ಅಜ್ಜನ ಮರಣ
ಅಧ್ಯಾತ್ಮದ ಹಾದಿ ಹಿಡಿಯಲು ಕಾರಣವೇನು? ಎಂದು ಕೇಳುವಿರಿ. ನನಗೆ ತಿಳುವಳಿಕೆ ಬಂದ ದಿನದಿಂದಲೂ ನಾನು ಸದಾ ಆ ಹಾದಿಯಲ್ಲೇ ಇz. ನನಗೆ ಬುದ್ಧಿ ಬಂದಂದಿನಿಂದಲೂ ನಾನು ಅಜ್ಜ-ಅಜ್ಜಿಯರೊಡನೆಯೇ ಬೆಳೆದವನು. ಆದರೆ ನಾನು ಅಧ್ಯಾತ್ಮದತ್ತ ತಿರುಗಲು ಕಾರಣವಾದ ಅಂಥ ಯಾವ ಘಟನೆಯೂ ನನ್ನ ಬದುಕಿನಲ್ಲಂತೂ ಘಟಿಸಿಲ್ಲ. ನಾನು ನನ್ನ ಅಪ್ಪ ಅಮ್ಮನ ಮುಖ ನೋಡಿದ್ದು ನನ್ನಜ್ಜ ತೀರಿಕೊಂಡ ಮೇಲೆಯೇ. ನನ್ನ ಬಾಲ್ಯಕಾಲದಲ್ಲಿ ನಾನು ಪ್ರೀತಿಸಿದ್ದು ನನ್ನ ಅಜ್ಜಿ ತಾತ ಇಬ್ಬರನ್ನೇ ಮತ್ತು ನನಗೆ ಪ್ರೀತಿ ಸಿಕ್ಕಿದ್ದು ಕೂಡ ಕೇವಲ ಅವರಿಬ್ಬರಿಂದಲೇ. ಹಾಗಾಗಿ ಅಜ್ಜನ ಸಾವು ನನ್ನನ್ನು ತೀವ್ರವಾಗಿ ಕಲಕಿತು. ಒಮ್ಮೆಗೇ ಪ್ರಾಣ ಹೋಗದೇ ನಿಧಾನ ಗತಿಯಲ್ಲಿ ಅವನ ಸಾವು ಸಂಭವಿಸಿತು. ಮೊದಲು ಪಾರ್ಶ್ವವಾಯು ಉಂಟಾಗಿ ಮಾತು ನಿಂತುಹೋಯಿತು. ತ್ವದೀಯಂ ವಸ್ತು ಗೋವಿಂದ ತುಭ್ಯಮೇವ ಸಮರ್ಪಯೇತ್ (ಹೇ ಗೋವಿಂದ, ನಿನ್ನ ವಸ್ತುವನ್ನು ನಿನಗೇ ಸಮರ್ಪಿಸುತ್ತಿದ್ದೇನೆ),.. ಮಾತು ಹೋಗುವ ಮುನ್ನ ತಾತನ ಬಾಯಿಂದ ಹೊರಟ ಕೊನೆಯ ಮಾತುಗಳಿವು. ಹಾಗೆ ನೋಡಿದರೆ ನನ್ನ ತಾತ ದೇವರನ್ನು ನಂಬುತ್ತಿರಲಿಲ್ಲ, ಗೋವಿಂದನನ್ನು ನೆನೆಯಲು ಅವನೇನು ಹಿಂದುವೂ ಅಲ್ಲ. ಆದರೆ ಭಾರತದಲ್ಲಿ ಕೆಲವು ವಿಚಾರಗಳು (ಒಳ್ಳೆಯ ವಿಚಾರಗಳು) ತಮ್ಮ ಎಲ್ಲೆಗಳನ್ನು ಕಳೆದುಕೊಂಡು ಒಂದರೊಳಗೊಂದು ಬೆಸೆದುಕೊಳ್ಳುತ್ತವೆ. ಮಾತು ನಿಂತ ಕೂಡಲೇ ಅವನನ್ನು ಹತ್ತಿರದ ಗದರ್ವಾರಾ ಎಂಬ ನಗರಕ್ಕೆ ಎತ್ತಿನಬಂಡಿಯಲ್ಲಿ ಕರೆದುಕೊಂಡು ಹೋದೆವು. ಗಾಡಿಯಲ್ಲಿ ಅವಯವಗಳೂ ಒಂದೊಂದಾಗಿ ನಿಷ್ಕ್ರಿಯವಾಗ ತೊಡಗಿದವು. ಮೊದಲು ಮಾತು ಹೋಯಿತು, ಬಳಿಕ ಕಿವಿ ನಿಷ್ಕ್ರಿಯವಾಯಿತು. ಆಮೇಲೆ ಕಣ್ಣುಗಳನ್ನೂ ಮುಚ್ಚಿಕೊಂಡ. ಎತ್ತಿನಗಾಡಿಯಲ್ಲಿ ನಾನು ಈ ಒಂದೊಂದು ಬದಲಾವಣೆಯನ್ನೂ ಹತ್ತಿರದಲ್ಲೇ ಕುಳಿತು ಹತ್ತಿರದಿಂದ ಗಮನಿಸುತ್ತಿದ್ದೆ. ಅಜ್ಜನ ಮೈಯಲ್ಲಿ ಏನೇನು ಆಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ವಯಸ್ಸಲ್ಲ ನನ್ನದು. ಸಾವನ್ನು ಮೊದಲ ಬಾರಿಗೆ ಹತ್ತಿರದಿಂದ ಕಾಣುತ್ತಿದ್ದ ನನಗೆ ಅಜ್ಜ ಸಾಯಲಿದ್ದಾನೆ ಎಂದೂ ಆಗ ತಿಳಿಯಲಿಲ್ಲ. ಬಂಡಿಯು ಊರನ್ನು ತಲುಪುವ ಹೊತ್ತಿಗೆ ಅಜ್ಜ ಪ್ರಜ್ಞೆ ಕಳೆದುಕೊಂಡು ಅರ್ಧ ಸತ್ತಿದ್ದ. ಮತ್ತೆ ಪ್ರಜ್ಞೆ ಮರಳಲಿಲ್ಲ. ಉಸಿರಾಡುವುದನ್ನು ಬಿಟ್ಟರೆ ಆ ದೇಹದ ಎಲ್ಲ ಅಂಗಗಳೂ ತಮ್ಮ ಚಟುವಟಿಕೆಯನ್ನು ನಿಲ್ಲಿಸಿದ್ದವು. ಮೂರು ದಿನಗಳ ಕಾಲ ಈ ಉಸಿರಾಟ ಹೀಗೆಯೇ ಮುಂದುವರೆದು ಅನಂತರ ತಾತನು ಪ್ರಜ್ಞಾಹೀನ ಸ್ಥಿತಿಯಲ್ಲೇ ಮೃತಪಟ್ಟ. ಈ ನಿಧಾನಗತಿಯ ಮರಣ ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿತು. ಆಗ ನಾನು ತಾತನನ್ನು ವಿಪರೀತ ಹಚ್ಚಿಕೊಂಡಿದ್ದೆ. ಅವನನ್ನು ಕಳೆದುಕೊಂಡ ಮೇಲೆ ಮತ್ತೆ ಇನ್ನೊಬ್ಬರನ್ನು ಹಾಗೆ ಹಚ್ಚಿಕೊಳ್ಳಲು ನನ್ನಿಂದ ಆಗಲೇ ಇಲ್ಲ. ಅಂದಿನಿಂದಲೂ ನಾನು ಏಕಾಂಗಿಯಾಗಿಯೇ ಉಳಿದುಬಿಟ್ಟೆ.
ವಿಯೋಗವೆಂಬುದು ಅಚಾತುರ್ಯವಲ್ಲ, ಸಂಬಂಧ ಹೇಗೋ ಹಾಗೆಯೇ ವಿಯೋಗವೂ ನಮ್ಮ ಬದುಕಿನಲ್ಲಿ ತುಂಬ ಅರ್ಥಪೂರ್ಣವಾದುದು. ವಿಯೋಗದ ತೀವ್ರವಾದ ಅನುಭವ ಒಂದು ಹೊಸ ಬದಲಾವಣೆಯನ್ನೇ ತರಬಲ್ಲುದು. ಆ ಪರಿಣಾಮ ವಿಯೋಗದಿಂದ ಮಾತ್ರ ಸಾಧ್ಯ. ಆ ಪರಿಣಾಮವನ್ನು ನಾನು ಅನುಭವಿಸಿದ್ದೇನೆ. ನನ್ನ ತಾತನಿಗೇನು ಹೃದಯಾಘಾತವಾಯಿತೋ, ಪಾರ್ಶ್ವವಾಯು ಸೆಳೆತವಾಯಿತೋ ನಮಗೆ ತಿಳಿಯದು, ತಿಳಿಸಲು ಸುತ್ತ ಮುತ್ತ ಡಾಕ್ಟರುಗಳೂ ಇರಲಿಲ್ಲ. ಒಂದು ಔಷಧದ ಅಂಗಡಿಯೂ ಇರಲಿಲ್ಲ. ಹೃದಯಾಘಾತವೇ ಇರಬೇಕು. ನನಗಿನ್ನೂ ನೆನಪಿದೆ, ಆಗ ಬಂಡಿಯಲ್ಲಿ ನಾನು ತಾತನ ಕಿವಿಯಲ್ಲಿ ಮೆಲ್ಲಗೆ ಕೇಳಿದ್ದೆ ತಾತ, ಕೊನೆಯದಾಗಿ ಹೇಳಲು ಏನಾದರೂ ಇದೆಯೇ? ನಿನ್ನ ನೆನಪಿಗಾಗಿ ಇಟ್ಟುಕೊಳ್ಳಲು ನಿನ್ನ ಮೊಮ್ಮಗನಿಗೆ ಏನನ್ನಾದರೂ ಕೊಡಲಾರೆಯಾ? ಆಗ ಕಣ್ಣೀರು ತುಂಬಿಕೊಂಡು ತನ್ನ ಬೆರಳಿನ ಉಂಗುರವನ್ನು ತೆಗೆದು ನನಗೆ ತೊಡಿಸಿದ. ಆ ಉಂಗುರದ ಹೊಳೆಯುವ ವಜ್ರದ ಹರಳಿನ ಹಿಂದೆ ಭಗವಾನ್ ಮಹಾವೀರನ ಒಂದು ಪುಟ್ಟ ವಿಗ್ರಹವಿತ್ತು. ತನ್ನ ಬಳಿಯೇ ಸದಾ ಇಟ್ಟುಕೊಂಡು ಪೂಜಿಸುತ್ತಿದ್ದ ಆ ವಿಗ್ರಹವನ್ನು ಕೊನೆಯವರೆಗೂ ಅವನು ಯಾರಿಗೂ ತೋರಿಸಿರಲಿಲ್ಲ. ಈಗ ಆ ಉಂಗುರವನ್ನು ನನ್ನ ಒಬ್ಬ ಸನ್ಯಾಸಿ ಕೊಟ್ಟುಬಿಟ್ಟಿದ್ದೇನೆ. ನಾನು ಯಾವ ಕಾಣಿಕೆಯನ್ನು ಕೊಡಲಿ? ನನ್ನ ಪ್ರೀತಿಯನ್ನಷ್ಟೇ ನೀಡಬಲ್ಲೆ, ಏನು ಕೊಟ್ಟರೂ ಒಂದಲ್ಲ ಒಂದು ದಿನ, ಈಗ ನನ್ನಿಂದ ದೂರವಾಗುತ್ತಿರುವಂತೆ,ನಿನ್ನಿಂದಲೂ ದೂರಾಗಲೇ ಬೇಕು, ಎಂಬ ಇಂಗಿತ ಆ ಕಣ್ಣೀರಿನಲ್ಲಿತ್ತು. ಹಾಗೆ ಕಣ್ಣೀರಿಡುತ್ತಲೇ ಕಣ್ಮುಚ್ಚಿದ. ಈ ಸಂಸಾರಚಕ್ರ ನಿಲ್ಲಲಿ ಎಂದು ಮೊರೆಯಿಡುತ್ತ ಕಣ್ಮುಚ್ಚಿದ. ಆ ದಿನ ಅಲ್ಲಿ ತುಂಬಿಕೊಂಡ ಮೌನ ಹಾಗು ನಿಶ್ಯಬ್ದತೆಗಳನ್ನು ಈಗಲೂ ನಾನು ಸ್ಪರ್ಶಿಸಬಲ್ಲೆ. ಒಂದೊಂದು ಸಣ್ಣ ವಿವರವೂ ನನಗೆ ಚೆನ್ನಾಗಿ ನೆನಪಿದೆ. ಎತ್ತಿನ ಬಂಡಿಯಲ್ಲಿ ಸ್ತಬ್ಧಳಾಗಿ ಕುಳಿತಿದ್ದ ನನ್ನ ಅಜ್ಜಿ ಒಂದಿಷ್ಟೂ ಕಣ್ಣೀರು ಹಾಕಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ನಿಧಾನವಾಗಿ ಅವಳು ಹಾಡಲಾರಂಭಿಸಿದಳು. ನನಗೆ ನಂಬಲಾಗಲಿಲ್ಲ. ಸಾವನ್ನು ಮೌನದಿಂದ ಆನಂದದಿಂದ ಎದುರುಗೊಳ್ಳಬೇಕು ಎಂದು ಆ ದಿನ ನನ್ನಜ್ಜಿ ನನಗೆ ಕಲಿಸಿದಳು. ಮೊದಲ ಬಾರಿ ಅಜ್ಜನನ್ನು ಕಂಡಾಗ ಹಾಡಿದ ಹಾಡನ್ನೇ ಅವಳು ಹಾಡಿರಬೇಕು ಎಂದು ನನಗನ್ನಿಸುತ್ತದೆ. ಆ ದಿನ ನಾನು ಸಾವನ್ನು ಕಣ್ಣಾರೆ ಕಂಡೆ, ನಮ್ಮ ಹೃದಯಕ್ಕೆ ತುಂಬ ಹತ್ತಿರವರನ್ನು ಕಳೆದುಕೊಂಡಾಗಲೇ ಸಾವು ಇಂತಹದು ಎಂದು ಅರ್ಥವಾಗುವುದು. ಸಾಯುವಾಗಲೂ ಸಾಯದ ಪದಾರ್ಥವೊಂದು ದೇಹತ್ಯಾಗ ಮಾಡುವುದನ್ನು ಕಂಡೆ, ಅಂದಿನ ಆ ಕಾಣ್ಕೆ ನನ್ನ ಇಡೀ ಬದುಕಿನ ದಿಕ್ಕನ್ನೇ ಬದಲಿಸಿತು. ಸಾವು ಜೀವಿತದ ಕೊನೆಯಲ್ಲ, ಅದು ಜೀವಿತಾವಧಿಯ ಸಮಸ್ತ ಕರ್ಮಗಳೂ ತಮ್ಮ ಅಂತಿಮ ಘಟ್ಟಕ್ಕೆ ಬಂದು ನಿಲ್ಲುವ ಗಳಿಗೆ. ಜೀವಾತ್ಮನ ಮುಂದಿನ ಪ್ರಯಾಣವನ್ನು ಹಾಗು ಹೊಸದೇಹವನ್ನು ನಿರ್ಧರಿಸುವ ಗಳಿಗೆ ಅದು. ಇದನ್ನು ಪೂರ್ವದೇಶಗಳಲ್ಲಿ ಸಂಸಾರ ಚಕ್ರ ಎನ್ನುತ್ತಾರೆ. ಆ ಗಳಿಗೆಯಲ್ಲಿ ಈ ಚಕ್ರವನ್ನು ನಿಲ್ಲಿಸಲಾಗುವುದಿಲ್ಲ. ಅದಕ್ಕೆ ಜೀವಮಾನದ ತಯಾರಿ ಬೇಕು.
