17 Jan 2012

ಓಷೋ ರಜನೀಶ್ - ಆತ್ಮಕಥೆ, ಭಾಗ ೪

ಗಾಂಧೀಜಿಯವರ ಭೇಟಿ
ನನ್ನ ಬಾಲ್ಯದಲ್ಲಿ ನಾನು ಗಾಂಧಿಯನ್ನು ಎರಡು ಸಲ ಭೇಟಿ ಮಾಡಿದ್ದೇನೆ. ಅವರು ೩ನೇ ದರ್ಜೆಯ ಬೋಗಿಯಲ್ಲೇ ಪ್ರಯಾಣಿಸುತ್ತಿದ್ದರು. ಗಾಂಧೀಜಿಯ ’ಮೂರನೆಯ ದರ್ಜೆ’ ಎಂಥದು ಎಂದು ನೀವು ಯಾರೂ ಕಲ್ಪಿಸಿಕೊಳ್ಳಲಾರಿರಿ. ಅದು ಮೊದಲ ತರಗತಿಯ ಬೋಗಿಗಿಂತ ಉತ್ತಮವಾದುದು. ಅರವತ್ತು ಜನ ಹಿಡಿಸುವ ಬೋಗಿಯಲ್ಲಿ ಬರೀ ಗಾಂಧೀ, ಅವರ ಪತ್ನಿ ಹಾಗು ಅವರ ಕಾ
ರ್ಯದರ್ಶಿ ಈ ಮೂವರು ಮಾತ್ರ ಪ್ರಯಾಣಿಸುತ್ತಿದ್ದರು. ಗಾಂಧೀಜಿ ಪ್ರಯಾಣಿಸುವರೆಂದೊಡನೆ ಇಡೀ ಬೋಗಿಯನ್ನು ಕಾದಿರಿಸಲಾಗುತ್ತಿತ್ತು. ಗಾಂಧೀ ತತ್ವವನ್ನು ಉಳಿಸಲು ಅಲ್ಲಿ ಹೆಸರಿಗೆ ಮಾತ್ರ ’ಮೂರನೆಯ ದರ್ಜೆ’ ಎಂಬ ಫಲಕ ಇರುತ್ತಿತ್ತು. ಆಗ ನಾನಿನ್ನೂ ಹತ್ತು ವರ್ಷದ ಹುಡುಗ. ಆಗ ಬೇಸಗೆ; ಅದರಲ್ಲೂ ಮಧ್ಯ ಭಾರತದ ಬಿಸಿಲು ಅಸಾಧ್ಯವಾದುದು. ನನ್ನ ಅಜ್ಜಿ ನನಗಾಗಿ ಬಿಳಿ ಬಣ್ಣದ ತೆಳುವಾದ ಕುರ್ತಾ ಹಾಗು ಪಂಚೆಗಳನ್ನು ಸಿದ್ಧಗೊಳಿಸಿ, ನನ್ನ ಜೇಬಿನಲ್ಲಿ ಮೂರು ರೂಪಾಯಿಗಳ ನಾಣ್ಯಗಳನ್ನು ಇರಿಸಿ ಗಾಂಧಿಯನ್ನು ನೋಡಿಕೊಂಡು ಬರಲು ಕಳಿಸಿದ್ದಳು. ಆ ಕಾಲಕ್ಕೆ ೩ ರೂಪಾಯಿಯಲ್ಲಿ ಒಂದು ವಾರಗಳ ಕಾಲ ಜೀವನ ನಡೆಸಬಹುದಾಗಿತ್ತು. ರೈಲ್ವೇ ನಿಲ್ದಾಣದಲ್ಲಿ ತುಂಬ ಜನ ಗಾಂಧಿಯನ್ನು ನೋಡಲು ನೆರೆದಿದ್ದರು. ಪುಟ್ಟ ಹುಡುಗ ಗಾಂಧೀಜಿಯನ್ನು ನೋಡಲು ದೂರದಿಂದ ಒಬ್ಬನೇ ಬಂದಿದ್ದಾನೆ ಎಂದು ಅವರು ತಾವು ತಂದಿದ್ದ ತಿಂಡಿ ಊಟಗಳನ್ನೆ ನನಗೂ ಕೊಡುತ್ತಿದ್ದರು. ಹಾಗಾಗಿ ಅಜ್ಜಿ ಕೊಟ್ಟಿದ್ದ ಮೂರು ರೂಪಾಯಿಗಳು ಜೇಬಿನಲ್ಲಿ ಹಾಗೇ ಉಳಿದುಕೊಂಡವು. ಯಥಾಪ್ರಕಾರ ರೈಲು ಹದಿಮೂರು ಗಂಟೆಗಳ ಕಾಲ ತಡವಾಗಿ ಬಂದಿತು. ಗಾಂಧಿಯನ್ನು ನೋಡಲು ಕಾಯುತ್ತಿದ್ದ ಎಲ್ಲರೂ ಹೊರಟು ಹೋಗಿದ್ದರು. ನನ್ನ ಹಟ ಎಂಥದೆಂದು ನೀವೆಲ್ಲ ಬಲ್ಲಿರಿ. ಇಡೀ ರೈಲ್ವೇ ಪ್ಲಾಟ್ ಫಾರಂನಲ್ಲಿ ನಾನು ಹಾಗು ಸ್ಟೇಷನ್ ಮಾಸ್ಟರ್ ಇಬ್ಬರೇ ಉಳಿದಿದ್ದುದು. ರೈಲು ಪ್ಲಾಟ್ ಫಾರಂಗೆ ಬಂದು ನಿಂತ ಕೂಡಲೆ ಆ ಸ್ಟೇಷನ್ ಮಾಸ್ಟರ್ ಗಾಂಧಿಯನ್ನು ನನಗೆ ಪರಿಚಯ ಮಾಡಿಸಿದರು. ’ಬಾಪು, ಇವನು ಸಾಮಾನ್ಯ ಹುಡುಗ ಎಂದು ಭಾವಿಸಬೇಡಿ. ಹದಿಮೂರು ಗಂಟೆಗಳಿಂದ ಒಂದೇ ಕಡೆ ಕುಳಿತು ನಿಮಗಾಗಿ ಕಾಯುತ್ತಿದ್ದಾನೆ. ಎಲ್ಲರೂ ಹೊರಟು ಹೋದರೂ ಇವನು ಮಾತ್ರ ಕದಲಿಲ್ಲ. ಇಲ್ಲೇ ಕುಳಿತು ದಿನಗಟ್ಟಲೆ ಕಾಯಲು ಕೂಡ ಸಿದ್ಧನಾಗಿದ್ದ’. ಆಗ ಗಾಂಧೀ - ಆಗಲೇ ಅವರಿಗೆ ತುಂಬ ವಯಸ್ಸಾಗಿತ್ತು - ನನ್ನನ್ನು ಪ್ರೀತಿಯಿಂದ ಹತ್ತಿರ ಕರೆದರು. ಆದರೆ ಅವರ ಕಣ್ಣುಗಳು ನನ್ನ ಕಡೆ ನೋಡದೆ ನನ್ನ ಜೇಬಿನಲ್ಲಿದ್ದ ನಾಣ್ಯಗಳ ಕಡೆಗೆ ನೆಟ್ಟಿದ್ದವು. ಆ ಕ್ಷಣವೇ ನನ್ನ ಮನಸ್ಸಿನಲ್ಲಿದ್ದ ಗಾಂಧೀಜಿಯ ಚಿತ್ರ ಸಂಪೂರ್ಣವಾಗಿ ಅಳಿಸಿಹೋಯಿತು. ’ಜೇಬಿನಲ್ಲಿ ಏನಿದೆ?’ ಎಂದು ಕೇಳಿದರು. ’ಮೂರು ರೂಪಾಯಿಗಳು’ ಎಂದೆ, ತಮ್ಮ ಬಳಿ ಸದಾ ಇಟ್ಟುಕೊಂಡಿರುತ್ತಿದ್ದ ಹುಂಡಿಯನ್ನು ನನ್ನ ಮುಂದೆ ಹಿಡಿದು ’ಅವನ್ನು ಇಲ್ಲಿ ದಾನ ಮಾಡು’ ಎಂದರು. ’ಈ ಹಣವನ್ನು ಏಕೆ ಕೇಳುತ್ತಿರುವಿರಿ’ ಎಂದು ಕೇಳಿದೆ. ಅವರು ’ಬಡವರಿಗೋಸ್ಕರ’ ಎಂದು ಹೇಳಿದರು ’ಹಾಗಿದ್ದರೆ ಸರಿ’ ಎಂದು ಹೇಳಿ ನಾನು ನನ್ನ ಬಳಿ ಇದ್ದ ಎಲ್ಲ ನಾಣ್ಯಗಳನ್ನೂ ಹಾಕಿದೆ. ನನ್ನ ಇತ್ಯೋಪರಿಗಳನ್ನು ವಿಚಾರಿಸಿದರು. ಹೊರಡುವ ಮುನ್ನ ನಾನು ಕೂಡಲೆ ಅವರ ಸಮೀಪದಲ್ಲಿದ್ದ ಆ ಹುಂಡಿಯನ್ನು ತೆಗೆದುಕೊಂಡೆ. ಆಗ ಗಾಂಧೀಜಿ ಗಾಬರಿಯಿಂದ ’ಅಯ್ಯೋ, ಅದು ಬಡವರ ಹಣ’ ಎಂದರು. ’ಅದು ನನಗೆ ಗೊತ್ತು, ಆದರೆ ನಮ್ಮ ಹಳ್ಳಿಯಲ್ಲೂ ತುಂಬ ಜನ ಬಡವರಿದ್ದಾರೆ. ಹಾಗಾಗಿ ಇದರ ಬೀಗದ ಕೈಯನ್ನೂ ಕೊಡಿ. ಇಲ್ಲವಾದರೆ ಇದನ್ನು ಒಡೆಯಲು ಅಲ್ಲಿ ಯಾರಾದರೂ ಕಳ್ಳನನ್ನು ಹುಡುಕಿ ತರಬೇಕಾಗುತ್ತದೆ’ ’ಇದು ನಿಜಕ್ಕೂ ವಿಚಿತ್ರ’ ಎನ್ನುತ್ತ ಗಾಂಧಿ ತಮ್ಮ ಕಾರ್ಯದರ್ಶಿಯತ್ತ ನೋಡಿದರು. ಅವನಿಗೂ ಏನು ಹೇಳಬೇಕೆಂದು ತೋಚಲಿಲ್ಲ. ಆಮೇಲೆ ಕಸ್ತೂರಿ ಬಾ ಅವರ ಕಡೆಗೆ ನೋಡಿದರು ’ನಿನಗೆ ಸರಿಯಾದವನೇ ಸಿಕ್ಕಿದ್ದಾನೆ. ಇಷ್ಟು ದಿನ ನೀನು ಎಲ್ಲರಿಗೂ ಮಂಕುಬೂದಿ ಎರಚುತ್ತಿದ್ದೆ, ಈಗ ಇವನು ನಿನ್ನ ಹುಂಡಿಯನ್ನೇ ಎಗರಿಸಿದ್ದಾನೆ’ ಎಂದು ಹೇಳಿ ಆಮೇಲೆ ’ಒಳ್ಳೆಯದು ಮಗು ಅದನ್ನು ನೀನೇ ತೆಗೆದುಕೊಂಡು ಹೋಗು. ನನಗೂ ಇಪ್ಪತ್ತನಾಲ್ಕು ಗಂಟೆಗಳ ಕಾಲ ಇವರ ಮಗ್ಗುಲಲ್ಲೇ ಹೆಂಡತಿಗಿಂತ ಹೆಚ್ಚಾಗಿ ಕುಳಿತುಕೊಳ್ಳುವ ಈ ಹುಂಡಿಯನ್ನು ನೋಡಿ ನೋಡಿ ಸಾಕಾಗಿದೆ’ ಎಂದರು. ಆಗ ಗಾಂಧಿಯ ಮುಖವನ್ನು ನೋಡಿ ನನಗೆ ಪಿಚ್ಚೆನಿಸಿತು. ’ಇಲ್ಲ, ಇದನ್ನು ನೀವೇ ಇಟ್ಟುಕೊಳ್ಳಿ, ನಿಮ್ಮ ಕಾರ್ಯದರ್ಶಿಗೆ ಒಂದಿಷ್ಟೂ ಸಮಯಪ್ರಜ್ಞೆ ಇಲ್ಲ, ನಿಮ್ಮ ಹೆಂಡತಿಗೂ ನಿಮ್ಮ ಮುಖ ನೋಡಿ ಒಂದಿಷ್ಟೂ ಕರುಣೆ ಹುಟ್ಟಿದಂತೆ ಕಾಣಿಸುತ್ತಿಲ್ಲ ಹಾಗಾಗಿ ನನ್ನ ಕಣ್ಣಿಗೆ ನೀವೇ ನಿಜವಾದ ಬಡವರಂತೆ ಕಾಣಿಸುವಿರಿ. ಇದನ್ನು ನಾನು ಒಯ್ಯುವುದು ತಪ್ಪಾಗುತ್ತದೆ. ಒಬ್ಬ ನಿಜವಾದ ಮಹಾತ್ಮನನ್ನು ನೋಡಲೆಂದು ಇಷ್ಟು ದೂರ ಬಂದೆ ಆದರೆ ಇಲ್ಲಿ ಒಬ್ಬ ನಿಜವಾದ ಬನಿಯಾನ ದರ್ಶನವಾಯಿತು’ ಎಂದು ಹೇಳಿ ಹಿಂದಿರುಗಿಯೂ ನೋಡದೆ ಹೊರಟುಬಿಟ್ಟೆ. ಆ ವಯಸ್ಸಿನಲ್ಲಿ ನನಗೆ ಗಾಂಧೀ ಒಬ್ಬ ಶುದ್ಧ ವ್ಯಾಪಾರಿಯ ಹಾಗೆ ಕಂಡರು. ಅಂದಿನಿಂದ ಅವರ ಯಾವ ವಿಚಾರಗಳನ್ನೂ ಒಪ್ಪಲು ನನಗೆ ಸಾಧ್ಯವೇ ಆಗಿಲ್ಲ.
ಬಿಹಾರದಲ್ಲಿ ಭೂಕಂಪವಾದಾಗ ಮಹಾತ್ಮಾ ಗಾಂಧೀ ’ಭಗವಂತ ಪಾಪಿಗಳನ್ನು ಶಿಕ್ಷಿಸುತ್ತಿದ್ದಾನೆ’ ಎಂದು ಹೇಳಿಕೆ ನೀಡಿದರು. ಆಗ ನಾನು ಅವರಿಗೊಂದು ಪತ್ರ ಬರೆದಿದ್ದೆ ’ಇದು ನಿಜಕ್ಕೂ ವಿಚಿತ್ರ, ಭಗವಂತ ಬರೀ ಬಿಹಾರದ ಪಾಪಿಗಳನ್ನು ಮಾತ್ರ ಶಿಕ್ಷಿಸುತ್ತಿದ್ದಾನಲ್ಲ! ಹಾಗಿದ್ದರೆ ಜಗತ್ತಿನ ಉಳಿದ ಪಾಪಿಗಳ ಗತಿಯೇನು? ಅಥವ ಜಗತ್ತಿನ ಪಾಪಿಗಳೆಲ್ಲಾ ಬಿಹಾರದಲ್ಲೇ ಇರುವರೇ?’ ಆ ಪತ್ರಕ್ಕೆ ಉತ್ತರಿಸುವ ಧೈರ್ಯವನ್ನಾಗಲಿ, ಕೊನೆಯ ಪಕ್ಷ ಪ್ರಾಮಾಣಿಕತೆಯನ್ನಾಗಲಿ ಅವರು ತೋರಿಸಲಿಲ್ಲ. ಅದೇ ದಿನ ಅವರ ಮಗ ರಾಮದಾಸನಿಗೂ ಬರೆದು (ಆತ ನನ್ನ ಆತ್ಮೀಯ ಗೆಳೆಯ) ನಿಮ್ಮ ತಂದೆಗೆ ನನ್ನ ಪತ್ರ ತಲುಪಿದೆಯೇ ಎಂದು ಕೇಳಿದೆ ’ತಲುಪಿದೆ, ಆದರೆ ಆ ಪತ್ರಕ್ಕೆ ಅವರ ಬಳಿ ಉತ್ತರವಿಲ್ಲ’ ಎಂದು ಉತ್ತರಿಸಿದ. ಭಗವಂತನ ಅಪ್ಪಣೆ ಇಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡದು ಎನ್ನುವುದು ಭಾರತೀಯರ ನಂಬಿಕೆ. ಹಾಗಿದ್ದರೆ ಒಬ್ಬ ಕೊಲೆಗಾರನೂ ನಿರಪರಾಧಿಯೇ ಆಗುತ್ತಾನೆ. ಇದನ್ನೇ ಗೀತೆಯೂ ಬೋಧಿಸುವುದು. ಆದರೆ ಗಾಂಧಿಯಂತಹ ಅಹಿಂಸಾ ಬೋಧಕರೂ ಗೀತೆಯನ್ನು ’ಮಾತೆ’ ಎಂದು ಕರೆಯುವುದು ವಿಪರ್ಯಾಸ. ಆಗ ಹಿಂದೂ ಮುಸ್ಲಿಂರು ಒಂದೇ ಎಂದು ಕರೆ ನೀಡುತ್ತಿದ್ದ ಗಾಂಧೀಜಿಗೆ ೧೭ರ ಪ್ರಾಯದ ನಾನು ಒಂದು ಪತ್ರ ಬರೆದಿದ್ದೆ ’ಗೀತೆಯನ್ನು ತಾಯಿ ಎಂದು ಕರೆಯುವ ನಿಮಗೆ ಖುರಾನ್ ಏನಾಗಬೇಕು,.. ತಂದೆಯಾಗಬೇಕೇ?’ ಎಂದು ಕೇಳಿದ್ದೆ. ಆಗ ಗಾಂಧೀಜಿ ತುಂಬ ಸಿಟ್ಟು ಮಾಡಿಕೊಂಡು ಆ ಪತ್ರವನ್ನು ಹರಿದೆ ಎಸೆದುಬಿಟ್ಟರಂತೆ. ಆಮೇಲೆ ರಾಮದಾಸ್‌ನಿಂದ ನನಗೆ ತಿಳಿಯಿತು. ’ಅವನು ಕೇಳುವುದರಲ್ಲಿ ತಪ್ಪೇನಿದೆ? ಗೀತೆ ತಾಯಿಯಾದ ಮೇಲೆ ಕುರಾನ್ ತಂದೆಯೋ, ಮಲತಂದೆಯೋ, ಚಿಕ್ಕಪ್ಪನೋ ಆಗಲೇ ಬೇಕು. ಇಲ್ಲವಾದರೆ ’ಹಿಂದೂ ಮುಸ್ಲಿಮ್ ಭಾಯಿ ಭಾಯಿ’ ಎಂಬ ಮಾತಿಗೆ ಅರ್ಥವೇ ಇರುವುದಿಲ್ಲ’ ಎಂದು ರಾಮದಾಸ್ ತಂದೆಯ ಜೊತೆ ವಾದ ಮಾಡಿದ್ದನಂತೆ.
