17 Jan 2012

ಓಷೋ ರಜನೀಶ್ - ಆತ್ಮಕಥೆ, ಭಾಗ ೫

ಉಪನ್ಯಾಸಗಳ ಆರಂಭ
ನಾನು ಪ್ರಾಥಮಿಕ ಶಾಲೆಯಲ್ಲಿ ಇದ್ದಾಗಲೇ ಭಾಷಣಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿಸಲವೂ ಫಲಕಗಳನ್ನು, ಪಾರಿತೋಷಕಗಳನ್ನು ಮನೆಗೆ ತರುತ್ತಿದ್ದೆ. ವಿಶ್ವವಿದ್ಯಾಲಯದಿಂದ ಹೊರಬರುವ ಹೊತ್ತಿಗೆ ಮನೆಯಲ್ಲಿ ನೂರಾರು ಬಹುಮಾನಗಳು ಸಂಗ್ರಹವಾಗಿದ್ದವು. ಅವು
ಗಳನ್ನು ನೋಡುತ್ತಿದ್ದ ಅಜ್ಜಿಗಂತು ಅವನ್ನೆಲ್ಲ ತಾನೇ ಗೆದ್ದಷ್ಟು ಖುಷಿಯಾಗುತ್ತಿತ್ತು. ಅವಳ ಮನೆ ನನ್ನ ಬಹುಮಾನಗಳಿಂದ ತುಂಬಿಹೋಗಿ ಮ್ಯೂಸಿಯಂ ನಂತೆ ಆಗಿಬಿಟ್ಟಿತ್ತು. ಈ ಹಿಂದೆಯೇ ಹೇಳಿದಂತೆ ನಾನು ದಿನವೂ ಅಜ್ಜಿಯ ಮನೆಯಲ್ಲೇ ಇರುತ್ತಿದ್ದುದು. ಅಪ್ಪನ ಮನೆಗೆ ಯಾವಾಗಲಾದರೂ ಭೇಟಿ ನೀಡುತ್ತಿದ್ದೆ ಅಷ್ಟೇ. ಆಗ ನಮ್ಮ ಜಿಲ್ಲೆಯಲ್ಲಿ ನಾನು ಭೇಟಿ ನೀಡದ ಶಾಲೆಯೇ ಇರಲಿಲ್ಲ. ನಾನು ಒಳ್ಳೆಯ ಕತೆಗಾರನಾಗಲು ಅಜ್ಜಿಯೇ ಕಾರಣ. ಪ್ರತಿದಿನ ಶಾಲೆಯಿಂದ ಬಂದ ಮೇಲೆ ಪ್ರತಿಯೊಂದು ವಿಷಯವನ್ನೂ ಕುರಿತು ತುಂಬ ಕುತೂಹಲದಿಂದ ಕೇಳಿ ವಿಚಾರಿಸುತ್ತಿದ್ದಳು. ಅವಳಿಗಾಗಿಯಾದರೂ ನಾನು ಏನಾದರೂ ಕಥೆ ಕಟ್ಟಿ ಹೇಳಬೇಕಾಗಿತ್ತು. ನಾನು ಮಾತನಾಡುವಾಗ ನನ್ನ ನಾಲಗೆ ಏನಾದರೂ ಸುಳ್ಳುಗಳನ್ನು ನುಡಿಯುತ್ತಿದ್ದರೆ ಅದಕ್ಕೆ ಅವಳೇ ನೇರಹೊಣೆ. ನನ್ನ ಮಾತುಗಳನ್ನು ಎಷ್ಟು ಆಸಕ್ತಿಯಿಂದ ಕೇಳುತ್ತಿದ್ದಳೆಂದರೆ ಅವಳ ಆಸಕ್ತಿಯ ಕಾರಣದಿಂದ ನಾನು ಒಳ್ಳೆಯ ಕಥೆಗಾರನಾಗಿ ಹೋದೆ. ಕೆಲವು ಸಲ ಹೇಳಲು ಏನೂ ಇರದಿದ್ದರೆ ಆ ದಿನ ಬೆಳಗಿನಿಂದ ಸಂಜೆಯವರೆಗೆ ನಡೆದ ಪ್ರತಿಯೊಂದು ಕೆಲಸಕ್ಕೆ ಬಾರದ ವಿಷಯವನ್ನೂ ಹೇಳಿ ಸುಮ್ಮನಾಗುತ್ತಿದ್ದೆ. ಆಗಲೂ ಬಿಡದೆ ’ಆಮೇಲೆ ಮುಂದೇನಾಯಿತು?’ ಎಂದು ಕೇಳುತ್ತಿದ್ದಳು. ಎಷ್ಟೋ ಸಲ ’ಅಜ್ಜಿ ನೀನು ಮತ್ತೆ ಆ ಶಂಭು ಬಾಬು ಇಬ್ಬರೂ ಸೇರಿ ನನ್ನನ್ನು ಅಟ್ಟಕ್ಕೇರಿಸಿ ಹಾಳುಮಾಡುತ್ತಿದ್ದೀರಿ’ ಎಂದು ಹೇಳುತ್ತಿದ್ದೆ. ಇವರಿಬ್ಬರೂ ತಾವಾಗಿ ಬೋಧಿಸದೆಯೇ ನನಗೆ ಭಾಷಣ ಕಲೆಯನ್ನು ಕಲಿಸಿದರು. ಏಕಾಗ್ರತೆ ಒಂದು ಅಯಸ್ಕಾಂತದಂತೆ. ಯಾರಾದರೂ ನಮ್ಮಲ್ಲಿ ಏಕಾಗ್ರತೆಯನ್ನು ತೋರಿಸಿದಾಗ ನಮ್ಮೊಳಗಿನ, ನಮಗೇ ತಿಳಿಯದ ಎಷ್ಟೋ ಅಮೂಲ್ಯವಾದ ಸಂಗತಿಗಳು ಹೊರಬಂದುಬಿಡುವವು. ಇವರಿಬ್ಬರಿದ್ದರೆ ಕೆಲವು ಸಲ ಎಂತಹ ಅಸಂಬದ್ಧವಾದ ಮಾತುಗಳನ್ನು ಆಡಲೂ ನಾನು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಸಂಜೆ ನಾನು ಶಾಲೆಯಿಂದ ಹಿಂದಿರುಗುವುದನ್ನು ಎದುರು ನೋಡುತ್ತ ಕುಳಿತಿರುವುದೇ ನನ್ನ ಅಜ್ಜಿಯ ದಿನಚರಿಯಾಗಿಬಿಟ್ಟಿತು.
ಶಾಲೆ ಮುಗಿದೊಡನೆ ನೇರ ಶಂಭು ಬಾಬುವಿನ ಮನೆಗೆ ಹೋಗುತ್ತಿದ್ದೆ. ಅಲ್ಲಿ ನನಗಾಗಿ ನಾನು ಮೆಚ್ಚುವ ಸಿಹಿ ತಿಂಡಿಗಳನ್ನು, ಚಹಾವನ್ನು ಇರಿಸಿಕೊಂಡು ಅವರು ಕಾಯುತ್ತಿದ್ದರು. ತನಗೆ ಇಷ್ಟವಾದುದನ್ನು ಅತಿಥಿಗೆ ನೀಡುವುದಲ್ಲ, ಅತಿಥಿಯ ಅಭಿರುಚಿಗೆ ಅನುಗುಣವಾಗಿ ಸತ್ಕರಿಸುವುದು ಶಂಭು ಬಾಬುವಿನ ಸ್ವಭಾವ. ಅಜ್ಜಿ ನನಗಾಗಿ ಸಿಹಿತಿಂಡಿಗಳನ್ನು ಖರೀದಿಸುತ್ತಿದ್ದ ಅಂಗಡಿಯಲ್ಲೇ ಅವರೂ ಖರೀದಿಸುತ್ತಿದ್ದರು. ಈ ವಿಷಯ ಅವರು ಸತ್ತ ಮೇಲೆ ನನಗೆ ತಿಳಿಯಿತು, ಅಂಗಡಿಯವನು ಹೇಳಿದ. ’ಆ ನದೀ ತೀರದ ಗುಡಿಸಲಲ್ಲಿ ವಾಸಿಸುವ ಅಜ್ಜಿ ಇಲ್ಲಿ ಏನು ಖರೀದಿಸುತ್ತಾಳೋ ಅದನ್ನೆಲ್ಲ ಕೊಡು’ ಎಂದು ಕೇಳಿ ತೆಗೆದುಕೊಂಡು ಹೋಗುತ್ತಿದ್ದರಂತೆ. ನನ್ನ ನೆಚ್ಚಿನ ತಿಂಡಿಗಳು ಇವರಿಗೆ ಹೇಗೆ ಗೊತ್ತಾಗುತ್ತಿತ್ತು ಎಂಬ ವಿಷಯ ಆಗ ನನಗೆ ತಿಳಿಯಿತು. ನನ್ನ ಚಹಾ ಸೇವನೆ ಮುಗಿಯುತ್ತಿದ್ದಂತೆ ’ಇಂಥದೇ ವಿಷಯ ಎಂದಲ್ಲ, ನಿನಗೆ ಏನು ತೋಚುವುದೋ ಅದನ್ನು ಹೇಳು. ಸುಮ್ಮನಿರಬೇಕು ಅನಿಸಿದರೆ ಸುಮ್ಮನಿದ್ದುಬಿಡು. ನಿನ್ನ ಮೌನವನ್ನೂ ಅನುಭವಿಸುತ್ತೇನೆ’ ಎನ್ನುತ್ತಿದರು. ಕೆಲವು ಸಲ ಇಬ್ಬರೂ ಮಾತನಾಡದೆ ಸುಮ್ಮನೆ ಮೌನವನ್ನು ಅನುಭವಿಸುತ್ತ ಕುಳಿತುಕೊಳ್ಳುತ್ತಿದ್ದುದೂ ಉಂಟು. ಮತ್ತೆ ಕೆಲವು ಸಲ ’ಶಂಭು ಬಾಬು ನೀವೇ ಏನನ್ನಾದರೂ ಹೇಳಿ ನಾನು ಕೇಳುತ್ತೇನೆ’ ಎನ್ನುತ್ತಿದ್ದೆ ಆಗ ಅವರು ನಕ್ಕು ’ಅದಂತೂ ಸಾಧ್ಯವಿಲ್ಲ’ ಎನ್ನುತ್ತಿದ್ದರು. ನಿಜವಾಗಿಯೂ ನಾನು ಮಾತನಾಡುವ ಕಲೆಯನ್ನು ಕಲಿತಿಲ್ಲ. ’ಮಹನೀಯರೆ, ಮಹಿಳೆಯರೆ’ ಎಂದು ನನ್ನ ಜೀವಮಾನದಲ್ಲೇ ಸಂಬೋಧಿಸಿಲ್ಲ. ಒಂದು ಮಾತನ್ನು ಹೇಗೆ ಪ್ರಾರಂಭಿಸಬೇಕು ಎಂಬ ತಿಳುವಳಿಕೆಯೂ ಇಲ್ಲದೆ ಸಾವಿರಾರು ಜನ ನೆರೆದಿರುವ ಸಭೆಗಳಲ್ಲಿ ಭಾಷಣ ಮಾಡಿದ್ದೇನೆ. ನನ್ನ ಅಂತರಂಗಕ್ಕೆ ಅನ್ನಿಸಿದ್ದನ್ನು ಹೇಳಬಲ್ಲೆನೇ ವಿನಃ, ಆ ಅರ್ಥದಲ್ಲಿ ನಾನು ಭಾಷಣಕಾರನಲ್ಲ. ನನಗೆ ಟಿಪ್ಪಣಿಗಳನ್ನು ಸಿದ್ಧಪಡಿಸಿಕೊಂಡು ಮಾತನಾಡಲು ಬರುವುದಿಲ್ಲ. ಏನಿದ್ದರೂ ಮಾತನಾಡುವ ಆ ಕ್ಷಣದಲ್ಲೇ ಮಾತುಗಳು ಹೊಳೆಯಬೇಕು.
ನಾನು ಇನ್ನೊಬ್ಬನಿಗಿಂತ ಮೇಲು ಎಂಬ ಭಾವನೆ ನನಗೆ ಯಾವಾಗಲೂ ಬರಲೇ ಇಲ್ಲ. ಆದರೆ ಹೈಸ್ಕೂಲಿನಲ್ಲಿದ್ದಾಗಲೇ ಅಧ್ಯಾಪಕರಿಗೆಲ್ಲ ಅಚ್ಚರಿಯಾಗುವಂತೆ ಭಾಷಣ ಮಾಡುತ್ತಿದ್ದೆ. ಹಾಗೆ ನೋಡಿದರೆ ಎಲ್ಲರೂ ಒಳ್ಳೆಯ ಮಾತುಗಾರರೇ. ಆದರೆ ವೇದಿಕೆಯನ್ನೇರಿದಾಗ ತುಂಬ ಜನಕ್ಕೆ ಮಾತುಗಳೇ ಮರೆತು ಹೋಗುತ್ತದೆ. ಸಾವಿರಾರು ಕಣ್ಣುಗಳು ನನ್ನತ್ತ ಯಾವ ಅಪೇಕ್ಷೆಯಿಂದ ನೋಡುತ್ತಿವೆಯೋ ಅದನ್ನು ಪೂರೈಸಬಲ್ಲೆನೇ ಎಂಬ ಹೃದಯ ದೌರ್ಬಲ್ಯವೇ ಹೀಗಾಗಲು ಕಾರಣ. ನಮ್ಮ ಬಗ್ಗೆ ನಮಗೆ ಕೀಳರಿಮೆ ಇದ್ದಾಗ ಮಾತ್ರ ಹೀಗಾಗುವುದು. ಇಲ್ಲವಾದರೆ ಒಬ್ಬಿಬ್ಬರ ಜೊತೆ ಹರಟುವುದಕ್ಕೂ ವೇದಿಕೆಯ ಮೇಲೆ ನಿಂತು ಹರಟುವುದಕ್ಕೂ ಏನು ವ್ಯತ್ಯಾಸ? ಈ ಬಾಧೆಗಳಿಂದ ಗುಣಮುಖನಾದವನು ’ಯಾರು ಏನನ್ನು ಅಪೇಕ್ಷಿಸಿದರೇನಂತೆ? ಲೋಕದಲ್ಲಿ ಯಾರೂ ಯಾರ ಅಪೇಕ್ಷೆಯನ್ನೂ ಈತನಕ ಪೂರೈಸಿಲ್ಲ. ನಮ್ಮ ನಮ್ಮ ಬದುಕನ್ನು ನಾವು ನೋಡಿಕೊಂಡು ಹೋಗುತ್ತಿದ್ದೇವೆ. ಅಷ್ಟು ಸಾಕು. ನಮ್ಮಿಂದ ಲೋಕ ಅಪೇಕ್ಷಿಸುವುದೂ ಇದೊಂದನ್ನೇ’ ಎಂದು ಅರಿವಾಗುತ್ತದೆ. ಅಂತರಂಗದ ರೋಗಗಳಿಂದ ಮುಕ್ತನಾದವನು ಮಾತ್ರ ಹೀಗೆಲ್ಲ ಯೋಚಿಸಬಲ್ಲ.
