17 Jan 2012

ಓಷೋ ರಜನೀಶ್ - ಆತ್ಮಕಥೆ, ಭಾಗ ೩

ನದಿಯ ಈಜಿನ ಅನುಭವ
ನಾನು ಅಪ್ಪನಿಂದ ಕಲಿತ ವಿದ್ಯೆ ಒಂದೇ: ನದಿಯಲ್ಲಿ ಈಜುವುದು. ನನ್ನ ಹುಟ್ಟೂರನ್ನು ನೆನೆದಾಗಲೆಲ್ಲ ನನಗೆ ಎಲ್ಲಕ್ಕಿಂತ ಮೊದಲು ನದಿಯೇ ನೆನಪಾಗುವುದು. ಅಪ್ಪ ಸತ್ತಾಗಲೂ ಅವನು ನನಗೆ ಈಜು ಕಲಿಸಿದ ನೆನಪುಗಳೇ ಸತತವಾಗಿ ಕಾಡಿತ್ತು. ಬಾಲ್ಯದ ಅಧಿಕ ಸಮಯವನ್ನು ನಾನು
ನದಿಯಲ್ಲೇ ಕಳೆದೆ. ಐದರಿಂದ ಎಂಟು ಗಂಟೆಗಳ ಕಾಲ ನದಿಯಲ್ಲೇ ಕಳೆಯುತ್ತಿದ್ದೆ. ಮುಂಜಾನೆ ಮೂರು ಗಂಟೆಗೇ ನದಿಗೆ ಹೋಗಿ ಬೀಳುತ್ತಿದ್ದೆ. ಇಡೀ ವಾತಾವರಣ ನಿಶ್ಯಬ್ದವಾಗಿ ಇರುತ್ತಿತ್ತು. ಆ ಹೊತ್ತಿಗೆ ಪಕ್ಷಿಗಳ ಕಲರವವೂ ಇರುತ್ತಿರಲಿಲ್ಲ. ಬದಿಯಲ್ಲಿನ ಮಾವಿನ ಮರದ ವಾಸನೆ ಇಡೀ ನದಿಯ ಹರಹನ್ನು ವ್ಯಾಪಿಸಿಕೊಂಡಿತ್ತು. ಆಕಾಶದಲ್ಲಿನ ನಕ್ಷತ್ರಗಳು ನದಿಯ ಮೇಲೆ ಪ್ರತಿಬಿಂಬವಾಗುತ್ತಿದ್ದವು. ಇದೇನು ಹರಿಯುತ್ತಿದೆಯೋ ಸ್ಥಬ್ಧವಾಗಿ ನಿಂತುಬಿಟ್ಟಿದೆಯೋ ಗೊತ್ತಾಗುತ್ತಲೇ ಇರಲಿಲ್ಲ, ಹಾಗೆ ನಿಧಾನವಾಗಿ ಹರಿಯುತ್ತಿತ್ತು. ಸೂರ್ಯೋದಯ, ಸೂರ್ಯಾಸ್ತ, ಹುಣ್ಣಿಮೆ, ಮಳೆಗಾಲ, ಬೇಸಿಗೆ, ಹೀಗೆ ಒಂದೊಂದು ಕಾಲಮಾನವನ್ನೂ ನದಿಯಲ್ಲಿ ಅನುಭವಿಸಿದ್ದೇನೆ. ಸೂರ್ಯೋದಯವಾಗುತ್ತಲೇ ಈಜಿಕೊಂಡು ಆಚೆಯ ದಡಕ್ಕೆ ಹೋಗುತ್ತಿದ್ದೆ, ಅಲ್ಲಿ ಮರಳಿನ ಮೇಲೆ ಮೈಯನ್ನು ಒಣಗಿಸಿಕೊಳ್ಳುತ್ತಿದ್ದೆ, ಮರಳಿನ ಮೇಲೆ ಹಾಗೆಯೇ ಸಣ್ಣ ನಿದ್ದೆಯನ್ನೂ ಮಾಡುತ್ತಿದ್ದೆ. ಆ ದಿನಗಳನ್ನು ನೆನೆದರೆ ಹರ್ಮನ್ ಹೇಸ್‌ನ ’ಸಿದ್ಧಾರ್ಥ’ನ ನದಿಯ ವ್ಯಾಮೋಹ ನನಗೆ ನೆನಪಾಗುತ್ತದೆ. ನನ್ನ ನದಿಯ ವ್ಯಾಮೋಹ ’ಈ ಜಗತ್ತು ಕಲ್ಲಿನಂತೆ ಕಠಿಣವಲ್ಲ, ನದಿಯಂತೆ ಇದು ನಿರಂತರವಾದ ಹರಿಯುವಿಕೆ’ ಎಂಬ ಬೋಧೆಯನ್ನು ನನಗೆ ನೀಡಿದೆ. ಅಪ್ಪ ನನಗೆ ಗಣಿತ ವಿಜ್ಞಾನ ಭೂಗೋಳಗಳನ್ನು ಹೇಳಿಕೊಟ್ಟವನಲ್ಲ, ಅದಕ್ಕೆಲ್ಲ ಅವನಿಗೆ ಸಮಯವೂ ಇರಲಿಲ್ಲ,ಆಸಕ್ತಿಯೂ ಇರಲಿಲ್ಲ. ಮಕ್ಕಳು ಏನು ಓದುತ್ತಿದ್ದಾರೆ ಎಂದು ಯಾರಾದರೂ ಕೇಳಿದರೆ ’ನೀನು ಯಾವ ತರಗತಿ ಓದುತ್ತಿರುವುದು?’ ಎಂದು ಅವನು ನಮ್ಮನ್ನೇ ಕೇಳುತ್ತಿದ್ದ. ಹತ್ತು ಜನ ಮಕ್ಕಳಲ್ಲಿ ಯಾರದೆಂದು ನೆನಪಿನಲ್ಲಿಟ್ಟುಕೊಳ್ಳುವುದು? ಆದರೆ ಈಜುವುದನ್ನು ನನಗೆ ಕಲಿಸಿದ. ಅದಕ್ಕಾಗಿ ನಾನು ಅವನಿಗೆ ಆಭಾರಿಯಾಗಿದ್ದೇನೆ. ಅವನಿಗೂ ಈಜಾಟದ ಬಗ್ಗೆ ನನ್ನಷ್ಟೇ ಒಲವಿತ್ತು. ನಿರಂತರವಾಗಿ ಹರಿಯುವುದರ ಬಗ್ಗೆ, ಚಲನಶೀಲವಾದುದರ ಬಗ್ಗೆ ವ್ಯಾಮೋಹ ಇಟ್ಟುಕೊಂಡರೆ ನಮ್ಮ ಜೀವನದೃಷ್ಟಿಯೇ ಬದಲಾಗುತ್ತದೆ ಎಂದು ನನಗೆ ಈ ಅನುಭವಗಳಿಂದ ಮನವರಿಕೆಯಾಗಿದೆ. ನನ್ನ ಸವಿಕಲ್ಪ ಸಮಾಧಿಯ ಮೊದಲ ಅನುಭವಗಳಾದುದೂ ಆ ನದಿಯ ದಡದಲ್ಲೇ. ಮನೆಗೆ ಬಂದರೆ ’ಇಷ್ಟು ಹೊತ್ತು ನದಿಯಲ್ಲಿ ಏನು ಮಾಡುತ್ತಿದ್ದೆ’ ಎಂದು ಅಮ್ಮ ಕೇಳುತ್ತಿದ್ದಳು. ಏನೂ ಮಾಡುತ್ತಿರಲಿಲ್ಲ ಎಂದು ಹೇಳಿದರೆ ’ನಾಲ್ಕು ಗಂಟೆಗಳ ಕಾಲ ಏನೂ ಮಾಡುತ್ತಿರಲಿಲ್ಲ ಎಂದರೆ ಏನರ್ಥ? ಎಂದು ಕೇಳುತ್ತಿದ್ದಳು. ಆಗ ನಾನು ’ಸ್ನಾನ ಮಾಡಿದೆ, ನದೀ ತೀರದಲ್ಲಿ ಓಡಾಡುತ್ತಿದ್ದೆ’ ಇತ್ಯಾದಿ ಹೇಳಿದರೆ ಹಾಗೆನ್ನು ಎಂದು ಹೇಳಿ ಸುಮ್ಮನಾಗುತ್ತಿದ್ದಳು. ನದಿಯ ಅನುಭವಗಳನ್ನು ಈ ಶಬ್ದಗಳು ಎಷ್ಟು ಸಪ್ಪೆಯಾಗಿ ಹೇಳುತ್ತವೆ! ಕೆಲವು ಸಲ ಬದುಕಿನ ಸಣ್ಣಪುಟ್ಟ ಸಂಗತಿಗಳಿಂದಲೂ ಶಬ್ದಗಳು ಎಷ್ಟು ಖಾಲಿ ಎಂದು ತಿಳಿದುಬಿಡುತ್ತದೆ. ಅನುಭವಗಳಿಗೆ ಶಬ್ದಗಳು ನಿರಂತರವಾಗಿ ಅನ್ಯಾಯ ಮಾಡುತ್ತಿರುತ್ತವೆ. ಶಬ್ದಗಳ ಖಾಲಿತನವನ್ನು ಮನಗಾಣದವನು ತೀವ್ರವಾಗಿ ಬದುಕುವ ವ್ಯಕ್ತಿಯೇ ಅಲ್ಲ ಎಂದು ನನ್ನ ತಿಳುವಳಿಕೆ. ನಮ್ಮ ಬದುಕನ್ನೆಲ್ಲ ಶಬ್ದಗಳಲ್ಲಿ ಹೇಳಿ ಮುಗಿಸಬಹುದಾದರೆ ನಾವು ಸರಿಯಾಗಿ ಬದುಕಲೇ ಇಲ್ಲ ಎಂದರ್ಥ.
ನಾನು ಈಜಲು ಮಳೆಗಾಲಕ್ಕಾಗಿಯೇ ಕಾಯುತ್ತಿದೆ. ಅದು ಸಣ್ಣ ನದಿಯಾದರೂ ಮಳೆಗಾಲದಲ್ಲಿ ತುಂಬಿ ಹರಿಯುತ್ತಿತ್ತು. ಆಗ ಆಚೆಯ ದಡವನ್ನು ತಲುಪಲು ಒಂದು ಕಿಲೋಮೀಟರ್ ಈಜಬೇಕಾಗುತ್ತಿತ್ತು. ಎಷ್ಟೋ ಸಲ ಮಧ್ಯದಲ್ಲಿ ಕೈಗಳು ಸೋತು ಹಿಂದಿರುಗಲೂ ಆಗದೇ ಇನ್ನೇನು ಮುಳುಗಿ ಸತ್ತುಹೋಗುತ್ತೇನೆ ಎನಿಸುತ್ತಿತ್ತು. ಕೆಲವು ಸಲ ಪ್ರವಾಹದ ವೇಗ ಎಷ್ಟಿರುತ್ತಿತ್ತು ಎಂದರೆ ಇನ್ನು ಜೀವಂತವಾಗಿ ದಡ ಸೇರಲಾರೆ ಎಂದು ನಿರ್ಧರಿಸಿಕೊಳ್ಳುತ್ತಿದ್ದೆ. ಆ ಗಳಿಗೆಯಲ್ಲೇ ನನಗೆ ಮೊದಲ ಬಾರಿಗೆ ದೇಹದಿಂದ ನಾನು ಪ್ರತ್ಯೇಕವಾದ ಅನುಭವ ಆದುದು. ಆಗ ನನಗೆ ನಾನು ನೀರಿನಿಂದ ತುಂಬ ಎತ್ತರದ ನೆಲೆಯಲ್ಲಿದ್ದ ಅನುಭವ ಆಯಿತು. ಮೊದಲ ಸಲ ಈ ಅನುಭವವಾದಾಗ ನಾನು ತುಂಬ ಹೆದರಿದೆ. ಸತ್ತ ಮೇಲೆ ಆತ್ಮ ದೇಹದಿಂದ ಹೊರಟು ಹೋಗುತ್ತದೆ ಎಂದು ಕೇಳಿದ್ದೆ. ಹಾಗಾಗಿ ಈಗ ನಾನು ಸತ್ತುಹೋಗಿದ್ದೇನೆ ಎಂದು ಭಾವಿಸಿದ್ದೆ. ಆದರೂ ದೇಹ ಕೈಕಾಲುಗಳನ್ನು ಆಡಿಸುತ್ತಿತ್ತು, ಆಚೆ ದಡ ಸೇರಲು ಒಂದೇ ಸಮನೆ ಈಜುತ್ತಿತ್ತು. ಹಾಗಾಗಿ ನಾನು ದೇಹವನ್ನೆ ಅನುಸರಿಸಿಕೊಂಡು ಹೋದೆ. ಆ ದಿನ ದೇಹ ಮತ್ತು ಆತ್ಮಗಳ ಸಂಬಂಧದ ಅರಿವು ನನಗಾಯಿತು. ನಾಭಿಮೂಲದಲ್ಲಿ ಅಂದರೆ ಹೊಕ್ಕುಳಿನಿಂದ ಎರಡು ಇಂಚು ಕೆಳಭಾಗದಲ್ಲಿ ಒಂದು ಬೆಳ್ಳಿಯ ದಾರದಂತಹ ತಂತಿ ನನ್ನ ಆತ್ಮಕ್ಕೂ ದೇಹಕ್ಕೂ ಸಂಬಂಧ ಏರ್ಪಟ್ಟಿದ್ದನ್ನು ಕಂಡೆ. ಬೆಳ್ಳಿಯ ತಂತಿ ಎಂದರೆ ಭೌತಿಕ ವಸ್ತು ಎಂಬರ್ಥದಲ್ಲಲ್ಲ, ಒಂದು ಹೊಳೆಯುವ ಬಿಳಿಯ ಬಣ್ಣದ ತಂತಿಯ ರೂಪದ ಕಿರಣವದು. ಈಜುವಾಗ ಪ್ರತಿಸಲವೂ ಈ ಅನುಭವ ಆಗುತ್ತಿತ್ತು. ಆಚೆಯ ದಡ ತಲುಪುತ್ತಿದ್ದಂತೆಯೇ ಆತ್ಮ ಆ ಬೆಳ್ಳಿಯ ದಾರದ ನೆರವಿನಿಂದ ಕೂಡಲೆ ದೇಹವನ್ನು ಸೇರಿಕೊಳ್ಳುತ್ತಿತ್ತು. ಮೊದಲ ಸಲ ಭಯವಾದರೂ ಆಮೇಲೆ ನನಗೆ ಇದೊಂದು ಮನರಂಜನೆಯ ಆಟವಾಗಿಬಿಟ್ಟಿತು.
ಮನೆಗೆ ಬಂದು ಇದನ್ನು ಅಪ್ಪ-ಅಮ್ಮನಿಗೆ ಹೇಳಿದಾಗ ಅವರೂ ಹೆದರಿದರು ಇದೆಲ್ಲ ಒಳ್ಳೆಯ ಶಕುನವಲ್ಲ ನೀನು ನದಿಯ ಕಡೆ ಹೋಗಬೇಡ ಎಂದರು.