ಹಲವು ಅನುಭಾವಿಗಳೊಡನೆ
ಆತನ ನಿಜವಾದ ಹೆಸರಾಗಲಿ, ಊರಾಗಲಿ, ತಂದೆ ತಾಯಿ ಬಂಧು-ಬಳಗಗಳಾಗಲಿ ಯಾರಿಗೂ ತಿಳಿಯದು. ಅವನನ್ನು ಎಲ್ಲರೂ ’ಮಗ್ಗಾ ಬಾಬಾ’ ಎಂದೇ ಕರೆಯುತ್ತಿದ್ದರು. ’ಮಗ್ಗ’ ಎಂದರೆ ನಮ್ಮ ಭಾಷೆಯಲ್ಲಿ ಬೋಗುಣಿ ಎಂದರ್ಥ. ಅನ್ನ ನೀರು, ಟೀ, ಕಾಫೀ ಎಲ್ಲಕ್ಕೂ ಅವನು ಬೋಗುಣಿಯನ್ನೇ ಬಳಸುತ್ತಿದ್ದ. ಅದೇ ಅವನ ಬಳಿ ಇದ್ದ ಏಕೈಕ ಆಸ್ತಿ. ಹಾಗಾಗಿ ಎಲ್ಲರೂ ಅವನನ್ನು ಮಗ್ಗಾ ಬಾಬಾ ಎಂದೇ ಕರೆಯುತ್ತಿದ್ದರು. ಆತ ಯಾರೊಂದಿಗೂ ಮಾತಾಡುತ್ತಿರಲಿಲ್ಲ, ಮಾತನಾಡಿಸಿದರೆ ಯಾರಿಗೂ ಅರ್ಥವಾಗದ ಅಸಂಗತ ಶಬ್ದಗಳನ್ನು ಬಾಯಿಂದ ಹೊರಡಿಸುತ್ತಿದ್ದ. ಜನ, ಇದಾವುದೋ ನಮಗೆ ತಿಳಿಯದ ಭಾಷೆ ಎಂದುಕೊಂಡು ಸುಮ್ಮನಾಗುತ್ತಿದ್ದರು. ನಿಜ ಹೇಳಬೇಕೆಂದರೆ, ಆತ ಯಾರೂ ಇಲ್ಲದಾಗ ಮಾತ್ರ ನನ್ನೊಡನೆ ಮಾತನಾಡುತ್ತಿದ್ದ. ಅವನನ್ನು ಮಾತನಾಡಿಸಲೆಂದೇ ಮಧ್ಯರಾತ್ರಿ ಎರಡು ಗಂಟೆಯ ವೇಳೆಯಲ್ಲಿ, ಅಜ್ಜಿ ಪೂರ್ತಿಯಾಗಿ ನಿದ್ರಿಸಿದ ಮೇಲೆ, ಕದ್ದು ಮುಚ್ಚಿ, ಅವನ ಬಳಿ ಹೋಗುತ್ತಿದ್ದೆ. ಅಜ್ಜಿ ಅವನನ್ನು ಕಂಡರೆ ಅಸಹ್ಯ ಪಡುತ್ತಿದ್ದಳು ’ಆ ಕೊಳಕು ಮನುಷ್ಯನ ಹತ್ತಿರ ಮತ್ತೆ ಹೋಗಬೇಡ, ಸ್ನಾನವನ್ನೇ ಕಾಣದ ಅವನ ಮೈತುಂಬ ಹೇನುಗಳಿವೆ’ ಎನ್ನುತ್ತಿದ್ದಳು. ಅವನು ಅಲ್ಲೊಂದು ಬೇವಿನ ಮರದಡಿ ಬೆಂಕಿ ಕಾಯಿಸುತ್ತ ಕುಳಿತಿರುತ್ತಿದ್ದ ಇಲ್ಲವೆ ಕಂಬಳಿ ಸುತ್ತಿಕೊಂಡು ಮಲಗಿರುತ್ತಿದ್ದ. ಅವನಿಗೆ ಹಿಂದಿಯಲ್ಲದೆ ಇನ್ನೂ ಹಲವು ಭಾಷೆಗಳು ತಿಳಿದಿದ್ದವು, ಎಲ್ಲಕ್ಕಿಂತ ಮಿಗಿಲಾಗಿ ಮೌನದ ಭಾಷೆಯಲ್ಲಿ ಅವನು ಪರಿಣತನಾಗಿದ್ದ. ಅವನ ಮಾತುಗಳು.., ನಿಜಕ್ಕೂ ಅವು ಮಹಾಸಂಗೀತ! ತನ್ನ ಬದುಕಿನ ಬಗ್ಗೆ ನನ್ನ ಬಳಿ ಸಹ ಏನನ್ನೂ ಹೇಳಿಕೊಳ್ಳಲಿಲ್ಲ, ಆದರೆ ಬದುಕಿನ ಬಗ್ಗೆ ಬಹಳಷ್ಟು ಹೇಳುತ್ತಿದ್ದ ’ಬದುಕು ಈ ಇಂದ್ರಿಯಗೋಚರವಾದ ಪರಿಸರವನ್ನು ಮೀರಿದ್ದಾಗಿದೆ. ನಿನ್ನ ಕಣ್ಣಿಗೆ ಕಾಣಿಸುವುದೇ ಸತ್ಯ ಎಂದು ಭಾವಿಸದಿರು, ಯಾರ ಕಣ್ಣಿಗೂ ಕಾಣಿಸದ ನೆಲದಲ್ಲಿ ಇದರ ಬೇರುಗಳುಂಟು’. ಅವನು ಉಪನ್ಯಾಸವನ್ನು ಕೊಡುತ್ತಿರಲಿಲ್ಲ, ತುಂಡು ತುಂಡು ವಿಚಾರಗಳನ್ನು ಆಗಾಗ ಹೇಳಿ ಸುಮ್ಮನಾಗಿಬಿಡುತ್ತಿದ್ದ. ಅವನಾಗೇ ನುಡಿಯುತ್ತಿದ್ದನೇ ವಿನಃ, ನಾವು ಕೇಳಿದಾಗ ಮಾತನಾಡುತ್ತಿರಲಿಲ್ಲ, ನಮ್ಮ ಪ್ರಶ್ನೆಗಳಿಗೂ ಉತ್ತರಿಸುತ್ತಿರಲಿಲ್ಲ. ನಾನು ಎಂತೆಂತಹ ಭಾಷಣಕಾರರನ್ನು ಬಲ್ಲೆ, ಆದರೆ ಅವನಷ್ಟು ಮಧುರವಾಗಿ ಮಾತನಾಡುತ್ತಿದ್ದವನನ್ನು ನಾನು ಮತ್ತೆಲ್ಲೂ ಕಂಡಿಲ್ಲ. ’ನಾನು ಸಾಯುವ ತನಕ ನಾನು ಹೀಗೆ ನಿನ್ನೊಂದಿಗೆ ಮಾತನಾಡುತ್ತೇನೆ ಎಂದು ಬೇರೆಯವರಿಗೆ ತಿಳಿಯಕೂಡದು. ಜನ ನನ್ನನ್ನು ಕಿವುಡನೆಂದು, ಹುಚ್ಚನೆಂದು ಭಾವಿಸಿದ್ದಾರೆ. ಅದು ನನ್ನ ಮಟ್ಟಿಗೆ ತುಂಬ ಅನುಕೂಲಕರ’. ಎಂದು ನನಗೆ ಅಪ್ಪಣೆ ಮಾಡಿದ್ದ. ಅವನು ಸತ್ತ ಮೇಲೆ ಇದೇ ಮೊದಲ ಬಾರಿಗೆ ಅವನನ್ನು ಕುರಿತು ಹೀಗೆ ಎಲ್ಲರಿಗೂ ಹೇಳುತ್ತಿರುವುದು. ಅಂಥ ಪರಿಶುದ್ಧ ವ್ಯಕ್ತಿಯನ್ನು ನಾನು ಈ ಜನ್ಮದಲ್ಲಲ್ಲ, ಜನ್ಮಾಂತರಗಳಲ್ಲೂ ಈ ಹಿಂದೆ ಕಂಡಿರಲಿಲ್ಲ.
ಅದಾವ ಕಾರಣಕ್ಕೋ ಏನೋ, ಅವನು ನನ್ನನ್ನು ತುಂಬ ಇಷ್ಟಪಡುತ್ತಿದ್ದ,..ಅಥವ ಅಕಾರಣವಾಗಿ ಇಷ್ಟ ಪಡುತ್ತಿದ್ದ ಎಂದರೆ ಸರಿಯಾದೀತು. ನನ್ನ ಸುದೈವದಿಂದ ಅಂತಹ ಎಷ್ಟೋ ಅಜ್ಞಾತ ಸಂತರುಗಳ ಪ್ರೀತಿಯನ್ನು ನಾನು ಸಂಪಾದಿಸಿದ್ದೇನೆ. ಅವರುಗಳ ಸಾಲಿನಲ್ಲಿ ಮಗ್ಗಾಬಾಬಾನೆ ಮೊದಲಿಗ. ದಿನವೆಲ್ಲ ಅವನ ಸುತ್ತ ಜನ ನೆರೆದಿರುತ್ತಿದ್ದರು. ರಿಕ್ಷಾದಲ್ಲೋ, ಗಾಡಿಯಲ್ಲೋ ಅವನನ್ನು ತಮ್ಮ ಮನೆಗಳಿಗೆ ಕರೆದುಕೊಂಡು ಹೋಗುತ್ತಿದ್ದರು, ಕೆಲವೊಮ್ಮೆ ಭಕ್ತಾದಿಗಳು ಅವನನ್ನು ಕದ್ದೊಯ್ಯುತ್ತಿದ್ದುದೂ ಉಂಟು. ತಿಂಗಳುಗಟ್ಟಲೆ ಮಗ್ಗಾಬಾಬಾ ಕಾಣೆಯಾಗಿಬಿಡುತ್ತಿದ್ದ. ಊರಿನ ಅವನ ಭಕ್ತಸಮೂಹವು ತಮ್ಮ ಗುರು ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡುತ್ತಿದ್ದರು. ಆಗ ಪೊಲೀಸರು ಅವನನ್ನು ಹುಡುಕಿ ತಂದು ಊರಿನ ಭಕ್ತಾದಿಗಳಿಗೆ ಒಪ್ಪಿಸುತ್ತಿದ್ದರು. ನನ್ನ ಆಧ್ಯಾತ್ಮಿಕ ಸಾಧನೆಗೆ ಯಾವ ಮಾರ್ಗದರ್ಶನ ನೀಡದಿದ್ದರೂ, ಅವನಿಂದ ನನಗೆ ತುಂಬ ನೆರವಾಗಿದೆ. ಅವನು ಏಕಾಂತದಲ್ಲಿ ಇರಬಹುದೆಂದು ಭಾವಿಸಿ ನಾನು ಹೋದಾಗ ಕೆಲವೊಮ್ಮೆ ಒಬ್ಬಿಬ್ಬರು ಕುಳಿತಿರುತ್ತಿದ್ದರು. ಆಗೆಲ್ಲ ಅವನು ಹುಚ್ಚು ಹೆಚ್ಚಾದಂತೆ ವರ್ತಿಸಿಅವರನ್ನು ಓಡಿಸಿಬಿಡುತ್ತಿದ್ದ ಅಥವ ಅವರೇ ಹೆದರಿ ಓಡಿಹೋಗುವಂತೆ ಮಾಡುತ್ತಿದ್ದ. ಅವರು ಓಡುವುದನ್ನು ನೋಡಿ ನಾವಿಬ್ಬರೂ ನಗುತ್ತಿದ್ದೆವು. ನನ್ನ ಬದುಕಿನಲ್ಲಿ ನಾನು ಮತ್ತೆ ಹಾಗೆ ಹೊಟ್ಟೆ ಹುಣ್ಣಾಗುವಂತೆ ನಗುವಂತಹ ಸಂದರ್ಭ ಮತ್ತೆ ಬರಲೇ ಇಲ್ಲ. ಮಗ್ಗಾಬಾಬಾನಂತಹ ಅವಧೂತನನ್ನು ಮತ್ತೆ ಭೇಟಿಯಾಗುವೆನೋ ಇಲ್ಲವೋ ತಿಳಿಯದು.
ಪಾಗಲ್ ಬಾಬಾ
ಪಾಗಲ್ ಬಾಬಾನನ್ನು ನೆನೆದರೆ ನನಗೆ ಸುಂಟರ ಗಾಳಿಯ ನೆನಪಾಗುತ್ತದೆ. ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದುಬಿಡುತ್ತಿದ್ದ ಮತ್ತೆ ಹೇಳದೇ ಕೇಳದೇ ಕಣ್ಮರೆಯಾಗಿ ಬಿಡುತ್ತಿದ್ದ. ನಾನು ಅವನನ್ನು ಹುಡುಕಿಕೊಂಡು ಹೋಗಲಿಲ್ಲ, ಅವನೇ ನದಿಯಲ್ಲಿ ಈಜುತ್ತಿದ್ದ ನನ್ನನ್ನು ಗುರುತಿಸಿದ. ಅವನನ್ನು ನಮ್ಮ ಊರಿನ ಭಜನ ಮಂಡಲಿಗಳಲ್ಲಿ, ದೇವಸ್ಥಾನಗಳಲ್ಲಿ ಆಗಾಗ ನೋಡುತ್ತಿದ್ದೆ, ಅವನ ಬಗ್ಗೆ ಆಕರ್ಷಿತನೂ ಆಗಿದ್ದೆ, ಆದರೆ ಪರಿಚಯ ಮಾಡಿಕೊಳ್ಳುವ ಸಂದರ್ಭ ಉಂಟಾಗಿರಲಿಲ್ಲ. ಪಾಗಲ್ ಬಾಬಾನಿಂದ ನನಗೆ ಬೇಕಾದಷ್ಟು ಗಣ್ಯರ, ಹಲವಾರು ಪ್ರತಿಭಾವಂತರ ಪರಿಚಯವಾಯಿತು. ನಮ್ಮ ಮನೆಯವರಿಗೂ ಪಾಗಲ್ ಬಾಬಾರನ್ನು ಕಂಡರೆ ತುಂಬ ಗೌರವ. ಹಾಗಾಗಿ ಅವರ ಜೊತೆಗಿನ ನನ್ನ ಒಡನಾಟಕ್ಕೆ ಮನೆಯವರು ಆಕ್ಷೇಪಣೆ ಮಾಡುತ್ತಿರಲಿಲ್ಲ. ’ಆ ಪಾಗಲ್ ಬಾಬಾನ ಜೊತೆ ಸೇರಿ ನಿನ್ನ ಮಗ ಹಾಳಾಗುತ್ತಾನೆ’ ಎಂದು ನಂಟರಿಷ್ಟರು ಅಪ್ಪನಿಗೆ ಎಚ್ಚರಿಕೆ ನೀಡುತ್ತಿದ್ದರೆ ನಮ್ಮಪ್ಪ ’ನನ್ನ ಮಗನ ಬಗ್ಗೆ ನೀವೇನೂ ಯೋಚಿಸಬೇಡಿ, ನನಗೆ ಇವನ ಜೊತೆ ಸೇರಿರುವ ಆ ಮುದುಕನ ಗತಿಯೇನು ಎಂದು ಚಿಂತೆಯಾಗುತ್ತಿದೆ’ ಎನ್ನುತ್ತಿದ್ದರಂತೆ. ಪಾಗಲ್ ಬಾಬಾನ ಜೊತೆ ನಾನು ದೇಶವನ್ನೆಲ್ಲ ಸುತ್ತಿದ್ದೇನೆ, ಶ್ರೇಷ್ಠ ಕಲಾವಿದರ, ಸಂಗೀತಜ್ಞರ ಸಂಪರ್ಕ ಪಡೆದಿದ್ದೇನೆ, ಅಜಂತಾ ಎಲ್ಲೋರ, ತಾಜ್ ಮಹಲ್‌ಗಳನ್ನು ನಾನು ಮೊದಲ ಬಾರಿ ಕಂಡದ್ದು ಇವನ ಜೊತೆಯಲ್ಲೇ. ನನ್ನನ್ನು ಮೊದಲ ಬಾರಿಗೆ ಹಿಮಾಲಯಕ್ಕೆ ಕರೆದುಕೊಂಡು ಹೋದವನೂ ಇವನೇ. ಇವನಿಗೆ ನಾನೆಷ್ಟು ಆಭಾರಿಯಾಗಿದ್ದೇನೆ! ಕೊನೆಗೂ ಅವನಿಗೆ ಒಂದು ಧನ್ಯವಾದಗಳನ್ನು ಹೇಳಲೂ ನನ್ನಿಂದ ಆಗಲಿಲ್ಲವಲ್ಲ! ಧನ್ಯವಾದಗಳನ್ನು ಹೇಳ ಹೋದರೆ ’ನಾನು ನಿನಗೆ ಆಭಾರಿಯಾಗಿರಬೇಕು. ನೀನಲ್ಲ’ ಎಂದು ಹೇಳಿ  ನನ್ನ ಕಾಲುಗಳನ್ನು ಮುಟ್ಟಿ ನಮಸ್ಕರಿಸುತ್ತಿದ್ದ. ನನಗೆ ಇವನ ವರ್ತನೆ ಅರ್ಥವಾಗುತ್ತಿರಲಿಲ್ಲ, ಕೇಳಿದರೆ ’ಮುಂದೆ ಒಂದು ದಿನ ಆ ಸತ್ಯವೇನೆಂಬುದು ನಿನಗೇ ಅರ್ಥವಾಗುತ್ತದೆ’ ಎನ್ನುತ್ತಿದ್ದ. ಅದು ನನಗೆ ಅರ್ಥವಾಗುವ ವೇಳೆಗೆ ಅವನು ಸತ್ತು ಹೋಗಿದ್ದ. ಒಂದು ವೇಳೆ ಬದುಕಿದ್ದರೆ - ಹಿಂದಣ ಜನ್ಮದಲ್ಲಿ ನನಗೆ ವಿಷಪ್ರಾಶನ ಮಾಡಿಸಿದ್ದು ತಾನೇ ಎಂಬ - ಆ ಸತ್ಯವನ್ನು ಅವನು ಜೀರ್ಣಿಸಿಕೊಳ್ಳುತ್ತಿರಲಿಲ್ಲ. ಹಿಂದಣ ಆ ಅಚಾತುರ್ಯವನ್ನು ಅಳಿಸಿಹಾಕಲೋ ಏನೋ ಈ ಜನ್ಮದಲ್ಲಿ ಅವನು ಎಲ್ಲ ರೀತಿಯಿಂದಲೂ ಪ್ರಯತ್ನಿಸಿದ. ತನ್ನ ಕೈಲಾದಷ್ಟು ನನಗೆ ಉಪಕಾರ ಮಾಡಲು ಪ್ರಯತ್ನಿಸಿದ. ಆಗ ನನಗೆ ಇದೆಲ್ಲ ಅರ್ಥವಾಗಿರಲಿಲ್ಲ.
ಪಾಗಲ್ ಬಾಬಾ ನನ್ನ ಕಾಲಿಗೆ ಬೀಳುತ್ತಿದ್ದುದನ್ನು ನೋಡಿ ನನ್ನ ತಂದೆಗೆ ನಂಬಲಾಗಲಿಲ್ಲ! ಅಪ್ಪನೇ ಪಾಗಲ್ ಬಾಬಾ ಮನೆಗೆ ಬಂದ ಕೂಡಲೆ ಕಾಲಿಗೆ ನಮಸ್ಕರಿಸುತ್ತಿದ್ದ. ಹಾಗಾಗಿ ಅವನು ನನ್ನ ಕಾಲಿಗೆ ಬಿದ್ದರೆ ನನಗೆ ತುಂಬ ಮುಜುಗರವಾಗುತ್ತಿತ್ತು. ಆಗ ನಾನು ಕೂಡಲೆ ಅಪ್ಪನ ಕಾಲಿಗೆ ಬಿದ್ದು ಆ ಚಕ್ರವನ್ನು ಪೂರ್ತಿ ಮಾಡುತ್ತಿದ್ದೆ. ಪಾಗಲ್ ಬಾಬಾ ಆ ವೇಳೆಗಾಗಲೇ ಜೀವನ್ಮುಕ್ತನಾಗಿದ್ದ. ನನಗಾದರೂ ಜೀವನ್ಮುಕ್ತಿ, ಅನುಭಾವ ಇತ್ಯಾದಿ ಪದಗಳ ಅರ್ಥವೂ ಗೊತ್ತಿರಲಿಲ್ಲ. ಅವನ ಇರುವಿಕೆಯೇ ಸುತ್ತಣ ವಾತಾವರಣದಲ್ಲಿ ಒಂದು ಬಗೆಯ ಶಕ್ತಿ ಸಂಚಾರ ಉಂಟು ಮಾಡುತ್ತಿತ್ತು. ಪ್ರಯಾಗದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳವನ್ನು ನನಗೆ ಮೊದಲ ಸಲ ತೋರಿಸಿದ್ದೂ ಅವನೇ. ಅದು ಜಗತ್ತಿನ ಬಹುದೊಡ್ಡ ಧಾರ್ಮಿಕ ಸಭೆ ಎನ್ನುತ್ತಾರೆ. ಭಾರತದ ಎಲ್ಲ ಚಿತ್ರ ವಿಚಿತ್ರ ಸಂಪ್ರದಾಯಗಳು, ಸಾಧಕರ ಗುಂಪುಗಳು, ಒಂದೆಡೆ ಸೇರುತ್ತವೆ. ಅವನು ಅಲ್ಲಿ ನೆರೆದಿರುತ್ತಿದ್ದ ಸಂತರನ್ನು, ಮಹಾಂತರನ್ನು ಪರಿಚಯಿಸುತ್ತಿದ್ದ, ಬಳಿಕ ’ಅವನು ನಿಜವಾಗಿಯೂ ಮಹಾಂತನೇ’ ಎಂದು ನನ್ನನ್ನು ಕೇಳುತ್ತಿದ್ದ. ನಾನು ’ಅಲ್ಲ’ ಎಂದರೆ ಅವನು ಬಿಡುತ್ತಿರಲಿಲ್ಲ. ನಾನು ನಿಜವಾದ ಮಹಾಂತನನ್ನು ಗುರುತಿಸುವವರೆಗೂ ಬೇರೆ ಬೇರೆಯವರ ಬಳಿಗೆ ನನ್ನನ್ನು ಒಯ್ಯುತ್ತಿದ್ದ. ಹಾಗೆ ಗುರುತಿಸಿದಾಗ ’ನನಗೆ ಗೊತ್ತಿತ್ತು ನೀನು ಇವನನ್ನು ಗುರುತಿಸುವೆ’ ಎಂದು ಹೆಮ್ಮೆಯಿಂದ ಹೇಳಿ ಅವರ ಕಾಲಿಗೆ ಬೀಳುತ್ತಿದ್ದ. ಬಳಿಕ ಅವರ ಸಮ್ಮುಖದಲ್ಲೇ ನನ್ನ ಕಾಲುಗಳಿಗೂ ಎರಗಿಬಿಡುತ್ತಿದ್ದ. ಆಗ ಆ ಮಹಾಂತನಿಗೂ ಪಾಗಲ್ ಬಾಬಾಗೂ ಸಂಭಾಷಣೆ ನಡೆಯುತ್ತಿತ್ತು ’ಈ ಮಗುವನ್ನು ನೀನೆಲ್ಲಿ ಪತ್ತೆ ಮಾಡಿದೆ? ನನ್ನನ್ನು ಯಾರೂ ಗುರುತಿಸಲಾರರು ಎಂದು ಭಾವಿಸಿದ್ದೆನಲ್ಲ.?’ ಎಂದು ಅಂತಹ ಯತಿಗಳು ಅವನೊಡನೆ ಮಾತಾಡಿಕೊಳ್ಳುತ್ತಿದ್ದರು.