ನನಗೆ ನನ್ನ ಮೊದಲ ಭಾಷಣ ಇನ್ನೂ ಚೆನ್ನಾಗಿ ನೆನಪಿದೆ. ಅದು ಹೈಸ್ಕೂಲು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಭಾಷಣ ಸ್ಪರ್ಧೆ. ಜಿಲ್ಲೆಯ ಎಲ್ಲಾ ಹೈಸ್ಕೂಲುಗಳೂ ಭಾಗವಹಿಸಿದ್ದವು. ನನ್ನ ಶಾಲೆ ನನ್ನನ್ನು ಆರಿಸಿ ಅಲ್ಲಿಗೆ ಕಳುಹಿಸಿತ್ತು. ನಾನೇನು ಅದ್ಭುತ ಭಾಷಣಕಾರ ಎಂದಲ್ಲ, ಸದ್ಯ ಇವನು ಯಾವುದಾದರೂ ನೆವದಿಂದ ಶಾಲೆಯಿಂದ ಹೊರಗಿದ್ದರೆ ಕ್ಷೇಮ ಎಂದು ಭಾವಿಸಿ ಎಲ್ಲ ಭಾಷಣ ಸ್ಪರ್ಧೆಗಳಿಗೂ ನನ್ನನ್ನೇ ಕಳುಹಿಸುತ್ತಿದ್ದರು. ಆದರೆ ನಾನು ಹೊರಗಿದ್ದ ಮಾತ್ರಕ್ಕೆ ನಾನು ಉಂಟು ಮಾಡುವ ಸಮಸ್ಯೆಗಳೂ ಶಾಲೆಯಿಂದ ಹೊರಗಿರುತ್ತವೆ ಎಂದೇನಲ್ಲವಲ್ಲ! ಭಾಷಣ ಮಾಡಲು ವೇದಿಕೆಯನ್ನೇರಿದಾಗ ’ವೇದಿಕೆಯ ಮೇಲಿರುವ ಗಣ್ಯರೇ’ ಎಂದು ಸಂಬೋಧಿಸಲಿದ್ದೆ. ಆದರೆ ಆ ಸಭೆಯ ಅಧ್ಯಕ್ಷ ನನ್ನ ಕಣ್ಣಿಗೆ ಗಣ್ಯನಂತೆ ಕಾಣಿಸಲಿಲ್ಲ. ಇನ್ನು ’ಮಹನೀಯರೆ, ಮಹಿಳೆಯರೇ’ ಎನ್ನೋಣವೇ ಎಂದುಕೊಂಡರೆ ಅಲ್ಲೆಲ್ಲ ನನ್ನಂತಹ ಮಕ್ಕಳೇ ಇದ್ದರು. ಹಾಗಾಗಿ ನಾನು ’ನನ್ನ ಮಾತುಗಳು ಯಾರಿಗೆ ಅನ್ವಯಿಸುವುದೋ ಅವರನ್ನು ಕುರಿತು ನುಡಿಯುತ್ತಿದ್ದೇನೆ’ ಎಂದು ಹೇಳಿ ಭಾಷಣ ಪ್ರಾರಂಭಿಸಿದೆ. ನನಗೇ ಮೊದಲ ಬಹುಮಾನ ಬಂದಿದ್ದರೂ, ಮುಖ್ಯೋಪಾಧ್ಯಾಯರು ನನ್ನನ್ನು ಕರೆಸಿದರು. ಹಾಗೆಲ್ಲ ಮಾತನಾಡುವುದು ಸಭ್ಯತೆಯಲ್ಲ ಎಂದರು. ’ನನಗೆ ಆ ಅಧ್ಯಕ್ಷ ಚೆನ್ನಾಗಿ ಗೊತ್ತು, ವೇದಿಕೆಯ ಮೇಲಿದ್ದವರೆಲ್ಲ ಚೆನ್ನಾಗಿಯೇ ಗೊತ್ತು. ಅವರಾರೂ ಯೋಗ್ಯರಲ್ಲ. ಅವರನ್ನು ಮಾನ್ಯರೇ ಎಂದು ಹೇಗೆ ಕರೆಯಲಿ’ ಎಂದು ಕೇಳಿದೆ. ಬಹುಮಾನ ವಿತರಣೆಯ ಸಮಾರಂಭಕ್ಕೂ ಆ ಅಧ್ಯಕ್ಷನೇ ಬಂದಿದ್ದ. ಊರಿನಲ್ಲಿ ಏನೇ ಸಮಾರಂಭವಾದರೂ ಅವನೇ ಅಧ್ಯಕ್ಷ ಸ್ಥಾನ ವಹಿಸಿ ಕುಳಿತಿರುತ್ತಿದ್ದ. ಆತ ನಮ್ಮ ಊರಿನ ಕಾಂಗ್ರೇಸ್ ನಾಯಕ ಶ್ರಿನಾಥ್ ಭಟ್ ಎಂದು ಅವನ ಹೆಸರು. ನನ್ನ ಹೆಸರನ್ನು ಕರೆದಾಗ ನಾನು ’ಆ ಅಧ್ಯಕ್ಷ ನಾನು ಕುಳಿತಿರುವ ಜಾಗಕ್ಕೆ ಬಂದು ಕೊಡಲಿ, ತೆಗೆದುಕೊಳ್ಳುತ್ತೇನೆ’ ಎಂದು ಕುಳಿತಲ್ಲಿಂದಲೇ ಹೇಳಿದೆ; ಅವನೇನೂ ಬರಲಿಲ್ಲ. ಆದರೆ ಅಲ್ಲಿಂದಾಚೆಗೆ ಆತ ನನ್ನನ್ನು ದ್ವೇಷಿಸಲಾರಂಭಿಸಿದ. ನಾನು ಅಜಾತಶತ್ರುವಲ್ಲ; ’ಶತ್ರುಗಳನ್ನು ಸಂಪಾದಿಸುವುದು ಹೇಗೆ?’ ಎಂಬ ಕಲೆಯಲ್ಲಿ ನಾನು ಪಾರಂಗತ. ೧೯೫೦ರಲ್ಲಿ ಒಂದು ಧಾರ್ಮಿಕ ಸಭೆಯಲ್ಲಿ ನಾನು ಭಾಷಣ ಮಾಡುತ್ತ ’ಜನನ ನಿಯಂತ್ರಣ ತುಂಬ ಮುಖ್ಯ. ಇದನ್ನು ವಿರೋಧಿಸುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು’ ಎಂದಿದ್ದೆ. ಆಗ ಸಂತಾನವು ಭಗವಂತನ ವರಪ್ರಸಾದ ಎಂದು ನಂಬಿದ್ದ ಆ ಜನ ನನ್ನತ್ತ ಕಲ್ಲುಗಳನ್ನೆಸೆದರು. ವೇದಿಕೆಯಲ್ಲಿದ್ದ ರಾಜಕಾರಿಣಿಗಳೂ ನನ್ನ ಮಾತುಗಳನ್ನು ಬೆಂಬಲಿಸಲಿಲ್ಲ. ಆಗ ನನ್ನ ಮಾತುಗಳನ್ನು ಕೇಳಿದ್ದರೆ ಭಾರತದ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ಆದರೆ ರಾಜಕಾರಿಣಿಗಳಿಗೆ ಜನರ ಮೆಚ್ಚುಗೆ, ಚಪ್ಪಾಳೆ ಮುಖ್ಯ. ಅವರ ಹಸಿವು, ದಾರಿದ್ರ್ಯವಲ್ಲ.
ಒಮ್ಮೆ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾಗ ರೇಡಿಯೋದಲ್ಲಿ ಉಪನ್ಯಾಸ ನೀಡಲು ಹೋಗಿದ್ದೆ. ನನ್ನ ಭಾಷಣವನ್ನು ಕೇಳಿ ಮೆಚ್ಚಿಕೊಂಡಿದ್ದ ರೇಡಿಯೋ ವಿಭಾಗದ ನಿರ್ದೇಶಕರು ನನ್ನನ್ನು ಬರಹೇಳಿದ್ದರು. ’ನಿಮಗೆ ಇದು ಹೊಸತು, ಕತ್ತಲೆ ಕೋಣೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಒಬ್ಬರೇ ಕುಳಿತು ಭಾಷಣ ಮಾಡಬೇಕು, ಕಷ್ಟವಾಗಬಹುದು’ ಎಂದರು. ಆಗ ನಾನು ’ನನಗೇನೂ ಕಷ್ಟವಾಗುವುದಿಲ್ಲ ಇಷ್ಟು ದಿನ ನಾನು ಬರಿ ಗೋಡೆಗಳೊಂದಿಗೇ ಮಾತನಾಡಿಕೊಂಡು ಬಂದಿದ್ದೇನೆ. ಆ ದಿನ ನೀವೇ ನೋಡಿದಿರಲ್ಲ, ನನ್ನ ಭಾಷಣೆ ಮುಗಿದ ಮೇಲೆ ಅಲ್ಲಿ ನೆರೆದಿದ್ದ ಜನ ಹಿಂದಿರುಗಿಯೂ ನೋಡದೇ ಹೇಗೆ ಜಾಗ ಖಾಲಿ ಮಾಡಿದರು’ ಎಂದು ಹೇಳಿದೆ. ಆಮೇಲೆ ಕತ್ತಲ ಕೋಣೆಯಲ್ಲಿ ಒಬ್ಬನೇ ಕುಳಿತು ಸಾವಿರಾರು ಜನರಿಗೆ ನುಡಿಯುತ್ತಿದ್ದೇನೆ ಎಂಬ ಭಾವ ಭಂಗಿಯಲ್ಲಿ ಭಾಷಣ ನೀಡಿದೆ. ಹೊರಗೆ ಗಾಜಿನ ಕಿಂಡಿಯಿಂದ ನೋಡುತ್ತಿದ್ದ ನಿರ್ದೇಶಕರು ನಾನು ಹೊರಬಂದ ಮೇಲೆ ’ಹೀಗೂ ರೇಡಿಯೋ ಭಾಷಣ ಮಾಡುವುದು ಉಂಟೇ?’ ಎಂದು ಅಚ್ಚರಿ ಪಟ್ಟರು. ’ನಾನೇನು ಮಾಡಲಿ? ಕೈ,ಕಾಲು, ಮುಖಭಾವ ಎಲ್ಲವನ್ನೂ ನಿಲ್ಲಿಸಿ ನುಡಿಯಬೇಕು ಎಂದರೆ ನನ್ನ ಬಾಯಿಂದ ಒಂದು ಶಬ್ದವೂ ಹೊರಬರುವುದಿಲ್ಲ. ನಾನು ನುಡಿಯುವಾಗ ನನ್ನ ಇಡೀ ದೇಹ, ಮನಸ್ಸು, ಅಸ್ತಿತ್ವ ನುಡಿಯುತ್ತಿರುತ್ತದೆ. ಅದು ಬರೀ ಬಾಯ ಕೆಲಸವಲ್ಲ’ ಎಂದು ಹೇಳಿದೆ. ’ಅದೇನೋ ತಿಳಿಯದು. ಆಗ ಭಾಷಣ ಕೇಳುವವರ ಬಗ್ಗೆ ನೀನು ತೋರಿದ ವಿಷಾದ ಮತ್ತು ಈಗ ಭಾಷಣದಲ್ಲಿ ನೀನು ತೋರಿಸಿದ ತನ್ಮಯತೆ ಎರಡೂ ನನಗೆ ಅರ್ಥವಾಗುತ್ತಿಲ್ಲ’ ಎಂದು ಸುಮ್ಮನಾದರು.
ಪುಸ್ತಕ ಪ್ರೀತಿ
ನಾನು ಹೈಸ್ಕೂಲು ಮುಗಿಸುವ ವೇಳೆಗಾಗಲೇ ನನ್ನ ಸಂಗ್ರಹದಲ್ಲಿ ಸಾವಿರಾರು ಪುಸ್ತಕಗಳಿದ್ದವು. ಶಾಲಾ ದಿನಗಳಲ್ಲಿ ಖಲೀಲ್ ಗಿಬ್ರಾನ್, ದಸ್ತಯೇವ್‌ಸ್ಕಿ, ಟಾಲ್ಸ್‌ಟಾಯ್, ಶೆಖೋವ್, ಗಾರ್ಕಿ, ತುರ್ಗೇನೇವ್ ಮೊದಲಾದವರ ಎಲ್ಲ ಶ್ರೇಷ್ಠ ಕೃತಿಗಳನ್ನೂ ಓದಿ ಮುಗಿಸಿದ್ದೆ. ಹಾಗೆಯೇ ಕಾಲೇಜು ದಿನಗಳಲ್ಲಿ ಸಾಕ್ರಟೀಸ್, ಅರಿಸ್ಟಾಟಲ್, ಪ್ಲೇಟೋ, ಬರ್ಟ್ರಾಂಡ್ ರಸೆಲ್ ಮೊದಲಾದ ಎಲ್ಲ ತತ್ವಜ್ಞಾನಿಗಳನ್ನು ಓದಿಕೊಂಡಿದ್ದೆ. ಚಿಕ್ಕಂದಿನಲ್ಲೇ ಕಮ್ಯುನಿಸಂ ಬಗ್ಗೆ ಆಸಕ್ತಿ ಬೆಳೆಯಿತು. ಆ ಕಾಲದಲ್ಲಿ ಯಾವ ಕಮ್ಯುನಿಸ್ಟ್ ಸಾಹಿತ್ಯವನ್ನೂ ಓದದೇ ಬಿಟ್ಟಿಲ್ಲ. ೧೯೫೦ರಂದು ಸಹಿ ಮಾಡಿದ ಎಷ್ಟೋ ಕಮ್ಯುನಿಸ್ಟ್ ಕೃತಿಗಳು ಈಗಲೂ ನನ್ನ ಗ್ರಂಥಾಲಯದಲ್ಲಿವೆ. ೧೯೪೮, ೧೯೪೯ ಹಾಗು ೧೯೫೦ ಈ ಮೂರು ವರ್ಷಗಳಲ್ಲಿ ನಾನು ಕಮ್ಯುನಿಸ್ಟ್ ಸಾಹಿತ್ಯದೊಳಗೆ ಮುಳುಗಿ ಹೋಗಿದ್ದೆ. ಆದರೆ ೧೯೫೦ರ ನಂತರ ಬಂದ ಯಾವುದೇ ಕಮ್ಯುನಿಸ್ಟ್ ಸಾಹಿತ್ಯವನ್ನೂ - ಪರವಾಗಲಿ, ವಿರೋಧವಾಗಲಿ - ಓದಲಿಲ್ಲ. ಕಮ್ಯುನಿಸ್ಟ್ ಪ್ರತಿಯೊಬ್ಬ ಹೋರಾಟಗಾರನ ಹೆಸರೂ, ಒಂದೊಂದು ವಿವರವೂ ಈಗಲೂ ನನಗೆ ಸ್ಪಷ್ಟವಾಗಿ ನೆನಪಿದೆ. ಬೌದ್ಧಿಕ ವಲಯದೊಳಗೆ ನನಗೆ ಪ್ರವೇಶ ಸಿಕ್ಕಿದ್ದೇ ಕಮ್ಯುನಿಸ್ಟ್ ಸಿದ್ಧಾಂತಗಳ ಮೂಲಕ. ಆ ಸಿದ್ಧಾಂತಗಳು ನನ್ನಲ್ಲಿ ಆಳವಾಗಿ ಬೇರೂರಿದವು. ಆದರೆ ನಾನು ಕಮ್ಯುನಿಸ್ಟ್ ಪಕ್ಷದ ಸದಸ್ಯನಾಗಲಿಲ್ಲ. ಅದರಲ್ಲಿ ಏನೋ ಕೊರತೆ ಇದೆ ಎಂದು ಅನ್ನಿಸುತ್ತಿತ್ತು. ಕಮ್ಯುನಿಸಂ ಮನುಷ್ಯ ಸಮಾಜಕ್ಕಾಗಿ ಒಂದು ದೊಡ್ಡ ಯೋಜನೆಯನ್ನೇ ಹಾಕಿಕೊಂಡಿದೆ. ಆದರೆ ಅದಕ್ಕೆ ಪ್ರಾಣವೇ ಇಲ್ಲ ಎಂದು ಅನ್ನಿಸುತ್ತಿತ್ತು. ಅದೊಂದು ಜೀವಚ್ಛವದ ರೂಪ ಪಡೆದ ಸಿದ್ಧಾಂತ ಎನ್ನಿಸಿತು. ಆಮೇಲೆ ನಾನು ಅರಾಜಕತೆಗೆ ಒಲಿದೆ. ಅದೂ ಸಹ ರಷ್ಯಾದಲ್ಲಿ ಹುಟ್ಟಿದ ಸಿದ್ಧಾಂತವೇ. ಪ್ರಿನ್ಸ್ ಕ್ರೊಪೋಟ್‌ಕಿನ್, ಬಕುನಿನ್ ಹಾಗು ಟಾಲ್ಸ್‌ಟಾಯ್ ಈ ಮೂವರು ಅರಾಜಕವಾದದ ಪ್ರವರ್ತಕರು. ಸರಕಾರಗಳಿಲ್ಲದ, ರೀತಿ ನೀತಿಗಳನ್ನು ಹೇರದ ಒಂದು ಹೊಸ ಜಗತ್ತನ್ನು ನಿರ್ಮಿಸುವುದು ಅರಾಜಕವಾದದ ಕನಸು. ಆದರೆ ದುಷ್ಟರಿಂದ ಮೂರ್ಖರಿಂದ ತುಂಬಿದ ಈ ಸಮಾಜದಲ್ಲಿ ಅದು ಗೊಂದಲಮಯ ಜಗತ್ತಾಗಿ ಪರಿಣಮಿಸುವುದೇ ವಿನಃ ಒಂದು ಸ್ವತಂತ್ರ ಬದುಕು ಎನಿಸಿಕೊಳ್ಳದು.
