಳಸಬೇಕಾದ ಉಪಕರಣಗಳಾಗಬೇಕೇ ವಿನಃ ನಮ್ಮ ದುಡಿಮೆಯ ರೂಪಕಗಳಾಗಬಾರದು. ನಾನು ಖಂಡಿತ ಖಾದೀ ವಿರೋಧಿಯಲ್ಲ. ಆದರೆ ದೇಶದ ಆರ್ಥಿಕತೆ ಖಾದಿಯ ಮೇಲೆ ನಿಲ್ಲಬಾರದೆಂದಷ್ಟೇ ನನ್ನ ಕಳಕಳಿ. ಖಾದಿಗೆ ಒಂದು ಸೌಂದರ್ಯವಿದೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಕೈಯಾರೆ ಮಾಡಿದ ವಸ್ತುಗಳಿಗೆ ತಮ್ಮದೇ ಆದ ಒಂದು ವಿಶಿಷ್ಟ ಮೌಲ್ಯವಿದೆ. ಪ್ರಪಂಚ ಎಷ್ಟೇ ಮುಂದುವರೆದರೂ ಮನೆಯ ಕೆಲಸ, ಮನೆ ಅಡುಗೆಗಳು ನಿಲ್ಲುವುದಿಲ್ಲ. ಆದರೆ ಇದು ವೈಯಕ್ತಿಕ ಅಭಿರುಚಿಯ ವಿಷಯಗಳೇ ವಿನಃ ಅವಕ್ಕೆ ಆರ್ಥಿಕ ಮಾನದಂಡಗಳನ್ನು ಅನ್ವಯಿಸಲಾಗದು. ಅಭಿರುಚಿಗಳನ್ನು ವೈಜ್ಞಾನಿಕ ನಿರ್ಣಯಗಳಿಗಿಂತ ಮೇಲಿನ ಮಟ್ಟಕ್ಕೇರಿಸಿದರೆ ಆಭಾಸವಾಗುತ್ತದೆ.

ನಾನೂ ಸ್ವತಃ ಖಾದಿ ಉಪಯೋಗಿಸುವವನು. ಬೇರೆ ಬಟ್ಟೆಗಳಿಗಿಂತ ನನಗೆ ಖಾದಿಯೇ ಹಿತಕರ. ಆದರೆ ಇದು ನನ್ನ ಅಭಿರುಚಿಯ ಪ್ರಶ್ನೆ. ಖಾದಿ ಒಂದು ದುಬಾರಿ ಹವ್ಯಾಸ. ಮಿಲ್ ಬಟ್ಟೆ ಹತ್ತು ರೂಪಾಯಿಗಳಿಗೆ ಸಿಕ್ಕರೆ, ಅದೇ ಅಳತೆಯ ಖಾದಿಗೆ ಐವತ್ತು ರೂಪಾಯಿಗಳನ್ನು ತೆರಬೇಕು. ಐವತ್ತು ರೂಪಾಯಿಗಳೂ ಕಡಿಮೆಯೇ. ಏಕೆಂದರೆ ಅದರ ಮುಖಬೆಲೆಯಲ್ಲಿ ಹದಿನೈದು ರೂಪಾಯಿಗಳನ್ನು ಸರ್ಕಾರವೇ ಭರಿಸುತ್ತದೆ. ಇದು ನಿಜಕ್ಕೂ ಅರ್ಥಹೀನ ಅರ್ಥಶಾಸ್ತ್ರ! ಹವ್ಯಾಸಕ್ಕೆ ಕೊಳ್ಳುವವರು ಬೇಕಾದರೆ ಹತ್ತು ರೂಪಾಯಿ ಹೆಚ್ಚಿಗೆ ಕೊಟ್ಟು ಕೊಳ್ಳಲಿ ಬಿಡಿ! ಆದರೆ ಸರಕಾರವು ಖಾದಿ ಬಳಸದ ಸಾಮಾನ್ಯ ಪ್ರಜೆಗಳ ಜೇಬಿನಿಂದ ಹದಿನೈದು ರೂಪಾಯಿಗಳನ್ನು ತೆಗೆದು ನನಗೆ ಖಾದಿಬಟ್ಟೆಯನ್ನು ಕೊಡಿಸುವುದು ನಿಜಕ್ಕೂ ಅಸಂಗತ. ನಾನು ಖಾದಿ ಬಗ್ಗೆ ಹೀಗೆಲ್ಲ ವಿಚಾರ ಮಾಡುವುದು ಕೆಲವರಿಗೆ ಹಿಡಿಸುವುದಿಲ್ಲ. ಆಲೋಚನೆಯಿಂದ ನಮ್ಮ ನಂಬಿಕೆಗಳ ಬೇರುಗಳಿಗೆ ಅಪಾಯವೆಂದು ನಮ್ಮ ಅಪ್ರಜ್ಞಾ ಮನಸ್ಸಿಗೆ ಮೊದಲೇ ತಿಳಿದಿರುತ್ತದೆ. ಆದ್ದರಿಂದಲೇ ಅದು ಆಲೋಚನೆಯ ಗೊಡವೆಗೇ ಹೋಗದಂತಿರುತ್ತದೆ. ಈ ಬಗೆಯ ಇಚ್ಛಾಪೂರ್ವಕ ವಿಸ್ಮೃತಿ ಸಮಸ್ಯೆಗೆ ಪರಿಹಾರವಲ್ಲ. ಕಾಲಿಗೆ ಚುಚ್ಚಿರುವ ಮುಳ್ಳನ್ನು ಲೆಕ್ಕಿಸದೆ ಓಡಾಡಿದರೆ ಆರೋಗ್ಯ ಬರುವುದಿಲ್ಲ.

ಇನ್ನು ಗಾಂಧೀ ತಾವು ನಂಬಿದಂತೆಯೇ ನಡೆದವರು, ಬದುಕಿ ತೋರಿಸಿದವರು ಎಂಬುದೂ ಶುದ್ಧ ಮೂಢನಂಬಿಕೆಯ ಮಾತು. ಗಾಂಧಿ ಎಂದೂ ತಮ್ಮ ಮಾತಿಗೆ ತಕ್ಕಂತೆ ನಡೆದವರಲ್ಲ. ನನ್ನ ಮಾತುಗಳು ನಿಮಗೆ ಕಹಿ ಎನಿಸಬಹುದು. ಆದರೆ ಇದು ಸತ್ಯ. ತಮ್ಮ ಜೀವನದುದ್ದಕ್ಕೂ ರೈಲುಗಳನ್ನು ವಿರೋಧಿಸಿದ, ರೈಲನ್ನು ’ಸೈತಾನನ ಅನ್ವೇಷಣೆ’ ಎಂದು ಕರೆದ ಗಾಂಧೀ ತಮ್ಮ ಜೀವಿತದ ಅರ್ಧಭಾಗವನ್ನು ರೈಲ್ವೇ ಪ್ರಯಾಣದಲ್ಲೇ ಕಳೆದರು. ಇಂಗ್ಲಿಷ್ ಔಷಧಿಗಳನ್ನು ವಿರೋಧಿಸಿ ’ರಾಮನಾಮವೇ ಪರಮೌಷಧ’ ಎಂದು ಸಾರುತ್ತಿದ್ದ ಗಾಂಧೀ ತಮ್ಮ ಕಾಯಿಲೆ ವಿಷಮಾವಸ್ಥೆಯನ್ನು ತಲುಪಿದಾಗಲೆಲ್ಲ ಅಲೋಪಥಿಯ ಮೊರೆ ಹೋಗುತ್ತಿದ್ದರು. ಹಾಗೆಯೇ ಅಂಚೆ ವ್ಯವಸ್ಥೆಯನ್ನು ವಿರೋಧಿಸುತ್ತಲೇ ದಿನಕ್ಕೆ ನೂರಾರು ಪತ್ರಗಳನ್ನು ಬರೆಯುತ್ತಿದ್ದರು. ಅವರ ವಾರ್ಧಾ ಆಶ್ರಮದಲ್ಲಿ ಎಷ್ಟೊಂದು ಅಂಚೆ ವ್ಯವಹಾರ ನಡೆಯುತ್ತಿದ್ದವೆಂದರೆ ಆಶ್ರಮಕ್ಕೆ ಒಂದು ಪ್ರತ್ಯೇಕ ಅಂಚೆ ಕಛೇರಿಯನ್ನೇ ಮೀಸಲಿರಿಸಲಾಗಿತ್ತಂತೆ. ಎಲ್ಲ ಆಧುನಿಕ ಅನ್ವೇಷಣೆಗಳನ್ನೂ ವಿರೋಧಿಸುತ್ತಲೇ ಅವುಗಳ ಸಂಪೂರ್ಣ ಲಾಭ ಪಡೆಯುತ್ತಿದ್ದರು ಗಾಂಧಿ. ಅವರ ಜೀವನ ಚರಿತ್ರೆಯನ್ನು ಒಮ್ಮೆ ಅವಲೋಕಿಸಿದರೆ ಆ ವ್ಯಕ್ತಿಗೂ ಅವರು ನಂಬಿದ್ದ ಸಿದ್ಧಾಂತಕ್ಕೂ ಅರ್ಥಾರ್ಥ ಸಂಬಂಧ ಕಾಣಿಸುವುದಿಲ್ಲ. ಆದರೆ ಒಮ್ಮೆ ’ಮಹಾತ್ಮಾ’ ಎಂದು ಕರೆದ ಮೇಲೆ ಇಂಥವೆಲ್ಲ ನಮ್ಮ ಕಣ್ಣಿಗೆ ಕಾಣಿಸುವುದೇ ಇಲ್ಲ, ಇದು ನಮ್ಮ ದುರಂತ.೩೯



ಆಗಿನ್ನೂ ನಾನು ಒಂಬತ್ತು ವರ್ಷದ ಹುಡುಗ. ೧೯೩೯ರಲ್ಲಿ ನಡೆದ ಕಾಂಗ್ರೇಸ್ ಅಧಿವೇಶನಕ್ಕೆ ಒಮ್ಮೆ ಮಾತ್ರ ನಾನೂ ಹೋಗಿದ್ದೆ. ಏಕೆಂದರೆ ನನ್ನ ಊರಾದ ಜಾಬಲ್ಪುರದ ಸಮೀಪದ ಒಂದು ಕ್ಷೇತ್ರದಲ್ಲಿ ಅಖಿಲ ಭಾರತ ಕಾಂಗ್ರೇಸ್‌ನ ಚುನಾವಣೆ ನಡೆಯಿತು. ಆಗ ಗಾಂಧಿಯ ಅಹಿಂಸಾತ್ಮಕ ಹೋರಾಟ ತಂತ್ರವನ್ನು ಒಪ್ಪದಿದ್ದ ಸುಭಾಷ್ ಚಂದ್ರ ಬೋಸ್ ಚುನಾವಣೆಗೆ ನಿಂತಿದ್ದರು. ತನ್ನ ಆಶೀರ್ವಾದ ಅನುಮತಿಗಳಿಲ್ಲದೆ ಈತ ಹೇಗೆ ಚುನಾವಣೆಗೆ ನಿಂತ ಎಂದು ಗಾಂಧಿ ಸಿಡಿಮಿಡಿಗೊಂಡಿದ್ದರಂತೆ. ಅವರ ವಿರುದ್ಧ ನೆಹರೂರನ್ನು ನಿಲ್ಲಿಸಿ ಎಂದು ಅವರ ಆಪ್ತರು ಸಲಹೆ ನೀಡಿದಾಗ ಗಾಂಧಿ ಒಪ್ಪಲಿಲ್ಲ. ನನ್ನ ದೃಷ್ಟಿಯಲ್ಲಿ ಗಾಂಧಿ ಇಟಲಿಯ ರಾಜನೀತಿ ನಿಪುಣನಾದ ಮೈಕಿಯವಲ್ಲಿಗಿಂತ ಮಹಾ ಚಾಣಾಕ್ಷ. ನೆಹರೂ ಗೆದ್ದರೆ ಗಾಂಧಿಯ ಬೆಂಬಲದಿಂದ ಗೆದ್ದ ಎಂದಾಗುತ್ತದೆ. ಒಂದು