ಅವನಿಗೆ ಸಂಗೀತದ ಬಗ್ಗೆ ತುಂಬ ಆಸಕ್ತಿ ಇತ್ತು. ನಾನು ಸಂಗೀತಗಾರನಾಗಬೇಕೆಂದು ಬಯಸಿದ್ದ. ಆಗ ನಾನು ’ಇಲ್ಲ ಬಾಬಾ, ಸಂಗೀತ ಹೆಚ್ಚೆಂದರೆ ಒಂದು ಮನರಂಜನೆ, ತೀರಾ ಕೆಳಮಟ್ಟದ ಧ್ಯಾನಾವಸ್ಥೆ. ನನಗೆ ಸಂಗೀತದಲ್ಲಿ ಆಸಕ್ತಿ ಇಲ್ಲ’ ಎಂದು ಹೇಳಿದ್ದೆ. ’ನಾನೇನು ಸಂಗೀತ ವಿದ್ವಾಂಸನಾಗು ಎಂದು ಹೇಳಿದೆನೇ? ನೀನು ಹಾಡುವ ಸಂಗೀತ ಕೇಳುವ ಆಸೆ ನನಗೆ ಅಷ್ಟೇ. ಅದೂ ಧ್ಯಾನಕ್ಕೆ ಒಳ್ಳೆಯ ತಳಹದಿ ಹಾಕಿಕೊಡುವುದಿಲ್ಲವೇ?’ ಎನ್ನುತ್ತಿದ್ದ. ನಾನು ನನ್ನ ಧ್ಯಾನ ಪದ್ಧತಿಗಳಲ್ಲಿ ಸಂಗೀತವನ್ನೂ ಅಳವಡಿಸಿಕೊಳ್ಳಲು ಪಾಗಲ್ ಬಾಬಾನೇ ಕಾರಣ. ನಾನು ಸಂಗೀತಗಾರ ಆಗಲಾರೆ ಎಂದು ಅವನಿಗೂ ತಿಳಿದಿತ್ತು. ಆದರೆ ಒಂದರ್ಥದಲ್ಲಿ ನಾನು ಅವನ ಆಸೆಯನ್ನು ಪೂರೈಸಿದ್ದೇನೆ. ಹಲವು ಹೃದಯಗಳಲ್ಲಿ ಮಿಡಿದು ಅಲ್ಲಿ ಅನಾಹತ ಶಬ್ದವನ್ನು ಮೂಡಿಸಿದ್ದೇನೆ. ಹೇಗಾದರೂ ಮಾಡಿ ನಾನು ಎಮ್.ಎ. ಮಾಡಿಯೇ ತೀರುತ್ತೇನೆ ಎಂದು ನಾನು ಪಾಗಲ್ ಬಾಬಾಗೆ ವಚನ ನೀಡಿದ್ದೆ. ’ನಾನೇನು ನೌಕರಿ ಮಾಡಬೇಕೇ?’ ಎಂದು ಹಾಗೆ ಭಾಷೆ ನೀಡುವ ಮುನ್ನ ಕೇಳಿದ್ದೆ. ’ನೀನೇನೂ ನೌಕರಿ ಮಾಡುವುದಿಲ್ಲ, ನನಗೆ ಗೊತ್ತು, ಏನೋ ವಯಸ್ಸಾದವನ ಆಸೆ ನೀನು ಪೂರೈಸಬೇಕು’ ಎಂದು ಕೇಳಿದ್ದ. ಮೂರು ಜನ ಖ್ಯಾತ ಕೊಳಲುವಾದಕರು ಪಾಗಲ್ ಬಾಬಾನಿಂದ ನನಗೆ ಪರಿಚಿತರಾದರು. ಅವರಲ್ಲಿ ಉತ್ತರ ಭಾರತದ ಹರಿಪ್ರಸಾದ್ ಚೌರಾಸಿಯಾ, ಬಂಗಾಳದ ಪನ್ನಾಲಾಲ್ ಘೋಷ್, ಹಾಗು ಸಚ್‌ದೇವ್ ಪ್ರಮುಖರು. ಸಚ್‌ದೇವ್‌ರ ಕೊಳಲು ವಾದ ತುಂಬ ಮೃದು, ಮೌನಕ್ಕೆ ಹತ್ತಿರವಾದುದು, ಪನ್ನಲಾಲ್ ಘೋಷರದು ಇದಕ್ಕೆ ವಿಪರ್ಯಯವಾದುದು, ಅವರ ಪ್ರತಿಭೆ ಓಜೋಗುಣದ್ದು, ತುಂಬ ಗಂಭೀರವಾದುದು. ಈ ಮೂವರಲ್ಲಿ ನಾನು ಹರಿಪ್ರಸಾದ್ ಚೌರಾಸಿಯಾರ ವಾದನವನ್ನು ತುಂಬ ಮೆಚ್ಚಿಕೊಳ್ಳುತ್ತೇನೆ. ಮೇಲೆ ಹೇಳಿದ ಇಬ್ಬರ ಗುಣವೂ ಅವರ ಸಂಗೀತದಲ್ಲಿದೆ. ಹರಿಪ್ರಸಾದ್ ಚೌರಾಸಿಯಾ ನಮ್ಮ ಕಾಲದ ಅತ್ಯಂತ ಶ್ರೇಷ್ಠ ವಾಗ್ಗೇಯಕಾರ ಎಂದು ಅನುಮಾನವೇ ಇಲ್ಲದೆ ಹೇಳಬಲ್ಲೆ. ತುಂಬ ವಿಧೇಯ ಸ್ವಭಾವದ ಹರಿಪ್ರಸಾದ್ ಚೌರಾಸಿಯಾ ಅಪಾರ ಕೀರ್ತಿಯನ್ನು ಗಳಿಸದಿದ್ದರೂ - ವಿನಯಶೀಲತೆ ಕೀರ್ತಿಗೆ ಎಂದೂ ಬಾಧಕ - ಪಾಗಲ್ ಬಾಬಾರಂಥವರು ಚೌರಾಸಿಯಾರನ್ನು ಗುರುತಿಸಿದರು ಎಂಬುದು ನನಗೆ ಮುಖ್ಯ. ಹರಿಪ್ರಸಾದ್ ಚೌರಾಸಿಯಾಗೆ ನನ್ನ ಬಗ್ಗೆ ಅಪಾರವಾದ ಗೌರವ. ನನ್ನನ್ನು ನೋಡುವ ನೆವದಲ್ಲಿ ಪ್ರತಿಸಲ ಪಾಗಲ್ ಬಾಬಾರೊಂದಿಗೆ ಬರುತ್ತಿದ್ದರು. ಒಮ್ಮೆ ನನ್ನೆದುರಿಗೇ ’ನೀನೇನು ನನ್ನ ಹೆಸರು ಹೇಳಿಕೊಂಡು ಇಲ್ಲಿಗೆ ಬರಬೇಕಿಲ್ಲ, ನೀನು ಇಲ್ಲಿಗೆ ಏಕೆ ಬರುವೆ ಎಂದು ನನಗೂ ಗೊತ್ತು, ನಿನಗೂ ಗೊತ್ತು, ಯಾರನ್ನು ನೋಡಲೆಂದು ಬರುವೆಯೋ ಅವರಿಗೂ ಗೊತ್ತು’ ಎಂದು ಹಾಸ್ಯ ಮಾಡಿದ್ದರು. ಆಗ ಹರಿಪ್ರಸಾದ್ ’ಬಾಬಾ, ನೀವು ಹೇಳಿದ್ದು ಸರಿ’ ಎಂದಿದ್ದರು.
ಹೀಗೆ ಪಾಗಲ್ ಬಾಬಾ ಎಷ್ಟೋ ಮೇಧಾವಿಗಳನ್ನು, ಪ್ರಮುಖ ಗಣ್ಯರನ್ನು ಪರಿಚಯಿಸಿದರು. ಕೊನೆಗೆ ಸಾಯುವ ಸಮಯದಲ್ಲೂ ನನ್ನಿಂದ ಒಂದು ಕೃತಜ್ಞತೆಯನ್ನು ಸ್ವೀಕರಿಸಲಿಲ್ಲ. ಕೊನೆಗಾಲದಲ್ಲಿ, ’ಇದೆಲ್ಲ ನನ್ನ ಕರ್ತವ್ಯ. ಹಾಗೆ ನನಗೆ ಕೃತಜ್ಞತೆ ತೋರಿಸಬೇಕು ಎಂದಿದ್ದರೆ ನನ್ನ ಒಂದೇ ಒಂದು ಆಸೆಯನ್ನು ನಡೆಸಿಕೊಡು: ನನ್ನ ಚಿತೆಗೆ ನೀನೇ ಬೆಂಕಿಯನ್ನು ಮುಟ್ಟಿಸಬೇಕು’ಎಂದಿದ್ದರು. ಆಗ ನಾನು ’ಬಾಬಾ, ನನಗೆ ಅಪ್ಪ-ಅಮ್ಮ ಇದ್ದಾರೆ, ಅವರಿಗೆ ತಿಳಿದರೆ ಏನು ಗತಿ’ ಎಂದು ಕೇಳಿದ್ದೆ. ’ಅದೆಲ್ಲ ತಲೆಕೆಡಿಸಿಕೊಳ್ಳಬೇಡ. ನನ್ನ ಕೊನೆಗಾಲ ಸಮೀಪಿಸಿದೆ. ಚರ್ಚೆ ಮಾಡುತ್ತ ಕಾಲಹರಣ ಮಾಡಲು ಈಗ ನನಗೆ ಸಾಧ್ಯವಿಲ್ಲ. ಇದು ನನ್ನ ನಿರ್ಧಾರ, ಇದನ್ನು ನೀನು ಪಾಲಿಸಲೇ ಬೇಕು’ ಎಂದು ಅಪ್ಪಣೆ ಮಾಡಿದ್ದರು. ಪಾಗಲ್ ಬಾಬಾ ನಮ್ಮ ಊರಿನಲ್ಲೇ ತೀರಿಕೊಂಡರು. ಅಲ್ಲೇ ಸಾಯಬೇಕು ಎಂದು ತೀರ್ಮಾನಿಸಿಕೊಂಡಿದ್ದರೋ ಏನೋ, ನಾನು ಅಂತ್ಯ ಸಂಸ್ಕಾರಕ್ಕೆ ಅಣಿಮಾಡುವುದನ್ನು ಕಂಡ ನಮ್ಮ ಅಪ್ಪ ’ಅವರ ಕುಟುಂಬದವರು ಯಾರಾದರೂ ಇದ್ದರೆ ತಿಳಿಸುವುದು ಒಳ್ಳೆಯದು, ನನ್ನ ಹಿರಿಯ ಮಗನಾಗಿ ನೀನು ಇದನ್ನೆಲ್ಲ ನಡೆಸಬಾರದು. ಅಲ್ಲದೆ ತಂದೆ ಬದುಕಿರುವಾಗ ಮಗ ಇಂತಹ ಕಾರ್ಯಗಳನ್ನು ಮಾಡುವುದು ಶಾಸ್ತ್ರ ಸಮ್ಮತವಲ್ಲ’ ಎಂದರು. ಆಗ ನಾನು ’ಅಪ್ಪ, ಇವನ ಕುಟುಂಬದ ವಿಚಾರ ಇಲ್ಲಿ ಯಾರಿಗೂ ತಿಳಿದಿಲ್ಲ. ಅಂತ್ಯ ಸಂಸ್ಕಾರವನ್ನು ನಾನೇ ಮಾಡುವೆನೆಂದು ಈಗಾಗಲೇ ಇವನಿಗೆ ಮಾತು ಕೊಟ್ಟಿದ್ದೇನೆ. ಇನ್ನು ಶಾಸ್ತ್ರದ ವಿಚಾರಕ್ಕೆ ಬರುವುದಾದರೆ ನಾನು ನಿನ್ನ ಹಿರಿಯ ಮಗ ಎನ್ನುವುದನ್ನು ಮರೆತುಬಿಡು. ಹಿರಿಯ ಮಗನಾಗಿ ಯಾವ ಕರ್ತವ್ಯವನ್ನೂ ನಿರ್ವಹಿಸಲಾರೆ. ನಿನ್ನ ಅಂತಿಮ ಯಾತ್ರೆಯ ಸಮಯದಲ್ಲಿ ನಾನು ಇರುವೆನಾದರೂ ಮಗನಾಗಿ ಯಾವ ಶಾಸ್ತ್ರವಿಧಿಗಳಲ್ಲೂ ಭಾಗವಹಿಸಲಾರೆ. ನಾನು ನಿನ್ನ ವಂಶಕ್ಕೆ ಸೇರಿದವನೇ ಅಲ್ಲ, ನಿನ್ನ ಎರಡನೆಯ ಮಗನೇ ನಿನ್ನ ಹಿರಿಯ ಮಗ ಎಂದು ತಿಳಿದುಕೋ’ಎಂದಿದ್ದೆ. ವಯಸ್ಸಾದ ನನ್ನ ತಂದೆಯ ಮನಸ್ಸಿಗೆ ಹೇಗಾಗಬಹುದು ಎಂಬುದನ್ನೂ ಲೆಕ್ಕಿಸದೆ ಆ ದಿನ ಈ ಮಾತುಗಳನ್ನಾಡಿದೆ. ಮುಂದೆ ನನ್ನ ಮಾತುಗಳೆಲ್ಲ ನಿಜವಾಯಿತು.
ಮಸ್ತಾ ಬಾಬಾರ ಸಹವಾಸ
ಸಾಯುವ ಕಾಲದಲ್ಲಿ ಪಾಗಲ್ ಬಾಬಾ ಯಾವುದೋ ಬಗೆಯ ಆತಂಕವನ್ನು ಒಳಗೊಳಗೇ ಅನುಭವಿಸುತ್ತಿದ್ದ. ಅದನ್ನು ಬಾಯಿ ಬಿಟ್ಟು ಯಾರೊಂದಿಗೂ ಹೇಳದಿದ್ದರೂ, ನನಗೆ ಗೊತ್ತಾಗುತ್ತಿತ್ತು. ಅದಕ್ಕೆ ಕಾರಣ ಖಂಡಿತ ಅವನ ಕಾಯಿಲೆ, ವೃದ್ಧಾಪ್ಯ, ಮರಣ ಇದಾವುದೂ ಅಲ್ಲ, ಜರಾ ಮರಣಗಳನ್ನು ಅವನು ಲೆಕ್ಕಿಸುತ್ತಲೇ ಇರಲಿಲ್ಲ. ಆದರೂ ಅದೇನು ಚಿಂತೆಯೋ ನನಗೆ ಹೊಳೆಯದೆ ಒಂದು ರಾತ್ರಿ ಮಲಗಿದ್ದವನನ್ನು ಎಬ್ಬಿಸಿ ಕೇಳಿದೆ ’ಈಚೆಗೆ ಯಾವುದೋ ಭಯ, ಆತಂಕ ನಿನ್ನ ಮುಖದಲ್ಲಿ ಕಾಣಿಸುತ್ತಿದೆಯಲ್ಲ, ಇಷ್ಟು ದಿನ ಇರಲಿಲ್ಲ, ಅದು ಸಾವಿನ ಭಯವಂತೂ ಅಲ್ಲ ಎಂದು ಭಾವಿಸಿದ್ದೇನೆ’ ಎಂದೆ. ’ನಿನ್ನ ಮಾತು ನಿಜ, ಅದು ಖಂಡಿತ ಸಾವಿನ ಭಯವಲ್ಲ. ನಿನ್ನ ಜವಾಬ್ದಾರಿಯನ್ನು ನಾನು ಬೇರೊಬ್ಬರಿಗೆ ಹಸ್ತಾಂತರಿಸದೆ ಹಾಗೆಯೇ ಕಣ್ಣು ಮುಚ್ಚಿಕೊಂಡರೆ ಏನು ಗತಿ ಎಂದು ಯೋಚಿಸುತ್ತಿದ್ದೇನೆ. ಅಂಥವನಿಗಾಗಿ ಕಾಯುತ್ತಿದ್ದೇನೆ, ಇನ್ನೂ ಬಂದಿಲ್ಲವಲ್ಲ’ ಎಂದ. ಆಗ ನಾನು ’ಅಂಥವನು ಬೇಕೆನಿಸಿದರೆ ನಾನೇ ಅವನನ್ನು ಹುಡುಕಿಕೊಳ್ಳುತ್ತೇನೆ. ಅದಕ್ಕಾಗಿ ನೀನು ಕೊರಗಬೇಡ. ಇಷ್ಟುದಿನ ಯಾವ ತೇಜಸ್ಸಿನಿಂದ ಬದುಕಿದ್ದೆಯೋ ಅದೇ ತೇಜಸ್ಸಿನೊಂದಿಗೆ ಕಣ್ಮುಚ್ಚಬೇಕು ಎಂದು ನನ್ನ ಬಯಕೆ. ನನ್ನ ಕೊರಗಿನಲ್ಲಿ ನೀನು ಸಾಯಬಾರದು, ಅದು ನನಗೆ ಇಷ್ಟವಾಗುವುದಿಲ್ಲ’ ಎಂದೆ. ’ಹಾಗಲ್ಲ, ನಾನು ಸಾಯುವ ಮುನ್ನವೇ ಬಂದು ಭೇಟಿಯಾಗುತ್ತೇನೆ ಎಂದು ಮಾತು ನೀಡಿದ್ದ. ಆತ ಹಾಗೆಲ್ಲ ಮಾತಿಗೆ ತಪ್ಪುವವನಲ್ಲ’ ಎಂದ. ’ನಿನ್ನ ಸಾವಿನ ಗಳಿಗೆ ಅವನಿಗೆ ಹೇಗೆ ಗೊತ್ತಾದೀತು?’ ಎಂದು ಕೇಳಿದೆ. ಆಗ ಅವನು ನಕ್ಕು ’ಅದೆಲ್ಲ ನಿನಗೆ ಗೊತ್ತಾಗಲಿ ಎಂದೇ ಅವನ ಬರವನ್ನು ನಾನು ಕಾಯುತ್ತಿದ್ದೇನೆ. ನೀನಿನ್ನೂ ಚಿಕ್ಕವನು, ನಾನು ಹೋದ ಮೇಲೆ ನನ್ನಂಥವನು ನಿನ್ನ ಜೊತೆಗಿರಲಿ ಎಂಬುದು ನನ್ನ ಇಚ್ಛೆ’ ಎಂದ. ಒಂದು ಮಗು ಮುಂದೆ ಆತ್ಮಜ್ಞಾನಕ್ಕೆ ಪ್ರಾಪ್ತನಾಗುವನಾದರೆ, ಆ ಘಟನೆಗೆ ಮುನ್ನ ಮೂರು ಜನ ಜೀವನ್ಮುಕ್ತರು ಅವನನ್ನು ಗುರುತಿಸಿರಬೇಕು ಎಂದು ಆಧ್ಯಾತ್ಮ ಶಾಸ್ತ್ರದ ಒಂದು ಶಾಖೆ ಹೇಳುತ್ತದೆ. ಅದನ್ನು ಅವನ ಬಾಯಿಂದ ಕೇಳಿ ’ಬಾಬಾ, ಇವೆಲ್ಲ ಶುದ್ಧ ಮೂಢ ನಂಬಿಕೆ, ನಾನು ಆತ್ಮಜ್ಞಾನಿಯಾಗುವೆ ಎಂದಾದರೆ ಆಗಿಯೇ ತೀರುತ್ತೇನೆ, ಅದನ್ನು ತಡೆಯುವವರಾರು?’ ಅದಕ್ಕೆ ಅವನು ’ನಾನು ಸಾಯುವ ಮುದುಕ, ಈಗ ಸಾವೂ ಸನ್ನಿಹಿತವಾಗಿದೆ. ಇಂಥ ಸಮಯದಲ್ಲಿ ನನ್ನ ನಂಬಿಕೆಗಳನ್ನು ನಾಶಗೊಳಿಸುವ ಮಾತುಗಳನ್ನಾಡುವುದು ಸರಿಯಲ್ಲ. ಯಾವ ಜನ್ಮಾಂತರದ ಸಂಬಂಧವೋ ತಿಳಿಯದು. ನನಗೆ ಈ ವಯಸ್ಸಿನಲ್ಲಿ ನಿನ್ನನ್ನು ಬಿಟ್ಟರೆ ನನ್ನವರು ಎಂದು ಹೇಳಿಕೊಳ್ಳಲು ಇನ್ನಾರೂ ಇಲ್ಲ. ಅದಕ್ಕೇ ನಾನು ಹೋದ ಮೇಲೆ ನನ್ನ ಜಾಗದಲ್ಲಿ ಇನ್ನಾರಾದರೂ ಬರಲಿ ಎಂದು ಆಶಿಸುತ್ತಿರುವುದು’ ಎಂದ. ’ಇಲ್ಲ ಬಾಬಾ, ನಿನ್ನ ಜಾಗವನ್ನು ಇನ್ನಾರಿಂದಲೂ ತುಂಬಲು ಸಾಧ್ಯವಿಲ್ಲ. ಯಾವ ಕಾರಣಕ್ಕೂ ನಿನ್ನನ್ನು ನಾನು ಕಳೆದುಕೊಳ್ಳಲಾರೆ’ ಎಂದು ಹೇಳಿ ಸಮಾಧಾನ ಪಡಿಸಲೆತ್ನಿಸಿದೆ.
