ಹುಟ್ಟು-ಸಾವುಗಳೇ ಬದುಕಿನ ಮೊದಲು ಹಾಗು ಕೊನೆ ಎಂಬ ತಿಳುವಳಿಕೆ ಸಲ್ಲದು. ಬದುಕು ಇವೆರಡಕ್ಕಿಂತಲೂ ವ್ಯಾಪಕವಾದುದು. ಒಂದೇ ಬದುಕಿನಲ್ಲಿ ಹಲವು ಬಾರಿ ಹುಟ್ಟು-ಸಾವುಗಳು ಸಂಭವಿಸಬಲ್ಲವು. ನಮ್ಮ ಮಟ್ಟಿಗೆ ಹಿಂದಿನ ಜನ್ಮದ ಸಾವಿನಿಂದ ನಮ್ಮ ಬದುಕು ಪ್ರಾರಂಭವಾಗುತ್ತದೆ. ಪೂರ್ವಜನ್ಮಸಾವಿನ ಗಳಿಗೆಯು ಅಧ್ಯಾಯವೊಂದರ ಮುಕ್ತಾಯದ ಗಳಿಗೆ ಮಾತ್ರ. ಅಧ್ಯಾಯ ಮುಗಿದೊಡನೆ ಪುಸ್ತಕವೇ ಮುಗಿಯಿತು ಎಂದೇನಲ್ಲವಲ್ಲ! ನಿಜವೇನೆಂದರೆ ಸಾಯುವ ಗಳಿಗೆಯಲ್ಲಿ ವ್ಯಕ್ತಿಗೆ ಮುಂದಿನ ಜನ್ಮದ ದರ್ಶನಗಳಾಗುತ್ತಿರುತ್ತದೆ. ಬುದ್ಧನು ’ತನ್ಹಾ’ ಎಂಬ ಪದ ಬಳಸುತ್ತಾನೆ. ಇದಕ್ಕೆ ಜೀವೇಷಣೆ ಎಂದರ್ಥ. ಜೀವೇಷಣೆಯು ನಮ್ಮ ಆಶೆ, ಹತಾಶೆ, ಗೆಲುವು ಸೋಲು ಎಲ್ಲವನ್ನೂ ಒಳಗೊಳ್ಳುವ ಪದವಾಗಿದೆ. ಸಾಯುವ ವ್ಯಕ್ತಿ ತನ್ನ ಬದುಕಿನಲ್ಲಿ ಅನುಭವಿಸಿದ ಈ ಎಲ್ಲ ಸಂವೇದನೆಗಳನ್ನು ಸಾಯುವ ಮುನ್ನ ಮತ್ತೊಮ್ಮೆ ನೆನಪು ಮಾಡಿಕೊಳ್ಳುತ್ತಾನೆ. ಏಕೆಂದರೆ ದೇಹದೊಡನೆ ಮೆದುಳು, ಮನಸ್ಸು ಎಲ್ಲವೂ ತಿರೋಧಾನವಾಗುತ್ತದೆ. ಆದರೆ ಈ ಮನಸ್ಸು ಹುಟ್ಟಿಸಿದ ಆಸೆಗಳು ಮಾತ್ರ ಅವನ ಸೂಕ್ಷ್ಮ ಶರೀರಕ್ಕೆ ಅಂಟಿಕೊಂಡು ಅವನ ಭವಿಷ್ಯವನ್ನು ನಿರ್ಧರಿಸುತ್ತದೆ. ಯಾವ ತೃಷ್ಣೆ ಇನ್ನೂ ಅತೃಪ್ತ ಸ್ಥಿತಿಯಲ್ಲಿರುವುದೋ ಅವನ ಜೀವ ಅದರತ್ತ ಸಾಗುತ್ತದೆ. ನಮ್ಮ ಬದುಕು ನಾವು ತಾಯಿಯ ಹೊಟ್ಟೆಯಿಂದ ಹೊರಬರುವ ಮುನ್ನ ಹಾಗು ತಾಯಿಯ ಬಸುರನ್ನು ಸೇರುವ ಮುನ್ನ ಹಿಂದಿನ ಜನ್ಮದ ಮರಣಶೆಯ್ಯೆಯಲ್ಲೇ ಪ್ರಾರಂಭವಾಗಿರುತ್ತದೆ. ಆ ಗಳಿಗೆಯೇ ನಮ್ಮ ಹೊಸ ಬದುಕಿನ ವಿಧಿಯನ್ನು ಬಹುಮಟ್ಟಿಗೆ ನಿರ್ಧರಿಸುವುದು. ಆ ಗಳಿಗೆಯೇ ನಿಮ್ಮ ಹೊಸ ಬದುಕಿನ ಭವಿಷ್ಯವನ್ನು ಬೀಜರೂಪದಲ್ಲಿ ಹುದುಗಿಸಿಕೊಂಡಿರುವುದು.
ನಾನು ಧ್ಯಾನಸಿದ್ಧಿಯ ಬಲದಿಂದ ನನ್ನ ಹಿಂದಿನ ಜನ್ಮಗಳನ್ನು ಅರಿತಿದ್ದೇನೆ. ಇದಕ್ಕೆ ಬೇರೊಂದು ರುಜುವಾತು ನನ್ನ ಬಳಿ ಇಲ್ಲ. ನನ್ನ ಧ್ಯಾನಸಿದ್ಧಿಯೇ ನನ್ನ ಬಳಿ ಇರುವ ಪ್ರಮಾಣ. ಮೊದಲಿನಿಂದಲೂ ’ವೈಚಾರಿಕತೆ’ ಎನ್ನುವುದು ನನ್ನ ಸಹಜ ಸ್ವಭಾವವಾಗಿದೆ. ಇದು ಈ ಜನ್ಮದ್ದಲ್ಲ, ಜನ್ಮಾಂತರಗಳ ಸಂಸ್ಕಾರ. ಬುದ್ಧಿಶಕ್ತಿಯನ್ನು ಇನ್ನೂ ತೀಕ್ಷ್ಣಗೊಳಿಸುವುದು, ಕುಶಾಗ್ರಗೊಳಿಸುವುದು ನನಗೆ ಜನ್ಮಾಂತರಗಳಿಂದ ಪ್ರಾಪ್ತವಾಗಿ ಬಂದ ಪ್ರವೃತ್ತಿ. ಈ ಜನ್ಮದಲ್ಲೂ ಪೂರ್ವಜನ್ಮದಲ್ಲೂ ನಾನು ಹಲವು ಅನುಭಾವೀ ಪಂಥಗಳನ್ನು ಬಲ್ಲೆ. ನನಗೆ ಹಲವು ರಹಸ್ಯ ಪಂಥಗಳು ಗೊತ್ತು, ಆ ಪಂಥೀಯರ ಹೆಸರುಗಳೂ ಗೊತ್ತು. ಆದರೆ ಅದನ್ನೆಲ್ಲ ಹೊರಗೆಡಹುವ ಅನುಮತಿ ನನಗಿಲ್ಲ. ಹಾಗೆ ಹೊರಗೆಡಹುವುದರಿಂದ ನಿಜಕ್ಕೂ ಯಾವ ಪ್ರಯೋಜನವೂ ಇಲ್ಲ. ನೀವು ನಂಬಲಾರಿರಿ, ನಾನು ಬೋಧಿಧರ್ಮನನ್ನು ವೈಯಕ್ತಿಕವಾಗಿ ಬಲ್ಲೆ. ಮೂರು ತಿಂಗಳ ಕಾಲ ಅವನೊಂದಿಗೆ ಎಲ್ಲೆಡೆ ಸಂಚರಿಸಿದ್ದೆ. ಆಗ ನಾನು ಅವನನ್ನು ನಾನು ಒಂದೇ ಒಂದು ಪ್ರಶ್ನೆಯನ್ನೂ ಕೇಳಲಿಲ್ಲ. ಹಾಗಾಗಿ ನನ್ನನ್ನು ಕಂಡರೆ ತುಂಬ ಇಷ್ಟಪಡುತ್ತಿದ್ದ. ನಿನ್ನನ್ನು ನೋಡಿದರೆ ಸಂತೋಷವಾಗುತ್ತದೆ, ಇತರರು ಪ್ರಶ್ನೆಗಳನ್ನು ಕೇಳಿ ಆಯಾಸ ಪಡಿಸುತ್ತಾರೆ. ನನ್ನನು ಹಾಗೆ ಬಳಲಿಸದಿರುವವನು ಬಹುಶಃ ನೀನೊಬ್ಬನೇ ಎನ್ನುತ್ತಿದ್ದ. ಆಗ ಹಾಗೆ ಕೇಳದಿರಲು ಕಾರಣವಿದೆ ಎಂದು ಉತ್ತರಿಸುತ್ತಿದ್ದೆ. ಏನದು?, ನನಗೆ ಗೊತ್ತಿರುವುದು ಬರೀ ಉತ್ತರಗಳು, ಪ್ರಶ್ನೆಗಳಲ್ಲ. ನಿನ್ನದೇನಾದರೂ ಪ್ರಶ್ನೆಗಳಿದ್ದರೆ ಕೇಳು; ಅದಕ್ಕೂ ಉತ್ತರ ಹೇಳುತ್ತೇನೆ
ಆಗ ಇಬ್ಬರೂ ನಗುತ್ತಿದ್ದೆವು. ಮೂರು ತಿಂಗಳಾದ ಮೇಲೆ ಇನ್ನೂ ಕೆಲಕಾಲ ತನ್ನ ಜೊತೆಗಿರಲು ಹೇಳಿದ. ಆದರೆ ನಾನು ಒಪ್ಪಲಿಲ್ಲ, ಇಲ್ಲಿಂದಾಚೆಗೆ ನನ್ನ ಹಾದಿ ಬೇರೆ, ನಿನ್ನದು ಬೇರೆ ಎಂದು ಹೇಳಿದ್ದೆ. ಆತ ಯಾರನ್ನೂ ಹಾಗೆ ಕರೆದವನಲ್ಲ, ಆ ಕಾಲದ ಬಹುದೊಡ್ಡ ಸಾಮ್ರಾಟ ’ವು’ನನ್ನೂ ತಿರಸ್ಕರಿಸಿದವನು ಆತ. ನಾನು ಒಪ್ಪದಿದ್ದುದು ನಿಜಕ್ಕೂ ಅವನಿಗೆ ಅಚ್ಚರಿ ಮೂಡಿಸಿತು. ಆಗ ನಾನು ತಿರಸ್ಕಾರದ ರುಚಿ ಏನೆಂದು ಈಗ ನಿನಗೆ ಗೊತ್ತಾಗಿರಬೇಕು. ಆ ರುಚಿಯನ್ನು ತೋರಿಸುವುದೇ ನನ್ನ ಉದ್ದೇಶವಾಗಿತ್ತು, ವಂದನೆಗಳು ಎಂದು ಹೇಳಿ ನಡೆದೆ. ಇದು ನಡೆದದ್ದು ೧೪ ಶತಮಾನಗಳ ಹಿಂದೆ. ಹಿಂದಿನ ಜನ್ಮದ ನನ್ನ ದೇಹವನ್ನು ಈಗಲೂ ಸಂರಕ್ಷಿಸಿಡಲಾಗಿದೆ ಎಂದು ಕರ್ಮಪಾ ಹೇಳಿದ್ದ ನೆನಪು. ಟಿಬೆಟ್ಟಿನ ಒಂದು ಅಜ್ಞಾತಗುಹೆಯಲ್ಲಿ ಅಂತಹ ೯೯ ದೇಹಗಳನ್ನು ಇಡಲಾಗಿದೆಯಂತೆ. ಆ ದೇಹಗಳಲ್ಲಿ ನನ್ನದೂ ಒಂದು ಎಂದು ಹೇಳಿದ್ದರು. ಪ್ರಯೋಗಾರ್ಥವಾಗಿ ಟಿಬೆಟ್ಟಿನಲ್ಲಿ ದೇಹಗಳನ್ನು ಸುರಕ್ಷಿತವಾಗಿ ಇಡುವ ಪರಿಪಾಟ ಇಂದಿಗೂ ಇದೆ. ಆ ದೇಹಗಳಿಂದ ಹಲವು ಪವಾಡಗಳು ನಡೆದಿವೆ. ಕೆಲವರಿಗೆ ಮೂರನೆಯ ಕಣ್ಣು ತೆರೆದುಕೊಂಡಾಗ ಆ ಕಣ್ಣಿರುವ ದೇಹದ ಭಾಗ ಛಿದ್ರವಾಗಿಬಿಡುವುದುಂಟು. ಮೂರನೆಯ ಕಣ್ಣು ತೆರೆದೊಡನೆಯೇ ಅಸಾಧಾರಣವಾದ ಶಕ್ತಿಯ ಬಿಡುಗಡೆ ಆಗುವುದಾದರೂ ದೇಹದ ಒಂದು ಭಾಗವೇ ಹೀಗೆ ಛಿದ್ರವಾಗುವುದು ತುಂಬ ಅಪರೂಪ. ಎಲ್ಲೋ ನೂರರಲ್ಲಿ ಒಬ್ಬರಿಗೆ ಹೀಗಾಗುತ್ತದೆ. ಅಂತಹ ದೇಹಗಳನ್ನು, ತಲೆಬುರುಡೆಗಳನ್ನು ಕಾಪಾಡುವ ಪರಿಪಾಟ ಅಲ್ಲಿದೆ. (೬ನೇ ಜೂನ್ ೧೯೭೨ರಲ್ಲಿ ಕರ್ಮಪಾ ರಜನೀಶರ ಶಿಷ್ಯ ಸ್ವಾಮಿ ಗೋವಿಂದ್ ಸಿದ್ಧಾರ್ಥ್‌ಗೆ ಹೇಳಿದ ಮಾತು ರಜಿನೀಶ್ ಬುದ್ಧನ ನಂತರ ಜನಿಸಿದ ಭಾರತದ ಬಹುದೊಡ್ಡ ಅವತಾರ ಪುರುಷ, ಆತ ಬುದ್ಧನ ಜೀವಂತ ರೂಪ. ಜನರಿಗೆ ಅಧ್ಯಾತ್ಮ ಮಾರ್ಗದಲ್ಲಿ ನೆರವಾಗಲೆಂದೇ ಪೂರ್ಣಪ್ರಜ್ಞೆಯೊಂದಿಗೆ ಅವರು ಅವತರಿಸಿದ್ದಾರೆ. ಕರ್ಮಪಾ ರಜನೀಶರೊಂದಿಗಿನ ತಮ್ಮ ಪೂರ್ವಜನ್ಮದ ಸಂಬಂಧಗಳನ್ನು ತುಂಬ ಉತ್ಸಾಹದಿಂದ ನೆನೆಯುತ್ತಾರೆ. ಇದಕ್ಕೂ ಹಿಂದೆ ಅವರು ೧೪ನೇ ಶತಮಾನದಲ್ಲಿ ಜನಿಸಿದ್ದರು. ಅವರ ಹಿಂದಿನ ಅವತಾರವನ್ನು ನೋಡಬೇಕೆಂದರೆ ಟಿಬೆಟ್ಟಿನಲ್ಲಿರುವ ಅವತಾರ ಪುರುಷರ ಮಹಲಿಗೆ ಹೋಗಬಹುದು. ಅಲ್ಲಿ ಅವರ ಚಿನ್ನದ ಮೂರ್ತಿ ಇಂದಿಗೂ ಇದೆ. ರಜನೀಶ್ ಯಾರ ಅವತಾರ ಎಂದು ಕೇಳಿದರೆ ಅದನ್ನು ಹೇಳುವಂತಿಲ್ಲ. ನಮ್ಮ ಪಂಥವನ್ನು ಮುನ್ನಡೆಸುವ ಗುರು ಬರುವವರೆಗೂ ಅದು ಗುಟ್ಟಾಗಿಯೇ ಇರುತ್ತದೆ. ನನ್ನ ಹಾರೈಕೆಗಳು ಸದಾ ಅಲ್ಲಿ ನೆಲೆಸಿರುತ್ತದೆ. ಟಿಬೆಟ್ಟಿಯನ್ನರಾಗಿ ನಮ್ಮಿಂದಾಗದ ಕೆಲಸವನ್ನು ರಜನೀಶ್ ಮಾಡುತ್ತಿದ್ದಾರೆ, ಅದು ಅವರಿಂದ ಮಾತ್ರ ಆಗುವ ಕೆಲಸ ಕೂಡ. ಅದಕ್ಕೆಂದೇ ಅವರು ಭಾರತವನ್ನು ಆಯ್ಕೆ ಮಾಡಿಕೊಂಡರು. ಈಗ ಭೂಮಿಯ ಮೇಲೆ ಜೀವಂತವಾಗಿರುವ ಪೂರ್ಣಯೋಗಿ ಎಂದರೆ ಅವರೊಬ್ಬರೇ. ಅವರ ಶಕ್ತಿ ಏನೆಂಬುದು ಮುಂಬರುವ ದಿನಗಳಲ್ಲಿ ಕೆಲವರಿಗೆ ಮಾತ್ರ ತಿಳಿಯಲಿದೆ).