ಮನುಷ್ಯಜಾತಿಯು ಸಣ್ಣ ಮಕ್ಕಳನ್ನು ಗೌರವಿಸುವುದನ್ನು ಕಲಿಯಲೇ ಇಲ್ಲ. ನಾನು ಅಪ್ಪನಿಗೆ ’ಹಣವನ್ನು ಪುಸ್ತಕಕ್ಕಲ್ಲದೇ ಬೇರಾವುದಕ್ಕೂ ಖರ್ಚುಮಾಡುವುದಿಲ್ಲ’ ಎಂದು ಮುನ್ನವೇ ಹೇಳಿದ್ದರಿಂದ ಅವರು ಕೇಳಿದಾಗಲೆಲ್ಲ ಹಣ ಕೊಡುತ್ತಿದ್ದರು. ನನ್ನ ಪುಸ್ತಕಗಳ ಸಂಗ್ರಹ ಹೆಚ್ಚಿದಂತೆ ’ಮೊದಲು ನಮ್ಮ ವಾಸದ ಮನೆಯಲ್ಲಿ ಒಂದು ಗ್ರಂಥಾಲಯವಿತ್ತು, ಈಗ ಗ್ರಂಥಾಲಯದಲ್ಲೇ ನಾವು ವಾಸಿಸುವಂತಾಗಿದೆ. ಈ ಪುಸ್ತಕಗಳನ್ನು ನೋಡಿಕೊಳ್ಳುವುದೇ ಮನೆಯವರಿಗೆಲ್ಲ ಒಂದು ಕೆಲಸವಾಗಿದೆ. ಎಲ್ಲಿ ಕಾಲಿಟ್ಟರೆ ಅಲ್ಲಿ ಪುಸ್ತಕ, ಓಡಾಡಲೂ ಜಾಗವಿಲ್ಲದಂತಾಗಿದೆ. ಮನೆತುಂಬ ಮಕ್ಕಳು ಬೇರೆ. ಇವನ್ನೆಲ್ಲ ಹೇಗೆ ಕಾಪಾಡುವುದು?’ ಎಂದು ಗೊಣಗುತ್ತಿದ್ದರು. ಆಗ ನಾನು ’ಸಮಸ್ಯೆ ಸಣ್ಣ ಮಕ್ಕಳದಲ್ಲ, ದೊಡ್ಡ ಮಕ್ಕಳದು’ ಎನ್ನುತ್ತಿದ್ದೆ. ಸಣ್ಣ ಮಕ್ಕಳನ್ನು ನಾನು ಎಷ್ಟು ಗೌರವದಿಂದ ನಡೆಸಿಕೊಳ್ಳುತ್ತಿದ್ದೆ ಎಂದರೆ ಅವರೆಲ್ಲ ನನ್ನ ಪುಸ್ತಕಗಳನ್ನು ಜೋಪಾನ ಮಾಡುವುದು ತಮ್ಮ ಕರ್ತವ್ಯ ಎಂದು ಭಾವಿಸಿಕೊಂಡಿದ್ದರು. ನನ್ನ ತಮ್ಮಂದಿರು, ತಂಗಿಯರು ನಾನು ಮನೆಯಲ್ಲಿ ಇಲ್ಲದಾಗ ಒಬ್ಬರಿಗೂ ಪುಸ್ತಕಕ್ಕೆ ಕೈಹಾಕಲು ಅವಕಾಶ ನೀಡುತ್ತಿರಲಿಲ್ಲ. ಪುಸ್ತಕಗಳು ಆಚೀಚೆ ಹೋಗದಂತೆ ಆಗಾಗ ಪುಸ್ತಕದ ಕಪಾಟುಗಳನ್ನೂ ಒರೆಸಿಡುತ್ತಿದ್ದರು. ನಾನು ಅವರನ್ನು ಎಷ್ಟು ಗೌರವದಿಂದ ನಡೆಸಿಕೊಳ್ಳುತ್ತಿದ್ದೆ ಎಂದರೆ, ಅದಕ್ಕೆ ಪ್ರತಿಯಾಗಿ ಅವರು ಹೀಗೆಲ್ಲ ನನ್ನ ಪುಸ್ತಕಗಳ ಬಗ್ಗೆ ಮುತುವರ್ಜಿ ವಹಿಸುತ್ತಿದ್ದರು. ನನ್ನ ನಾಲ್ಕನೆಯ ತಮ್ಮ ನಿಖಿಲಾಂಕನಿಗೆ ಬಾಲ್ಯದಿಂದಲೂ ನನಗೆ ಸಂಬಂಧಿಸಿದ ಪ್ರತಿಯೊಂದನ್ನೂ ಸಂಗ್ರಹಿಸಿ ಇಟ್ಟುಕೊಳ್ಳುವ ಅಭ್ಯಾಸವಿತ್ತು. ಕೆಲವೊಮ್ಮೆ ನಾನು ಕಸದ ಬುಟ್ಟಿಗೆ ಹಾಕಿದ್ದ ಕಾಗದ ತುಂಡುಗಳನ್ನೂ ಹೆಕ್ಕಿ ತೆಗೆಯುತ್ತಿದ್ದ. ಅವನ ಈ ಚಾಳಿಯನ್ನು ನೋಡಿ ಎಲ್ಲರೂ ನಗುತ್ತಿದ್ದರು. ನಾನೂ ಸಹ ಹೀಗೇಕೆ ಸಂಗ್ರಹಿಸುವೆ ಎಂದು ಒಮ್ಮೆ ಕೇಳಿದ್ದೆ. ’ನನಗೂ ತಿಳಿಯದು, ಸಂಗ್ರಹಿಸಿ ಇಡಬೇಕು, ಮುಂದೆ ಪ್ರಯೋಜನವಾಗುತ್ತದೆ ಎಂದು ನನ್ನ ಒಳಮನಸ್ಸು ಹೇಳುತ್ತಿದೆ’ ಎಂದಿದ್ದ. ಅವನ ಈ ಅಭ್ಯಾಸದಿಂದಲೇ ನನ್ನ ಬಾಲ್ಯದ ಕೆಲವು ಛಾಯಾಚಿತ್ರಗಳು ಈಗಲೂ ಉಳಿದುಕೊಂಡಿರುವುದು.  ’ನನ್ನ ಪುಸ್ತಕಕ್ಕೆ ನಿಜವಾಗಿಯೂ ದೊಡ್ಡವರಿಂದ ತೊಂದರೆಯಾಗುತ್ತಿದೆ’ ಎನ್ನುತ್ತಿದ್ದೆ. ನನ್ನ ತಂದೆಯ ಅಣ್ಣ ತಮ್ಮಂದಿರು, ಭಾವಂದಿರು ನನ್ನ ಪುಸ್ತಕಗಳನ್ನು ತೆಗೆದುಕೊಂಡು ಓದಿ, ಗೆರೆಗಳನ್ನು ಎಳೆದು, ಪುಟದ ಮೇಲೆಲ್ಲ ತಮ್ಮ ಷರಾ ಬರೆದು ವಿರೂಪಗೊಳಿಸುತ್ತಿದ್ದರು. ನನ್ನ ಪುಸ್ತಕಕ್ಕೆ ಬೇರೆಯವರು ಷರಾ ಬರೆಯುವುದು, ಗೆರೆ ಎಳೆಯುವುದು ನನಗೆ ಹಿಡಿಸುತ್ತಿರಲಿಲ್ಲ, ಈಗಲೂ ಹಿಡಿಸುವುದಿಲ್ಲ.
ಕಾಲೇಜು ದಿನಗಳು
ನನ್ನ ಶಾಲಾ ಶಿಕ್ಷಣ ಮುಗಿದ ಮೇಲೆ ನಾನು ತತ್ವಶಾಸ್ತ್ರ ಓದುತ್ತೇನೆ ಎಂದು ನಿರ್ಧರಿಸಿದ ಮೇಲೆ ನನ್ನ ಮನೆಯವರಿಗೆ ಮತ್ತೆ ಚಿಂತೆಯಾಯಿತು. ತತ್ವಶಾಸ್ತ್ರ ಓದಿದರೆ ಗುಮಾಸ್ತನ ನೌಕರಿಯೂ ಸಿಗುವುದಿಲ್ಲ, ಯೋಚಿಸಿ ನೋಡು ಎಂದು ಬುದ್ಧಿ ಹೇಳಿದರು. ಮತ್ತು ಅದು ನಿಜ ಕೂಡ. ನೌಕರಿ ನೀಡುವವರೂ ’ತತ್ವಜ್ಞಾನಿಯಾಗಿರುವ ಗುಮಾಸ್ತ ನಮಗೆ ಬೇಡ’ ಎಂದೇ ಹೇಳುವುದು. ಆದರೆ ನಾನು ಯೋಚಿಸಿ, ಲೆಕ್ಕ ಹಾಕಿ ನಿರ್ಧಾರಕ್ಕೆ ಬರುವ ಜಾಯಮಾನದವನಲ್ಲ. ನನ್ನ ಮನಸ್ಸಿಗೆ ಸರಿ ಅನಿಸಿದ್ದನ್ನು ಮಾಡುವುದು ನನ್ನ ಸ್ವಭಾವ. ಎಂದು ನಿರ್ಧರಿಸಿದ್ದೆ. ಹಾಗಾಗಿ ತತ್ವಜ್ಞಾನದ ಪರಿಚಯ ನನಗೆ ಬೇಕಾಗಿತ್ತು. ಹೀಗೆ ಮನೆಯವರ ವಿರೋಧದ ನಡುವೆ ತತ್ವಶಾಸ್ತ್ರವನ್ನು ಆಯ್ಕೆ ಮಾಡಿಕೊಂಡೆ.
’ಇನ್ನು ಜೀವಮಾನವಿಡೀ ಎಲ್ಲ ಥರದ ತತ್ವಜ್ಞಾನಿಗಳೊಂದಿಗೆ ವಾದ ಮಾಡುತ್ತೇನೆ, ಅವರು ಶಬ್ದಗಳೊಂದಿಗೆ ಅದ್ಭುತವಾಗಿ ಆಟವಾಡುತ್ತಾರೆ. ಮಾನಸಿಕವಾಗಿ ಅದ್ಭುತವಾದ ವಿಕಾಸ ಹೊಂದಿದ ಈ ತತ್ವಜ್ಞಾನಿಗಳಲ್ಲಿ ಒಬ್ಬರೂ ಆತ್ಮಜ್ಞಾನವನ್ನು ಹೊಂದಲಿಲ್ಲ. ಆದ್ದರಿಂದ ಅವರ ಅಸ್ತ್ರಗಳಿಂದಲೇ ಅವರೊಂದಿಗೆ ಸೆಣೆಸುವೆ’ ಎಂದು ಹೇಳಿದೆ.
ಆಗ ನನ್ನ ಅಪ್ಪ ’ಹೀಗೆ ನೀನು ನಿರ್ಧರಿಸಿಕೊಳ್ಳುವುದಾದರೆ ನಮ್ಮ ಬಳಿ ದುಡ್ಡು ಕಾಸಿಗೆ ಬರಬೇಡ’ ಎಂದುಬಿಟ್ಟರು.
’ನಿಮ್ಮ ಇಷ್ಟದಂತೆ ನಡೆಯದಿದ್ದ ಮೇಲೆ ನಿಮ್ಮ ದುಡ್ಡಿಗೆ ಹೇಗೆ ಕೈಯೊಡ್ಡಲಿ? ನೀವು ಕೊಟ್ಟರೂ ನನಗದು ಬೇಡ’ ಎಂದು ಹೊರನಡೆದೆ.
 ರಾತ್ರಿಯೆಲ್ಲ ದಿನಪತ್ರಿಕೆಯೊಂದರ ಕಛೇರಿಯಲ್ಲಿ ದುಡಿದು ಹಗಲಿನ ವೇಳೆ ಕಾಲೇಜಿಗೆ ಹೋಗುತ್ತಿದ್ದೆ. ಸಮಯ ಸಿಕ್ಕಾಗ ಅಲ್ಪ ಸ್ವಲ್ಪ ನಿದ್ದೆ ಮಾಡುತ್ತಿದ್ದೆ. ಅಪ್ಪ ಹಾಗೆ ಹೇಳಿದ್ದರಾದರೂ ಹಣವನ್ನು ಕಳಿಸುತ್ತಿದ್ದರು. ಆದರೆ ನಾನು ಪ್ರತಿತಿಂಗಳೂ ಹಣವನ್ನು ಹಿಂದಿರುಗಿಸುತ್ತಿದ್ದೆ. ಒಂದು ದಿನ ಅವರೇ ಬಂದುಬಿಟ್ಟರು ’ಇಷ್ಟೊಂದು ಹಟವೇ? ನಾವೇನು ಕ್ಷಮಿಸಲಾರದ ತಪ್ಪು ಮಾಡಿದ್ದೇವೆ?’
’ಹಟದ ಪ್ರಶ್ನೆಯಲ್ಲ, ನೀವು ನನ್ನ ನಿರ್ಧಾರವನ್ನು ಪ್ರತಿರೋಧಿಸಿದ್ದೇ ಹಣಕ್ಕಾಗಿ. ಹೆಚ್ಚು ಹಣ ಸಂಪಾದಿಸುವ ವಿದ್ಯೆ ಕಲಿಯಲು ಒತ್ತಾಯ ಪಡಿಸಿದಿರಿ. ಹೆದರಿಸಿಯಾದರೂ ಅಂಕೆಯಲ್ಲಿಡಲು ಪ್ರಯತ್ನಿಸಿದಿರಿ. ಹಣಕ್ಕೆ ಅಷ್ಟೊಂದು ಮಹತ್ವ ಇರುವುದಾದರೆ ನಾನೂ ಕೂಡ ನಿಮ್ಮ ಹಣವನ್ನು ಗೌರವಿಸಬೇಕಲ್ಲವೇ? ಅಷ್ಟಕ್ಕೂ ನಾನು ನಿಮ್ಮ ಯಾವ ಮಾತನ್ನು, ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ? ನೀವೇಕೆ ನಾನು ಹಣ ಹಿಂದಿರುಗಿಸಿದ್ದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವಿರಿ’ ಎಂದು ಹೇಳಿ ಸಮಾಧಾನ ಪಡಿಸಿದೆ.
೧೯೫೧ರಲ್ಲಿ ನಾನು ಜಾಬಲ್ಪುರದ ಹಿತಕಾರಿಣೀ ಕಾಲೇಜಿನಲ್ಲಿ ಪ್ರವೇಶ ಪಡೆದೆ. ಜಾಬಲ್ಪುರ ತಂದೆಯ ಊರಾದ ಗದರ್ವಾಡಾದಿಂದ ೮೦ ಕಿ.ಮೀ. ದೂರವಿದ್ದುದರಿಂದ ಆಗಾಗ ಊರಿಗೂ ಹೋಗಿ ಬರುತ್ತಿದ್ದೆ. ಜಾಬಲ್ಪುರದಲ್ಲಿ ನನ್ನ ಅತ್ತೆ ಮಾವ (ತಂದೆಯ ತಂಗಿ ಹಾಗು ಆಕೆಯ ಗಂಡ) ವಾಸಿಸುತ್ತಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಅವರ ಮನೆಯಲ್ಲೇ ಹೋಗಿ ಇಳಿದುಕೊಂಡೆ. ನಾನು ಅಲ್ಲಿ ಇಳಿದುಕೊಳ್ಳುವುದನ್ನು ಆಕೆಯ ಗಂಡ, ಬಾಯಿ ಬಿಟ್ಟು ಹೇಳದಿದ್ದರೂ, ಇಷ್ಟ ಪಡಲಿಲ್ಲ. ಅಷ್ಟಕ್ಕೂ ಸಹಿಸಬೇಕು? ನಾನಾಗಿದ್ದರೂ ಸಹಿಸುತ್ತಿರಲಿಲ್ಲ. ಅವರದು ದೊಡ್ಡ ಬಂಗಲೆಯಿತ್ತು. ಹಲವಾರು ಕೋಣೆಗಳಿದ್ದವು. ಕೋಣೆಯ ಒಂದು ಮೂಲೆಯಾದರೂ ನನಗೆ ಸಾಕಾಗುತ್ತಿತ್ತು. ಮೊದಲ ದಿನವೇ ನನ್ನ ಅತ್ತೆಗೆ ಹೇಳಿದೆ ’ನಿನ್ನ ಗಂಡನಿಗೆ ನಾನಿಲ್ಲಿ ಇರುವುದು ಇಷ್ಟವಿಲ್ಲದ ಮೇಲೆ ಈ ಬಂಗಲೆಯಲ್ಲಿ ಇರುವುದಕ್ಕಿಂತ ಹೊರಗೆ ಬೀದಿಯಲ್ಲಿ ಮಲಗುವುದೇ ಮೇಲು’
ಇದನ್ನು ಮರೆಯಲ್ಲಿ ನಿಂತು ಕೇಳಿಸಿಕೊಳ್ಳುತ್ತಿದ್ದ ಆತನು ’ಹಾಗೇನಿಲ್ಲ, ಧಾರಾಳವಾಗಿ ಇರಬಹುದು’ ಎಂದು ಹೇಳುತ್ತ ಹೊರಬಂದ. ಆದರೆ ತುಂಬ ದಿನ ಅಲ್ಲಿ ಉಳಿದುಕೊಳ್ಳದೇ ನನ್ನ ವಾಸ್ತವ್ಯವನ್ನು ಬೇರೆ ಕಡೆ ಬದಲಾಯಿಸಿದೆ. ಪ್ರತಿ ತಿಂಗಳೂ ನಾನು ಹೀಗೆ ವಾಸ್ತವ್ಯವನ್ನು ಬದಲಾಯಿಸುವುದು ನನ್ನ ಹವ್ಯಾಸವಾಗಿಬಿಟ್ಟಿತು. ನನ್ನ ಸ್ನೇಹಿತರಿಗೆ ನನ್ನ ಈ ಹವ್ಯಾಸ ಅರ್ಥವಾಗಲಿಲ್ಲ ’ಹೀಗೆ ಬದಲಾಯಿಸಿದಾಗ ಬೇರೆ ಬೇರೆ ಅನುಭವಗಳ, ಬೇರೆ ಬೇರೆ ಜನಗಳ ಪರಿಚಯವಾಗುತ್ತದೆ’ ಎಂದು ಹೇಳುತ್ತಿದ್ದೆ.