ಆದರೆ ನಾನು ಹೋಗುವುದನ್ನು ನಿಲ್ಲಿಸಲಿಲ್ಲ. ತುಂಬ ಸಲ ಈ ಅನುಭವ ಮರುಕಳಿಸಿದ್ದರಿಂದ ಭಯ ಹೊರಟು ಹೋಗಿತ್ತು. ಈಜುವಾಗ ದೇಹದಿಂದ ಬೇರ್ಪಡುತ್ತಿದ್ದ ಸೂಕ್ಷ್ಮದೇಹವು ದಡ ಸೇರಿದೊಡನೆಯೇ ಮತ್ತೆ ಸೇರಿಕೊಳ್ಳುತ್ತಿತ್ತು. ಇದೆಲ್ಲ ತಾನಾಗಿಯೇ ನಡೆಯುತ್ತಿತ್ತು. ಯಾವುದೂ ನಿಯಂತ್ರಣದಲ್ಲಿ ಇರಲಿಲ್ಲ. ಕೆಲವು ಸಲ ಸ್ನೇಹಿತರೊಂದಿಗೆ ರೈಲ್ವೇ ಸೇತುವೆಯನ್ನೇರಿ ಅಲ್ಲಿಂದ ಧುಮುಕುತ್ತಿದ್ದೆ. ಅದು ನಿಜಕ್ಕೂ ತುಂಬ ಅಪಾಯಕರ ಜಾಗ, ತುಂಬ ಜನ ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರಂತೆ. ಅಂಥವರನ್ನು ತಡೆಯಲೆಂಂದೇ ಅಲ್ಲಿ ಒಬ್ಬ ಕಾವಲುಗಾರನನ್ನೂ ನೇಮಿಸಿದ್ದರು. ಆದರೆ ನಾವು ಅವನಿಗೆ ಲಂಚ ಕೊಟ್ಟು ಆ ಜಾಗಕ್ಕೆ ಹೋಗಿ ಧುಮುಕುತ್ತಿದ್ದೆವು. ಕ್ರಮೇಣ ಅವನಿಗೂ ನಮಗೂ ಸ್ನೇಹ ಬೆಳೆಯಿತು, ಆಮೇಲೆ ಲಂಚ ಸ್ವೀಕರಿಸುತ್ತಿರಲಿಲ್ಲ, ಧುಮುಕಲು ಅನುಮತಿ ನೀಡುತ್ತಿದ್ದ. ಅಲ್ಲೂ ಅಷ್ಟೇ. ಸೇತುವೆಯಿಂದ ನೀರಿಗೆ ಧುಮುಕುವ ಕ್ಷಣದಲ್ಲಿ ಮತ್ತೆ ಸೂಕ್ಷ್ಮದೇಹವು ಬೇರ್ಪಡುವ ಅನುಭವ ಆಗುತ್ತಿತ್ತು. ಈ ಸುಳುಹನ್ನು ಹಿಡಿದು ನಾನು ಧ್ಯಾನದ ಹಲವು ಪ್ರಯೋಗಗಳಲ್ಲಿ ತೊಡಗಿದೆ. ಸಾಧಕರು ತಪಸ್ಸಾಧನೆಗೆ ಹಿಮಾಲಯ, ಉತ್ತರಾಂಚಲ, ಕುಲು ಮನಾಲಿ,..ಹೀಗೆ ಎಲ್ಲೆಡೆ ಅಲೆಯುತ್ತಾರೆ. ಸತ್ಯ ಯಾವ ಜಾಗದಲ್ಲಿದೆ? ಯಾವ ದಿಕ್ಕಿನಲ್ಲಿದೆ? ಯಾವ ನಕ್ಷೆ ಹಿಡಿದು ಹೊರಟರೆ ಕಾಣಿಸುತ್ತದೆ? ಹಾಗೆ ಹೊರಡುವವರೆಲ್ಲ ಮತ್ತೆ ಮನೆಗೆ ಹಿಂದಿರುಗುತ್ತಾರೆ, ಹಿಂದಿಗಿಂತ ಇನ್ನೂ ಹೆಚ್ಚು ಮೂರ್ಖರಂತೆ ಕಾಣಿಸುತ್ತಾರೆ. ಸತ್ಯವನ್ನು ಅರಿಯಲು ಬಯಸುವ ನಿಜವಾದ ಸಾಧಕ ಹೀಗೆಲ್ಲ ಅಲೆಯುವುದಿಲ್ಲ, ಅವನು ಸತ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದೂ ಇಲ್ಲ. ಬದಲಿಗೆ, ತನ್ನೊಳಗಿನ ಅಸತ್ಯಗಳನ್ನಷ್ಟೇ ಬೆದಕಿ ನೋಡುತ್ತಾನೆ. ಯಾರಾದರೂ ಅತಿಥಿಯ ಬೆನ್ನು ಹತ್ತಿ ಹೋಗುವರೇ? ಅತಿಥಿಯೇ ಮನೆಯ ಬಾಗಿಲಿಗೆ ಬಂದು ನಿಲ್ಲಬೇಕಲ್ಲವೇ? ಈ ಅರ್ಥದಲ್ಲಿ ನಾನು ಬಾಲ್ಯದಿಂದಲೂ ಅಧ್ಯಾತ್ಮ ಸಾಧಕನಲ್ಲ. ಗುಡಿ, ಚರ್ಚು, ಮಸೀದಿಗಳಿಗೆ ಹೋಗುವುದು, ಧರ್ಮಗ್ರಂಥಗಳ ಅಧ್ಯಯನ ಮಾಡುವುದು, ಧ್ಯಾನ, ತಪಸ್ಸುಗಳಲ್ಲಿ ತೊಡಗುವುದು - ಇದನ್ನೆಲ್ಲ ನಾನು ಮಾಡಿದವನೇ ಅಲ್ಲ. ನಿಮ್ಮ ಅರ್ಥದಲ್ಲಿ ನಾನು ಮೊದಲಿನಿಂದಲೂ ಆಧ್ಯಾತ್ಮಿಕ ವ್ಯಕ್ತಿಯೇ ಅಲ್ಲ. ನಾನು ಯಾವುದೇ ಕಾರಣಕ್ಕೂ ಸಮಾಜದೊಂದಿಗೆ ಹೊಂದಿಕೊಂಡು ಹೋದವನಲ್ಲ, ಸಂತೆಯೊಡನೆ ಸೇರಿಕೊಂಡವನಲ್ಲ. ಯಾವ ಕಾರಣಕ್ಕೂ ಸಂತೆಯನ್ನು ಅವಲಂಬಿಸಿದವನಲ್ಲ. ಆಗ ನನ್ನ ಸ್ವಾತಂತ್ರ್ಯವನ್ನು, ನನ್ನತನವನ್ನು ಉಳಿಸಿಕೊಳ್ಳಲು ಏನನ್ನು ಬೇಕಾದರೂ ಬಲಿದಾನ ಮಾಡಲು ಸಿದ್ಧನಾಗಿದ್ದೆ. ಅದು ಹೇಗೋ ಸಂತೆಯ ಸುದ್ದಿಯಲ್ಲಿ ಮುಳುಗಿದವನಿಗೆ ಜ್ಞಾನೋದಯವಿಲ್ಲ ಎಂದು ನನಗೆ ಮೊದಲಿನಿಂದಲೂ ಬಲವಾಗಿ ಅನ್ನಿಸಿಬಿಟ್ಟಿತ್ತು. ಇದೇ ನನ್ನ ಪಾಲಿನ ಎಲ್ಲ ಆಧ್ಯಾತ್ಮಿಕ ಸಾಧನೆಯಾಗಿತ್ತು. ನನ್ನ ಆಗಿನ ಪ್ರವೃತ್ತಿಗಳನ್ನು ಯಾವ ಶಾಸ್ತ್ರವೂ ಅಧ್ಯಾತ್ಮಿಕತೆ ಎಂದು ಕರೆಯದು ಎಂದು ನಾನು ಬಲ್ಲೆ. ಆದರೆ ಪ್ರತಿಯೊಬ್ಬ ಮನುಷ್ಯನೂ ಆಳದಲ್ಲಿ ಬಯಸು ಅತ್ಯುನ್ನತವಾದ ವಿವೇಕವನ್ನು ಆ ಪ್ರವೃತ್ತಿಯ ನೆರವಿನಿಂದಲೇ ನಾನು ಪಡೆದದ್ದು. ನನ್ನ ದೃಷ್ಟಿಯಲ್ಲಿ ಅಧ್ಯಾತ್ಮವೆಂದರೆ ನಮ್ಮೊಳಗನ್ನು ನಾವು ಕಂಡುಕೊಳ್ಳುವುದು. ನನ್ನ ಪಾಲಿನ ಈ ಕೆಲಸಕ್ಕೆ ಕೈಹಚ್ಚಲು ಹೊರಗಿನವರಿಗೆ ನಾನೆಂದೂ ಆಸ್ಪದ ಕೊಟ್ಟವನಲ್ಲ. ಸ್ವತಃ ನಾವು ಕೈಹಚ್ಚಿದರೂ ಅದು ಖಂಡಿತ ನೆರವೇರುವುದಿಲ್ಲ. ನಮ್ಮೊಳಗಿನ ಕೊಳಕನ್ನು ಸಣ್ಣತನವನ್ನು ಬೆಳಗಿಕೊಳ್ಳುವುದಷ್ಟೇ ನಾವು ಮಾಡಬಹುದಾದ ಕೆಲಸ. ಅದು ಸ್ವತಃಸಂಭವಿ, ಮನುಷ್ಯ ಕೃತವಲ್ಲ. ಹಾಗೆಂದು ಆಗುವ ಕಾಲಕ್ಕೆ ಆಗುವುದು ನಾವೇಕೆ ವೃಥಾ ತೊಡಗುವುದು ಎಂದು ತಿಳಿದರೂ ಅನರ್ಥವಾಗುತ್ತದೆ. ನಮ್ಮಿಂದಷ್ಟೇ ಆಗಬೇಕಾದ ಪೂರ್ವಸಿದ್ಧತೆಗಳು ಹಲವಿವೆ. ಆದರೆ ತಿಳಿಯದವರು ಆ ಪೂರ್ವಸಿದ್ಧತೆಗಳಲ್ಲಿ ಆಧ್ಯಾತ್ಮಿಕ ಮೌಲ್ಯವಿಲ್ಲ ಎಂದು ಭಾವಿಸುತ್ತಾರೆ.
ಬಾಲ್ಯದಿಂದಲೂ ನಾನು ಏಕಾಂತಕ್ಕೆ ಒಲಿದಿದ್ದೆ. ಬಿಡುವಿದ್ದಾಗಲೆಲ್ಲ ಸುಮ್ಮನೆ ಒಂದು ಮೂಲೆಯಲ್ಲಿ ಕುಳಿತು ಏಕಾಂತ ಅನುಭವಿಸುತ್ತಿದ್ದೆ. ಮನೆಯವರೆಲ್ಲ ಇವನು ಯಾವ ಕೆಲಸಕ್ಕೂ ಬರುವುದಿಲ್ಲ ಎಂದು ನಿರ್ಧರಿಸಿಕೊಂಡರು. ಅವರ ಅನಿಸಿಕೆ ನಿಜವಾಯಿತು. ಆದರೆ ಅದಕ್ಕೆ ನನ್ನಲ್ಲಿ ಪಶ್ಚಾತ್ತಾಪವೇನಿಲ್ಲ. ಮನೆಯವರು ಹಾಗೆ ನಿರ್ಧರಿಸಿದ್ದ ನಾನು ಇನ್ನೂ ಹೆಚ್ಚು ಬಿಡುಗಡೆ, ನಿರಾಳವನ್ನು ಅನುಭವಿಸಿದೆ. ಮನೆಯ ಹತ್ತಿರ ಇದ್ದ ಅರಳಿ ಕಟ್ಟೆಯ ಮೇಲೆ ದಿನವಿಡೀ ಕುಳಿತುಬಿಡುತ್ತಿದ್ದೆ. ಕೆಲವೊಮ್ಮೆ ಮನೆಯವರು ಹುಡುಕಿಕೊಂಡು ಬರುವರೆಂದು ಮರ ಹತ್ತಿ ಕುಳಿತುಬಿಡುತ್ತಿದ್ದುದೂ ಉಂಟು.
ಶಾಲಾದಿನಗಳು
ನನ್ನ ಬದುಕಿನ ಅತ್ಯಂತ ಅಮೂಲ್ಯವಾದ ೧೭ ವರ್ಷಗಳನ್ನು ಶಾಲಾ ಕಾಲೇಜುಗಳು ನಾಶ ಮಾಡಿದವು. ಶಾಲೆಯಲ್ಲಿ ಹತ್ತು ವರ್ಷಗಳು, ಕಾಲೇಜಿನಲ್ಲಿ ಐದು ವರ್ಷಗಳು ಮತ್ತು ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳು ಹಾಳಾದವು. ಏಳನೆಯ ವರ್ಷಕ್ಕೆ ಶಾಲೆಗೆ ಸೇರಿದೆ. ೨೫ನೆಯ ವಯಸ್ಸಿಗೆ ವಿವಿಯಿಂದ ಹೊರಬಂದ ಮೇಲೆ ಖುಷಿಯಿಂದ ಕುಣಿದಾಡಿದೆ. ಚಿನ್ನದ ಪದಕ ಸಿಕ್ಕಿದ್ದಕ್ಕಲ್ಲ. ಕೊನೆಗೂ ಬಿಡುಗಡೆ ಪಡೆದೆನಲ್ಲ ಎಂದು. ನನ್ನನ್ನು ಶಾಲೆಗೆ ಬಲವಂತವಾಗಿ ತಳ್ಳಿದರು. ಮೊದಲ ದಿನ ಮಾತ್ರ ಅಲ್ಲ. ಪ್ರತಿದಿನವೂ ಬಲವಂತವಾಗಿ ತಳ್ಳಲಾಗುತ್ತಿತ್ತು. ನನ್ನ ಚಿಕ್ಕಪ್ಪ ಪ್ರತಿದಿನ ನನ್ನನ್ನು ಶಾಲೆಗೆ ಕರೆದುಕೊಂಡು ಹೋಗಿ ಮೇಷ್ಟರಿಗೆ ನನ್ನನ್ನು ಒಪ್ಪಿಸುತ್ತಿದ್ದ. ಹೀಗೆ ಒಪ್ಪಿಸಲು ನಾನೇನು ಇವರ ಆಸ್ತಿಯೇ ಎಂದುಕೊಳ್ಳುತ್ತಿದ್ದೆ. ಮೊದಲ ದಿನ ಶಾಲೆಗೆ ಬಿಡಲು ಅಪ್ಪನೇ ಬಂದಿದ್ದ. ಶಾಲೆಯ ಗೇಟುಗಳನ್ನು ನೋಡಿ ’ಅಪ್ಪ ಇದೇನು ಸ್ಕೂಲೋ ಜೈಲೋ?’ ಎಂದು ಕೇಳಿದ್ದೆ. ಆಗ ಅಪ್ಪನು ’ಹೆದರ ಬೇಡ, ಇದು ಶಾಲೆಯೇ’ಎಂದ ಆಗ ನಾನು ’ಹೆದರಿಕೆಯಿಂದ ಕೇಳುತ್ತಿಲ್ಲ, ಶಾಲೆಗೇಕೆ ಇಷ್ಟು ದೊಡ್ಡ ಗೇಟು?’ ಎಂದು ಕೇಳಿದ್ದೆ. ಒಮ್ಮೆ ಮುಚ್ಚಿದರೆ ಸಂಜೆ ಗಂಟೆ ಹೊಡೆದ ಮೇಲೆಯೇ ಆ ಗೇಟನ್ನು ಮತ್ತೆ ತೆರೆಯುತ್ತಿದ್ದುದು. ಭಾರತದಲ್ಲಿ ಜೈಲಿನ ಕಿಟಕಿ ಬಾಗಿಲುಗಳು , ಸ್ಕೂಲಿನ ಕಿಟಕಿ ಬಾಗಿಲುಗಳು ಒಂದೇ ಮಾದರಿಯಲ್ಲಿ ಇರುತ್ತವೆ.
ಆ ದಿನ ಆ ಗೇಟಿನ ಮುಂದೆ ನನ್ನ ಹಾಗು ನನ್ನ ತಂದೆಯ ನಡುವೆ ನಡೆದ ಸಂಭಾಷಣೆ ನನ್ನ ಇಡೀ ವಿದ್ಯಾಭ್ಯಾಸದ ಜೀವನದೊಂದಿಗೆ ಅವನು ನಡೆಸಿದ ಸಂಭಾಷಣೆಯನ್ನು ಪ್ರತೀತಗೊಳಿಸುತ್ತಿತ್ತು. ಅಪ್ಪ ಈ ಗೇಟನ್ನು ನೋಡು, ಇದನ್ನು ಯಾರಾದರೂ ಶಾಲೆ ಎನ್ನುವರೇ? ಇಂಥ ಜಾಗಕ್ಕೆ ನನ್ನನ್ನು ತಳ್ಳುತ್ತಿರುವೆಯಲ್ಲ, ಸ್ವಲ್ಪ ಯೋಚಿಸು. ಅದೂ ನಾಲ್ಕು ವರ್ಷಗಳ ಕಾಲ! ನನಗೆ ಗೊತ್ತಿತ್ತು ಆ ಮುದುಕಿ ನಿನ್ನನ್ನು ಚೆನ್ನಾಗಿ ಹಾಳುಮಾಡಿ ಕಳಿಸಿದ್ದಾಳೆ, ನನ್ನನ್ನು ಇನ್ನಾರೂ ಮತ್ತೆ ಸರಿಪಡಿಸಲಾರರು ಎಂದಲ್ಲವೇ ನಿನ್ನ ಮಾತಿನ ಅರ್ಥ? ನಡೆ ಹಾಗಿದ್ದರೆ, ಮನೆಗೆ ಹಿಂದಿರುಗೋಣ, ಇಲ್ಲ ನೀನು ಓದಿ ವಿದ್ಯಾವಂತನಾಗಬೇಕು, ನನ್ನ ಇಷ್ಟಾನಿಷ್ಟಗಳಿಗೆ ಬೆಲೆ ನೀಡದ ಮೇಲೆ ಇದೆಂತಹ ಶಿಕ್ಷಣವನ್ನು ನಾನು ಪಡೆಯುತ್ತಿರುವುದು. ಇಂತಹ ಶಿಕ್ಷಣ ನನಗೆ ಬೇಡ. ಆದರೆ ಎಲ್ಲಕ್ಕೂ ನಿನ್ನನ್ನು ಅವಲಂಬಿಸಿರುವ ನಾನು ನಿನ್ನ ಮಾತನ್ನೂ ಮೀರುವಂತಿಲ್ಲ. ಒಂದು ಕೆಲಸ ಮಾಡು. ನೀನೇ ನನ್ನ ಕೈಹಿಡಿದು ಒಳಗೆ ಎಳೆದುಕೊಂಡು ಹೋಗು. ನಾನಂತೂ ಸ್ವ ಇಚ್ಛೆಯಿಂದ ಈ ಶಾಲೆಯ ಮೆಟ್ಟಿಲುಗಳನ್ನು ಏರುವವನಲ್ಲ ಆಗ ಅಪ್ಪನು ನನ್ನನ್ನು ಬಲವಂತವಾಗಿ ಶಾಲೆಯ ಒಳಗೆ ಎಳೆದೊಯ್ದರೂ ಮರುಗಳಿಗೆಯೇ ’ಇದೇಕೋ ನಾನು ಮಾಡುತ್ತಿರುವುದು ಸರಿ ಎನಿಸುತ್ತಿಲ್ಲ’ ಎಂದು ಹೇಳಿದ. ನನ್ನ ತಂದೆ ಕೊನೆಯವರೆಗೂ ಆ ಪ್ರಸಂಗವನ್ನು ನೆನೆದು ವಿಷಾದ ಪಡುತ್ತಿದ್ದರು. ಹೀಗೆ ಆ ದಿನ ಶಾಲೆಯ ಮುಂಭಾಗದಲ್ಲಿ ನಡೆದ ಸಂಭಾಷಣೆ ಹಲವು ಸಂದರ್ಭಗಳಲ್ಲಿ ಬೇರೆ ಬೇರೆ ರೀತಿ ಮುಂದುವರೆದು ಅಪ್ಪ ಸನ್ಯಾಸ ಸ್ವೀಕಾರದೊಡನೆ ಕೊನೆಯಾಯಿತು. ನನ್ನಿಂದ ಸನ್ಯಾಸ ಸ್ವೀಕರಿಸುವಾಗ ಅವರು ಹೇಳಿದ ಮಾತೇನು ಗೊತ್ತೇ? ಆ ದಿನ ನಿನ್ನನ್ನು ಬಲವಂತವಾಗಿ ಶಾಲೆಗೆ ಎಳೆದೊಯ್ದೆ, ಇನ್ನೂ ಹಲವು ಸಂದರ್ಭಗಳಲ್ಲಿ ಅಂತಹ ಎಷ್ಟೋ ಅಚಾತುರ್ಯಗಳನ್ನು ಎಸಗಿದ್ದೇನೆ, ಅವೆಲ್ಲವನ್ನೂ ಮನ್ನಿಸು ಎಂದು ಹೇಳಿ ನನ್ನ ಕಾಲಿಗೆಬಿದ್ದರು. ನನ್ನ ಮುಗುಳ್ನಗೆಯನ್ನು ಕಂಡು ’ಏಕೆ ನಗುತ್ತೀಯೆ’ ಎಂದು ಕೇಳಿದರು. ’ಅಂತೂ ನಮ್ಮಿಬ್ಬರ ದೀರ್ಘಕಾಲದ ಘರ್ಷಣೆ ಇಂದಿಗೆ ಕೊನೆಯಾಯಿತಲ್ಲ’ ಎಂದು ಹೇಳಿದೆ.