ಆಗ ನಡೆದ ಒಂದು ಸನ್ನಿವೇಶವನ್ನು ನಾನು ಈತನಕ ಯಾರಿಗೂ ಹೇಳಿಲ್ಲ, ಹೇಳುವ ಪ್ರಮೇಯ ಬಂದಿರಲಿಲ್ಲ, ಈಗ ಹೇಳುತ್ತಿದ್ದೇನೆ. ನನ್ನ ತಾತ ಒಂದೇ ಸಮನೆ ಸಂಸಾರ ಚಕ್ರ ನಿಲ್ಲಲಿ ಎಂದು ಮೊರೆಯಿಡುತ್ತಿದ್ದ. ರಾಜ, ಹೇಗಾದರೂ ಮಾಡಿ ಈ ಚಕ್ರವನ್ನು ನಿಲ್ಲಿಸು ಎಂದು ಗೋಗರೆಯುತ್ತಿದ್ದ (ಆಗ ಅಜ್ಜಿ ತಾತ ನನ್ನನ್ನು ’ರಾಜ’ ಎಂದು ಕರೆಯುತ್ತಿದ್ದರು). ಹತ್ತು ವರ್ಷದ ನನಗೆ ತಾತನ ಈ ರೋದನ ಅರ್ಥವಾಗಲಿಲ್ಲ. ಆದರೂ ’ತಾತ, ಸುಮ್ಮನಿರು’, ಎಂದು ಸಂತೈಸುತ್ತಿದ್ದೆ. ರಾಜ ಕೇಳಿಸುತ್ತಿದೆಯೇ, ಈ ಚಕ್ರವನ್ನು ಕೂಡಲೇ ನಿಲ್ಲಿಸು ಎಂದು ಮತ್ತೆ ಮತ್ತೆ ಗೋಳಿಡುತ್ತಿದ್ದ. ಆಗ ನಾನು ಅನಿರೀಕ್ಷಿತವಾಗಿ ತಾತ ನಿನ್ನ ಮಾತುಗಳು ನನಗೆ ಕೇಳಿಸುತ್ತಿವೆ, ಅದು ನಿನ್ನ ಸಂಸಾರ ಚಕ್ರ; ನಮ್ಮದಲ್ಲ. ನಮಗೆ ಹೇಗೆ ಕಂಡೀತು? ಅದು ನಿನ್ನ ಪ್ರಜ್ಞೆ, ಅದು ನಿನಗಷ್ಟೇ ಕಾಣಿಸಬಲ್ಲದು. ಅದನ್ನು ನೀನು ಮಾತ್ರ ನಿಲ್ಲಿಸಬಲ್ಲೆ. ಆದರೂ ಸದ್ದಿಲ್ಲದೇ ಸ್ವಲ್ಪಹೊತ್ತು ಸುಮ್ಮನಿರು. ನಾನು ಸಹಾಯ ಮಾಡಲು ಪ್ರಯತ್ನಿಸುತ್ತೇನೆ ಎಂಬ ಮಾತುಗಳು ನನ್ನ ಬಾಯಿಂದ ಹೊರಬಂದವು. ನನ್ನ ಅಜ್ಜಿಗೆ ನನ್ನ ಮಾತುಗಳನ್ನು ನಂಬಲಾಗಲಿಲ್ಲ. ಆಗ ನಾನಿನ್ನೂ ಏಳು ವರ್ಷಗಳ ಹುಡುಗ. ಆಗ ಅಜ್ಜಿಯ ಕಡೆಗೆ ತಿರುಗಿ ಅಜ್ಜಿ ಆಶ್ಚರ್ಯ ಪಡಬೇಡ, ಈ ಸಾವಿನಿಂದ ನನಗೆ ನನ್ನ ಪೂರ್ವಜನ್ಮ ಸ್ಮರಣೆಯಾಗಿದೆ, ಹಿಂದಿನ ಜನ್ಮದ ನನ್ನದೇ ಸಾವಿನ ನೆನಪುಗಳು ನನಗೀಗ ಮರುಕಳಿಸಿವೆ ಎಂದು ಹೇಳಿ ಯಾವುದೋ ಮಂತ್ರವನ್ನು ಒಂದೇ ಸಮನೆ ಜಪಿಸಲಾರಂಭಿಸಿದೆ. ಅದು ಯಾವ ಮಂತ್ರ ಎಂದು ಆಗ ನನಗೆ ಹೊಳೆಯಲಿಲ್ಲ, ಅದನ್ನು ತಿಳಿಯಲು ನನಗೆ ಹನ್ನೆರಡು ವರ್ಷಗಳು ಬೇಕಾದವು. ಆ ಮಂತ್ರವನ್ನು ಟಿಬೆಟ್ಟಿನಲ್ಲಿ ’ಬಾರ್ದೋ ತೋಡಾಲ್’ ಎಂದು ಕರೆಯುತ್ತಾರೆ. ನಿರಾಳವಾಗಿರು, ನಿನ್ನೊಳಗಿನ ಕೇಂದ್ರವನ್ನು ತಲುಪು, ದೇಹಕ್ಕೆ ಏನೇ ಆದರೂ ಅಲ್ಲಿಂದ ಅತ್ತಿತ್ತ ಸರಿಯದಿರು, ಎಲ್ಲದಕ್ಕೂ ಸಾಕ್ಷಿಯಾಗಿರು. ಆ ಸಾಕ್ಷಿತ್ವವೇ ನಿನ್ನ ಸ್ವಭಾವ. ಇದನ್ನು ಮನಗಂಡರೆ ಸಂಸಾರಚಕ್ರ ನಿಂತೀತು ಎಂದು ಆ ಮಂತ್ರದ ಅರ್ಥ. ನನ್ನ ತೊಡೆಯ ಮೇಲೆ ತಾತನ ತಲೆಯಿತ್ತು, ನಾನು ನನ್ನ ಅಂಗೈಯನ್ನು ಅಜ್ಜನ ಎದೆಯ ಮೇಲೆ ಇಟ್ಟು ಈ ಮಂತ್ರವನ್ನು ತಾತನ ಕಿವಿಯಲ್ಲಿ ಉಸುರುತ್ತಿದ್ದೆ. ಆ ಕ್ಷಣದಲ್ಲಿ ನಾನೇನು ಮಾಡುತ್ತಿದ್ದೇನೆ ಎಂಬ ಅರಿವು ಆಗ ನನಗಿರಲಿಲ್ಲ. ಎಲ್ಲಕ್ಕಿಂತ ಸೋಜಿಗವೆಂದರೆ, ನನ್ನ ತಾತ ಆ ಮಂತ್ರವನ್ನು ಕೇಳುತ್ತ ಹಾಗೇ ನಿಶ್ಯಬ್ದನಾದ. ಅಜ್ಜಿ ಪಕ್ಕದಲ್ಲೇ ಕುಳಿತು ಇದನ್ನೆಲ್ಲ ಗಮನಿಸುತ್ತಿದ್ದಳು. ಹೊರಗೆ ಎತ್ತಿನ ಗಾಡಿಯ ಗೆಜ್ಜೆಯ ಸಪ್ಪಳ, ಮಧ್ಯರಾತ್ರಿಯ ಕಗ್ಗತ್ತಲು, ಪ್ರತಿಯೊಂದೂ ಕಣ್ಣಿಗೆ ಕಟ್ಟಿದಂತಿದೆ. ತಾತನ ಮರಣದ ನಂತರ ಮರಣವೇ - ಅಂದರೆ ಸಾವಿನ ಚಿಂತನೆಯೇ - ನನ್ನ ಸಂಗಾತಿಯಾಯಿತು. ನಮ್ಮ ಆಯುಸ್ಸು ಏಳು ವರ್ಷವಿರಲಿ ಅಥವ ಎಪ್ಪತ್ತು ವರ್ಷವಿರಲಿ (ಆಗ ನನಗೆ ಏಳು, ತಾತನಿಗೆ ಎಪ್ಪತ್ತು ವರ್ಷ ವಯಸ್ಸು) ಸಾವೇ ಬದುಕಿನ ಅತಿ ಮುಖ್ಯ ಘಟನೆ ಎಂದು ನನಗೆ ಅಂದು ಖಚಿತವಾಯಿತು. ಆಶ್ಚರ್ಯವೆಂದರೆ ನನ್ನ ತಾತ ಸತ್ತ ಮರುಗಳಿಗೆಯೇ ಅವರ ಸೇವಕ ಭೋರನೂ ಸತ್ತುಹೋದ. ಒಡೆಯನಿಲ್ಲದ ಜೀವನವನ್ನು ಬಾಳಲಾರದೇ ಮರಣದಲ್ಲಿ ನೆಮ್ಮದಿಯನ್ನು ಕಂಡ. ಬದುಕಿದ್ದಾಗ ನನ್ನ ತಾತ ಮನೆಯ ಎಲ್ಲ ವ್ಯವಹಾರಗಳನ್ನೂ, ಎಲ್ಲ ಬೀಗದ ಕೈಗಳನ್ನೂ ಭೋರನಿಗೇ ವಹಿಸಿದ್ದ. (ಎಷ್ಟೋ ವರ್ಷಗಳಾದ ಮೇಲೆ ನಾನು ಮುಂಬಯಿಯಲ್ಲಿದ್ದಾಗ ಒಂದು ದಿನ ಭೋರನ ಮಗ ನನ್ನನ್ನು ಕಾಣಲು ಬಂದ. ನೀವು ಇಂದಲ್ಲ ನಾಳೆ ಬರಬಹುದು ಎಂದು ಇಷ್ಟು ವರ್ಷ ಕಾದೆವು, ಆದರೆ ನೀವು ಬರಲಿಲ್ಲ. ನಿಮ್ಮ ಮನೆ, ಹೊಲ ಗದ್ದೆಗಳನ್ನು ಇಷ್ಟು ದಿನ ನಾವೇ ನೋಡಿಕೊಂಡಿದ್ದೆವು. ಇದೋ ಈ ಬೀಗದ ಕೈಗಳನ್ನು ಹಾಗು ನಿಮ್ಮ ಎಲ್ಲ ಆಸ್ತಿಯನ್ನು ಒಪ್ಪಿಸಿಕೊಳ್ಳಿ ಎಂದು ಕೊಡಲು ಬಂದ. ಆಗ ನಾನು ಆ ಹಳ್ಳಿಗೆ ಮತ್ತೆ ಬರಲು ನಮಗಾರಿಗೂ ಮನಸ್ಸಾಗಲಿಲ್ಲ, ಇನ್ನು ನಾವು ಯಾರೂ ಅಲ್ಲಿಗೆ ಬರುವುದಿಲ್ಲ, ಆ ಮನೆ ಹೊಲ ಗದ್ದೆ, ದನ ಕರುಗಳು ಎಲ್ಲವೂ ನಿಮಗೇ ಸೇರಿದ್ದು. ಆ ಹಳ್ಳಿಯ ಋಣ ತಾತ ಸತ್ತ ದಿನವೇ ತೀರಿಹೋಯಿತು ಎಂದು ಹೇಳಿ ಕಳುಹಿಸಿದೆ).