(ಎಮ್.ಎನ್. ರಾಯ್ ಪರಿಚಯವಾದುದು)
ಆ ದಿನಗಳಲ್ಲಿ ಪಠ್ಯವಿಷಯದಲ್ಲಿ ನನಗೆ ನನ್ನ ಉಪಾಧ್ಯಾಯರಿಗಿಂತ ಹೆಚ್ಚಿನ ಪರಿಶ್ರಮವಿತ್ತು ಎಂಬ ಒಂದೇ ಕಾರಣಕ್ಕೆ ಹಲವು ಕಾಲೇಜುಗಳನ್ನು ಬದಲಾಯಿಸಬೇಕಾಯಿತು. ನಾನು ವಿಪರೀತ ಓದುತ್ತಿದ್ದೆ. ಈ ಪ್ರೊಫೆಸರುಗಳಾದರೂ ಪಿಎಚ್.ಡಿ. ಬಂದ ಮರುದಿನವೇ ತಮ್ಮ ಓದಿಗೆ ತಿಲಾರ್ಪಣೆ ಮಾಡಿದ್ದರು. ಕಳೆದ ಮೂವತ್ತು ವರ್ಷಗಳ ಯಾವ ಬೆಳವಣಿಗೆಗಳೂ ಅವರಿಗೆ ತಿಳಿದಿರಲಿಲ್ಲ. ಕೀರ್ಕೆಗಾರ್ಡ್, ಸಾರ್ತ್ರೆ, ಹೈಡೆಗರ್, ಜಸ್ಪರ್ಸ್, ವಿಟ್‌ಗೆನ್‌ಸ್ಟೇನ್ ಇವರುಗಳ ಹೆಸರುಗಳನ್ನೇ ಕೇಳಿರಲಿಲ್ಲ. ಇವರುಗಳು ಎಂ.ಎ. ಮಾಡಿದ್ದ ಸಮಯದಲ್ಲಿ ಕಾಂಟ್, ಹೆಗೆಲ್, ವೋಲ್ಟೈರ್ ಮೊದಲಾದವರನ್ನಷ್ಟೇ ಓದಿಕೊಂಡಿದ್ದರು. ತರಗತಿಯಲ್ಲಿ ನಾನು ಪ್ರಶ್ನೆ ಕೇಳಲು ನಿಂತರೆ ಸಾಕು ಅವರು ಬೆವರು ಒರೆಸಿಕೊಳ್ಳಲಾರಂಭಿಸುತ್ತಿದ್ದರು. ಈ ಹುಡುಗ ಪಾಠ ಮಾಡಲು ಅವಕಾಶವನ್ನೇ ಕೊಡುವುದಿಲ್ಲ ಎಂಬ ದೂರುಗಳು ಪ್ರಾಂಶುಪಾಲರ ಬಳಿಗೆ ಹೋದವು. ಆಗ ಪ್ರಿನ್ಸಿಪಾಲರು ನನ್ನನ್ನು ಕರೆದು ’ದಯವಿಟ್ಟು ತಪ್ಪು ತಿಳಿಯದೆ ಈ ಕೂಡಲೆ ನಿನ್ನ ಟಿ.ಸಿ. ತೆಗೆದುಕೊಂಡು ಹೊರಡು. ಈ ವಯಸ್ಸಿನಲ್ಲಿ ಅವರು ಹೊಸ ಓದಿನಲ್ಲಿ ತೊಡಗಲು ಸಾಧ್ಯವೇ? ನಿನ್ನಿಂದ ಅವರಿಗೆ ಪ್ರತಿದಿನ ತರಗತಿಯ ಇತರ ವಿದ್ಯಾರ್ಥಿಗಳೆದುರಿಗೆ ಮುಖಭಂಗವಾದಂತೆ ಅನ್ನಿಸುತ್ತಿದೆ. ಮೂವತ್ತು ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿರುವ ಪ್ರೊಫೆಸರುಗಳನ್ನು ಕಳೆದುಕೊಳ್ಳಲು ನಮಗೆ ಇಷ್ಟವಿಲ್ಲ. ಇದೋ ನೋಡು ಒಬ್ಬ ಪ್ರೊಫೆಸರ್ ಆಗಲೇ ರಾಜಿನಾಮೆ ಪತ್ರವನ್ನೂ ಸಲ್ಲಿಸಿದ್ದಾರೆ. ನಿನ್ನನ್ನು ಕಳುಹಿಸಿದರೆ ಅವರು ಈ ರಾಜಿನಾಮೆ ಪತ್ರವನ್ನು ಹಿಂದೆಗೆದುಕೊಳ್ಳುತ್ತಾರಂತೆ’ ಎಂದು ತೋರಿಸಿದರು. ಆ ಪ್ರೊಫೆಸರುಗಳು ’ನಮಗೆ ಈಚಿನ ಬೆಳವಣಿಗೆಗಳು ತಿಳಿಯದು, ಅವನ್ನೆಲ್ಲ ಪರಿಶೀಲಿಸಬೇಕು’ ಎಂದು ಪ್ರಾಮಾಣಿಕವಾಗಿ ಹೇಳಿದ್ದರೂ ನನಗೆ ಅವರ ಮೇಲೆ ಗೌರವ ಮೂಡುತ್ತಿತ್ತು. ಆಗ ನಾನು ’ಆ ಪ್ರೊಫೆಸರ್ ಈ ವಯಸ್ಸಿನಲ್ಲಿ ನಿರುದ್ಯೋಗಿಯಾಗಿ ಕೆಲಸಕ್ಕೆ ಅಲೆಯುವುದು ಸರಿಯಲ್ಲ. ಅದು ನನ್ನ ಮನಸ್ಸಿಗೆ ತೃಪ್ತಿ ನೀಡುವುದಿಲ್ಲ.  ನನಗೆ ಇದಲ್ಲದಿದ್ದರೆ ಬೇರೆ ಕಾಲೇಜಿದೆ, ನನ್ನನ್ನು ಮನೆಗೆ ಕಳಿಸಿದ್ದಾಯಿತು ಎಂದು ಅವರಿಗೆ ಹೇಳಿ’ ಎಂದು ಹೇಳಿ ಹೊರ ಬರುತ್ತಿದ್ದೆ. ಎಷ್ಟೋ ಸಲ ನಾನು ಹೊರ ಹೋಗುವಾಗ ಪ್ರಾಂಶುಪಾಲರುಗಳು ಕಣ್ಣೀರು ಹಾಕುತ್ತಿದ್ದುದೂ ಉಂಟು. ತರಗತಿಯಲ್ಲಿ ನನ್ನ ಹಾಗು ಪ್ರೊಫೆಸರುಗಳ ನಡುವಣ ಸಂಭಾಷಣೆಗಳು ಹೆಚ್ಚು ಕಡಿಮೆ ಈ ರೀತಿ ಇರುತ್ತಿತ್ತು: ಒಮ್ಮೆ ಒಬ್ಬ ಪ್ರಸಿದ್ಧ ಪ್ರೊಫೆಸರ್, ಹಲವು ಕೃತಿಗಳ ಲೇಖಕ ಹಲವು ಪದವಿಗಳನ್ನು ಪಡೆದಿದ್ದ ವಿದ್ವಾಂಸ ತರಗತಿಯಲ್ಲಿ ’ಈಗ ನಾವು ಪಶ್ಚಿಮದ ತರ್ಕಶಾಸ್ತ್ರದ ಪಿತಾಮಹ ಅರಿಸ್ಟಾಟಲ್‌ನ ಸಿದ್ಧಾಂತಗಳನ್ನು ಪರಿಶೀಲಿಸೋಣ’ ಎಂದು ಪ್ರಾರಂಭಿಸಿದರು. ಆಗ ನಾನು ’ಸರ್, ಒಂದು ನಿಮಿಷ. ಅರಿಸ್ಟಾಟಲ್ ಒಂದೆಡೆ ಹೆಂಗಸರಿಗೆ ಗಂಡಸರಿಗಿಂತ ಕಡಿಮೆ ಹಲ್ಲುಗಳಿರುತ್ತವೆ ಎಂದು ಬರೆದಿದ್ದಾನೆ,..’
’ಇದೆಲ್ಲಿಯ ಅಸಂಬದ್ಧ ಮಾತು? ಅದಕ್ಕೂ, ನಮ್ಮ ಪಠ್ಯವಿಷಯಕ್ಕೂ ಏನು ಸಂಬಂಧ?’
’ಸಂಬಂಧವಿದೆ. ಅರಿಸ್ಟಾಟಲನ ತರ್ಕಶಾಸ್ತ್ರವನ್ನು ಪರಿಶೀಲಿಸುವ ಮುನ್ನ ಈ ಮೂಲಭೂತ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲೇ ಬೇಕು’.
’ಸರಿ, ಮುಂದುವರೆಸು’
 ’ನಿಮಗೆ ತಿಳಿದಿದೆಯೇ, ಆತನಿಗೆ ಇಬ್ಬರು ಹೆಂಡತಿಯರಿದ್ದರು’
’ನೀನು ಈ ತರಹದ ವಿಲಕ್ಷಣ ಮಾಹಿತಿಗಳನ್ನು ಅದೆಲ್ಲಿಂದ ಪತ್ತೆ ಮಾಡುವೆಯೋ, ತಿಳಿಯದು,..’
’ಹೆಂಗಸರು ಗಂಡಸರಿಗಿಂತ ಎಲ್ಲ ವಿಷಯದಲ್ಲೂ ಕೆಳಮಟ್ಟದವರು ಎಂಬುದು ಗ್ರೀಸ್ ದೇಶದ ಪುರಾತನ ನಂಬಿಕೆ. ಹಾಗಾಗಿ ಹೆಣ್ಣಿಗೆ ಗಂಡಿಗಿಂತ ಕಡಿಮೆ ಹಲ್ಲುಗಳಿವೆ ಎಂದು ಅಲ್ಲಿ ಬೋಧಿಸುತ್ತಿದ್ದರು. ಈ ಪುರುಷಕೇಂದ್ರಿತ ಆಲೋಚನೆಯ ಸಣ್ಣತನ ನಿಮ್ಮ ಆ ತರ್ಕ ಪಂಡಿತನಿಗೆ ಅರ್ಥವಾಗಲಿಲ್ಲವಲ್ಲ! ಅವನಿಗೆ ಇಬ್ಬರು ಹೆಂಡತಿಯರಲ್ಲಿ ಕೊನೆಯ ಪಕ್ಷ ಹಾಗೆ ಬರೆಯುವ ಮುನ್ನ ಒಬ್ಬಳ ಹಲ್ಲುಗಳನ್ನಾದರೂ ಎಣಿಸಿ ನೋಡಬಹುದಾಗಿತ್ತಲ್ಲವೇ? ಆ ಜನ ಸಾವಿರಾರು ವರ್ಷಗಳಿಂದ ನಂಬಿಕೊಂಡು ಬಂದಿದ್ದ ಒಂದು ಮೂಢನಂಬಿಕೆಯನ್ನೇ ಸತ್ಯವೆಂದು ನಂಬಿ ಅದನ್ನೇ ತನ್ನ ಪುಸ್ತಕದಲ್ಲೂ ಬರೆದಿರುವನಲ್ಲ ಇವನೆಂತಹ ತರ್ಕಶಾಸ್ತ್ರದ ಪಿತಾಮಹ?’
ನನ್ನ ವಾದದಿಂದ ಸಿಡಿಮಿಡಿಗೊಂದ ಆ ಪ್ರೊಫೆಸರ್ ನೇರವಾಗಿ ಪ್ರಿನ್ಸಿಪಾಲರ ಬಳಿಗೆ ಹೋಗಿ ಮೂರುದಿನದ ರಜೆಗೆ ಅರ್ಜಿ ಸಲ್ಲಿಸಿದ, ಜೊತೆಗೆ ’ನಾಲ್ಕನೆಯ ದಿನದಿಂದ ಈ ಕಾಲೇಜಿನಲ್ಲಿ ಆ ಹುಡುಗನಿದ್ದರೆ ನಾನು ರಾಜಿನಾಮೆ ಪತ್ರ ಸಲ್ಲಿಸುತ್ತೇನೆ’ ಎಂದು ಹೇಳಿದನಂತೆ. ಕೂಡಲೆ ಪ್ರಿನ್ಸಿಪಾಲರು ನನ್ನನ್ನು ಕರೆದು ’ಅವರು ಈ ಕಾಲೇಜಿನ ಅತ್ಯಂತ ಅನುಭವೀ ಪ್ರಾಧ್ಯಾಪಕರು. ಇಷ್ಟು ದಿನದ ಅವರ ಸೇವೆಯಲ್ಲಿ ಒಂದೇ ಒಂದು ಸಮಸ್ಯೆಯೂ ಹುಟ್ಟಿರಲಿಲ್ಲ. ಈಗ ಇದ್ದಕ್ಕಿದ್ದಂತೆ ನಿನ್ನನ್ನು ಹೊರಗಟ್ಟುವಂತೆ ಹೇಳುತ್ತಿದ್ದಾರಲ್ಲ! ಅಷ್ಟಕ್ಕೂ ತರಗತಿಯಲ್ಲಿ ಏನು ನಡೆಯಿತು?’ ಎಂದು ಕೇಳಿದರು. ನಾನು ನಡೆದದ್ದನ್ನು ಹೇಳಿದೆ. ’ನನಗೆ ನಿನ್ನನ್ನು ಕಳಿಸಲು ಇಷ್ಟವಿಲ್ಲ. ಆದರೆ ನಾನೇನು ಮಾಡಲಿ? ನೀನು ಬೇರೆ ಕಾಲೇಜಿಗೆ ಹೋಗಿ ಸೇರಿಕೋ, ನಾನೇ ಖುದ್ದಾಗಿ ಆ ಕಾಲೇಜಿನವರಿಗೆ ಹೇಳಿ ಒಂದು ಶಿಫಾರಸು ಪತ್ರವನ್ನೂ ಕೊಡುತ್ತೇನೆ’ ಎಂದರು ಹೀಗೆ ಮೂರು ವರ್ಷಗಳಲ್ಲಿ ಇಪ್ಪತ್ತು ಕಾಲೇಜುಗಳನ್ನು ಬದಲಾಯಿಸಿದೆ. ಈಗ ಆ ಎಲ್ಲ ಕಾಲೇಜುಗಳೂ ಸೇರಿ ಜಾಬಲ್ಪುರ್ ವಿಶ್ವವಿದ್ಯಾಲಯವಾಗಿದೆ.
ನಾನು ಆ ಬೇರೊಂದು ಕಾಲೇಜಿಗೆ ಹೋದೆ. ಅಷ್ಟು ಹೊತ್ತಿಗಾಗಲೇ ನನ್ನ ಕೀರ್ತಿ ಜಿಲ್ಲೆಯ ಎಲ್ಲ ಇಪ್ಪತ್ತು ಕಾಲೇಜುಗಳಲ್ಲೂ ಹರಡಿಬಿಟ್ಟಿತ್ತು. ನಾನು ತಂದಿದ್ದ ಪತ್ರವನ್ನು ಆ ಹೊಸ ಕಾಲೇಜಿನ ಪ್ರಿನ್ಸಿಪಾಲರು ’ನೀನು ಯಾವ ತರಗತಿಗೂ ಹಾಜರಾಗುವುದಿಲ್ಲ ಎಂದು ಭರವಸೆ ಕೊಟ್ಟರೆ ಮಾತ್ರ ನಾನು ನಿನಗೆ ಪ್ರವೇಶ ನೀಡಬಲ್ಲೆ’ ಎಂದು ಹೇಳಿದರು.
ಆಗ ನಾನು ’ಹಾಗಿದ್ದರೆ ನನ್ನ ಪರೀಕ್ಷೆಯ ಗತಿ?’ ಎಂದೆ
’ಪರೀಕ್ಷೆಗೆ ತೊಂದರೆ ಆಗುವುದಿಲ್ಲ ಅದಕ್ಕೆಲ್ಲ ನಾನು ವ್ಯವಸ್ಥೆ ಮಾಡುತ್ತೇನೆ ಆದರೆ ಈ ಒಪ್ಪಂದ ನಮ್ಮಿಬ್ಬರೊಳಗೇ ಇರಲಿ’ ಎಂದರು. ’ಹಾಗಿದ್ದರೆ ತೊಂದರೆ ಇಲ್ಲ, ನಾನು ಕೊನೆಯ ಪಕ್ಷ ಲೈಬ್ರರಿಯನ್ನಾದರೂ ಪ್ರವೇಶಿಸಬಹುದೇ?’ ಎಂದು ಕೇಳಿದೆ. ಅದಕ್ಕೆ ಸಮ್ಮತಿಸಿದರು. ತೊಂದರೆಗಳಾಗದಂತೆ ಅವರು ಇಷ್ಟೆಲ್ಲ ಮುಂಜಾಗ್ರತೆ ವಹಿಸಿದ್ದರೂ ತೊಂದರೆಗಳೇನೂ ನಿಲ್ಲಲಿಲ್ಲ. ಕಾಲೇಜು ದಿನಗಳಲ್ಲಿ ನಾನು ತುಂಬ ಕಟ್ಟು ಮಸ್ತಾದ ಆಳು. ೧೯೦ ಪೌಂಡ್ ತೂಕವಿದ್ದೆ. ಆಗ ನಾನು ಕಾಲೇಜಿಗೆ ಉದ್ದನೆಯ ಬಿಳಿಪಂಚೆ, ಮೇಲೆ ಬಿಳಿಯ ಶಲ್ಯ ಹಾಕಿಕೊಂಡು ಹೋಗುತ್ತಿದ್ದೆ. ಅಂಗಿಯನ್ನು ಹಾಕುತ್ತಿರಲಿಲ್ಲವಾದ್ದರಿಂದ ಎದೆ ಗಾಳಿಗೆ ತೆರೆದುಕೊಂಡಿರುತ್ತಿತ್ತು. ಒಂದು ದಿನ ಪ್ರಿನ್ಸಿಪಾಲರು ನನ್ನನ್ನು ಕರೆದು ’ನಮ್ಮ ಕಾಲೇಜಿನಲ್ಲಿ ಉಡುಗೆ ತೊಡುಗೆಗಳ ವಿಷಯದಲ್ಲಿ ಕೆಲವು ನಿಯಮಗಳಿವೆ. ಹೀಗೆ ಬರುವುದು ಶಿಷ್ಟಾಚಾರವಲ್ಲ ಎಂದರು. ಆಗ ನಾನು ’ಹಾಗಿದ್ದರೆ ನಿಮ್ಮ ನಿಯಮಗಳನ್ನೇ ಬದಲಾಯಿಸಿಕೊಳ್ಳಿ. ನನ್ನ ಎದೆಗೆ ಗಾಳಿಯಾಡಬೇಕು. ನಾನು ದೇಹದ ಪ್ರಕೃತಿಗೆ ಅನುಗುಣವಾಗಿ ನಡೆಯುವವನು, ನಿಮ್ಮ ಶಿಷ್ಟಾಚಾರಕ್ಕೆ ಅನುಗುಣವಾಗಿ ಅಲ್ಲ’ ಎಂದಿದ್ದೆ. ಪ್ರತಿರೋಧಿಸುವುದು ನನ್ನ ಉದ್ದೇಶವಲ್ಲ, ನನ್ನ ಪ್ರಾಮಾಣಿಕ ಮಾತುಗಳು ಅವರಿಗೆ ಪ್ರತಿರೋಧದಂತೆ ತೋರುತ್ತಿತ್ತು. ಯಾರನ್ನೂ ನೋಯಿಸದೇ ಪ್ರಾಮಾಣಿಕವಾಗಿ ವರ್ತಿಸಿದರೆ ಏನು ಅಪರಾಧ ಎಂದು ನನಗೆ ಕೊನೆಗೂ ಅರ್ಥವಾಗಲಿಲ್ಲ.