ಪವಾಡವೆಂಬಂತೆ ಆ ವ್ಯಕ್ತಿ ಮರುದಿನ ಮುಂಜಾನೆಯೇ ಪ್ರತ್ಯಕ್ಷನಾದ. ನನ್ನನ್ನು ಗುರುತಿಸಿದ ಮೊದಲ ಜೀವನ್ಮುಕ್ತ ಮಗ್ಗಾ ಬಾಬ, ಎರಡನೆಯವನು ಪಾಗಲ್ ಬಾಬಾ ಹಾಗು ಮೂರನೆಯವನು ಈ ವ್ಯಕ್ತಿ - ಮಸ್ತಾ ಬಾಬ. ನನ್ನನ್ನು ಗುರುತಿಸಲು ಇಂಥವನು ಬರುವನೆಂದು ನಾನು ಕಲ್ಪಿಸಿಕೊಂಡಿರಲಿಲ್ಲ. ಈತನನ್ನು ನೋಡಿದರೆ ಪಾಗಲ್ ಬಾಬಾಗಿಂತ ಮಹಾ ಹುಚ್ಚನಂತೆ ಕಾಣಿಸುತ್ತಿದ್ದ. ನನಗಾಗಿಯೇ ಹೇಳಿ ಮಾಡಿಸಿದಂತಿದ್ದ. ಪಾಗಲ್ ಬಾಬಾ ಪರಿಚಯಿಸುವ ಮುನ್ನವೇ ನಮ್ಮಿಬ್ಬರ ನಡುವೆ ಆತ್ಮೀಯತೆ ಬೆಳೆದುಬಿಟ್ಟಿತು. ಅವನು ಬರುವಾಗ ನಾನು ಹೊರಗೆ ನಿಂತಿದ್ದೆ, ಆಗ ಅದೇಕೆ ಹೊರಗೆ ನಿಂತಿದ್ದೆನೋ ತಿಳಿಯದು. ಬಹುಶಃ ನಾನೂ ಅವನ ಬರವನ್ನು ಎದುರು ನೋಡುತ್ತಿದ್ದೆನೋ ಎಂದು ಈಗ ಅನಿಸುತ್ತದೆ. ಅವನಿಗೆ ಹೆಚ್ಚೆಂದರೆ ಮೂವತ್ತೈದು ವರ್ಷ ವಯಸ್ಸಾಗಿರಬಹುದು. ತೆಳ್ಳಗೆ ಎತ್ತರವಾಗಿದ್ದ, ಅವನು ಬಂದೊಡನೆ ’ನೀವು ಮಸ್ತಾ ಬಾಬಾ ಅಲ್ಲವೇ?’ ಎಂದು ಕೇಳಿದೆ. ಅವನು ಆಶ್ಚರ್ಯದಿಂದ ’ನಿನಗೆ ಹೇಗೆ ಗೊತ್ತಾಯಿತು?’ ಎಂದು ಕೇಳಿದ. ’ಹಾಗೇನಿಲ್ಲ, ಪಾಗಲ್ ಬಾಬಾ ತುಂಬ ದಿನದಿಂದ ನಿಮಗಾಗಿ ಕಾಯುತ್ತಿದ್ದರು, ನಿಮ್ಮನ್ನು ನೋಡಿದಾಗ ಪಾಗಲ್ ಬಾಬಾ ಕೂಡ ಚಿಕ್ಕ ವಯಸ್ಸಿನಲ್ಲಿ ಹೀಗೆಯೇ ಇದ್ದಿರಬಹುದು ಎಂದು ಕಲ್ಪಿಸಿಕೊಳ್ಳುತ್ತಿದ್ದೆ, ಅದಕ್ಕೆ ಕೇಳಿದೆ’ ಎಂದೆ. ’ಈಗ ಪಾಗಲ್ ಬಾಬಾ ಎಲ್ಲಿದ್ದಾರೆ’ ಎಂದು ಕೇಳಿದ. ಅವನು ಕೂಡಲೆ ಒಳಹೊಕ್ಕು ಪಾಗಲ್ ಬಾಬಾರ ಕಾಲಿಗೆ ನಮಸ್ಕರಿಸಿದ, ನಾನೂ ಅವನನ್ನು ಹಿಂಬಾಲಿಸಿದೆ ’ಮಾಸ್ತೋ, ಇದೇ ನನ್ನ ಕಡೆಯ ದಿನ, ನಾನು ನಿನ್ನನ್ನೇ ಎದುರು ನೋಡುತ್ತಿದ್ದೆ’ ಎಂದು ಹೇಳಿದರು. ’ಸಾವು ನಿನಗೇನೂ ಅಷ್ಟು ಮುಖ್ಯವಲ್ಲವಲ್ಲ!’, ’ಅದು ಸರಿ ಆದರೆ ಸ್ವಲ್ಪ ಹಿಂದೆ ನೋಡು. ಆ ಹುಡುಗ ನನಗೆ ತುಂಬ ಮುಖ್ಯ. ಅವನ ಕಾಲಿಗೆ ನಮಸ್ಕರಿಸು. ಈ ಜನ್ಮದಲ್ಲಿ ನಾನು ಮಾಡಬೇಕಾಗಿದ್ದುದನ್ನು, ನನ್ನಿಂದ ಮಾಡಲು ಆಗದ್ದನ್ನು ಅವನು ಮಾಡಲಿದ್ದಾನೆ. ಅವನನ್ನು ನಿನ್ನ ಕೈಗೊಪ್ಪಿಸಲೆಂದು ನಾನು ಕಾಯುತ್ತಿದ್ದೆ’ ಎಂದರು. ನನಗೆ ಇದೆಲ್ಲ ಏಕೋ ಅತಿ ಎನಿಸಿತು. ಪಾಗಲ್ ಬಾಬಾ ಬಂದವರಿಗೆಲ್ಲ ’ಆ ಹುಡುಗನ ಕಾಲಿಗೆ ಬೀಳು’ ಎಂದು ಹೇಳಿ ಎಲ್ಲರಿಗೂ ಇರಿಸು ಮುರಿಸು ಮಾಡುತ್ತಿದ್ದರು. ಕೆಲವು ಸಲ ಜ್ಞಾನಿಗಳಿಗೂ ಇನ್ನೂ ಜ್ಞಾನಿಯಲ್ಲದ ನನ್ನ ಕಾಲಿಗೆ ಬೀಳಲು ಆದೇಶಿಸುತ್ತಿದ್ದರು. ಆಗಂತೂ ನಾನು ತೀವ್ರವಾಗಿ ಪ್ರತಿರೋಧಿಸುತ್ತಿದ್ದೆ. ’ತಪ್ಪೇನು ನಾಳೆಗಾಗಿ ಈ ದಿನವು ತನ್ನನ್ನು ತಾನು ಅರ್ಪಿಸಿಕೊಳ್ಳುವುದರಲ್ಲೇನಿದೆ? ಮುಂದನ್ನು ಕಾಣದವನು ಜ್ಞಾನಿ ಹೇಗಾದಾನು?’ ಎಂದು ಸುಮ್ಮನಿರಿಸುತ್ತಿದ್ದರು. ಮೇಲ್ನೋಟಕ್ಕೆ ಪಾಗಲ್ ಬಾಬಾನದು ಹುಚ್ಚು ವರ್ತನೆಯಂತೆ ಕಂಡರೂ ಆ ವರ್ತನೆಯ ಹಿಂದೆ ಆಳವಾದ ವಿವೇಕ ಕೆಲಸ ಮಾಡುತ್ತಿತ್ತು. ಇದು ಭಾರತದಲ್ಲಿ ತುಂಬ ಹಳೆಯ ಸಂಪ್ರದಾಯ. ಹಿಂದೆ ಬುದ್ಧ ತೊಟ್ಟಿಲ ಮಗುವಾಗಿದ್ದಾಗ ಅಸಿತ ಎಂಬ ಜೀವನ್ಮುಕ್ತನೊಬ್ಬ ಅವನ ಕಾಲು ಮುಟ್ಟೊ ನಮಸ್ಕರಿಸಿದ್ದನಂತೆ. ಆದರೆ ಮಸ್ತಾ ಬಾಬಾನ ವರ್ತನೆಯನ್ನು ನಾನು ನಿರೀಕ್ಷಿಸಿರಲಿಲ್ಲ. ’ಈ ದಿನ ಪಾಗಲ್ ಬಾಬಾ ದೇಹವನ್ನು ತ್ಯಜಿಸುತ್ತಿದ್ದಾರೆ. ಇಂದಿನಿಂದ ನನ್ನ ಪಾಲಿಗೆ ನೀನೇ ಪಾಗಲ್ ಬಾಬಾ’ ಎಂದವನೆ ಎರಡೂ ಕೈಮುಗಿದು ಕಾಲಿಗೆ ಬಿದ್ದ. ನಾನು ಗಾಬರಿಯಿಂದ ’ಮಸ್ತಾ ಬಾಬಾ, ನನ್ನ ಕಾಲನ್ನು ಬಿಡಿ’ ಎಂದು ನಾನು ಕೇಳಿಕೊಳ್ಳುತ್ತಿದ್ದೆ. ’ಬಾಬಾ ಅಲ್ಲ, ನನ್ನನ್ನು ಮಾಸ್ತೋ ಎಂದು ಕರೆಯುವವರೆಗೂ ನಾನು ನಿನ್ನ ಬಿಡುವುದಿಲ್ಲ’ ಎಂದು ಹೇಳಿದ. ನಾನು ಪಾಗಲ್ ಬಾಬಾರ ಕಡೆಗೆ ನೋಡಿದೆ ’ಹೌದು, ಇಷ್ಟು ದಿನ ನಾನು ಅವನನ್ನು ಹಾಗೇ ಕರೆಯುತ್ತಿದ್ದೆ, ಇನ್ನು ಮುಂದೆ ನೀನೂ ಹಾಗೆಯೇ ಕರೆಯತಕ್ಕದ್ದು ಇಲ್ಲವಾದರೆ ಅವನ ಮನಸ್ಸಿಗೆ ನೋವಾಗುತ್ತದೆ’ ಎಂದರು. ಬಳಿಕ ’ಮಾಸ್ತೋ’ ಎಂದೆ, ’ಮೂರು ಸಲ ಹಾಗೆ ಕರೆ, ಅದೇ ಸಂಪ್ರದಾಯದ ನಿಯಮ’ ಎಂದು ಹೇಳಿದ. ನಾನು ಮೂರು ಬಾರಿ ಅವನ ಹೆಸರನ್ನು ಉಚ್ಚರಿಸಿದ ಮೇಲೆಯೇ ಅವನು ನನ್ನ ಕಾಲನ್ನು ಬಿಟ್ಟ. ಅವನು ನನ್ನ ಕಾಲನ್ನು ಸ್ಪರ್ಶಿಸುತ್ತಿದ್ದ ರೀತಿಯೇ ವಿಶಿಷ್ಟವಾದುದು. ಸಾವಿರಾರು ಜನ ನನ್ನ ಕಾಲುಗಳನ್ನು ಮುಟ್ಟಿದ್ದಾರೆ. ಆದರೆ ಅವನ ಸ್ಪರ್ಶ ತುಂಬ ಅಪರೂಪವಾದುದು. ಸಾಕ್ಷಾತ್ ಭಗವಂತನ ಕಾಲುಗಳನ್ನೇ ಸ್ಪರ್ಶಿಸುತ್ತಿರುವೆನೋ ಎಂಬಂತೆ ಇರುತ್ತಿತ್ತು ಅವನ ಸ್ಪರ್ಶ.
ಆ ದಿನ ಪಾಗಲ್ ಬಾಬಾ ಪ್ರಾಣ ಬಿಟ್ಟ ಮೇಲೆ ಇಡೀ ವಾತಾವರಣದಲ್ಲಿ ಒಂದು ಬಗೆಯ ಮೌನ ಆವರಿಸಿತು. ಆಗ ಮಾಸ್ತೋ ’ಇನ್ನು ಮುಂದೆ ನೀನೇ ನನ್ನ ಗುರು, ಪಾಗಲ್ ಬಾಬಾ ಮೂರುದಿನಗಳ ಹಿಂದೆಯೇ ಪ್ರಾಣತ್ಯಾಗ ಮಾಡಬೇಕಿತ್ತು. ನಿನಗೋಸ್ಕರ ಪ್ರಾಣವನ್ನು ತಡೆದಿದ್ದ. ಹಾಗೆಯೇ ನನ್ನ ಶ್ರೇಯಸ್ಸಿಗೂ ಕೂಡ’.  ಸಾಯುವ ಮುನ್ನ ಪಾಗಲ್ ಬಾಬಾನನ್ನು ’ಮಾಸ್ತೋ ಬಂದೊಡನೆ ನೀನು ಅಷ್ಟೊಂದು ಸಂತೋಷ ಪಟ್ಟೆಯಲ್ಲ, ಏಕೆ?’ ಎಂದು ಕೇಳಿದೆ. ಅದಕ್ಕವನು ’ಏನೋ, ಸಾಂಪ್ರದಾಯಿಕ ಮನಸ್ಸು, ಅದನ್ನು ಅಲ್ಲಿಗೇ ಬಿಟ್ಟು ಬಿಡು’ ಎಂದರು. ಹೀಗೆ ಈ ಮೂವರು ಜೀವನ್ಮುಕ್ತರು ನನ್ನ ಬದುಕಿನಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದರು. ಮತ್ತೆ ಇಂಥವರನ್ನು ನಾನು ನೋಡಲಿಲ್ಲ. ನಾನು ಜೀವನ್ಮುಕ್ತನಾದ ಮೇಲೆ ಇಂಥ ಇನ್ನೂ ಹಲವರನ್ನು ಭೇಟಿಯಾಗಿದ್ದೇನೆ. ನನ್ನ ಎಷ್ಟೋ ಜನ ಜೀವನ್ಮುಕ್ತಿ ಹೊಂದಿದ ಶಿಷ್ಯರನ್ನೂ ನಾನು ಭೇಟಿ ಮಾಡಿದ್ದೇನೆ. ಅದೆಲ್ಲ ಬೇರೆಯದೇ ಕಥೆ.
ಮಾಸ್ತೋ ಬಂದ ಮೇಲೆ ಪಾಗಲ್ ಬಾಬಾಗೆ ಎಷ್ಟು ನಿರಾಳವಾಯಿತೆಂದರೆ ಗಟ್ಟಿಯಾಗಿ ನಗುತ್ತ ಪ್ರಾಣಬಿಟ್ಟ. ಝರತುಷ್ಟ್ರ ಹುಟ್ಟುತ್ತಲೇ ಗಟ್ಟಿಯಾಗಿ ನಗುತ್ತ ಹುಟ್ಟಿದ ಎನ್ನುತ್ತಾರೆ. ಅದನ್ನು ಯಾರೂ ಕಂಡವರಿಲ್ಲವಾದರೂ ನಾನಂತೂ ಅದನ್ನು ನಂಬುತ್ತೇನೆ. ಏಕೆಂದರೆ ಅವನ ಇಡೀ ಚಾರಿತ್ರ್ಯವೇ ಅವನು ಹೇಗೆ ಹುಟ್ಟಿದ್ದಿರಬಹುದು ಎಂಬುದನ್ನು ಸೂಚಿಸುತ್ತದೆ. ಪಶ್ಚಿಮದ ಮಹಾ ಮೇಧಾವಿ ಫ್ರೆಡರಿಕ್ ನೀಷೆಗೆ ಅವನ ಬಗ್ಗೆ ಆಸಕ್ತಿ ಮೂಡಿದುದೂ ಈ ಕಾರಣಕ್ಕೇ. ಆದರೆ ಪಾಗಲ್ ಬಾಬಾರಂತು ನನ್ನ ಕಣ್ಣೆದುರಿಗೇ ಗಟ್ಟಿಯಾಗಿ ನಗುತ್ತ ದೇಹತ್ಯಾಗ ಮಾಡಿದರು. ಏಕೆ ನಕ್ಕ ಎಂಬ ಪ್ರಶ್ನೆಗೆ, ತತ್ವಜ್ಞಾನಿಯಲ್ಲದ ಅವನಿಂದಂತೂ ಉತ್ತರ ಸಿಗದು. ಆದರೂ ಎಂತಹ ಸಾವು ಅದು! ನಗುಮುಖದಲ್ಲಲ್ಲ, ಗಟ್ಟಿಯಾಗಿ ನಗುತ್ತಲೇ ಸತ್ತ. ಸುತ್ತ ನೆರೆದಿದ್ದ ಯಾರಿಗೂ ಅರ್ಥವಾಗಲಿಲ್ಲ, ಈ ಅರೆಹುಚ್ಚನಿಗೆ ಸಾಯುವ ಕಾಲಕ್ಕೆ ಪೂರ್ತಿ ಹುಚ್ಚು ಹಿಡಿಯಿತೇನೋ ಎಂದು ಭಾವಿಸಿಕೊಂಡರು. ಸ್ವಲ್ಪವಾದರೂ ಶಿಷ್ಟಾಚಾರ ಬೇಡವೇ? ಸಾಯುವ ಕಾಲದಲ್ಲಿ ಕೊನೆಯ ಪಕ್ಷ ತೋರಿಕೆಗಾದರೂ ಒಂದಿಷ್ಟು ದುಃಖ, ವಿಷಾದ ಇರಬೇಡವೇ? ಆದರೆ ಬಾಬಾ ಮೊದಲಿನಿಂದಲೂ ಶಿಷ್ಟಾಚಾರವೆಂದರೆ ಕೆಂಡವಾಗುತ್ತಿದ್ದ. ಅದಕ್ಕೇ ಅವನು ನನ್ನನ್ನು ಮಾಸ್ತೋನನ್ನು ಇಷ್ಟಪಡುತ್ತಿದ್ದುದು. ಮಾಸ್ತೋ ನನಗೆ ಎಷ್ಟೊಂದು ಉಪಕಾರ ಮಾಡಿದ! ಅದನ್ನೆಲ್ಲ ಬಾಯಿ ಬಿಟ್ಟು ಹೇಳಿದರೆ ಅವನಿಗೆ ಅಪಚಾರ ಮಾಡಿದ ಹಾಗಾಗುತ್ತದೆ.
ಮಾಸ್ತೋ ಎಂತಹ ಸ್ಫುರದ್ರೂಪಿ! ದೇವಲೋಕದ ಸುಖದಿಂದ ಬೇಸತ್ತು ಅಲ್ಲಿಂದ ಈಗತಾನೇ ಕೆಳಗಿಳಿದು ಬಂದವನಂತೆ ಕಾಣಿಸುತ್ತಿದ್ದ. ಅದು ಬರೀ ದೈಹಿಕ ಸೌಂದರ್ಯದ ಕುರಿತ ಮಾತಲ್ಲ. ಒಮ್ಮೊಮ್ಮೆ ನಾನು ಕಣ್ಮುಚ್ಚಿ ಅವನ ಮುಖವನ್ನು ಎರಡೂ ಕೈಗಳಿಂದ ಸ್ಪರ್ಶಿಸುತ್ತಿದ್ದೆ. ’ಅದೇಕೆ ಕಣ್ಣುಮುಚ್ಚಿಕೊಂಡು ಮುಟ್ಟಿನೋಡುವೆ ಎಂದು ಕೇಳುತ್ತಿದ್ದ’ ’ನಿನ್ನ ಸೌಂದರ್ಯವನ್ನು ಪೂರ್ತಿಯಾಗಿ ಕಲ್ಪಿಸಿಕೊಳ್ಳಬೇಕು ಅದಕ್ಕಾಗಿ ಹೀಗೆ ಮಾಡುತ್ತಿದ್ದೇನೆ’ ಎನ್ನುತ್ತಿದ್ದೆ. ’ನನ್ನ ಹುಚ್ಚು ಗುರು ತನಗಿಂತ ದೊಡ್ಡಹುಚ್ಚನೊಬ್ಬನನ್ನು ನನಗೆ ಕರುಣಿಸಿದ್ದಾನೆ. ಹಾಗಾಗಿ ನನ್ನ ಮುಖವಲ್ಲ, ನನ್ನ ತಲೆಯನ್ನೇ ನಿನಗೆ ಅರ್ಪಿಸಲೂ ನಾನು ಸಿದ್ಧ’ ಎನ್ನುತ್ತಿದ್ದ. ’ನಾನೇನೂ ನಿನ್ನ ತಲೆಯನ್ನು ತೆಗೆದುಕೊಳ್ಳುವುದಿಲ್ಲ, ಆ ಕೆಲಸವನ್ನು ನಿನ್ನ ಗುರು ಆಗಲೇ ಮಾಡಿ ಮುಗಿಸಿದ್ದಾನೆ. ಒಂದು ತೆಳು ಕೂದಲನ್ನು ಮಾತ್ರ ಹಾಗೆಯೇ ಉಳಿಸಿ ಹೋಗಿದ್ದಾನೆ’ ಎನ್ನುತ್ತಿದ್ದೆ. ನಮ್ಮ ಸಂಬಂಧ ಅಸಾಧಾರಣವಾದುದು, ಕೆಲವು ಸಲ ನನಗೆ ಹಣದ ಅವಶ್ಯಕತೆ ಇದ್ದಾಗ ನಾನು ನಿದ್ರಿಸಿದ ಮೇಲೆ ಸದ್ದಿಲ್ಲದೆ ನನ್ನ ಜೇಬಿನಲ್ಲಿ ಹಣವನ್ನಿರಿಸಿ ಹೊರಟು ಹೋಗುತ್ತಿದ್ದ. ಕೆಲವೊಮ್ಮೆ ನಾನು ನಿದ್ರಿಸುವಂತೆ ನಟಿಸುತ್ತಿದ್ದೆ, ಅವನಿಗೆ ನಂಬಿಕೆ ಬರಲು ಗೊರಕೆಯ ಸದ್ದೂ ಮಾಡುತ್ತಿದ್ದೆ. ಆಗ ಅವನು ಮೆಲ್ಲಗೆ ನನ್ನ ಜೇಬಿಗೆ ಕೈಹಾಕಲು ಎದ್ದಾಗ ಕೂಡಲೆ ಅವನ ಕೈಯನ್ನು ಹಿಡಿದು ’ಸಾಧುಗಳು ಮಾಡುವ ಕೆಲಸವೇ ಇದು’ ಎಂದು ಕೇಳುತ್ತಿದ್ದೆ. ನಾನು ಹಣದ ಪರ್ಸನ್ನು ಇಟ್ಟುಕೊಳ್ಳುವ ಅಭ್ಯಾಸ ಬಿಡಲು ಮಾಸ್ತೋನೇ ಕಾರಣ. ಹಣದ ಪರ್ಸುಗಳು ಜನರಲ್ಲಿ ಪ್ರಲೋಭನೆ ಹುಟ್ಟಿಸುತ್ತವೆ. ಜನಕ್ಕೆ ಅದನ್ನು ಕದಿಯಬೇಕೆನಿಸುತ್ತದೆ ಇಲ್ಲವೆ ಮಾಸ್ತೋರಂಥವರಿಗೆ ಅದರಲ್ಲಿ ಏನಾದರೂ ಹಾಕಬೇಕು ಎನಿಸುತ್ತದೆ.