ನನ್ನ ತಾತನಂತಹ ವ್ಯಕ್ತಿಯನ್ನು ಇಂದಿಗೂ ನಾನೆಲ್ಲೂ ಕಂಡಿಲ್ಲ. ತನ್ನ ಜೀವಮಾನದಲ್ಲಿ ಅವನು ಒಂದು ಸುಳ್ಳು ಹೇಳಿದವನಲ್ಲ, ಕೊಟ್ಟ ಒಂದು ಮಾತಿಗೆ ತಪ್ಪಿದವನಲ್ಲ, ನಾನು ಕಂಡಂತೆ, ಇನ್ನೊಬ್ಬರ ಬಗ್ಗೆ ಒಂದು ಸಣ್ಣ ಮಾತು ಆಡಿದವನಲ್ಲ. ಇಂತಹ ಮನುಷ್ಯನ ಒಂದು ಗುರುತೂ ಉಳಿಯದೆ ಹೋಯಿತಲ್ಲ, ಇಂಥವನು ಕೊನೆಗೆ ಏನು ಸಂಪಾದನೆ ಮಾಡಿದ, ಈ ಬದುಕಿಗೆ ಏನರ್ಥ? ಎಂಬ ಪ್ರಶ್ನೆಗಳು ಅಂದಿನಿಂದಲೇ ನನಗೆ ಕೊರೆಯಲಾರಂಭಿಸಿತು. ಇವು ಬಾಲ್ಯದಿಂದಲೇ ನನ್ನನ್ನು ಗಂಭೀರ ವ್ಯಕ್ತಿಯನ್ನಾಗಿಸಿದವು. ಈ ಪ್ರಶ್ನೆಗಳನ್ನು ನನ್ನ ಇನ್ನೊಬ್ಬ ತಾತ (ತಂದೆಯ ತಂದೆ) ನನ್ನು ಕೇಳುತ್ತಿದ್ದೆ ನೀನಿನ್ನೂ ಚಿಕ್ಕ ಹುಡುಗ ಇದನ್ನೆಲ್ಲ ತಿಳಿಯಲು ಇನ್ನೂ ಬೇಕಾದಷ್ಟು ಸಮಯವಿದೆ ಎಂದು ಸಮಾಧಾನ ಹೇಳುತ್ತಿದ್ದ. ಆಗ ನಾನು ಈ ಹಳ್ಳಿಯಲ್ಲಿ ನನ್ನ ಕಣ್ಣೆದುರಿಗೇ ನನ್ನ ವಯಸ್ಸಿನ ಎಷ್ಟೋ ಸಣ್ಣಮಕ್ಕಳು ಸತ್ತರಲ್ಲ, ನಾನೇ ಕಣ್ಣಾರೆ ಕಂಡಿದ್ದೇನೆ. ನಾನು ನಾಳೆಯೇ ಸಾಯುವುದಿಲ್ಲ ಎಂದು ಭರವಸೆ ನೀಡಬಲ್ಲೆಯಾ? ಅಥವ ಸಾಯುವ ಮುನ್ನ ಇದನ್ನೆಲ್ಲ ತಿಳಿದೇ ಸಾಯುವೆನೆಂದು ಖಾತ್ರಿ ನೀಡುವೆಯಾ? ಎಂದು ನೇರವಾಗಿ ಕೇಳಿದೆ. ನಾನು ಹೇಗೆ ಭರವಸೆ ನೀಡಲಿ, ಸಾವು ಬದುಕು ನನ್ನ ಕೈಲಿದೆಯೇ? ಎಂದ. ಹಾಗಿದ್ದರೆ ಇನ್ನೂ ಬೇಕಾದಷ್ಟು ಸಮಯವಿದೆ ಎಂದು ಸಮಧಾನ ಮಾಡದೇ ಈಗಲೇ ಉತ್ತರಿಸು. ಉತ್ತರ ತಿಳಿದಿಲ್ಲವಾದರೆ ಅದನ್ನಾದರೂ ಹೇಳಿಬಿಡು ಎಂದೆ. ಈ ಹುಡುಗ ಸಾಮಾನ್ಯನಲ್ಲ ಎಂದು ಆಗಲೇ ನನ್ನ ತಾತನಿಗೆ ತಿಳಿದು ಹೋಯಿತು. ಮುಂದೆ ಮರಣ ಶೆಯ್ಯೆಯಲ್ಲಿ ನನ್ನ ತಾತ ಈ ಸಂಭಾಷಣೆಗಳನ್ನೆಲ್ಲ ಮತ್ತೆ ನೆನೆದುಕೊಂಡ. ಸಾಯುವ ಮುನ್ನ ತುಂಬ ಹೊತ್ತು ನನ್ನೊಂದಿಗೆ ಮಾತನಾಡಿದ. ನಾನು ಉತ್ತರವನ್ನು ಪಡೆಯದೇ ಪ್ರಶ್ನೆಯೊಂದಿಗೇ ಸಾಯುತ್ತಿದ್ದೇನೆ. ಆ ದಿನ ನಿನಗೆ ಹೇಳಿದ ಸಮಾಧಾನದ ಮಾತುಗಳು ಶುದ್ಧ ತಪ್ಪು, ನೀನಾದರೂ ಆದಷ್ಟು ಬೇಗನೆ ಉತ್ತರವನ್ನು ಕಂಡುಕೋಎಂದು ಹೇಳಿದ.
ತಾತ ಸತ್ತಾಗ ನನಗೆ ಏಳುವರ್ಷಗಳು. ತಾತ ಸತ್ತ ಮೇಲೆ ನನಗೂ ಸಾಯಬೇಕು ಎನಿಸಿತು. ’ಹೇಗೂ ಏಳನೆಯ ವರ್ಷಕ್ಕೆ ಹುಡುಗ ಸಾಯುತ್ತಾನೆ ಎಂದು ಜ್ಯೋತಿಷಿ ಹೇಳಿದ್ದಾನೆ ಹಾಗಾಗಿ ನಾನೂ ಸಾಯಬೇಕು’ ಎಂದು ನನ್ನದೇ ಆದ ಬಾಲಿಶ ರೀತಿಯಲ್ಲಿ ಸಾವನ್ನು ಅನುಕರಿಸಿದೆ. ಊಟ ತಿಂಡಿ ಇಲ್ಲದೆ ಮೂರು ದಿನಗಳ ಕಾಲ ಹಾಸಿಗೆಯಲ್ಲೇ ಮಲಗಿ ಸಾವನ್ನು ಎದುರು ನೋಡುತ್ತಿದ್ದೆ. ಸಾವು ಬರಲಿಲ್ಲ, ಆದರೆ ಸಾವಿನ ತೀವ್ರವಾದ ಅನುಭವ ನನ್ನಲ್ಲಿ ಅಸಾಧಾರಣ ಬದಲಾವಣೆಗಳನ್ನು ಉಂಟು ಮಾಡಿತು. ಆಗ ಏನೇ ಆದರೂ ಲೋಕದಲ್ಲಿ ಸಾವು ಎಂಬುದು ಇರಲಾರದು ಎಂದು (ಈಗಿನಷ್ಟು ಅಲ್ಲದಿದ್ದರೂ) ತುಂಬ ಅಸ್ಪಷ್ಟವಾಗಿ ಅನ್ನಿಸಿತ್ತು.
ಈ ಎಲ್ಲ ಘಟನಾವಳಿಗಳ ಕಾರಣದಿಂದ ನಾನು ಏಳನೆಯ ವರ್ಷದಿಂದಲೇ ಏಕಾಂತಕ್ಕೆ ಒಗ್ಗಿಹೋಗಿದ್ದೆ. ತಾತನ ಸಾವು ಲೋಕದ ಎಲ್ಲ ಸಂಬಂಧಗಳಿಂದ ನನ್ನನ್ನು ವಿಮೋಚನೆಗೊಳಿಸಿತ್ತು. ಅವನ ಸಾವಿನೊಂದಿಗೇ ನನ್ನೊಳಗಿನ ಎಲ್ಲ ಮಮತ್ವಭಾವವೂ ಸತ್ತುಹೋಯಿತು. ಅಂದಿನಿಂದ ನನಗೆ ಯಾರೊಂದಿಗೂ ಗಾಢವಾದ ಮೈತ್ರಿ ಉಂಟಾಗಲೇ ಇಲ್ಲ. ಅಲ್ಲಿಂದಾಚೆಗೆ ಯಾವುದೇ ಆತ್ಮೀಯ ಸಂಬಂಧ ಹುಟ್ಟಿದಾಗಲೂ ಆ ಸಾವಿನ ನೆನಪು ಮರುಕಳಿಸಿ ಎಲ್ಲ ಸಂಬಂಧಗಳ ನಿರರ್ಥಕತೆಯನ್ನು ಮನವರಿಕೆ ಮಾಡಿಸುತ್ತಿತ್ತು. ಸಾವಿನ ಅನುಭವ ನಮ್ಮ ಆಳಕ್ಕೆ ಇಳಿದುಬಿಟ್ಟರೆ ಮೈತ್ರಿ ಮಮಕಾರಗಳು ನಮ್ಮನ್ನು ಅಂಟಿಕೊಳ್ಳಲಾರವು. ಅಂದರೆ ಮಮಕಾರ ಹುಟ್ಟಲು ಗಹನವಾದ ಸತ್ಯಗಳ ಮರೆವು ಅತ್ಯಗತ್ಯ. ಆದ್ದರಿಂದಲೇ ’ಪ್ರೀತಿಗೆ ಸಾವಿಲ್ಲ’ ಇತ್ಯಾದಿ ಗಾದೆ ಮಾತುಗಳು ಹುಟ್ಟಿಕೊಂಡಿರುವುದು. ಆದರೆ ಸಾವು ಹಾಗು ಪ್ರೀತಿಗಳು ಬೇರೆಬೇರೆಯವಲ್ಲ ಎಂದು ತುಂಬ ಸಲ ನನಗನ್ನಿಸಿದೆ. ಸಾವಿನ ನೆನಪನ್ನು ತಂದುಕೊಳ್ಳದೇ ನನಗೆ ಪ್ರೀತಿಯನ್ನು ಭಾವಿಸಲು ಸಾಧ್ಯವೇ ಆಗುವುದಿಲ್ಲ.
(ಆದ್ದರಿಂದಲೇ ಲೋಕದ ಹುಚ್ಚುತನ, ಹುಚ್ಚು ಪೈಪೋಟಿಗಳು ಮೊದಲಿನಿಂದಲೂ ನನ್ನನ್ನು ಬಾಧಿಸಲೇ ಇಲ್ಲ. ಬದುಕಿನ ಆಕಾಂಕ್ಷೆ ಮೊಳೆಯುವ ಮುನ್ನವೇ ಸಾವಿನ ತಣ್ಣಗಿನ ಸ್ಪರ್ಶ ನನ್ನನ್ನು ಎಚ್ಚರಿಸಿಬಿಟ್ಟಿತ್ತು. ಅಂದಿನಿಂದ ಬದುಕನ್ನು ನೆನೆದಾಗಲೆಲ್ಲ ಸಾವಿನ ನೆನಪೂ ಅದನ್ನು ಹಿಂಬಾಲಿಸುತ್ತಿತ್ತು. ಅಂದಿನಿಂದ ಶೇಕ್ಸ್‌ಪಿಯರನ ’ಟು ಬಿ ಆರ್ ನಾಟ್ ಟು ಬಿ’ ಎಂಬ ದ್ವಂದ್ವ ನನ್ನನ್ನು ಕಾಡಲೇ ಇಲ್ಲ. ಏಕೆಂದರೆ ಎರಡರ ಪರಿಣಾಮವೂ ಬೇರೆ ಬೇರೆಯಲ್ಲ ಎಂಬ ಬೋಧೆ ಉಂಟಾಗಿತ್ತು). ಇದು ನನ್ನೊಬ್ಬನಿಗೆ ಆದ ಅವಸ್ಥೆಯಲ್ಲ. ಇಂದಲ್ಲ ನಾಳೆ ಪ್ರತಿಯೊಬ್ಬರೂ ಬದುಕಿನಲ್ಲಿ ಈ ಏಕಾಂತದ ಅನುಭವವನ್ನು ಪಡೆದೇ ತೀರಬೇಕು. ಆದರೆ ನನ್ನ ಪಾಲಿಗಾದರೂ ಸಂಬಂಧದ ಅರ್ಥ ತಿಳಿಯುವ ಮುನ್ನವೇ ಈ ಅಸಂಬಂಧದ ಅನುಭವ ನನ್ನ ಸಂಗಾತಿಯಾಯಿತು. ನಾನು ಸಮಾಜದಲ್ಲಿ ಬದುಕಿರಬಹುದು, ಎಲ್ಲರೊಡನೆ ಒಡನಾಡುತ್ತಿರಬಹುದು. ಆದರೆ ಆಳದಲ್ಲಿ ನಾನು ಒಬ್ಬಂಟಿ ಎಂಬ ಅರಿವು ಸದಾ ಜಾಗೃತವಾಗಿರುತ್ತದೆ. ಈ ಅರಿವಿನ ಕಾರಣದಿಂದ ಯಾವುದೂ ನನ್ನನ್ನು ಸ್ಪರ್ಶಿಸುವುದಿಲ್ಲ, ಯಾವುದೂ ನನ್ನಲ್ಲಿ ಕ್ಷೋಭೆಯನ್ನು ಹುಟ್ಟಿಸುವುದಿಲ್ಲ.