ಒಂದು ವರ್ಷದ ಕರಾರಿಗೆ ಸಹಿ ಹಾಕಿ ನಾನು ಸಂಪಾದಕನಾದ ಮೇಲೆ ಆ ಪತ್ರಿಕೆಯ ಎಲ್ಲ ರಾಜಕೀಯ ವಿಷಯಗಳೂ ಕಡೆಯ ಪುಟಕ್ಕೆ ಸರಿದವು. ಲೇಖನದ ರೂಪದಲ್ಲಿದ್ದ ಅವರ ಭಾಷಣಗಳು ಕೆಲವು ಸಾಲುಗಳಿಗೆ ಇಳಿದವು. ಅವರ ಫೋಟೋಗಳು ಪತ್ರಿಕೆಯ ಮುಖಪುಟಗಳಿಂದ ಮರೆಯಾದವು. ಲೋಕದಲ್ಲಿ ಸೌಂದರ್ಯವೆಂಬುದು ಇನ್ನೂ ಉಳಿದಿದೆ. ಓದುಗರು ಪ್ರತಿದಿನ ಅವೇ ಹಳಸಲು ಮುಖಗಳನ್ನು ಏಕೆ ನೋಡಬೇಕು? ಸಿತಾರ್ ಹಿಡಿದ ಪಂ.ರವಿಶಂಕರ್ ಚಿತ್ರವನ್ನು ಹಾಕುತ್ತಿದ್ದೆ, ಇನ್ನೂ ಹಲವು ಕಲಾವಿದರ, ಕವಿಗಳ ಛಾಯಾಚಿತ್ರಗಳನ್ನು ಹಾಕಿಸುತ್ತಿದ್ದೆ. ನಾನು ಸಂಪಾದಕನಾದ ಮೊದಲ ದಿನವೇ ಸಾವಿರಾರು ಕುಷ್ಠರೋಗಿಗಳಿಗೆ ಬದುಕನ್ನು, ಆತ್ಮಗೌರವವನ್ನು ತಂದುಕೊಟ್ಟ ಬಾಬಾ ಆಮ್ಟೆಯವರ ಲೇಖನವನ್ನು ಪ್ರಕಟಿಸಿದೆ. ಆದರೆ ಕೆಲವು ವಾರಗಳಿಗಿಂತ ಹೆಚ್ಚು ಕಾಲ ನನಗೆ ಅಲ್ಲಿ ಕೆಲಸ ಮಾಡಲಾಗಲಿಲ್ಲ. ನನಗೆ ಪತ್ರಿಕೋದ್ಯಮ ಹಿಡಿಸದಿರಲು ಎರಡು ಕಾರಣಗಳಿದ್ದವು: ಅಲ್ಲಿ, ಅಧಿಕಾರದ ವಿರುದ್ಧವಾಗಿ ಏನನ್ನೂ ಬರೆಯುವಂತಿರಲಿಲ್ಲ. ಎರಡನೆಯದು, ಆ ಜನಕ್ಕೆ ನಿಜವಾದ ಒಳ್ಳೆಯ ಸುದ್ದಿಗಳು ಬೇಕಿರಲಿಲ್ಲ. ವರದಿಗಾರರು ಕೊಲೆ, ಸುಲಿಗೆ, ಅತ್ಯಾಚಾರ, ಹಗರಣಗಳು ಇಂಥವುಗಳ ಬೆನ್ನು ಹತ್ತಿ ಹೋಗುತ್ತಿದ್ದರು. ಇಂತಹ ಸುದ್ದಿಗಳು ಸಮಾಜಕ್ಕೆ ತುಂಬ ಅಪಾಯಕಾರಿ ಎಂದು ನನ್ನ ವರದಿಗಾರರಿಗೆ ಹೇಳುತ್ತಿದ್ದೆ. ಏನೇ ಆದರೂ ಅದೊಂದು ಉದ್ಯಮ. ನನ್ನ ಮಾಲೀಕ ’ನಿನ್ನಂತಹ ಸಂಪಾದಕನನ್ನು ಇಟ್ಟುಕೊಂಡರೆ ನನ್ನ ಪತ್ರಿಕೆ ಮುಳುಗಿ ಹೋಗುತ್ತದೆ’ ಎಂದು ಅಬ್ಬರಿಸುತ್ತಿದ್ದ. ಆಗ ನಾನು ’ಸಮಾಜದ ಹಿತದೃಷ್ಟಿಯಿಂದ ಹಾಗಾಗುವುದೇ ಕ್ಷೇಮ’ ಎಂದು ಹೇಳಿ ಹೊರನಡೆದೆ.
ಸಾಹಿತಿಗಳ ಸಂಗದಲ್ಲಿ
ಸಾಹಿತಿಗಳ ಸಹವಾಸ ಒಳ್ಳೆಯದಲ್ಲ. ನಾನು ಅವರ ಬರವಣಿಗೆಗಳನ್ನು ಓದಿದ್ದೆ, ಮೆಚ್ಚಿದ್ದೆ. ಆದರೆ ಅವರ ಸಹವಾಸದಿಂದ ಅಷ್ಟೇ ಬೇಸತ್ತಿದ್ದೇನೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ರಾಮಧಾರಿ ಸಿಂಗ್ ದಿನಕರ್ ಆಗಾಗ ನನ್ನನ್ನು ನೋಡಲು ಬರುತ್ತಿದ್ದರು. ಅವರು ಪಾರ್ಲಿಮೆಂಟ್ ಸದಸ್ಯರೂ ಆಗಿದ್ದರು. ನನಗೆ ಆತನ ಬಗ್ಗೆ ವಿಶ್ವಾಸವಿದ್ದರೂ ಅವರನ್ನು ಮೆಚ್ಚಿಕೊಳ್ಳಲು ಕೊನೆಗೂ ಆಗಲೇ ಇಲ್ಲ. ವಿಶ್ವಾಸ ಬೇರೆ. ಮೆಚ್ಚುಗೆ ಬೇರೆ. ಆತ ತನ್ನೊಳಗಿನ ರೋಗಗಳನ್ನೆಲ್ಲ ನನ್ನ ಮುಂದೆ ತೋಡಿಕೊಳ್ಳುತ್ತಿದ್ದ ’ದಿನಕರ್, ನೀನೊಬ್ಬ ಕವಿ. ಹೀಗೆಲ್ಲ ಯೋಚಿಸಬಾರದು’ ಎನ್ನುತ್ತಿದ್ದೆ. ’ನಾನೇನು ಮೂರು ಹೊತ್ತೂ ಕವಿಯೇ ಆಗಿರಬೇಕೇ? ನಾನೂ ಒಬ್ಬ ಮನುಷ್ಯನಲ್ಲವೇ?’ ಎಂದು ಕೇಳುತ್ತಿದ್ದರು. ’ಆದರೆ ನಾನು ನಿನ್ನನ್ನು ಒಬ್ಬ ಕವಿಯಾಗಿ ಮಾತ್ರ ಬಲ್ಲೆ. ನಿನ್ನ ಮನುಷ್ಯತ್ವ ನಿನ್ನಲ್ಲಿಯೇ ಇರಲಿ. ಅದನ್ನು ದಯವಿಟ್ಟು ಹೊರಗೆಡಹಬೇಡ’ ಎನ್ನುತ್ತಿದ್ದೆ. ಹಾಗೆಯೇ ನಮ್ಮ ಊರಿನಲ್ಲಿ ಭವಾನಿಪ್ರಸಾದ್ ತಿವಾರಿ ಎಂಬ ಇನ್ನೊಬ್ಬ ಕವಿ ಇದ್ದ. ಇಪ್ಪತ್ತರ ಹರಯದಲ್ಲಿ ನಾನು ನನ್ನ ಮೊದಲ ಸಾರ್ವಜನಿಕ ಭಾಷಣವನ್ನು ಮಾಡಿದಾಗ ಆತನೇ ಅಧ್ಯಕ್ಷತೆ ವಹಿಸಿದ್ದ. ’ಈ ದಿನ ನಾನು ಅಧ್ಯಕ್ಷ ಭಾಷಣ ಮಾಡುವುದಿಲ್ಲ. ಈ ಯುವಕನ ಮಾತುಗಳೇ ಇಂದಿನ ಕೊನೆಯ ಮಾತುಗಳಾಗಲಿ, ಅವನು ಆಡಿದ ಒಂದೊಂದು ಮಾತುಗಳು ಸಹ ಪ್ರತಿಯೊಬ್ಬರೂ ಯೋಚಿಸುವಂತಹುದು’ ಎಂದು ಹೇಳಿ ಭಾಷಣವನ್ನು ನಿಲ್ಲಿಸಿದ. ಆಮೇಲೆ ತನ್ನ ಕಾರಿನಲ್ಲೇ ನನ್ನನ್ನು ಮನೆಗೆ ಕರೆದುಕೊಂಡು ಹೋದ. ಆತನಿಗೆ ಬೀಡಾ ತಂಬಾಕು ಹಾಕುವ ದುರಭ್ಯಾಸವಿತ್ತು. ಕಾರಿನಲ್ಲಿ ದಾರಿಯುದ್ದಕ್ಕೂ ಒಂದೇ ಸಮನೆ ಬೀಡಾ ಜಗಿಯುತ್ತಿದ್ದ. ಕವಿಗಳನ್ನು ಹತ್ತಿರದಿಂದ ನೋಡಲೇ ಬಾರದು ಎಂದು ನಾನು ಅಂದೇ ನಿರ್ಧರಿಸಿದೆ. ತಮ್ಮ ಕಲ್ಪನೆಯಲ್ಲಿ ಸತ್ಯದ ಸಮೀಪಕ್ಕೆ ಜಿಗಿದು ಹಿಂದಿರುಗುವ ಜನ ಅವರು. ಋಷಿ ಬೇರೆ, ಕವಿ ಬೇರೆ. ಋಷಿ ಎಂದರೆ ದ್ರಷ್ಟಾರ ’ಕಾಣ್ಕೆ’ ಪಡೆದವನು ಎಂದರ್ಥ. ಆದ್ದರಿಂದಲೇ ಇರಬೇಕು ಜಗತ್ತಿನ ಶ್ರೇಷ್ಠ ಕವಿಗಳು ಕುರುಡರು ಎಂಬಂತೆ ಚಿತ್ರಿತರಾಗಿರುವುದು.
ಪಂಡಿತ್ ರವಿಶಂಕರ್ ಮಹಾ ಮೇಧಾವಿ, ಹುಟ್ಟು ಕಲಾವಿದರು. ಸಾಂಪ್ರದಾಯಿಕ ಸಂಗೀತ ವಿದ್ವಾಂಸರಲ್ಲಿ ಕಾಣಸಿಗದ ಸ್ವೋಪಜ್ಞತೆ ಹಾಗು ಪ್ರಯೋಗ ಶೀಲತೆಗಳನ್ನು ಅವರಲ್ಲಿ ಕಂಡಿದ್ದೆ. ಹಾಗಲ್ಲದೆ ಅವರು ಯೆಹೂದಿ ಮೆನ್ಯುಹಿನ್‌ರ ಜೊತೆ ಜುಗಲ್‌ಬಂದಿ ನಡೆಸುವಂಥ ಹುಚ್ಚು ಸಾಹಸವನ್ನು ನಮ್ಮ ಮನಸ್ಸಿಗೆ ಊಹಿಸಲಾದರೂ ಸಾಧ್ಯವೇ? ಸಾಹಸಿಗಳಲ್ಲಿ ಮಾತ್ರ ಹುಚ್ಚುತನವನ್ನು ಕಾಣಬಹುದು. ಜಾತಿಯಲ್ಲಿ ಬ್ರಾಹ್ಮಣನಾಗಿದ್ದ ಆತ ಒಬ್ಬ ಮುಸಲ್ಮಾನ್ ಹೆಣ್ಣನ್ನು ಕೈಹಿಡಿದ. ಅದೂ ಆತನ ಗುರುವಿನ ಮಗಳನ್ನೇ ಮದುವೆಯಾದ. ಇಂಥ ಮದುವೆಗೆ ಅವರ ಗುರುವೂ ಅಲ್ಲವುದ್ದೀನ್ ಖಾನ್ ಕೂಡ ಒಪ್ಪಿದರು. ಕೆಲವು ಶಿಸ್ತಗಳನ್ನು ಇನ್ನೊಬ್ಬರ ಬಲವಂತ ಇಲ್ಲದೆ, ಸ್ವಇಚ್ಛೆಯಿಂದ ನಮ್ಮ ಮೇಲೆ ಹೇರಿಕೊಂಡಾಗ ಒಂದು ವಿಚಿತ್ರ ಸ್ವಾತಂತ್ರ್ಯದ ಅನುಭವ ಆಗುವುದುಂಟು. ಶಿಸ್ತು ಅಭ್ಯಾಸಗಳಿರದೆ ಸಮುದ್ರದಲ್ಲಿ ಸ್ವತಂತ್ರವಾಗಿ ಈಜಲಾಗುವುದೇ? ಕ್ರಮೇಣ ಅಭ್ಯಾಸ, ಅನುಶಾಸನಗಳೇ ಸ್ವಾತಂತ್ರ್ಯದ ಅಭಿವ್ಯಕ್ತಿಗಳಾಗಿಬಿಡುತ್ತವೆ. ರವಿಶಂಕರ್ ಸಿತಾರ್‌ನ್ನು ಸ್ಪರ್ಶಿಸಿದರೂ ಸಾಕು ಒಂದು ಬಗೆಯ ಮಾಂತ್ರಿಕತೆ ಹುಟ್ಟಿಕೊಳ್ಳುತ್ತದೆ. ಅವರು ಯಾವುದೇ ವಾದನವನ್ನು ಆರಿಸಿಕೊಂಡಿದ್ದರೂ ಇದೇ ಮಾಂತ್ರಿಕತೆಯನ್ನು ಉಂಟು ಮಾಡಬಲ್ಲವರಾಗಿದ್ದರು ಎಂದು ನನ್ನ ತಿಳುವಳಿಕೆ. ವ್ಯಕ್ತಿಯ ಸತ್ವ ಮುಖ್ಯ, ಬಾಹ್ಯ ಉಪಕರಣಗಳಲ್ಲ. 