ನನಗೆ ಹಣಕಾಸಿನ ಕೊರತೆಯಾಗದಿರಲೆಂದು ಹಲವು ಶ್ರೀಮಂತರ ಪರಿಚಯ ಮಾಡಿಸಿದ್ದ. ’ಇವರುಗಳಿಗೆ ನನ್ನ ಬಗ್ಗೆ ಅಪಾರ ಭಕ್ತಿ, ಗೌರವಗಳಿರುವುದಾದರೂ ಇವರು ಮಹಾ ಲೌಕಿಕರು. ಇವರಿಂದ ಹಣಕಾಸನ್ನು ಬಿಟ್ಟು ಬೇರೇನನ್ನೂ ನೀನು ಅಪೇಕ್ಷಿಸುವಂತಿಲ್ಲ’ ಎಂದು ಹೇಳಿದ್ದ. ಇಂದಿರಾಗಾಂಧೀ ಹಾಗು ಜವಾಹರಲಾಲ್ ನೆಹರೂ ಇವರ ಪರಿಚಯವಾದದ್ದೂ ಮಾಸ್ತೋ ಮೂಲಕವೇ. ಹಲವು ರಾಜಕಾರಿಣಿಗಳನ್ನು ಕಂಡು ಆಶಾವಾದವನ್ನೇ ಸಂಪೂರ್ಣ ಕಳೆದುಕೊಂಡಿದ್ದ ನನಗೆ ನೆಹರೂ ಭೇಟಿ ಅನಿರೀಕ್ಷಿತವಾದು. ನೆಹರೂ ರಾಜಕಾರಣದೊಳಗಿದ್ದೂ ತಮ್ಮೊಳಗಿನ ಚೆಲುವನ್ನು ಕಳೆದುಕೊಂಡಿರಲಿಲ್ಲ. ಆಗ ನನಗೆ ೨೦ ವರ್ಷ. ಇನ್ನೊಂದು ವರ್ಷಕ್ಕೆ ನನ್ನಿಂದ ಅಗಲಲಿದ್ದೇನೆ ಎಂದು ತಿಳಿದಿದ್ದ ಮಾಸ್ತೋ ಸಾಧ್ಯವಾದಷ್ಟೂ ’ದೊಡ್ಡ ದೊಡ್ಡ’ ವ್ಯಕ್ತಿಗಳ ಪರಿಚಯ ಮಾಡಿಸಿಬಿಡಲು ತವಕ ಪಡುತ್ತಿದ್ದ. ನೆಹರೂರನ್ನು ಭೇಟಿ ಮಾಡಿ ಹೊರಗೆ ಬಂದಾಗ ಇಂದಿರಾ ಗಾಂಧಿಯೂ ಎದುರಿಗೆ ಬಂದರು. ಆಗ ಇಂದಿರಾ ಇನ್ನೂ ರಾಜಕಾರಣಕ್ಕೆ ಇಳಿದಿರಲಿಲ್ಲ. ಅವರ ತಂದೆಯೇ ನನ್ನನ್ನು ಅವರಿಗೆ ಪರಿಚಯಿಸಿದರು. ಮಾಸ್ತೋಗೂ ಇಂದಿರಾರ ಪರಿಚಯ ಮೊದಲೇ ಇತ್ತೋ, ಇಲ್ಲವೋ ನನಗೆ ತಿಳಿಯದು. ಆದರೆ ನೆಹರೂರನ್ನು ಮುಖತಃ ಕಂಡ ಮೇಲೆ ಅವರ ಬಗ್ಗೆ ನನಗಿದ್ದ ಭಾವನೆಗಳೆಲ್ಲ ಸಂಪೂರ್ಣವಾಗಿ ಬದಲಾದವು. ಆ ದಿನ ಅವರು ನನ್ನೊಡನೆ ಸ್ವಾತಂತ್ರ್ಯದ ಬಗ್ಗೆ, ಸತ್ಯದ ಬಗ್ಗೆ ಮಾತನಾಡಿದರು. ಮಾತನಾಡುತ್ತಲೇ ಮಾಸ್ತೋಗೆ ’ಬಾಬಾ ಬಾಗಿಲನ್ನು ಸ್ವಲ್ಪ ಸರಿಸಿಬಿಡಿ. ಬೇಡದ ಜನ ಬಂದು ಸುಮ್ಮನೆ ತೊಂದರೆ ಕೊಡುತ್ತಾರೆ’ ಎಂದು ಹೇಳಿದರು. ಅವರಿಗೆ ನನ್ನ-ಅವರ ವಯಸ್ಸಿನ ಅಂತರ ಮುಖ್ಯವೆನಿಸಲೇ ಇಲ್ಲ. ’ಕತ್ತೆಗೆ ವಯಸ್ಸಾದರೆ ಕುದುರೆಯಾಗುವುದೇ? ವಯಸ್ಸಿಗೂ ವಿವೇಕಕ್ಕೂ ಸಂಬಂಧವಿಲ್ಲ’ ಎಂದು ಹೇಳಿ ನನ್ನ ಮಾತುಗಳನ್ನೂ ಅಷ್ಟೇ ಆಸಕ್ತಿಯಿಂದ ಕೇಳಿದರು. ಇಂತಹ ವರ್ತನೆಯನ್ನು ನಾನು ಅವರಿಂದ ನಿರೀಕ್ಷಿಸಿರಲಿಲ್ಲ. ಅವರ ಮುಖದ ಚೆಲುವು,..!, ಅದನ್ನು ಕಾಶ್ಮೀರಿಗಳಲ್ಲಿ ಮಾತ್ರ ಕಾಣಬಹುದು. ಮಾಸ್ತೋ ತನ್ನ ಎಲ್ಲ ಪರಿಚಿತ ವಲಯಗಳನ್ನೂ ನನಗೆ ಪರಿಚಯಿಸಲಿಲ್ಲ. ಅವನ ಪರಿಚಿತ ವಲಯ ಎಂಥದೆಂದು ಯಾರ ಊಹೆಗೂ ನಿಲುಕುವಂಥದಲ್ಲ. ಅವನು ತೋರಿಕೆಗೆ ಸಾಂಪ್ರದಾಯಿಕ ಸನ್ಯಾಸಿಯಂತೆ ಕಾಣಿಸುತ್ತಿದ್ದರೂ. ಆಂತರ್ಯದಲ್ಲಿ ನನ್ನಷ್ಟೇ ಬಂಡಾಯಗಾರನಾಗಿದ್ದ. ನನಗೆ ತೋರಿಕೆಯ ಅವಶ್ಯಕತೆ ಇರಲಿಲ್ಲ. ಆದರೆ ಅವನಿಗಿತ್ತು. ಈ ತೋರಿಕೆಯ ಬದುಕಿನಿಂದ ಅವನೆಷ್ಟು ಕಷ್ಟ ಪಟ್ಟಿರಬಹುದು ಎಂದು ಈಗ ನನಗೆ ಮನವರಿಕೆ ಆಗುತ್ತಿದೆ. ಜನಕ್ಕೆ ತೋರಿಕೆಯೇ ಬೇಕು. ನನ್ನನ್ನು ಜನ ವಿಷ್ಣುವಿನ ಹತ್ತನೆಯ ಅವತಾರ, ಕಲ್ಕಿಯ ಅವತಾರ ಎಂದು ಭಾವಿಸಿದ್ದರು. ಆ ಭಾವನೆಯನ್ನು ಒಡೆಯಲು ನನಗೆ ತುಂಬ ಪ್ರಯಾಸವೇ ಆಯಿತು. ಆ ಕಾಲದ ಜನಕ್ಕೆ ಹತ್ತರ ಆಚೆಗಿನ ಸಂಖ್ಯೆಗಳ ಎಣಿಕೆ ಬರುತ್ತಿರಲಿಲ್ಲ. ಹಾಗಾಗಿ ಅದೇ ಕೊನೆಯದು ಎಂದು ಭಾವಿಸಿದ್ದಾರೆ. ನನಗೂ ಕಲ್ಕಿಗೂ ಸಂಬಂಧವಿಲ್ಲ ಎಂದು ಅವರಿಗೆ ಹೇಳುತ್ತಿದ್ದೆ.
ನನ್ನ ಆತ್ಮಜ್ಞಾನದ ಹಿಂದಿನ ದಿನ ೨೨ರ ಮಾರ್ಚ್ ೧೯೫೩ರಂದು ಮಾಸ್ತೋ ಹಿಮಾಲಯಕ್ಕೆ ಹೋಗುವ ಸಂದರ್ಭದಲ್ಲಿ ನಾನು ಅವನನ್ನು ಕಣ್ಣೀರಿಟ್ಟು ಬೀಳ್ಕೊಟ್ಟಿದ್ದೆ. ಆ ದಿನ ನನ್ನನ್ನು ಮೊದಲ ಸಲ ’ಭಗವಾನ್’ ಎಂದು ಸಂಬೋಧಿಸಿದ್ದ. ಆಗ ’ಮಾಸ್ತೋ, ನಿನಗೇನಾದರೂ ಹುಚ್ಚು ಹಿಡಿದಿದೆಯೇ?’ ಎಂದು ಕೇಳಿದ್ದೆ. ಅಂದೇ ನಮ್ಮ ಕೊನೆಯ ಭೇಟಿ ಎಂದು ಅವನಿಗೆ ತಿಳಿದಿತ್ತೋ ಏನೋ ಆದರೆ ನನಗಂತೂ ತಿಳಿದಿರಲಿಲ್ಲ. ಈಗ ಅವನು ಬದುಕಿರುವನೋ, ಇಲ್ಲವೋ ತಿಳಿಯದು. ಆದರೆ ಬೀಳ್ಕೊಡುವಾಗ ’ಪಾಗಲ್ ಬಾಬಾ ನನಗೆ ವಹಿಸಿದ್ದ ಜವಾಬ್ದಾರಿ ಇಂದಿಗೆ ಮುಗಿಯಿತು. ಇನ್ನುಮುಂದೆ ನನಗೆ ನಿನ್ನ ಅಗತ್ಯವಿಲ್ಲ’ಎಂದು ಹೇಳಿದ ’ಇಲ್ಲ ಮಾಸ್ತೋ ನನಗೆ ನೀನು ಬೇಕು’ ಎಂದಿದ್ದೆ. ’ಇನ್ನು ಮುಂದೆ ನೀನು ಏನೆಲ್ಲ ಬಯಸುವೆಯೋ ಅದೆಲ್ಲ ನಿನಗೆ ಸಿಗಲಿದೆ. ಇನ್ನು ಕಾಯಲು ನನ್ನಿಂದಂತೂ ಸಾಧ್ಯವಿಲ್ಲ’ ಎಂದು ಹೊರಟೇ ಬಿಟ್ಟ. ಅಂದಿನಿಂದಲೂ ನಾನು ಹಿಮಾಲಯದಿಂದ ಹಿಂದಿರುಗಿದವರನ್ನೆಲ್ಲ ’ಅಲ್ಲಿ ಮಾಸ್ತೋನನ್ನು ಕಂಡಿರಾ?’ ಕೇಳುತ್ತಿದ್ದೇನೆ. ಹಿಮಾಲಯಕ್ಕೆ ಹೊರಟವರನ್ನೆಲ್ಲ ’ಅಲ್ಲಿ ಮಾಸ್ತೋ ಸಿಕ್ಕರೆ,..’ಎಂದು ಗೋಗರೆಯುತ್ತೇನೆ. ನೈನಿತಾಲ್‌ನಲ್ಲಿ ಕಂಡೆವು, ಕಲಿಂಪಾಂಗ್‌ನಲ್ಲಿ ಕಂಡೆವು ಎಂದು ಅವರಿವರು ಹೇಳುತ್ತಿರುತ್ತಾರೆ. ಆದರೆ ಅವನು ಹಾಗೆ ಎಲ್ಲೆಂದರಲ್ಲಿ ಸುಳಿವವನಲ್ಲ. ನನಗೇ ತಿಳಿದಂತೆ ಫೋಟೋ ತೆಗೆಸಿಕೊಳ್ಳಲೂ ಒಪ್ಪುತ್ತಿರಲಿಲ್ಲ.
ಸಾವಿನ ಭಯ
ಪ್ರತಿ ಏಳು ವರ್ಷಗಳಿಗೊಮ್ಮೆ ನನ್ನ ಮೇಲೆ ಸಾವು ಎರಗಲಿದೆ ಎಂಬ ಭವಿಷ್ಯವಾಣಿ ಇದ್ದುದರಿಂದ ನನಗೆ ಹದಿನಾಲ್ಕು ವಯಸ್ಸಾದಾಗ ನನ್ನ ಕುಟುಂಬದವರು ಮತ್ತೆ ಹೆದರಿದರು. ಆದರೆ ಈ ಸಲವೂ ನಾನು ಸಾವಿನಿಂದ ಪಾರಾದೆ. ಇನ್ನು ಹೀಗೆ ಸಾವಿಗೆ ಹೆದರಿ ಕೂರುವುದನ್ನು ಬಿಟ್ಟು ನಾನಾಗೇ ಸಾವನ್ನು ಎದುರಾಗಲು ನಿರ್ಧರಿಸಿಕೊಂಡೆ. ಏಳು ದಿನಗಳ ಕಾಲ ಶಾಲೆಗೆ ರಜಾ ಹಾಕಿ ’ನಾನು ಸಾಯಲು ಹೋಗುತ್ತಿದ್ದೇನೆ’ ಎಂದು ಮುಖ್ಯೋಪಾಧ್ಯಾಯರಿಗೆ ಹೇಳಿದೆ. ಅವರಿಗೆ ನನ್ನ ಮಾತು ಅರ್ಥವಾಗದೆ ನಾನೆಲ್ಲೋ ಆತ್ಮಹತ್ಯೆ ಮಾಡಿಕೊಳ್ಳಲಿದ್ದೇನೆ ಎಂದು ಹೆದರಿದರು. ಆಮೇಲೆ ಜ್ಯೋತಿಷಿಯ ಮಾತುಗಳನ್ನು ವಿವರಿಸಿ ಏಳು ದಿನಗಳ ಕಾಲ ಸಾವನ್ನು ಎದುರು ನೋಡುತ್ತೇನೆ ಎಂದು ಅವರಿಗೆ ವಿವರಿಸಿದೆ. ಊರಾಚೆಗಿನ ಒಂದು ಪಾಳು ದೇಗುಲವನ್ನು ಹುಡುಕಿಕೊಂಡು ಏಳು ದಿನಗಳ ಕಾಲ ಒಂದೇ ಕಡೆ ಮಲಗಿರಲು ವ್ಯವಸ್ಥೆ ಮಾಡಿಕೊಂಡೆ. ದಿನಕ್ಕೆ ಒಂದು ಬಾರಿ ಮಾತ್ರ ನನಗೆ ಆಹಾರ ನೀರುಗಳನ್ನು ಕೊಟ್ಟು ಹೋಗುವಂತೆ ಅಲ್ಲಿನ ಒಬ್ಬ ಅರ್ಚಕನನ್ನು ಒಪ್ಪಿಸಿದೆ. ಪ್ರತಿ ಕ್ಷಣವೂ ಇನ್ನೇನು ಮರುಕ್ಷಣವೇ ಸಾವು ಸಂಭವಿಸಲಿದೆ ಎಂದು ಭಾವಿಸುತ್ತ ಮಲಗಿದ್ದ ಆ ಏಳು ದಿನಗಳು ನನ್ನ ಬದುಕಿನ ತುಂಬ ಅದ್ಭುತವಾದ ಅನುಭವವಾಗಿದೆ. ಆ ಏಳು ದಿನಗಳ ಕಾಲ ಎಲ್ಲ ಚಿಂತೆಗಳೂ ನನ್ನಿಂದ ಹೊರ ಹೋದವು. ಎಲ್ಲ ಚಿಂತೆಗಳೂ ಬದುಕಿಗೆ ಸಂಬಂಧಪಟ್ಟವಲ್ಲವೇ? ಹಾಗೆ ನೋಡಿದರೆ, ಎಲ್ಲ ಚಿಂತೆಗಳನ್ನು ಪೋಷಿಸುವುದೇ ಬದುಕು! ಹೀಗೆ ಒಂದು ಮೂಲೆಯಲ್ಲಿ ಮಲಗಿದ್ದಾಗ ಮೂರನೆಯ ದಿನವೋ, ನಾಲ್ಕನೆಯ ದಿನವೋ ಒಂದು ಹಾವು ಬಾಗಿಲಿನಿಂದ ಒಳಗೆ ಪ್ರವೇಶಿಸಿತು. ನೋಡು ನೋಡುತ್ತಿದ್ದಂತೆಯೇ ಅದು ನನ್ನ ಸಮೀಪಕ್ಕೇ ಹರಿದುಬಂದಿತು. ’ಸಾವು ಹಾವಿನ ರೂಪದಲ್ಲಿ ಬರುವುದಾದರೆ ಬರಲಿ, ಅದನ್ನು ಎದುರುಗೊಳ್ಳಲೆಂದಲ್ಲವೇ ನಾನು ಕಾಯುತ್ತಿರುವುದು’ ಎಂದು ನನ್ನೊಳಗೇ ಧೈರ್ಯ ತಂದುಕೊಂಡು ಅಲುಗಾಡದೇ ಕುಳಿತೆ. ಆದರೆ ನನ್ನ ಸಮೀಪದಲ್ಲೇ ಹರಿದು ಮುಂದಕ್ಕೆ ಹೊರಟು ಹೋಯಿತು. ಆ ಕ್ಷಣದಲ್ಲಿ ಸಾವನ್ನು ವಿಷಾದವಿಲ್ಲದೆ ಬರಮಾಡಿಕೊಳ್ಳುವವನ ಬದುಕಿನಿಂದ ಭಯವೆಂಬುದು ತೊಲಗಿಹೋಗುತ್ತದೆ ಎಂದು ಹೊಳೆಯಿತು. ರಾತ್ರಿಯ ವೇಳೆ ಸೊಳ್ಳೆಗಳು ಕಚ್ಚುತ್ತಿದ್ದವು. ಒಂದೆರಡು ಸಲ ಸೊಳ್ಳೆಗಳನ್ನು ಹೊಡೆಯಲು ಪ್ರಯತ್ನಿಸಿದೆ ’ಇನ್ನೇನು ಕೆಲವು ದಿನಗಳಲ್ಲಿ ಈ ದೇಹ ಇದೇ ಜಾಗದಲ್ಲಿ ಸತ್ತು ಶವವಾಗಲಿದೆ. ಆಗ ಇದನ್ನು ಹೀಗೆ ಸೊಳ್ಳೆಗಳಿಂದ ಕಾಪಾಡುವವರು ಯಾರು?’ ಎಂದು ಕೊಂಡು ಆ ಪ್ರಯತ್ನವನ್ನೂ ನಿಲ್ಲಿಸಿದೆ. ಮರುಗಳಿಗೆಯೇ ಸೊಳ್ಳೆಯ ಕಾಟವೂ ನನ್ನಿಂದ ದೂರವಾಯಿತು. ಅದು ಕಚ್ಚಿ ರಕ್ತ ಹೀರುತ್ತಿತ್ತು. ಆದರೆ ನನಗೆ ನೋವೇ ಆಗುತ್ತಿರಲಿಲ್ಲ. ಯಾವುದೋ ದೇಹದ ರಕ್ತ ಹೀಗೆ ಹೀರಲಾಗುತ್ತಿದೆ ನಾನು ಅದಕ್ಕೆ ಸಾಕ್ಷಿಯಾಗಿ ನೋಡುತ್ತಿದ್ದೇನೆ ಎಂಬಂತೆ ನನಗೆ ಭಾಸವಾಗುತ್ತಿತ್ತು. ನನಗೂ ದೇಹಕ್ಕೂ ಸ್ಪಷ್ಟವಾದ ಒಂದು ಅಂತರ ಏರ್ಪಟ್ಟಿತು. ಸಾವನ್ನು ಮುಖಾಮುಖಿಯಾದ ಮರುಗಳಿಗೆಯೇ ಇಂಥದೊಂದು ಅಂತರ ಏರ್ಪಡುತ್ತದೆ. ಕಷ್ಟ, ಸುಖ, ಹಿಂಸೆ, ನೋವು ಇವುಗಳ ಸಹವಾಸದಲ್ಲೇ ನಾವು ಇಡೀ ಜೀವನವನ್ನು ತಳ್ಳುವುದು. ಆ ಏಳು ದಿನಗಳಲ್ಲಿ ನಾನು ಒಂದರ್ಥದಲ್ಲಿ ಸತ್ತಿದ್ದೆ. ಆಗ ಎಲ್ಲ ಸುಖ-ದುಃಖದ ಸಂವೇದನೆಗಳನ್ನು ನಾನು ಅತಿಕ್ರಮಿಸಿದ್ದೆ. ಹಾಗೆ ಸತ್ತದ್ದರಿಂದಲೇ ನಮ್ಮೊಳಗೆ ಎಂದಿಗೂ ಸಾಯದ ಪದಾರ್ಥವೊಂದು ಹುದುಗಿದೆ ಎಂಬ ಅರಿವಾದುದು. ಮತ್ತೆ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ನನ್ನ ಕುಟುಂಬದವರು ಆತಂಕ ಪಟ್ಟುಕೊಂಡರೂ ನಾನೇನೂ ತಲೆಕೆಡಿಸಿಕೊಳ್ಳಲಿಲ್ಲ. ಹೀಗೆ ಜ್ಯೋತಿಷಿಯ ಮಾತುಗಳು ಸುಳ್ಳು ಎಂದು ರುಜುವಾತಾಯಿತು. ಆದರೂ ನನಗಂತೂ ಅವನ ಭವಿಷ್ಯವಾಣಿಯಿಂದ ತುಂಬ ಉಪಕಾರವಾಯಿತು. ಅಷ್ಟು ಚಿಕ್ಕ ವಯಸ್ಸಿನಲ್ಲೇ ಸಾವಿನೊಂದಿಗೆ ಪ್ರಯೋಗ ಮಾಡುವ ಅವಕಾಶ ಉಂಟಾಯಿತು. ಏಳುದಿನಗಳ ಕಾಲ ಸತತವಾದ ಧ್ಯಾನದಲ್ಲಿ ಮುಳುಗಿದ್ದೆ. ಹೀಗೆ ಸಾವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾದರೂ ಅಲ್ಲೊಂದು ಕೊರತೆ ಇದೆ. ಇಂತಹ ಪ್ರಯೋಗಗಳು ಕೆಲವರನ್ನು ನಿಷ್ಕ್ರಿಯರನ್ನಾಗಿಸಬಹುದು, ಜಡರನ್ನಾಗಿ ಮಾಡಿಬಿಡಬಹುದು. ಅಂಥವರು ಬದುಕನ್ನೇ ಧ್ಯಾನಕ್ಕೆ ಬಳಸಿಕೊಳ್ಳುವುದು ಉತ್ತಮ. ನೆಪ ಯಾವುದಾದರೂ ಆಗಲಿ, ಬದುಕಾಗಲಿ, ಸಾವಾಗಲಿ, ತಪ ನೆರವೇರುವುದು ಮುಖ್ಯ.