ನಾನು ಶಾಲೆಗೆ ಸೇರಿದ ಮೊದಲ ದಿನವೇ ಒಬ್ಬ ಮೇಷ್ಟರನ್ನು ಎದುರು ಹಾಕಿಕೊಂಡೆ. ಆ ವ್ಯಕ್ತಿಯನ್ನು ಕಾಣುತ್ತಲೇ ’ಇದು’ ನನಗೆ ’ಪಾಠ ಹೇಳಿಕೊಡುತ್ತದೋ’ ಎಂದು ಕೇಳಿದೆ. ಅಪ್ಪ ’ಸುಮ್ಮನಿರು’ ಎಂದು ಮೆಲ್ಲನೆ ಗದರಿಸಿದರು. ನಾನು ಯಾರ ಕುರಿತೂ ಹಾಗೆ ಹಗುರವಾಗಿ ಮಾತನಾಡುವವನಲ್ಲ ಆದರೆ ಆ ಮೇಷ್ಟರು ಮಾತ್ರ ನನ್ನ ಕಣ್ಣಿಗೆ ಒಬ್ಬ ವ್ಯಕ್ತಿಯ ಹಾಗೆ ಕಾಣಿಸಲೇ ಇಲ್ಲ. ಅವನನ್ನು ಸೃಷ್ಟಿಸುವಾಗ ಭಗವಂತನಿಗೆಲ್ಲೋ ಬಹಿರ್ದೆಸೆಗೆ ಅವಸರವಾಗಿತ್ತು ಎನಿಸುತ್ತದೆ. ಆತುರಾತುರವಾಗಿ ಇವನನ್ನು ಸೃಷ್ಟಿಸಿಬಿಟ್ಟಿದ್ದಾನೆ ಎಂಬಂತೆ ಕಾಣುತ್ತಿದ್ದ. ಒಕ್ಕಣ್ಣು, ಸೊಟ್ಟ ಮೂಗು, ಏಳಡಿ ಎತ್ತರದ ರಾಕ್ಷಸ ನಿಲುವು, ನೂರೈವತ್ತರಿಂದ ಇನ್ನೂರು ಕೆ.ಜಿ.ಗೆ ಕಡಿಮೆ ಇರಲಿಲ್ಲ. ಬರೀ ಅವನ ಚಹರೆಯಲ್ಲ ಅವನು ಮಾಡುತ್ತಿದ್ದ ಒಂದೊಂದು ಕೆಲಸವೂ ಅಷ್ಟೇ ಅಸಹ್ಯವಾಗಿ ಇರುತ್ತಿತ್ತು. ಕೆಲವರು ಎಲ್ಲ ವೈದ್ಯಕೀಯ ನಿರ್ಣಯಗಳಿಗೂ ಅಪವಾದವಾಗಿರುತ್ತಾರೆ. ಅಷ್ಟು ಗಾತ್ರವಿದ್ದರೂ ಎಷ್ಟೊಂದು ಆರೋಗ್ಯವಾಗಿದ್ದ. ಒಂದು ದಿನವೂ ಕಾಯಿಲೆಯಿಂದ ಹಾಸಿಗೆ ಹಿಡಿದವನಲ್ಲ. ಉಕ್ಕಿನ ಮನುಷ್ಯ ಎಂದೇ ಇಡೀ ಊರಲ್ಲಿ ಹೆಸರುವಾಸಿಯಾಗಿದ್ದ. ಆದರೆ ಅಂತಹ ಒಳ್ಳೆಯ ಗುಣಮಟ್ಟದ ಉಕ್ಕಲ್ಲ, ತಗಡಿಗೆ ಬಳಸಲು ಲಾಯಕ್ಕಾದುದು ಅನಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಆತ ಮಹಾ ಕ್ರೂರಿ. ಅವನೇ ನನ್ನ ಮೊದಲ ಶಿಕ್ಷಕ. ಈಗಲೂ ಅವನನ್ನು ನೆನೆದರೆ ಒಳಗೇ ನಡುಕ ಹುಟ್ಟುತ್ತದೆ. ಅಪ್ಪ, ನನ್ನನ್ನು ಇವನ ಹತ್ತಿರ ಬಿಡುವ ಮೊದಲು ಒಮ್ಮೆ ಮೇಲಿನಿಂದ ಕೆಳಗೆ ಇವನನ್ನು ನೋಡು ಎಂದು ಗೋಗರೆದೆ. ಏನಾಗಿದೆ ಅವನಿಗೆ? ಆತ ಬಹಳ ಹಿರಿಯ. ನನಗೂ ಮೇಷ್ಟರಾಗಿದ್ದ, ನಮ್ಮಪ್ಪನ ಕಾಲದಲ್ಲೂ ಅವನೇ ಇಲ್ಲಿ ಮೇಷ್ಟರಾಗಿದ್ದ. ಆದ್ದರಿಂದ ಅವನ ಮೇಲೆ ಯಾರೂ ದೂರು ನೀಡುತ್ತಿರಲಿಲ್ಲ. ಆ ಊರಲ್ಲಿ ಯಾರ ಬಳಿ ಹೋಗಿ ದೂರು ನೀಡಿದರೂ ’ಅವನು ನನಗೂ ಮೇಷ್ಟರಾಗಿದ್ದ’ ಎಂಬ ಉತ್ತರವೇ ಸಿಗುತ್ತಿತ್ತು. ಆತನ ಹೆಸರು ಯಾರಿಗೂ ಗೊತ್ತಿರಲಿಲ್ಲ. ಎಲ್ಲರೂ ಕಾಂತಾರ್ ಮಾಸ್ತರು ಎಂದು ಕರೆಯುತ್ತಿದ್ದರು. ಅವನು ಮಕ್ಕಳನ್ನು ನಿರ್ದಯವಾಗಿ ಹೊಡೆಯುತ್ತಿದ್ದ. ಅವನಿಗೆ ಹೆದರಿ ಎಷ್ಟೋ ಮಕ್ಕಳು ವಿದ್ಯಾಭ್ಯಾಸವನ್ನೇ ನಿಲ್ಲಿಸಿಬಿಟ್ಟಿದ್ದರು. ಮೇಷ್ಟರುಗಳಿರಲಿ ಮನುಷ್ಯ ಮಾತ್ರರು ಕೂಡ ಅವನ ಹಾಗೆ ಶಿಕ್ಷಿಸುತ್ತಿರಲಿಲ್ಲ.
ಮೊದಲ ದಿನ ಅವನು ಗಣಿತದ ಪಾಠ ಮಾಡುತ್ತಿದ್ದ. ಆ ಲೆಕ್ಕಗಳನ್ನು ಹಳ್ಳಿಯಲ್ಲಿ ಅಜ್ಜಿಯಿಂದ ನಾನು ಕಲಿತಿದ್ದರಿಂದ ಕೇಳುವ ಗೋಜಿಗೆ ಹೋಗದೆ ನಾನು ಹೊರಗೆಲ್ಲೋ ನೋಡುತ್ತ ಕುಳಿತಿದ್ದೆ. ಹೊರಗೆ ಗಾಳಿಗೆ ಅರಳಿ ಮರದ ಒಂದೊಂದು ಎಲೆಗಳೂ ಸ್ವತಂತ್ರವಾಗಿ ಕುಣಿಯುತ್ತಿದ್ದುದು ಇವನ ಲೆಕ್ಕಕ್ಕಿಂತ ಹೆಚ್ಚು ಆಕರ್ಷಣೆ ಮಾಡಿತು. ಆಗ ಅವನು ’ನಿಮ್ಮನ್ನೆಲ್ಲ ಮೊದಲ ದಿನವೇ ರಿಪೇರಿ ಮಾಡಿದರೆ ಸರಿ ಹೋಗುತ್ತದೆ’ ಎಂದು ಧಡಧಡನೆ ನನ್ನ ಹತ್ತಿರ ಬಂದ.  ’ನಿಮ್ಮ ಮಾತು ಸರಿ, ನಾನೂ ಮೊದಲ ದಿನವೇ ಎಲ್ಲವನ್ನೂ ಸ್ಪಷ್ಟ ಮಾಡಬೇಕು ಎಂದಿದ್ದೇನೆ’ ಎಂದು ನಾನು ಹೇಳಿದೆ. ’ನಾನು ಪಾಠ ಮಾಡುವಾಗ ಹೊರಗೆಲ್ಲಿ ನೋಡುತ್ತಿದ್ದೆ’ ಎಂದು ಕೇಳಿದ. ’ಪಾಠವನ್ನು ನೋಡುವುದಿಲ್ಲ, ಕೇಳಿಸಿಕೊಳ್ಳುತ್ತಾರೆ. ನಿನ್ನ ಮುಖ ಕಾಣಿಸಬಾರದೆಂದೇ ಹೊರಗೆ ನೋಡುತ್ತಿದ್ದೆ. ಬೇಕಿದ್ದರೆ ಪ್ರಶ್ನೆಗಳನ್ನು ಕೇಳು ಉತ್ತರಿಸುತ್ತೇನೆ’ ಎಂದೆ. ಹಲವು ಪ್ರಶ್ನೆಗಳನ್ನು ಕೇಳಿದ, ಉತ್ತರಿಸಿದೆ. ’ನೀನು ಸರಿಯುತ್ತರ ಹೇಳಿರಬಹುದು. ಆದರೂ ಹೊರಗೆ ನೋಡುತ್ತ ಕುಳಿತಿದ್ದ ನಿನ್ನನ್ನು ಶಿಕ್ಷಿಸದೆ ಬಿಡುವುದಿಲ್ಲ’ ಎಂದು ಗದರಿಸಿದ. ಅವನ ಶಿಕ್ಷೆ ಎಂಥದೆಂದು ನನಗೆ ಗೊತ್ತಿತ್ತು. ಪ್ರತಿಯೊಂದು ಬೆರಳಿನ ಮಧ್ಯೆಯೂ ಪೆನ್ಸಿಲ್ಲುಗಳನ್ನು ಸೇರಿಸಿ ಸಣ್ಣ ಮಕ್ಕಳು ನೋವಿನಿಂದ ಕೂಗಾಡುವವರೆಗೂ ಬಲವಾಗಿ ಹಿಂಡುತ್ತಿದ್ದ. ಇವನನ್ನು ನೋಡಿ ಶಿಕ್ಷಕ ವೃತ್ತಿಯನ್ನು ಇಷ್ಟ ಪಡುವವರು ಯಾವುದೋ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುತ್ತಾರೆ ಎಂದು ನನಗೆ ಅನಿಸಿತು. ಈಗಲೂ ಆ ಅನುಮಾನ ನನಗಿದೆ. ’ನಿನ್ನ ಪೆನ್ಸಿಲ್ ಶಿಕ್ಷೆಯನ್ನು ನಾನು ಕೇಳಿದ್ದೇನೆ’ ನನಗೇನಾದರೂ ಅಂತಹ ಶಿಕ್ಷೆ ನೀಡಿದರೆ ಬಳಿಕ ಪಶ್ಚಾತ್ತಾಪ ಪಡಬೇಕಾಗುತ್ತದೆ, ಬಹುಶಃ ಕೆಲಸವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಚ್ಚರಿಕೆ’ ಎಂದು ಮೊದಲೇ ಎಚ್ಚರಿಕೆ ನೀಡಿದೆ. ’ನೋಡೋಣ, ನನ್ನನ್ನು ಯಾರು ತಡೆಯುತ್ತಾರೆ’ ಎಂದು ಮುಂದುವರೆದ. ’ಇದು ತಡೆಯುವ ಪ್ರಶ್ನೆಯಲ್ಲ. ನನ್ನ ಪ್ರಶ್ನೆಗೆ ಉತ್ತರಿಸಿ, ಪಾಠ ಮಾಡುವಾಗ ಹೊರಗೆ ಇಣುಕುವುದು ಕಾನೂನು ಬಾಹಿರವೇ? ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರೂ ಶಿಕ್ಷಿಸುವುದು ಕಾನೂನು ಸಮ್ಮತವೇ?’ ’ನಿನ್ನಂಥವರು ತರಗತಿಗೆ ದೊಡ್ಡ ಅಡಚಣೆ’ ಎಂದ ’ಹೌದು ಇಂತಹ ತರಗತಿಗಳಿಗೆ ನಾನು ಅಡಚಣೆ ಮಾಡುವವನೇ, ನಿನ್ನ ವರ್ತನೆ ಕಾನೂನು ಸಮ್ಮತವೇ ಎಂದು ಮುಖ್ಯೋಪಾಧ್ಯಾಯರನ್ನೇ ಹೋಗಿ ಕೇಳುತ್ತೇನೆ’ ಎಂದು ಅಲ್ಲಿಂದ ಹೊರನಡೆದೆ. ಆಗ ಅವನಿಗೆ ಒಳಗೇ ನಡುಕ ಹುಟ್ಟಿತು. ಅದು ಅಲ್ಲಿದ್ದವರಿಗೆ ಸುಲಭವಾಗಿ ತಿಳಿಯಲಿಲ್ಲ. ಅಷ್ಟಕ್ಕೇ ನಿಲ್ಲಿಸದೆ ’ನಾನು ಪಂಚಾಯಿತಿ ಮುಖಂಡರನ್ನೂ ಭೇಟಿ ಮಾಡುತ್ತೇನೆ. ನಾಳೆ ಪೊಲೀಸ್ ಕಮೀಷನರ್‌ರೊಂದಿಗೆ ಮತ್ತೆ ಶಾಲೆಗೆ ಬರುತ್ತೇನೆ’ ಎಂದು ಹೇಳಿ ಮುಖ್ಯೋಪಾಧ್ಯಾರ ಬಳಿ ಹೊರಟೆ. ’ಆತನನ್ನು ನಾನೇನೂ ಮಾಡುವಂತಿಲ್ಲ. ಆತ ನನಗಿಂತ ಹೆಚ್ಚು ಸೇವಾವಧಿ ಹೊಂದಿರುವವನು, ಮೇಲಧಿಕಾರಿಗಳೂ ಅವನಿಂದ ಪಾಠ ಕಲಿತವರು. ಹಾಗಾಗಿ ಯಾರೂ ಅವನ ವಿರುದ್ಧದ ದೂರನ್ನು ಪರಿಗಣಿಸುವುದಿಲ್ಲ. ಸುಮ್ಮನೆ ಏಕೆ ಇಲ್ಲದ ತೊಂದರೆಯನ್ನು ಮೈಮೇಲೆ ಹಾಕಿಕೊಳ್ಳುತ್ತೀ’ ಎಂದು ಉಪದೇಶ ಮಾಡಿದರು. ’ಆತ ಅಷ್ಟು ಸುಲಭವಾಗಿ ನನಗೆ ತೊಂದರೆ ನೀಡಲಾರ. ಈ ಮುಹೂರ್ತದಿಂದಲೇ ಇನ್ನು ಮುಂದೆ ನಾನು ಎಲ್ಲ ತೊಂದರೆ ನೀಡುವವರ ವಿರುದ್ಧ ಹೋರಾಡಲಿದ್ದೇನೆ. ನನಗೆ ನನ್ನ ಆತ್ಮಗೌರವ ಮುಖ್ಯ, ನಿಮ್ಮ ಶಿಕ್ಷಣವಲ್ಲ. ನೀವೇ ಹೇಳಿ, ಸರಿಯುತ್ತರ ಹೇಳಿದರೂ ಕಿಟಕಿಯ ಕಡೆ ನೋಡಿದೆನೆಂದು ಥಳಿಸಲು ಬರುವನಲ್ಲ, ಇದು ನಿಮ್ಮ ಶಿಕ್ಷಣ ನೀತಿಯಲ್ಲಿ ಎಲ್ಲಿದೆ ತೋರಿಸಿ’ ಎಂದು ಕೇಳಿದೆ. ’ನಿನಗೆ ಉತ್ತರ ಗೊತ್ತಿದ್ದ ಮೇಲೆ ಆಯಿತಲ್ಲ, ಎತ್ತಲೋ ನೋಡುತ್ತಿದ್ದೆ ಎನ್ನುವುದು ಮುಖ್ಯವಲ್ಲ’ ಎಂದವರೆ ಕಾಂತಾರ್ ಮಾಸ್ತರಿದ್ದ ತರಗತಿಗೆ ಬಂದರು ’ಈ ಹುಡುಗ ಸಾಮಾನ್ಯನಂತೆ ಕಾಣಿಸುತ್ತಿಲ್ಲ, ಸುಮ್ಮನೆ ಏಕೆ ಎದುರು ಹಾಕಿಕೊಳ್ಳುತ್ತೀರಿ’ ಎಂದು ಕಾಂತಾರ್ ಮಾಸ್ತರಿಗೂ ಸಲಹೆ ನೀಡಿದರು. ಅವನು ಒಳಗೆ ಹೆದರಿದಷ್ಟೂ ಮೇಲೆ ಹೆಚ್ಚು ಹೆಚ್ಚು ಆರ್ಭಟ ತೋರಿಸಿದ. ’ಇವನ ವಿಷಯ ನನಗೆ ಬಿಡಿ, ಚೋಟುದ್ದದ ಹುಡುಗ ನನಗೇ ಶಿಕ್ಷಣ ನೀತಿ ಹೇಳಿಕೊಡಲು ಬರುತ್ತಾನೋ? ನಾನು ಇವನನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಗರ್ಜಿಸಿದ. ಆಗ ನಾನೂ ಅಷ್ಟೇ ತೀವ್ರವಾಗಿ ’ನಾಳೆಯ ದಿನ ಈ ಶಾಲೆಯಲ್ಲಿ ನೀನಿರಬೇಕು, ಇಲ್ಲವೆ, ನಾನಿರಬೇಕು’ ಎಂದು ಹೇಳಿ ನೇರ ಮನೆಗೆ ಬಂದು ನಡೆದದ್ದನ್ನು ಅಪ್ಪನಿಗೆ ಹೇಳಿದೆ. ’ನನಗೆ ಗೊತ್ತಿತ್ತು ನೀನು ಏನಾದರೂ ಮಾಡಿಕೊಂಡೇ ಬರುತ್ತೀ ಎಂದು, ಸಾಲದ್ದಕ್ಕೆ ನನ್ನನ್ನೂ ಸಮಸ್ಯೆಯಲ್ಲಿ ಸಿಲುಕಿಸದೆ ಬಿಡುವುದಿಲ್ಲ’ ಎಂದರು. ’ನಿನ್ನನ್ನು ಯಾವ ಸಮಸ್ಯೆಗೂ ಸಿಲುಕಿಸುವುದಿಲ್ಲ, ನಾಳೆಯ ದಿನ ನೀನು ನನಗೇಕೆ ಈ ವಿಷಯಗಳನ್ನು ಹೇಳಲಿಲ್ಲ ಎಂದು ಕೇಳಬಾರದಲ್ಲ, ಅದಕ್ಕೇ ನಡೆದದ್ದನ್ನು ಹೇಳಿದೆ ಅಷ್ಟೇ’. ಎಂದೆ. ಅಲ್ಲಿಂದ ಪೊಲೀಸ್ ಕಮೀಷನರ ಬಳಿಗೆ ಹೋಗಿ ದೂರು ನೀಡಿದಾಗ ’ನನ್ನ ಮಗನೂ ಆ ವ್ಯಕ್ತಿಯ ಬಗ್ಗೆ ಹೀಗೆಯೇ ಆಗಾಗ ಹೇಳುತ್ತಿರುತ್ತಾನೆ’ ಎಂದು ಅವನೂ ನನ್ನ ಪರವಾಗಿಯೇ ಮಾತನಾಡಿದ. ’ಆದರೆ ನನ್ನ ಮಗನಿಗೆ ಇನ್ನೆರಡು ತಿಂಗಳಲ್ಲಿ ಪರೀಕ್ಷೆ ಇದೆ, ಅವನು ಆ ತರಗತಿ ತೇರ್ಗಡೆಯಾಗುವುದು ನನಗೆ ಮುಖ್ಯ’ ಎಂದ. ’ಆದರೆ ನಾನು ಜೀವಮಾನವಿಡೀ ಅದೇ ತರಗತಿಯಲ್ಲಿ ಇರಲು ಸಿದ್ಧ’ ಎಂದು ಹೇಳಿ ಹೊರನಡೆದೆ. ಅವನು ದಂಗಾಗಿ ನನ್ನತ್ತಲೇ ನೋಡುತ್ತಿದ್ದ.