ವೇಳೆ ನೆಹರೂರಷ್ಟೇ ಪ್ರಭಾವಿಯಾದ ಸುಭಾಷ್ ಚಂದ್ರ ಬೋಸ್ ಗೆದ್ದರೆ ಅದು ನಿಜಕ್ಕೂ ಹೀನಾಯವಾಗಿ ಸೋತಂತಾಗುತ್ತದೆ. ಅಲ್ಲದೆ ನೆಹರೂ ಅವರ ರಾಜಕೀಯ ಭವಿಷ್ಯವೇ ಮಣ್ಣುಪಾಲಾಗುತ್ತದೆ ಎಂದು ಯೋಚಿಸಿದ ಗಾಂಧಿ ಯಾರೂ ಅರಿಯದ ’ಪಟ್ಟಾಭಿ ಸೀತಾರಾಮಯ್ಯ’ ಎಂಬ ಒಬ್ಬ ಅಭ್ಯರ್ಥಿಯನ್ನು ಸುಭಾಷ್ ಚಂದ್ರ ಬೋಸರ ವಿರುದ್ಧ ಕಣಕ್ಕಿಳಿಸಿದರು. ಅಲ್ಲದೆ ’ಪಟ್ಟಾಭಿ ಸೀತಾರಾಮಯ್ಯ ಸೋತರೆ ನಾನು ಸೋತಂತೆ’ ಎಂದು ಪ್ರಚಾರ ಮಾಡಲಾರಂಭಿಸಿದರು. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ನಿಜಕ್ಕೂ ಬೆದರಿಕೆಯ ತಂತ್ರವಾಗಿದೆ. ಆದರೆ ಆ ಚುನಾವಣೆಯಲ್ಲಿ ಸುಭಾಷ್ ಚಂದ್ರ ಬೋಸರು ಬಹುಮತದಿಂದ ಗೆದ್ದು ಕಾಂಗ್ರೇಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ಆಗ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸಲೂ ಹೋಗಲಿಲ್ಲ. ಆ ವರ್ಷ ಸುಭಾಷ್ ಚಂದ್ರ ಬೋಸರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೇಸ್‌ನ ವಾರ್ಷಿಕ ಅಧಿವೇಶನಕ್ಕೂ ಹಾಜರಾಗದೇ ಕಾಯಿಲೆಯ ನೆಪವನ್ನೊಡ್ಡಿ ರಾಜ್‌ಕೋಟ್‌ನಲ್ಲೇ ಉಳಿದುಕೊಂಡರು. ಗಾಂಧಿಯ ಈ ವರ್ತನೆಯಿಂದ ಬೇಸರಗೊಂಡ ಸುಭಾಷ್ ಚಂದ್ರ ಬೋಸರು ತಮ್ಮ ಅಧ್ಯಕ್ಷ ಹುದ್ದೆಗೆ ರಾಜಿನಾಮೆ ನೀಡಿದರು. ಗಾಂಧಿಯ ಜೀವನ ಚರಿತ್ರೆಗಳನ್ನು ಇತಿಹಾಸಕಾರರು ಬರೆಯುವುದನ್ನು ನಿಲ್ಲಿಸಿ ಮನೋವಿಜ್ಞಾನಿಗಳು, ಮನೋ ವಿಶ್ಲೇಷಕರು ಗಾಂಧಿಯನ್ನು ಆಮೂಲಾಗ್ರವಾಗಿ ಅಧ್ಯಯನ ನಡೆಸಬೇಕು ಎಂದು ನನಗನ್ನಿಸುತ್ತದೆ. ಆಗ ಗಾಂಧಿಯ ಕುತಂತ್ರ, ಗಾಂಧಿಯ ಚಾಣಾಕ್ಷತನ, ಗಾಂಧಿಯ ಸುಳ್ಳುಗಳು ಎಲ್ಲವೂ ಬಯಲಾಗುತ್ತವೆ.೪೦