ಆ ವಯಸ್ಸಿನಲ್ಲಿ ಸಾವು ನನ್ನಲ್ಲಿ ಅಸಾಧಾರಣವಾದ ಕುತೂಹಲವನ್ನು ಹುಟ್ಟಿಸಿತು. ನಮ್ಮ ಸಾವು, ನಾವು ಈತನಕ ಹೇಗೆ ಬದುಕಿದ್ದೆವು ಎನ್ನುವುದನ್ನು ಸೂಚಿಸುತ್ತದೆ. ಕ್ಷಣಭಂಗುರವಾದ ಸಾವಿನ ಗಳಿಗೆಯಲ್ಲಿ ನಮ್ಮ ಇಡೀ ಬದುಕಿನ ಚಾರಿತ್ರ್ಯವೇ ಪ್ರಕಟಗೊಳ್ಳುತ್ತದೆ. ಆ ಗಳಿಗೆಯಲ್ಲೇ ನಮ್ಮ ನಿಜವಾದ ಬಣ್ಣ ಬಯಲಾಗುವುದು. ಜೀವನವಿಡೀ ಕೃಪಣತೆಯಲ್ಲಿ ಬದುಕಿದವನು ಬಿಗಿಮುಷ್ಟಿ ಹಿಡಿದೇ ಸಾಯುತ್ತಾನೆ. ಸಮರ್ಪಣಾ ಭಾವದಲ್ಲಿ ಬದುಕಿದವನು ಸುಲಭವಾಗಿ ಪ್ರಾಣ ತ್ಯಜಿಸುತ್ತಾನೆ. ಒಬ್ಬ ವ್ಯಕ್ತಿ ಜೀವನವಿಡೀ ಯಾವ ಭಾವದಲ್ಲಿ ಬದುಕಿರುವನೋ ಅವನ ಸಾಮೀಪ್ಯದಲ್ಲಿದ್ದಾಗ ನಿಮ್ಮಲ್ಲೂ ಅದೇ ಭಾವ ಪ್ರಕಟವಾಗುತ್ತದೆ. ದುಃಖಿಯ ಬಳಿ ಕುಳಿತಾಗ ನಿಮಗೂ ದುಃಖವಾಗುತ್ತದೆ. ಇದೇ ಅನುಭವ ಸಾವಿನ ಸಂದರ್ಭದಲ್ಲೂ ಆಗುವುದುಂಟು.
ನಾನು ಚಿಕ್ಕವನಿದ್ದಾಗ ಒಮ್ಮೆ ನಮ್ಮ ಊರಿನ ದೇವಸ್ಥಾನದ ಅರ್ಚಕನೊಬ್ಬ ತೀರಿಕೊಂಡ. ಆತ ತುಂಬ ಸಾಧು ವ್ಯಕ್ತಿ. ನನ್ನನ್ನು ಕಂಡಾಗಲೆಲ್ಲ ಹಣ್ಣು, ಪ್ರಸಾದಗಳನ್ನು ಕೊಡುತ್ತಿದ್ದ. ಅವನು ಸತ್ತಾಗ ಊರ ಜನರೆಲ್ಲ ಅಲ್ಲಿ ನೆರೆದಿದ್ದರು. ನಾನೂ ಹೋಗಿದ್ದೆ. ಸಾಮಾನ್ಯವಾಗಿ ಚಿಕ್ಕಮಕ್ಕಳು ಶವಯಾತ್ರೆಗೆ ಬರುತ್ತಿರಲಿಲ್ಲ. ಅವನ ಹೆಣದ ಮುಂದೆ ನಿಂತೊಡನೆ ನಾನು ಗಹಗಹಿಸಿ ನಗಲಾರಂಭಿಸಿದೆ. ಅಪ್ಪನಿಗಂತೂ ಅಲ್ಲಿ ನೆರೆದಿದ್ದ ಎಲ್ಲರೆದುರಿಗೆ ನನ್ನ ಈ ವರ್ತನೆಯಿಂದ ತುಂಬ ಮುಜುಗರವಾಯಿತು. ಪದೇ ಪದೇ ಸುಮ್ಮನಿರಿಸಲು ಪ್ರಯತ್ನಿಸಿದರು. ಆದರೆ ಆ ನಗು ನನ್ನ ನಿಯಂತ್ರಣದಲ್ಲಿ ಇರಲಿಲ್ಲ. ಅಲ್ಲಿದ್ದ ಜನಕ್ಕೆಲ್ಲ ನನ್ನ ಬಗ್ಗೆ ಸಿಟ್ಟು ಬಂದಿತು. ನನ್ನನ್ನು ಕೂಡಲೆ ಅಲ್ಲಿಂದ ಮನೆಗೆ ಕರೆದೊಯ್ಯಲಾಯಿತು. ಮನೆಗೆ ಬಂದ ಮೇಲೆ ಅಪ್ಪ ನನ್ನ ವರ್ತನೆಗೆ ಸಿಡಿಮಿಡಿಗೊಂಡ. ’ನಗುವಂಥದ್ದು ಅಲ್ಲಿ ಏನಿತ್ತು’ ಎಂದು ಆಕ್ಷೇಪಿಸಿದ. ಆಗ ನಾನು ’ಆ ವ್ಯಕ್ತಿ ತುಂಬ ಸಮಾಧಾನದಿಂದ, ನಗುನಗುತ್ತ ಸತ್ತ. ಅವನ ಇಡೀ ಚೈತನ್ಯ ಗಹಗಹಿಸಿ ನಗುತ್ತಿತ್ತು. ಅವನ ಸಂತೋಷದಲ್ಲಿ ನಾನೂ ಭಾಗಿಯಾಗಬೇಕು ಎನಿಸಿತು’ ಎಂದು ಹೇಳಿದೆ.
ಅಂದಿನಿಂದ ಊರಿನ ಪ್ರತಿಯೊಂದು ಶವಯಾತ್ರೆಯಲ್ಲೂ ಭಾಗವಹಿಸುವ ಚಟವನ್ನು ಬೆಳೆಸಿಕೊಂಡೆ. ಅಪ್ಪ ಅಮ್ಮ ನನ್ನ ಈ ಹೊಸ ಅಭ್ಯಾಸವನ್ನು ಕಂಡು ಬೈಯುತ್ತಿದ್ದರು ’ಆ ಸತ್ತವನಿಗೂ, ನಿನಗೂ ಏನು ಸಂಬಂಧ? ಆ ಹೆಣದ ಹಿಂದೆ ಹೋಗುವಂಥದ್ದೇನು ನಿನಗೆ? ಇದೆಲ್ಲ ತುಂಬ ಅಮಂಗಳಕರ’ ಎನ್ನುತ್ತಿದ್ದರು. ’ಅವನಿಗೂ ನನಗೂ ಸಂಬಂಧವಿಲ್ಲ ನಿಜ. ಆದರೆ ನನಗೂ ಸಾವಿಗೂ ಸಂಬಂಧ ಉಂಟಲ್ಲವೇ? ನಾಳೆ ದಿನ ನಾನು ಸತ್ತ ಮೇಲೆ ನನ್ನ ಮುಂದೆ ಇತರರು ಹೇಗೆ ನಡೆದುಕೊಳ್ಳುತ್ತಾರೆ, ನಾನು ಇತರರೊಂದಿಗೆ ಸತ್ತ ಮೇಲೆ ಹೇಗೆ ವರ್ತಿಸುತ್ತೇನೆ ಎನ್ನುವುದು ನನ್ನ ಕುತೂಹಲ’. ’ನೀನು ವಿಚಿತ್ರವಾಗಿ ವಾದ ಮಾಡುತ್ತೀ’ ಎನ್ನುತ್ತಿದ್ದರು. ಅಂತಹ ಜಾಗಗಳಲ್ಲಿ ನಾನು ತುಂಬ ವಿಚಿತ್ರವಾದ ಕೆಲವು ಸಂಗತಿಗಳನ್ನು ಗಮನಿಸಿದ್ದೇನೆ. ಶವಯಾತ್ರೆಗಳಲ್ಲಿ, ನಾನು ಗಮನಿಸಿದ್ದು: ಅಲ್ಲಿ ಯಾರೂ ಸಾವಿನ ಬಗ್ಗೆ ಮಾತಾಡುವುದಿಲ್ಲ. ಚಿತೆಯ ಮೇಲೆ ಯಾರೋ ಒಬ್ಬನ ತಂದೆಯೋ, ತಾಯಿಯೋ, ಸಂಬಂಧಿಕನೋ ಉರಿದು ಬೂದಿಯಾಗುತ್ತಿದ್ದರೆ ಇವರು ಕೆಲಸಕ್ಕೆ ಬಾರದ ಮಾತುಗಳಲ್ಲಿ ತೊಡಗಿರುತ್ತಾರೆ. ಸಣ್ಣ ಸಣ್ಣ ಗುಂಪುಗಳನ್ನಾಗಿ ಮಾಡಿಕೊಂಡು ಸಿನೆಮಾವೊ, ರಾಜಕೀಯವೋ, ವ್ಯಾಪಾರವೋ ಮತ್ತೊಂದೋ, ಒಟ್ಟಿನಲ್ಲಿ ಸಾವಿನ ನೆನಪು ತರದ ಯಾವುದೇ ಮಾತುಗಳಲ್ಲಿ ಕಾಲ ಕಳೆಯುತ್ತಿರುತ್ತಾರೆ. ಆಗೆಲ್ಲ ನನಗೆ ಚಿತೆಯ ಮೇಲೆ ಉರಿಯುತ್ತಿರುವ ದೇಹ ಇವರಿಗೆ ತಮ್ಮದೇ ದೇಹವನ್ನು ನೆನಪಿಸುತ್ತಿರಬಹುದು ಎನ್ನಿಸುತ್ತಿತ್ತು. ನಾಳೆ ದಿನ ತಾವು ಸತ್ತರೆ ತಮ್ಮ ಶವಸಂಸ್ಕಾರಕ್ಕೆ ಜನರಿಲ್ಲದೆ ಹೋಗಬಾರದೆಂದು ಸಾವಿನ ಮನೆಗೆ ಹಾಜರಾಗುವರೇ ವಿನಃ ಸಾವಿನ ಗಂಭೀರ ಅನುಭವವನ್ನು ಪಡೆಯಲು ಬರುವ ಜನ ಇವರಲ್ಲ ಎಂದು ಸ್ಪಷ್ಟವಾಗಿ ಅನಿಸುತ್ತಿತ್ತು.
ನಿಮಗೆ ತಿಳಿದಿರಲಾರದು, ನಾನು ಹುಡುಗನಾಗಿದ್ದಾಗ ಒಬ್ಬ ಯುವತಿ ನನ್ನನ್ನು ಪ್ರೀತಿಸುತ್ತಿದ್ದಳು. ಆದರೆ ಅವಳು ಅಕಾಲದಲ್ಲಿ  ಮೃತ್ಯುವಶಳಾದಳು. ಸಾಯುವಾಗ ಅವಳ ಹಾಸಿಗೆಯ ಬಳಿಯಲ್ಲೇ ಇದ್ದ ನನಗೆ ಅವಳು ’ನಾನು ಮತ್ತೆ ಬರುತ್ತೇನೆ’ ಎಂದು ಹೇಳಿ ಸತ್ತಳು. ನನಗಂತೂ ತುಂಬ ದಿಗಿಲಾಯಿತು. ಈಗ ಅವಳು ಮತ್ತೆ ಹಿಂದಿರುಗಿದ್ದಾಳೆ. ಅವಳು ಸತ್ತದ್ದು ೧೯೪೭ರಲ್ಲಿ ನಮ್ಮ ಹಳ್ಳಿಯ ಡಾ.ಶರ್ಮ ಎಂಬವರ ಮಗಳು ಆಕೆ. ಈಗ ಅವಳು ನನ್ನ ಯೋಗಕ್ಷೇಮ ನೋಡಿಕೊಳ್ಳಲು ವಿವೇಕ್ ಆಗಿ ಮತ್ತೆ ಹುಟ್ಟಿದ್ದಾಳೆ. ವಿವೇಕ್‌ಗೆ ಇದಾವುದೂ ನೆನಪಿಲ್ಲ, ನಾನಾಗ ಅವಳನ್ನು ’ಗುಡಿಯಾ’ ಎಂದು ಕರೆಯುತ್ತಿದ್ದೆ. ಈಗ ವಿವೇಕ್‌ನನ್ನೂ ಹಳೆಯ ಸಂಬಂಧ ಕತ್ತರಿಸಿ ಹೋಗಬಾರದೆಂದು ಗುಡಿಯಾ ಎಂದೇ ಕರೆಯುತ್ತಿದ್ದೇನೆ. ಈ ಬದುಕು ನಾವಂದುಕೊಂಡಷ್ಟು ಸರಳವಾದುದಲ್ಲ. ಇದು ಒಂದು ಬದುಕಿನಿಂದ ಇನ್ನೊಂದು ಬದುಕಿಗೆ ಒಂದೇ ಸಮನೆ ಮುಂದುವರೆಯುತ್ತಿರುತ್ತದೆ. ಹಾಗೆ ನಾನು ಪ್ರೀತಿಸಿದ ಮೊದಲ ಹೆಣ್ಣು ಎಂದರೆ ಅದು ನನ್ನತ್ತೆ, ಅಂದರೆ ಗುಡಿಯಾಳ ತಾಯಿ. ಈಕೆಯನ್ನು ನಾನು ಅತ್ತೆ ಎಂದೇ ಕರೆಯುತ್ತಿದ್ದೆ. ಇವಳನ್ನು ನೋಡಿದರೆ ನನಗೆ ನನ್ನ ಆಜ್ಜಿಯ ನೆನಪೇ ಆಗುತ್ತಿತ್ತು. ಈಕೆ ಮಹಾಸಾಹಸಿ, ಮಹಾ ಧೈರ್ಯಶಾಲಿ. ತನ್ನ ಗಂಡನನ್ನು ಬಿಟ್ಟು ಪಾಕಿಸ್ಥಾನಕ್ಕೆ ಹೋದಳು, ಅಲ್ಲಿ ಜಾತಿಯಲ್ಲಿ ಬ್ರಾಹ್ಮಣಳಾದ ಈಕೆ ಒಬ್ಬ ಮುಸ್ಲಮಾನನನ್ನು ವರಿಸಿದಳು. ಧೈರ್ಯವನ್ನು ನಾನು ಯಾವಾಗಲೂ ಮೆಚ್ಚುತ್ತೇನೆ. ನಮ್ಮ ಧೈರ್ಯ ಹೆಚ್ಚಿದಷ್ಟೂ ನಾವು ಪರಮಾತ್ಮನಿಗೆ ಹತ್ತಿರವಾಗುತ್ತೇವೆ. ಕಟ್ಟಕಡೆಯ ಧೈರ್ಯವನ್ನು ಮಾಡಬಲ್ಲವನು ಮಾತ್ರ ಬುದ್ಧತ್ವಕ್ಕೇರಬಲ್ಲ. ಅಂಜುಕುಳಿಗಳು ದುಡ್ಡು ಕಾಸು, ಆಸ್ತಿ ಪಾಸ್ತಿ ಇತ್ಯಾದಿಗಳಲ್ಲಿ ಮುಳುಗಿ ನಾಶವಾಗುತ್ತಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ
ಭಾರತದ ಸ್ವಾತಂತ್ರ್ಯ ಗಳಿಕೆ ನಿಮ್ಮ ಮೇಲೆ ಯಾವ ಪ್ರಭಾವ ಉಂಟು ಮಾಡಿತು ಎಂದು ಕೇಳಿದ್ದೀರಿ. ನಾನು ಮೊದಲಿನಿಂದಲೂ ಸ್ವಲ್ಪ ವಿಚಿತ್ರ ಸ್ವಭಾವದವನೇ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಾನು ಬ್ರಿಟಿಷರ ಪರವಾಗಿಯೇ ಇದ್ದೆ. ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ರೈಲ್ವೇ, ರಸ್ತೆ, ಕಾರುಗಳು, ವಿಮಾನಗಳು ಇವೆಲ್ಲ ಭಾರತಕ್ಕೆ ಪಾದಾರ್ಪಣೆ ಮಾಡಿದ್ದೇ ಬ್ರಿಟಿಷರ ಆಡಳಿತಾವಧಿಯಲ್ಲಿ. ಬ್ರಿಟಿಷರ ಆಕ್ರಮಣ ನಡೆಯದೆ ಹೋಗಿದ್ದರೆ ನಮ್ಮದೇಶ ಈಗಲೂ ಇಥಿಯೋಪಿಯಾದ ತರಹವೇ ಇರುತ್ತಿತ್ತು ಎಂದು ವಾದಿಸುತ್ತಿದ್ದೆ. ಬ್ರಿಟಿಷರು ಬರುವ ಮುನ್ನ ಗಂಡನನ್ನು ಕಳೆದುಕೊಂಡ ಹೆಣ್ಣುಮಕ್ಕಳನ್ನು ಚಿತೆಗೆ ಹಾಕಿ ಸುಡುತ್ತಿದ್ದರು. ಆದರೆ ಹೆಂಡತಿಯನ್ನು ಕಳೆದುಕೊಂಡವನನ್ನು,..! ಧರ್ಮದ ಹೆಸರಿನಲ್ಲಿ ಹೀಗೆ ಗಂಡಸರು ಇಲ್ಲಿ ತಮ್ಮ ಸಾವಿನ ಬಳಿಕವೂ ಹೆಣ್ಣಿನ ಮೇಲಿನ ದಬ್ಬಾಳಿಕೆಯನ್ನು ಮುಂದುವರೆಸಿದ್ದರು. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಇಂಥ ಆಚರಣೆಯ ಮೇಲೆ ಕಾನೂನಾತ್ಮಕ ನಿಷೇಧ ಹೇರಿದ ಬ್ರಿಟಿಷರಿಗೆ ನಾವು ಆಭಾರಿಗಳಾಗಿರಬೇಡವೇ. ಇಂಥ ನೆಲವನ್ನು ಆಧ್ಯಾತ್ಮಿಕ ದೇಶ ಎನ್ನಬೇಕೇ? ಇದು ಧರ್ಮಭೂಮಿ, ಹಿಂದೆಲ್ಲ ಇಲ್ಲಿ ಮನೆಗಳಿಗೆ ಬೀಗಗಳನ್ನೇ ಹಾಕುತ್ತಿರಲಿಲ್ಲ ಎಂದೆಲ್ಲ ಹೇಳುತ್ತಾರೆ. ನಿಜವೇನೆಂದರೆ ಇವರ ಮನೆಗಳಲ್ಲಿ ಒಡವೆಗಳೇ ಇರಲಿಲ್ಲ, ಅಲ್ಲದೆ ಆಗ ಇವರು ಇನ್ನೂ ಬೀಗವನ್ನೂ ಕಂಡು ಹಿಡಿದಿರಲಿಲ್ಲ. ಇದು ಮಹಾ ಸೋಮಾರಿ ಹಾಗು ದರಿದ್ರ ದೇಶ. ಈ ಜನ ಹಸಿದ ಹೊಟ್ಟೆಯಲ್ಲಿ ಮಲಗುವರೇ ವಿನಃ, ದುಡಿದು ಶ್ರೀಮಂತರಾಗುವ ಮನಸ್ಸು ಮಾಡುವವರಲ್ಲ. ಬ್ರಿಟಿಷರು ಬರುವ ಮುನ್ನ ಇಲ್ಲಿ ಒಬ್ಬೊಬ್ಬನೂ ಹತ್ತಿಪ್ಪತ್ತು ಮಕ್ಕಳನ್ನು ಹುಟ್ಟಿಸುತ್ತಿದ್ದ. ಹತ್ತರಲ್ಲಿ ಒಂದು ಮಗು ಉಳಿಯುತ್ತಿತ್ತು. ಬ್ರಿಟಿಷರೊಂದಿಗೆ ಇಲ್ಲಿ ವೈದ್ಯಕೀಯ ವಿಜ್ಞಾನ, ಆಧುನಿಕತೆಗಳು ಕಾಲಿಟ್ಟ ಮೇಲೆ ಹತ್ತರಲ್ಲಿ ಒಂದು ಮಗು ಮಾತ್ರ ಸಾಯುತ್ತಿತ್ತು. ಆ ಒಂದು ಮಗು ಕೂಡ ಇವರ ಮೂರ್ಖತನದಿಂದಲೇ ಸಾಯುತ್ತಿದ್ದುದು. ಗಾಂಧಿಯಂತಹವರು ಲಸಿಕೆಗಳನ್ನು, ಆಧುನಿಕ ಔಷಧಿಗಳನ್ನು ವಿರೋಧಿಸುತ್ತಿದ್ದರು. ಬ್ರಿಟಿಷರ ಮೂಲಕ ಈ ನೆಲವನ್ನು ಪ್ರವೇಶಿಸಿದ ಪ್ರತಿಯೊಂದನ್ನೂ ವಿರೋಧಿಸುತ್ತಿದ್ದರು. ಚರಕದ ಅನಂತರ ಆವಿಷ್ಕರಿಸಲಾದ ಪ್ರತಿಯೊಂದನ್ನೂ ವಿರೋಧಿಸುತ್ತಿದ್ದರು. ಬೈಬಲ್ಲಿನ ಮಾತುಗಳಲ್ಲಿ ಹೇಳುವುದಾದರೆ ಪರಮಪಿತನು ಆರನೆಯ ದಿನ ಚರಕ ಕಂಡುಹಿಡಿದು ಸುಮ್ಮನಾದ. ಆಮೇಲೆ ಕಂಡುಹಿಡಿದ ಪ್ರತಿಯೊಂದೂ ಸೈತಾನನ ಅನ್ವೇಷಣೆಯೇ. ನಮ್ಮ ಹಳ್ಳಿಗಳಲ್ಲಿ ತಂಬಾಕು ಸೇದುವ ಜನ ಎರಡು ಬೆಣಚುಕಲ್ಲುಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದುದನ್ನು ನಾನೇ ಕಣ್ಣಾರೆ ನೋಡಿದ್ದೇನೆ. ಕಲ್ಲನ್ನು ಉಜ್ಜಿ ಹತ್ತಿ ಇಟ್ಟು ಬೆಂಕಿ ತಯಾರಿಸಿಕೊಂಡು ಸೇದುತ್ತಿದ್ದರು. ಈಗಲೂ ಅಲ್ಲಿ ಅಂತಹ ಜನ ಇರಬಹುದು. ನಾನು ನನ್ನ ಹಳ್ಳಿಗೆ ಕಾಲಿಟ್ಟು ತುಂಬ ವರ್ಷಗಳಾದವು. ನಾನು ಮಾರ್ಕ್ಸ್‌ವಾದಿ ಅಲ್ಲದಿದ್ದರೂ ’ಧರ್ಮಗಳು ಬಡವರ ಪಾಲಿನ ಅಫೀಮುಗಳಾಗಿವೆ’ ಎಂಬ ಅವನ ಮಾತುಗಳನ್ನು ಅಲ್ಲಗಳೆಯಲಾರೆ. ಒಂದು ದಿನ ನನ್ನ ಹಳ್ಳಿಯಲ್ಲಿ ಒಬ್ಬ ಕೂಲಿ ಹೆಂಗಸನ್ನು ನೋಡಿ ನನಗೆ ನಿಜಕ್ಕೂ ಆಘಾತವಾಯಿತು. ಅವಳು ಒಂದೆಡೆ ಕೂಲಿ ಕೆಲಸ ಮಾಡುತ್ತಿದ್ದರೆ ಇನ್ನೊಂದೆಡೆ ಮರದಡಿಯಲ್ಲಿ ಅವಳ ಮಕ್ಕಳು ತಮ್ಮ ಪಾಡಿಗೆ ತಾವು ಸಂತೋಷವಾಗಿ ಆಟ ಆಡಿಕೊಳ್ಳುತ್ತಿದ್ದವು. ನಾನು ಅವಳ ಹತ್ತಿರ ಹೋಗಿ ’ನೀನು ತುಂಬ ಅದೃಷ್ಟವಂತೆ. ನಿನ್ನ ಮಕ್ಕಳು ಒಂದಿಷ್ಟೂ ಚೇಷ್ಟೆ ಮಾಡದೆ, ಹಟ ಮಾಡದೆ ಒಂದೇ ಕಡೆ ಕುಳಿತು ಆಟವಾಡಿಕೊಳ್ಳುತ್ತಿವೆಯಲ್ಲ’ ಎಂದೆ. ಅದಕ್ಕೆ ಅವಳು ’ಅವಕ್ಕೆ ಒಂದಿಷ್ಟು ಅಫೀಮು ಕುಡಿಸಿಬಿಡುತ್ತೇನೆ, ಅದಕ್ಕೇ ಅವು ಮಳೆ ಬಿಸಿಲು, ಹಸಿವು, ಬಾಯಾರಿಕೆ ಎಲ್ಲವನ್ನೂ ಮರೆತು ಆಡಿಕೊಳ್ಳುತ್ತವೆ, ಅವುಗಳ ಆರೈಕೆ ಮಾಡುತ್ತ ಕುಳಿತರೆ ಕೂಲಿ ಮಾಡುವುದು ಹೇಗೆ?’ ಎಂದಳು. ಇದು ಬರೀ ಬಡತನ, ಹಸಿವಿನ ಪ್ರಶ್ನೆ ಮಾತ್ರವಲ್ಲ. ಇಲ್ಲಿ ಗತಿ ಇಲ್ಲದವರೂ ಸಹ ಕರ್ಮಫಲ, ವಿಧಿಬರಹ ಇತ್ಯಾದಿ ಅರ್ಥಹೀನ ಸಿದ್ಧಾಂತಗಳನ್ನು ನಂಬಿಕೊಂಡು ನೆಮ್ಮದಿಯಾಗಿ ಬದುಕಿಬಿಡುತ್ತಾರೆ.
ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ನಮ್ಮ ಮನೆ ಎಲ್ಲ ಪಿತೂರಿಗಳ ಕೇಂದ್ರವಾಗಿತ್ತು. ಕೆಲವು ಭೂಗತ ಕ್ರಾಂತಿಕಾರಿಗಳು ನಮ್ಮ ಮನೆಯಲ್ಲೇ ವಾರಗಟ್ಟಲೆ ಇಳಿದುಕೊಳ್ಳುತ್ತಿದ್ದರು. ಪ್ರಸಿದ್ಧ ಕ್ರಾಂತಿಕಾರಿ, ಸಮಾಜವಾದೀ ಪಕ್ಷದ ಹಿರಿಯ ನಾಯಕ ಭವಾನೀ ಪ್ರಸಾದ್ ತಿವಾರಿ ತಲೆ ಮರೆಸಿಕೊಳ್ಳಬೇಕಾದಾಗಲೆಲ್ಲ ನಡುರಾತ್ರಿಯಲ್ಲಿ ನಮ್ಮ ಮನೆಗೆ ಬಂದುಬಿಡುತ್ತಿದ್ದ. ನನ್ನ ಇಬ್ಬರು ಚಿಕ್ಕಪ್ಪಂದಿರು ಜೈಲಿಗೆ ಹೋಗಿ ಬಂದಿದ್ದು ಪ್ರತಿವಾರ ಪೊಲೀಸ್ ಠಾಣೆಗೆ ಹೋಗಿ ಸಹಿ ಹಾಕಿ ಬರುತ್ತಿದ್ದರು. ಪೊಲೀಸರ ಅನುಮತಿ ಇಲ್ಲದೆ ಊರು ಬಿಟ್ಟು ಹೊರಗೆ ಹೋಗುವಂತಿರಲಿಲ್ಲ. ನಮ್ಮ ಎಲ್ಲ ಸಂಕಟಗಳಿಗೂ ಬ್ರಿಟಿಷರೆ ನೇರ ಹೊಣೆ ಎಂದು ದೃಢವಾಗಿ ನಂಬಿಕೊಂಡು, ಸ್ವಾತಂತ್ರ್ಯದೊಡನೆ ಸ್ವರ್ಗವೇ ನಮಗೆ ಸಿಕ್ಕು ಬಿಡುತ್ತದೆ ಎನ್ನುವಂತೆ ವರ್ತಿಸುತ್ತಿದ್ದ ಇವರನ್ನು ನೋಡಿ ನನಗೆ ಸೋಜಿಗವಾಗುತ್ತಿತ್ತು. ನನ್ನ ಪ್ರಶ್ನೆಗಳನ್ನು ಕೇಳಿ ಇವರಿಗೆಲ್ಲ ಎಷ್ಟು ಮುಜುಗರವಾಗುತ್ತಿತ್ತೆಂದರೆ ’ನಿನ್ನ ಪ್ರಶ್ನೆಗಳನ್ನು ಎದುರಿಸುವುದಕ್ಕಿಂತ, ಪೊಲೀಸರಿಗೆ ಸಿಕ್ಕಿ ಹಾಕಿಕೊಂಡು ರಾಜಕೀಯ ಖೈದಿಗಳಾಗಿ ಜೈಲುವಾಸ ಅನುಭವಿಸುವುದು ಎಷ್ಟೋ ಮೇಲು, ನೆಮ್ಮದಿಯಾಗಿ ಆದರೂ ಇರಬಹುದು’ಎನ್ನುತ್ತಿದ್ದರು. ರಾಜಕೀಯ ಖೈದಿಗಳಿಗೆ ಓದಲು ಪುಸ್ತಕಗಳನ್ನು ಕೊಡುತ್ತಾರೆ, ಕಠಿಣ ಶ್ರಮದ ಕೆಲಸ ಕೊಡುವುದಿಲ್ಲ. ೨೦ನೇ ಶತಮಾನದ ಎಲ್ಲ ಆತ್ಮಕಥೆಗಳೂ ಜೈಲುಗಳಲ್ಲೇ ರಚಿತವಾದುದು. ಕೆಲವೊಮ್ಮೆ ಅಂತಹ ಖೈದಿಗಳನ್ನು ಅರಮನೆಗಳಲ್ಲೂ ಇರಿಸುವುದುಂಟು. ಗಾಂಧೀ ಪೂನಾದ ಆಗಾಖಾನ್ ಅರಮನೆಯಲ್ಲಿ ಜೈಲುವಾಸ ಅನುಭವಿಸಿದ್ದರು, ಅದೂ ತಮ್ಮ ಹೆಂಡತಿಯೊಡನೆ! ಕಸ್ತೂರ್ ಬಾ ಸತ್ತದ್ದೂ ಆಗಾಖಾನ್ ಅರಮನೆಯಲ್ಲೇ, ಅವರ ಸಮಾಧಿಯೂ ಅಲ್ಲೇ ನಿರ್ಮಾಣವಾಗಿದೆ. ಆಗ ನಾನು ತಿವಾರಿಗೆ ’ಈ ಪ್ರಶ್ನೆಗಳನ್ನು ನಾಳೆಯ ದಿನ ಸ್ವಾತಂತ್ರ್ಯ ಬಂದ ಮೇಲೆ ನಿಮ್ಮ ಪ್ರಜೆಗಳೇ ಕೇಳುತ್ತಾರೆ, ಅವರಿಗೆ ಏನು ಉತ್ತರ ಹೇಳುವಿರಿ’ ಎನ್ನುತ್ತಿದ್ದೆ ’ಬ್ರಿಟಿಷರು ತೊಲಗುವುದಕ್ಕೂ ಬಡತನ ನಿವಾರಣೆಗೂ ಎತ್ತಣಿಂದೆತ್ತ ಸಂಬಂಧ, ಅವರು ಬರುವ ಮುನ್ನ ನಮ್ಮದೇಶವೇನು ಬಡತನದಲ್ಲಿ ಇರಲಿಲ್ಲವೇ?’ ಎಂದು ಕೇಳುತ್ತಿದ್ದೆ. ಹಾಗೊಂದು ಬಡತನವನ್ನು ನಿವಾರಿಸುವುದಾದರೆ ಹೇಗೆ ನಿವಾರಿಸುವಿರಿ. ಇಲ್ಲಿ ಬ್ರಿಟಿಷರ ಆಡಳಿತಕ್ಕೆ ಸಂಬಂಧವೇ ಇಲ್ಲದ ಸಾವಿರಾರು ಸಮಸ್ಯೆಗಳಿವೆಯಲ್ಲ, ಅವನ್ನೆಲ್ಲ ಹೇಗೆ ಪರಿಹರಿಸುವಿರಿ? ಹೆಂಡತಿಯ ಕಿರುಕುಳ ಅನುಭವಿಸುತ್ತಿರುವ ಗಂಡನ ಸಮಸ್ಯೆಗೆ ಪರಿಹಾರವೇನು? ಬ್ರಿಟಿಷರು ಹೋದರೂ ಹೆಂಡತಿ ಇದ್ದೇ ಇರುವಳಲ್ಲ!’ ಆಗ ’ಮೊದಲು ಸ್ವಾತಂತ್ರ್ಯ ಬರಲಿ, ನಿನ್ನ ಪ್ರಶ್ನೆಗಳಿಗೆ ತಾನಾಗಿಯೇ ಸಮಾಧಾನ ಸಿಗುತ್ತದೆ’ ಎಂದು ಹೇಳುತ್ತಿದ್ದ.
೧೯೪೭ರಲ್ಲಿ ಸ್ವಾತಂತ್ರ್ಯ ಲಭಿಸಿತು. ನಮ್ಮ ಇಡೀ ಕುಟುಂಬ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿತ್ತು. ನಾನು ಜೈಲುವಾಸ ಅನುಭವಿಸದಿದ್ದರೂ ಹೋರಾಟದ ಬಿಸಿ ನನಗೂ ತಾಗದೇ ಇರಲಿಲ್ಲ. ನಮ್ಮ ಮನೆಯ ಗಂಡಸರನ್ನೆಲ್ಲ ಜೈಲುಗಳಲ್ಲಿ ತುಂಬಿಸಿದ್ದರಿಂದ ದುಡಿಯುವ ಗಂಡಸರಿಲ್ಲದೇ ಮನೆಯ ಹೆಂಗಸರು, ಮಕ್ಕಳ ಹೊಟ್ಟೆಪಾಡಿಗೂ ಗತಿ ಇಲ್ಲದಂತಾಗಿತ್ತು. ಹಿಂದೆ ಬ್ರಿಟಿಷರಿಗೆ ಭಾರತ ಒಂದು ಸಂಪತ್ತಿನ ಗಣಿಯಾಗಿತ್ತು, ಆದರೆ ತರುವಾಯ ಅವರಿಗೆ ಭಾರತ ಒಂದು ಹೊರೆಯಾಗಿ ಪರಿಣಮಿಸಿತು. ಹೀರಬೇಕಾದುದನ್ನೆಲ್ಲ ಅವರು ಹೀರಿ ಆಗಿತ್ತು. ಇಲ್ಲಿ ಅವರಿಗೆ ಇನ್ನೇನು ಕೆಲಸ? ಆಮೇಲೆ ಅವರಿಗೂ ಇಲ್ಲಿಂದ ತೊಲಗಿದರೆ ಸಾಕಾಗಿತ್ತು. ಹಾಗೆ ನೋಡಿದರೆ ಸ್ವಾತಂತ್ರ್ಯ ಚಳವಳಿ ೧೯೪೨ರಲ್ಲೇ ತೀವ್ರವಾಗಿ ಪ್ರಾರಂಭವಾಗಿತ್ತು. ಆ ಚಳವಳಿಯನ್ನು ಅವರು ಒಂಬತ್ತೇ ದಿನಗಳಲ್ಲಿ ಹತ್ತಿಕ್ಕಿದ್ದರು. ಇದಾದ ಐದು ವರ್ಷಗಳ ನಂತರ ಅಂದರೆ ೧೯೪೭ರಲ್ಲಿ ಅವರು ತಾವಾಗಿಯೇ ಭಾರತವನ್ನು ಸ್ವತಂತ್ರಗೊಳಿದರು. ಏನಿದರ ಅರ್ಥ? ’ಇದು ನಿಮ್ಮ ಹೋರಾಟಕ್ಕೆ ಸಂದ ಜಯವೇ? ಐದುವರ್ಷಗಳ ಹಿಂದಿನ ನಿಮ್ಮ ಚಳವಳಿಗೂ, ಇಂದಿನ ಸ್ವಾತಂತ್ರ್ಯ ಪ್ರಾಪ್ತಿಗೂ ನನಗೆ ಯಾವ ತಾರ್ಕಿಕ ಸಂಬಂಧವೂ ಕಾಣಿಸುತ್ತಿಲ್ಲ’ ಎಂದು ಅಪ್ಪನನ್ನು ಕೇಳುತ್ತಿದ್ದೆ.
ಅಂದಿನ ಬ್ರಿಟನ್ ಪ್ರಧಾನಿ ರಿಚರ್ಡ್ ಆಟ್ಲೀ ಇಲ್ಲಿನ ವೈಸ್‌ರಾಯ್‌ಗೆ ’ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅಲ್ಲಿಂದ ಬಂದುಬಿಡು. ೧೯೪೮ರ ಹೊತ್ತಿಗೆ ಯಾವ ಕಾರಣಕ್ಕೂ ನಾವು ಅಲ್ಲಿ ಇರಕೂಡದು’ ಸಂದೇಶ ಕಳುಹಿಸಿದ್ದನಂತೆ. ದೇಶ ವಿಭಜನೆ ಸ್ವಾತಂತ್ರ್ಯದೊಂದಿಗೆ ನಮಗೆ ಬಂದ ಮೊದಲ ಬಳುವಳಿ. ಸಾವಿರದ ನಾಲ್ಕು ನೂರು ವರ್ಷಗಳಿಂದ ಸಮಸ್ಯೆಯೇ ಇಲ್ಲದೆ ಒಂದಾಗಿ ಬದುಕುತ್ತಿದ್ದ ಮುಸ್ಲಿಮರಿಗೆ ಆಮೇಲೆ ಇದ್ದಕ್ಕಿದ್ದಂತೆ ತಾವು ಪ್ರತ್ಯೇಕರಾಗಬೇಕು ಎನಿಸಿಬಿಟ್ಟಿತು. ನಾನು ಚಿಕ್ಕವನಿದ್ದಾಗ ಎಷ್ಟೋ ಮುಸ್ಲಿಂ ಆಚರಣೆಗಳಲ್ಲಿ ಭಾಗವಹಿಸಿದ್ದೆ, ಅವರೂ ನಮ್ಮ ಮದುವೆ ಸಮಾರಂಭಗಳಿಗೆ ಬಂದು ನೆರವಾಗುತ್ತಿದ್ದರು. ಎಲ್ಲರೂ ಬ್ರಿಟಿಷರ ವಿರುದ್ಧ ಹೋರಾಡಬೇಕಾದ ಸಂದರ್ಭ ಇದ್ದುದರಿಂದ ಆಗ ಪರಸ್ಪರ ಕಿತ್ತಾಡುವ ಪ್ರಮೇಯವೇ ಇರಲಿಲ್ಲ. ಆದರೆ ಈಗ ’ಸ್ವಾತಂತ್ರ್ಯ ಸಿಗದಿದ್ದರೂ ಚಿಂತೆಯಿಲ್ಲ, ಹಿಂದೂಗಳೊಂದಿಗೆ ಒಂದಾಗಿ ಬಾಳೆವು’ ಎಂಬ ಕಠೋರ ತೀರ್ಮಾನಕ್ಕೆ ಬರುವ ಕಾರಣವಾದರೂ ಏನು?