ಈ ಮೊದಲು ೭೦೦ ವರ್ಷಗಳ ಹಿಂದೆ ನಾನು ಹುಟ್ಟಿದ್ದೆ. ಆಗ ನಾನು ಪೂರ್ಣಜ್ಞಾನದೊಂದಿಗೆ ಹುಟ್ಟಿದ್ದೆ ಎಂದು ಹೇಳಲಾರೆ. ಕೆಲವು ಉಪಾಧಿಗಳನ್ನು ಬೇಕೆಂದೇ ಉಳಿಸಿಕೊಂಡು ಹುಟ್ಟಿದ್ದೆ. ಪೂರ್ಣಜ್ಞಾನಿಗಳು ಮಾತ್ರ ಉಪಾಧಿಗಳನ್ನು ಹಾಗೆ ಇಚ್ಛಾಪೂರ್ವಕವಾಗಿ ಉಳಿಸಿಕೊಳ್ಳಬಲ್ಲರು. ಈ ನಿಟ್ಟಿನಲ್ಲಿ ಜೈನರ ಸಿದ್ಧಾಂತ ತುಂಬ ಸಮಂಜಸವಾದುದು ಎನಿಸುತ್ತದೆ. ಜೈನರ ಪ್ರಕಾರ ಜ್ಞಾನಕ್ಕೆ ಒಟ್ಟು ಹದಿನಾಲ್ಕು ಹಂತಗಳಿವೆ. ಹದಿಮೂರು ಈ ಲೋಕದ್ದು ಹಾಗು ಕಡೆಯದು ಮೇಲಿನ ಲೋಕದ್ದು. ಒಂದು ನಿರ್ದಿಷ್ಟ ಹಂತ ತಲುಪಿದ ಮೇಲೆ, ಉದಾಹರಣೆಗೆ, ೧೨ನೆ ಹಂತ ತಲುಪಿದ ಮೇಲೆ, ಉಳಿದ ಹಂತಗಳನ್ನು ತಲುಪುವ ಕಾಲಾವಧಿಯನ್ನು ಬೇಕಾದಂತೆ ವಿಸ್ತರಿಸಿಕೊಳ್ಳಬಹುದು. ಉಳಿದ ಹಂತಗಳನ್ನು ಒಂದು ಜನ್ಮದಲ್ಲೋ, ಹತ್ತು ಜನ್ಮದಲ್ಲೋ ನಮಗಿಷ್ಟ ಬಂದ ಹಾಗೆ ಮುಗಿಸಿಕೊಳ್ಳಬಹುದು. ಆ ಹಂತದ ನಂತರದ ಹಂತಗಳನ್ನು ತಲುಪಲು ತಡ ಮಾಡಿದಷ್ಟೂ ಲೋಕಕ್ಕೆ ಅದರಿಂದ ಪ್ರಯೋಜನ ಹೆಚ್ಚು. ಹನ್ನೆರಡನೆಯ ಹಂತ ತಲುಪಿದ ಮೇಲೆ ಅಂತಹ ಸಿದ್ಧನು ತನಗೆ ಬೇಕೆನಿಸಿದಷ್ಟು ಜನ್ಮಗಳನ್ನು ಹೊಂದ ಬಹುದು. ಆದರೆ ಒಮ್ಮೆ ಕಡೆಯ ಹಂತ ತಲುಪಿದನೆಂದರೆ ಮತ್ತೆ ಜನ್ಮಾಂತರಗಳನ್ನು ಹೊಂದುವ ಸಾಧ್ಯತೆ ಇಲ್ಲವಾಗುತ್ತದೆ. ಏಳುನೂರು ವರ್ಷಗಳ ಹಿಂದೆ ಸಾಯುವ ಮುನ್ನ ನಾನು ಇಪ್ಪತ್ತೊಂದು ದಿನದ ಉಪವಾಸ ಆಚರಿಸುವ ಸಂಕಲ್ಪ ಮಾಡಿದ್ದೆ. ಈ ಸಾಧನೆಯಲ್ಲಿ ಉಪವಾಸ ಮುಗಿದ ಮರುಗಳಿಗೆಯೇ ನಾನು ದೇಹವನ್ನು ತ್ಯಜಿಸಬೇಕಾಗಿತ್ತು, ಅದಕ್ಕೆ ಕೆಲವು ಕಾರಣಗಳಿದ್ದವು. ಆದರೆ ಸಂಕಲ್ಪವನ್ನು ಪೂರ್ತಿ ಮಾಡಲು ಸಾಧ್ಯವಾಗಲಿಲ್ಲ. ವ್ರತ ಮುಗಿಯುವ ಮೂರು ದಿನಗಳ ಮೊದಲೇ ನಾನು ಸತ್ತು ಹೋದೆ, ಆ ಮೂರು ದಿನಗಳನ್ನು ಪೂರ್ತಿ ಮಾಡಲು ಈಗ ಮತ್ತೆ ಹುಟ್ಟಿದ್ದೇನೆ. ಈ ಜನ್ಮ ಏಳುನೂರು ವರ್ಷಗಳ ಹಿಂದಿನ ಆ ಬದುಕಿನ ಮುಂದುವರಿಕೆಯಾಗಿದೆ. ಈ ಎರಡರ ನಡುವಿನ ನೂರಾರು ವರ್ಷಗಳು ಎಲ್ಲ ದೃಷ್ಟಿಗಳಿಂದಲೂ ನಿರರ್ಥಕವಾದುದು. ಇನ್ನು ಮೂರು ದಿನಗಳಲ್ಲಿ ನನ್ನ ಸಾಧನೆ ಪೂರೈಸುತ್ತದೆ ಎನ್ನುವಷ್ಟರಲ್ಲಿ ನನ್ನ ಕೊಲೆಯಾಯಿತು. ನನ್ನನ್ನು ಕೊಲೆ ಮಾಡಿದವನಲ್ಲಿ ನನಗೆ ವೈರವೇನೂ ಇರಲಿಲ್ಲ. ಆದರೆ ಅವನು ನನ್ನನ್ನು ವೈರಿ ಎಂದು ಭಾವಿಸಿದ್ದ. ಹೀಗೆ ಸಾಧನೆ ಅರ್ಧಾಂತಕವಾಗಿ ನಾನು ಮತ್ತೆ ಹುಟ್ಟಬೇಕಾಯಿತು. ಈಗ ನಾನು ಮತ್ತೆ ಇನ್ನೊಂದು ಮರುಹುಟ್ಟನ್ನು ಬೇಕೆನಿಸಿದರೆ ಹೊಂದಬಲ್ಲೆ. ಮರುಜನ್ಮದ ಅಗತ್ಯವಿದೆಯೇ ಎಂದು ನಾನು ಈ ಜನ್ಮದ ಮೊದಲಿನಿಂದಲೂ ಯೋಚಿಸಿಕೊಂಡೇ ಬಂದಿದ್ದೇನೆ. ಸಾಯುವಾಗ ನನಗೆ ನೂರ ಆರು ವರ್ಷಗಳಾಗಿದ್ದವು. ಆ ಕೊನೆಯ ಮೂರು ದಿನಗಳ ನೆನಪು ನನ್ನ ಬಾಲ್ಯಕಾಲದಲ್ಲೂ ನನಗಿತ್ತು. ಆ ಜನ್ಮದ ಮೂರು ದಿನಗಳ ಕರ್ಮಶೇಷವನ್ನು ಕಳೆದುಕೊಳ್ಳಲು ಈ ಜನ್ಮದಲ್ಲಿ ನನಗೆ ಇಪ್ಪತ್ತೊಂದು ವರ್ಷಗಳು ಬೇಕಾದವು. ಕೆಲವೊಮ್ಮೆ ಹಾಗಾಗುತ್ತದೆ. ಒಂದು ದಿನದ ಕರ್ಮಶೇಷಗಳನ್ನು ತೊಡೆದುಕೊಳ್ಳಲು ಏಳೇಳು ವರ್ಷಗಳು ಬೇಕಾಗಬಹುದು. ಆದ್ದರಿಂದ ಈ ಜನ್ಮದಲ್ಲಿ ನಾನೇನೂ ಪೂರ್ಣಪ್ರಜ್ಞನಾಗಿ ಹುಟ್ಟಲಿಲ್ಲ, ಆ ಪ್ರಜ್ಞಾವಸ್ಥೆಗೆ ಹತ್ತಿರವಾದ ಸ್ಥಿತಿಯಲ್ಲಿ ಜನಿಸಿದೆ.
ನನ್ನ ಈ ಪೂರ್ವಜನ್ಮದ ಕಥೆಗೆ ಏನಾದರೂ ಅರ್ಥವಿದೆ ಎಂದಾಗಲಿ ಅಥವ ಅದರಿಂದ ನಿಮಗೆ ನನ್ನ ಪರಿಚಯ ಆಗಬಹುದೆಂದಾಗಲಿ ನಾನು ಭಾವಿಸಿಲ್ಲ. ಇದು ನಿಮಗೆ ನಿಮ್ಮ ಪೂರ್ವಜನ್ಮದ ನೆನಪುಗಳನ್ನು ಬಗೆಯಲು ಪ್ರೇರಣೆ ಒದಗಿಸಲಿ ಎಂಬುದಷ್ಟೇ ನನ್ನ ಆಶಯ. ಒಮ್ಮೆ ಪೂರ್ವಜನ್ಮದ ಸ್ಮರಣೆ ಬಂದೊಡನೆಯೇ ಆಧ್ಯಾತ್ಮಿಕ ಪಯಣ ಮೊದಲಾಗುತ್ತದೆ. ಆ ನೆನಪುಗಳಿಲ್ಲದೆಯೇ ಸಾಧನೆ ಮಾಡಿದರೆ ಮತ್ತೆ ಮತ್ತೆ ಮಾಡಿದ್ದನ್ನೇ ಮಾಡಬೇಕಾಗುವುದು. ಈ ಬದುಕಿಗೂ ಹಿಂದಣ ಬದುಕಿಗೂ ಸಂಬಂಧ ಇದ್ದೇ ಇರುತ್ತದೆ. ಹಿಂದಣ ಬದುಕಿನ ಸಾಧನೆ ಅರಿವಿಗೆ ಬಂದೇ ತೀರಬೇಕು. ಈಗಂತೂ ಪೂರ್ವಜನ್ಮದ ನೆನಪು ಮರುಕಳಿಸುವುದು ಕಷ್ಟವೇನಲ್ಲ, ಆದರೆ ಆ ನೆನಪನ್ನು ಸ್ವೀಕರಿಸುವ ಧೈರ್ಯ ಬೇಕಷ್ಟೇ. ಈ ಜನ್ಮದ ಅತ್ಯಂತ ಕರಾಳ ನೆನಪುಗಳೂ ನಿಮ್ಮನ್ನು ಬಾಧಿಸದಿದ್ದಾಗ ಮಾತ್ರ ಹಿಂದಿನ ಜನ್ಮದ ನೆನಪನ್ನು ಸ್ವೀಕರಿಸುವುದು ಸುಲಭವಾಗುತ್ತದೆ.