’ಸಮಾಜದ ಪಿಡುಗುಗಳಿಗೆ ಇನ್ನೊಬ್ಬರನ್ನು ಟೀಕಿಸದೇ ನಾವೇ ಸ್ವೋಪಜ್ಞತೆಯಿಂದ ಪರಿಹಾರ ಹುಡುಕುವುದು ಸರಿಯಲ್ಲವೇ?’ ಎಂದು ಗಾಂಧಿಯನ್ನು ಮನಸ್ಸಿನಲ್ಲಿ ಇರಿಸಿಕೊಂಡು ಇಲ್ಲೊಬ್ಬರು ಪ್ರಶ್ನೆ ಕಳಿಸಿದ್ದಾರೆ.

ವಿಮರ್ಶೆಯ ಬಗ್ಗೆ ಹೆದರಿದಾಗ ಮಾತ್ರ ಇಂತಹ ಪ್ರಶ್ನೆಗಳು ಹುಟ್ಟುತ್ತವೆ. ಹಳೆಯದನ್ನು ಮುರಿಯದೆ ಹೊಸತನ್ನು ಕಟ್ಟಲು ಸಾಧ್ಯವೇ? ಮುರಿಯುವ ಕ್ರಿಯೆಯೂ ಕಟ್ಟುವ ಕ್ರಿಯೆಗೆ ಪೂರಕವಾದುದು ಎಂಬುದನ್ನು ಮರೆಯಬಾರದು. ಹಿಂದಣ ಹೆಜ್ಜೆಯನ್ನು ನೋಡಿಕೊಳ್ಳದೆ ಭವಿಷ್ಯದತ್ತ ಹೆಜ್ಜೆ ಇಡಲಾಗದು. ಹಿಂದಿನದನ್ನು ಬೆದಕಲು ಹಿಂಜರಿಯುವವರು ಮುಂದಣ ಹೆಜ್ಜೆ ಇಡುವ ಉತ್ಸಾಹವನ್ನೂ ಕಳೆದುಕೊಳ್ಳುವರು. ಹಿಂದಣ ಪರಂಪರೆ ವಿಮರ್ಶಾ ಮಾತ್ರದಿಂದ ಮುರಿದು ಬೀಳುವಷ್ಟು ದುರ್ಬಲವಾದುದೆಂದು ನಾನು ಭಾವಿಸಿಲ್ಲ. ಹಾಗೊಂದು ವೇಳೆ ಬಿದ್ದರೆ ಅದು ಬೀಳುವುದೇ ಸರಿ. ಮುಂದಿನ ಹೆಜ್ಜೆ ಇಡುವಾಗ ಹಿಂದಿನ ಯಾವೆಲ್ಲ ಸಂಗತಿಗಳನ್ನು ನಮ್ಮೊಂದಿಗೆ ಕೊಂಡೊಯ್ಯಬಾರದು ಎಂಬ ತಿಳುವಳಿಕೆಗಾದರೂ ಹಿಂದಿನದನ್ನು ವಿಮರ್ಶಿಸಲೇ ಬೇಕಾಗುತ್ತದೆ. ಹಿಂದಿನ ಹೆಗಲ ಮೇಲೆ ನಿಂತು ಮುಂದಿನ ಅಡಿಯಿಡಬೇಕಲ್ಲದೆ ಹಿಂದಣ ಹೊರೆ ಹೊತ್ತು ಇಲ್ಲಿಯೇ ಕುಸಿಯಬಾರದು. ಅದಕ್ಕಾಗಿ ಈ ಉಪನ್ಯಾಸ.