ಏಕಾಂತವು ಪ್ರಾರಂಭದಲ್ಲಿ ಹದುಳವೆನಿಸದಿದ್ದರೂ ಕ್ರಮೇಣ ಅದೇ ಆನಂದವಾಗಿ ಪರಿಣಮಿಸುತ್ತದೆ. ನಾವು ಯಾವುದೇ ವಸ್ತುವನ್ನು ಅಥವ ವ್ಯಕ್ತಿಯನ್ನು ವಿಪರೀತ ಹಚ್ಚಿಕೊಂಡಾಗ ನಮ್ಮನ್ನು ನಾವು ಮರೆಯುತ್ತೇವೆ. ನಾವು ಇನ್ನೊಂದರ ಮೊರೆಹೋಗುವ ಮೂಲ ಉದ್ದೇಶವೇ ನಮ್ಮಿಂದ ನಾವು ಪಾರಾಗಬೇಕೆಂದು. ಇನ್ನೊಬ್ಬರನ್ನು ಹಚ್ಚಿಕೊಳ್ಳುವುದೆಂದರೆ ನಮ್ಮ ಕೇಂದ್ರಕ್ಕೆ ಅವನನ್ನು ತಂದು ನಾವು ಪರಿಧಿಯೆಡೆಗೆ ಸರಿಯುವುದು ಎಂದು. ನಮ್ಮಲ್ಲಿ ಪ್ರತಿಯೊಬ್ಬರ ಬದುಕೂ ಹೀಗೆ ಪರಕೇಂದ್ರಿತವಾದುದಾಗಿದೆ, ಪರಿಧಿಗತವಾದುದಾಗಿದೆ. ನನ್ನ ಬದುಕಿನ ಪ್ರಾರಂಭದ ಘಟ್ಟದಲ್ಲಿಯೇ ಪರಕೇಂದ್ರಿತ ಬದುಕಿನ ಸಾಧ್ಯತೆಗಳೆಲ್ಲ ತಾತನೊಂದಿಗೆ ಹುಟ್ಟಿ ಅವನೊಂದಿಗೇ ತಿರೋಧಾನವಾದವು. ನನ್ನ ಕೇಂದ್ರಕ್ಕೆ ನಾನೇ ಮರಳದೇ ನನ್ನ ಪಾಲಿಗೆ ಬೇರೆ ವಿಧಿಯೇ ಇಲ್ಲವಾಯಿತು. ನನ್ನ ಕೇಂದ್ರಕ್ಕೆ ನಾನು ತಳ್ಳಲ್ಪಟ್ಟೆ ಎಂದರೆ ತಪ್ಪಾಗದು. ಒಂದು ವೇಳೆ ತಾತನ ಸಾವು ಇನ್ನೂ ತಡವಾಗಿ ಆಗಿದ್ದರೆ ಅವನ ಜಾಗಕ್ಕೆ ಇನ್ನೊಬ್ಬರು ಬಂದು ಕೂರುತ್ತಿದ್ದರೋ ಏನೋ! ಒಮ್ಮೆ ಮನಸ್ಸು ಬಲಿತರೆ ಅದು ನೂರೆಂಟು ಹಾದಿಗಳನ್ನು ಸುಲಭವಾಗಿ ಕಂಡುಕೊಳ್ಳಬಹುದು. ಯಾರನ್ನು ಬೇಕಾದರೂ ಸುಲಭವಾಗಿ ಹಚ್ಚಿಕೊಳ್ಳಬಹುದು ಹಾಗು ಯಾರನ್ನಾದರೂ ಸುಲಭವಾಗಿ ಮರೆಯಬಹುದು. ಆದರೆ ಎಳೆಯ ಮನಸ್ಸಿನಲ್ಲಿ ಭಾವನೆಗಳು ಮಾತ್ರ ಇರುತ್ತವೆ, ಅವಕ್ಕೆ ಬುದ್ಧಿ ಇನ್ನೂ ಬಲಿತಿರುವುದಿಲ್ಲ. ಹಾಗಾಗಿ ಕೊನೆಯವರೆಗೂ ಯಾರನ್ನೂ ಹಚ್ಚಿಕೊಳ್ಳದೆ ನಾನು ಒಬ್ಬಂಟಿಯಾಗೇ ಇರಬೇಕಾಯಿತು. ಪ್ರಾರಂಭದಲ್ಲಿ ತುಂಬ ಕಷ್ಟವಾದರೂ ಆಮೇಲೆ ಜೀವಮಾನವಿಡೀ ನಾನು ಅಸುಖಿಯಾಗಲೇ ಇಲ್ಲ. ಅಸುಖವೆಂಬುದು ಹಚ್ಚಿಕೊಂಡಾಗಲೇ ಉಂಟಾಗುವುದು. ಹೊರಗಿನವರಿಂದ ಸುಖ ಸಿಗುವುದಿಲ್ಲ, ಮುಂದೆಂದೋ ಸುಖ ಸಿಗಬಹುದೆಂಬ ನಿರೀಕ್ಷೆಯಷ್ಟೇ ಸಿಗುವುದು. ಹಾಗಾಗಿ ಅಂದಿನಿಂದ ನನ್ನನ್ನು ಎಲ್ಲರೂ ವಿಚಿತ್ರವಾಗಿ ನೋಡಲಾರಂಭಿಸಿದರು. ಸದಾ ಇನ್ನೊಬ್ಬರನ್ನು ಹಚ್ಚಿಕೊಳ್ಳುವುದು ಬಾಲ್ಯಸಹಜ ಪ್ರವೃತ್ತಿ, ಹೀಗೆ ಹಚ್ಚಿಕೊಂಡಾಗಲೇ ಸಮಾಜದ ಸಂಸ್ಕಾರಗಳನ್ನು ಪಡೆಯಲು ಸಾಧ್ಯವಾಗುವುದು. ಆದರೆ ನನ್ನ ಈ ಏಕಾಂತ ಪ್ರವೃತ್ತಿಯ ಕಾರಣದಿಂದಾಗಿ ಸಮಾಜದ ಯಾವ ಸಂಸ್ಕಾರಗಳನ್ನೂ, ಯಾವ ನಡೆ-ನುಡಿ, ವರ್ತನೆಗಳನ್ನೂ ನಾನು ಪಡೆಯಲೇ ಇಲ್ಲ. ಈ ಪ್ರವೃತ್ತಿಯ ವಶದಿಂದ ಸಮಾಜವನ್ನು ಅನುಸರಿಸದೆ ನಾನು ಕಾಡು ಮನುಷ್ಯನಂತೆಯೇ ಉಳಿದೆ. ನಾನಾಗೇ ಸಮಾಜವನ್ನು ಪ್ರವೇಶಿಸಿದರೂ ಅವರ ಮಧ್ಯೆ ನಾನು ಹೊರಗಿನವನಾಗಿಯೇ ಉಳಿಯುತ್ತಿದ್ದೆ. ಎಲ್ಲರೂ ನನ್ನನ್ನು ದೂರ ಮಾಡುತ್ತಿದ್ದರು ಎಂದಲ್ಲ. ಹಾಗೆ ನೋಡಿದರೆ ನನ್ನ ಗೆಳೆತನಕ್ಕೆ ತುಂಬ ಜನ ಹಾತೊರೆಯುತ್ತಿದ್ದರು. ಏಕೆಂದರೆ ಮಮತ್ವವೇ ಇರದ ನನ್ನೊಡನೆ ವೈರತ್ವವನ್ನು ಬೆಳೆಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಆದರೆ ನಾನಾಗೇ ಗೆಳೆತನವನ್ನು ಹಂಬಲಿಸಿದುದು, ಸಂಬಂಧಗಳಿಗಾಗಿ ಹಾತೊರೆದದ್ದು ನನಗೆ ನೆನಪಿಲ್ಲ.
ಅಪ್ಪ ಅಮ್ಮನೊಡನೆ
ಅಜ್ಜನ ಸಾವಿನ ನಂತರ ಅಜ್ಜಿಯ ಹೃದಯ ಒಡೆದುಹೋಗಿತ್ತು. ಆಕೆ ಮತ್ತೆ ಹಳ್ಳಿಗೆ ಮರಳಲಿಲ್ಲ. ನಾನು ದೇಶವಿಡೀ ಸಂಚರಿಸಿದ್ದೇನೆ, ಲೆಕ್ಕವಿಲ್ಲದಷ್ಟು ಕುಟುಂಬಗಳನ್ನು ನೋಡಿದ್ದೇನೆ. ಆದರೆ ಅವರಿಬ್ಬರ ತರಹದ ದಾಂಪತ್ಯವನ್ನು ನಾನೆಲ್ಲೂ ಕಂಡಿಲ್ಲ. ನನ್ನ ಬದುಕಿಗೆ ಇನ್ನೇನು ಅರ್ಥ? ಇನ್ನೇಕೆ ಬದುಕಿರಬೇಕು ಎಂದು ಗೋಳಾಡುತ್ತ ತಾನೂ ಅಜ್ಜನೊಂದಿಗೆ ಚಿತೆಯೇರಲು ಹೊರಟಿದ್ದಳು. ಅವಳನ್ನು ತಡೆದು ನಿಲ್ಲಿಸುವ ಹೊತ್ತಿಗೆ ಎಲ್ಲರಿಗೂ ಸಾಕು ಸಾಕಾಯಿತು. ಸತೀ ಪದ್ಧತಿ ಪಶ್ಚಿಮದವರಿಗೆ ಆತ್ಮಹತ್ಯೆಯಂತೆ ತೋರಬಹುದು. ಭಾರತದಲ್ಲಿ ಶೇಕಡಾ ೯೯ರಷ್ಟು ಸತೀ ಆಚರಣೆಗಳು ಆತ್ಮಹತ್ಯೆಯೇ ಅಥವ ಹತ್ಯಾ ಕಾಂಡವೇ ಸರಿ. ಆದರೆ ಶೇಕಡಾ ೧ರ ಬಗ್ಗೆ ಈ ಮಾತುಗಳನ್ನು ಹೇಳಲಾರೆ. ಆ ಶೇಕಡಾ ೧ರಷ್ಟು ಮಂದಿಯ ಪಾಲಿಗೆ ಸಾವೇ ಗಂತವ್ಯ, ಬದುಕಿರುವುದೇ ಆತ್ಮಹತ್ಯೆ. ನನ್ನ ಬದುಕಿನ ಅರ್ಥವೇ ಕಣ್ಮರೆಯಾಯಿತಲ್ಲ, ಮತ್ತೆ ಹಳ್ಳಿಗೆ ಹಿಂದಿರುಗಲಾರೆ, ಅಲ್ಲಿ ಒಬ್ಬಳೇ ಜೀವಿಸಲಾರೆ. ಈ ಅರವತ್ತು ವರ್ಷಗಳಲ್ಲಿ ಒಮ್ಮೆಯೂ ಅವನಿಗೆ ಬಡಿಸದೇ ನಾನು ಉಂಡವಳಲ್ಲ. ಈಗ ಹೇಗೆ ಊಟ ಮಾಡಲಿ, ಹೇಗೆ ಒಬ್ಬಳಿಗಾಗಿ ಅಡುಗೆ ಮಾಡಿಕೊಳ್ಳಲಿ. ನನ್ನ ಅಡುಗೆಯನ್ನು ಅವನು ತೃಪ್ತಿಯಿಂದ ತಿನ್ನುತ್ತಿದ್ದುದನ್ನು ನೋಡಲೆಂದೇ ನಾನು ಈತನಕ ಅಡುಗೆ ಮಾಡುತ್ತಿದ್ದುದು. ಈಗ ನಾನು ಯಾರಿಗಾಗಿ ಅಡುಗೆ ಮಾಡಬೇಕು?. ಮನೆಯವರೆಲ್ಲಾ ಸೇರಿ ಚಿತೆಯೇರುವುದನ್ನು ತಡೆದ ಮೇಲೆ ನನ್ನ ಅಜ್ಜಿ ಹನ್ನೆರಡು ದಿನಗಳ ಕಾಲ ಅನ್ನ ನೀರು ಸೇವಿಸದೇ ಕುಳಿತುಬಿಟ್ಟಳು. ಕೊನೆಗೆ ಅವಳನ್ನು ಊಟಕ್ಕೆ ಒಪ್ಪಿಸಲು ಮನೆಯವರೆಲ್ಲ ನನ್ನನ್ನೇ ಕಳುಹಿಸಿದರು. ಹುಟ್ಟಿದಂದಿನಿಂದ ಅವಳೊಂದಿಗೇ ಇದ್ದ ನನಗೆ ಮಾತ್ರ ಅವಳನ್ನು ಸಂತೈಸಲು ಸಾಧ್ಯವಾಯಿತು. ಅಜ್ಜಿ, ಯಾರಿಗಾಗಿ ಬದುಕಿರಲಿ ಎಂದು ಅಳುವೆಯಲ್ಲ, ನನಗಾಗಿ, ನನ್ನೊಡನೆ ಬದುಕಬಾರದೇ? ಬೇಡವೆಂದರೆ ಹೇಳು ಸತಿ ಹೋಗಲು ನಾನೇ ಅಣಿ ಮಾಡುತ್ತೇನೆ ಇಬ್ಬರೂ ಚಿತೆಯೇರೋಣ ಎಂದೆ
ಏನು
ಹೌದು ನಾನಾದರೂ ಏಕಿರಬೇಕು? ಹೋದರೆ ಇಬ್ಬರಿಗೂ ನೆಮ್ಮದಿ
ಸಾಕು ನಿಲ್ಲಿಸು. ಅದೆಂಥ ಮಾತು? ಗಂಡ ಸತ್ತವಳು ಸತಿ ಹೋಗುತ್ತಾಳೆ, ಸಣ್ಣ ಮಕ್ಕಳು ಹೋಗುವುದುಂಟೇ? ಇಂಥ ವಿಷಯದಲ್ಲೆಲ್ಲ ತಮಾಷೆ ಮಾಡುವುದೇ?
ಹಾಗಾದರೆ ನೀನು ಹಟ ನಿಲ್ಲಿಸು, ನಡೆ ಅಪ್ಪ ಅಮ್ಮನೊಂದಿಗೆ ಇಬ್ಬರೂ ಇರೋಣ
ಆದರೆ ಅವಳು ತುಂಬ ಸ್ವಾಭಿಮಾನಿ, ಅಳಿಯನ ಮನೆಯಲ್ಲಿರಲು ಅವಳ ಮನಸ್ಸು ಒಪ್ಪಲಿಲ್ಲ. ಮತ್ತೆ ಹಳ್ಳಿಗೆ ಹಿಂದಿರುಗಲೂ ಅವಳಿಗೆ ಮನಸ್ಸಿರಲಿಲ್ಲ. ಹಳ್ಳಿಯ ಮನೆಯ ಮುಂದೆ ಒಂದು ಪುಟ್ಟ ಕೆರೆ ಇತ್ತು. ಆದರೆ ಈ ಊರಿನಲ್ಲಿ ಕೆರೆ ಇರಲಿಲ್ಲ. ಆದರೆ ನದಿ ಹರಿಯುತ್ತಿತ್ತು. ನದೀ ತೀರದಲ್ಲಿ ಅವಳಿಗಾಗಿ ಒಂದು ಸಣ್ಣ ಮನೆಯನ್ನು ಗೊತ್ತು ಮಾಡಲಾಯಿತು. ನಾನು ದಿನವಿಡೀ ಶಾಲೆಯಲ್ಲೋ, ಬೀದಿಗಳಲ್ಲೋ ನೂರೆಂಟು ಚೇಷ್ಟೆಗಳನ್ನು ಮಾಡುತ್ತ ಸಂಜೆಯಾದೊಡನೆ ಅಜ್ಜಿಯ ಪುಟ್ಟ ಗುಡಿಸಲಿಗೆ ಬಂದು ಸೇರುತ್ತಿದ್ದೆ. ಆಗೆಲ್ಲ ಅಜ್ಜಿ ಇನ್ನಾದರೂ ಅಪ್ಪ ಅಮ್ಮನ ಜೊತೆ ಇರಬಾರದೇ? ಈಗಾಗಲೇ ಏಳು ವರ್ಷಗಳ ಕಾಲ ನಿನ್ನನ್ನು ಅವರಿಂದ ದೂರ ಮಾಡಿದ್ದೇವೆ. ಆ ಅಜ್ಜ-ಅಜ್ಜಿ ನಮ್ಮ ಮಗುವನ್ನು ಸಾಕುವ ನೆಪದಲ್ಲಿ ಮುದ್ದು ಮಾಡಿ ಕೆಡಿಸಿದರು ಎಂದು ಊರೆಲ್ಲ ಹೇಳಿಕೊಳ್ಳುತ್ತಿದ್ದಾರಂತೆ. ಈಗಲೂ ನೀನು ಇಲ್ಲಿಗೆ ಬಂದರೆ ಅವರು ನನ್ನ ಬಗ್ಗೆ ಏನೆಂದುಕೊಂಡಾರು? ಎಂದು ಆಕ್ಷೇಪಿಸುತ್ತಿದ್ದಳು.