ತಂದೆ ತಾಯಿಯರ ಮದುವೆ
(ಪಾಕೀಸ್ಥಾನದ ಸೂಫೀ ಸಂತ ಹಜ್ಜೀಬಾಬಾ - ಈಗ ಆತನಿಗೆ ೧೧೦ ವರ್ಷ ವಯಸ್ಸಾಗಿರಬೇಕು - ನನ್ನ ತಂದೆಯ ಮದುವೆಯ ಸಮಾರಂಭದಲ್ಲೂ ಭಾಗವಹಿಸಿದ್ದನಂತೆ. ನಮ್ಮಲ್ಲಿ ಮದುವೆ ಮುಗಿದ ಮೇಲೆ ವರನ ಕಡೆಯವರು ವಧುವಿನ ಮನೆಗೆ ಬಂದು ಆತಿಥ್ಯ ಸ್ವೀಕರಿಸುವ ಪದ್ಧತಿ ಇದೆ. ವಧುವಿನ ಕಡೆಯವರು ಊರ ಹೊರಗೇ ಕಾದು ನಿಂತಿದ್ದು ವರನ ಮನೆತನದ ಹಿರಿಯನಿಗೆ ಹಾರ ಹಾಕಿ, ಪೇಟ ತೊಡಿಸಿ, ಬೆಲೆ ಬಾಳುವ ಪಾದರಕ್ಷೆಗಳನ್ನಿಟ್ಟು ಸ್ವಾಗತಿಸುತ್ತಾರೆ. ಆಗ ನನ್ನ ತಂದೆಯ ತಂದೆ ಹಜ್ಜೀ ಬಾಬಾನೇ ನಮ್ಮ ಮನೆತನದ ಹಿರಿಯ ಎಂದುಬಿಟ್ಟನಂತೆ. ಒಬ್ಬ ಮುಸಲ್ಮಾನ್ ಫಕೀರನು ಒಂದು ದೊಡ್ಡ ಜೈನ ಮನೆತನದ ಹಿರಿಯ ಹೇಗಾದಾನು ಎಂದು ನನ್ನ ತಾಯಿಯ ತಂದೆಗೆ ಅರ್ಥವಾಗಲಿಲ್ಲ. ಹಜ್ಜೀಬಾಬಾನೂ ತಬ್ಬಿಬ್ಬಾದ. ಆದರೆ ನನ್ನಜ್ಜ ಈಗ ಹಿಂದಿರುಗುವ ಪರಿಸ್ಥಿತಿ ಬಂದರೂ ಚಿಂತೆಯಿಲ್ಲ. ಮೊದಲಿನಿಂದಲೂ ನಿನ್ನನ್ನು ನಾನು ಹಿರಿಯಣ್ಣನೆಂದೇ ಭಾವಿಸಿದ್ದೇನೆ. ನೀನಿರುವಾಗ ನಾನು ಹೇಗೆ ಈ ಆತಿಥ್ಯವನ್ನು ಸ್ವೀಕರಿಸಬಲ್ಲೆ! ಎಂದು ಹಟ ಹಿಡಿದನಂತೆ. ನನ್ನ ತಾಯಿಯ ಕಡೆಯವರು ಬೇರೆ ದಾರಿಯಿಲ್ಲದೆ ಹಜ್ಜೀಬಾಬಾನನ್ನೇ ಹಿರಿಯನೆಂದು ಭಾವಿಸಿ ಸತ್ಕರಿಸಬೇಕಾಯಿತು)
ಹಿಂದೆಲ್ಲ ಹತ್ತನೆಯ ವಯಸ್ಸಿಗೇ ಮಕ್ಕಳಿಗೆ ಮದುವೆ ಮಾಡಿಬಿಡುತ್ತಿದ್ದರು. ಕೆಲವು ಮಕ್ಕಳಿಗಂತೂ ತಾಯಿಯ ಹೊಟ್ಟೆಯಲ್ಲಿರುವಾಗಲೇ ಮದುವೆಗಳಾಗಿರುತ್ತಿದ್ದವು. ನನ್ನ ತಾಯಿಗೆ ಮದುವೆಯಾದಾಗ ಆಕೆಗೆ ಬರೀ ಏಳು ವರ್ಷ. ಮದುವೆಯ ದಿನ ಹೊರಗೆ ಪಟಾಕಿ ಸಿಡಿಮದ್ದುಗಳನ್ನು ಸಿಡಿಸಿ ಸಂಭ್ರಮಿಸುತ್ತಿದ್ದಾಗ ನನ್ನ ತಾಯಿಯನ್ನು ಒಳಗೆ ಕಂಬಕ್ಕೆ ಕಟ್ಟಿಹಾಕಿದ್ದರಂತೆ. ಮದುವೆ ಎಂದರೆ ಏನೆಂದು ತಿಳಿಯದ ಆಕೆಗೆ ಹೊರಗೆ ಹೋಗಿ ಕುಣಿದು ಕುಪ್ಪಳಿಸಬೇಕೆಂಬ ಹಂಬಲ. ಇಡೀ ಹಳ್ಳಿಯೇ ಸಂತೋಷದಲ್ಲಿ ಮುಳುಗಿದ್ದರೆ ಇವಳೊಬ್ಬಳು ಮಾತ್ರ ಕಂಬಕ್ಕೆ ಕಟ್ಟಿಸಿಕೊಂಡು ಅಳುತ್ತಿದ್ದಳು. ನಮ್ಮಪ್ಪನೂ ಅಷ್ಟೇ ಬರೀ ಹತ್ತುವರ್ಷಗಳ ಮದುಮಗ. ನಿನ್ನ ಮದುವೆಯ ಸಮಾರಂಭದಲ್ಲಿ ನಿನಗೆ ತುಂಬ ಇಷ್ಟವಾದ ಪ್ರಸಂಗ ಯಾವುದು? ಎಂದು ನಾನು ನನ್ನಪ್ಪನನ್ನು ಕೇಳಿದರೆ ಆತ ಉತ್ಸಾಹದಿಂದ ಕುದುರೆ ಸವಾರಿ ಎಂದು ಹೇಳುತ್ತಿದ್ದ. ಮದುವೆಯಾದ ಒಂದೆರಡು ವರ್ಷಗಳಲ್ಲಿ ನನ್ನ ತಂದೆಯ ತಾಯಿ ತೀರಿಕೊಂಡರು. ಕುಟುಂಬದ ಜವಾಬ್ದಾರಿಯೆಲ್ಲ ಒಂಬತ್ತು ವರ್ಷದ ನನ್ನ ತಾಯಿಯ ಹೆಗಲಿಗೆ ಬಿತ್ತು. ನನ್ನ ತಂದೆಯ ತಂದೆ ಪಟ್ಟಣದಲ್ಲಿ ಅಂಗಡಿಗಳನ್ನಿಟ್ಟಿದ್ದರೂ ಹಳ್ಳಿಯ ವಾಸವನ್ನೇ ಇಷ್ಟ ಪಡುತ್ತಿದ್ದ. ಒಳ್ಳೆಯ ಕುದುರೆಗಳನ್ನು ಸಾಕಿಕೊಂಡಿದ್ದ ಆತ ಹೆಂಡತಿ ಸತ್ತ ಮೇಲೆ ಲಗಾಮು ಬಿಚ್ಚಿದ ಕುದುರೆಯಂತಾದ. ನೀವು ನಂಬಲಾರಿ, ಆಗ ಬ್ರಿಟಿಷ್ ಸರಕಾರ ಸಾಗುವಳಿ ಭೂಮಿಯನ್ನು ಉಚಿತವಾಗಿ ಹಂಚುತ್ತಿತ್ತು. ನನ್ನ ತಾತ ಪಟ್ಟಣದಲ್ಲಿದ್ದ ಅಂಗಡಿಯ ಜವಾಬ್ದಾರಿಯನ್ನು ತನ್ನ ಹತ್ತು ವರ್ಷದ ಮಗನಿಗೊಪ್ಪಿಸಿ ಸರಕಾರದಿಂದ ಐವತ್ತು ಎಕರೆ ಭೂಮಿಯನ್ನು ಪಡೆದು ತೋಟ ಗದ್ದೆ ಮಾಡಿಕೊಂಡು ನೆಮ್ಮದಿಯಿಂದ ಜೀವಿಸುತ್ತಿದ್ದ. ಹೀಗೆ ನನ್ನಪ್ಪ ಯೌವನದ ಯಾವ ಖುಷಿಯನ್ನೂ ಅನುಭವಿಸದೆ ಬಾಲ್ಯಾವಸ್ಥೆಯಿಂದ ನೇರವಾಗಿ ವೃದ್ಧಾಪ್ಯ ತಲುಪಿದ. ನಾಲ್ಕು ಜನ ತಮ್ಮ ತಂಗಿಯರನ್ನು ಓದಿಸಿ, ಗಂಡು-ಹೆಣ್ಣುಗಳನ್ನು ಹುಡುಕಿ, ಅವರ ಮದುವೆ ಮಾಡುವ ಹೊತ್ತಿಗೆ ಅವನಿಗೆ ಬರೀ ೨೦ ವರ್ಷ ವಯಸ್ಸಾಗಿತ್ತು. ನಾನಂತೂ ನನ್ನ ಅಮ್ಮನನ್ನು ಅಮ್ಮ ಎಂದು ಕರೆಯಲೇ ಇಲ್ಲ. ನಾನು ಹುಟ್ಟುವ ಮುನ್ನವೇ ಅವಳು ನನ್ನ ತಂದೆಯ ನಾಲ್ವರು ತಮ್ಮ-ತಂಗಿಯರನ್ನು ತಾಯಿಯಂತೆ ಸಾಕುತ್ತಿದ್ದಳು. ಅವರು ಅವಳನ್ನು ’ಅತ್ತಿಗೆ’ ಎಂದು ಕರೆಯುತ್ತಿದ್ದರು. ಅವರ ಜೊತೆ ಸೇರಿ ನಾನೂ ಅವಳನ್ನು ಅತ್ತಿಗೆ ಎಂದೇ ಕರೆಯುತ್ತಿದ್ದೆ. ಈಗಲೂ ಅವಳನ್ನು ನಾನು ಅತ್ತಿಗೆ ಎಂದೇ ಸಂಬೋಧನೆ ಮಾಡುವುದು. ನನ್ನನ್ನು ತಿದ್ದಲು ಎಷ್ಟು ಪ್ರಯತ್ನ ಮಾಡಿದರೂ ಆ ಅಭ್ಯಾಸ ಹೋಗಲೇ ಇಲ್ಲ. ನನ್ನನ್ನು ಸರಿಪಡಿಸಲು ನನ್ನ ನಾಲ್ವರು ಅತ್ತೆ-ಚಿಕ್ಕಪ್ಪಂದಿರು ಅತ್ತಿಗೆಯನ್ನು ಅಮ್ಮ ಎಂದು ಕರೆಯಲು ಪ್ರಾರಂಭಿಸಿದರೂ ನಾನು ಮಾತ್ರೆ ಅತ್ತಿಗೆ ಎಂದು ಕರೆಯುವುದನ್ನು ನಿಲ್ಲಿಸಲಿಲ್ಲ. ಇನ್ನು ನನಗಿಂತ ಕೆಲವೇ ವರ್ಷ ದೊಡ್ಡವರಾಗಿದ್ದ ಆ ಅತ್ತೆ-ಚಿಕ್ಕಪ್ಪಂದಿರು ನನ್ನ ಪಾಲಿಗೆ ಹಿರಿಯ ಸ್ನೇಹಿತರಾಗೇ ಉಳಿದರೇ ವಿನಃ ಹಿರಿಯ-ಕಿರಿಯ ಇತ್ಯಾದಿ ಭಾವನೆಗಳು ನನಗಾಗಲಿ ಅವರುಗಳಿಗಾಗಲಿ ಸುಳಿಯಲೇ ಇಲ್ಲ.
(ಇನ್ನು ನನ್ನ ಸಕ್ಕರೆ ಕಾಯಿಲೆ ಆನುವಂಶಿಕವಾಗಿ ಬಂದದ್ದು. ಅದು ನನ್ನ ತಾತ ಮುತ್ತಾತಂದಿರಿಗೂ ಇತ್ತು, ನನ್ನ ಅಣ್ಣ ತಮ್ಮಂದಿರಿಗೂ ಇದೆ).
ಹುಟ್ಟುವ ಮುನ್ನಿನ ಕೆಲವು ಪವಾಡ ಸದೃಶ ಸಂಗತಿಗಳು
ನಾನು ನನ್ನ ತಾಯಿಯ ಹೊಟ್ಟೆಯಲ್ಲಿ ಐದು ತಿಂಗಳ ಮಗುವಾಗಿದ್ದಾಗ ಒಂದು ಪವಾಡ ನಡೆಯಿತಂತೆ. ಆಗ ಮಳೆಗಾಲ, ನನ್ನ ತಾಯಿ ಹೆರಿಗೆಗೆಂದು ತನ್ನ ಅಣ್ಣನೊಡನೆ ತವರಿಗೆ ಹೋಗುತ್ತಿದ್ದಳಂತೆ. ಹಾದಿಯಲ್ಲಿ ನರ್ಮದಾ ನದಿ ಎದುರಾಗುತ್ತದೆ. ಮಳೆಗಾಲವಾದ್ದರಿಂದ ನದಿ ತುಂಬಿ ಹರಿಯುತ್ತಿತ್ತು. ಅಂಬಿಗನು ಗರ್ಭಿಣಿಯಾಗಿದ್ದ ನನ್ನ ತಾಯಿಯನ್ನು ಆಕೆಯ ಅಣ್ಣನೊಡನೆ ದೋಣಿಗೆ ಹತ್ತಿಸಿಕೊಳ್ಳಲು ಒಪ್ಪಲಿಲ್ಲ. ಗರ್ಭಿಣಿ ತಂಗಿಯನ್ನು ಅಣ್ಣನೊಡನೆ ದೋಣಿಯಲ್ಲಿ ಕೂರಿಸಿಕೊಳ್ಳುವುದು ಅಮಂಗಳಕರ, ದೋಣಿ ಮುಳುಗುವ ಅಪಾಯವಿದೆ ಎಂಬುದು ಅಲ್ಲಿನ ನಂಬಿಕೆ. ಯಾರಾದರೂ ಒಬ್ಬರನ್ನು ಬೇಕಾದರೆ ಆಚೆ ದಡಕ್ಕೆ ಕರೆದೊಯ್ಯಬಲ್ಲೆ. ನಿಮಗಾಗಿ ದೋಣಿಯಲ್ಲಿ ಪ್ರಯಾಣಿಸುವ ಅರವತ್ತು ಜನರ ಜೀವದೊಂದಿಗೆ ಚೆಲ್ಲಾಟವಾಡಲಾರೆ ಎಂದು ಅವನು ನಿಷ್ಠುರವಾಗಿ ಹೇಳಿದ. ಆ ವಿಸ್ತಾರವಾದ ನದಿಯಲ್ಲಿ ಆಚೆಯ ದಡ ಸೇರಲು ಅರ್ಧದಿನ ಹಿಡಿಯುತ್ತದೆ. ಆ ದೋಣಿ ಮತ್ತೆ ಮರುದಿನವೇ ಹಿಂದಿರುಗುವುದು. ಬೇರೆ ದಿಕ್ಕು ತೋರದೇ ಅವರಿಬ್ಬರೂ ನದಿಯ ತೀರದಲ್ಲಿದ್ದ ದೇವಸ್ಥಾನದಲ್ಲಿ ತಂಗಿದರು. ಆ ದೇವಸ್ಥಾನದಲ್ಲಿ ಒಬ್ಬ ಸಂತ ವಾಸವಾಗಿದ್ದ. ಆ ಸಂತನ ಹೆಸರಿನಿಂದ ಈಗ ಆ ಪ್ರದೇಶ ’ಸಾಯಿ ಖೇಡಾ’ ಎಂದೇ ಪ್ರಸಿದ್ಧಿ ಹೊಂದಿದೆ. ಆತನನ್ನು ಸಾಯಿಬಾಬಾ ಎಂದೇ ಆ ಭಾಗದ ಜನ ಕರೆಯುತ್ತಿದ್ದರು. ಈತ ಶಿರಡಿಯ ಪ್ರಸಿದ್ಧ ಸಾಯಿಬಾಬಾ ಅಲ್ಲ, ಈತ ಬೇರೆ. ನನ್ನ ತಾಯಿ ತನ್ನ ಈ ಬಿಕ್ಕಟ್ಟನ್ನು ಅವನೆದುರು ಹೇಳಿಕೊಂಡಾಗ ಆತ ನನ್ನ ತಾಯಿಯ ಹೊಟ್ಟೆಯನ್ನು ಒಮ್ಮೆ ಮುಟ್ಟಿದನಂತೆ. ಆಗ ನನ್ನ ತಾಯಿ ಇದೇನು ನೀವು ಏನು ಮಾಡುತ್ತಿರುವುದು? ಎಂದಳು, ಹೊಟ್ಟೆಯಲ್ಲಿರುವ ನಿನ್ನ ಮಗನ ಪಾದಸ್ಪರ್ಶ ಮಾಡುತ್ತಿದ್ದೇನೆ ಇದನ್ನು ನೋಡುತ್ತಿದ್ದ ದೋಣಿ ನಡೆಸುವವನಿಗೂ ಅಚ್ಚರಿಯಾಯಿತು ಬಾಬಾ ನೀವು ಎಂದೂ ಯಾರ ಕಾಲನ್ನೂ ಮುಟ್ಟಿದವರಲ್ಲವಲ್ಲ!. ಆಗ ಬಾಬಾ ಅಯ್ಯೋ ಅಜ್ಞಾನಿ. ನಾನು ಮುಟ್ಟುತ್ತಿರುವುದು ಬೇರಾರ ಕಾಲನ್ನೂ ಅಲ್ಲ, ಸಾವಿರಾರು ಜೀವಗಳನ್ನು ಪಾರುಗಾಣಿಸಬಲ್ಲ ಶಕ್ತಿ ಈ ಗರ್ಭದಲ್ಲಿದೆ, ನಿನ್ನ ಅರವತ್ತು ಪ್ರಯಾಣಿಕರಿಗೆ ಏನೂ ಆಗುವುದಿಲ್ಲ. ಇವರನ್ನು ಕೂಡಲೆ ಆಚೆಯ ದಡ ಮುಟ್ಟಿಸುಎಂದು ಅಪ್ಪಣೆ ಮಾಡಿದನಂತೆ. ಆಗಲೇ ನನಗೆ ಗೊತ್ತಾದದ್ದು ನಾನೊಬ್ಬ ಮಹಾತ್ಮನನ್ನು ಹೆರಲಿದ್ದೇನೆ ಎಂದು ನನ್ನ ತಾಯಿ ಆಗಾಗ ಹೇಳುತ್ತಿದ್ದಳು
ಆಗ ನಾನು ಇದರಲ್ಲಿ ಪವಾಡವೇನಿದೆ? ಆ ಸಂತ ಮಹಾಜಾಣ! ಜೊತೆಗೆ ಹಾಸ್ಯಪ್ರವೃತ್ತಿಯವನೂ ಕೂಡ. ಆ ಅಂಬಿಗನನ್ನು ಮೂರ್ಖನನ್ನಾಗಿ ಮಾಡಿದ ಅಷ್ಟೇ. ಗರ್ಭಿಣಿಯೊಬ್ಬಳು ಅಣ್ಣನೊಡನೆ ದೋಣಿ ಹತ್ತಿದರೆ ಅದು ಮುಳುಗುತ್ತದೆ ಎನ್ನುವುದಕ್ಕೆ ಏನಾದರೂ ಅರ್ಥವಿದೆಯೇ? ಹಿಂದೆ ಕಂಸನು ತನ್ನ ತಂಗಿ ದೇವಕಿಯನ್ನು ಕೂರಿಸಿಕೊಂಡು ಗಂಡನ ಮನೆಗೆ ಮೆರವಣಿಗೆ ಹೊರಟಿದ್ದಾಗ ಆಕಾಶವಾಣಿಯೊಂದು ನಿನ್ನ ಸಾವು ನಿನ್ನ ತಂಗಿಯ ಗರ್ಭದಲ್ಲೇ ಅಡಗಿದೆ ಎಂದು ಎಚ್ಚರಿಸಿತಂತೆ. ಆಗ ಕಂಸನು ದೇವಕಿಯನ್ನು ಸೆರೆಮನೆಯಲ್ಲಿ ಇರಿಸಿ ಅವಳಿಗೆ ಹುಟ್ಟುತ್ತಿದ್ದ ಪ್ರತಿಯೊಂದು ಮಗುವನ್ನೂ ಕೊಲ್ಲುತ್ತಿದ್ದ. ಎಂಟನೆಯ ಮಗುವಾಗಿ ಕೃಷ್ಣನು ಒಂದು ನಡುರಾತ್ರಿ ಜನಿಸಿದಾಗ ಪವಾಡಸದೃಶವಾಗಿ ಆ ಮಗುವನ್ನು ಯಮುನೆಯ ಆಚೆಯ ದಡಕ್ಕೆ ನಂದಗೋಕುಲಕ್ಕೆ ಸಾಗಿಸಲಾಯಿತು. ವಸುದೇವನು ಬುಟ್ಟಿಯಲ್ಲಿ ಮಗುವನ್ನು ಹೊತ್ತು ಯಮುನೆಯನ್ನು ದಾಟುತ್ತಿದ್ದಾಗ ಪ್ರವಾಹವು ವಸುದೇವನ ಎದೆಯ ಮಟ್ಟವನ್ನೂ ಮೀರಿ ತಲೆಯ ಮೇಲೆ ಬುಟ್ಟಿಯಲ್ಲಿ ಮಲಗಿದ್ದ ಕೃಷ್ಣನ ಪಾದಗಳನ್ನು ಸ್ಪರ್ಶಿಸಿ ಆಮೇಲೆ ಇಳಿಯಿತಂತೆ. ಈ ಮೂಢ ನಂಬಿಕೆಯ ಮೂಲ ಬಹುಶಃ ಆ ಕಥೆಯಲ್ಲಿರಬೇಕುಎಂದಿದ್ದೆ
ಆದರೆ ಸಾಯಿಬಾಬಾನ ಈ ವರ್ತನೆ ಇಡೀ ಹಳ್ಳಿಯಲ್ಲೇ ಸಂಚಲನ ಉಂಟು ಮಾಡಿತು. ಸಾಲದ್ದಕ್ಕೆ ಇದಾದ ಇನ್ನೊಂದು ತಿಂಗಳಲ್ಲಿ ಇನ್ನೊಂದು ಪವಾಡ ನಡೆಯಿತು. ಬದುಕಿನಲ್ಲಿ ಪವಾಡದ ಸ್ವರೂಪವನ್ನು ಪಡೆದುಕೊಳ್ಳುವ ಲೆಕ್ಕವಿಲ್ಲದಷ್ಟು ಆಕಸ್ಮಿಕಗಳು ಸಂಭವಿಸುತ್ತಿರುತ್ತವೆ. ನನ್ನ ತಾಯಿ ತವರಿನಲ್ಲಿದ್ದಾಗ ಇದೇ ತರಹದ ಪ್ರವಾಹ ಉಕ್ಕಿ ಇಡೀ ಹಳ್ಳಿ ನೀರಿನಲ್ಲಿ ಮುಳುಗಿತ್ತು. ಆ ಪ್ರವಾಹ ಎಷ್ಟು ತೀವ್ರವಾಗಿತ್ತೆಂದರೆ ಒಂದೇ ಸಮನೆ ಹರಿಯುತ್ತಿದ್ದ ಪ್ರವಾಹವನ್ನು ಸಮುದ್ರವು ಒಮ್ಮೆಲೆ ಸ್ವೀಕರಿಸಲಾರದೆ ನದಿಯ ಪ್ರವಾಹ ಹಿಮ್ಮುಖವಾಗಿ ಹರಿಯಲಾರಂಭಿಸಿತಂತೆ. ನನ್ನ ತಾಯಿಯ ತವರು ಮನೆಯಲ್ಲಿ ಎರಡು ಮಹಡಿಗಳಿವೆ. ಮೊದಲ ಮಹಡಿ ಪೂರ್ತಿಯಾಗಿ ಮುಳುಗಿದ ಮೇಲೆ ಮನೆಮಂದಿಯೆಲ್ಲ ಎರಡನೆಯ ಮಹಡಿ ಏರಿದರು. ಸಾಯಿಬಾಬಾ ಹೇಳಿದ್ದು ನಿಜವೇ ಆದರೆ ಈಗ ಏನಾದರೂ ಪವಾಡ ಸಂಭವಿಸಲೇ ಬೇಕು ಎಂದು ನನ್ನ ತಾಯಿ ಒಂದೇ ಸಮನೆ ಮೊರೆ ಇಡುತ್ತಿದ್ದಳಂತೆ. ಆಗ ಎರಡನೆಯ ಮಹಡಿಯಲ್ಲಿ ನನ್ನ ತಾಯಿಯ ಹೊಟ್ಟೆಯ ಮಟ್ಟಕ್ಕೆ ಏರಿದ ನೀರು ಬಳಿಕ ನಿಧಾನವಾಗಿ ಇಳಿಯಿತಂತೆ. ಹೀಗೆ ನಾನು ಹುಟ್ಟುವ ಮುನ್ನ ನಡೆದ ಈ ಎರಡು ಪವಾಡಗಳನ್ನು ನಾನು ನನ್ನ ತಾಯಿಯಿಂದ ಕೇಳಿ ತಿಳಿದದ್ದು. ಇನ್ನು ಹುಟ್ಟಿದ ಮೇಲೆ ಹಳ್ಳಿಯ ಜನರೆಲ್ಲ ನನ್ನನ್ನು ಅವತಾರಪುರುಷ ಎಂದೇ ಭಾವಿಸಿ ಗೌರವಿಸುತ್ತಿದ್ದರು. ವಯಸ್ಸಾದವರೂ ಕೂಡ ಭಕ್ತಿಯಿಂದ ನನ್ನ ಕಾಲಿಗೆ ಬೀಳುತ್ತಿದ್ದರು.
೧೯೩೧ರಲ್ಲಿ ಮಧ್ಯಪ್ರದೇಶದ ಕುಚ್‌ವಾಡಾ ಎಂಬ ಹಳ್ಳಿಯಲ್ಲಿ ಜನನ
(ಪೂರ್ವದೇಶಗಳಲ್ಲಿ ಹುಟ್ಟುಹಬ್ಬಗಳನ್ನು ಆಚರಿಸುವ ಪದ್ಧತಿ ಇಲ್ಲ. ಕೃಷ್ಣ ಜನಿಸಿದ್ದು ಯಾವ ದಿನ? ಅದಕ್ಕೇನಾದರೂ ದಾಖಲಾತಿಗಳುಂಟೇ? ನಮ್ಮ ಬಳಿ ಅಂತಹ ದಾಖಲೆಗಳಿಲ್ಲ, ಒಂದುವೇಳೆ ಇದ್ದರೆ ಒಂದಕ್ಕೊಂದು ಹೊಂದದ ಹಲವು ದಾಖಲೆಗಳಿರಬಹುದು. ೧೧ನೇ ಡಿಸೆಂಬರ್‌ನಲ್ಲಿ ನಾನು ಜನಿಸಿದೆ ಎಂದ ಮಾತ್ರಕ್ಕೆ ಅದಕ್ಕೂ ಹಿಂದೆ ನಾನು ಇರಲೇ ಇಲ್ಲ ಎಂದು ಸಾಧಿಸಿದಂತಾಗುವುದೇ? ಹುಟ್ಟಿದ ಮೇಲೆ ಮೂರು ದಿನಗಳ ಕಾಲ ನಾನು ಏನು ಮಾಡಿದರೂ ಹಾಲೇ ಕುಡಿಯಲಿಲ್ಲವಂತೆ. ಎಲ್ಲರೂ ಆತಂಕ ಪಟ್ಟುಕೊಂಡು ಹಾಲು ಕುಡಿಸಲು ಒಂದೇ ಸಮನೆ ಬಲವಂತ ಮಾಡುತ್ತಿದ್ದರು. ಆದರೆ ನನ್ನ ಕಷ್ಟ ಅವರಿಗೆ ಹೇಗೆ ಅರ್ಥವಾಗಬೇಕು? ಹಿಂದಿನ ಜನ್ಮದಲ್ಲಿ ನನ್ನ ಉಪವಾಸ ವ್ರತ ಮೂರುದಿನ ಮೊದಲೇ ಭಗ್ನವಾಗಿ ನಾನು ಅಸುನೀಗಿದ್ದೆನಷ್ಟೇ. ಈ ಜನ್ಮದಲ್ಲಿ ಆ ಮೂರು ದಿನಗಳ ನೆನಪು ನನ್ನ ಅರಿವಿಗಿತ್ತು. ಆದ್ದರಿಂದ ನಾಲ್ಕನೆಯ ದಿನ ಹಾಲು ಕುಡಿಯಲು ಪ್ರಾರಂಭಿಸಿದಾಗ ಅವರೆಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಇದನ್ನೆಲ್ಲ ನಾನು ಹೆಚ್ಚು ಚರ್ಚಿಸಲಾರೆ. ಇವೆಲ್ಲ ಕಪೋಲ ಕಲ್ಪಿತ ಎಂದು ಸುಲಭವಾಗಿ ಹೇಳಬಹುದು. ಇದನ್ನೆಲ್ಲ ವೈಜ್ಞಾನಿಕವಾಗಿ ಸಿದ್ಧ ಮಾಡಿ ತೋರಿಸಲು ಬರುವುದಿಲ್ಲ. ಅಲ್ಲದೆ ನನ್ನ ಬಗ್ಗೆ ಅಪಾರವಾದ ವಿಶ್ವಾಸ ಇಟ್ಟುಕೊಂಡಿರುವ ನೀವು ನನ್ನ ಒಂದೊಂದು ಮಾತುಗಳನ್ನೂ ವಿಚಾರಿಸದೆ, ಪ್ರಶ್ನಿಸದೆ ನಂಬುವಂತಹವರು. ಇಂತಹ ಕಥೆಗಳು ನಿಮ್ಮಲ್ಲಿ ಮೂಢ ನಂಬಿಕೆಗಳನ್ನು ಉಂಟು ಮಾಡುವ ಸಾಧ್ಯತೆಯೇ ಹೆಚ್ಚು.