ಅಲ್ಲಿಂದ ನೇರವಾಗಿ ಪಂಚಾಯಿತಿ ಅಧ್ಯಕ್ಷನನ್ನು ಭೇಟಿ ಮಾಡಿದೆ. ಅವನಂತೂ ನನ್ನ ಕಣ್ಣಿಗೆ ಶುದ್ಧ ಹಸುವಿನ ಸಗಣಿಯ ಹಾಗೆ ಕಂಡ. ನನ್ನ ಮಾತುಗಳನ್ನು ಕೇಳಿ ’ಇದಕ್ಕೆಲ್ಲ ನನಗೆ ತಲೆಕೆಡಿಸಿಕೊಳ್ಳಲು ಪುರುಸೊತ್ತಿಲ್ಲ’ ಎಂದು ಕೈಯಾಡಿ ಬಿಟ್ಟ. ’ಆದರೆ ನನಗೆ ಸರಿಯಲ್ಲ ಎನಿಸಿದ್ದನ್ನು ನಾನು ಯಾವ ಕಾರಣಕ್ಕೂ ಒಪ್ಪುವವನಲ್ಲ’ ಎಂದು ನೇರವಾಗಿ ಹೇಳಿದ ಮೇಲೆ ಆತ ’ಹಾಗಿದ್ದರೆ ಉಪಾಧ್ಯಕ್ಷರನ್ನು ಭೇಟಿ ಮಾಡು, ಅವರಿಂದ ನಿನಗೆ ನೆರವಾಗಬಹುದು’ ಎಂದು ಸಲಹೆ ನೀಡಿದ. ಆ ಹಸುವಿನ ಸಗಣಿಗೆ ನಾನು ಆಭಾರಿಯಾಗಿರಬೇಕು. ಏಕೆಂದರೆ ಉಪಾಧ್ಯಕ್ಷರಾಗಿದ್ದ ’ಶಂಭು ದುಬೆ’ಯೊಬ್ಬರೇ ನನ್ನ ಕಣ್ಣಿಗೆ ಆ ಇಡೀ ಹಳ್ಳಿಯಲ್ಲಿ ಒಬ್ಬ ಯೋಗ್ಯ ವ್ಯಕ್ತಿಯಂತೆ ತೋರಿದ್ದು. ನಾನು ಅವರ ಮನೆಯ ಬಾಗಿಲನ್ನು ತಟ್ಟಿದಾಗ ಯಾರೋ ದೊಡ್ಡ ಮನುಷ್ಯರಿರಬೇಕು ಎಂದುಕೊಂಡು ’ಯಾರದು, ಒಳಗೆ ಬನ್ನಿ’ ಎಂದು ಗೌರವದಿಂದ ಕರೆದರು. ಆದರೆ ೮-೧೦ ವಯಸ್ಸಿನ ಚೋಟುದ್ದ ಹುಡುಗನನ್ನು ನೋಡಿ ಅವರಿಗೆ ಆಶ್ಚರ್ಯವಾಗಿರಬೇಕು. ’ಕ್ಷಮಿಸಿ ನೀವು ತಿಳಿದಂತೆ ನಾನೇನು ದೊಡ್ಡ ಮನುಷ್ಯನಲ್ಲ, ಓದಿದವನೂ ಅಲ್ಲ, ಆ ಕಾಂತಾರ್ ಮಾಸ್ತರ ಮೇಲೆ ದೂರು ನೀಡಲು ಬಂದಿದ್ದೇನೆ’ ಎಂದು ಹೇಳಿದೆ. ಆಗ ಅವರು ನನಗೆ ಕೂರಲು ಹೇಳಿದ ಧಾಟಿಯೇ ಆಪ್ಯಾಯಮಾನವಾಗಿತ್ತು. ’ನೀವು ನನ್ನ ತಂದೆಗಿಂತ ಹಿರಿಯರು. ನಿಮ್ಮೆದುರು ಕುರ್ಚಿಯ ಮೇಲೆ ಕೂರಲು ಸಂಕೋಚವಾಗುತ್ತದೆ’ ಎಂದು ಹೇಳಿದೆ. ’ಪರವಾಗಿಲ್ಲ, ನಿಮ್ಮಪ್ಪನೂ ನನ್ನ ಸ್ನೇಹಿತನೇ, ಕುಳಿತುಕೋ’ ಎಂದರು. ಕುಳಿತೊಡನೆಯೇ ನನ್ನ ಮತ್ತು ಅವರ ನಡುವೆ ಎಂಥದೋ ಸಂಚಲನವಾಯಿತು. ಅದು ಅವರಿಗೂ ಅರಿವಾಯಿತು. ’ಈಗ ಬಂದ ವಿಷಯ ಹೇಳು’ ಎಂದರು. ಆಗ ನಾನು ’ಆ ವಿಷಯಕ್ಕೆ ಬರುವ ಮುನ್ನ,..ಈಗ ಒಂದು ವಿಚಿತ್ರವಾದ ಅನುಭವವಾಯಿತಲ್ಲ, ಅದು ಏನು?’ ಎಂದು ಕೇಳಿದೆ. ಅವರು ಕಣ್ಣುಮುಚ್ಚಿ ಕುಳಿತರು. ಹತ್ತು ನಿಮಿಷ ಕಳೆದ ಮೇಲೆ ಕಣ್ತೆರೆದರು. ’ಅದೇನೋ, ಅದು ಯಾವ ಬಗೆಯದು ಎಂದು ನನಗೂ ತಿಳಿಯುತ್ತಿಲ್ಲ’ ಎಂದರು. ಅದೇನೆಂದು ನನಗೆ ತಿಳಿಯಲು ೨೦ ವರ್ಷಗಳು ಬೇಕಾದವು. ಇದು ನಡೆದದ್ದು ೧೯೪೦ರಲ್ಲಿ, ಅವರು ತೀರಿಕೊಳ್ಳುವ ಒಂದು ವರ್ಷದ ಮುನ್ನ ಅಂದರೆ ೧೯೫೯ರಲ್ಲಿ ಅದೇನೆಂದು ನನಗೆ ಗೊತ್ತಾಯಿತು. ಕಾರ್ಲ್ ಗುಸ್ತಾವ್ ಯೂಂಗ್ ಅದನ್ನು ’ಸಿಂಕ್ರಾನಿಸಿಟಿ’ ಎನ್ನುತ್ತಾನೆ. ಒಂದು ಬಗೆಯ ತಾದಾತ್ಮ್ಯ. ಅವರು ಸಾಯುವ ಮುನ್ನ ನಾನು ಅದನ್ನು ಅವರಿಗೆ ವಿವರಿಸಿದೆ. ಅದು ನನಗೂ ಗೊತ್ತಿತ್ತು, ಅವರಿಗೂ ಗೊತ್ತಿತ್ತು. ಆದರೆ ಆ ಪದ ಮಾತ್ರ ಇಬ್ಬರಿಗೂ ಸಿಕ್ಕಿರಲಿಲ್ಲ. ಅವರು ನನ್ನನ್ನು ಒಬ್ಬ ಮಗನಂತೆ, ಮೊಮ್ಮಗನಂತೆ ಪ್ರೀತಿಸಿರಬಹುದು. ಆದರೆ ಅದು ಬರೀ ಪ್ರೀತಿಯಲ್ಲ. ಅದನ್ನು ಗೆಳೆತನ ಎಂದು ಬೇಕಾದರೆ ಅನುವಾದಿಸಬಹುದು. ನನ್ನ ದೃಷ್ಟಿಯಲ್ಲಿ ಗೆಳೆತನ ಪ್ರೀತಿಗಿಂತ ಮಿಗಿಲಿನ ಅರ್ಥ ಪಡೆದಿದೆ. ಬಳಿಕ ನಾನು ಆ ಮಾಸ್ತರು ಪೆನ್ಸಿಲ್ಲಿನಿಂದ ಒತ್ತುವುದು, ಸೂಜಿಯಿಂದ ಉಗುರು ಸಂದಿಗೆ ಚುಚ್ಚುವುದು ಇತ್ಯಾದಿ ಶಿಕ್ಷೆಯ ವಿಧಾನಗಳನ್ನೆಲ್ಲ ವಿವರಿಸಿದೆ. ನನ್ನ ಮಾತುಗಳನ್ನು ವ್ಯವಧಾನದಿಂದ ಕೇಳಿ ’ನಾನೂ ಇದನ್ನೆಲ್ಲ ಕೇಳಿದ್ದೆ ಆದರೆ ಅವನಿಗೆ ಹೆದರಿ ಈತನಕ ಯಾರೂ ದೂರು ತೆಗೆದುಕೊಂಡು ಬಂದಿರಲಿಲ್ಲ. ಈಗ ನಿನಗೆ ಹೆದರಿಕೆಯಾಗದೇ?’ ಎಂದು ಕೇಳಿದರು. ’ನಾನು ಫೇಲಾಗಲು ಸಿದ್ಧನಿದ್ದೇನೆ, ಆತ ಇನ್ನೇನು ತಾನೇ ಮಾಡಬಲ್ಲ? ಶಾಲೆಯಲ್ಲಿ ನಾನಿರಬೇಕು ಇಲ್ಲ ಅವನಿರಬೇಕು’ ಎಂದು ಖಂಡಿತವಾಗಿ ಹೇಳಿದೆ. ಶಂಭು ದುಬೆ ನನ್ನನ್ನು ಇನ್ನೂ ಹತ್ತಿರ ಕರೆದು, ಭುಜದ ಮೇಲೆ ಕೈಯಿಟ್ಟು ’ಅನ್ಯಾಯ ಸಹಿಸದವರನ್ನು ನಾನೆಂದಿಗೂ ಮೆಚ್ಚುತ್ತೇನೆ. ಆದರೆ ಇಷ್ಟು ಚಿಕ್ಕ ವಯಸ್ಸಿಗೇ ನಿನ್ನಲ್ಲಿ ಇಂಥ ಕೆಚ್ಚು ಬಂದಿರುವುದು ನೋಡಿದರೆ ನನಗೆ ನಂಬಲಾಗುತ್ತಿಲ್ಲ’ ಎಂದರು. ಅಂದಿನಿಂದ ನಾವಿಬ್ಬರೂ ಜೀವಮಾನದ ಗೆಳೆಯರಾದೆವು, ಅವರು ಸಾಯುವವರೆಗೂ ನನ್ನ ಸಂಪರ್ಕದಲ್ಲಿದ್ದರು. ನಾನು ಹೇಳುವುದು ನಿಮಗೆ ಅತಿ ಎನಿಸಬಹುದು. ಆದರೆ ಅದೊಂದು ಸಣ್ಣ ಹಳ್ಳಿಯಾದರೂ ಇಡೀ ಭಾರತದಲ್ಲೇ ಯಾವ ಮೂಲೆಯಲ್ಲೂ ಶಂಭು ದುಬೆಯಂತಹ ಇನ್ನೊಬ್ಬ ವ್ಯಕ್ತಿ ನನಗೆ ಸಿಗಲಿಲ್ಲ. ಮೊದಲ ದಿನವೇ ನನ್ನ ವಿಷಯದಲ್ಲಿ ಅಪಾರ ವಾತ್ಸಲ್ಯವನ್ನು ತೋರಿಸಿದರು. ಅವರು ಉಪಾಧ್ಯಕ್ಷರಾಗಿದ್ದರಿಂದ ’ನೀನೇನೂ ಯೋಚಿಸಬೇಡ, ಇನ್ನು ಅವನ ಕಾಟ ಇರುವುದಿಲ್ಲ. ಆತನಿಗೆ ಆಗಲೇ ನಿವೃತ್ತಿಯಾಗಿದೆ. ಸೇವಾವಧಿಯನ್ನು ವಿಸ್ತರಿಸಲು ಅರ್ಜಿ ನೀಡಿದ್ದಾನೆ, ನಾನು ಆ ಅರ್ಜಿಯನ್ನೇನೂ ಪರಿಗಣಿಸುವುದಿಲ್ಲ. ನೀನಿನ್ನು ಮನೆಗೆ ನಡೆ’ ಎಂದು ಕಳುಹಿಸಿದರು. ಮರುದಿನ ಕಾಂತಾರ್ ಮಾಸ್ತರು ಬರಲಿಲ್ಲ. ಆತನಿಗೆ ದೀರ್ಘಾವಧಿ ರಜೆಯ ಮೇಲೆ ಹೋಗಲು ಆದೇಶ ಪತ್ರ ಬಂದಿತ್ತು. ಇಡೀ ಶಾಲೆ ಸಂಭ್ರಮ ಪಟ್ಟಿತು. ಮತ್ತೆ ಆತ ನನ್ನ ಮುಖ ನೋಡಲಿಲ್ಲ. ನಾನಾಗಿಯೇ ಅವನ ಮುಖ ನೋಡಲು ಅವನ ಮನೆಯ ಬಾಗಿಲು ತಟ್ಟಿದರೂ ಅವನು ಹೊರಬರಲಿಲ್ಲ. ಆತ ಮಹಾ ಹೇಡಿ. ಸಿಂಹದ ಚರ್ಮದೊಳನ ಕುರಿಯಂತೆ ಇದ್ದ. ಹೀಗೆ ನನ್ನ ಶಾಲೆಯ ಮೊದಲ ದಿನ ಪ್ರಾರಂಭವಾಯಿತು.