ಆಗ ನಾನು ಅಜ್ಜಿ ನಿಜ ಹೇಳು ನಾನಿಲ್ಲದೆ ನಿನಗೆ ನಿದ್ರೆ ಬರುವುದೇ? ಬರಬೇಡ ಎನ್ನುವವಳು ಪ್ರತಿದಿನ ಎರಡನೆಯ ಹಾಸಿಗೆಯನ್ನು ಏಕೆ ಹಾಸುವೆ? ನಾಳೆ ಪುನಃ ಬರುತ್ತೇನೆ ಎಂದು ಎಂದಾದರೂ ನಾನು ಹೇಳುವೆನೇ? ನಾಳೆಯ ಬಗ್ಗೆ ಯಾರು ಬಲ್ಲರು? ನಾನು ನಾಳೆಯ ಬಗ್ಗೆ ಯೋಚಿಸುವವನೇ ಅಲ್ಲ ಎಂದು ನಿನಗೆ ಚೆನ್ನಾಗೇ ಗೊತ್ತು.
ಮಲಗುವ ಮುನ್ನ ಒಂದಿಷ್ಟು ಸಿಹಿ ತಿಂಡಿ ತಿನ್ನುವ ಅಭ್ಯಾಸ ನನಗೆ ಮೊದಲಿನಿಂದಲೂ ಇತ್ತು. ಅದಿಲ್ಲದೆ ನನಗೆ ನಿದ್ರೆಯೇ ಬರುತ್ತಿರಲಿಲ್ಲ. ಈ ಅಭ್ಯಾಸವನ್ನು ಇತ್ತೀಚೆಗಷ್ಟೇ ನನ್ನ ಡಾಕ್ಟರರು ಬಿಡಿಸಿದರು. ಅದನ್ನು ಬಿಡಿಸಲೂ ೨-೩ ವರ್ಷ ಹಿಡಿಯಿತು. ನನ್ನ ಅಜ್ಜಿ ನನಗಾಗಿ ಹಾಸಿಗೆ ಅಣಿ ಮಾಡುವುದರೊಂದಿಗೆ ಸಿಹಿ ತಿಂಡಿಗಳನ್ನೂ ಇಟ್ಟಿರುತ್ತಿದ್ದಳು. ಹಾಗಾಗಿ ನಾನು ಕೇಳಿದೆ ಯಾರಿಗಾಗಿ ಈ ಸಿಹಿತಿಂಡಿಗಳು, ನೀನಂತೂ ತಾತ ತೀರಿಕೊಂಡ ಮೇಲೆ ಸಿಹಿ ತಿನ್ನುವುದನ್ನೇ ಬಿಟ್ಟಿರುವೆ. ತಾತನಿಗೆ ಸಿಹಿ ಎಂದರೆ ಇಷ್ಟ. ಮಲಗುವ ಮುನ್ನ ಅವನಿಗೂ ಒಂದಿಷ್ಟು ಸಿಹಿ ತಿನ್ನಲೇ ಬೇಕು. ನನಗೆ ಈ ಅಭ್ಯಾಸ ಅಂಟಿಕೊಂಡಿದ್ದು ಅವನಿಂದಲೇ. ಜೈನರ ಮನೆಗಳಲ್ಲಿ ಎಲ್ಲಾದರೂ ರಾತ್ರಿಯ ಹೊತ್ತು ಸಿಹಿ ತಿನ್ನುವುದುಂಟೇ? ಜೈನರು ಸೂರ್ಯ ಮುಳುಗಿದ ಮೇಲೆ ಒಂದು ಹನಿ ನೀರನ್ನೂ ಕುಡಿಯುವುದಿಲ್ಲ. ಆದರೆ ನಮ್ಮದು ಕುಗ್ರಾಮ ಹಾಗು ಬೇರೆ ಜೈನ ಕುಟುಂಬಗಳು ಅಲ್ಲಿ ಇರದುದರಿಂದ ನಮ್ಮ ಮನೆಯಲ್ಲಿ ಈ ಚಟ ಬೆಳೆಯಿತು. ನನಗೆ ಅಪ್ಪ ಅಮ್ಮನ ಜೊತೆ ಮಲಗಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕೆ ಎರಡು ಕಾರಣ: ಒಂದು, ಅಲ್ಲಿ ನನ್ನ ವಯಸ್ಸಿನ ಬೇಕಾದಷ್ಟು ಮಕ್ಕಳಿದ್ದರು. ನನಗೆ ಸಿಹಿ ಕೊಟ್ಟರೆ ಅವರೂ ಕೇಳುತ್ತಿದ್ದರು. ಅಲ್ಲದೆ, ಅದೊಂದು ಅವಿಭಾಜ್ಯ ಜೈನ ಕುಟುಂಬ, ಅಲ್ಲಿ ರಾತ್ರಿಯ ಹೊತ್ತು ಸಿಹಿ ತಿನ್ನುವಂತಿಲ್ಲ. ಎರಡನೆಯದಾಗಿ, ಅಜ್ಜಿ ಒಂಟಿಯಾಗಿಬಿಡುವುದಿಲ್ಲವೇ ಎಂಬ ಚಿಂತೆ ನನ್ನದು. ಈ ಮನೆಯಲ್ಲಾದರೂ ಯಾರೂ ಒಂಟಿತನ ಅನುಭವಿಸುವುದಿಲ್ಲ. ಅವನು ಅಜ್ಜಿಯ ಮನೆಯಲ್ಲಿ ಮಲಗುತ್ತಾನೆ ಎಂದು ಮನೆಯವರೂ ಸುಮ್ಮನಾಗುತ್ತಿದ್ದರು. ಹೀಗೆ ಮೊದಲಿನಿಂದಲೂ ನಾನು ನನ್ನ ಮನಸ್ಸಿಗೆ ಬಂದಿದ್ದನ್ನೇ, ಅದು ಸರಿ ಇರಲಿ ತಪ್ಪಿರಲಿ, ಮಾಡುವುದನ್ನು ರೂಢಿಸಿಕೊಂಡೆ.
ಆದರೆ ನನ್ನ ಅಮ್ಮನಿಗೇಕೋ ಮಗನಲ್ಲಿ ಅಪ್ಪ-ಅಮ್ಮನ ಬಗ್ಗೆ ಬಾಂಧವ್ಯ ಮೂಡಲೇ ಇಲ್ಲವಲ್ಲ ಎಂಬ ಕೊರಗು. ನಮ್ಮ ಜೊತೆಯೇ ಮಲಗು ಎಂದು ಆಗಾಗ ಹೇಳುತ್ತಿದ್ದಳು. ಆದರೆ ನಮ್ಮದು ಅವಿಭಾಜ್ಯ ಕುಟುಂಬ. ನಮ್ಮ ಮನೆಯಲ್ಲಿ ೪೦ರಿಂದ ೫೦ ಜನ ವಾಸಿಸುತ್ತಿದ್ದರು. ಅತ್ತೆ, ಮಾವ, ಚಿಕ್ಕಪ್ಪ, ದೊಡ್ಡಪ್ಪ ಅವರ ನಂಟರುಗಳು ಹೀಗೆ,.. ಅತಿಥಿಗಳಿಗಂತೂ ಲೆಕ್ಕವೇ ಇಲ್ಲ. ಒಮ್ಮೆ ಒಬ್ಬ ಅತಿಥಿ ಬಂದರೆ ಆಯಿತು ನೀವು ಯಾರು? ಎಂದು ಹೊರಡುವಿರಿ ಎಂದು ಅಲ್ಲಿ ಯಾರೂ ಕೇಳುತ್ತಿರಲಿಲ್ಲ. ಅಲ್ಲಿ ಯಾರು ಮನೆಯವರೋ ಯಾರು ಹೊರಗಿನವರೋ ಒಂದೂ ಗೊತ್ತಾಗುತ್ತಿರಲಿಲ್ಲ. ಭಾರತದ ಅವಿಭಾಜ್ಯ ಕುಟುಂಬಗಳಲ್ಲಿ ಸಂಬಂಧವೇ ಇಲ್ಲದವರೂ ನುಗ್ಗಿಬಿಡಬಹುದು, ಇದ್ದಷ್ಟು ದಿನ ಇದ್ದು ಹೋಗಬಹುದು. ಯಾರೂ ಕೇಳುವುದಿಲ್ಲ. ಎಲ್ಲೋ ಅಮ್ಮನ ಕಡೆಯವರಿರಬಹುದು ಎಂದು ಅಪ್ಪ, ಅಪ್ಪನ ಸಂಬಂಧಿಗಳೆಂದು ಅಮ್ಮ ತಿಳಿದುಕೊಂಡು ಯಾರ ಇತ್ಯೋಪರಿಗಳನ್ನೂ ಕೇಳಲು ಹೋಗುತ್ತಿರಲಿಲ್ಲ. ಸಾಲದೆಂಬಂತೆ ಹಿರಿಯರ ಅದರಲ್ಲೂ ಸಂಬಂಧಿಕರ ಕಾಲಿಗೆ ಬಿದ್ದು ನಮಸ್ಕರಿಸುವ ಪದ್ಧತಿ ನಮ್ಮಲ್ಲಿದೆ. ಮನೆಗೆ ಯಾರೇ ಬಂದರೂ ನನ್ನ ಅಪ್ಪ ’ಅವರು ದೊಡ್ಡವರು, ನಮ್ಮ ದೂರದ ನಂಟರು. ಅವರ ಕಾಲಿಗೆ ನಮಸ್ಕಾರ ಮಾಡು’ ಎಂದು ಹೇಳುತ್ತಿದ್ದರು. ಅವರಲ್ಲೇನಾದರೂ ದೊಡ್ಡತನ ಕಾಣಿಸಿದರೆ ಖಂಡಿತ ನಮಸ್ಕಾರ ಮಾಡುತ್ತೇನೆ ಎಂದು ಹಿಂದೆ ಮುಂದೆ ನೋಡದೇ ಹೇಳಿಬಿಡುತ್ತಿದ್ದೆ. ಹಾಗಾಗಿ ಮನೆಗೆ ಯಾರಾದರೂ ಬಂದರೆ ಸಾಕು ಅಪ್ಪ ನನ್ನನ್ನು ಆಚೆ ಕಳಿಸಿಬಿಡುತ್ತಿದ್ದರು. ನಾನು ಅಮ್ಮನಿಗೆ ನೇರವಾಗಿ ಹೇಳುತ್ತಿದ್ದೆ ನಾನು ಮತ್ತೆ ಎತ್ತಿನ ಬಂಡಿ ಹತ್ತಿಕೊಂಡು ಹಳ್ಳಿಗೆ ಹಿಂದಿರುಗುತ್ತೇನೆ. ಹೇಗಿದ್ದರೂ ಹಳ್ಳಿಯ ಜನ ನನಗೆ ಗೊತ್ತು. ನನ್ನಂತಹ ಸಣ್ಣ ಹುಡುಗನಿಗೆ ಅವರು ನೆರವಾಗದೆ ಇರುವುದಿಲ್ಲ. ಅಲ್ಲದೆ, ಹೋಗುವ ದಾರಿಯೂ ಗೊತ್ತು. ಆದರೆ ಈ ಮನೆಯಲ್ಲಿ ಮಾತ್ರ ನಾನಿರಲಾರೆ. ಇದೇನು ಮನೆಯೋ ಸಂತೆಯೋ ತಿಳಿಯದು. ನಿನಗೆ ನೋವಾಗಬಹುದು. ಆದರೆ ನಾನೇನು ಮಾಡಲಿ ನಾನು ಅಜ್ಜಿಯೊಡನೆ ಇರುತ್ತೇನೆ. ನನ್ನನ್ನು ಸರಿಯಾಗಿ ತಿಳಿದುಕೊಂಡಿರುವವಳು ಅವಳೊಬ್ಬಳೇ. ಅಂದು ನನ್ನ ಮಾತುಗಳಿಂದ ಅಮ್ಮನಿಗೆ ನೋವಾಗಿರಬೇಕು. ಅಂದಿನಿಂದ ಇಂದಿನವರೆಗೂ ಅವಳನ್ನು ನಾನು ನೋಯಿಸುತ್ತಲೇ ಬಂದಿದ್ದೇನೆ. ಅಷ್ಟು ವರ್ಷಗಳ ಕಾಲ ಅಜ್ಜನ ಹಳ್ಳಿಯ ವಾತಾವರಣದಲ್ಲಿ ಬೆಳೆದು ಈಗ ಇಲ್ಲಿಗೆ ಹೊಂದಿಕೊಳ್ಳಲು ನನ್ನಿಂದಾಗಲಿಲ್ಲ. ಯಾವಾಗಲೂ ಒಬ್ಬರಲ್ಲ ಒಬ್ಬರಿಗೆ ಹೆರಿಗೆ ಅಥವ ಬಾಣಂತನ ಆಗುತ್ತಲೇ ಇರುತ್ತಿತ್ತು. ಅಲ್ಲಿ ಎಲ್ಲ ಹೆಂಗಸರೂ ಹೊಟ್ಟೆ ಬಿಟ್ಟುಕೊಂಡೇ ಓಡಾಡುತ್ತಿದ್ದರು. ಒಬ್ಬರ ಮುಖ ಪರಿಚಯವೂ ನನಗಿಲ್ಲ. ಒಮ್ಮೊಮ್ಮೆ ಹುಚ್ಚು ಹಿಡಿಯುವಂತಾಗುತ್ತಿತ್ತು. ಈಗ ನನಗೆ ಹುಚ್ಚು ಹಿಡಿಯಲು ಸಾಧ್ಯವಿಲ್ಲ ಬಿಡಿ. ಆದರೂ ಒಮ್ಮೊಮ್ಮೆ ಹಾಗೆನ್ನಿಸುತ್ತಿತ್ತು. ಎಲ್ಲೋ ಅವರನ್ನು ನೋಡಿಯೇ ನನಗೆ ಸಂಸಾರ ಮಾಡುವುದರ ಬಗ್ಗೆ ಜಿಗುಪ್ಸೆ ಮೂಡಿರಬೇಕು. ಆದರೂ ಯಾವ ಕಾರಣಕ್ಕೂ ಅಮ್ಮನ ಮನಸ್ಸನ್ನು ನೋಯಿಸಬಾರದು ಎಂದು ಆ ದಿನ ಮನಸ್ಸಿನಲ್ಲಿ ನಿರ್ಧರಿಸಿಕೊಂಡೆ. ಆದರೆ ನನಗೆ ಗೊತ್ತು ಅಂದಿನಿಂದಲೂ ಅವಳ ಮನಸ್ಸಿಗೆ ನಾನು ಗಾಯ ಮಾಡುತ್ತಲೇ ಬಂದಿದ್ದೇನೆ. ಅವಳ ಒಂದೇ ಒಂದು ಆಸೆಯನ್ನೂ ನಾನು ಈಡೇರಿಸಿಲ್ಲ. ಕೊನೆಗೆ ಇವನೊಬ್ಬ ಮಗ ನಮ್ಮ ಕೈಬಿಟ್ಟು ಹೋದ ಎಂದು ಅವಳೇ ನಿರ್ಧರಿಸಿಕೊಂಡು ಸಮಾಧಾನ ತಂದುಕೊಂಡಳು.