ಹುಟ್ಟೂರು
ನನ್ನ ಹುಟ್ಟೂರು ಆಗಾಗ ನನಗೆ ನೆನಪಾಗುತ್ತದೆ. ವಿಧಿ ನನಗಾಗಿ ಆ ಊರನ್ನೇ ಏಕೆ ಆರಿಸಿತೋ ತಿಳಿಯದು. ಬಲು ಸೊಗಸಾದ ಹಳ್ಳಿ ಅದು. ನಾನು ಜಗತ್ತನ್ನೆಲ್ಲ ಸುತ್ತಿ ಬಂದಿದ್ದೇನೆ ಆದರೆ ಅಂತಹ ಹಳ್ಳಿಯನ್ನು ಇನ್ನೆಲ್ಲೂ ಕಂಡಿಲ್ಲ. ಹತ್ತಾರು ಗುಡಿಸಲುಗಳು (ಅಲ್ಲಿ ಇಟ್ಟಿಗೆಯ ಮನೆ ಎಂದರೆ ಬಹುಶಃ ಅದು ನಮ್ಮ ಮನೆ ಮಾತ್ರ) ಒಂದು ಚಿಕ್ಕ ಕೆರೆ, ಕೆಲವು ಎತ್ತರವಾದ ಮರಗಳು, ಆ ಹಳ್ಳಿಯಲ್ಲೇ ಶಾಲೆ ಎಂಬುದೇ ಇರಲಿಲ್ಲ! ನನ್ನ ಬದುಕಿನಲ್ಲಿ ಇದು ತುಂಬ ಮುಖ್ಯವಾದುದು. ಒಂಬತ್ತು ವರ್ಷಗಳ ಕಾಲ ನಾನು ಅಶಿಕ್ಷಿತನಾಗಿಯೇ ಉಳಿದೆ. ಮನುಷ್ಯನ ಬದುಕಿನ ಮೊದಲ ಒಂಬತ್ತು ವರ್ಷಗಳು ತುಂಬ ಮಹತ್ವದ್ದು. ಆ ಬಳಿಕ ಶಿಕ್ಷಣ ನೀಡಿದರೂ ನಾವು ಶಿಕ್ಷಿತರಾಗಲಾರೆವು. ಈ ದೃಷ್ಟಿಯಿಂದ, ಹಲವು ಡಿಗ್ರಿಗಳನ್ನು ಹೊಂದಿರುವ ನಾನು, ಇಂದಿಗೂ ಅಶಿಕ್ಷಿತನೇ. ಎಂತೆಂತಹ ಮೂರ್ಖರಿಗೇ ಡಿಗ್ರಿ ಸಿಗುತ್ತದಂತೆ, ನನ್ನಂತಹ ಅಶಿಕ್ಷಿತನಿಗೆ ಸಿಗದೇ! ಅದಲ್ಲ ಮುಖ್ಯ. ಒಂಬತ್ತು ವರ್ಷಗಳ ಕಾಲ ನಾನು ಶಾಲೆಗೆ ಹೋಗಲೇ ಇಲ್ಲ. ಶಾಲೆ, ರಸ್ತೆ, ರೈಲು, ಅಂಚೆ ಕಛೇರಿ ಯಾವುದೂ ಇರದ ಹಳ್ಳಿ ಅದು. ಆ ಹಳ್ಳಿಯೇ ಒಂದು ಪ್ರತ್ಯೇಕವಾದ ಲೋಕವಾಗಿತ್ತು. ಕಾಲ-ದೇಶಗಳಲ್ಲಿ ನಾನಿಂದು ಆ ಹಳ್ಳಿಯಿಂದ ದೂರವಾಗಿದ್ದರೂ ಇಂದಿಗೂ ನನ್ನ ಮನಸ್ಸು ಆ ಲೋಕದಲ್ಲಿಯೇ ವಾಸಿಸುತ್ತಿದೆ. ನನ್ನ ಹಳ್ಳಿಯನ್ನು ನೆನೆದಾಗಲೆಲ್ಲ ರಸ್ಕಿನ್‌ನ ಅಂಟು ದಿಸ್ ಲಾಸ್ಟ್ ಕೃತಿ ನೆನಪಾಗುತ್ತದೆ. ಐವತ್ತು ವರ್ಷಗಳ ನಂತರವೂ, ಈಗಲೂ, ನನ್ನ ಹಳ್ಳಿಯಲ್ಲಿ ರಸ್ತೆಗಳಿಲ್ಲ, ಆಸ್ಪತ್ರೆಗಳಿಲ್ಲ, ಪೊಲೀಸ್ ಠಾಣೆಯಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅಲ್ಲಿ ಯಾರೂ ಕಾಯಿಲೆ ಬೀಳುವುದಿಲ್ಲ, ಯಾವುದೇ ಅಪರಾಧಗಳೂ ಆಗುವುದಿಲ್ಲ. ರೈಲು ಎಂದರೆ ಹೇಗಿರುತ್ತದೆ ಎಂಬುದನ್ನೇ ಅರಿಯದ ಅಲ್ಲಿನ ಎಷ್ಟೊ ಮಂದಿಯನ್ನು ನಾನು ಬಲ್ಲೆ. ಅವರು ಹಳ್ಳಿಯಿಂದಾಚೆಗೆ ಹೋದವರೇ ಅಲ್ಲ, ತುಂಬ ಸರಳವಾದ, ಶುದ್ಧವಾದ ಬದುಕನ್ನು ನಡೆಸುವ ಜನ ಅವರು. ಆ ಹಳ್ಳಿಗಿಂತ, ನಾನು ಹುಟ್ಟಿದ ಮನೆಗಿಂತ, ನನಗೆ ಅಲ್ಲಿಯ ಜನ ಸದಾ ನೆನಪಾಗುತ್ತಾರೆ.
ಬಾಲ್ಯದ ದಿನಗಳು
ನನ್ನ ತಂದೆ ತಾಯಿಗಳಿಗೆ ನಾನು ಹಿರಿಯ ಮಗ. ಆದರೆ ನಾನು ಬೆಳೆದದ್ದೆಲ್ಲ ಅಜ್ಜಿ-ತಾತನ (ತಾಯಿಯ ತಂದೆ ತಾಯಿ) ಆರೈಕೆಯಲ್ಲಿ. ಮಕ್ಕಳು ಪಟ್ಟಣ ಸೇರಿದ್ದರಿಂದ ತಮ್ಮ ಕೊನೆಗಾಲವನ್ನು ಮೊಮ್ಮಗನ ಆಟ ಪಾಠ ನೋಡುತ್ತ ಕಳೆಯೋಣವೆಂದು ನನ್ನ ಅಜ್ಜಿ ತಾತ ನನ್ನನ್ನು ಮಗುವಾಗಿದ್ದಾಗಲೇ ಹಳ್ಳಿಗೆ ಕರೆಸಿಕೊಂಡರು. ಅಪ್ಪ ಅಮ್ಮನಿಗಿಂತ ಹೆಚ್ಚಾಗಿ ನನ್ನನ್ನು ಸಾಕಿದರು. ನಾನು ಸತ್ತ ಮೇಲೆಯೇ ನೀನು ನಿನ್ನ ಅಪ್ಪ ಅಮ್ಮನ ಬಳಿ ಹೋಗುವುದು ಎಂದು ತಾತ ಹೇಳುತ್ತಿದ್ದ. ಅವರಿಬ್ಬರು ಹಾಗು ಅವರ ಜೊತೆಗಿದ್ದ ಒಬ್ಬ ಮುದಿ ಸೇವಕ ಭೋರ ಈ ಮೂವರನ್ನು ಬಿಟ್ಟರೆ ನನಗೆ ಬೇರಾರೂ ಬಂಧುಗಳೂ ಇರಲಿಲ್ಲ. ಚಿಕ್ಕ ಹುಡುಗನಾದ ನನಗೆ ಅವರು ಸಂಗಡಿಗರಾಗಲೂ ಸಾಧ್ಯವಿರಲಿಲ್ಲ. ೨೦೦ ಜನರಿದ್ದ ಆ ಹಳ್ಳಿಯಲ್ಲಿ ನನ್ನ ತಾತನದೇ ಶ್ರೀಮಂತ ಮನೆತನ. ಹಾಗಾಗಿ ನನ್ನ ತಾತ ಇತರ ಹುಡುಗರೊಡನೆ ಆಟವಾಡಲೂ ನನ್ನನ್ನು ಬಿಡುತ್ತಿರಲಿಲ್ಲ. ಹಾಗಾಗಿ ಚಿಕ್ಕಂದಿನಿಂದಲೂ ನಾನು ಸ್ನೇಹಿತರೇ ಇಲ್ಲದೇ ಏಕಾಂಗಿಯಾಗಿ ಬೆಳೆದೆ. ಇದು ಮುಂದೆ ನನ್ನ ಮೇಲೆ ತುಂಬ ಗಾಢವಾದ ಪರಿಣಾಮ ಉಂಟು ಮಾಡಿತು. ಮುಂದೆ ನನಗೆ ಸ್ನೇಹಿತರ ಬೆಳೆಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಈಗಲೂ ನನಗೆ ಸ್ನೇಹಿತರಿಲ್ಲ, ಆತ್ಮೀಯರು ಪರಿಚಯಸ್ಥರು ಇದ್ದಾರೆ ಅಷ್ಟೇ. ನಮ್ಮ ಮನೆಯ ಸಮೀಪದಲ್ಲಿ ಒಂದು ಕೆರೆ ಇತ್ತು. ಗೆಳೆಯರಿಲ್ಲದ ನಾನು ಆ ಕೆರೆಯ ದಡದಲ್ಲಿ ಗಂಟೆಗಟ್ಟಲೆ ಸುಮ್ಮನೆ ಕುಳಿತು ಸುಖವಾಗಿ ಕಾಲ ಕಳೆಯುತ್ತಿದ್ದೆ. ಮಕ್ಕಳಿಗೆ ಸಹಜವಾದ ಯಾವ ಆಟಪಾಟಗಳಲ್ಲೂ ನನಗೆ ಆಸಕ್ತಿ ಹುಟ್ಟಲಿಲ್ಲ. ಕ್ರಮೇಣ ಈ ಒಂಟಿತನವೇ ನನಗೆ ಒಗ್ಗಿಹೋಯಿತು. ಯಾರನ್ನೂ ಯಾವುದಕ್ಕೂ ಅವಲಂಬಿಸದೇ ನನ್ನೊಳಗಿನ ಆನಂದವನ್ನು ಪೂರ್ತಿಯಾಗಿ ಅನುಭವಿಸಲು ಅದು ದಾರಿ ಮಾಡಿಕೊಟ್ಟಿತು. ಹೀಗೆ ಮೊದಲ ಏಳು ವರ್ಷಗಳನ್ನು ಯಾರ ತಂಟೆಯೂ ಇಲ್ಲದಂತೆ ಕಳೆದೆ. ನಾನು ಒಂಟಿತನವನ್ನು ಇಷ್ಟಪಡುತ್ತೇನೆ ಎಂಬುದನ್ನು ಅರಿತ ನನ್ನ ಅಜ್ಜಿ-ತಾತಂದಿರು ಈ ಏಕಾಂತಕ್ಕೆ ಭಂಗ ಬರದಂತೆ ತುಂಬಾ ಜಾಗರೂಕತೆಯಿಂದ ನಡೆದುಕೊಳ್ಳುತ್ತಿದ್ದರು. ಈಗಲೂ ನೆನೆಸಿಕೊಂಡರೆ ಕೆಲವೊಮ್ಮೆ ವಿಷಾದ ಆಗುತ್ತದೆ. ಸಾಮಾನ್ಯವಾಗಿ ಮನೆಯಲ್ಲಿ ಹಿರಿಯರಿದ್ದಾಗ ಮಕ್ಕಳಿಗೆ ತಂಟೆ ಮಾಡದಂತೆ ಬುದ್ಧಿ ಹೇಳುವುದು ರೂಢಿ. ಆದರೆ ಇಲ್ಲಿ ನನ್ನ ಏಕಾಂತಕ್ಕೆ ಭಂಗ ಬರಬಾರದೆಂದು ಹಿರಿಯರು ಸದ್ದು ಮಾಡದೇ ಸನ್ನೆಯಲ್ಲೇ ಮಾತಾಡಿಕೊಳ್ಳುತ್ತಿದ್ದರು. ಮೌನವೆನ್ನುವುದೇ ಹಾಗೆ, ಅದು ಸಾಂಕ್ರಾಮಿಕವಾದುದು. ಅದರಲ್ಲೂ ಯಾವುದೇ ನಿಗ್ರಹ, ಒತ್ತಡಗಳಿರದ ಮಕ್ಕಳ ಮೌನವಂತೂ ತುಂಬ ಪರಿಣಾಮಕಾರಿಯಾದುದು. ಒಂದು ಪ್ರಜ್ಞಾವಂತ ಸಮಾಜದಲ್ಲಿ ಹಿರಿಯರು ಮಕ್ಕಳಿಗೆ ಮಾರ್ಗದರ್ಶನ ಮಾಡುವುದನ್ನು ಬಿಟ್ಟು ಕಿರಿಯರಿಂದ ತಾವು ಕಲಿಯುತ್ತಾರೆ ಎನ್ನುವುದು ನನ್ನ ತಿಳುವಳಿಕೆ. ನನ್ನಲ್ಲಿ ಸ್ತ್ರೀಕುಲದ ಬಗ್ಗೆ ಪೂಜ್ಯಭಾವನೆ ಮೂಡಿಸಿದ ನನ್ನಜ್ಜಿ
ಇನ್ನು ನನ್ನ ಅಜ್ಜಿ, ಇಡೀ ಸ್ತ್ರೀಕುಲದ ಬಗ್ಗೆ ನಾನು ಮನಸ್ಸಿನಲ್ಲಿ ಪೂಜ್ಯಭಾವವನ್ನು ಇರಿಸಿಕೊಳ್ಳಲು ಆಕೆಯೇ ಕಾರಣ. ತುಂಬಾ ಸರಳವಾಗಿ ಕಾಣಿಸುತ್ತಿದ್ದ ಆಕೆ ಮಹಾ ಸೂಕ್ಷ್ಮಮತಿ. ಒಂದು ರಾತ್ರಿ ನಾನು ನಿದ್ರಿಸುತ್ತಿರುವೆನೆಂದು ಭಾವಿಸಿ ನನ್ನ ಅಜ್ಜಿ-ತಾತ ಮಾತಾಡಿಕೊಳ್ಳುತ್ತಿದ್ದರು. ಆ ಮಾತುಗಳನ್ನು ನಾನು ಸದ್ದಿಲ್ಲದೆ ಕೇಳಿಸಿಕೊಳ್ಳುತ್ತಿದ್ದೆ. ತಾತ ಅಜ್ಜಿಗೆ ಹೇಳಿದ ನೀನು ಹೇಳುವುದು ಸರಿ. ಆದರೆ ಎಷ್ಟಾದರೂ ಅವನು ನಮ್ಮ ಮಗನಲ್ಲ. ನಾಳೆ ದಿನ ಅವರ ಅಪ್ಪ ಬಂದು ಅವನಿಗೆ ನಾಲ್ಕಕ್ಷರವನ್ನೂ ಕಲಿಸದೇ ಕಾಡು ಮನುಷ್ಯನಂತೆ ಬೆಳೆಸಿದಿರಲ್ಲ ಎಂದು ನಮ್ಮ ಮೇಲೆ ರೇಗಿದರೆ ಏನು ಗತಿ? ಅದಕ್ಕೆ ಅಜ್ಜಿ ಏನೂ ಅಡ್ಡಿಯಿಲ್ಲ. ಲೋಕದಲ್ಲಿ ಎಲ್ಲರೂ ಕಲಿತವರೇ, ನಾಗರೀಕರೇ. ಆದರೆ ಏನು ಲಾಭ? ಈಗ ನಿನ್ನನ್ನೇ ತೆಗೆದುಕೋ, ನೀನು ಕಲಿತವನು, ನಾಗರೀಕ. ಇದರಿಂದ ನಿನಗೇನು ಪ್ರಯೋಜನವಾಯಿತು. ಅವನೂ ನಿನ್ನ ಹಾಗೆಯೇ ಆಗಬೇಕೇ? ಅವರ ಅಪ್ಪ ಏನು ಮಾಡಬಲ್ಲ? ರೇಗಿ ಕೂಗಾಡಬಲ್ಲ ಅಷ್ಟೇ. ಏನಾದರೂ ಕೂಗಿಕೊಳ್ಳಲಿ. ಮಗುವಿನ ಭವಿಷ್ಯ ನಮಗೆ ಮುಖ್ಯ. ನಾವಂತೂ ಹೇಗೋ ಬೆಳೆದು ಏನನ್ನೂ ಸಾಧಿಸದೇ ಸಾಯುವ ಕಾಲಕ್ಕೆ ಬಂದು ಮುಟ್ಟಿದೆವು. ಈ ಮಗುವಾದರೂ ನಮ್ಮಂತಾಗದಿರಲಿ. ನಾವು ಅವನಿಗೆ ಏನನ್ನು ಕಲಿಸಬಲ್ಲೆವು? ಹೆಚ್ಚೆಂದರೆ ಅವನನ್ನೂ ನಮ್ಮಂತೆ ಮಾಡಬಲ್ಲೆವು ಅಷ್ಟೇ. ಆದ್ದರಿಂದ ಅವನ ಪಾಡಿಗೆ ಅವನನ್ನು ಬಿಟ್ಟುಬಿಡೋಣ. ನನಗೆ ಭರವಸೆ ಇದೆ, ಅವನ ಬದುಕನ್ನು ಅವನೇ ರೂಪಿಸಿಕೊಳ್ಳಬಲ್ಲ. ಎನ್ನುತ್ತಿದ್ದಳು. ನಾಳೆ ದಿನ ನನ್ನ ತಂದೆಗೆ ಉತ್ತರಿಸಬೇಕಾದವನು ತಾನು ಎಂಬುದು ನನ್ನ ತಾತನ ಚಿಂತೆ. ಪ್ರಾಥಮಿಕ ಗಣಿತ ಹಾಗು ಅಕ್ಷರಾಭ್ಯಾಸ ಹೇಳಿಕೊಡುವ ಒಬ್ಬ ಶಿಕ್ಷಕನನ್ನು ಮನೆಪಾಠಕ್ಕೆ ನೇಮಿಸಬೇಕೆಂದು ನನ್ನ ತಾತ ಬಯಸಿದ. ಆದರೆ ನನ್ನ ಅಜ್ಜಿ ಅದಕ್ಕೆ ಕಿಂಚಿತ್ತೂ ಆಸ್ಪದ ನೀಡಲಿಲ್ಲ. ಅಷ್ಟಕ್ಕೂ ನನ್ನ ತಂದೆ ಬಂದು ಪ್ರಶ್ನಿಸುವ ಮುನ್ನವೇ ತಾತ ಇಹಲೋಕವನ್ನು ತೊರೆದಿದ್ದ.