ಎರಡನೆಯ ದಿನವೇ ನಾನು ನಿಜವಾಗಿಯೂ ಶಾಲೆ ಸೇರಿದ್ದು ಎಂದು ಹೇಳಬೇಕು. ಎರಡನೆಯ ದಿನ ಕಾಂತಾರ್ ಮಾಸ್ತರಿಲ್ಲ ಎಂದು ಹುಡುಗರೆಲ್ಲ ಕುಣಿಯುತ್ತಿದ್ದರು. ನನ್ನನ್ನು ದೊಡ್ಡ ನಾಯಕನಂತೆ ಬಿಂಬಿಸಲಾಯಿತು. ನಾನು ಅವರಿಗೆ ’ದಯವಿಟ್ಟು ಈ ಕೂಡಲೆ ಈ ಸಂಭ್ರಮವನ್ನೆಲ್ಲ ನಿಲ್ಲಿಸಿ. ನೀವು ಕುಣಿಯಲೇ ಬೇಕಿದ್ದರೆ ಆ ಕಾಂತಾರ ಮಾಸ್ತರ ಮನೆಯ ಮುಂದೆ ಹೋಗಿ ಕುಣಿಯಿರಿ. ಕೃತಜ್ಞತೆ ಸಲ್ಲಿಸಬೇಕಿದ್ದರೆ ಶಂಭು ದುಬೆಯವರಿಗೆ ಸಲ್ಲಿಸಿ. ಅವರೇ ನಿಮ್ಮ ಈ ಖುಷಿಗೆ ಕಾರಣ. ಇದಾವುದರಲ್ಲೂ ನನ್ನ ಪಾತ್ರ ಏನೇನೂ ಇಲ್ಲ. ಕೆಲವು ಸಲ ನಾವು ನಿರೀಕ್ಷಿಸಿರದ ಹಾದಿಗಳಿಗೆ, ನಾವು ಯೋಗ್ಯರಲ್ಲದ ನೆಲೆಗಳಿಗೆ ಬದುಕು ಕೊಂಡೊಯ್ಯುತ್ತಿರುತ್ತದೆ. ಇದೂ ಅಂಥ ಪ್ರಸಂಗವೇ, ಈ ಪ್ರಸಂಗವನ್ನು ಇಲ್ಲಿಗೇ ಮರೆತುಬಿಡಿ’ ಎಂದು ಹೇಳಿದೆ. ಒಟ್ಟಿನಲ್ಲಿ ನನ್ನ ಬಾಲ್ಯದಲ್ಲಿ ನಾನು ಮನೆಯಲ್ಲಾಗಲಿ, ಶಾಲೆಯಲ್ಲಾಗಲಿ ಸಾಮಾನ್ಯ ಹುಡುಗನ ಹಾಗೆ ಇರಲೇ ಇಲ್ಲ. ಶಾಲೆಗೂ ಸಹ ನಾನು ಶೇ.೯೦ರಷ್ಟು ದಿನಗಳು ಹಾಜರಾಗುತ್ತಲೇ ಇರಲಿಲ್ಲ.
ನನ್ನ ಎಳೆಯ ಮನಸ್ಸಿಗೆ ಕೈಹಾಕಿ ಅದನ್ನು ಹೊಲಸೆಬ್ಬಿಸಲು ನಾನು ಯಾರಿಗೂ ಅವಕಾಶ ನೀಡಲಿಲ್ಲ. ಅದಕ್ಕೇ ನನ್ನನ್ನು ಎಲ್ಲರೂ ಮಹಾ ತುಂಟು ಹುಡುಗ, ಉಪದ್ರವಿ ಎನ್ನುತ್ತಿದ್ದರು. ಉಪದ್ರವ ನೀಡುವ ಉದ್ದೇಶ ಆಗ ನನಗೆ ಎಳ್ಳಷ್ಟೂ ಇರಲಿಲ್ಲ. ಈಗಲೂ ನಾನು ವಿವಾದಾತ್ಮಕ ವ್ಯಕ್ತಿ ಎನ್ನಿಸಿಕೊಂಡಿದ್ದೇನೆ. ಆದರೆ ಅದಕ್ಕೆಲ್ಲ ನನಗೆ ನನ್ನದೇ ಆದ ಬಲವಾದ ಕಾರಣಗಳಿರುತ್ತವೆ. ಉಪದ್ರವಕ್ಕಾಗಿ ಉಪದ್ರವ ಮಾಡುವವನಲ್ಲ. ಒಂದು ಸಣ್ಣ ಉದಾಹರಣೆಯನ್ನು ಹೇಳುತ್ತೇನೆ: ನನ್ನ ಹೈಸ್ಕೂಲಿನಲ್ಲಿ ಖ್ಯಾತ ಉರ್ದು ಕವಿ ಮಿರ್ಜ಼ಾ ಇಕ್ಬಾಲರ ’ಸಾರೆ ಜಹಾನ್ ಸೆ ಅಚ್ಛಾ ಹಿಂದೂಸ್ಥಾನ್ ಹಮಾರಾ’ ಎಂಬ ಗೀತೆ ಪ್ರಾರ್ಥನಾ ಗೀತೆಯಾಗಿತ್ತು. ಆ ಹಾಡು ಚೆನ್ನಾಗಿದ್ದರೂ, ಹಾಡಿನ ಹಿಂದಿನ ತತ್ವ ನನಗೆ ತುಂಬ ವಿಕೃತವಾಗಿ ತೋರಿತು. ’ನನ್ನ ದೇಶವೇ ಎಲ್ಲ ದೇಶಕ್ಕಿಂತ ಚೆಂದ, ನನ್ನ ದೇಶ ಒಂದು ಹೂತೋಟ, ಇಲ್ಲಿ ನಾವೆಲ್ಲ ಹಾಡುವ ಕೋಗಿಲೆಗಳು,..’ ಇವೇ ಆ ಸಾಲುಗಳ ತತ್ವ. ಶಾಲೆಗೆ ಬಂದ ಮೊದಲ ದಿನವೇ ’ಈ ಹಾಡನ್ನು ನಾನು ಹಾಡುವುದಿಲ್ಲ’ ಎಂದು ಮುಖ್ಯೋಪಾಧ್ಯಾಯರಿಗೆ ಎರಡು ಸಾವಿರ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಹೇಳಿಬಿಟ್ಟೆ. ’ಇದೊಂದು ರಾಷ್ಟ್ರೀಯ ಅಹಂಕಾರದ ಗೀತೆ. ಹಾಗಾಗಿ ಇದನ್ನು ಒಪ್ಪಲಾರೆ. ಅಲ್ಲದೆ ಇಲ್ಲಿನ ಬಡತನ, ಗುಲಾಮತನ, ರೋಗ ರುಜಿನಗಳನ್ನು ನೋಡಿದರೆ, ದಿನೇ ದಿನೇ ಈ ದೇಶ ಇನ್ನೂ ನಾಶವಾಗುತ್ತಿರುವುದನ್ನು ನೋಡಿದರೆ ಈ ಹಾಡಿಗೆ ನಿಜವಾಗಿಯೂ ಏನಾದರೂ ಅರ್ಥವಿದೆಯೇ? ಈ ಮಕ್ಕಳೆಲ್ಲ ಈ ದೇಶದ ಕೋಗಿಲೆಗಳೇ? ಈ ಬಡಪಾಯಿಗಳು ಬೆಳಗಿನ ಜಾವವೇ ಮೈಲುಗಟ್ಟಲೆ ನಡೆದು ಶಾಲೆಗೆ ಬರುತ್ತಾರೆ. ಪಾಪ, ಇಲ್ಲಿ ನನ್ನ ಎಷ್ಟೋ ಸಹಪಾಠಿಗಳು ಮಧ್ಯಾಹ್ನ ಊಟವನ್ನೇ ಮಾಡುವುದಿಲ್ಲ. ಆ ಇಕ್ಬಾಲ್‌ಗೆ ನೋಬೆಲ್ ಪ್ರಶಸ್ತಿ ಸಿಕ್ಕಿದ್ದರೆ ನನಗೇನು? ನಾನಂತೂ ಪ್ರಾರ್ಥನೆಯಲ್ಲಿ ಭಾಗವಹಿಸುವುದಿಲ್ಲ’ ಎಂದು ಹೇಳಿದೆ. ಕೋಪದಿಂದ ಕುದಿಯುತ್ತಿದ್ದ ಆ ಮುಖ್ಯೋಪಾದ್ಯಾಯರು ಹೊಡೆಯಲು ಬೆತ್ತ ಹಿಡಿದುಕೊಂಡು ಬಂದರು. ನಾನೂ ಕೈಯೊಡ್ಡಿ ಹೇಳಿದೆ ’ಎಷ್ಟು ಬೇಕಾದರೂ ಹೊಡೆಯಿರಿ. ಆದರೆ ಇಲ್ಲಿಂದ ನಾನು ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ನಿಮ್ಮ ಮೇಲೆ ದೂರು ದಾಖಲಿಸುತ್ತೇನೆ, ಮಕ್ಕಳನ್ನು ಹೊಡೆಯುವುದು ಈ ಸರ್ಕಾರದಲ್ಲಿ ಶಿಕ್ಷಾರ್ಹ ಅಪರಾಧ ಎಂದು ನೆನಪಿಡಿ’ ಎಂದೆ.  ಆತ ಕಂಬದಂತೆ ನಿಂತುಬಿಟ್ಟ, ಬೆತ್ತ ಕೈಯಿಂದ ಜಾರಿ ಕೆಳಗೆ ಬಿತ್ತು. ಆಗ ವಿದ್ಯಾರ್ಥಿಗಳಿಗೆ ’ಇವರು ಯಾವುದಾದರೂ ಅರ್ಥಪೂರ್ಣ ಹಾಡನ್ನು ಹಾಡಿಸಿದರೆ ಹಾಡೋಣ, ಇಲ್ಲವಾದರೆ ಮೌನವಾಗಿ ಹತ್ತು ನಿಮಿಷ ನಿಂತು ಬಳಿಕ ನಮ್ಮ ನಮ್ಮ ತರಗತಿಗಳಿಗೆ ಹೋಗೋಣ’ ಎಂದು ಹೇಳಿ ಕೆಳಗಿಳಿದೆ. ಅಂದಿನಿಂದ ನಾನಿದ್ದ ಮೂರು ವರ್ಷಗಳ ಕಾಲ ಆ ಶಾಲೆಯಲ್ಲಿ ’ಸಾರೇ ಜಹಾನ್ ಸೆ ಅಚ್ಛಾ,..’ ಹಾಡನ್ನು ಹಾಡುತ್ತಿರಲಿಲ್ಲ. ಇದನ್ನು ಉಪದ್ರವ ಎನ್ನುವಿರೇ? ಆ ಮುಖ್ಯೋಪಾಧ್ಯಾಯನಂತೆ ಯೋಚಿಸುವವರಿಗೆ ಇದು ಉಪದ್ರವದಂತೆ ಕಂಡೀತು.
ಮೊದಲಿನಿಂದಲೂ ವಾದ ಮಾಡುವುದನ್ನು ನಾನು ಇಷ್ಟಪಡುತ್ತಿದ್ದೆ. ಚಿಕ್ಕಂದಿನಿಂದಲೂ ನನಗೆ ತಿಳಿದಿದ್ದುದು ಇದೊಂದೇ ಆಟ. ಪ್ರತಿಯೊಂದಕ್ಕೂ ತರ್ಕ ಮಾಡುವುದು, ಶಾಲೆಗೆ ಹೋಗುವುದೆಂದರೆ ನನಗಾಗುತ್ತಿರಲಿಲ್ಲ. ಏಕೆಂದರೆ ಅಲ್ಲಿದ್ದ ಮಕ್ಕಳಿಗೆ ನನಗಿದ್ದ ಆಸಕ್ತಿಗಳು ಇರಲಿಲ್ಲ ಮತ್ತು ಅವರ ಆಸಕ್ತಿಗಳು ನನಗೆ ಬೇಕಾಗಿರಲಿಲ್ಲ. ’ಕೊನೆಯ ಸತ್ಯ ಯಾವುದು, ಬದುಕಿನ ಅರ್ಥ ಏನು, ಈ ಜಾಗದಲ್ಲಿ ನಾನೇ ಏಕೆ ಇದ್ದೇನೆ, ಬೇರೆಯವರು ಏಕಿಲ್ಲ, ಈ ಪ್ರಶ್ನೆಗಳಿಗೆ ಉತ್ತರ ಸಿಗುವವರೆಗೂ ನನಗೆ ನೆಮ್ಮದಿ ಇಲ್ಲ, ನನ್ನ ಜೊತೆಯವರಿಗೂ ನೆಮ್ಮದಿಯಿಂದ ಇರಲು ಬಿಡುತ್ತಿರಲಿಲ್ಲ. ಕೆಲವು ಸಲ ನನ್ನ ಉಪಾಧ್ಯಾಯರು ’ಏಕೆ ಹೊರಗೆ ಮಕ್ಕಳ ಜೊತೆ ಆಡುವುದಿಲ್ಲ? ಹೀಗೆ ಮರದ ಕೆಳಗೆ ಕುಳಿತುಕೊಳ್ಳುವುದು ಈ ವಯಸ್ಸಿಗೆ ಸಹಜವಲ್ಲ’ ಎನ್ನುತ್ತಿದ್ದರು. ’ನಾನು ಸಹಜವಾಗಿಯೇ ಇದ್ದೇನೆ. ನನಗೆ ನಿಮ್ಮಲ್ಲಿ, ಆ ನಿಮ್ಮ ಮಕ್ಕಳಲ್ಲಿ ಏನೋ ಅಸಹಜತೆ ಕಾಣಿಸುತ್ತಿದೆ’ ಎನ್ನುತ್ತಿದ್ದೆ. ’ಫುಟ್ ಬಾಲ್ ಆಡುವುದು ಸಹಜವಾದ ವರ್ತನೆಯೇ? ಒಂದು ಚೆಂಡಿನ ಹಿಂದೆ ಅಷ್ಟೊಂದು ಜನ ಓಡಿ ಬಿದ್ದು, ಮೂಳೆ ಮುರಿದುಕೊಳ್ಳುವುದು ಆರೋಗ್ಯವೇ? ಗಂಟೆ ಗಟ್ಟಲೆ ಕೂತು ಆಟವನ್ನು ನೋಡುವುದು ಜಾಣ್ಮೆಯೇ? ಕ್ಷಣಭಂಗುರವಾದ ಈ ಬದುಕಿನಲ್ಲಿ ಇವರು ಸಮಯವನ್ನು ಹೀಗೆ ಹಾಳುಮಾಡಿಕೊಳ್ಳುತ್ತಿದ್ದಾರಲ್ಲ!’ ಎನ್ನಿಸುತ್ತಿತ್ತು. ನಮ್ಮ ಶಾಲೆಯ ಹಿಂದಿದ್ದ ಮರದಡಿ ಕುಳಿತು ಗಂಟೆಗಟ್ಟಲೆ ಸಮಯವನ್ನು ಕಳೆಯುತ್ತಿದ್ದೆ. ಶಾಲೆ ಬಿಟ್ಟು ಕಾಲೇಜಿಗೆ ಸೇರಿದ ಮೇಲೂ ಊರಿಗೆ ಬಂದಾಗಲೆಲ್ಲ ಬಂದು ಅಲ್ಲಿ ಕೂರುತ್ತಿದ್ದೆ. ಮುಂದೆ ಅಜ್ಜಿ ಸತ್ತ ಮೇಲೆ ಈ ಊರಿನ ಸಂಬಂಧ ಕಡಿದು ಹೋಯಿತು ಎಂದು ನಿರ್ಧರಿಸಿದೆ. ೧೯೭೦ರ ನಂತರ ನಾನು ಊರಿಗೆ ಹೋಗಲಿಲ್ಲ. ನಾನು ಹೋಗುವುದನ್ನು ನಿಲ್ಲಿಸಿದೊಡನೆಯೇ ಆ ಮರವೂ ಸತ್ತು ಹೋಯಿತು. ಇದು ಕಾಕತಾಳೀಯವಲ್ಲ, ಇಂಥದು ಎರಡು ಸಲ ನನ್ನ ಜೀವನದಲ್ಲಿ ಘಟಿಸಿತು. ಚಿತ್ತವೃತ್ತಿ ನಮ್ಮ ನಡುವೆ ಬಿರುಕನ್ನು ಉಂಟು ಮಾಡಿದರೆ ಮೌನವು ನಮ್ಮ ಆತ್ಮಗಳನ್ನು ಒಂದುಗೂಡಿಸುತ್ತದೆ. ಮೌನದಲ್ಲಿ ನಿಜವಾದ ಸಂವಹನ ಸಂಭವಿಸುತ್ತದೆ. ಮೌನಕ್ಕೆ ಅಸ್ತಿತ್ವದಿಂದ ಪ್ರತ್ಯೇಕವಾಗಲು ತಿಳಿಯದು.