ಇನ್ನೊಬ್ಬ ತಾತ
ನನ್ನ ಇನ್ನೊಬ್ಬ ತಾತನೂ ಅಷ್ಟೇ(ತಂದೆಯ ತಂದೆ). ನನ್ನನ್ನು ಬಹುವಾಗಿ ಪ್ರೀತಿಸುತ್ತಿದ್ದನು. ಹಳ್ಳಿಯಲ್ಲಿ ಹೊಲಗದ್ದೆ ನೋಡಿಕೊಳ್ಳುತ್ತಿದ್ದ ಆ ತಾತನು ಆಗೊಮ್ಮೆ ಈಗೊಮ್ಮೆ ಮಗನ ಮನೆಗೆ ಬರುತ್ತಿದ್ದನು. ಅವನಿಗೆ ಊರಿಗಿಂತ ಹಳ್ಳಿಯನ್ನೆ ಇಷ್ಟಪಡುತ್ತಿದ್ದ. ಆಗಾಗ ನಾನೂ ಅವನೊಂದಿಗೆ ಹಳ್ಳಿಗೆ ಹೋಗುತ್ತಿದ್ದೆ. ಬೆವರು ಸುರಿಸಿ ದುಡಿಯುತ್ತಿದ್ದ ತಾತನಿಗೆ ಪ್ರತಿ ದಿನ ಯಾರಾದರೂ ಕಾಲನ್ನು ಒತ್ತಬೇಕಾಗಿತ್ತು. ಅವನ ಹಳ್ಳಿಯಲ್ಲಿದ್ದಾಗಲೆಲ್ಲ ನಾನೇ ಅವನ ಕಾಲನ್ನು ನೀವುತ್ತಿದ್ದೆ. ಅವನಿಗೆ ಸಹಿ ಮಾಡುವುದನ್ನು ಬಿಟ್ಟರೆ ಬೇರೆ ಓದು ಬರಹ ಗೊತ್ತಿರಲಿಲ್ಲ. ನಮ್ಮಪ್ಪ ಶಾಲೆಗೆ ಕಳಿಸದೇ ಒಳ್ಳೆಯದನ್ನೇ ಮಾಡಿದ ಎಂದು ಹೆಮ್ಮೆಯಿಂದ ಹೇಳುತ್ತಿದ್ದ. ಪುಸ್ತಕಗಳು ಮನುಷ್ಯನನ್ನು ಹಾಳು ಮಾಡುತ್ತವೆ ಎನ್ನುವುದು ಅವನ ಸಿದ್ಧಾಂತ. ನಿಮ್ಮಪ್ಪ, ಚಿಕ್ಕಪ್ಪಂದಿರು ಪುಸ್ತಕಗಳನ್ನು ಓದಿ ಹಾಳಾದರು. ನೀನಾದರೂ ಹುಷಾರಾಗಿರು. ಈ ಧಾರ್ಮಿಕ ಗ್ರಂಥಗಳನ್ನೆಲ್ಲ ಓದಿ ಏನು ಲಾಭ? ಈಗ ನಾನು ಓದದೇ ತಿಳುವಳಿಕೆ ಪಡೆಯುತ್ತಿಲ್ಲವೇ. ಬದುಕಿನ ಅನುಭವಗಳಿಂದ ತಿಳುವಳಿಕೆಯನ್ನು ನೇರವಾಗಿ ಪಡೆಯುವುದೇ ಸರಿಯಾದ ಕ್ರಮ ಎನ್ನುತ್ತಿದ್ದ. ಆದರೂ ನಾನು ಅವನಿಗೆ ಇಷ್ಟವಾಗುವ ಪುಸ್ತಕಗಳನ್ನು ಆರಿಸಿ ಓದಿ ಹೇಳುತ್ತಿದ್ದೆ. ನನಗೀಗಲೂ ಬೇಸರವಾಗುತ್ತದೆ, ’ಜೋರ್ಬಾ ದಿ ಗ್ರೀಕ್’ ಪುಸ್ತಕವನ್ನು ಅನುವಾದಿಸಿ ಓದಿದ್ದರೆ ಅವನಿಗೆ ತುಂಬ ಖುಷಿಯಾಗುತ್ತಿತ್ತು. ಆದರೆ ಆ ಕೃತಿ ನನಗೆ ಪರಿಚಯವಾಗುವ ಹೊತ್ತಿಗಾಗಲೇ ಅವನು ತೀರಿಕೊಂಡಿದ್ದ. ನನ್ನ ಹಾಗು ತಾತನ ನಡುವೆ ಒಂದು ಬಗೆಯ ಬಾಂಧವ್ಯ ಏರ್ಪಟ್ಟಿತ್ತು. ಆ ಬಾಂಧವ್ಯ ಮನೆಯ ಇನ್ನಾರೊಂದಿಗೂ ಏರ್ಪಟ್ಟಿರಲಿಲ್ಲ. ನಾವಿಬ್ಬರೂ ಗೆಳೆಯರಂತೆ ನಡೆದುಕೊಳ್ಳುತ್ತಿದ್ದುದನ್ನು ಕಂಡು ಮನೆಯವರೆಲ್ಲ ಇಬ್ಬರನ್ನೂ ಅಪಹಾಸ್ಯ ಮಾಡುತ್ತಿದ್ದರು. ನನ್ನ ತಾತನಿಗೆ ದೇವರು ಧರ್ಮ ಇತ್ಯಾದಿಗಳ ಬಗ್ಗೆ ಒಂದಿಷ್ಟೂ ನಂಬಿಕೆ ಇರಲಿಲ್ಲ. ಇದ್ದಷ್ಟು ಕಾಲ ತಿಂದುಂಡು ಸುಖಪಡಬೇಕು ಎನ್ನುವುದೇ ಅವನ ಬದುಕಿನ ಸಿದ್ಧಾಂತ. ಆದರೆ ನಮ್ಮಪ್ಪ ಇವನಿಗೆ ತದ್ವಿರುದ್ಧ ಮಹಾ ಧಾರ್ಮಿಕ ವ್ಯಕ್ತಿ. ಅಪ್ಪ ಮಂದಿರಕ್ಕೆ ಹೋಗುವುದನ್ನು ಕಂಡಾಗಲೆಲ್ಲ ನೋಡು, ಆ ಜೀವವಿಲ್ಲದ ವಿಗ್ರಹದೆದುರು ಕಾಲಹರಣ ಮಾಡಲು ಹೊರಟ ಎಂದು ಆಡಿಕೊಂಡು ನಗುತ್ತಿದ್ದ. ನನಗೆ ಚಾರ್ವಾಕ ದರ್ಶನದ ಬಗ್ಗೆಯೂ ಪ್ರೀತಿ ಹುಟ್ಟಲು ನನ್ನ ತಾತನೇ ಕಾರಣ. ಅವನಿಗೆ ಪ್ರತಿದಿನ ರುಚಿಯಾದ ಊಟವೇ ಆಗಬೇಕು. ರುಚಿ ಕೆಡಿಸುತ್ತಾರೆ ಎಂದು ಅಡುಗೆ ಮನೆಗೆ ಯಾರನ್ನೂ ಸೇರಿಸದೇ ತಾನೇ ಅಡುಗೆ ಮಾಡಿಕೊಳ್ಳುತ್ತಿದ್ದ. ನಾನು ದೇಶದೆಲ್ಲೆಡೆ ಸಾವಿರಾರು ಮನೆಗಳಲ್ಲಿ ಅತಿಥಿಯಾಗಿ ಉಳಿದುಕೊಂಡಿದ್ದೇನೆ. ಆದರೆ ತಾತನ ಕೈರುಚಿಯನ್ನು ಮತ್ತೆಲ್ಲೂ ಸವಿದಿಲ್ಲ. ವಾರಕ್ಕೊಮ್ಮೆ ಮನೆಮಂದಿಗೆಲ್ಲ ಹಬ್ಬದಡುಗೆ ಮಾಡಿ ತಾನೇ ನಿಂತು ಬಡಿಸುತ್ತಿದ್ದ. ಅವನು ಅಡುಗೆ ಮಾಡುವ ಸಮಯದಲ್ಲಿ ಮನೆಯ ಹೆಂಗಸರಿಗಾಗಲಿ, ಆಳು ಕಾಳುಗಳಿಗಾಗಲಿ ಅಡುಗೆ ಮನೆ ಪ್ರವೇಶಿಸುವಂತಿರಲಿಲ್ಲ. ಆದರೆ ನನಗೆ ಅವನ ಪಾಕ ಪ್ರಾವೀಣ್ಯವನ್ನು ದೂರ ನಿಂತು ನೋಡಲು ಅನುಮತಿ ಇತ್ತು ಸರಿಯಾಗಿ ನೋಡಿ ಕಲಿತುಕೋ. ಅಡುಗೆಗೆ ಬೇರೆಯವರನ್ನು ಅವಲಂಬಿಸಬೇಡ. ನಮ್ಮ ರುಚಿ ಏನೆಂದು ಬೇರೆಯವರಿಗೇನು ಗೊತ್ತು? ಎನ್ನುತ್ತಿದ್ದ. ಅಯ್ಯೋ, ಅಡುಗೆ ಮನೆಯಲ್ಲಿ ಗಂಟೆಗಟ್ಟಲೆ ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ ಎನ್ನುತ್ತಿದ್ದೆ. ಅವನಿಂದ ಅಡುಗೆಯನ್ನೇನೂ ಕಲಿಯದಿದ್ದರೂ ಅವನ ಅಡುಗೆ ಮಾಡುವ ರೀತಿ ನನಗೆ ಇಷ್ಟವಾಗುತ್ತಿತ್ತು. ಒಬ್ಬ ಕಲಾವಿದನ ಭಂಗಿಯಲ್ಲಿ ಗಂಭೀರವಾಗಿ ವ್ಯವಧಾನದಿಂದ ಅಡುಗೆ ಮಾಡುತ್ತಿದ್ದ. ಅವನ ಪ್ರಕಾರ ಅಡುಗೆ ಒಂದು ಕೆಲಸವಲ್ಲ, ಅದೊಂದು ಕಲೆ. ಅಡುಗೆಯಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ರಾಜಿಯಾಗುತ್ತಿರಲಿಲ್ಲ. ಮಾಡಿದ್ದನ್ನೆಲ್ಲ ಆಚೆ ಎಸೆದು ಮತ್ತೆ ಹೊಸದಾಗಿ ಅಡುಗೆ ಮಾಡುತ್ತಿದ್ದ. ಹಲವು ಬಗೆಯ ಮದ್ಯಗಳನ್ನು ತಯಾರಿಸುವುದರಲ್ಲೂ ಅವನದು ಎತ್ತಿದ ಕೈ. ಜೈನಧರ್ಮವನ್ನು ಟೀಕಿಸಲು ಊರಿನ ನಾಸ್ತಿಕ ಗೆಳೆಯರೆಲ್ಲ ಅಜ್ಜನ ಮನೆಯ ಮುಂದಿನ ಜಗುಲಿಯಲ್ಲಿ ಸಂಜೆ ಹೊತ್ತು ಸೇರುತ್ತಿದ್ದರು. ಆಮೇಲೆ ಊಟ. ಜೈನಧರ್ಮದಲ್ಲಿ ಸೂರ್ಯಾಸ್ತ ಆದ ಮೇಲೆ ಆಹಾರ ಸೇವನೆ ನಿಷಿದ್ಧ. ಆದರೆ ತಾತನಾದರೂ ಕತ್ತಲಾದ ಮೇಲೆಯೇ ಊಟ ಮಾಡುತ್ತಿದ್ದ. ತಾತನ ಈ ಅಭ್ಯಾಸದ ಬಗ್ಗೆ ಮನೆಮಂದಿಗೆಲ್ಲ ಅಸಹನೆ ಇದ್ದರೂ ಅವನು ಹಿರಿಯನಾದುದರಿಂದ ಯಾರೂ ನೇರವಾಗಿ ಅವನಿಗೆ ಹೇಳುತ್ತಿರಲಿಲ್ಲ. ಸೂರ್ಯ ಮುಳುಗಿದನೇ ನೋಡಿಕೊಂಡು ಬಾ’ ಎಂದು ನನ್ನನ್ನು ಹೊರಗೆ ಕಳಿಸುತ್ತಿದ್ದ. ಆಗ ಮನೆಯವರು ನಿನ್ನಜ್ಜ ನಿನ್ನನ್ನೂ ಹಾಳು ಮಾಡುತ್ತಿದ್ದಾನೆ ಎನ್ನುತ್ತಿದ್ದರು. ಬಾಬಾ, ಎಲ್ಲರೂ ದೇವರನ್ನು ನಂಬುತ್ತಾರಲ್ಲ,ನೀನೇಕೆ ನಂಬುವುದಿಲ್ಲ? ಎಂದು ಕೇಳುತ್ತಿದ್ದೆ. ಅದಕ್ಕೆ ಅವನು ಅವರಿಗೆಲ್ಲ ಹೆದರಿಕೆ ಎನ್ನುತ್ತಿದ್ದ ನಾನೇಕೆ ಹೆದರಲಿ? ನಾನೇನು ತಪ್ಪುಮಾಡಿದೆನೆಂದು ಹೆದರಲಿ? ಯಾರಿಗೂ ಕೇಡೆಣಿಸದೇ ಸುಖ ಸಂತೋಷ ಅನುಭವಿಸಿದರೆ ತಪ್ಪೇನು? ನನ್ನಂಥವನ ಮೇಲೆ ಅವನು ಸಿಟ್ಟು ಮಾಡಿಕೊಳ್ಳಲಾರ. ಒಂದು ವೇಳೆ ಅವನು ಸಿಕ್ಕರೆ ಇಂಥ ಪ್ರಪಂಚವನ್ನು ಏಕೆ ಸೃಷ್ಟಿ ಮಾಡಿದೆ ಎಂದು ನಾನೇ ಅವನನ್ನು ಕೇಳುತ್ತೇನೆ. ನನಗೇನೂ ಹೆದರಿಕೆ ಇಲ್ಲ ಎಂದು ಉತ್ತರಿಸುತ್ತಿದ್ದ. ಆಮೇಲೆ ನಾನು ಕಾಲೇಜಿನ ಪ್ರಾಧ್ಯಾಪಕನಾಗುವ ವೇಳೆಗೆ ಅವನು ಅಸುನೀಗಿದ.