ಮಾಸ್ತೋ ಜೊತೆಯಲ್ಲಿ ಒಮ್ಮೆ ರವಿಶಂಕರ್‌ರ ಗುರು ಅಲ್ಲಾವುದ್ದೀನ್ ಖಾನ್‌ರನ್ನು ಭೇಟಿ ಮಾಡಿದ್ದೆ. ನಾನು ಭೇಟಿಯಾದಾಗ ಅವರಿಗೆ ತೊಂಬತ್ತು ವರ್ಷ ವಯಸ್ಸು. ಆಗ ಅವರು ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ದಿನಗಳನ್ನು ನೆನೆಸಿಕೊಳ್ಳುತ್ತಿದ್ದರು. ಆಗಲೂ ಅವರು ಪ್ರತಿದಿನ ೮ ರಿಂದ ೧೨ ಗಂಟೆಗಳ ಕಾಲ ಸಿತಾರ್ ಅಭ್ಯಾಸ ಮಾಡುತ್ತಿದ್ದರು. ’ಮೂರು ದಿನಗಳ ಕಾಲ ಅಭ್ಯಾಸವಿಲ್ಲದಿದ್ದರೆ ಕೇಳುಗರು ಗುರುತಿಸಿಬಿಡುತ್ತಾರೆ. ಎರಡು ದಿನ ಬಿಟ್ಟರೆ ವಿದ್ವಾಂಸರು ಗುರುತಿಸಬಲ್ಲರು. ಒಂದು ದಿನ ಅಭ್ಯಾಸ ನಿಂತರೂ ನನ್ನ ಶಿಷ್ಯರೇ ಗುರುತಿಸಿಬಿಡುವರು. ಇನ್ನು ನನ್ನ ಮಟ್ಟಿಗೆ ಪ್ರತಿಸಲ ಸಿತಾರನ್ನು ಕೈಗೆತ್ತಿಕೊಂಡಾಗಲೂ ಅಭ್ಯಾಸ ಬೇಕೇಬೇಕು ಎನಿಸುತ್ತದೆ’ ಎನ್ನುತ್ತಿದ್ದರು. ಅಲ್ಲಾವುದ್ದೀನ್‌ರಿಂದ ಹಲವು ಕೊಡುಗೆಗಳು ಸಂಗೀತ ಲೋಕಕ್ಕೆ ಸಂದಿವೆ. ಈ ದಿನ ಭಾರತದ ಎಲ್ಲ ಶ್ರೇಷ್ಠ ವಾಗ್ಗೇಯಕಾರರೂ ಒಂದಲ್ಲ ಒಂದು ರೀತಿಯಲ್ಲಿ ಅಲ್ಲವುದ್ದೀನನ ಶಿಷ್ಯರೇ. ಅವರನ್ನು ಎಲ್ಲರೂ ಬಾಬಾ ಎಂದೇ ಕರೆಯುವುದು. ಅವರು ಎಲ್ಲ ತರಹದ ವಾದ್ಯಗಳನ್ನೂ ಸುಲಭವಾಗಿ, ತಮ್ಮ ಜೀವಮಾನವಿಡೀ ಆ ಒಂದು ವಾದ್ಯವನ್ನೇ ಅಭ್ಯಾಸ ಮಾಡುತ್ತಿದ್ದರು ಎಂದು ಭಾಸವಾಗುವಂತೆ, ನುಡಿಸುತ್ತಿದ್ದರು. ಅವರಿದ್ದ ಜಾಗ ನನ್ನ ವಿಶ್ವವಿದ್ಯಾಲಯದಿಂದ ಕೆಲವೇ ಮೈಲಿಗಳಷ್ಟು ದೂರ ಇತ್ತು. ವರ್ಷವಿಡೀ ಒಂದಲ್ಲ ಒಂದು ಹಬ್ಬ ಇರುತ್ತಿದ್ದರಿಂದ ಸದಾ ಅವರ ಸುತ್ತ ಜನ ನೆರೆದಿರುತ್ತಿದ್ದರು. ಹಾಗಾಗಿ ನಾನು ಯಾವ ಹಬ್ಬವೂ ಇರದ ದಿನಗಳಲ್ಲಿ ಅವರನ್ನು ನೋಡಲು ಹೋಗುತ್ತಿದ್ದೆ. ’ಬಾಬಾ ಹಬ್ಬವಿಲ್ಲದ ದಿನಾಂಕಗಳನ್ನು ತಿಳಿಸಿ’ ಎಂದು ಕೇಳುತ್ತಿದ್ದೆ ’ಆ ಬಿಡುವಿನ ದಿನಗಳನ್ನೂ ನಿನಗೆ ಕೊಟ್ಟುಬಿಡಬೇಕೇ?’ ಎಂದು ನಗುತ್ತಲೇ ಕೇಳುತ್ತಿದ್ದರು ಹಾಗು ಯಾವುದಾದರೂ ಮೂರು ದಿನಗಳನ್ನು ನೀಡುತ್ತಿದ್ದರು. ಅಂತಹ ದಿನಗಳಲ್ಲಿ ನಾನು ಅವರ ಬಳಿ ಕುಳಿತು ’ಬಾಬಾ ನಿಮಗೆ ಸುಮ್ಮನಿರಬೇಕು ಎನಿಸಿದರೆ ಸುಮ್ಮನಿರಿ, ವಾದ್ಯಗಳನ್ನು ನುಡಿಸಬೇಕು ಎಂದೆನಿಸಿದರೆ ನುಡಿಸಿ, ಅಥವ ಕುರಾನ್ ಪಠಣ ಮಾಡಬೇಕೆನಿಸಿದರೆ ಓದಿ, ಕೇಳುತ್ತೇನೆ. ಒಟ್ಟಿನಲ್ಲಿ ನಿಮ್ಮ ಸಾಮೀಪ್ಯವನ್ನು ಅನುಭವಿಸಲು ಬಂದಿದ್ದೇನೆ’ ಎನ್ನುತ್ತಿದ್ದೆ. ನನ್ನ ಮಾತುಗಳನ್ನು ಕೇಳಿ ಅವರಿಗೆ ತುಂಬ ಸಂತೋಷವಾಗುತ್ತಿತ್ತು. ಮಾಸ್ತೋ ಇಂಥವರನ್ನೆಲ್ಲ ನನಗೆ ಪರಿಚಯಿಸಲು ಕಾರಣವಿತ್ತು. ಹಿಂದೆ ವಿಲಾಯತ್ ಖಾನ್ ಎಂಬ ಸಿತಾರ್ ವಾದಕರಿದ್ದರು. ರವಿಶಂಕರ್‌ಗಿಂತಲೂ ಮಹಾ ವಿದ್ವಾಂಸರು. ಆದರೆ ರವಿಶಂಕರ್‌ರಂತೆ ಹುಚ್ಚು ಸಾಹಸಿಯಲ್ಲ. ಶಾಸ್ತ್ರೀಯವಾದ ಯಾವ ಸಂಗತಿಯೂ ನನಗೆ ಹಿಡಿಸದಿದ್ದರೂ ಅವರ ಸಂಗೀತ ಕೇಳಿಯೇ ನನಗೆ ಶಾಸ್ತ್ರೀಯ ಸಂಗೀತದ ಬಗ್ಗೆಯೂ ಅಪಾರ ಗೌರವ ಮೂಡಿದ್ದು. ಆತ ಒಬ್ಬ ಶುದ್ಧ ಸಾಂಪ್ರದಾಯಿಕ ಕಲಾವಿದ.
ಆತ್ಮಜ್ಞಾನದ ಅನುಭವ
’ಗುರುವಿನ ಅನುಗ್ರಹ ಪಡೆದವನೇ ನಿಜಕ್ಕೂ ಕೃತಕೃತ್ಯ’ ಎಂದು ಬುದ್ಧ ಒಂದೆಡೆ ಹೇಳುತ್ತಾನೆ. ಆ ಅರ್ಥದಲ್ಲಿ ನಾನು ಕೃತಕೃತ್ಯನಲ್ಲ. ನಾನು ಗುರುವಿನ ನೆರವೇ ಇಲ್ಲದೆ ಸಾಧನಾ ಮಾರ್ಗದಲ್ಲಿ ಮುಂದುವರೆದಿದ್ದೆ. ಗುರು ಬೇಡ ಎಂದಲ್ಲ, ಆದರೆ ನನಗೆ ಗುರು ಹುಡುಕಿಯೂ ಸಿಗಲಿಲ್ಲ ಅಷ್ಟೇ. ಗುರು ಒಂದು ಬಾಗಿಲಿನಂತೆ. ಸಿಖ್ಖರು ತಮ್ಮ ಗುಡಿಯನ್ನು ’ಗುರುದ್ವಾರ’ ಎಂದು ಕರೆಯುತ್ತಾರೆ. ಯೇಸುವು ’ನಾನೇ ಮುಂಬಾಗಿಲು, ನನ್ನ ಮೂಲಕವೇ ನಿಮಗೆ ಪರಲೋಕದ ರಾಜ್ಯಕ್ಕೆ ಪ್ರವೇಶ’ ಎನ್ನುತ್ತಾನೆ. ಆದರೆ ಕೆಲವು ಸಲ ಗುರುವಿಲ್ಲದೆಯೂ ಆ ಪ್ರವೇಶ ಸಾಧ್ಯ. ಆದರೆ ತುಂಬ ಕಷ್ಟಸಾಧ್ಯ. ಅದಕ್ಕೆ ನಾನೇ ಸಾಕ್ಷಿ. ನಾನು ಒಂದು ವರ್ಷಗಳ ಕಾಲ ಬಹಳ ಹೆಣಗಿದೆ. ನನ್ನೊಳಗೆ ಏನು ನಡೆಯುತ್ತಿತ್ತೋ ನನಗೆ ತಿಳಿಯುತ್ತಿರಲಿಲ್ಲ. ಒಂದು ವರ್ಷಗಳ ಕಾಲ ನನ್ನನ್ನು ನಾನು ಜೀವಂತವಾಗಿ ಇರಿಸಿಕೊಳ್ಳುವುದೇ ಪ್ರಯಾಸವಾಗುತ್ತಿತ್ತು. ದೇಹಾತ್ಮಭಾವ ಸಂಪೂರ್ಣ ಹೊರಟು ಹೋಗಿತ್ತು. ದಿನಗಟ್ಟಲೆ, ತಿಂಗಳುಗಟ್ಟಲೆ ನನಗೆ ಹಸಿವೆಯೇ ಆಗುತ್ತಿರಲಿಲ್ಲ. ನಾನಾಗಿ ನೆನೆಸಿಕೊಂಡು ಬಲವಂತವಾಗಿ ತುತ್ತಿನ ಚೀಲವನ್ನು ತುಂಬಿಸಿಕೊಳ್ಳಬೇಕಾಗುತ್ತಿತ್ತು. ತಲೆಯನ್ನು ಗೋಡೆಗೆ ಚಚ್ಚಿಕೊಂಡು ದೇಹಾತ್ಮಪ್ರಜ್ಞೆಗೆ ಮತ್ತೆ ಮತ್ತೆ ಮರಳಬೇಕಾಗಿತ್ತು. ದೇಹಾತ್ಮಭಾವವನ್ನು ಕಳೆದುಕೊಳ್ಳದಿರಲು ಆ ದಿನಗಳಲ್ಲಿ ನಾನು ಪ್ರತಿದಿನ ಪ್ರತಿಸಂಜೆ ಎಂಟೆಂಟು ಮೈಲಿ ಒಂದೇ ಸಮನೆ ಓಡುತ್ತಿದ್ದೆ. ನನ್ನ ಓಟವನ್ನು ನೋಡುತ್ತಿದ್ದ ಜನ ನನಗೆ ಮತಿಭ್ರಮಣೆಯಾಗಿದೆ ಎಂದುಕೊಳ್ಳುತ್ತಿದ್ದರು. ಆಗ ಯಾರೊಂದಿಗೂ ನಾನು ಮಾತನಾಡುತ್ತಿರಲಿಲ್ಲ. ಅದು ಮೌನವ್ರತವಲ್ಲ. ಲೋಕದ ಎಲ್ಲ ವ್ಯವಹಾರಗಳೂ ನನ್ನ ಕಣ್ಣಿಗೆ ಕಾರ್ಯಕಾರಣ ಕೊಂಡಿ ಕಳಚಿಕೊಂಡು ನಡೆಯುತ್ತಿದ್ದಂತೆ ಭಾಸವಾಗುತ್ತಿತ್ತು. ಯಾರೊಂದಿಗಾದರೂ ಮಾತಿಗೆ ತೊಡಗಿದರೆ ಮಾತು ಬೆಳೆಸಿದ ಕಾರಣವೇ ಮರೆತು ಹೋಗುತ್ತಿತ್ತು. ಮಾತಿನ ನಡುವೆಯೇ ವಾಕ್ಯವನ್ನು ಹೇಗೆ ಪ್ರಾರಂಭಿಸಿದೆ, ಹೇಗೆ ಮುಗಿಸಬೇಕು ಎಂಬ ಮೂಲ ವ್ಯಾಕರಣ ನಿಯಮವೇ ಮರೆತು ಹೋಗುತ್ತಿತ್ತು. ನನ್ನ ನೆನಪಿನ ಶಕ್ತಿ ಎಷ್ಟು ನಿಷ್ಕ್ರಿಯವಾಯಿತೆಂದರೆ ವಾಕ್ಯವನ್ನು ರಚಿಸುವ ಸಾಮರ್ಥ್ಯವೂ ಹೊರಟುಹೋಗಿತ್ತು. ಹಾಗಾಗಿ ಯಾರೊಡನೆಯೂ ಮಾತನಾಡದಿರುವುದೇ ಕ್ಷೇಮ ಎಂದು ನಿರ್ಧರಿಸಿದೆ. ಏಕೆಂದರೆ ಬಾಯಿಬಿಟ್ಟರೆ ಬಣ್ಣಗೇಡು, ಇವನಿಗೆ ಹುಚ್ಚು ಹಿಡಿದಿದೆ ಎಂದು ಸುಲಭವಾಗಿ ನಿರ್ಧಾರವಾಗಿಬಿಡುತ್ತಿತ್ತು. ಆ ದಿನಗಳಲ್ಲಿ ಈ ಕಾರಣದಿಂದ ನಾನು ನನ್ನ ಕೋಣೆಯ ಬಾಗಿಲನ್ನು ಮುಚ್ಚಿಕೊಂಡು ಕೂತುಬಿಡುತ್ತಿದ್ದೆ. ನೆಲದ ಮೇಲೆ ಮಲಗಿ ಮಾಳಿಗೆಯನ್ನು ನೋಡುತ್ತ ಒಂದರಿಂದ ನೂರರ ತನಕ ಮತ್ತೆ ನೂರರಿಂದ ಒಂದರ ತನಕ ಸುಮ್ಮನೆ ಎಣಿಸುತ್ತ - ಕೊನೆಯ ಪಕ್ಷ ಎಣಿಕೆಯಾದರೂ ಜ್ಞಾಪಕವಿರಲಿ ಎಂದು - ದಿನಗಳನ್ನು ಕಳೆಯುತ್ತಿದ್ದೆ. ಆಗ ನನ್ನ ನಡವಳಿಕೆಗಳನ್ನು ನೋಡಿ ಟೀಕಿಸುವವರು ಇದ್ದರೇ ವಿನಃ ಆಗ ನನಗೆ ಯಾರ ನೆರವೂ ಸಿಗಲಿಲ್ಲ.
ಮನೆಯವರು ’ಇದೇನು ನಿನ್ನ ವರ್ತನೆ’ ಎಂದು ಟೀಕಿಸುತ್ತಿದ್ದರು. ಆದರೆ ಯಾವ ವರ್ತನೆಯೂ ನನ್ನ ನಿಯಂತ್ರಣದಲ್ಲಿ ಇರಲಿಲ್ಲ ಎಂದು ಅವರಿಗೆ ಅರ್ಥ ಮಾಡಿಸಲಾಗಲಿಲ್ಲ. ನಾನು ಹಲವು ವರ್ಷಗಳಿಂದ ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದೆ ನಿಜ. ಆದರೆ ಈಗ ಇದ್ದಕ್ಕಿದ್ದಂತೆ ಆ ಧ್ಯಾನಸ್ಥಿತಿ ನನ್ನ ಹಗಲು ರಾತ್ರಿಗಳನ್ನು ವ್ಯಾಪಿಸಿಕೊಂಡು ಬಿಟ್ಟಿತ್ತು. ಈಗ ನನ್ನ ಈ ಹೊಸಲೋಕದಲ್ಲಿ ನಾನು ಸಾಕ್ಷಿಮಾತ್ರನಾಗಿದ್ದೆ. ’ಸಾಕ್ಷಿಮಾತ್ರನಾಗಿದ್ದೆ’ ಎಂಬ ಪದದ ಬಳಕೆಯೂ ಸಲ್ಲದು. ಏಕೆಂದರೆ ಅದು ’ನಾನು ಸಾಕ್ಷಿಯ ಕೆಲಸ ಮಾಡುತ್ತಿದ್ದೆ’ ಎಂಬ ಅರ್ಥ ಕೊಡುತ್ತದೆ. ಖಂಡಿತ ನಾನು ನಿಷ್ಕ್ರಿಯನಾಗಿಬಿಟ್ಟಿದ್ದೆ. ತಿನ್ನುತ್ತಿದ್ದೆ, ಕುಡಿಯುತ್ತಿದ್ದೆ, ಓಡುತ್ತಿದ್ದೆ, ಎಣಿಸುತ್ತಿದ್ದೆ. ಆದರೆ ಹಾಗೆಲ್ಲ ಮಾಡುತ್ತಿದ್ದ ಒಬ್ಬ ಕರ್ತೃ ನನ್ನೊಳಗಿರಲಿಲ್ಲ. ಎಲ್ಲ ಜೀವೇಷಣೆಯೂ ಸತ್ತು ಹೋಗಿದ್ದ ಸ್ಥಿತಿ ಅದು. ಬುದ್ಧತ್ವ, ನಿರ್ವಾಣ ಇತ್ಯಾದಿ ಜಿಜ್ಞಾಸೆಗಳೂ ಮನಸ್ಸಿನಿಂದ ತಿರೋಧಾನವಾಗಿದ್ದ ಸ್ಥಿತಿ ಅದು. ನನ್ನೊಳಗೆ ಒಂದು ಖಾಲಿತನ ನಿರ್ಮಾಣವಾಗಿತ್ತು. ಇಂಥದೊಂದು ಅನುಭಾವದ ಲೋಕಕ್ಕೆ ಪ್ರವೇಶಿಸಬೇಕು ಎಂಬ ಆಕಾಂಕ್ಷೆ ನನಗೆ ಬಾಲ್ಯದಿಂದಲೂ ಇತ್ತು. ಬಹುಶಃ ಇದು ಪೂರ್ವಜನ್ಮದಿಂದ ಮುಂದುವರೆದಿದ್ದ ಆಕಾಂಕ್ಷೆ ಇದ್ದಿರಬೇಕು. ಏಕೆಂದರೆ ಬಾಲ್ಯಕಾಲದಲ್ಲಿ ಇದನ್ನು ಮರೆತು ಒಂದು ದಿನವನ್ನೂ ಕಳೆದದ್ದು ನನಗೆ ನೆನಪಿಲ್ಲ. ಕ್ರಮೇಣ ಮನೆಯವರಿಗೆ ನಾನು ಅವಸ್ತುವಾಗಿ ಪರಿಣಮಿಸಿದೆ. ನಾನು ಇದ್ದರೂ ಇರದಿದ್ದರೂ ಅವರು ಲೆಕ್ಕಿಸದಂತೆ ಆಗಿಬಿಟ್ಟೆ. ಇವನು ವಿಲಕ್ಷಣ ಹುಡುಗ ಎಂದು ಭಾವಿಸಿ ನನ್ನ ಬಗ್ಗೆ ಕೆಲವು ವಿಷಯಗಳಲ್ಲಿ ತಲೆಯನ್ನೇ ಹಾಕುತ್ತಿರಲಿಲ್ಲ. ಹೀಗೆ ಆ ಸಮಯದಲ್ಲಿ ಹೊರಜಗತ್ತಿನ ಸಂಪರ್ಕವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೆ.ಯಾರಾದರೂ ಸ್ನಾನ ಮಾಡಲು ಹೇಳಿದರೆ ಸ್ನಾನದ ಮನೆಗೆ ಹೋಗಿ ಗಂಟೆಗಟ್ಟಲೆ ಮೈಮೇಲೆ ನೀರು ಸುರಿದುಕೊಳ್ಳುತ್ತಿದ್ದೆ ’ತಿಂಗಳಿಗಾಗುವಷ್ಟು ಸ್ನಾನ ಆಗಿದೆ, ಹೊರಗೆ ಬಾ’ ಎಂದು ಹೊರಗಿನಿಂದ ಎಚ್ಚರಿಸಿದಾಗಲೇ ನನಗೆ ಅರಿವಾಗುತ್ತಿದ್ದುದು. ಹಾಗೆಯೇ ಊಟವನ್ನು ಮನೆಯವರು ತಂದು ಎದುರಿಗೆ ಇಟ್ಟರೆ ತಿನ್ನುತ್ತಿದ್ದೆ. ಹಾಗೆ ನೋಡಿಕೊಳ್ಳದಿದ್ದರೆ ದಿನಗಟ್ಟಲೆ ಊಟವಿಲ್ಲದೆ ಕಳೆದುಬಿಡುತ್ತಿದ್ದೆ. ಆಗ ಒಳ ಜಗತ್ತಿನ ಸೆಳೆತ ಅಷ್ಟು ತೀವ್ರವಾಗಿ ಇರುತ್ತಿತ್ತು.