ಶಂಭುರತನ್ ದುಬೆ
ಪಂಡಿತ್ ಶಂಭುರತನ್ ದುಬೆ ಒಳ್ಳೆಯ ಕವಿ ಮತ್ತು ಕತೆಗಾರ. ಆದರೆ ಅವರಿಗೆ ಯಾವ ಮಹತ್ವಾಕಾಂಕ್ಷೆಯೂ ಇರಲಿಲ್ಲ. ತಮ್ಮ ಕವಿತೆಗಳನ್ನು ಎಂದೂ ಪ್ರಕಟಿಸಲು ಆಸಕ್ತಿ ತೋರಿಸಲಿಲ್ಲ. ಕವಿ ಸಮ್ಮೇಳನಗಳಲ್ಲಿ ಕವನ ವಾಚನ ಮಾಡಲೂ ಉತ್ಸಾಹ ತೋರಿದವರಲ್ಲ. ಆದರೆ ನನ್ನಂತಹ ಒಂಬತ್ತು ವರ್ಷದ ಹುಡುಗನ ಮುಂದೆ ತುಂಬ ಉಮೇದಿನಿಂದ ತಮ್ಮ ಕವಿತೆಗಳನ್ನು ವಾಚಿಸಿ ಹೇಗಿದೆ ಎಂದು ಕೇಳುತ್ತಿದ್ದರು. ಈಗ ಅವರ ನೆನಪಿನಲ್ಲಿ ಅವರ ಬರವಣಿಗೆಗಳ ಸಂಕಲನವೊಂದನ್ನು ಹೊರತರಲಾಗಿದೆ. ಅದರಲ್ಲಿ ಅವರು ಬರೆದ ಅತ್ಯುತ್ತಮ ಕವಿತೆಗಳೇನೂ ಇಲ್ಲ. ಅದರ ಸಂಪಾದಕರು ಕವಿತ್ವದ ಅಭಿರುಚಿ ಉಳ್ಳವರಲ್ಲ ಎನಿಸುತ್ತದೆ. ಅವರು ಬರೆದ ಅತ್ಯಂತ ಶ್ರೇಷ್ಟ ಕವಿತೆಗಳನ್ನು ನಾನು ಬಲ್ಲೆ. ಅವರ ಎಲ್ಲ ಕವಿತೆಗಳ ಮೂಲ ಆಶಯ ಬದುಕು-ತಾತ್ವಿಕ ಅರ್ಥದಲ್ಲಲ್ಲ. ಬದುಕಿನ ಸಣ್ಣ ಪುಟ್ಟ ಸಂಗತಿಗಳು ಅವರ ಕವಿತೆಗಳ ವಸ್ತುಗಳು. ಇಂಗ್ಲಿಷ್‌ನಲ್ಲಿ ಅವರು ದೊಡ್ಡ ಅಕ್ಷರಗಳನ್ನು (ಕ್ಯಾಪಿಟಲ್ ಲೆಟರ್ಸ್) ಉಪಯೋಗಿಸುತ್ತಿರಲಿಲ್ಲ. ಅವರು ಬರೆದರೆ ಮೊದಲ ಸಾಲಿನ ಮೊದಲನೆಯ ಅಕ್ಷರವೂ ಸಣ್ಣ ಅಕ್ಷರ ಆಗಿರುತ್ತಿತ್ತು, ನಾನು (ಐ) ಎಂಬುದಕ್ಕೂ ಸಣ್ಣಕ್ಷರವನ್ನೇ ಬಳಸುತ್ತಿದ್ದರು. ದೊಡ್ಡಕ್ಷರದಲ್ಲಿ ಬರೆದರೆ ಏನು ತಪ್ಪು ಎಂದು ನಾನು ಕೇಳುತ್ತಿದ್ದೆ. ’ತಪ್ಪಲ್ಲ, ಆದರೆ ನನಗೆ ಬದುಕಿನ ಸಣ್ಣ ಪುಟ್ಟ ಸಂಗತಿಗಳೇ ಇಷ್ಟ. ದೊಡ್ಡದಾದ, ಗಹನವಾದ ಸಂಗತಿಗಳು ನನಗೆ ಬೇಕಿಲ್ಲ. ಹಾಗಾಗಿ ಸಣ್ಣ ಪುಟ್ಟ ಸಂಗತಿಗಳನ್ನು ದೊಡ್ಡ ಅಕ್ಷರಗಳಲ್ಲಿ ಬರೆಯುವುದು ಸರಿಯಲ್ಲ ಎಂದು ನನ್ನ ತಿಳುವಳಿಕೆ’ ಎನ್ನುತ್ತಿದ್ದರು.
 ಬದುಕಿರುವಾಗ ಅವರ ಒಂದು ಕವನವೂ ಪ್ರಕಟವಾಗಲಿಲ್ಲ. ಅವರು ಸತ್ತ ಮೇಲೆ ಅವರ ’ಝಾನ್ಸಿ ರಾಣಿ’ ಎಂಬ ಕತೆಯನ್ನು ಸಿನಿಮಾ ಮಾಡಲಾಯಿತು. ಆ ಚಲನಚಿತ್ರಕ್ಕೆ ಹಲವು ರಾಷ್ಟ್ರಮಟ್ಟದ, ಅಂತರ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಬಂದವು. ಅವರು ಪಂಚಾಯಿತಿಯ ಅಧ್ಯಕ್ಷರಿಂದ ನಾಮನಿರ್ದೇಶನಗೊಂಡಿದ್ದರೇ ವಿನಃ ಉಪಾಧ್ಯಾಕ್ಷರಾಗಲು ಚುನಾವಣೆಗೆ ನಿಂತವರಲ್ಲ. ಹಸುವಿನ ಸಗಣಿಯಂತಹ ಆ ಅಧ್ಯಕ್ಷ ಮಹಾಶಯನಿಗೆ ತನ್ನ ಕೆಲಸಗಳನ್ನೆಲ್ಲ ಮಾಡಿಕೊಡಲು ಒಬ್ಬ ಬುದ್ಧಿವಂತ ಸಹಾಯಕ ಬೇಕಾಗಿತ್ತು. ನನ್ನ ದೃಷ್ಟಿಯಲ್ಲಿ ಅವನು ಅಧ್ಯಕ್ಷನಾಗಿ ತಿಳಿಯದೇ ಮಾಡಿದ ಒಳ್ಳೆಯ ಕೆಲಸವೆಂದರೆ ಅದೊಂದೇ. ’ಹಸುವಿನ ಸಗಣಿ’ಗೆ - ಇದು ನಾನು ನನ್ನ ಉಪನ್ಯಾಸಗಳಲ್ಲಿ ಬಳಸುವ ರೂಪಕಗಳಲ್ಲೆಲ್ಲ ತುಂಬ ಜನಪ್ರಿಯವಾದುದು-  ತಿಳುವಳಿಕೆ ಎಲ್ಲಿರುತ್ತದೆ?. ಭಾರತದಲ್ಲಿ ಹಸುವಿನ ಸಗಣಿಗೆ ತುಂಬ ದೊಡ್ಡ ಸ್ಥಾನವಿದೆ.
ಬಾಲ್ಯದಲ್ಲಿ ನಾನು ಎಲ್ಲರಂತೆ ನಾನು ಸಾಧಾರಣ ಹುಡುಗನಾಗಿರಲಿಲ್ಲ. ನನಗೂ ಅವರಿಗೂ ನಡುವೆ ಯಾವುದೇ ಸಮಾನತೆಯೂ ಇರಲಿಲ್ಲ, ಅವರು ಇಡೀ ಹಳ್ಳಿಯ ಅಧ್ಯಕ್ಷರಾಗಿದ್ದರು, ಹಲವು ಸಂಘ, ಸಭೆ, ಸಮಿತಿಗಳಿಗೆ ಅಧ್ಯಕ್ಷರೋ ಕಾರ್ಯದರ್ಶಿಗಳೋ ಆಗಿದ್ದರು, ಒಳ್ಳೆಯ ವಿದ್ಯಾವಂತರು, ಕಾನೂನು ತಜ್ಞರು. ನಮ್ಮಿಬ್ಬರ ಸ್ನೇಹವನ್ನು ಕಂಡು ಇಡೀ ಹಳ್ಳಿಯೇ ಹುಬ್ಬೇರಿಸುತ್ತಿತ್ತು. ಆದರೆ ಅವರಿಗೆ ಊರಿನವರ ಅನಿಸಿಕೆಯ ಬಗ್ಗೆ ಲಕ್ಷ್ಯವೇ ಇರಲಿಲ್ಲ. ನನ್ನ ತಂದೆಗಿಂತ ಹಿರಿ ವಯಸ್ಸಿನವರಾದರೂ ನನ್ನನ್ನು ತಮ್ಮ ಓರಗೆಯವನಂತೆ ನಡೆಸಿಕೊಳ್ಳುತ್ತಿದ್ದರು. ನನ್ನ ಪ್ರತಿಭೆಯನ್ನು ಮೊದಲಿಗೆ ಗುರುತಿಸಿದವರು ಅವರೇ. ಅವರು ಹಳ್ಳಿಗೇ ಹಿರಿಯರಾದುದರಿಂದ ಅವರ ಸಹವಾಸದಿಂದಾಗಿ ಹಳ್ಳಿಯಲ್ಲಿ ನನಗೆ ತುಂಬ ಪ್ರಯೋಜನವಾಯಿತು. ’ಎಲ್ಲ ಬಿಟ್ಟು ಈ ಚೇಷ್ಟೆ ಹುಡುಗನ ಗೆಳೆತನ ಏಕೆ ಬೆಳೆಸಿದಿರಿ?’ ಎಂದು ನನ್ನ ತಂದೆ ಅವರನ್ನು ಕೇಳುತ್ತಿದ್ದರು. ಆಗ ಅವರು ನಕ್ಕು ’ಅದನ್ನು ನಾನು ಹೇಳಲಾರೆ, ಮುಂದೆ ನಿಮಗೇ ಅರ್ಥವಾಗುತ್ತದೆ’ ಎನ್ನುತ್ತಿದ್ದರು. ಮುಂದೊಂದು ದಿನ ’ಅವನಿಗೆ ನಾವು ನೀಡಬೇಕಾದುದು ಗೆಳೆತನವನ್ನಲ್ಲ, ನಮ್ಮ ಗೌರವವನ್ನು’ ಎಂದಿದ್ದರಂತೆ. ಅದನ್ನು ಅಪ್ಪ ನನಗೆ ಹೇಳಿದಾಗ ನನಗೂ ಅಚ್ಚರಿಯಾಯಿತು ’ಶಂಭು ಬಾಬು, ಇದೇನು ಮಾತು ಎಂದು ಆಡಿದಿರಿ’ ಎಂದು ನಾನೇ ಒಮ್ಮೆ ಅವರನ್ನು ಕೇಳಿದೆ. ’ನನ್ನ ಒಳಮನಸ್ಸಿಗೆ ಹಾಗೆ ಅನ್ನಿಸಿತು, ಹೇಳಿದೆ. ನೀನೇ ಕಾದು ನೋಡು. ಮುಂದೆ ನೀನು ಏನಾಗಬಹುದೋ ನೋಡುತ್ತಿರು.’ ’ನಿಮ್ಮ ಮಾತುಗಳಿಗೆ ಅರ್ಥವಿಲ್ಲ, ಮುಂದೆ ನಾನು ಏನಾಗಬಹುದೋ, ಈಗಾಗಲೇ ಅದಾಗಿದ್ದೇನೆ’ ’ಇದೇ, ನನಗೆ ನಿನ್ನಲ್ಲಿ ಇಷ್ಟವಾಗುವುದು, ಈ ಮುದುಕ ಎಳೆ ಹುಡುಗನ ಜೊತೆ ಸಹವಾಸ ಮಾಡಿದ್ದಾನೆ ಎಂದು ಊರೆಲ್ಲ ಆಡಿಕೊಳ್ಳುತ್ತಿದೆ, ಆದರೆ ಹೀಗೆ ಆಡಿಕೊಂಡು ತಾವು ಏನು ಕಳೆದುಕೊಳ್ಳುತ್ತಿದ್ದೇವೆ ಎಂದು ಅವರಿಗೆ ಗೊತ್ತಿಲ್ಲ. ನಾನು ಎಂತಹ ಐಶ್ವರ್ಯದ ಸಾಮೀಪ್ಯದಲ್ಲಿದ್ದೇನೆ ಎಂದು ಅವರಿಗೆ ತಿಳಿಯದು, ನನಗೂ ಸ್ಪಷ್ಟವಾಗಿ ತಿಳಿಯದು, ಮುಂದೊಂದು ದಿನ ಅದು ಅನಾವರಣವಾಗಲಿದೆ’
ಪುಸ್ತಕ ಪ್ರೇಮ
ನನ್ನ ಈಜುವ ಹುಚ್ಚಿನಿಂದಾಗಿ ಶಾಲೆಗೆ ಸರಿಯಾಗಿ ಹೋಗುತ್ತಿರಲಿಲ್ಲ. ನದಿಯಲ್ಲಿ ಈಜುತ್ತಿದ್ದೆ, ನದಿಯಾಚೆ ಇದ್ದ ದಟ್ಟವಾದ ಅರಣ್ಯವನ್ನು ಪ್ರವೇಶಿಸುತ್ತಿದ್ದೆ. ತರಗತಿಯ ’ಕಾನ್ಸ್‌ಟಾಂಟಿನೋಪಲ್ ಎಲ್ಲಿದೆ?’ ಎಂಬ ಪಾಠದ ಪ್ರಶ್ನೆಗಳಿಗೆ ಯಾರು ತಲೆಕೆಡಿಸಿಕೊಳ್ಳುತ್ತಾರೆ? ನನ್ನ ಭೂಗೋಳದ ಅನ್ವೇಷಣೆಯನ್ನು ನಾನೇ ಮಾಡುತ್ತಿದ್ದೆ. ಅಜ್ಜಿ ಅಕ್ಷರಗಳನ್ನು ಕೂಡಿಸಿಕೊಂಡು ಓದುವುದನ್ನು ಹೇಳಿಕೊಟ್ಟ ಮೇಲೆ ಪುಸ್ತಕಗಳನ್ನು ಓದಲು ತೊಡಗಿದೆ. ಆ ಊರಿನ ಲೈಬ್ರರಿಯನ್ನು ನನ್ನಷ್ಟು, ನನಗಿಂತ ಮೊದಲು ಅಥವ ನಂತರ, ಯಾರಾದರೂ ಬಳಸಿಕೊಂಡಿದ್ದರೋ ತಿಳಿಯದು. ಅಲ್ಲಿಗೆ ಹೋದರೆ ನಾನು ಯಾವ ಟೇಬಲ್ಲಿನಲ್ಲಿ ಕುಳಿತುಕೊಳ್ಳುತ್ತಿದ್ದೆ, ಎಲ್ಲಿ ಕುಳಿತು ಓದುತ್ತಿದ್ದೆ ಎಂದು ಜನ ಈಗಲೂ ತೋರಿಸುತ್ತಾರೆ. ಒಮ್ಮೆ ಓದಲು ಕಲಿತ ಮೇಲೆ ನನ್ನ ಬದುಕಿನಲ್ಲಿ ಹೊಸದೊಂದು ದಾರಿಯೇ ತೆರೆದುಕೊಂಡಿತು ಎನ್ನಬಹುದು. ಇಡೀ ಲೈಬ್ರರಿಯನ್ನೇ ನಾನು ಆವಾಹನೆ ಮಾಡಿಕೊಂಡೆ. ತುಂಬ ಹಿಡಿಸಿದ ಪುಸ್ತಕಗಳನ್ನು ರಾತ್ರಿಯ ಹೊತ್ತು ಅಜ್ಜಿಗೆ ಓದಿ ಹೇಳುತ್ತಿದ್ದೆ. ನಿಮಗೆ ಆಶ್ಚರ್ಯವಾಗಬಹುದು, ನನಗೆ ನೆನಪಿರುವಂತೆ ನಾನು ಅಜ್ಜಿಗೆ ಓದಿದ ಮೊದಲ ಪುಸ್ತಕ ’ಬುಕ್ ಆಫ್ ಮಿರ್ದಾದ್’, ಆ ಕಾಲದಲ್ಲಿ ನಾನು ಇಷ್ಟ ಪಟ್ಟ ಇನ್ನೊಂದು ಪುಸ್ತಕ ಟರ್ಜಿನೀವ್‌ನ ’ತಂದೆಯರೂ ಮಕ್ಕಳೂ’,ಅದನ್ನು ಓದಲೇ ಬೇಕು ಎಂದು ಅಪ್ಪನಿಗೆ ಆಗ ತುಂಬ ಬಲವಂತ ಪಡಿಸುತ್ತಿದ್ದೆ. ನಮ್ಮಿಬ್ಬರ ನಡುವಣ ಅಂತರ ಅವನಿಗೆ ತಿಳಿಯಲಿ ಎಂಬ ಉದ್ದೇಶ ನನಗಿದ್ದುದು. ಆತ ನಿಜಕ್ಕೂ ತುಂಬ ಮುಗ್ಧ, ನನ್ನ ಬಲವಂತಕ್ಕಾಗಿ ಪದೇ ಪದೇ ಓದುತ್ತಿದ್ದ. ಈಗವನು ಸತ್ತಿದ್ದಾನೆ, ಬದುಕಿದ್ದರೆ ಕ್ಷಮಾಪಣೆ ಕೇಳುತ್ತಿದ್ದೆ. ಅಲ್ಲದೆ ಆ ಪುಸ್ತಕ ಕೆಲಸ ಮಾಡಿತು ಕೂಡ, ಅದನ್ನು ಓದಿದ ಮೇಲೆ ನನ್ನ ಅವನ ನಡುವಣ ಅಂತರ ಎಷ್ಟೋ ಸುಧಾರಿಸಿತು. ತಂದೆ ಮಗ, ತಾಯಿ ಮಗಳು,ಇವೆಲ್ಲ ಎಷ್ಟು ಹಳಸಲು ಸಂಬಂಧಗಳು! ನನ್ನೊಂದಿಗೆ ಅವನು ಗೆಳೆಯನಂತಿದ್ದ. ತಂದೆಯೊಡನೆ ಗೆಳೆತನ ಬೆಳೆಸುವುದು ಮಹಾಕಷ್ಟ. ಆದರೆ ನನಗೆ ಅದು ಸಾಧ್ಯವಾಯಿತು, ಅದು ಸಾಧ್ಯವಾದದ್ದು ಅವನ ಪ್ರಯತ್ನದಿಂದಲೇ. ಆ ಕಾಲಕ್ಕೆ ಟಾಲ್ಸ್‌ಟಾಯ್‌ನ ರಿಸರಕ್ಷನ್ ಕೃತಿಯನ್ನು ಬೈಬಲ್ಲಿನಂತೆ ಸಾದಾ ಇಟ್ಟುಕೊಂಡೇ ಓಡಾಡುತ್ತಿದ್ದೆ. ’ಓದುವುದು ಸರಿ, ಓದಿದ ಮೇಲೂ ಅದೇಕೆ ಜೊತೆಯಲ್ಲೇ ಇಟ್ಟುಕೊಂಡು ಓಡಾಡಬೇಕು’ ಎಂದು ಅಪ್ಪ ಎಷ್ಟೋ ಸಲ ಆಕ್ಷೇಪಣೆ ಮಾಡುತ್ತಿದ್ದ. ಬೆಳಗಿನ ಹೊತ್ತು ಮಾತ್ರವಲ್ಲ, ರಾತ್ರಿಯೂ ದಿಂಬಿನ ಕೆಳಗೆ ಇಟ್ಟುಕೊಳ್ಳುತ್ತಿದ್ದೆ. ಆ ಕೃತಿಯ ಟಾಲ್ಸ್‌ಟಾಯ್‌ನ ಶೈಲಿ ಹಾಗು ಶ್ರದ್ಧೆಗಳು ನನಗೆ ಇಷ್ಟವಾದವು. ಆ ಕೃತಿಯಲ್ಲಿ ಟಾಲ್ಸ್‌ಟಾಯ್ ಬೈಬಲ್ಲಿನ ಎಲ್ಲ ಸುವಾರ್ತೆಕಾರರನ್ನೂ ಮೀರಿಸುತ್ತಾನೆ. ನಾನು ಕಮ್ಯುನಿಸಂನ್ನು ಇಷ್ಟ ಪಡದ ಕಾರಣ ಗಾರ್ಕಿ ನನಗೆ ಇಷ್ಟವಾಗುತ್ತಿರಲಿಲ್ಲ. ಆದರೂ ಅವನ ’ತಾಯಿ’ ನನಗೆ ತುಂಬ ಹಿಡಿಸಿತು. ಆ ಪುಸ್ತಕದ ಹಲವು ಪ್ರತಿಗಳನ್ನು, ಹಲವು ಆವೃತ್ತಿಗಳನ್ನು ಇಟ್ಟುಕೊಂಡಿದ್ದೆ. ’ನಿನಗೇನು ತಲೆ ಕೆಟ್ಟಿದೆಯೇ? ಒಂದೇ ಪುಸ್ತಕವನ್ನು ಎಷ್ಟು ಬಾರಿ ತರಿಸಿಕೊಳ್ಳುವೆ?’ ಎಂದು ಅಪ್ಪ ಕೇಳುತ್ತಿದ್ದರು. ಗಾರ್ಕಿಯ ತಾಯಿಯನ್ನು ನೆನೆದಾಗಲೆಲ್ಲ ನನಗೆ ನನ್ನ ತಾಯಿಯೇ ನೆನಪಾಗುತ್ತಿದ್ದಳು.