ತೊಂಬತ್ತು ವರ್ಷಗಳ ಹಿಂದೆ ಭಾರತದಂತಹ ದೇಶದಲ್ಲಿ ನನ್ನ ಅಜ್ಜಿ ಪ್ರೀತಿಸಿ ಮದುವೆಯಾಗುವ ಧೈರ್ಯ ಮಾಡಿದಳು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ೭-೮ರ ವಯಸ್ಸಿಗೆಲ್ಲ ಹೆಣ್ಣು ಮಕ್ಕಳಿಗೆ ಮದುವೆ ಮಾಡುತ್ತಿದ್ದ ಆ ಕಾಲದಲ್ಲಿ ಇವಳು ಇಪ್ಪತ್ತನಾಲ್ಕರ ಹರಯದವರೆಗೂ ಅವಿವಾಹಿತಳಾಗಿಯೇ ಇದ್ದಳು. ನಾನು ಅಜ್ಜಿಯನ್ನು ಕೇಳುತ್ತಿದ್ದೆ ಅಜ್ಜಿ, ಮದುವೆಯಾಗಲು ಅಷ್ಟೇಕೆ ತಡ ಮಾಡಿದೆ? ಆ ಕಾಲಕ್ಕೆ ಛತ್ತರ್‌ಪುರದ ಮಹಾರಾಜನೂ ಬಯಸುವಂತಹ ಚೆಲುವೆಯಾಗಿದ್ದವಳು ನೀನು ನಾನೇನೋ ತಮಾಷೆಗೆ ಹಾಗೆ ಕೇಳಿದ್ದೆ. ಅದಕ್ಕೆ ಅವಳು ನಿನಗೆ ಗೊತ್ತಿಲ್ಲ ಅವನು ನಿಜಕ್ಕೂ ನನ್ನನ್ನು ಬಯಸಿದ್ದ. ಆದರೆ ನನಗೆ ಇಷ್ಟವಾಗಲಿಲ್ಲ, ಅವನನ್ನು ತಿರಸ್ಕರಿಸಿದ್ದೆ. ಅಂತಹ ಇನ್ನೂ ಎಷ್ಟೋ ಜನ ನನ್ನನ್ನು ವರಿಸಲು ಬಯಸಿದ್ದರು ಎನ್ನಬೇಕೇ! ನನ್ನ ಅಜ್ಜಿಯ ತಂದೆ ಒಬ್ಬ ತತ್ವಪದಕಾರನಾಗಿದ್ದ. ಈಗಲೂ ಅವನ ಪದಗಳನ್ನು ಖಜುರಾಹೋ ಹಾಗು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಾಡುತ್ತಾರೆ. ತನ್ನ ಮಗಳ ಮನಸ್ಸಿಗೆ ಇಷ್ಟವಾಗುವವರೆಗೂ ಅವಳನ್ನು ಯಾರಿಗೂ ಬಲವಂತವಾಗಿ ಮದುವೆ ಮಾಡಲಾರೆ ಎಂದು ಅವನು ಮೊದಲೇ ಹೇಳಿಬಿಟ್ಟಿದ್ದನಂತೆ. ಹೀಗೆ ಯೋಗಾಯೋಗದಿಂದ ಅವಳು ನನ್ನ ಅಜ್ಜನನ್ನು ಪ್ರೀತಿಸಿ ಮದುವೆಯಾದಳು. ನಾನು ಆಶ್ಚರ್ಯದಿಂದ ಕೇಳುತ್ತಿದ್ದೆ. ಛತ್ತರ್‌ಪುರದ ಮಹಾರಾಜನನ್ನೇ ತಿರಸ್ಕರಿಸಿದ ನೀನು ಈ ಸಾಧಾರಣ ವ್ಯಕ್ತಿಯ ಕೈ ಹಿಡಿಯಲು ಕಾರಣವೇನು? ಇವನೇನು ಸ್ಫುರದ್ರೂಪಿಯಲ್ಲ, ಪ್ರತಿಭಾವಂತನಲ್ಲ, ಇವನನ್ನು ಏಕೆ ಪ್ರೀತಿಸಿದೆ? ಆಗ ಆಕೆ ನೀನು ನನಗೆ ಅರ್ಥವಾಗದ ಪ್ರಶ್ನೆ ಕೇಳುತ್ತಿರುವೆ. ಏಕೆ ಎಂಬ ಪ್ರಶ್ನೆಗೆ ಏನು ಉತ್ತರ ಹೇಳಲಿ. ಅವನನ್ನು ನೋಡಿದೆ, ಅದೇನೋ ಅವನಲ್ಲಿ ಅಪರೂಪವಾದ ನಂಬಿಕೆ ಹುಟ್ಟಿಕೊಂಡಿತು, ಆ ನಂಬಿಕೆ ಇಂದಿನವರೆಗೂ ಹಾಗೇ ಇದೆ. ಆಗ ಕೂಡಲೆ ತಾತನನ್ನು ಕೇಳಿದ್ದೆ ಅಜ್ಜಿಯೇನೋ ನಿನ್ನನ್ನು ಇಷ್ಟಪಟ್ಟಳು, ಸರಿ. ಆದರೆ ನೀನು ಅವಳನ್ನು ಮದುವೆಯಾಗಲು ಕಾರಣವೇನು? ಆಗ ಅಜ್ಜ ನಾನೇನು ಕವಿಯಲ್ಲ, ಪ್ರತಿಭಾವಂತನೂ ಅಲ್ಲ. ಆದರೆ ಸೌಂದರ್ಯ ಎಲ್ಲಿದೆ ಎಂದು ನಾನು ಸುಲಭವಾಗಿ ಗುರುತಿಸಬಲ್ಲೆ ಎಂದಿದ್ದ.
ನನ್ನ ತಂದೆ ಕೊನೆಯ ತನಕವೂ ಆ ಮುದುಕನೇ ನನ್ನ ಮಗುವನ್ನು ಹಾಳು ಮಾಡಿದ್ದು ಎಂದು ಹೇಳಿಕೊಳ್ಳುತ್ತಲೇ ಇದ್ದ. ಆಗೆಲ್ಲ ನಾನು ನನ್ನ ತಾತ ನಿನ್ನಿಂದ ನನ್ನನ್ನು ಪಾರು ಮಾಡಿದ. ಅದಕ್ಕೇ ನಿನಗೆ ಅವನ ಮೇಲೆ ಸಿಟ್ಟು. ನನ್ನೆದುರಲ್ಲಿ ಆತನ ಬಗ್ಗೆ ಏನೂ ಹೇಳಬೇಡ. ನಿನಗಿನ್ನೂ ಬೇರೆಯ ಮಕ್ಕಳಿದ್ದಾರಲ್ಲ ಅವರನ್ನು ಬೇಕಾದರೆ ನೀನು ಹಾಳು ಮಾಡು. ಕೊನೆಗೆ ನಿನಗೆ ತಿಳಿಯುತ್ತದೆ ನಿಜವಾಗಿ ಹಾಳು ಮಾಡುವವರು ಯಾರು ಎಂದು ಎಂದು ನಾನು ಅಪ್ಪನೊಡನೆ ವಾದಿಸುತ್ತಿದ್ದೆ.
ಮುಂದೆ ಎಷ್ಟೋ ವರ್ಷಗಳಾದ ಮೇಲೆ ಅಪ್ಪನಿಗೆ ಹೇಳಿದ್ದೆ ನೀನು ನಿನ್ನ ಮಕ್ಕಳನ್ನೆಲ್ಲ ದಾರಿತಪ್ಪಿಸಿಬಿಟ್ಟೆ. ಆದರೆ ನಾನು ಮಾತ್ರ ಕಾಡುಮನುಷ್ಯನಾಗೇ ಉಳಿದುಕೊಂಡೆ. ಅಷ್ಟಕ್ಕೂ ಮುಗ್ಧತೆ ಎಂದರೇನು? ಮುಗ್ಧತೆ ಎಂದರೆ ಕಾಡುತನ ಎಂದೇ ನನ್ನ ಭಾವನೆ. ಏಳು ವರ್ಷಗಳಿಗೊಮ್ಮೆ ನಮ್ಮ ಬದುಕಿನ ಚಕ್ರ ಪುನರಾವರ್ತನೆ ಆಗುತ್ತದೆ ಎನ್ನುತ್ತಾರೆ. ಮೊದಲ ಏಳು ವರ್ಷಗಳನ್ನು ಸರಿಯಾಗಿ ಪೂರೈಸಿದ ಮಗು ಆಮೇಲೆ ದೃಢವಾದ ವ್ಯಕ್ತಿತ್ವವನ್ನು ಹೊಂದುತ್ತದೆ. ಮೊದಲ ಏಳು ವರ್ಷಗಳಲ್ಲಿ ಸರಿಯಾದ ರೀತಿಯಲ್ಲಿ ಬೆಳೆದ ಮಗು ಮುಂದೆ ಇನ್ನಾವುದಕ್ಕೂ ಪಶ್ಚಾತ್ತಾಪ ಪಡುವುದಿಲ್ಲ. ನಾನು ಈತನಕ ನನ್ನ ಬದುಕಿನಲ್ಲಿ ಯಾವುದಕ್ಕೂ ಪಶ್ಚಾತ್ತಾಪ ಪಟ್ಟವನಲ್ಲ. ಹಾಗೂ ಪ್ರಯತ್ನಿಸಿ ನೋಡಿದೆ! ಹಿಂದೆ ಎಲ್ಲಾದರೂ ತಪ್ಪು ಮಾಡಿದೆನೇ ಎಂದು ಬೆದಕಿ ನೋಡಿದೆ. ಆದರೂ ಯಾವುದೇ ಒಂದು ತಪ್ಪು ಮಾಡಿದೆ ಎಂದು ನನಗೆ ಈತನಕ ಅನ್ನಿಸಿಲ್ಲ. ತನ್ನ ಭೂತದ ಬಗ್ಗೆ ಪಶ್ಚಾತ್ತಾಪ ಪಡದ ವ್ಯಕ್ತಿ ಅದರಿಂದ ಸುಲಭವಾಗಿ ಬಿಡುಗಡೆ ಹೊಂದಬಲ್ಲ. ನನ್ನನ್ನು ಭೂತಕಾಲವಂತೂ ನನ್ನನ್ನು ಎಂದಿಗೂ ಕಾಡುವುದೇ ಇಲ್ಲ, ನನ್ನ ಪಾಲಿಗೆ ಭೂತಕಾಲವೇ ಇಲ್ಲ! ನನ್ನ ಭೂತಕಾಲವೆಂದರೆ ಕೆಲವು ವಾಸ್ತವದ ಸಂಗತಿಗಳ ನೆನಪುಗಳು ಮಾತ್ರ. ಅದಕ್ಕೆ ಯಾವುದೇ ಮಾನಸಿಕ ವಿಕಲ್ಪಗಳಿಲ್ಲ. ನಾನು ನನ್ನ ಕಥೆಯನ್ನು ಇನ್ನಾವುದೋ ವ್ಯಕ್ತಿಯ ಕಥೆ ಎಂಬ ಧಾಟಿಯಲ್ಲಿ ಹೇಳಬಲ್ಲೆ. ಕೇವಲ ನೆನಪುಗಳು ಎಂದಿಗೂ ಭೂತದಂತೆ ಕಾಡುವುದಿಲ್ಲ, ಆದರೆ ಮಾನಸಿಕ ನೆನಪುಗಳು ಹಾಗಲ್ಲ. ಅದು ನಾವು ನಂಬುವ ಆಲೋಚಿಸುವ ರೀತಿಗಳಿಂದ ರೂಪುಗೊಳ್ಳುವಂಥದು. ಅಂಥ ಸಂಗತಿಗಳು ಮನಸ್ಸಿನಲ್ಲಿ ಕೆಲವು ಗಾಯಗಳನ್ನು ಉಳಿಸಿಬಿಡುತ್ತವೆ.