ಇಲ್ಲಿ ನನಗೆ ಬ್ರಿಟಿಷರ ಎರಡು ತಪ್ಪುಗಳು ಕಾಣಿಸುತ್ತವೆ. ಮೊದಲನೆಯದಾಗಿ ಅವರು ಈ ದೇಶಕ್ಕೆ ಬಂದು ಆಡಳಿತ ಮಾಡಬಾರದಿತ್ತು. ಆಡಳಿತ ನಡೆಸಿದ ಮೇಲೆ ಹೇಡಿಗಳ ಹಾಗೆ ಇದ್ದಕ್ಕಿದ್ದಂತೆ ಇಲ್ಲಿಂದ ಪಲಾಯನ ಮಾಡಬಾರದಿತ್ತು. ಹಿಂದೂ ಮುಸ್ಲಿಮರು ಪರಸ್ಪರ ಕಾದಾಡದ ಹಾಗೆ ವಾತಾವರಣವನ್ನು ನಿರ್ಮಿಸಿಕೊಟ್ಟು ಬಳಿಕ ಇಲ್ಲಿಂದ ಕಾಲ್ತೆಗೆಯ ಬೇಕಾಗಿತ್ತು. ಅದು ಅವರಿಗೆ ಸಾಧ್ಯವೂ ಇತ್ತು, ಅವರ ಕರ್ತವ್ಯವೂ ಆಗಿತ್ತು. ಕೊನೆಕೊನೆಗೆ ಬ್ರಿಟಿಷರು ತುಂಬ ಬೇಕಾಬಿಟ್ಟಿಯಾಗಿ ನಡೆದುಕೊಂಡರು. ಭಾರತದ ಸ್ವಾತಂತ್ರ್ಯವನ್ನು ನಿರ್ಧರಿಸಲೆಂದೇ ಮೌಂಟ್ ಬ್ಯಾಟನ್‌ನನ್ನು ಅಲ್ಲಿಂದ ಇಲ್ಲಿಗೆ ಕಳುಹಿಸಿದ್ದರು. ಅವನೇನು ಮುತ್ಸದ್ದಿಯೇ?. ರಾಜಕೀಯದ ಬಗ್ಗೆ ಏನೇನೂ ಗೊತ್ತಿಲ್ಲದ ಅವನು ಜೀವಮಾನವಿಡೀ ಉಡಾಫೆ ಮಾಡಿಕೊಂಡಿದ್ದವನು. ಅವನು ಇನ್ನೆಲ್ಲಿ ತಮ್ಮ ಹೆಂಡತಿಯರ ಮೇಲೆ ಕಣ್ಣಿಡುತ್ತಾನೋ ಎಂದು ಹೆದರಿ ಅಲ್ಲಿನ ರಾಜಕಾರಣಿಗಳು ಅವನನ್ನು ಇಲ್ಲಿಗೆ ಕಳುಹಿಸಿದ್ದು. ಮೊದಲು ಅವನು ಬರ್ಮಾದಲ್ಲಿದ್ದ, ಆಮೇಲೆ ಅಲ್ಲಿಂದ ಅಂಥವನಿಗೆ ಇಷ್ಟು ದೊಡ್ಡ ಜವಾಬ್ದಾರಿಯನ್ನು ವಹಿಸಿ ಭಾರತಕ್ಕೆ ಕಳುಹಿಸಲಾಯಿತು. ಆಗ ನಾನು ’ಇದು ದೇಶವನ್ನು ಸ್ವತಂತ್ರಗೊಳಿಸುವ ಸಮಯವಲ್ಲ, ದುಡುಕಬೇಡಿ’ ಎಂದು ಮೌಂಟ್ ಬ್ಯಾಟನ್‌ಗೆ ಪತ್ರವನ್ನು ಬರೆದಿದ್ದೆ.
ಬಳಿಕ ೧೯೪೮ರ ಜನವರಿಯಂದು ಮಹಾತ್ಮಾ ಗಾಂಧೀಜಿಯವರ ಹತ್ಯೆಯಾಯಿತು. ಆಗ ನನಗೆ ೧೮ರ ವಯಸ್ಸು. ಅವರನ್ನು ಗುಂಡಿಟ್ಟು ಕೊಂದ ದಿನ ಕಣ್ಣೀರಿಡುತ್ತ ಕುಳಿತಿದ್ದ ನನ್ನನ್ನು ಕಂಡು ನನ್ನ ತಂದೆ ’ನೀನು ಗಾಂಧಿಗಾಗಿ ಅಳುವುದೇ?’ ಎಂದು ಅಚ್ಚರಿ ಪಟ್ಟರು. ನಮ್ಮ ಮನೆಯವರೆಲ್ಲ ಅಪ್ಪಟ ಗಾಂಧೀವಾದಿಗಳು, ಗಾಂಧೀ ತತ್ವವನ್ನು ನಂಬಿ ಜೈಲಿನಲ್ಲಿದ್ದು ಬಂದವರು. ಆಗ ನಾನು ’ಅಪ್ಪ, ಕಣ್ಣೀರಿಡುವುದು ಮಾತ್ರವಲ್ಲ, ಅವರ ಅಂತ್ಯ ಸಂಸ್ಕಾರದಲ್ಲೂ ಭಾಗವಹಿಸಬೇಕು. ಈಗ ಮಾತನಾಡುತ್ತ ಕೂರಲು ಸಮಯವಲ್ಲ, ರೈಲು ಟಿಕೀಟಿಗೆ ಹಣ ಕೊಡು. ಇನ್ನೇನು ದೆಹಲಿಯ ರೈಲು ಹೊರಡಲಿದೆ’ ಎಂದು ಕೇಳಿದೆ. ’ನನಗೆ ನಂಬಿಕೆ ಬರುತ್ತಿಲ್ಲ, ನಿನಗೇನಾದರೂ ತಲೆ ಕೆಟ್ಟಿದೆಯೇ?’ ಎಂದು ಕೇಳಿದರು. ’ಅದಕ್ಕೆಲ್ಲ ಈಗ ಪುರುಸೊತ್ತಿಲ್ಲ. ಅಲ್ಲಿಂದ ಬಂದ ಮೇಲೆ ಉತ್ತರಿಸುತ್ತೇನೆ. ಈಗ ಹಣ ಕೊಡು’ ಎಂದೆ. ನೀವು ನಂಬಲಾರಿರಿ ನಾನು ದೆಹಲಿಯ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಮಾಸ್ತೋ ನನಗಾಗಿ ಕಾಯುತ್ತಿದ್ದ. ’ನೀನು ಗಾಂಧಿಯನ್ನು ಎಷ್ಟೇ ವಿರೋಧಿಸಿದರೂ, ಮನಸ್ಸಿನ ಯಾವುದೋ ಮೂಲೆಯಲ್ಲಿ ಅವನ ಬಗ್ಗೆ ಗೌರವವಿದೆ ಎಂದು ನನಗೆ ಗೊತ್ತಿತ್ತು. ಅದಕ್ಕೇ ನಿಮ್ಮ ಊರಿನ ರೈಲು ನಿಲ್ಲುವ ಈ ಜಾಗದಲ್ಲಿ ಕಾಯುತ್ತಿದ್ದೆ’ಎಂದ. ’ಮಾಸ್ತೋ ನೀನು ಇಷ್ಟು ದಿನ ಗಾಂಧಿಯ ವಿಚಾರಗಳ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಿದ್ದೆ, ಹಾಗಾಗಿ ನಾನೂ ವಿರೋಧಿಸುತ್ತಿದ್ದೆ. ವಿಚಾರಗಳನ್ನು ಬದಿಗಿರಿಸಿ ಆತನ ಬಗ್ಗೆ ನನ್ನ ಭಾವನೆಗಳೇನು ಎಂದು ನೀನು ಕೇಳಿದ್ದರೆ ಆಗಲೇ ಅದನ್ನು ನಿನ್ನೊಡನೆ ಹೇಳಿಕೊಳ್ಳುತ್ತಿದ್ದೆ’ ಎಂದು ಹೇಳಿದೆ. ಬದುಕಿನ ಕುರಿತ ಗಾಂಧೀಜಿಯ ಪ್ರತಿಯೊಂದು ವಿಚಾರವನ್ನೂ ನಾನು ಉಗ್ರವಾಗಿ ವಿರೋಧಿಸುತ್ತಿದ್ದೆನಾದರೂ. ಹಲವು ಕಾರಣಗಳಿಗಾಗಿ ನಾನು ಅವರನ್ನು ಮೆಚ್ಚಿದ್ದೆ. ಎಲ್ಲಕ್ಕಿಂತ ಮೊದಲಿಗೆ ಅವರ ಸತ್ಯನಿಷ್ಠೆ. ಯಾವ ವಿಷಮ ಸನ್ನಿವೇಶದಲ್ಲೂ ಅವರು ಸುಳ್ಳು ಹೇಳಲಿಲ್ಲ. ತಾವು ನಂಬಿದ ಸತ್ಯಕ್ಕೆ ಬದ್ಧರಾಗಿದ್ದರು. ಅವರು ಯಾವುದನ್ನು ಸತ್ಯ ಎಂದು ಭಾವಿಸಿದ್ದರೋ, ನನ್ನ ಪಾಲಿಗೆ ಅದು ಮೂರು ಕಾಸಿನ ಬೆಲೆಯದೂ ಅಲ್ಲ, ಆ ಮಾತು ಬೇರೆ. ಆದರೆ ಅವರು ಸತ್ಯನಿಷ್ಠರಲ್ಲ ಎಂದು ನಾನೆಂದಿಗೂ ಹೇಳಲಾರೆ. ಎರಡನೆಯದಾಗಿ ಅವರ ಶುಚಿತ್ವ. ಸಂತರು ಲೌಕಿಕ ಶುಚಿತ್ವಕ್ಕೆ ಬೆಲೆ ಕೊಡುವುದಿಲ್ಲ. ಇಂಥವರ ನಡುವೆ ಇವರು ತುಂಬ ಶುಚಿಯಾಗಿ ಬದುಕಿದ್ದರು. ಅವರು ಎಲ್ಲ ಧರ್ಮಗಳನ್ನೂ ಸಮಾನವಾಗಿ ಗೌರವಿಸುತ್ತಿದ್ದರು. ಕೆಲವು ತಪ್ಪು ಕಾರಣಗಳಿಗಾಗಿ ಗೌರವಿಸುತ್ತಿದ್ದರು ಎಂಬುದು ನಿಜ. ಆದರೆ ಗೌರವಿಸುತ್ತಿದ್ದುದಂತೂ ಸುಳ್ಳಲ್ಲ. ಆತ ಒಬ್ಬ ಪಕ್ಕಾ ಬನಿಯಾ, ಹುಟ್ಟು ವ್ಯಾಪಾರಿ. ಬೇರೆಯವರ ಭಾವನೆಗಳಿಗೆ ಏಕೆ ಸುಮ್ಮನೆ ಹಾನಿ ಮಾಡಬೇಕು, ಅವರ ಧರ್ಮದಲ್ಲೂ ಸತ್ಯ ಇದ್ದರೂ ಇದ್ದೀತು ಎಂಬ ಲೆಕ್ಕಾಚಾರದಲ್ಲಿ ಆತ ಬೇರೆ ಧರ್ಮಗಳನ್ನು ಗೌರವಿಸುತ್ತಿದ್ದುದು. ಇನ್ನು ಮೂರನೆಯದಾಗಿ ಅವರ ಸರಳತೆ. ತನ್ನ ಬರವಣಿಗೆಯನ್ನು ಹೆಚ್ಚು ಹೆಚ್ಚು ಸರಳೀಕರಿಸಲು ಗಾಂಧಿಯಷ್ಟು ಶ್ರಮ ವಹಿಸಿದ ಬೇರೊಬ್ಬ ಲೇಖಕನನ್ನು ನಾನು ಕಂಡಿಲ್ಲ. ಒಂದು ವಾಕ್ಯವನ್ನು ಸೂಚ್ಯವಾಗಿಸಲು, ಸರಳವಾಗಿಸಲು ಗಂಟೆ ಗಟ್ಟಲೆ ಕೂತು ಕಷ್ಟಪಡುತ್ತಿದ್ದರು. ತಾನು ನಂಬಿದ ಹಾಗೆ ಬದುಕಲು ಸಂಪೂರ್ಣವಾಗಿ ಪ್ರಯತ್ನಿಸಿದರು. ಅದನ್ನು ನಾನು ಮೆಚ್ಚುತ್ತೇನೆ. ಆ ನಂಬಿಕೆ ನಿಜವಾಗಿಯೂ ನಿಜವಲ್ಲ ಎಂದು ಆತನಿಗೆ ಹೇಗೆ ತಿಳಿಯಬೇಕು? ಕೊನೆಗೆ ಈ ಬದ್ಧತೆಯಿಂದಾಗಿಯೇ ಅವರು ಪ್ರಾಣವನ್ನೂ ಕಳೆದುಕೊಂಡುದು.
ಗಾಂಧಿಯ ಸಾವಿನಿಂದ ಭಾರತ ತನ್ನ ಚಾರಿತ್ರ್ಯವಧೆಯನ್ನೂ ಮಾಡಿಕೊಂಡಿತು. ಈ ಹಿಂದೆ ಗಾಂಧಿಯಂತಹ ಯಾವ ವ್ಯಕ್ತಿಯೂ ಭಾರತದಲ್ಲಿ ಹೀಗೆ ಹತ್ಯೆಯಾಗಿರಲಿಲ್ಲ. ಇದರರ್ಥ ಈ ದೇಶ ಮಹಾ ಸಹನೆ, ಶಾಂತಿಯ ದೇಶ ಎಂದಲ್ಲ. ಆದರೆ ಗಾಂಧಿಯಂತಹವರು ಕೊಲೆಗೆ ಯೋಗ್ಯರು ಎಂದು ಈ ದೇಶ ಈ ಹಿಂದೆ ಭಾವಿಸಿರಲಿಲ್ಲ. ಗಾಂಧೀ ಸಾವಿನೊಂದಿಗೆ ಭಾರತದ ಒಂದು ಅಧ್ಯಾಯ ಕೊನೆಯಾಯಿತು. ನಾನು ಕಣ್ಣೀರಿಟ್ಟುದು ಗಾಂಧೀ ಸತ್ತರು ಎಂದಲ್ಲ, ಎಲ್ಲರೂ ಒಂದು ದಿನ ಸಾಯಲೇ ಬೇಕಲ್ಲವೇ? ಆಸ್ಪತ್ರೆಯ ಮಂಚದ ಮೇಲೆ ಸಾಯುವುದಕ್ಕಿಂತ ಆತ ಗುಂಡಿಗೆ ಬಲಿಯಾದದ್ದೇ ಸರಿ. ಇದರರ್ಥ ನಾನು ನಾಥೋರಾಂ ಗೋಡ್ಸೆಯನ್ನು ಬೆಂಬಲಿಸುತ್ತಿದ್ದೇನೆ ಎಂದಲ್ಲ. ನಿಸ್ಸಂಶಯವಾಗಿ ಅವನು ಒಬ್ಬ ಕೊಲೆಗಡುಕ ಅವನ ವಿಷಯದಲ್ಲಿ ನಾನು ’ಭಗವಂತ ಅವನನ್ನು ಕ್ಷಮಿಸು. ತಾನು ಏನು ಮಾಡುತ್ತಿದ್ದೇನೆ ಎಂಬುದು ಅವನಿಗೆ ತಿಳಿಯುತ್ತಿಲ್ಲ’ ಎಂದು ಯೇಸುವಿನಂತೆ ಪ್ರಾರ್ಥನೆ ಮಾಡಲಾರೆ. ತಾನೇನು ಮಾಡುತ್ತಿದ್ದೇನೆ ಎಂದು ಅವನಿಗೆ ಚೆನ್ನಾಗಿಯೇ ತಿಳಿದಿತ್ತು. ಹಾಗಾಗಿ ಅವನು ಶಿಕ್ಷಾರ್ಹ.
ನಾನು ಮತ್ತೆ ಊರಿಗೆ ಹಿಂದಿರುಗಿದ ಮೇಲೆ ಇದನ್ನೆಲ್ಲ ನನ್ನ ಅಪ್ಪನೊಂದಿಗೆ ಮಾತನಾಡಿದೆ. ಏಕೆಂದರೆ ನನ್ನ-ಗಾಂಧಿಯ ಸಂಬಂಧ ಅಷ್ಟು ಸರಳವಲ್ಲ. ಅಪ್ಪನಿಗೆ ಇದನ್ನೆಲ್ಲ ಅರ್ಥ ಮಾಡಿಸಲು ತುಂಬ ವ್ಯವಧಾನ ಬೇಕಾಯಿತು. ಇದು ಬರೀ ಗಾಂಧೀಜಿಯವರ ವಿಷಯದಲ್ಲಿ ಮಾತ್ರವಲ್ಲ. ಎಲ್ಲ ಸಂಬಂಧಗಳಲ್ಲೂ ನಾನು ಹೀಗೆಯೇ. ಯಾವ ಸಂಬಂಧ ಏರ್ಪಟ್ಟರೂ ಮರುಗಳಿಗೆಯೇ ನಾನು ಆ ಸಂಬಂಧದಿಂದ ಹೊರಗಿನವನಾಗಿ ಬಿಡುತ್ತೇನೆ. ಯಾರಲ್ಲಿ ಏನನ್ನೇ ಮೆಚ್ಚಿದರೂ ಮರುಗಳಿಗೆಯೇ ನನಗೆ ಹಿಡಿಸದ ವಿಷಯಗಳೂ ನನಗೆ ಗೋಚರವಾಗಿ ಬಿಡುವುವು. ಒಬ್ಬನನ್ನು ಎರಡು ಭಾಗಗಳಾಗಿ ಬೇರ್ಪಡಿಸಿ ಬಳಿಕ ಅವನನ್ನು ಸ್ವೀಕರಿಸುವುದು ಎಂದಿಗೂ ನನ್ನ ಜಾಯಮಾನವಲ್ಲ. ಆದ್ದರಿಂದಲೇ ನಾನು ಮೊದಲಿನಿಂದಲೂ ಗಾಂಧಿಯನ್ನು ವಿರೋಧಿಸುತ್ತ ಬಂದೆ. ಅವನ ವಿಚಾರಗಳಲ್ಲಿ ಸತ್ವವಿಲ್ಲ ಎಂಬ ಕಾರಣದಿಂದಲ್ಲ. ಅವರ ವಿಚಾರಗಳು ಹಲವು ತಲೆಮಾರುಗಳನ್ನು ಶಾಶ್ವತವಾಗಿ ಮುಳುಗಿಸಿಬಿಡುವ ಸತ್ವವನ್ನು ಹೊಂದಿದ್ದವು. ಒಂದು ವೇಳೆ (ಈ ಒಂದುವೇಳೆ ಎಂಬ ಮಾತು ತುಂಬ ಮುಖ್ಯ) ಸುಖ ಸಮೃದ್ಧಿ, ಸುಭಿಕ್ಷತೆ, ವಿಜ್ಞಾನ, ತಂತ್ರಜ್ಞಾನ ಇವುಗಳನ್ನು ಸ್ವಾಗತಿಸಿದ್ದರೆ ನಾನು ಅವರನ್ನು ಒಪ್ಪುತ್ತಿದ್ದೆ. ನಾನು ಯಾವುದನ್ನೆಲ್ಲ ಎತ್ತಿ ಹಿಡಿಯುವೆನೋ ಹೆಚ್ಚು ಕಡಿಮೆ ಅವೆಲ್ಲವನ್ನೂ ಅವರು ವಿರೋಧಿಸುತ್ತಿದ್ದರು. ನಾನು ಬಡತನದ ವಿರೋಧಿ ಆದರೆ ಆತನಿಗೆ ಅದೇ ಧರ್ಮ. ನಾನು ಬುಡಕಟ್ಟು ಜೀವನ ಪದ್ಧತಿಯ ವಿರೋಧಿ, ಆದರೆ ಅವರು ಭಾರತವನ್ನು ಆ ದಿಕ್ಕಿನಲ್ಲೇ ನಡೆಸಲು ಹೊರಟಿದ್ದರು. ಆದರೂ ವಿಭೂತಿಯ ಒಂದಂಶವಿದ್ದರೂ ಅದು ನನ್ನ ಕಣ್ತಪ್ಪಿಸಿ ಹೋಗಲಾರದು. ಅದನ್ನು ನಾನು ಮೆಚ್ಚದೇ ಬಿಡುವವನಲ್ಲ. ಆತ ಮಹಾ ಸಂವೇದನಾಶೀಲ. ಒಂದು ಇಡೀ ಜನಾಂಗದ ಹೃದಯದ ಬಡಿತವನ್ನು ಹಿಡಿಯಬಲ್ಲ ಸೂಕ್ಷ್ಮತೆ ಅವರಿಗಿತ್ತು. ಆದರೆ ಇಡೀ ಜನಾಂಗ ನನಗೆ ಮುಖ್ಯವಲ್ಲ. ಹತ್ತು ವರ್ಷದವನಿದ್ದಾಗ ನಾನು ಅವರನ್ನು ಭೇಟಿ ಮಾಡಿದ್ದು. ಈಗ ಮತ್ತೆ ನೋಡಬೇಕು ಎನಿಸುತ್ತಿದೆ. ಆಗ ನನ್ನಿಂದ ಅವರಿಗೆ ಬರೀ ಮೂರು ಬೆಳ್ಳಿ ನಾಣ್ಯಗಳ ಸಂಪಾದನೆ ಆಗಿತ್ತು. ಈಗ ನಾನು ಇಡೀ ಸ್ವರ್ಗವನ್ನೇ ಅವರಿಗಾಗಿ ಕೆಳಗಿಳಿಸ ಬಲ್ಲೆ. ಆದರೆ ಅವರೇ ಇಲ್ಲ, ಇನ್ನು ಹಾಗೆ ನೀಡುವ ಅವಕಾಶವೂ ಮುಂದೆ ಕಾಣಿಸುತ್ತಿಲ್ಲ.

No comments:

Post a Comment