ಧಾರ್ಮಿಕ ನಂಬಿಕೆಗಳು
ಆಗ ನನ್ನ ಮನೆಮಂದಿಯೆಲ್ಲ ದೇವಸ್ಥಾನಕ್ಕೆ ಹೋಗುತ್ತಿದ್ದರೆ ನಾನೊಬ್ಬನೇ ಹೋಗದೇ ಮನೆಯಲ್ಲೇ ಉಳಿಯುತ್ತಿದ್ದುದು. ಹೋಗಬಾರದೆಂದಲ್ಲ, ಹೋಗಲು ನನಗೆ ಸರಿಯಾದ ಕಾರಣ ಬೇಕಿತ್ತು. ಕೇಳಿದರೆ ’ಅದೇನೋ ನಮಗೂ ಗೊತ್ತಿಲ್ಲ ಹಿರಿಯರು ತೋರಿದ ದಾರಿಯಲ್ಲಿ ನಡೆದರೆ ಒಳ್ಳೆಯದು, ಅದಕ್ಕೇ ಹೋಗುತ್ತೇವೆ’ ಎನ್ನುತ್ತಿದ್ದರು. ಈ ಉತ್ತರದಿಂದ ನನಗೆ ಸಮಾಧಾನ ಸಿಗುತ್ತಿರಲಿಲ್ಲ ’ಇದು ಕಲ್ಲಿನ ವಿಗ್ರಹವಲ್ಲವೇ? ಇದು ಕಲ್ಲಿನ ವಿಗ್ರಹವೆಂದು ನಿಮಗೂ ಗೊತ್ತು. ವಿಗ್ರಹದ ಅಂಗಡಿಯಿಂದ ನೀವೇ ಕೊಂಡು ತಂದದ್ದು. ಅಂಗಡಿಯಲ್ಲಿ ಇಟ್ಟಿದ್ದಾಗ ನೀವು ಇದಕ್ಕೆ ಪೂಜೆ ಮಾಡಲಿಲ್ಲ, ಕೊಳ್ಳುವಾಗ ಇದರೆದುರೇ ಅಂಗಡಿಯವನ ಹತ್ತಿರ ಚೌಕಾಸಿ ಮಾಡುತ್ತಿದ್ದಿರಿ. ಅಂಗಡಿಯಲ್ಲಿ ಇಟ್ಟಿದ್ದ ವಿಗ್ರಹಗಳಲ್ಲಿ ನಿಮಗೆ ಇಷ್ಟವಾದುದನ್ನು ಆರಿಸಿಕೊಂಡು ಇಲ್ಲಿ ತಂದಿಟ್ಟಿರಿ. ಯಾವ ಗಳಿಗೆಯಿಂದ ಈ ಕೊಂಡು ತಂದ ಪದಾರ್ಥ ನಿಮ್ಮ ಪಾಲಿನ ದೇವರಾಯಿತೋ ನನಗೆ ತಿಳಿಯುತ್ತಿಲ್ಲ. ನಿಜ ಹೇಳಿ, ಇಂಥದನ್ನು ನೀವೂ ದೇವರೆಂದು ಖಂಡಿತ ಭಾವಿಸಲಾರಿರಿ. ಹಿಂದೆ ಅಂಗಡಿಯಲ್ಲಿತ್ತು, ಈಗ ಮಂದಿರದಲ್ಲಿದೆ ಅಷ್ಟೇ’ ಅವರ ಬಳಿ ಇದಕ್ಕೆಲ್ಲ ಉತ್ತರವಿರಲಿಲ್ಲ. ’ನಿಮ್ಮ ಪೂಜೆ, ಪ್ರಾರ್ಥನೆಗಳಲ್ಲಿ ಭಾಗವಹಿಸಬಾರದು ಎಂದು ನನ್ನ ಉದ್ದೇಶವಲ್ಲ. ನಿಮ್ಮಿಂದ ಬೇರೆಯಾಗಿ ಜೀವಿಸಲು ನನಗೂ ಕಷ್ಟವಾಗುತ್ತದೆ. ಆದರೆ ನನ್ನ ಪ್ರಶ್ನೆಗಳಿಗೆ ಉತ್ತರ ನನಗೆ ಉತ್ತರ ಬೇಕು. ಮತ್ತು ನಿಮ್ಮ ಪ್ರಾರ್ಥನೆಗಳಾದರೂ ಯಾವುದು? ಭಗವಂತ, ನನಗೆ ಅದು ಬೇಕು, ಇದು ಬೇಕು ಇಂಥವೇ ಅಲ್ಲವೆ? ನೀವು ದುಡ್ಡು ಕೊಟ್ಟು ತಂದ ವಿಗ್ರಹದೆದುರು ನೀವೇ ಕುಳಿತು ಕೈಯೊಡ್ಡುವುದು ನಿಜಕ್ಕೂ ವಿಚಿತ್ರವಾಗಿದೆ. ನಾನು ಅವಿಧೇಯತೆಗಾಗಿ ಅವಿಧೇಯತೆ ತೋರಿಸುವವನಲ್ಲ, ಇದೆಲ್ಲ ಅವಿಧೇಯತೆಯ ಮಾತುಗಳೂ ಅಲ್ಲ. ನನಗೂ ನಿಮ್ಮ ಆಚರಣೆಗಳಲ್ಲಿ ಭಾಗವಹಿಸಬೇಕು ಎಂದು ಆಸೆ ಇದೆ. ಆದರೆ ನೀವು ಅದಕ್ಕೆ ಆಸ್ಪದವನ್ನೇ ನೀಡುತ್ತಿಲ್ಲ’.
ಒಮ್ಮೆ ದೇವಸ್ಥಾನಕ್ಕೆ ಕರೆದುಕೊಂಡು ಹೋದಾಗ ಎಲ್ಲರೂ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದರೆ ನಾನು ಸುಮ್ಮನೆ ನಿಂತು ನೋಡುತ್ತಿದ್ದೆ. ’ನಮಗೋಸ್ಕರವಾದರೂ ದೇವರಿಗೆ ನಮಸ್ಕಾರ ಮಾಡು. ಎಲ್ಲರೂ ಅಡ್ಡ ಬೀಳುವಾಗ ಹೀಗೆ ನೀನೊಬ್ಬನೇ ನಿಂತಿರುವುದು ಚೆನ್ನಾಗಿ ಕಾಣಿಸುವುದಿಲ್ಲ’ ಎಂದು ನಮ್ಮಪ್ಪ ಹೇಳುತ್ತಿದ್ದ ’ಇದನ್ನು ನಮಸ್ಕಾರ ಎನ್ನುವರೇ? ನನ್ನ ಕಣ್ಣಿಗೆ ನೀವು ವ್ಯಾಯಾಮ ಮಾಡುತ್ತಿರುವಂತೆ ಕಾಣಿಸುತ್ತಿದೆಯಲ್ಲ, ಇಲ್ಲಿ ಆ ವಿಗ್ರಹದೆದುರು ಕುಳಿತುಕೊಳ್ಳುವುದನ್ನು ಬಿಟ್ಟು ವ್ಯಾಯಾಮಶಾಲೆಗೆ ಹೋಗಿ. ಅವನನ್ನು ನೀವು ಕೇಳುವುದೂ ’ಆರೋಗ್ಯಭಾಗ್ಯ ಕರುಣಸು ಎಂದೇ ಅಲ್ಲವೇ? ’ನಮಗೋಸ್ಕರ ಅಡ್ಡ ಬೀಳು’ ಎನ್ನುವಿರಿ. ನನಗೋಸ್ಕರ ನೀವು ಹೀಗೆ ಅಡ್ಡ ಬೀಳುವುದನ್ನು ನಿಲ್ಲಿಸಲಾರಿರೇ? ನಾನು ನಿಂತಿರುವುದಲ್ಲ, ನಿಜವಾಗಿಯೂ ನೀವು ಹೀಗೆ ಅಡ್ಡ ಬೀಳುವುದು ಚೆನ್ನಾಗಿ ಕಾಣಿಸುವುದಿಲ್ಲ’. ಆಗ ಅಪ್ಪ ’ಇನ್ನು ಮೇಲೆ ನೀನು ದೇವಸ್ಥಾನಕ್ಕೆ ಬರದಿರುವುದೇ ಕ್ಷೇಮ, ನಿನ್ನ ವರ್ತನೆ ನೋಡುವವರಿಗೆ ಅಸಹ್ಯವಾಗಿ ಕಾಣಿಸುತ್ತದೆ’, ’ನನ್ನ ವರ್ತನೆ ದೇವರಿಗೆ ಅಸಹ್ಯವೆನಿಸಬೇಕು, ಅವನು ನೀವು ನಂಬುವಂತೆ ಸರ್ವಶಕ್ತನಾದರೆ ಆ ಕಡೆ ಮುಖ ಮಾಡಿ ಕುಳಿತುಕೊಳ್ಳಬೇಕು. ನಿಮಗೆಲ್ಲ ಗೊತ್ತು ಅವನಿಗೆ ಜೀವವಿಲ್ಲ, ಅವನು ಹಾಗೆ ಮಾಡಲಾರ ಎಂದು. ಅದಕ್ಕೇ ನನಗೆ ಹೇಳುತ್ತಿರುವಿರಿ. ನಿಮ್ಮ ದೇವರಿಗಿಂತ ನಾನು ಹೆಚ್ಚು ಜೀವಂತವಾಗಿದ್ದೇನೆ’
ಆಗ ಅಪ್ಪ ’ಹಾಗೆಲ್ಲ ಮಾತನಾಡಬಾರದು’ ಎಂದು ಹೇಳುತ್ತಿದ್ದರು. ’ನಾನೇನು ಮಾಡಲಿ? ಅವನಿಗೆ ಜೀವವಿಲ್ಲ ಎಂದರೆ ಅದು ನಿಂದಿಸಿದಂತೆ ಆಗುವುದೇ?..’ ಹೀಗೆಲ್ಲ ವಾದಿಸುತ್ತ ಕೊನೆಗೆ ನಮ್ಮ ಮನೆಯವರು ದೇವಸ್ಥಾನಕ್ಕೇ ಹೋಗುವುದನ್ನು ನಿಲ್ಲಿಸುವಂತೆ ಮಾಡಿದೆ. ಅದು ನಮ್ಮ ಕುಟುಂಬವೇ ಕಟ್ಟಿದ್ದ ದೇವಸ್ಥಾನ. ಕ್ರಮೇಣ ಅದನ್ನು ಅವರು ಅಲ್ಲಿನ ಜೈನ ಸಮುದಾಯಕ್ಕೆ ದಾನ ಮಾಡಿಬಿಟ್ಟರು. 
ಮಲ್ಲಿಬಾಯಿ ಎಂಬುವವಳು ’ಹೆಣ್ಣುಮಕ್ಕಳೇಕೆ ತೀರ್ಥಂಕರರಾಗಬಾರದು?’ ಎಂದು ತನ್ನ ಕಾಲದ ಒಬ್ಬ ತೀರ್ಥಂಕರನನ್ನು ಕೇಳಿದಳು. ಅವನು ’ಹೆಣ್ಣುಮಕ್ಕಳು ನಗ್ನರಾಗಲು ಸಾಧ್ಯವಿಲ್ಲದ ಕಾರಣ ತೀರ್ಥಂಕರರಾಗಲು ಸಾಧ್ಯವಿಲ್ಲ’ ಎಂದನಂತೆ. ನಗ್ನತೆ ನನಗೇನೂ ಸಮಸ್ಯೆಯಲ್ಲ ಎಂದು ಆಕೆ ನಗ್ನಳಾಗಿ ತಪಸ್ಸು ಮಾಡಿ ಸಿದ್ಧಿಯನ್ನೂ ಪಡೆದಳಂತೆ. ಸಂಪ್ರದಾಯದ ಕುಯುಕ್ತಿ ಎಂತಹುದು ನೋಡಿ! ಮತ್ತೆ ಯಾರೂ ಹೀಗೆ ನಗ್ನರಾಗಬಾರದೆಂದು ಅವಳ ಹೆಸರನ್ನೇ ’ಮಲ್ಲಿನಾಥ’ ಎಂದು ಬದಲಾಯಿಸಿತು. ಮನುಷ್ಯನ ಚರಿತ್ರೆಯಲ್ಲಿ ಹೆಂಗಸರೂ ತೀರ್ಥಂಕರತ್ವಕ್ಕೆ ಏರಿದರು ಎಂಬ ನೆನಪೂ ಉಳಿಯಬಾರದು ಎನ್ನುವ ಉದ್ದೇಶ ಅದರದ್ದು. ನನ್ನ ತಂಗಿಯ ಮದುವೆಯ ಸಂದರ್ಭದಲ್ಲೂ ’ಕನ್ಯಾದಾನ’ ಎಂಬ ಶಬ್ದವನ್ನು ಬಳಸಬಾರದು, ಹಾಗೇನಾದರೂ ಬಳಸಿದರೆ ನಾನು ಮನೆ ಬಿಟ್ಟು ಹೋಗುವೆ ಎಂದು ತಾಕೀತು ಮಾಡಿದ್ದೆ. ಅಷ್ಟೇ ಅಲ್ಲ, ಪುರೋಹಿತನಿಗೂ ಈ ಪದ ಬಳಸದೆ ಮದುವೆ ಶಾಸ್ತ್ರ ಮುಗಿಸಬೇಕು ಎಂದು ಬೆದರಿಸಿದ್ದೆ.