ಈಚಿನ ಭೌತವಿಜ್ಞಾನಿಗಳು ಕಪ್ಪು ರಂಧ್ರಗಳ ಬಗ್ಗೆ ವಿವರಿಸುತ್ತಾರೆ. ಒಂದು ನಕ್ಷತ್ರವು ಕಪ್ಪುರಂಧ್ರದ ಬಳಿಗೆ ಬಂದೊಡನೆಯೇ ಅದನ್ನು ಕಪ್ಪುರಂಧ್ರವು ಸೆಳೆದುಬಿಡುವುದಂತೆ. ಆ ಕಪ್ಪು ರಂಧ್ರವನ್ನು ಸಮೀಪಿಸುತ್ತಿದ್ದಂತೆಯೇ ಇಡೀ ನಕ್ಷತ್ರವೇ ಇದ್ದಕ್ಕಿದ್ದಂತೆ ಮಾಯವಾಗಿಬಿಡುವುದಂತೆ. ನನ್ನ ಅಭಿಪ್ರಾಯದಲ್ಲಿ - ಇದನ್ನು ಯಾರಾದರೂ ಭೌತಶಾಸ್ತ್ರಜ್ಞರೇ ಉತ್ತರಿಸಬೇಕು - ಅಂತರಂಗದ ಜಗತ್ತಿನಲ್ಲಿಯೂ ಅಂಥದೇ ಒಂದು ರಂಧ್ರವಿದೆ, ಅದು ಬಿಳಿಯರಂಧ್ರ ಎನ್ನಬಹುದು. ಲೋಕದಲ್ಲಿ ಒಂದು ರಂಧ್ರವಿರಲು ಸಾಧ್ಯವಿಲ್ಲ. ಪ್ರತಿಯೊಂದೂ ತನ್ನ ವಿಪರ್ಯಯವನ್ನು ಹೊಂದಿರುತ್ತದೆ. ರಂಧ್ರಕ್ಕೆ ಸುರಂಗದಂತೆ ಅದಕ್ಕೆ ಎರಡು ಮುಖಗಳಿರುತ್ತವೆ. ಒಳಗಿನ ರಂಧ್ರವನ್ನು ನಾನು ಸ್ವತಃ ಅನುಭವಿಸಿ ಅರಿತಿದ್ದೇನೆ. ಇದು ಹೊರಗೆ ಸಂಭವಿಸುವ ಕಪ್ಪುರಂಧ್ರಕ್ಕಿಂತಲೂ ಮಿಗಿಲಿನ ಘಟನೆಯಾಗಿದೆ. ಕಪ್ಪುರಂಧ್ರವನ್ನು ಹೊಕ್ಕು ನಕ್ಷತ್ರಗಳು ಸಾಯುತ್ತವೆ, ಕಣ್ಮರೆಯಾಗಿಬಿಡುತ್ತವೆ. ಆದರೆ ಪ್ರತಿಕ್ಷಣವೂ ಹೊಸ ನಕ್ಷತ್ರಗಳು ಹುಟ್ಟುತ್ತಲೇ ಇರುವವಲ್ಲ! ಎಲ್ಲಿಂದ ಹುಟ್ಟುತ್ತವೆ? ಯಾವ ಗರ್ಭದಿಂದ ಹೊರಗೆ ಬರುತ್ತವೆ? ಕಪ್ಪುರಂಧ್ರಗಳೇ ಆ ಗರ್ಭಗಳು. ಹಳೆಯ ನಕ್ಷತ್ರಗಳು ಕಪ್ಪುರಂಧ್ರಗಳನ್ನು ಪ್ರವೇಶಿಸಿ ಹೊಸ ನಕ್ಷತ್ರಗಳಾಗಿ ಹೊರಬರುತ್ತವೆ. ನಾನೇನು ಭೌತವಿಜ್ಞಾನಿಯಲ್ಲ. ಆದರೆ ಆ ಒಂದು ವರ್ಷಗಳ ಅನುಭವವು ನನ್ನನ್ನು ಎಷ್ಟು ತೀವ್ರವಾಗಿ ಸೆಳೆದುಬಿಟ್ಟಿತು ಎಂದರೆ ನನಗೆ ಅಪ್ಪ, ಅಮ್ಮ, ಒಡಹುಟ್ಟಿದವರಿರಲಿ, ನನ್ನ ಹೆಸರೇ ನನಗೆ ನೆನಪಿರಲಿಲ್ಲ. ಎಷ್ಟು ನೆನಪಿಸಿಕೊಂಡರೂ ಹೆಸರೇ ನೆನಪಿಗೆ ಬರುತ್ತಿರಲಿಲ್ಲ. ಹಾಗಾಗಿ ಆ ಒಂದು ವರ್ಷಗಳ ಕಾಲ ನನಗೆ ತಲೆಕೆಟ್ಟಿತ್ತು ಎಂದೇ ಮನೆಯವರೆಲ್ಲ ಭಾವಿಸಿದ್ದರು.
ಎಲ್ಲ ತರಹದ ಡಾಕ್ಟರುಗಳ ಬಳಿಗೂ ಕರೆದುಕೊಂಡು ಹೋದರು. ಆದರೆ ಒಬ್ಬ ಆಯುರ್ವೇದ ಪಂಡಿತನಿಗೆ ಮಾತ್ರ - ಪಂಡಿತ್ ಭಾಗೀರಥ ಪ್ರಸಾದ್ ಆತನ ಹೆಸರು - ನಾನಿದ್ದ ಸ್ಥಿತಿ ಎಂತಹುದು ಎಂದು ಅರ್ಥವಾಯಿತು. ’ನಿಮ್ಮ ಹುಡುಗನಿಗೆ ಯಾವ ಕಾಯಿಲೆಯೂ ಇಲ್ಲ, ಸುಮ್ಮನೆ ಹಣ ಹಾಳುಮಾಡಿಕೊಳ್ಳಬೇಡಿ’ ಎಂದು ಅಪ್ಪನಿಗೆ ಸಲಹೆ ನೀಡಿದ. ’ನಿಮ್ಮ ಮಗ ಪುಣ್ಯವಂತ. ಇಂಥ ಅವಸ್ಥೆ ತಲುಪಲು ನಾನು ಎಷ್ಟೋ ಪ್ರಯತ್ನ ಪಟ್ಟೆ. ಅವನಿಗೆ ಏನೂ ಆಗುವುದಿಲ್ಲ ನೆಮ್ಮದಿಯಾಗಿ ಮನೆಗೆ ಹೋಗಿ’ ಎಂದು ಹೇಳಿ ಅಪ್ಪನ ಸಮಾಧಾನಕ್ಕೆ ಕೆಲವು ಸಕ್ಕರೆ ಮಾತ್ರೆಗಳನ್ನು ಕೊಟ್ಟು ಕಳಿಸಿದನಂತೆ. ಬೆಳಗಿನ ಹೊತ್ತು ಓಡುವಾಗ ಕೆಲವೊಮ್ಮೆ ಭಾವ ಸಮಾಧಿಯಲ್ಲಿ ಹಾಗೆಯೇ ನಿಂತುಬಿಡುತ್ತಿದ್ದೆ. ಆಗೆಲ್ಲ ಹಾದಿಯ ಜನ ನನ್ನನ್ನು ಅಲುಗಾಡಿಸಿ ಎಚ್ಚರಿಸಿ ’ಏನಾಯಿತು’ ಎಂದು ಕೇಳುತ್ತಿದ್ದರು ’ಅದೇನೋ ನನಗೂ ತಿಳಿಯದು, ನಾನಿಲ್ಲದ ಆದರೆ ಇರುವಿಕೆ ಮಾತ್ರ ಇರುವ ಯಾವುದೋ ಲೋಕಕ್ಕೆ ಹೊರಟು ಹೋಗಿದ್ದೆ’ ಎಂದು ಉತ್ತರಿಸುತ್ತಿದ್ದೆ. ಕ್ರಮ ಕ್ರಮೇಣ ಆ ಇರುವಿಕೆಯ ಲೋಕವನ್ನು ಮತ್ತೆ ಮತ್ತೆ ಸಮೀಪಿಸುವ ವಿಧಾನವನ್ನು ಕಂಡುಕೊಂಡೆ. ಯಾವುದೇ ಕ್ಷಣದಲ್ಲಿ ಒಂದು ಸಣ್ಣ ಉಪಾಧಿಯೇ ನೆಪವಾಗಿ ಆ ಲೋಕಕ್ಕೆ ಧುಮುಕಲು ನೆರವಾಗುತ್ತಿತ್ತು. ಆ ಲೋಕಕ್ಕೆ ಸಮೀಪವಾಗುವ ಕಲೆ ಕರಗತವಾಗಿತ್ತು. ಆದರೆ ಒಳಹೋಗುವ ದಾರಿ ನನ್ನ ಅರಿವಿಗೆ ಅಳವಿನದ್ದಾಗಿರಲಿಲ್ಲ.
ಹತ್ತು ವರ್ಷಗಳ ಕಾಲ - ೧೯೪೭ರಿಂದ ೧೯೫೭ರ ವರೆಗೆ - ನಾನು ಬೆಳಗ್ಗೆ ಹಾಗು ಸಂಜೆ ೮ ಮೈಲಿ ಓಡುವ ಅಭ್ಯಾಸ ಇಟ್ಟುಕೊಂಡಿದ್ದೆ. ಈ ಓಟದಿಂದಲೂ ನನಗೆ ಹಲವು ಅನುಭವಗಳು ಉಂಟಾದವು. ೨-೩ ಮೈಲಿ ಸತತವಾಗಿ ಓಡಿದ ಮೇಲೆ ಇದ್ದಕ್ಕಿದ್ದಂತೆ ನನ್ನ ದೇಹಕ್ಕೆ ತಲೆಯೇ ಇಲ್ಲ ಎಂಬ ಅನುಭವವಾಗುತ್ತಿತ್ತು. ಸುತ್ತಣ ಮರಗಿಡಗಳಂತೆ, ಪ್ರಾಣಿ ಪಕ್ಷಿಗಳಂತೆ ನನ್ನ ದೇಹ ಸಹಜವಾಗಿ ವರ್ತಿಸುತ್ತಿದ್ದರೂ ತಲೆ ಎಂಬ ಅಂಗವೇ ಈ ದೇಹಕ್ಕಿಲ್ಲ ಎಂಬಂತೆ ಭಾಸವಾಗುತ್ತಿತ್ತು. ತಲೆಯೇ ಇಲ್ಲದ ಮೇಲೆ ನನ್ನ ಮನೆ, ಕಾಲೇಜು, ಕಾಲೇಜಿನ ಪಾಠ ಪ್ರವಚನಗಳು ಎಲ್ಲವೂ ತಿರೋಧಾನವಾಗಿ ಬಿಡುತ್ತಿದ್ದವು, ಓಡುತ್ತಿರುವ ವ್ಯಕ್ತಿಯೂ ಇಲ್ಲವಾಗಿ ಕೇವಲ ಓಟದ ಕ್ರಿಯೆ ಮಾತ್ರ ಇರುವಂತೆ, ಅದು ಸುತ್ತಣ ಮರಗಿಡ, ತಂಪಾದ ಗಾಳಿ, ಕೆಳಗಿನ ನೆಲ, ಮೇಲಣ ಸೂರ್ಯೋದಯ ಇವುಗಳೊಡನೆ ಸಾಂಗತ್ಯಪೂರ್ಣವಾಗಿ ವರ್ತಿಸುತ್ತಿರುವಂತೆ ವಿಶ್ವದ ಹೃದಯದೊಡನೆ ಒಂದಾಗಿ ಮಿಡಿಯುತ್ತಿರುವಂತೆ ಭಾಸವಾಗುತ್ತಿತ್ತು. ಇದುವೇ ನಿಜವಾದ ಸಂಭೋಗ, ಗಂಡು ಹೆಣ್ಣುಗಳು ಕೂಡುವುದಲ್ಲ. ದೇಹ ಮನಸ್ಸುಗಳು ಪ್ರಯತ್ನವೇ ಇಲ್ಲದೆ ತಾದಾತ್ಮ್ಯ ಹೊಂದುವ ಪ್ರತಿಯೊಂದು ಗಳಿಗೆಯೂ ಸಂಭೋಗದ ಗಳಿಗೆಯೇ. ದೈಹಿಕ ಸಂಭೋಗ ಬರೀ ಒಂದು ಕ್ರಿಯೆ ಮಾತ್ರ. ಸೃಷ್ಟಿ ಸಮಸ್ತದ ಜೊತೆಗಿನ ಈ ಬಗೆಯ ಸಂಭೋಗದ ತೀವ್ರ ಅನುಭವಗಳು ನಮ್ಮಿಂದ ದೂರವಾಗಿರುವ ಕಾರಣ ದೈಹಿಕ ಸಂಭೋಗವೇ ಮುಖ್ಯ ಎಂದುನಾವು ಭಾವಿಸುತ್ತೇವೆ. ಸಾಲದ್ದಕ್ಕೆ ಸಂಭೋಗವನ್ನು ಮಹಾಪಾಪವೆಂದು ನಿಂದಿಸುವುದನ್ನಷ್ಟೇ ಬಲ್ಲ ನಿಮ್ಮ ಸಾಧು ಸಂತರಿಂದ ಆ ಪದವು ತನ್ನ ಪಾವಿತ್ರ್ಯವನ್ನೇ ಕಳೆದುಕೊಂಡಿದೆ. ಹಾಗಾಗಿ ಕಾಮವೆಂಬುದು ಜಾನ್ವಂಘ್ರಿ ಮಧ್ಯಕ್ಕಷ್ಟೇ ಸೀಮಿತವಾಗಿದೆ. ಕಾಮವು ನಿರ್ದಿಷ್ಟವಾದ ಅಂಗಗಳಿಗೆ ಸೀಮಿತವಾದಾಗ ಚೈತನ್ಯ ದೇಹದಿಂದ ಹೊರದೂಡಲ್ಪಟ್ಟು ಒಂದು ಬಗೆಯ ಮಾನಸಿಕ ಸಮಾಧಾನ ನೀಡುವ ಕ್ಷುಲ್ಲಕ ಕ್ರಿಯೆ ಎನಿಸುತ್ತದೆ, ಸ್ಖಲನವೆನಿಸಿಕೊಳ್ಳುತ್ತದೆ. ಒಂದು ಅನುಭವದೊಡನೆ ದೇಹ, ಮನಸ್ಸುಗಳ ಪ್ರತಿಯೊಂದು ಕಣವೂ ಸಂಪೂರ್ಣವಾಗಿ ತೊಡಗಲಾರದ ಅನುಭವಗಳೆಲ್ಲವೂ ಸ್ಖಲನಗಳೇ. ಚರಮ ಸ್ಥಿತಿಗೆ ಏರಲಾರದ ಪ್ರತಿಯೊಂದೂ ಮೂಲಾಧಾರಕ್ಕೆ, ಕಾಮಕೇಂದ್ರಕ್ಕೆ ಕುಸಿದೇ ತೀರುತ್ತದೆ.