ಔದಾರ್ಯ ನನ್ನ ತಾತನಲ್ಲಿ ನಾನು ಕಂಡುಕೊಂಡ ಇನ್ನೊಂದು ವಿಶಿಷ್ಟ ಗುಣ. ಉದಾರವಾಗಿ ಕೊಡುವ ಕಲೆಯನ್ನು ನಾನು ಕಲಿತದ್ದೇ ಅವನಿಂದ. ತಾತನನ್ನು ನಾನು ’ನಾನಾ’ ಎಂದು ಕರೆಯುತ್ತಿದ್ದೆ ಹಾಗೆಯೆ ಅಜ್ಜಿಯನ್ನು ’ನಾನಿ’ ಎನ್ನುತ್ತಿದ್ದೆ. ನನ್ನ ಅಜ್ಜಿಯ ಚಹರೆ ಭಾರತೀಯ ಹೆಣ್ಣಿಗಿಂತ ಗ್ರೀಕ್ ಹೆಣ್ಣಿನ ಚೆಲುವನ್ನು ಹೆಚ್ಚಾಗಿ ಹೋಲುತ್ತಿತ್ತು. ನಾನಾ, ಇಂಥ ಒಳ್ಳೆಯ ಹೆಂಡತಿ ನಿನಗೆ ಹೇಗೆ ಸಿಕ್ಕಳು ಎಂದೇ ಕೇಳುತ್ತಿದ್ದೆ. ಆಕೆಯ ನಾಡಿಗಳಲ್ಲಿ ಗ್ರೀಕರ ರಕ್ತ ಹರಿಯುತ್ತಿತ್ತು ಎನಿಸುತ್ತದೆ. ಭಾರತದಲ್ಲಿ ’ಶುದ್ಧರಕ್ತ’ ಎಂಬುದು ಶುದ್ಧ ಸುಳ್ಳುಕತೆ. ಗ್ರೀಕರು, ಹೂಣರು, ಮೊಗಲರು ಹೀಗೆ ಎಷ್ಟೋ ಸಂತತಿಗಳು ಭಾರತದ ಮೇಲೆ ದಾಳಿ ಮಾಡಿದವು, ನೂರಾರು ವರ್ಷಗಳ ಕಾಲ ನಮ್ಮನ್ನು ಆಳಿದರು. ನಿಸ್ಸಂಶಯವಾಗಿ ಅವರೆಲ್ಲರ ರಕ್ತವೂ ಈ ಜನರ ನಾಡಿಗಳಲ್ಲಿ ಬೆರೆತುಹೋಗಿದೆ. ಆಕೆ ದಷ್ಟಪುಷ್ಟವಾಗಿದ್ದ ಹೆಂಗಸು. ನನ್ನ ತಾತನಾದರೂ ತೀರ ನರಪೇತಲ, ಐವತ್ತು ವರ್ಷಕ್ಕಿಂತ ಮೊದಲೇ ತೀರಿಕೊಂಡ. ಅಜ್ಜಿಯಾದರೂ ೮೦ ವರ್ಷಗಳ ಪೂರ್ಣ ಆಯುಸ್ಸನ್ನು ಜೀವಿಸಿದವಳು. ಎಂಬತ್ತರಲ್ಲಿಯೂ ಆಕೆ ಸಾಯುವಂತೆ ಕಾಣುತ್ತಿರಲಿಲ್ಲ. ಮುಂದೊಮ್ಮೆ ನಾನು ಸಂಚಾರದಲ್ಲಿ ಸಂಪೂರ್ಣ ತೊಡಗಿಕೊಂಡಾಗ ’ನೀನು ಸಾಯುವ ಕಾಲಕ್ಕೆ ನಾನು ನಿನ್ನನ್ನು ತಪ್ಪದೆ ಭೇಟಿ ಮಾಡುತ್ತೇನೆ ಹಾಗು ಅದೇ ನನ್ನ ಕುಟುಂಬದೊಂದಿಗಿನ ನನ್ನ ಕಡೆಯ ಭೇಟಿ ಆಗಲಿದೆ’ ಎಂದು ಆಕೆಗೆ ನಾನು ಮಾತುಕೊಟ್ಟಿದ್ದೆ, ೧೯೭೦ರಲ್ಲಿ ಆಕೆ ಸತ್ತಾಗ ನಾನು ನನ್ನ ಮಾತನ್ನು ಉಳಿಸಿಕೊಂಡಿದ್ದೆ. ಮೊದಲ ಮೂರುವರ್ಷಗಳ ಕಾಲ ನಾನು ನಾನಿಯನ್ನೇ ಅಮ್ಮನೆಂದು ಭಾವಿಸಿಕೊಂಡಿದ್ದೆ. ನನ್ನ ಅಜ್ಜಿ ನನಗೆ ನಿಜಕ್ಕೂ ತುಂಬ ನೆರವಾದಳು. ತಾತನಾದರೂ ನನಗೆ ಪ್ರೀತಿ ನೀಡಿದನೇ ವಿನಃ ನೆರವು ನೀಡಲಿಲ್ಲ.
ತಾತ ಕುಂಡಲಿ ಬರೆಯಿಸಿದ ಪ್ರಸಂಗ
ಅತ್ಯಂತ ಶ್ರೇಷ್ಠ ಜ್ಯೋತಿಷಿಯ ಕೈಲಿ ನನ್ನ ಜಾತಕವನ್ನು ಬರೆಯಿಸಿ ಭವಿಷ್ಯವನ್ನು ಕೇಳಬೇಕು ಎನ್ನುವುದು ನನ್ನ ಅಜ್ಜನ ಹಂಬಲ. ಅದಕ್ಕಾಗಿ ಎಷ್ಟೇ ಹಣ ಖರ್ಚಾದರೂ ಚಿಂತೆಯಿಲ್ಲ ಎಂದು ಒಮ್ಮೆ ಕಾಶಿಗೂ ಹೋಗಿದ್ದ. ಅಲ್ಲಿನ ಒಬ್ಬ ಪ್ರಸಿದ್ಧ ಜ್ಯೋತಿಷಿ ನನ್ನ ಕುಂಡಲಿಯನ್ನು ರಚಿಸಿ ಬಳಿಕ ಅಜ್ಜನನ್ನು ಕರೆದು ಹೇಳಿದ ಅವನು ಏಳನೆಯ ವರ್ಷ ದಾಟಿದ ಮೇಲೆ ದಕ್ಷಿಣೆ ಪಡೆಯದೆಯೇ ನಾನು ಅವನ ಭವಿಷ್ಯವನ್ನು ಹೇಳುತ್ತೇನೆ ಆದರೆ ಅವನು ಏಳರ ವಯಸ್ಸಿನ ವರೆಗೂ ಬದುಕಿರುತ್ತಾನೆಯೋ ಇಲ್ಲವೋ ಖಾತ್ರಿಯಿಲ್ಲ. ಏಳರ ನಂತರವೂ ಅವನು ಬದುಕಿದ್ದರೆ ಅದು ನಿಜಕ್ಕೂ ಪವಾಡವೇ. ಆಮೇಲೆ ಅವನು ಬುದ್ಧತ್ವವನ್ನು ಹೊಂದುವ ಲಕ್ಷಣಗಳು ಈ ಕುಂಡಲಿಯಲ್ಲಿ ಕಾಣಿಸುತ್ತಿದೆ ಎಂದಿದ್ದನಂತೆ. ನನ್ನ ತಾತ ನಿರಾಶೆ, ಆತಂಕಗಳೊಂದಿಗೆ ಮನೆಗೆ ಹಿಂದಿರುಗಿದ. ನನಗೆ ಏಳನೆಯ ವರ್ಷ ತುಂಬಿದ ಮೇಲೆ ಅದೇ ಜ್ಯೋತಿಷಿಯ ಮಗ ನನ್ನನ್ನು ಹುಡುಕಿಕೊಂಡು ನಮ್ಮ ಹಳ್ಳಿಯವರೆಗೂ ಬಂದ. ಆ ವೇಳೆಗಾಗಲೇ ಆ ಜ್ಯೋತಿಷಿ ಸತ್ತಿದ. ಎತ್ತರವಾದ ಕುದುರೆಯಿಂದ ನಮ್ಮ ಮನೆಯ ಮುಂದೆ ಇಳಿದ ಆ ಜ್ಯೋತಿಷಿ ನೀನಿನ್ನೂ ಬದುಕಿರುವೆಯಾ? ನಾನು ನಿನ್ನ ಕುಂಡಲಿ ಹಾಗು ಭವಿಷ್ಯವನ್ನು ಬರೆದುಕೊಂಡು ತಂದಿದ್ದೇನೆ. ನನಗೂ ಸ್ವಲ್ಪ ಆತಂಕವಿತ್ತು. ಆದರೂ ಪ್ರತಿ ಏಳು ವರ್ಷಗಳಿಗೊಮ್ಮೆ ನಿನಗೆ ಮರಣ ಸನ್ನಿಹಿತವಾಗುತ್ತದೆ. ನಿನ್ನಂತಹ ಜಾತಕರು ಬಹುಕಾಲ ಕಾಲ ಬದುಕಲಾರರು ಎಂದಿದ್ದ. ನಾನು ಬುದ್ಧನಾಗುವ ವಿಷಯ ತಿಳಿದ ನನ್ನ ಅಜ್ಜ ಇಡೀ ಹಳ್ಳಿಗೆ ಹಬ್ಬದೂಟ ಮಾಡಿಸಿದ್ದ. ’ಬುದ್ಧ’ ಎಂದರೆ ನನ್ನ ಮೊಮ್ಮಗ ತುಂಬ ಬುದ್ಧಿವಂತನಾಗುತ್ತಾನೆ ಎಂದು ಅವನು ಭಾವಿಸಿರಬೇಕು. ಆದರೆ ಆ ಗಳಿಗೆ ಕೂಡಿಬರುವ ಹೊತ್ತಿಗೆ ಅವನು ಕಣ್ಮುಚ್ಚಿದ್ದ. ಅವನ ಸಾವು ನನ್ನ ಬದುಕಿನ ಅತಿಮುಖ್ಯವಾದ ಅನುಭವಗಳಲ್ಲೊಂದು.
ಜೈನಮುನಿಯೊಡನೆ ಮೊದಲ ವಾಗ್ವಾದ
ನಾನು ನೋಡಿದ ಮೊದಲ ಜೈನ ದಿಗಂಬರ ಮುನಿ ನಮ್ಮ ಹಳ್ಳಿಗೆ ಕಾಲಿಟ್ಟಾಗ ನಾನಿನ್ನೂ ಹತ್ತು ವರ್ಷದವನು. ಅವನನ್ನು ಆ ನಗ್ನಸ್ಥಿತಿಯಲ್ಲಿ ನೋಡಿ ನನಗೆ ನಗು ತಡೆಯಲಾಗಲಿಲ್ಲ. ಆಗ ನನ್ನ ತಾತ
ಸಾಕು ನಿಲ್ಲಿಸು ನಿನ್ನ ಚೇಷ್ಟೆಯನ್ನು. ನನಗೆ ಅಂತರಂಗದ ಸತ್ಯವನ್ನು ಬೋಧಿಸಿದ ಗುರುವನ್ನು ಅಪಹಾಸ್ಯ ಮಾಡಿದರೆ ನಾನು ಸುಮ್ಮನಿರುವವನಲ್ಲ ಎಂದು ಗದರಿಸಿದರು.
ಆಗ ನಾನು ನಿನ್ನ ಅಂತರಂಗದ ಸತ್ಯ ಹಾಗಿರಲಿ, ಈತನ ಬಹಿರಂಗದ ಸತ್ಯವನ್ನು ಒಮ್ಮೆ ನೋಡು, ಹೇಗೆ ಎಲ್ಲರಿಗೂ ತೋರಿಸುತ್ತಿದ್ದಾನೆ! ಈತ ಬೆತ್ತಲೆ ಏಕೆ ಇರುವುದು? ಹೆಂಗಸರ ಮುಂದೆ ಹಿರಿಯರ ಮುಂದೆ ಕೊನೆಪಕ್ಷ ಒಂದು ಲಂಗೋಟಿಯನ್ನಾದರೂ ಕಟ್ಟಿಕೊಳ್ಳಬಾರದೇ? ಆಗ ನನ್ನ ತಾತನಿಗೂ ಸಿಟ್ಟು ಹೊರಟು ಹೋಗಿ ನಗು ಬಂತು.
ಅದೆಲ್ಲ ನಿನಗೆ ಈಗ ಅರ್ಥವಾಗುವುದಿಲ್ಲ ಎಂದರು.
ಆತ ಸ್ವಲ್ಪ ಹೊತ್ತು ಪ್ರವಚನ ನೀಡಿದ, ಜೀವನು ಪದೇ ಪದೇ ಮರುಹುಟ್ಟನ್ನು ಪಡೆಯಬಾರದು, ಮುಕ್ತಿ ಹೊಂದಬೇಕು ಇವೇ ಮೊದಲಾದ ಜೈನಧರ್ಮದ ಕೆಲವು ತತ್ವಗಳನ್ನು ಉಪದೇಶಿಸಿದ.
ಆಗ ನಾನು ನೇರವಾಗಿ ಆ ಮುನಿಯನ್ನೇ ಹೋಗಿ ಕೇಳಿದೆ ನೀವು ಮತ್ತೆ ಹುಟ್ಟಿ ಬರಲು ಇಷ್ಟ ಪಡುವುದಿಲ್ಲವೇ?
ಖಂಡಿತಾ ಇಲ್ಲ
ಹಾಗಿದ್ದರೆ ಈ ಕೂಡಲೆ ಆತ್ಮಹತ್ಯ ಮಾಡಿಕೊಳ್ಳಬಾರದೇಕೆ? ಇನ್ನೂ ಏಕೆ ಉಸಿರಾಡುತ್ತಿರುವಿರಿ, ಊಟ ಮಾಡುತ್ತಿರುವಿರಿ? ಹಾಗೆ ನೋಡಿದರೆ ಉಪವಾಸ, ಅಲ್ಪಾಹಾರಗಳಿಂದ ನಮ್ಮ ಆಯಸ್ಸು ಇನ್ನೂ ಹೆಚ್ಚುತ್ತದೆ! ಅಂದ ಮೇಲೆ ಸುಮ್ಮನೆ ಆಯಸ್ಸನ್ನು ಏಕೆ ಹೆಚ್ಚು ಮಾಡಿಕೊಳ್ಳುವುದು? ಆತನನ್ನು ಈ ಹಿಂದೆ ಹೀಗೆಲ್ಲ ಯಾರಾದರೂ ಕೇಳಿದ್ದರೋ ತಿಳಿಯದು. ಒಂದು ಸಭ್ಯ ಸಮಾಜದಲ್ಲಿ ನಿಜವಾದ ಪ್ರಶ್ನೆಗಳನ್ನು ಕೇಳುವ ಅನುಮತಿ ಇರುವುದಿಲ್ಲ. ಆತ್ಮಹತ್ಯೆ ನಿಜಕ್ಕೂ ಬಹುದೊಡ್ಡ ತಾತ್ವಿಕ ಪ್ರಶ್ನೆ. ಉತ್ತರಿಸಲಾಗದೇ ಆತ ಕೋಪಿಸಿಕೊಂಡು ನನ್ನನ್ನೇ ತೀಕ್ಷ್ಣವಾಗಿ ನೋಡುತ್ತಿದ್ದ.