ಭಗವಾನ್‌ದಿನ್ ಎಂಬ ಒಬ್ಬ ವ್ಯಕ್ತಿ ಆಗಾಗ ನಮ್ಮ ಮನೆಗೆ ಬರುತ್ತಿದ್ದ. ಆತ ಮಹಾ ವಿದ್ವಾಂಸ, ನಡೆದಾಡುವ ವಿಶ್ವಕೋಶ ಎನ್ನಲು ಅಡ್ಡಿಯಿಲ್ಲ. ಊರಿನಲ್ಲಿ ಜನ ಅವರನ್ನು ಮಹಾತ್ಮಾ ಭಗವಾನ್‌ದಿನ್ ಎಂದೇ ಸಂಬೋಧಿಸುತ್ತಿದ್ದರು. ನಮ್ಮ ಮನೆಯಲ್ಲಿ ಇಳಿದುಕೊಳ್ಳುವಾಗಲೆಲ್ಲ ಸಂಜೆ ಹೊತ್ತು ವಾಯುವಿಹಾರಕ್ಕೆ ಹೋಗುತ್ತಿದ್ದರು, ನಾನೂ ಅವರೊಡನೆ ಹೋಗುತ್ತಿದ್ದೆ. ದಾರಿಯಲ್ಲಿ ಪ್ರತಿಯೊಂದು ಮರದ ಹೆಸರನ್ನೂ, ಅದರ ಲ್ಯಾಟಿನ್ ಹೆಸರು, ಅದರ ಆಯುರ್ವೇದಿಕ ಗುಣ, ಅದರ ಆಯಸ್ಸು, ಅದರ ಮೂಲ ಹೀಗೆ ಎಲ್ಲವನ್ನೂ ವಿವರಿಸುತ್ತಿದ್ದ. ಮೊದಲ ದಿನ ನಾನು ಸುಮ್ಮನಿದ್ದೆ, ಆದರೆ ಎರಡನೆಯ ದಿನ ಸಹಿಸಲಾಗದೆ ’ನಿಮ್ಮ ಈ ಅಪಾರವಾದ ತಿಳುವಳಿಕೆ ನಿಮ್ಮ ವಾಯುವಿಹಾರಕ್ಕೇ ಅಡಚಣೆ ಆಗಿಬಿಟ್ಟಿದೆ. ಈ ಎಲ್ಲ ಮರಗಳೂ ಗ್ರೀಕ್, ಲ್ಯಾಟಿನ್, ಸಂಸ್ಕೃತ ಹೆಸರುಗಳಿಂದ ಆವರಿಸಿಕೊಂಡು ಒಳ್ಳೆಯ ಗಾಳಿಯೇ ಬೀಸದಂತೆ ಭಾಸವಾಗುತ್ತಿದೆ. ಇದರ ಕುರಿತ ಜ್ಞಾನವನ್ನು ಇಟ್ಟುಕೊಂಡು ನನಗೇನಾಗಬೇಕು. ಇದರಿಂದ ಒಳ್ಳೆಯ ಗಾಳಿ, ಮನಸ್ಸಿಗೆ ಹಿತ ಇಷ್ಟು ಸಿಕ್ಕರೆ ಸಾಲದೇ. ನಿಮ್ಮನ್ನು ಎಲ್ಲರೂ ಬಹುಶ್ರುತರು ಎನ್ನುತ್ತಾರೆ. ನಿಮಗಾದರೂ ಈ ಮರಗಳ ಸಂಗೀತವೇ ಕೇಳಿಸುತ್ತಿಲ್ಲವಲ್ಲ!’ ಎಂದುಬಿಟ್ಟೆ. ಆತನಿಗೆ ಆಘಾತವಾಯಿತು. ದಾರಿಯುದ್ದಕ್ಕೂ ಒಂದು ಮಾತನ್ನೂ ಆಡದೇ ಸುಮ್ಮನೆ ನಡೆದ. ಬಳಿಕ, ’ನಿನ್ನ ಒಳ್ಳೆಯದಕ್ಕೇ ನಾನು ಮಾತನಾಡಿದ್ದು, ಬದುಕಿನಲ್ಲಿ ಎಲ್ಲದರ ಬಗ್ಗೆಯೂ ತಿಳುವಳಿಕೆ ಇದ್ದರೆ ನಮಗೇ ಅನುಕೂಲ’ ಎಂದ ’ಅನುಕೂಲದ ವಸ್ತುವಿನಂತೆ ಬಳಕೆಯಾಗುವುದನ್ನು ನಾನು ತಿಳುವಳಿಕೆ ಎಂದು ಕರೆಯಲಾರೆ. ವಸ್ತುವಿನ ಶಾಬ್ದಿಕ ಪರಿಚಯವನ್ನು ಜ್ಞಾನವೆಂದು ಭಾವಿಸಲಾರೆ. ಅದರೊಳಗಿನ ಯಾರಿಗೂ ಗೋಚರಿಸದ ರಹಸ್ಯದಲ್ಲಿ ನನ್ನ ಆಸಕ್ತಿ ಇರುವುದು. ಈ ಮಾತಿನ ಗದ್ದಲ ಆ ರಹಸ್ಯವನ್ನೇ ಮುಚ್ಚಿಹಾಕಿಬಿಡುತ್ತದೆ’. ಆತನಿಗೆ ನನ್ನ ಮೇಲೆ ಸಿಟ್ಟು ಬಂದಿರಬಹುದು ಎಂದು ತಿಳಿದೆ. ಆದರೆ ಆಮೇಲೆ ನನ್ನ ಅಜ್ಜನ ಬಳಿ ಹೇಳಿದ್ದನಂತೆ ’ನಿಮ್ಮ ಮೊಮ್ಮಗನಿಗೆ ಈ ವಯಸ್ಸಿಗೇ ಶಬ್ದದಾಚೆಗಿನ ನಿಶ್ಯಬ್ದದ ಬಗ್ಗೆ ಒಲವು ಮೂಡಿರುವುದು ನಿಜಕ್ಕೂ ಸಂತೋಷ. ಊರೆಲ್ಲ ನನ್ನ ಪಾಂಡಿತ್ಯವನ್ನು ಸುಮ್ಮನೆ ಹೊಗಳುತ್ತಿದ್ದರೆ ಇವನು ವಿದ್ವತ್ತಿನ ಯೋಗ್ಯತೆಯನ್ನು ಒಂದೇ ಮಾತಿನಲ್ಲಿ ಹೇಳಿಬಿಟ್ಟನಲ್ಲ. ಬರೀ ಶಬ್ದಗಳಿಂದಲೇ ತುಂಬಿದ್ದ ನನ್ನ ಮನಸ್ಸಿನಲ್ಲಿ ನಿಶ್ಯಬ್ದದ ಬಗ್ಗೆ ಆಸಕ್ತಿ ಮೂಡಿಸಿಬಿಟ್ಟ, ಅದೂ ಈ ವಯಸ್ಸಿನಲ್ಲಿ’ ಎಂದು ಕೊಂಡಾಡಿದರಂತೆ. ಯೋಗಾಯೋಗವೆಂಬಂತೆ ಆತ ಸಾಯುವ ದಿನ ನಾನು ಅವರ ಮಗ್ಗುಲಲ್ಲೇ ನಿಂತಿದ್ದೆ. ಆತ ಇದ್ದುದು ನಾಗ್ಪುರದಲ್ಲಿ, ಒಮ್ಮೆ ನಾನು ಚಂದಾ ದಿಂದ ಜಬಲ್ಪುರಕ್ಕೆ ಹೋಗುವಾಗ (ನಾಗ್ಪುರದ ಮೂಲಕವೇ ಜಬಲ್ಪುರಕ್ಕೆ ಹೋಗಬೇಕು) ಡ್ರೈವರ್‌ಗೆ ನಾಗ್ಪುರದಲ್ಲಿ ಸ್ವಲ್ಪ ನಿಲ್ಲಿಸು ಎಂದು ಹೇಳಿದೆ. ನಾನು ಅವರ ಮನೆಗೆ ಹೋಗಿ ನೋಡಿದಾಗ ಅಸ್ಥಿಪಂಜರದಂತಾಗಿ ಹಾಸಿಗೆ ಹಿಡಿದಿದ್ದರು. ಈಚೆಗೆ ಐದುವರ್ಷಗಳಿಂದಲೂ ಅವರನ್ನು ನಾನು ಕಂಡಿರಲಿಲ್ಲ. ಅವರ ಕಣ್ಣುಗಳಲ್ಲಿ ಒಂದು ಬಗೆಯ ತೇಜಸ್ಸಿತ್ತು, ಅವರ ದೇಹದ ಉಳಿದೆಲ್ಲ ಭಾಗಗಳು ಒಣಗಿ ಬರೀ ಕಣ್ಣುಗಳಲ್ಲಿ ಮಾತ್ರ ಜೀವ ಆಡುತ್ತಿತ್ತು. ’ಇದು ನಿಜಕ್ಕೂ ಆಕಸ್ಮಿಕ ಎಂದು ಅನಿಸುತ್ತಿಲ್ಲ, ಕಣ್ಮುಚ್ಚುವ ಮುನ್ನ ನಿನಗೆ ಕೃತಜ್ಞತೆ ಹೇಳಬೇಕು ಎಂದು ಒಳಗೇ ಹಂಬಲಿಸುತ್ತಿದ್ದೆ. ಆ ದಿನ ನಿನ್ನೊಡನೆ ಮಾತನಾಡಿದ ಮೇಲೆ, ಎಲ್ಲ ಶಬ್ದಗಳನ್ನೂ ಬದಿಗಿಟ್ಟು ನೋಡಿದಾಗ ನಾನು ಭಾವಿಸಿಕೊಂಡಿದ್ದ ತಿಳುವಳಿಕೆ ಉಪಯುಕ್ತವೇ ವಿನಃ ಅಸ್ತಿತ್ವದ ಸತ್ಯವಲ್ಲ ಎಂಬುದು ನನಗೆ ಮನವರಿಕೆ ಆಯಿತು. ಈಗ ನಾನು ನಿರಾಳವಾಗಿ ಕಣ್ಮುಚ್ಚುತ್ತೇನೆ’ ಎಂದು ಹೇಳಿ ಕೆಲವೇ ಗಂಟೆಗಳ ನಂತರ ತೀರಿಕೊಂಡರು. ಜೀವ ಹೋದ ಮೇಲೆ ಆ ಮುಖ ಶಾಂತಿಯಿಂದ ಆನಂದದಿಂದ ಬೆಳಗುತ್ತಿತ್ತು. ನನ್ನ ಕಣ್ಣೆದುರಲ್ಲೇ ಅವರು ಜೀವನ್ಮುಕ್ತರಾಗಿ ಸತ್ತರು.
ನನ್ನ ಶಾಲಾ ದಿನಗಳಲ್ಲಿ ನಾನು ಕಲಿಯುತ್ತಿದ್ದುದು ಶಾಲೆಗಳಲ್ಲಲ್ಲ, ಬೀದಿಗಳಲ್ಲಿ ಕಲಿಯುತ್ತಿದ್ದೆ. ಬೀದಿಯ ಹಾವಾಡಿಗರು, ದೊಂಬರಾಟದವರು, ಸಾಧುಸಂತರುಗಳು, ಬೌದ್ಧ ಭಿಕ್ಷುಗಳು, ಜೈನ ಮುನಿಗಳು, ಹಿಂದೂ ಸನ್ಯಾಸಿಗಳು ಹೀಗೆ ಎಲ್ಲರೊಡನೆ ಬೆರೆಯುತ್ತಿದ್ದೆ. ವಿಲಕ್ಷಣವಾದ ಪ್ರತಿಯೊಂದೂ ನನ್ನಲ್ಲಿ ಆಸಕ್ತಿ ಹುಟ್ಟಿಸುತ್ತಿತ್ತು. ನನ್ನ ಈ ಬಗೆಯ ಆಸಕ್ತಿಗಳನ್ನು ತಣಿಸಲು ಶಾಲೆಯ ಸಾಧಾರಣ ಮಾಸ್ತರುಗಳಿಂದ ಆಗುತ್ತಿರಲಿಲ್ಲ. ಯಾರೊಂದಿಗೆ ಬೆರೆಯಕೂಡದು ಎಂದು ಮನೆಯವರು ಹೇಳುತ್ತಿದ್ದರೋ ಅವರೇ ನನ್ನ ನೆಚ್ಚಿನ ಸಂಗಡಿಗರಾಗುತ್ತಿದ್ದರು. ಒಳಗಿನವರೊಂದಿಗೆ ನನಗೆ ಎಂದೂ ಆಸಕ್ತಿ ಹುಟ್ಟಲಿಲ್ಲ, ಅವರಿಂದ ನನಗಿನ್ನೂ ತೊಂದರೆಯೇ ಆಗಿದೆ. ಹೊರಗಿನವರು ನನಗೆ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿದ್ದರು. ನಿಮಗೆ ಆಶ್ಚರ್ಯವಾಗಬಹುದು, ಒಮ್ಮೆ ಒಬ್ಬ ಕಳ್ಳನೊಡನೆ ನನ್ನ ಗೆಳೆತನ ಬೆಳೆದುಬಿಟ್ಟಿತು. ಅವನು ವರ್ಷದ ಆರು ತಿಂಗಳು ಜೈಲಿನಲ್ಲಿದ್ದರೆ ಇನ್ನು ಆರು ತಿಂಗಳು ಹೊರಗೆ ಕಳ್ಳತನ ಮಾಡಿಕೊಂಡು ಓಡಾಡುತ್ತಿದ್ದ. ಅವನಿಗೆ ಒಳ್ಳೆಯ ಕೈಚಳಕವಿತ್ತು. ಈ ಗೆಳೆತನದ ಬಗ್ಗೆ ಅಪ್ಪನಿಗೆ ಗೊತ್ತಾದಾಗ ಇದೆಲ್ಲ ಒಳ್ಳೆಯ ಸಹವಾಸವಲ್ಲ ಎಂದು ಎಚ್ಚರಿಸುತ್ತಿದ್ದರು. ’ನಿನಗೆ ಮಗನ ಮೇಲೆ ನಂಬಿಕೆ ಇದೆಯೋ ಅಥವ ಆ ಕಳ್ಳನ ಮೇಲೆಯೋ? ನಾನು ನಿನ್ನ ಮಗನೋ ಅಥವ ಅವನೊ? ಎಂದು ಕೇಳುತ್ತಿದ್ದೆ. ಆಗ ಅಪ್ಪ ’ಇದೆಂಥ ವಿಚಿತ್ರ ವಾದ?’ ಎನ್ನುತ್ತಿದ್ದರು. ’ನಾನು ಸರಿಯಾಗಿಯೇ ಕೇಳುತ್ತಿದ್ದೇನೆ. ಅವನಿಂದ ನಾನು ಕೆಟ್ಟುಹೋಗಬಹುದು ಎಂದಲ್ಲವೇ ನಿನ್ನ ಹೆದರಿಕೆ? ಹಾಗೇಕೆ ಯೋಚಿಸುವೆ? ನಾನೇ ಅವನನ್ನು ಕೆಡಿಸಲೂ ಬಹುದಲ್ಲವೇ? ನಿನ್ನ ಮಗ ಅವನಿಂದ ಕೆಟ್ಟುಹೋಗುವಷ್ಟು ದುರ್ಬಲ ಎಂದೇಕೆ ಯೋಚಿಸುವೆ?’ ಎಂದು ಕೇಳುತ್ತಿದ್ದೆ. ಅಪ್ಪನಿಗೆ ಯಥಾಪ್ರಕಾರ ನನ್ನ ವಾದಕ್ಕೆ ಪ್ರತಿಯಾಗಿ ಏನನ್ನೂ ಹೇಳಲಾಗದೇ ಸುಮ್ಮನಾಗುತ್ತಿದ್ದರು. ಕ್ರಮೇಣ ನನ್ನ ಸಹವಾಸದಿಂದಾಗಿ ಅವನು ನಮ್ಮ ಕುಟುಂಬದ ಸ್ನೇಹಿತನೂ ಆದ. ಅವನನ್ನು ನಮ್ಮ ಮನೆಯವರು ಸುಲಭವಾಗಿ ಒಳಗೆ ಸೇರಿಸುತ್ತಿರಲಿಲ್ಲ, ಅದಕ್ಕೆ ಎರಡು ಕಾರಣಗಳಿದ್ದವು. ಮೊದಲನೆಯದಾಗಿ ಅವನು ಒಬ್ಬ ಮುಸ್ಲಿಮ್, ಮೇಲಾಗಿ ಜೈಲಿನಿಂದ ಬಂದವನು. ಊಟದ ಮನೆ, ಅಡುಗೆ ಮನೆಗಳಿಗೆ ಅವನನ್ನು ಬಿಟ್ಟುಕೊಳ್ಳುತ್ತಿರಲಿಲ್ಲ. ಇದೆಲ್ಲ ನನಗೆ ಹಿಡಿಸದೆ ಮನೆಯವರೊಂದಿಗೆ ಆಗಾಗ ಮಾತುಕತೆ ಆಗುತ್ತಿತ್ತು ’ನಿಮ್ಮ ಕಣ್ಣಿಗೆ ಅವನು ಮುಸ್ಲಿಮನಂತೆ, ಕಳ್ಳನಂತೆ ಕಾಣಿಸಬಹುದು. ಆದರೆ ನನ್ನ ಕಣ್ಣಿಗೆ ಅವನು ಮನುಷ್ಯನ ಹಾಗೆ ಕೂಡ ಕಾಣಿಸುತ್ತಾನೆ’ ಎನ್ನುತ್ತಿದ್ದೆ. ನಮ್ಮ ಮನೆಗೆ ಬರುತ್ತಿದ್ದ ಬೇರೆ ಬೇರೆ ಜಾತಿಯ ಅತಿಥಿಗಳಿಗೆ ಬೇರೆ ಬೇರೆ ತಟ್ಟೆ ಲೋಟಗಳು ಇರುತ್ತಿದ್ದವು. ಹಾಗಾಗಿ ಅವನು ಬಂದಾಗಲೆಲ್ಲ ನಾನೂ ಅವನೊಡನೆ ಜಗುಲಿಯ ಮೇಲೆ ಕುಳಿತು ಊಟ ಮಾಡುತ್ತಿದ್ದೆ. ’ನನ್ನಿಂದಾಗಿ ಮನೆಯವರಿಗೇಕೆ ಮನಸ್ತಾಪ’ ಎಂದು ಅವನು ಮುಜುಗರ ಪಟ್ಟುಕೊಳ್ಳುತ್ತಿದ್ದ. ಬರುಬರುತ್ತ ನಾನು ಅವನ ಮೇಲಿಟ್ಟಿದ್ದ ವಿಶ್ವಾಸವು ಅವನಲ್ಲಿ ಹಲವು ಬದಲಾವಣೆಗಳನ್ನು ಉಂಟು ಮಾಡಿದವು. ಒಂದು ದಿನ ’ನಿನ್ನ ಗೆಳೆತನವಾದ ಮೇಲೆ ಒಮ್ಮನಸ್ಸಿನಿಂದ ಕಳ್ಳತನಕ್ಕೆ ಇಳಿಯಲೂ ಕಷ್ಟವಾಗುತ್ತಿದೆ, ಕದಿಯುವಾಗ ನಿನ್ನ ವಿಶ್ವಾಸದ ನೆನಪಾಗಿ ನನ್ನ ಕೈಗಳನ್ನು ಕಟ್ಟಿಹಾಕಿದಂತೆ ಭಾಸವಾಗುತ್ತದೆ. ನನಗೆ ಇದೊಂದು ಬಿಟ್ಟರೆ ಬೇರೆ ಕಸುಬು ತಿಳಿಯದು, ನನಗೆ ಯಾರೂ ಕೆಲಸವನ್ನೂ ಕೊಡುವುದಿಲ್ಲ’ ಎಂದು ನನ್ನ ಬಳಿ ಒಮ್ಮೆ ತನ್ನ ಕಷ್ಟ ತೋಡಿಕೊಂಡ. ಆಗ ನಾನು ಅವನನ್ನು ಅಪ್ಪನ ಬಳಿ ಕರೆದುಕೊಂಡು ಹೋಗಿ ನಮ್ಮ ಅಂಗಡಿಯಲ್ಲೇ ಕೆಲಸ ಕೊಡಿಸಿದೆ. ಅಪ್ಪ ತುಂಬ ಉದಾರಿ ಮತ್ತು ಮುಗ್ಧ. ’ಆ ದಿನ ನಾನು ಅವನಿಂದ ನೀನು ಹಾಳಾಗುವೆ ಎಂದು ತಪ್ಪಾಗಿ ಆಲೋಚಿಸಿದೆ, ನನ್ನ ಮಗನ ಶಕ್ತಿಯನ್ನು ನಂಬಲಿಲ್ಲ’ ಎಂದು ಹೇಳಿದರು. 

No comments:

Post a Comment