ಈವರೆಗಿನ ನಮ್ಮ ಪರಂಪರೆ ನಮ್ಮ ಆಯ್ಕೆಯ ಪರಂಪರೆ ಆಗಿಯೇ ಇಲ್ಲ. ಏಕೆಂದರೆ ನಾವು ಯಾವುದನ್ನು ’ಪರಂಪರೆ’ ಎಂದು ಕರೆಯುವೆವೋ ಅದರಲ್ಲಿ ಲೆಕ್ಕವಿಲ್ಲದಷ್ಟು ವಿರೋಧಾಭಾಸಗಳಿವೆ, ಅಸಂಗತಿಗಳಿವೆ. ಭಾರತೀಯರ ಮನಸ್ಸು ಇಷ್ಟೊಂದು ದ್ವಂದ್ವಗಳಿಂದ ಕೂಡಿರಲು ನಮ್ಮ ಮೇಲೆ ಹೊರಿಸಲಾದ ’ಪರಂಪರೆ’ಯ ಈ ವಿರೋಧಾಭಾಸಗಳ ಹೊರೆಯೇ ಕಾರಣ. ನಮ್ಮ ಪರಂಪರೆಯನ್ನು ನೆನೆಸಿಕೊಂಡರೆ ಒಂದು ದೊಡ್ಡ ಗೋದಾಮಿನ, ಕಸ ಸಂಗ್ರಹಿಸುವ ಬೃಹತ್ ಗಾತ್ರದ ತೊಟ್ಟಿಯ ನೆನಪಾಗುತ್ತದೆ. ಹೀಗಿರುವಾಗ ’ಪರಂಪರೆಯನ್ನು ಬೆದಕಲೇ ಬೇಡಿ, ಟೀಕಿಸಲೇ ಬೇಡಿ’ ಎಂದರೆ ಏನರ್ಥ? ಭಾರತೀಯ ಚಿಂತಕರಲ್ಲಿ ವಿದ್ಯಾವಂತರಲ್ಲಿ ಒಂದು ಸಮಗ್ರ ವ್ಯಕ್ತಿತ್ವ ಕಾಣಿಸುವುದು ತುಂಬ ಅಪರೂಪ. ಏಕೆಂದರೆ ಅಂಥವರ ಮನಸ್ಸುಗಳಲ್ಲಿ ಹಲವು ವಿಭಿನ್ನ ಸ್ವರಗಳು, ವೈರುಧ್ಯಕರ ವಿಚಾರಗಳು, ಇಬ್ಬಂದಿ ಆದರ್ಶಗಳು ಮನೆಮಾಡಿರುತ್ತದೆ. ಅವರು ಭಾವಿಸುವಂತೆ ಇದಕ್ಕೆ ನಮ್ಮ ಪರಂಪರೆಯ ಸಂಕೀರ್ಣ ಸ್ವರೂಪ ಕಾರಣವಲ್ಲ. ಪರಂಪರೆಯನ್ನು ತೀವ್ರವಾಗಿ ವಿಮರ್ಶಿಸದೆ ಪ್ರಶ್ನಾತೀತವಾಗಿ ಪೂಜಿಸುವ ಧೋರಣೆಯೇ ಕಾರಣ. ಇನ್ನಾದರೂ ಈ ಧೋರಣೆಯನ್ನು ಕೈಬಿಡದಿದ್ದರೆ ಭವಿಷ್ಯವೇ ಕುಂಠಿತವಾಗುತ್ತದೆ. ಭವಿಷ್ಯದೆದುರು ಗಾಂಧೀ, ರಾಮ, ಕೃಷ್ಣ, ಯಾರೂ ಮುಖ್ಯರಲ್ಲ. ಭವಿಷ್ಯಕ್ಕಾಗಿ ಯಾವ ದೊಡ್ಡ ಮಹಾತ್ಮನನ್ನು ತ್ಯಾಗ ಮಾಡಿದರೂ ಅಡ್ಡಿಯಿಲ್ಲ. ನನಗೆ ಭವಿಷ್ಯದ ಒಂದು ಮಗು ಭೂತಕಾಲದ ಎಲ್ಲ ಮಹಾತ್ಮರಿಗಿಂತ ಮುಖ್ಯವಾದುದು.