ನನ್ನ ತಂದೆ
ನನ್ನ ತಂದೆ ಬಟ್ಟೆ ವ್ಯಾಪಾರಿ. ನಮ್ಮ ಅಂಗಡಿ ಆ ಊರಿನ ಪ್ರಸಿದ್ಧ ಮಳಿಗೆಗಳಲ್ಲೊಂದು. ನಮ್ಮಲ್ಲಿ ಒಳ್ಳೆಯ ಗುಣಮಟ್ಟದ ಬಟ್ಟೆಗಳು ಸಿಗುತ್ತಿದ್ದವು. ನಮ್ಮ ಅಂಗಡಿಯ ಹಿಂಭಾಗದಲ್ಲೇ ನಮ್ಮ ಮನೆ ಇತ್ತು. ಅಂಗಡಿಯ ಮೂಲಕವೇ ಮನೆಗೆ ಹೋಗಬೇಕಿತ್ತು. ನಾನು ಒಂದು ದಿನವೂ ಅಂಗಡಿಗೆ ಹೋದವನಲ್ಲ, ಅಲ್ಲಿ ಓಡಾಡುವಾಗ ಆ ಕಡೆ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಅದೇಕೆ ಹಾಗೆ ಅಂಗಡಿಯ ಕಡೆ ಮುಖ ಮಾಡದೇ ಓಡಾಡುತ್ತೀಯ, ಯಾವುದಾದರೂ ವ್ರತವನ್ನು ಪಾಲಿಸುತ್ತಿದ್ದೀಯಾ ಎಂದು ನನ್ನ ತಂದೆ ಕೇಳುತ್ತಿದ್ದರು. ಆಗ ನಾನು ಅಂಗಡಿಯ ವ್ಯವಹಾರಕ್ಕಿಳಿದು ಹಾಳಾಗಲು ನನಗಿಷ್ಟವಿಲ್ಲ ಎನ್ನುತ್ತಿದ್ದೆ. ನನ್ನ ಬದುಕಿನ ಪ್ರತಿಯೊಂದು ವಿಚಾರದಲ್ಲೂ ನಾನೇ ಮೊದಲ ಹಾಗು ಕೊನೆಯ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ. ಮೊದಲಿನಿಂದಲೂ ನಾನು ಇನ್ನೊಬ್ಬರ ಸಲಹೆ ಪಡೆಯುವ ಜಾಯಮಾನದವನಲ್ಲ. ಅದು ಮೊಂಡುತನವಲ್ಲ ನನಗೆ ಸರಿ ತೋರಿದ್ದನ್ನು ಧೈರ್ಯವಾಗಿ ಮಾಡುವುದು ನನ್ನ ಹುಟ್ಟುಗುಣ. ನಾನು ಚಿಕ್ಕವನಿದ್ದಾಗ ಕ್ಷೌರಿಕನ ಬಳಿ ಹೋಗುತ್ತಿರಲಿಲ್ಲ. ಹಾಗಾಗಿ ತಲೆಯಲ್ಲಿ ಉದ್ದವಾದ ಕೂದಲು ಬೆಳೆದಿತ್ತು. ನಾನು ಮನೆಯ ಒಳಗೆ ಹೊರಗೆ ಹೋಗುವಾಗಲೆಲ್ಲ ಅಂಗಡಿಯ ಗಿರಾಕಿಗಳು ಇದಾರು ಈ ಹೆಣ್ಣುಮಗು? ಎಂದು ನಮ್ಮಪ್ಪನನ್ನು ಕೇಳುತ್ತಿದ್ದರು. ಆಗೆಲ್ಲ ನಮ್ಮಪ್ಪ ತಲೆತಗ್ಗಿಸಿ ಏನು ಮಾಡುವುದು. ಅವನು ಮನೆಯಲ್ಲಿ ಯಾರ ಮಾತೂ ಕೇಳುವವನಲ್ಲ ಎನ್ನುತ್ತಿದ್ದ. ನನ್ನನ್ನು ಯಾರಾದರು ಹುಡುಗಿ ಎನ್ನಲಿ. ಅದರಿಂದ ಏನು ಪ್ರಮಾದವಾಗುತ್ತದೆ? ಅದಕ್ಕೇಕೆ ನೀನು ಬೇಸರ ಪಟ್ಟುಕೊಳ್ಳಬೇಕು ನನಗರ್ಥವಾಗುವುದಿಲ್ಲ ಎನ್ನುತ್ತಿದ್ದೆ. ಒಮ್ಮೆಯಂತೂ ನಮ್ಮಪ್ಪನಿಗೆ ನನ್ನ ಮೇಲೆ ತುಂಬ ಸಿಟ್ಟು ಬಂದಿತು. ನಮ್ಮ ಅಂಗಡಿಗೆ ವ್ಯಾಪಾರಕ್ಕೆ ಬಂದಿದ್ದ ಆ ಊರಿನ ತಹಶೀಲ್ದಾರನು ನನ್ನನ್ನು ನೋಡಿ ಇದೇನು ಈ ಹುಡುಗಿ ಗಂಡಸರ ವೇಷ ತೊಟ್ಟಿದೆಯಲ್ಲ ಎಂದು ಕೇಳಿದ. ಆ ದಿನ ಇವನದೇಕೋ ಅತಿಯಾಯಿತು ಎಂದು ಕತ್ತರಿ ಹಿಡಿದು ತಾನೇ ಕೂದಲನ್ನು ಕತ್ತರಿಸಲು ಬಂದ. ನಾನು ಏನೂ ಮಾತನಾಡದೆ ಸೀದ ಮನೆಯ ಎದುರಿಗಿದ್ದ ಕ್ಷೌರಿಕನ ಅಂಗಡಿಗೆ ಹೋದೆ. ಆ ಕ್ಷೌರಿಕನ ಹೆಸರು ನಾಥುರ್. ಅವನು ಬಂದ ಗಿರಾಕಿಗಳೊಂದಿಗೆ ಕ್ಷೌರ ಮಾಡುತ್ತಲೇ ಪ್ರಪಂಚದ ವಿಷಯಗಳನ್ನೆಲ್ಲ ಮಾತನಾಡುತ್ತಿದ್ದ. ಅವನ ಯಾವ ಮಾತುಗಳಿಗೂ ಅರ್ಥಾರ್ಥ ಸಂಬಂಧವಿರಲಿಲ್ಲ. ಮನುಷ್ಯನ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂದು ಅವನನ್ನು ನೋಡಿ ನಾನು ತಿಳಿದುಕೊಂಡೆ. ಮನುಷ್ಯನ ಮನಸ್ಸಿನೊಡನೆ ನನ್ನ ಮೊದಲ ಅನುಸಂಧಾನ ಅವನ ಮೂಲಕ ಆಯಿತು. ಅವನಿಗೆ ಮುಚ್ಚುಮರೆ ಎನ್ನುವುದು ಇರಲಿಲ್ಲ. ಮನಸ್ಸಿಗೆ ಬಂದದ್ದನ್ನು ಹಸಿ ಹಸಿಯಾಗಿಯೇ ಹೇಳಿಬಿಡುತ್ತಿದ್ದ. ಅವನ ಮನಸ್ಸಿಗೂ ನಾಲಗೆಗೂ ಕಿಂಚಿತ್ತೂ ಅಂತರವಿರಲಿಲ್ಲ. ನಮ್ಮ ಮನಸ್ಸಿನಲ್ಲಿ ಆಲೋಚನೆಗಳ ಗದ್ದಲ ಹೋರಾಟಗಳು ಒಂದೇ ಸಮನೆ ನಡೆಯುವುದಿಲ್ಲವೇ? ಅದೇ ಗದ್ದಲ ಹೋರಾಟಗಳು ಅವನ ನಾಲಗೆಯ ಮೇಲೆ ನಡೆಯುತ್ತಿತ್ತು ಅಷ್ಟೇ. ಇದರೊಂದಿಗೆ ಅಫೀಮಿನ ಚಟ ಬೇರೆ. ಅವನ ಮಾತುಗಳಿಗೆ ನಾನು ಮಾತ್ರ ಸ್ಪಂದಿಸುತ್ತಿದ್ದರಿಂದ ನನ್ನನ್ನು ನೋಡಿದೊಡನೆಯೇ ಅವನ ಮುಖ ಅರಳುತ್ತಿತ್ತು. ಕೂದಲು, ಉಗುರುಗಳನ್ನು ಕತ್ತರಿಸಿದರೆ ನನ್ನಿಂದ ಹಣ ತೆಗೆದುಕೊಳ್ಳುತ್ತಿರಲಿಲ್ಲ. ಆ ದಿನ ನಾನು ಅವನ ಅಂಗಡಿಗೆ ಹೋಗಿ ಕಾಕಾ ಈ ದಿನ ನೀನು ನಶೆಯಲ್ಲಿ ಇರದಿದ್ದರೆ ನನ್ನ ತಲೆಯನ್ನು ಬೋಳಿಸಿ ಬಿಡು ಎಂದು ಕೇಳಿದೆ(ಅವನನ್ನು ನಾನು ಕಾಕಾ ಎಂದೇ ಸಂಬೋಧಿಸುತ್ತಿದ್ದುದು). ಆದರೆ ಅಫೀಮಿನ ನಶೆಯಲ್ಲಿದ್ದ ಅವನು ಓಹೋ, ಧಾರಾಳವಾಗಿ ಎಂದು ಹೇಳಿ ಬೋಳಿಸಿಬಿಟ್ಟ. ಸಾಧಾರಣ ಸ್ಥಿತಿಯಲ್ಲಿ ಇದ್ದಿದ್ದರೆ ಅವನು ಹಾಗೆ ಬೋಳಿಸುತ್ತಿರಲಿಲ್ಲವೇನೋ. ಏಕೆಂದರೆ ತಂದೆ ಸತ್ತವರು ಮಾತ್ರ ಬೋಳಿಸಿಕೊಳ್ಳುವುದು ಸಂಪ್ರದಾಯ. ಹೀಗೆ ಮುಂಡನ ಮಾಡಿಸಿಕೊಂಡು ಮನೆಯ ಕಡೆ ಬಂದಾಗ ನನ್ನನ್ನು ನೋಡಿದ ಅಪ್ಪ ಗಾಬರಿಯಿಂದ ಇದೇನಾಯಿತು? ಎಂದು ಕೇಳಿದ. ನೀನು ಕೂದಲನ್ನು ಕತ್ತರಿಯಿಂದ ಕತ್ತರಿಸಿದರೆ ಮತ್ತೆ ಬೆಳೆಯುವುದು. ಹೀಗೆ ಬೋಳಿಸಿಕೊಂಡರೆ ತುಂಬ ದಿನದವರೆಗೂ ಚಿಂತೆಯಿಲ್ಲ, ಬೆಳೆದಾಗಲೆಲ್ಲ ಬಂದು ಬಿಡು ನನಗೆ ಬಿಡುವಿದ್ದರೆ ಉಚಿತವಾಗಿ ಮುಂಡನ ಮಾಡುತ್ತೇನೆ ಎಂದು ಕಾಕಾ ಹೇಳಿದ್ದಾನೆ ಎಂದೆ. ಆಗ ತಂದೆ ನಿಜವಾಗಿಯೂ ಈಗ ಇನ್ನೂ ಆಭಾಸವಾಗುತ್ತದೆ ಎಂದುಕೊಳ್ಳುತ್ತಲೇ ಬಂದಿದ್ದ ಗಿರಾಕಿಯೊಬ್ಬ ಏಕೆ ಈ ಹುಡುಗನ ತಂದೆ ಸತ್ತನೇ? ಎಂದು ಕೇಳಿಯೇ ಬಿಟ್ಟ. ಆ ಹೆಣ್ಣಿನ ವೇಷವೇ ಪರವಾಗಿರಲಿಲ್ಲ, ಈಗ ಹೀಗೆ ಮಾಡಿಕೊಂಡು ನೀನು ನನ್ನನ್ನೇ ತೀರಿಸಿಬಿಟ್ಟೆಯಲ್ಲ ಎಂದರು. ಅದೇ ಕೊನೆ ಅಲ್ಲಿಂದಾಚೆಗೆ ಅಪ್ಪ ನನ್ನ ಯಾವ ಅತಿರೇಕಗಳ ತಂಟೆಗೂ ಬರಲಿಲ್ಲ, ಹಾಗೊಂದು ವೇಳೆ ನನ್ನ ವಿಷಯದಲ್ಲಿ ತಲೆ ಹಾಕಿದರೆ ನಾನು ಎಲ್ಲವನ್ನೂ ಇನ್ನೂ ಹದಗೆಡಿಸುತ್ತೇನೆ ಎಂದು ಅವನಿಗೆ ತಿಳಿಯಿತು.