ನನ್ನನ್ನೇಕೆ ಹಾಗೆ ದುರುಗುಟ್ಟಿಕೊಂಡು ನೋಡುವಿರಿ? ಒಳಗೆ ಇಷ್ಟೊಂದು ಸಿಟ್ಟು ತುಂಬಿಕೊಂಡಿದ್ದರೆ ಮತ್ತೆ ಹುಟ್ಟಿ ಬರಬೇಕಾದೀತು ಎಚ್ಚರಿಕೆ. ಜಗತ್ತಿನಿಂದ ಮುಕ್ತನಾಗುವ ದಾರಿ ಇದಲ್ಲ ಸಮಾಧಾನದಿಂದ ಉತ್ತರಿಸಬಾರದೇ? ಅಥವ ಗೊತ್ತಿಲ್ಲದಿದ್ದರೆ ಗೊತ್ತಿಲ್ಲ ಎಂದಾದರೂ ಹೇಳಿ ಎಂದೆ.
ಆಗ ಆ ಮುನಿ ಆತ್ಮಹತ್ಯೆ ಮಹಾಪಾಪ. ಅದನ್ನು ನಾನು ಬೆಂಬಲಿಸುವವನಲ್ಲ. ಮತ್ತೆ ಹುಟ್ಟಿ ಬರಬಾರದೆಂದರೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದಲ್ಲ. ನಮ್ಮ ಸಂಪತ್ತನ್ನು ಒಂದೊಂದಾಗಿ ತ್ಯಜಿಸುತ್ತ ಅಪರಿಗ್ರಹ ಮಾರ್ಗದಲ್ಲಿ ಕ್ರಮೇಣ ಬಿಡುಗಡೆ ಹೊಂದುವುದು ಸರಿಯಾದ ದಾರಿ ಎಂದ.
ಹಾಗಿದ್ದರೆ ನಿಮ್ಮ ಸಂಪತ್ತುಗಳು ಯಾವುವು, ಎಲ್ಲಿ ಸ್ವಲ್ಪ ತೋರಿಸಿ ನಿಮ್ಮ ಬೆತ್ತಲೆ ದೇಹವನ್ನು ನೋಡಿದರೆ ನಿಮ್ಮ ಸ್ವತ್ತಾಗಿ ಒಂದು ಲಂಗೋಟಿಯೂ ನಿಮ್ಮ ಬಳಿ ಇರುವಂತೆ ತೋರುವುದಿಲ್ಲವಲ್ಲ!
ಇಷ್ಟೆಲ್ಲ ಮಾತು ಕತೆ ನಡೆಯುತ್ತಿದ್ದಾಗ ನನ್ನ ತಾತ ಅಜ್ಜಿಯ ಭಯದಿಂದ ನನ್ನನ್ನು ತಡೆಯಲು ಬರಲಿಲ್ಲ. ಕಣ್ಣು ಮುಚ್ಚಿಕೊಂಡು ಧ್ಯಾನಿಸುವಂತೆ ಕುಳಿತಿದ್ದ. ಹೀಗೆ ಧರ್ಮಗುರುಗಳೊಂದಿಗಿನ ನನ್ನ ವಾಗ್ವಾದ ಆ ದಿನವೇ ಮೊದಲಾಯಿತು. ಜೈನಧರ್ಮವು ಸ್ವಹಿಂಸೆಯನ್ನು ಬೋಧಿಸುವ ಧರ್ಮವಾಗಿದೆ. ಜೈನ ಮುನಿಗಳಂತೂ ತಲೆಕೆಟ್ಟವರ ಹಾಗೆ ಆತ್ಮಪೀಡನೆ ಮಾಡಿಕೊಳ್ಳುತ್ತಾರೆ. ವಿಚಿತ್ರವೆಂದರೆ, ಸರ್ವಸಂಗ ಪರಿತ್ಯಾಗವನ್ನು ಬೋಧಿಸುವ ಈ ಮತದ ಅನುಯಾಯಿಗಳೆಲ್ಲ ವ್ಯಾಪಾರಿಗಳಾಗಿದ್ದಾರೆ! ಲೋಕದಲ್ಲಿ ಧರ್ಮ ಹುಟ್ಟಿದ್ದೇ ಮನುಷ್ಯನ ವ್ಯಾಪಾರಬುದ್ಧಿಯಿಂದ ಎನಿಸುತ್ತದೆ. ಇಲ್ಲಿ ದೇಹವನ್ನು ಹಿಂಸೆಗೆ ಈಡು ಮಾಡಿಕೊಳ್ಳುವುದರ ಉದ್ದೇಶ ಮೇಲಿನ ಲೋಕದಲ್ಲಿ ಸುಖ ಸಿಗಲಿ ಎಂಬ ಪ್ರಲೋಭನೆ ಅಷ್ಟೇ. ಜೈನಧರ್ಮವು ಆತ್ಮಹತ್ಯೆ ಪರಮ ಮೌಲ್ಯ ಎಂದು ಬೋಧಿಸುವ ಜಗತ್ತಿನ ಏಕಮೇವ ಧರ್ಮವಾಗಿದೆ. ಅದನ್ನು ಆತ್ಮಹತ್ಯೆ ಎನ್ನದೆ ಸಲ್ಲೇಖನ ವ್ರತ, ಸಂತರಾ ಇತ್ಯಾದಿ ಹೆಸರುಗಳಿಂದ ಅದನ್ನು ಆಧ್ಯಾತ್ಮೀಕರಿಸುತ್ತದೆ. ಅಹಿಂಸೆಯನ್ನೇ ಪರಮಧರ್ಮ ಎಂದು ನಂಬಿದ ಒಂದು ಧರ್ಮ ಆತ್ಮಹತ್ಯೆಯನ್ನು ಬೋಧಿಸುವುದು ನಿಜಕ್ಕೂ ಅಸಂಗತ. ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಮನುಷ್ಯನ ಇಚ್ಛಾಸ್ವಾತಂತ್ರ್ಯವನ್ನು ನಾನು ವಿರೋಧಿಸುವವನಲ್ಲ, ಅದು ಅವನ ಜನ್ಮಸಿದ್ಧ ಹಕ್ಕು. ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ನಿರ್ಧರಿಸಿದರೆ ಅವನನ್ನು ಯಾರೂ ತಡೆಯುವಂತಿಲ್ಲ, ಬದಲಿಗೆ ಅವನ ಸಂಕಲ್ಪಕ್ಕೆ ನೆರವನ್ನು ನೀಡತಕ್ಕದ್ದು. ಸಲ್ಲೇಖನವನ್ನು ನಾನು ತಾತ್ವಿಕವಾಗಿ ವಿರೋಧಿಸುವುದಿಲ್ಲ. ಆದರೆ ಆ ವ್ರತದ ವಿಧಾನ ತುಂಬ ಕ್ರೂರವಾದುದು, ಹಿಂಸಾತ್ಮಕವಾದುದು. ಊಟ ಮಾಡದೇ ಕುಳಿತರೆ ಸಾಯಲು ತೊಂಬತ್ತು ದಿನ ಬೇಕಾಗುತ್ತದೆ. ಇಷ್ಟು ದೀರ್ಘಕಾಲದ ಯಾತನೆ ಬೇಕೇ ಎಂಬುದೇ ಪ್ರಶ್ನೆ.
ನಾನು ಅಲ್ಲಿಗೇ ಆ ಮುನಿಯನ್ನು ಬಿಡಲಿಲ್ಲ ಸ್ವಾನುಭವವಿಲ್ಲದೇ ಏನನ್ನೂ ನಂಬಬೇಡಿ ಎಂದು ನೀವು ಉಪದೇಶಿಸಿದಿರಿ. ಜೊತೆಗೆ ೭ ನರಕಗಳನ್ನು ವರ್ಣಿಸುತ್ತ ಆರನೆಯ ನರಕದವರೆಗೂ ಇಳಿದರೂ ಮತ್ತೆ ಮೇಲೇಳಬಹುದು ಆದರೆ ಒಮ್ಮೆ ಏಳನೆಯ ನರಕಕ್ಕೆ ಹೋದರೆ ಮತ್ತೆ ಉದ್ಧಾರ ಸಾಧ್ಯವೇ ಇಲ್ಲ ಎಂದಿರಿ. ನೀವೇನಾದರೂ ಏಳನೆಯ ನರಕವನ್ನು ನೋಡಿ ಬಂದಿರುವಿರೇ? ಒಂದು ವೇಳೆ ನೋಡಿದ್ದರೆ ನೀವು ಹಿಂದಿರುಗಿದ್ದು ಹೇಗೆ? ಒಂದು ವೇಳೆ ನೋಡಿಲ್ಲದಿದ್ದರೆ ಸ್ವಾನುಭವವಿಲ್ಲದ ನಿಮ್ಮ ಮಾತಿಗೆ ಏನು ಪ್ರಮಾಣ? ಆದ್ದರಿಂದ ಬರೀ ಆರು ನರಕಗಳಿವೆ, ಏಳಲ್ಲ ಎಂದು ನಿಮ್ಮ ಪ್ರವಚನವನ್ನು ತಿದ್ದಿಕೊಳ್ಳತಕ್ಕದ್ದು. ಹಾಗಲ್ಲದೇ ಏಳನೆಯದೂ ಇದೆ ಎಂದೇ ವಾದಿಸುವಿರಾದರೆ ಅನುಭವ ಪ್ರಮಾಣದಿಂದ ಸಿದ್ಧಮಾಡಿ ತೋರಿಸತಕ್ಕದ್ದು ಆತ ಸುಮ್ಮನೆ ಕೇಳುತ್ತಿದ್ದ.
ನನ್ನ ಪ್ರಶ್ನೆಗಳ ಸುರಿಮಳೆಯನ್ನು ಕೇಳುತ್ತಿದ್ದ ಅಜ್ಜಿಯ ಸಂತೋಷಕ್ಕೆ ಎಣೆಯೇ ಇರಲಿಲ್ಲ. ಏನೋ ಮಗುವಿನ ಪ್ರಶ್ನೆ ಎಂದು ಉದಾಸೀನ ಮಾಡಬೇಡಿ, ಈ ಪ್ರಶ್ನೆಗಳು ನನ್ನನ್ನೂ ಕಾಡಿವೆ, ದಯವಿಟ್ಟು ಉತ್ತರಿಸಿ ಎಂದಳು. ಒಬ್ಬ ಜೈನ ಮುನಿ ಒಂದು ಮನೆಗೆ ಬಂದು ಭಿಕ್ಷೆ ಸ್ವೀಕರಿಸಿದ ಮೇಲೆ ಭಿಕ್ಷೆ ನೀಡಿದವನಿಗೆ ಒಂದಿಷ್ಟು ಪ್ರವಚನ ನೀಡುವ ಪದ್ಧತಿ ಜೈನ ಸಂಪ್ರದಾಯದಲ್ಲುಂಟು. ಹಾಗಾಗಿ ಭಿಕ್ಷೆ ನೀಡಿದ್ದ ನನ್ನ ಅಜ್ಜಿಯ ಪ್ರಶ್ನೆಗೆ ಉತ್ತರಿಸಬೇಕಾದುದು ಆತನ ಕರ್ತವ್ಯವಾಗಿತ್ತು. ಆದರೆ ಆ ಮುನಿಗೆ ಇದೆಲ್ಲ ಏಕೋ ತೀರಾ ಗೊಂದಲವಾಗಿ ಎದ್ದುಹೋಗತೊಡಗಿದ.
ಕೂಡಲೆ ಅಜ್ಜಿ, ದಯವಿಟ್ಟು ನಿಲ್ಲಿ, ಆ ಮಗುವಿನ ಪ್ರಶ್ನೆಗಳು ಬಗೆಹರಿಯುವುದು ಹೇಗೆ? ಮಗುವಿನ ಪ್ರಶ್ನೆಗಳಿಗೆ ಹೀಗೆ ಮುನಿಸಿಕೊಳ್ಳುವುದೇ? ಆಗ ಮುನಿ ಮತ್ತೆ ನಿಂತುಕೊಂಡ.
ಆಗ ನಾನು ಹೋಗಲಿ ಇನ್ನೊಂದು ಪ್ರಶ್ನೆ ಕೇಳುತ್ತೇನೆ. ಅದಕ್ಕಾದರೂ ಅವರು ಉತ್ತರಿಸಬಹುದು. ಆದರೆ ಆತ ನನ್ನತ್ತ ನೋಡದೇ ನೆಲ ನೋಡಿಕೊಂಡು ನಿಂತಿದ್ದ. ನನಗೇಕೋ ಮನೆಗೆ ಬಂದ ಅತಿಥಿಯನ್ನು ಅವಮಾನಿಸುತ್ತಿದ್ದೇನೆ ಅನಿಸಿತು. ಪ್ರಶ್ನೆ ಕೇಳದೇ ಕೂಡಲೆ ಅಲ್ಲಿಂದ ಹೊರನಡೆದೆ. ಈ ಒಟ್ಟು ಪ್ರಸಂಗದಲ್ಲಿ ನನ್ನ ಅಜ್ಜಿ ನನಗೆ ನೀಡಿದ ಉತ್ತೇಜನವನ್ನು ನಾನೆಂದಿಗೂ ಮರೆಯಲಾರೆ. ಅಂದಿನಿಂದ ಧರ್ಮಗುರುಗಳನ್ನು ಪ್ರಶ್ನಿಸುವ ನನ್ನ ಪ್ರವೃತ್ತಿ ಮೊದಲಾಯಿತು. ಆದರೆ ಈ ನಲವತ್ತೈದು ವರ್ಷಗಳಲ್ಲಿ ನನ್ನ ಒಂದೇ ಒಂದು ಪ್ರಶ್ನೆಗೂ ಯಾವ ಧರ್ಮಗುರುವಿನಿಂದಲೂ ಈತನಕ ಉತ್ತರ ಸಿಕ್ಕಿಲ್ಲ.
No comments:
Post a Comment