ವಿಮರ್ಶೆಯೆಂದರೆ ನಿಂದನೆಯಲ್ಲ. ನನ್ನ ಮಾತುಗಳನ್ನು ಕುರಿತು ಗಂಭೀರವಾದ ಆಲೋಚನೆ ನಡೆದರೆ ನನ್ನ ಮಾತುಗಳು ತುಂಬ ಪ್ರಸ್ತುತವಾದುದು ಎಂಬ ಇಂಗಿತ ವ್ಯಕ್ತವಾಗುವುದೇ ವಿನಃ ನಿಂದಿಸಿದಂತಾಗುವುದೇ? ಎಲ್ಲರ ಬಗ್ಗೆಯೂ ಹಾಗೆ ಗಂಭೀರವಾಗಿ ಆಲೋಚಿಸಲಾಗುವುದೇ? ಗಾಂಧಿಯ ವಿಚಾರಗಳು ದೇಶದ ಒಳಿತಿನ ಮೇಲೆ ಅಥವ ಕೆಡುಕಿನ ಮೇಲೆ ತುಂಬ ಗಂಭೀರವಾದ ಪರಿಣಾಮ ಬೀರಬಲ್ಲವು ಎಂಬ ವಿಶ್ವಾಸ ಇರುವುದರಿಂದಲೇ ಅವರ ಬಗ್ಗೆ ನಾನು ಇಷ್ಟು ವಿಮರ್ಶಾತ್ಮಕವಾಗಿ ಚಿಂತನೆ ನಡೆಸುತ್ತಿರುವುದು. 

ಮಾರ್ಕ್ಸ್ ಸತ್ತಾಗ ಏಂಗೆಲ್ಸ್ ’ಮಾರ್ಕ್ಸ್‌ನ ವಿಚಾರಗಳನ್ನು ಅಧ್ಯಯನ ಮಾಡಿದವರು ಅದನ್ನು ಸಮ್ಮತಿಸುವರು ಇಲ್ಲವೇ ವಿರೋಧಿಸುವರು, ಆ ವಿಚಾರಗಳನ್ನು ತಿಳಿದೂ ಅವಜ್ಞೆ ಮಾಡಲು ಸಾಧ್ಯವೇ ಇಲ್ಲ’ ಎಂದಿದ್ದ. ಯಾವ ವಿಚಾರಗಳನ್ನು ಸುಲಭವಾಗಿ ಅವಜ್ಞೆ ಮಾಡಲು ಸಾಧ್ಯವಿಲ್ಲವೋ ಅವೇ ನಿಜವಾಗಿಯೂ ಅರ್ಥಪೂರ್ಣ ವಿಚಾರಗಳು. ವಿರೋಧಿಸಲು ಸಾಧ್ಯವಿಲ್ಲದ ವಿಚಾರಗಳು ಸ್ವೀಕಾರಕ್ಕೂ ಯೋಗ್ಯವಾಗಲಾರದು ಎಂಬುದು ನನ್ನ ತಿಳುವಳಿಕೆ. ದೇವರನ್ನು ಪ್ರಶ್ನಿಸುವವರನ್ನು ಸಹ ನಾನು ನಾಸ್ತಿಕರು ಎಂದು ಕರೆಯಲಾರೆ. ಏಕೆಂದರೆ ದೇವರ ಪ್ರಶ್ನೆ ತುಂಬ ಗಂಭೀರವಾದುದು ಎಂದು ಆಸ್ತಿಕರಿಗಿಂತ ಹೆಚ್ಚಾಗಿ ಅಂಥ ನಾಸ್ತಿಕರು ಭಾವಿಸಿರುತ್ತಾರೆ.