ಒಬ್ಬ ವ್ಯಕ್ತಿ ನನ್ನ ಅಪ್ಪನೊಂದಿಗೆ ಮಾತನಾಡಲು ಆಗಾಗ ಬರುತ್ತಿದ್ದನು. ಆತ ವಿಪರೀತ ವಾಚಾಳಿ. ಮಾತಿಗೆ ಯಾರಾದರೂ ಅವನಿಗೆ ಬೇಕೇ ಬೇಕು. ನಮ್ಮಪ್ಪನಿಗಂತೂ ಅವನ ಸಹವಾಸ ಸಾಕಾಗಿ ಹೋಗಿತ್ತು. ಒಮ್ಮೆ ನಾನು ಮನೆಯ ಮುಂದೆ ಆಟವಾಡುತ್ತಿದ್ದಾಗ ಅಪ್ಪ ನನ್ನ ಬಳಿ ಬಂದು ಅದೋ ಆ ವ್ಯಕ್ತಿ ಇತ್ತ ಬರುತ್ತಿದ್ದಾನೆ. ಇಲ್ಲಿ ಬಂದು ಒಂದೇ ಸಮನೆ ಮಾತಾಡುತ್ತ ಕುಳಿತು ನನ್ನ ತಲೆಬಿಸಿ ಮಾಡುತ್ತಾನೆ. ಅವನು ಬಂದಾಗಲೆಲ್ಲ ನಾನು ಏನಾದರೂ ನೆಪ ಹೇಳಿ ಮನೆ ಬಿಟ್ಟು ಹೋಗಬೇಕು. ಒಮ್ಮೊಮ್ಮೆ ’ನಾನೂ ನಿಮ್ಮೊಡನೆ ಬರುತ್ತೇನೆ, ಹಾಗೇ ಮಾತಾಡುತ್ತಾ ಹೋಗಬಹುದು’ ಎಂದು ಹೇಳಿ ಹಿಂಬಾಲಿಸುತ್ತಾನೆ. ಹಾಗಾಗಿ ನಾನು ಒಳಗಿರುತ್ತೇನೆ. ನೀನು ಇಲ್ಲೇ ಆಡುತ್ತಿದ್ದು ಅವನು ಬಂದರೆ ಅಪ್ಪ ಇಲ್ಲ ಎಂದು ಹೇಳಿಬಿಡು ಎಂದು ಹೇಳಿಕೊಟ್ಟ. ಎಷ್ಟೇ ಕಷ್ಟ ಬಂದರೂ ಸುಳ್ಳು ಹೇಳಬಾರದು ಎಂದು ಬೋಧಿಸುತ್ತಿದ್ದ ಅಪ್ಪ ಈಗ ಹೀಗೆ ಹೇಳಿಕೊಡುವುದೇ? ನನಗೆ ಅವನ ವರ್ತನೆ ಅರ್ಥವಾಗಲಿಲ್ಲ. ಆತ ಬಂದು ’ಮಗು, ಅಪ್ಪ ಎಲ್ಲಿ?’ ಎಂದು ಕೇಳಿದಾಗ ಒಳಗಿದ್ದಾನೆ, ಇಲ್ಲ ಎಂದು ಹೇಳುವಂತೆ ಹೇಳಿಕೊಟ್ಟಿದ್ದಾನೆ ಎಂದುಬಿಟ್ಟೆ. ಇದನ್ನು ಕೇಳಿಸಿಕೊಂಡ ಅಪ್ಪ ಕೂಡಲೆ ಹೊರಬಂದು ತಬ್ಬಿಬ್ಬಾಗಿ ನಿಂತ. ಆಮೇಲೆ ಆತ ಹೋದ ಬಳಿಕ ಅಪ್ಪ ನನ್ನನ್ನು ಸರಿಯಾಗಿ ವಿಚಾರಿಸಿಕೊಂಡರು. ’ಏನೇ ಕಷ್ಟ ಬಂದರೂ ಸತ್ಯವನ್ನು ಹೇಳಬೇಕು ಎಂದು ನೀನೇ ಹೇಳಿಕೊಟ್ಟಿದ್ದೆಯಲ್ಲ, ಈಗ ನನಗೆ ಏನೇ ಕಷ್ಟ ಬರಲಿ, ಯಾವ ಶಿಕ್ಷೆಯನ್ನು ಬೇಕಾದರೂ ವಿಧಿಸು ಅನುಭವಿಸುತ್ತೇನೆ’ ಎಂದೆ. ಅಪ್ಪ ಹಾಗೆಯೇ ನನ್ನನ್ನು ತೀಕ್ಷ್ಣವಾಗಿ ನೋಡಿ ’ನೀನು ಮಹಾ ಜಾಣ’ ಎಂದು ಹೇಳಿ ಸುಮ್ಮನಾದರು. ’ಅದು ನನಗೆ ತಿಳಿದಿದೆ. ಈಗ ಸತ್ಯ ಹೇಳಿದ್ದಕ್ಕೆ ಬಹುಮಾನ ಕೊಡು’ ಎಂದು ಕೈಯೊಡ್ಡಿದೆ. ಆಗ ಒಂದು ರೂಪಾಯಿಯ ನೋಟನ್ನು ನನ್ನ ಕೈಯಲ್ಲಿಟ್ಟರು. ಆ ಕಾಲಕ್ಕೆ ಒಂದು ರೂಪಾಯಿಗೆ ತುಂಬ ಬೆಲೆ ಇತ್ತು. ’ನೀನು ರೂಪಾಯಿ ಕೊಟ್ಟ ಮಾತ್ರಕ್ಕೆ ನಾನು ಸುಳ್ಳು ಹೇಳುವವನಲ್ಲ, ನನಗೆ ಸುಳ್ಳು ಹೇಳಲು ಹೇಳಿಕೊಟ್ಟರೆ ಅದನ್ನು ಹಾಗೆಯೇ ಹೇಳಿಬಿಡುತ್ತೇನೆ, ನೆನಪಿರಲಿ. ಅಷ್ಟಕ್ಕೂ ಆ ವ್ಯಕ್ತಿ ಯಾರು? ನಿನ್ನ ಮಾತು ಕೇಳಲು ನನಗೆ ಪುರುಸೊತ್ತಿಲ್ಲ ಎಂದು ನೀನೇ ಹೇಳಿಬಿಡಬಹುದಲ್ಲ’ ಎಂದೆ. ’ಹಾಗೆ ಹೇಳುವುದು ಕಷ್ಟ ಅವನು ನಮಗೆ ತುಂಬ ಬೇಕಾದ ಗಿರಾಕಿ. ಈ ಊರಲ್ಲೇ ತುಂಬ ದೊಡ್ಡ ಕುಳ ಆತ’ ’ಓಹೋ, ಅವನು ನಿನ್ನ ಗಿರಾಕಿ ಎಂದು ನೀನು ನಾಟಕ ಆಡುತ್ತೀಯ ಅಲ್ಲವೇ? ಇರು ಅವನಿಗೆ ನಿನ್ನ ನಾಟಕವನ್ನು ಬಯಲು ಮಾಡುತ್ತೇನೆ’ ಎಂದೆ. ಆಗ ಅಪ್ಪ ಗಾಬರಿಯಿಂದ ’ಬೇಡ ಮಹರಾಯ, ಸ್ವಲ್ಪ ಇರು’ ಎಂದರು ’ಇಲ್ಲ ಅಪ್ಪ, ನಿನಗೆ ಕಷ್ಟ ಆಗುತ್ತಿದೆ ಎಂದು ಅವನಿಗೆ ತಿಳಿಯಬೇಕು. ನಾನು ಹೇಳಿಯೇ ತೀರುತ್ತೇನೆ. ಮತ್ತು ಹಾಗೆ ಹೇಳಲು ನೀನು ಮತ್ತೆ ಒಂದು ರೂಪಾಯಿ ಕೊಡಬೇಕು’ ಎಂದೆ. ’ನನ್ನ ಗಿರಾಕಿಗಳನ್ನು ಹಾಳು ಮಾಡುವವನಿಗೆ ರೂಪಾಯಿ ಬೇರೆ ಕೊಡಬೇಕೇ? ಇಲ್ಲ, ಕೊಡುವುದಿಲ್ಲ’ ಎಂದ. ನಾನು ಆ ಗಿರಾಕಿಗೆ ಸತ್ಯವನ್ನು ಹೇಳದೇ ಬಿಡಲಿಲ್ಲ, ಸತ್ಯ ಹೇಳಿದ್ದಕ್ಕೆ ಅವನಿಂದಲೂ ರೂಪಾಯಿ ವಸೂಲಿ ಮಾಡಿದೆ. ಆಮೇಲೆ ಆ ಗಿರಾಕಿ ’ನಿನ್ನ ಮಗನ ಧೈರ್ಯ ಮೆಚ್ಚಿದೆ. ನಾನು ವಿಪರೀತ ಮಾತನಾಡುತ್ತೇನೆ ಎಂದು ಜನ ನನ್ನ ಬೆನ್ನ ಹಿಂದೆ ಮಾತನಾಡಿಕೊಂಡು ಎದುರಿಗೆ ನಾಟಕ ಆಡುತ್ತಾರೆ ಎಂದು ಬಲ್ಲೆ. ಆದರೆ ನಿಮ್ಮ ಮಗ ಎಂತಹ ಕಹಿ ಸತ್ಯವನ್ನೂ ಸ್ವಲ್ಪವೂ ಹಿಂಜರಿಯದೇ ಹೇಳಿಬಿಡುವನಲ್ಲ, ಅಲ್ಲದೆ ಅಪ್ಪನ ಅಂಗಡಿಯಲ್ಲಿ ವ್ಯಾಪಾರ ನಿಲ್ಲಿಸಬೇಡ ಎಂದು ಕಡ್ಡಾಯ ಬೇರೆ ಮಾಡಿದ್ದಾನೆ ಎಂದು ಅಪ್ಪನೆದುರು ಮೆಚ್ಚುಗೆಯ ಮಾತುಗಳನ್ನಾಡಿದನಂತೆ.
ನಮ್ಮ ಮನೆಯಲ್ಲಿ ನನ್ನ ವಯಸ್ಸಿನ ಬೇಕಾದಷ್ಟು ಮಕ್ಕಳಿದ್ದರು. ಯಾರು ವಿನಯ ವಿಧೇಯತೆ ತೋರಿಸುತ್ತಿದ್ದರೋ ಅವರನ್ನು ಹಿರಿಯರೆಲ್ಲ ಮೆಚ್ಚಿಕೊಳ್ಳುತ್ತಿದ್ದುದನ್ನು ಗಮನಿಸಿದೆ. ವಿನಯ ವಿಧೇಯತೆಗಳನ್ನು ಅಭ್ಯಾಸ ಮಾಡಿಕೊಂಡರೆ ನಾನು ಪ್ರಾಮಾಣಿಕನಾಗಿ ಬದುಕಲಾರೆ ಎಂದು ಆಗ ನನಗೆ ಹೊಳೆಯಿತು. ಒಂದು ದಿನ ಅಪ್ಪನಿಗೆ ’ನಾನು ಒಂದು ವಿಷಯವನ್ನು ನಿನಗೆ ಸ್ಪಷ್ಟಪಡಿಸಬೇಕು. ಇಂದಿನಿಂದ ವಿನಯ ವಿಧೇಯತೆಗಳನ್ನು ನಾನು ಬಿಡಲಿದ್ದೇನೆ. ವಿಧೇಯತೆಯಿಂದ ವರ್ತಿಸಲು ನನಗೆ ಆಗುತ್ತಿಲ್ಲ. ಇದರರ್ಥ ಅವಿಧೇಯತೆ ರೂಢಿಸಿಕೊಳ್ಳುತ್ತೇನೆ ಎಂದಲ್ಲ. ಇನ್ನು ಮುಂದೆ ಯಾವುದಕ್ಕೆ ವಿಧೇಯತೆ ತೋರಿಸಬೇಕು, ಯಾವುದಕ್ಕೆ ತೋರಿಸಬಾರದು ಎಂದು ಮೊದಲು ನಾನು ನಿರ್ಧರಿಸಿಕೊಳ್ಳುತ್ತೇನೆ. ನೀನು ಧಾರಾಳವಾಗಿ ಅಪ್ಪಣೆ ಮಾಡಬಹುದು. ಆದರೆ ಅದನ್ನು ಪಾಲಿಸುವುದು, ಬಿಡುವುದು ಮಾತ್ರ ನನಗೆ ಬಿಟ್ಟಿದ್ದು. ಬಾಗದೇ ಸಟೆಯುವುದನ್ನು ತಿಳಿಯದವನ ತಲೆಬಾಗುವಿಕೆಗೂ ಬೆಲೆಯಿಲ್ಲ. ಇದು ನನ್ನ ನಿರ್ಧಾರ’ ಎಂದು ಹೇಳಿದೆ. ಅವನ ತಾಳ್ಮೆಗೆ ಇತಿ ಮಿತಿ ಎಂಬುದೇ ಇರಲಿಲ್ಲ. ನನ್ನ ಅಪ್ಪ ತುಂಬ ಸರಳ ತುಂಬ ಮುಗ್ಧ. ಎಲ್ಲರನ್ನೂ ಬೇಗನೆ ನಂಬುತ್ತಿದ್ದ. ಯಾರು ಬೇಕಾದರೂ ಅವನಿಗೆ ಸುಲಭವಾಗಿ ಮೋಸ ಮಾಡಬಹುದಾಗಿತ್ತು. ನನ್ನ ಕಣ್ಣೆದುರಿಗೇ ಎಷ್ಟೋ ಜನ ಅವನಿಗೆ ಮೋಸ ಮಾಡುತ್ತಿದ್ದರು. ಒಮ್ಮೆ ನಮ್ಮ ಮನೆ ಕಟ್ಟಿಸುವಾಗ ಅಪ್ಪನಿಗೆ ಎಚ್ಚರಿಸಿದ್ದೆ ಈ ಕಂಟ್ರಾಕ್ಟರ್ ಮಹಾ ಖದೀಮ. ಸಿಮೆಂಟು ಸರಿಯಾದ ಪ್ರಮಾಣದಲ್ಲಿ ಸೇರಿಸದೆ ಮನೆಯನ್ನು ಬೇಕಾಬಿಟ್ಟಿ ಕಟ್ಟುತ್ತಿದ್ದಾನೆ ಎಂದು. ಅವನು ತುಂಬ ಒಳ್ಳೆಯವನು. ಹಾಗೆಲ್ಲ ಮೋಸ ಮಾಡುವುದಿಲ್ಲ ಎಂದು ನನ್ನ ಮಾತಿಗೆ ಕಿವಿಗೊಡಲಿಲ್ಲ. ಗೃಹಪ್ರವೇಶಕ್ಕೆ ಮುನ್ನವೇ ಮೊದಲ ಮಳೆಗೇ ಮನೆ ಕುಸಿಯಿತು. ಆಗ ಸದ್ಯ ನಾವು ಆ ಮನೆ ಸೇರುವ ಮುನ್ನವೇ ಬಿದ್ದು ನಮ್ಮ ಜೀವಗಳು ಉಳಿದವಲ್ಲ ಎಂದು ಅಪ್ಪ ಸ್ವಲ್ಪವೂ ಬೇಸರಿಸದೇ ಒಂದು ದೊಡ್ಡ ಸಂತರ್ಪಣೆಯನ್ನೇ ನಡೆಸಿದರು. ಆ ಕಂಟ್ರಾಕ್ಟರನೂ ಬಂದು ಊಟ ಮಾಡಿಕೊಂಡು ಹೋದ.

No comments:
Post a Comment