ಸ್ವಾತಂತ್ರ್ಯ ಸಿಗುವ ಮುನ್ನ ೧೨೫ ವರ್ಷಗಳ ಕಾಲ ಬದುಕುತ್ತೇನೆ ಎಂದು ಆಗಾಗ ತಮ್ಮ ಆತ್ಮಕಥೆಯಲ್ಲಿ ಹೇಳಿಕೊಳ್ಳುವ ಗಾಂಧಿ ಸ್ವಾತಂತ್ರ್ಯಾನಂತರ ಭ್ರಮನಿರಸನಕ್ಕೆ ಒಳಗಾದರು. ಆ ದಿನಗಳಲ್ಲಿ ತಮ್ಮ ಡೈರಿಯಲ್ಲಿ ’ನನಗಿನ್ನು ಬದುಕಿರುವ ಆಸೆ ಉಳಿದಿಲ್ಲ. ನನ್ನನ್ನು ಇವರೆಲ್ಲ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡರು. ನನಗಿಲ್ಲಿ ಒಂದು ಖೋಟಾನೋಟಿನ ಬೆಲೆಯೂ ಇಲ್ಲ, ನನ್ನ ವಿಚಾರಗಳಿಗೆ ಚಲಾವಣೆಯೇ ಇಲ್ಲ’ ಎಂದು ಬರೆದುಕೊಂಡಿದ್ದರು. ಅವರ ಶಿಷ್ಯರೂ ಸಹ ’ಈ ಮುದುಕನಿಂದ ಇನ್ನೆಂದು ಬಿಡುಗಡೆಯೋ?’ ಎಂದು ಒಳಗೇ ಚಡಪಡಿಸುತ್ತಿದ್ದರು.೪೧ ಸಾಯುವಾಗ ಗಾಂಧಿಯ ಬಾಯಲ್ಲಿ ’ಹೇರಾಮ್’ ಎಂಬ ಮಾತುಗಳು ಹೊರಬಂದವಂತೆ. ತೀವ್ರ ಭ್ರಮನಿರಸನಕ್ಕೊಳಗಾಗಿದ್ದ ಅವರ ಮನಸ್ಸಿಗೆ ಆ ಗುಂಡೇಟು ಸಮಾಧಾನವನ್ನೇ ತಂದಿರಬೇಕು. ಕೊನೆಗೂ ಸಾವನ್ನು ನೀಡಿದ ತನ್ನ ಇಷ್ಟದೈವವನ್ನು ಕೃತಜ್ಞತೆಯಿಂದ ನೆನೆಯುತ್ತ ಹಾಗೆ ಉದ್ಗರಿಸಿದರು ಎಂದು ನಾನು ಅವರ ಆ ಕೊನೆಯ ಮಾತುಗಳನ್ನು ವ್ಯಾಖ್ಯಾನಿಸುತ್ತೇನೆ. ಸ್ವಾತಂತ್ರ್ಯಾನಂತರ ಇಲ್ಲಿ ರಾಮರಾಜ್ಯದ ಕನಸನ್ನು ಕಾಣುತ್ತಿದ್ದ ಅವರ ಕಣ್ಣೆದುರು ೧೦ ಲಕ್ಷ ಜನರ ಹತ್ಯಾಕಾಂಡವಾಯಿತು, ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಕುಂಟರು, ಕುರುಡರು, ಅನಾಥರು ಹುಟ್ಟಿಕೊಂಡರು. ಎಂಥವರಿಗಾದರೂ ಭ್ರಮನಿರಸನವಾಗದೆ ಇದ್ದೀತೇ?೪೨

No comments:

Post a Comment