ಧ್ಯಾನದಲ್ಲಿ ಹೆಚ್ಚು ಆಳಕ್ಕೆ ತೊಡಗಿದಂತೆ ಮೃಣ್ಮಯ ದೇಹವು ನೆಲಕ್ಕೆ ಸಮೀಪವಾದಾಗ ನೆಲದ ಪ್ರಭಾವ ದೇಹದ ಮೇಲೆ ಅಧಿಕವಾಗಿರುತ್ತದೆ ಎಂದು ನನ್ನ ಅನುಭವಕ್ಕೆ ಬಂದಿತು. ಈ ಕಾರಣದಿಂದಲೇ ಇರಬೇಕು ಋಷಿಗಳು, ಯೋಗಿಗಳು ಎತ್ತರದ ಶಿಖರಗಳಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದುದು. ನಾನು ೧೭-೧೮ರ ವಯಸ್ಸಿನಲ್ಲಿ ಆಗಾಗ ಮರದ ತುದಿಯೇರಿ ಮಧ್ಯರಾತ್ರಿಯ ತನಕವೂ ಧ್ಯಾನ ಮಾಡುತ್ತಿದ್ದೆ. ಒಮ್ಮೆ ಯಾವುದೋ ಕ್ಷಣದಲ್ಲಿ ನನ್ನ ದೇಹವು ಮರದಿಂದ ಕೆಳಗೆ ಬಿದ್ದಿತು, ಧ್ಯಾನಲೀನನಾಗಿದ್ದ ನನಗೆ ಇದರ ಪರಿವೆಯೇ ಇರಲಿಲ್ಲ. ಬಿದ್ದ ಮೇಲೆ ದೇಹ ಕೆಳಗೆ ಬಿದ್ದಿರುವುದು ಕಂಡಿತು. ಆದರೆ ನಾನು ಮಾತ್ರ ಇನ್ನೂ ಮರದ ತುದಿಯಲ್ಲೇ ಕುಳಿತಿದ್ದೇನೆ. ಇದನ್ನು ಹೇಗೆ ಸ್ಪಷ್ಟಪಡಿವುದೋ ನನಗೆ ಸರಿಯಾಗಿ ತಿಳಿಯುತ್ತಿಲ್ಲ. ಕೆಳಗೆ ಬಿದ್ದಿದ್ದ ದೇಹದ ನಾಭಿಮೂಲದಿಂದ ಹೊರಟಿದ್ದ ಒಂದು ಬೆಳ್ಳಿಯ ತಂತಿ ನನ್ನನ್ನು ಹಾಗು ದೇಹವನ್ನೂ ಸಂಪರ್ಕಿಸಿತ್ತು. ನನ್ನ ದೇಹವನ್ನು ನಾನೇ ಹೊರಗಿನಿಂದ ಕಾಣುವ ಇಂಥ ಅನುಭವ ನಿಜಕ್ಕೂ ಅಪರೂಪವಾದುದು. ದೇಹವನ್ನು ನೋಡುತ್ತ ಮೇಲೆ ಕುಳಿತಿದ್ದ ನನಗೆ ಮತ್ತೆ ದೇಹವನ್ನು ಹೇಗೆ ಸೇರುವುದೋ ತಿಳಿಯದಾಯಿತು. ಎಷ್ಟು ಕಾಲ ಹೀಗೇ ಕುಳಿತಿದ್ದೆನೋ ಅದೂ ತಿಳಿಯದು. ಬೆಳಗಾದ ನಂತರ ತಲೆಯ ಮೇಲೆ ಹಾಲಿನ ಮಡಿಕೆಗಳನ್ನು ಹೊತ್ತಿದ್ದ ಇಬ್ಬರು ಹೆಂಗಸರು ಬಂದರು. ಮರದ ಸಮೀಪದಲ್ಲೇ ಹಾದು ಹೋದ ಅವರು ಮರದಡಿಯಲ್ಲಿ ಬಿದ್ದಿದ್ದ ನನ್ನ ದೇಹವನ್ನು ಕಂಡು ಹತ್ತಿರ ಬಂದು ಕುಳಿತರು. ಇದನ್ನೆಲ್ಲ ನಾನು ಮೇಲಿನಿಂದಲೇ ನೋಡುತ್ತಿದ್ದೆ. ಅವರಲ್ಲಿ ಒಬ್ಬ ಹೆಂಗಸು ನನ್ನ ತಲೆಯ ಮೇಲೆ ಕೈಯಿಟ್ಟು ಪರೀಕ್ಷಿಸಿದಳು. ಅದಾವ ಶಕ್ತಿಯೋ ಏನೋ, ಕ್ಷಣಾರ್ಧದಲ್ಲೇ ಆ ಶಕ್ತಿ ನನ್ನನ್ನು ಪುನಃ ನನ್ನ ದೇಹದತ್ತ ಸೆಳೆದುಬಿಟ್ಟಿತು. ಕೂಡಲೆ ಕಣ್ತೆರೆದೆ. ಹೆಣ್ಣಿನಿಂದ ಗಂಡಿನ ದೇಹದಲ್ಲಿ ಹಾಗೆಯೇ ಗಂಡಿನಿಂದ ಹೆಣ್ಣಿನ ದೇಹದಲ್ಲಿ ಕೆಲವು ತೀವ್ರವಾದ ರಾಸಾಯನಿಕ ಬದಲಾವಣೆಗಳು ಉಂಟಾಗುವುವು ಎಂದು ಆಗ ನನಗೆ ಹೊಳೆಯಿತು. ನಾನು ಅಷ್ಟು ತೀವ್ರವಾಗಿ ನನ್ನ ದೇಹದತ್ತ ಸೆಳೆಯಲ್ಪಡಲೂ ಆಕೆಯ ಸ್ಪರ್ಶವೇ ಕಾರಣ. ಆದ್ದರಿಂದಲೇ ತಂತ್ರ ಸಾಧನೆಯಲ್ಲಿ ಹೆಣ್ಣನ್ನು ಬಳಸಿಕೊಳ್ಳುವುದು. ಸಾಧಕನು ಸವಿಕಲ್ಪ ಸಮಾಧಿ ಸ್ಥಿತಿಗೇರಿದಾಗ ಹೆಣ್ಣಿನ ನೆರವಿಲ್ಲದೆ ಸೂಕ್ಷ್ಮದೇಹವು ಮತ್ತೆ ಹಿಂದಿರುಗದು.
 ಇದಾದ ಮೇಲೆ ಇಂಥದೇ ಅನುಭವ ಆರು ತಿಂಗಳ ಕಾಲ ಮತ್ತೆ ಮತ್ತೆ ಪುನರಾವರ್ತನೆ ಆಯಿತು. ಈ ಎಲ್ಲ ತೀವ್ರ ಅನುಭವಗಳಿಂದ ಆರು ತಿಂಗಳಲ್ಲಿ ನಾನು ನನ್ನ ಬದುಕಿನ ಹತ್ತು ವರ್ಷಗಳ ಆಯುಸ್ಸನ್ನು ಕಳೆದುಕೊಂಡೆ. ಅಂದರೆ ಈ ದೇಹಕ್ಕೆ ೭೦ ವರ್ಷಗಳ ಆಯುಸ್ಸಿದ್ದರೆ ಇದು ೬೦ ವರ್ಷಗಳಿಗೇ ಸಾಯಲಿದೆ. ಆಗ ನನ್ನ ಸ್ಥೂಲದೇಹ ಹಾಗು ಸೂಕ್ಷ್ಮದೇಹಗಳ ನಡುವೆ ಮತ್ತೆ ಸರಿಪಡಿಸಲಾಗದಂತಹ ಬಿರುಕು ಉಂಟಾಯಿತು. ಒಮ್ಮೆ ಅವೆರಡರ ನಡುವಣ ಸಾಮರಸ್ಯಕ್ಕೆ ಭಂಗವಾದರೆ ದೇಹ ಬಹುಕಾಲ ಉಳಿಯದು. ಮತ್ತೆ ಅದೇ ಸಾಮರಸ್ಯ ಎಂದಿಗೂ ಏರ್ಪಡದು. ಇಚ್ಛಾಪೂರ್ವಕವಾಗಿ ಸಾಮರಸ್ಯವನ್ನು ಏರ್ಪಡಿಸಿದರೆ ತಾತ್ಕಾಲಿಕವಾಗಿ ಇರಬಹುದೇ ವಿನಃ ಸೂಕ್ಷ್ಮದೇಹಕ್ಕೆ ಮತ್ತೆ ಸ್ಥೂಲದೇಹದೊಡನೆ ಸಾಮರಸ್ಯ ಸ್ಥಾಪಿಸಿಕೊಳ್ಳಬೇಕಾದ ಔಚಿತ್ಯ ಕಾಣಿಸುವುದಿಲ್ಲ. ಶಂಕರಾಚಾರ್ಯ ೩೨ನೆಯ ವಯಸ್ಸಿಗೆ ಹಾಗು ವಿವೇಕಾನಂದ ೩೬ನೆಯ ವಯಸ್ಸಿಗೆ ತೀರಿಕೊಳ್ಳಲು ಇದೇ ಕಾರಣ. ಹಾಗೆಯೇ ರಾಮಕೃಷ್ಣ ಪರಮಹಂಸ ಪದೇ ಪದೇ ಅಪಸ್ಮಾರಕ್ಕೆ ಹೋಗಲು, ರಮಣ ಮಹರ್ಷಿ ಕ್ಯಾನ್ಸರಿನಿಂದ ಸಾಯಲು ಕೂಡ ಅನಿರೀಕ್ಷಿತವಾದ ಈ ಅನುಭವಗಳೇ ಕಾರಣ. ಯೋಗಿಗಳು ಆರೋಗ್ಯವಾಗಿರುತ್ತಾರೆ ಎಂಬ ಮಾತು ಶುದ್ಧ ಸುಳ್ಳು. ನಿಜವೇನೆಂದರೆ ಯೋಗಿಗಳು ಯಾವಾಗಲೂ ರೋಗಗ್ರಸ್ತರಾಗಿರುತ್ತಾರೆ ಹಾಗು ಅಕಾಲದಲ್ಲಿ ಮೃತ್ಯುವಶರಾಗುತ್ತಾರೆ.
ಸಂಕಲ್ಪಮಾತ್ರದಿಂದಲೂ ಇಂಥ ಘಟನೆ ನಮ್ಮೊಳಗೆ ಸಂಭವಿಸಬಹುದು, ದೇಹವನ್ನು ಒಳಗಿನಿಂದ ನೋಡಬಹುದು. ಯೋಗಶಾಸ್ತ್ರಗಳಲ್ಲಿ ಉಲ್ಲೇಖಿಸಲಾದ ಹಲವು ನಾಡಿಗಳು, ಚಕ್ರಗಳು ಹಾಗೆ ಒಳಗಿನಿಂದ ಕಂಡು ಅರಿತ ಸತ್ಯಗಳಾಗಿವೆ. ಅವೆಲ್ಲ ಭೌತಿಕ ದೇಹಕ್ಕೆ ಸಂಬಂಧಿಸಿದವುಗಳಲ್ಲ. ಈ ನಾಡಿಗಳು ಸೂಕ್ಷ್ಮದೇಹ ಹಾಗು ಸ್ಥೂಲದೇಹಗಳ ಜೋಡಣೆಗೆ ಸಂಬಂಧಿಸಿದವುಗಳು. ಅದರಲ್ಲೂ ನಾಭಿಮೂಲ ತುಂಬ ಮುಖ್ಯವಾದುದು. ಸ್ಥೂಲ ಹಾಗು ಸೂಕ್ಷ್ಮ ದೇಹಗಳನ್ನು ಹಿಡಿದಿಟ್ಟಿರುವ ಪ್ರದೇಶವದು. ನೀವು ಗಮನಿಸಿರಬಹುದು; ಯಾವುದೇ ಅನಿರೀಕ್ಷಿತ ಆಘಾತವಾದಾಗ ಮೊದಲ ಸಂವೇದನೆಯಾಗುವುದು ನಾಭಿಮೂಲದಲ್ಲಿ. ದೇಹವನ್ನು ಹೊರಗಿನಿಂದಷ್ಟೇ ಕಂಡರಿಯಬಲ್ಲ ವೈದ್ಯಕೀಯ ವಿಜ್ಞಾನಕ್ಕೆ ಇವೆಲ್ಲ ಅರ್ಥವಾಗುವುದಿಲ್ಲ. ಒಮ್ಮೆ ದೇಹಾತ್ಮಭಾವ ಹೀಗೆ ಭಗ್ನಗೊಂಡರೆ ನಾವು ಅರ್ಧ ಸತ್ತಂತೆಯೇ. ಹುಟ್ಟು ಸಾವುಗಳ ಪ್ರಶ್ನೆ ತಾತ್ವಿಕ ಬೌದ್ಧಿಕ ನೆಲೆಯ ಪ್ರಶ್ನೆಗಳಲ್ಲ. ಹಾಗೆ ಭಾವಿಸಿದರೆ ಏನನ್ನೂ ಸಾಧಿಸಿದಂತಾಗದು. ’ನಾನು ದೇಹವಲ್ಲ’, ’ನನಗೆ ಸಾವಿಲ್ಲ’ ಎಂಬ ಸಂಕಲ್ಪದ ನೆಲೆಯಿಂದ ಹೊರಟಾಗ ಮಾತ್ರ ಹುಟ್ಟು ಸಾವಿನ ಜಿಜ್ಞಾಸೆಗೆ ಅರ್ಥ ಬರುತ್ತದೆ.
ಈ ಅವಧಿಯಲ್ಲಿ ನಾನು ಕಂಡಿದ್ದ ಕನಸೊಂದು ಇಂದಿಗೂ ನೆನಪಿನಿಂದ ಮಾಸಿಲ್ಲ: ಈ ಕನಸು ಆಗಾಗ ಬೀಳುತ್ತಿತ್ತು. ಒಂದು ಎತ್ತರವಾದ ಏಣಿ, ಅದರ ತುದಿ ಮೋಡಗಳಾಚೆ ಕಣ್ಮರೆಯಾಗಿದೆ. ಅದರ ಕೊನೆಯ ಮೆಟ್ಟಿಲನ್ನು ತಲುಪಿಯೇ ತೀರಬೇಕೆಂದು ನಾನು ಏರುತ್ತ ಹೋದೆ. ಎಷ್ಟು ಏರಿದರೂ ಕೊನೆ ಸಿಗುತ್ತಿಲ್ಲ. ಕೊನೆಗೆ ಒಂದೊಂದು ಮೆಟ್ಟಿಲನ್ನು ಏರಲೂ ಏದುಸಿರು ಬಿಡಲಾರಂಭಿಸಿದೆ. ಮೇಲೇರಿದಂತೆ ಅಂಥದೇ ಇನ್ನೂ ಲೆಕ್ಕವಿಲ್ಲದಷ್ಟು ಏಣಿಗಳು ನನ್ನ ಸುತ್ತ ಕಾಣಿಸಿದವು. ನನ್ನಂತೆಯೇ ಇನ್ನೂ ಹಲವರು ಆ ಏಣಿಗಳನ್ನು ಪೈಪೋಟಿಯ ಮೇಲೆ ಏರುತ್ತಿದ್ದರು. ಆಗ ನನಗೆ ಒಂದು ಬಗೆಯ ಹತಾಶೆಯಾದರೂ ಈ ಎಲ್ಲರಿಗಿಂತ ಮೊದಲು ನಾನು ಕೊನೆಯನ್ನು ತಲುಪಬೇಕೆಂದು ನಿರ್ಧರಿಸಿ ಇನ್ನೂ ವೇಗವಾಗಿ ಏರಿಹೋದೆ. ಹೀಗೆ ಏರುತ್ತಿರುವಂತೆಯೇ ಕನಸು ಮುಗಿದು ಹೋಗುತ್ತಿತ್ತು. ಒಂದು ದಿನ ಮಾತ್ರ ಹೀಗೆ ಏರಿ ಕೊನೆಯ ಮೆಟ್ಟಿಲನ್ನು ತಲುಪಿಬಿಟ್ಟೆ. ಅಲ್ಲಿಂದಾಚೆಗೆ ಮೆಟ್ಟಿಲುಗಳು ಕಾಣಿಸಲಿಲ್ಲ. ಕೆಳಗೆ ಬಗ್ಗಿ ನೋಡಿದರೆ ನಾನು ಹತ್ತಿ ಬಂದಿದ್ದ ಏಣಿಯೂ ಕಾಣಿಸಲಿಲ್ಲ. ಬಳಿಕ ಒಂದೇ ಸಮನೆ ಕೆಳಗೆ ಬೀಳಲಾರಂಭಿಸಿದೆ. ಆಗ ನನಗೆ ಸಾವಲ್ಲದೆ ಬೇರೆ ಗತಿ ಇರಲಿಲ್ಲ. ಈ ಸಾವಿನ ಭಯದಿಂದಾಗಿ ನನಗೆ ಎಚ್ಚರವಾಗಿಬಿಟ್ಟಿತು. ಈ ಕನಸಿನಿಂದ ನಾನು ಬಹುದೊಡ್ಡ ಪಾಠ ಕಲಿತೆ. ಈ ಕನಸು ನಮ್ಮ ಬದುಕಿನ ರೀತಿಯನ್ನೇ ಪ್ರತೀತಗೊಳಿಸಿತು. ನಮ್ಮ ಪ್ರತಿಯೊಂದು ಕನಸೂ, ಬದುಕಿನ ಪ್ರತಿಯೊಂದು ಹಂಬಲವೂ ಇಂಥ ಹುಚ್ಚು ಓಟವೇ ಅಲ್ಲವೆ? ಅಂತಹ ಪ್ರತಿಯೊಂದು ಆಕಾಂಕ್ಷೆಯೂ, ಅದು ಹಣದಾಸೆ ಇರಲಿ, ಮೋಕ್ಷದ ಆಸೆ ಇರಲಿ, ಕೊನೆಗೆ ಸಾವಿನಲ್ಲಿ ಪರ್ಯವಸಾನವಾಗುವುದಲ್ಲವೇ? ಆಕಾಂಕ್ಷೆಗಳು ಕನಸಿನ ಸ್ಥಿತಿಯಲ್ಲಿ ಮಾತ್ರ ಜೀವಂತವಾಗಿರುತ್ತವೆ. ಕನಸಿಲ್ಲದ ಬದುಕಿನಲ್ಲಿ ಮಾತ್ರ ಸತ್ಯ ಉಳಿದೀತು. ಕನಸಿರದ ಬದುಕು ಮಾತ್ರ ಕೊನೆಯಿರದ ಬದುಕು ಎನಿಸೀತು,..ಇತ್ಯಾದಿ ಆಲೋಚನೆಗಳಲ್ಲಿ ಮುಳುಗಿದೆ.
ಆ ಕಾಲದಲ್ಲಿ ’ನಾನು ಯಾರು?’ ಎಂಬ ಪ್ರಶ್ನೆ ಹಗಲಿರುಳೂ ಕಾಡುತ್ತಿತ್ತು. ಅದಕ್ಕೆ ಹೊರಗಿನವರು ಸಿದ್ಧಪಡಿಸಿ ನೀಡಿದ ಎರಡನೆಯ ದರ್ಜೆಯ ಉತ್ತರಗಳು ಸಿಗುತ್ತಿತ್ತೇ ವಿನಃ ಅವುಗಳು ಪ್ರಶ್ನೆಗೆ ನಿಜವಾದ ಪರಿಹಾರವಾಗಿರಲಿಲ್ಲ. ಈ ಉತ್ತರಗಳು ನನ್ನ ಹೊರಗಿನ ಸ್ವರೂಪವನ್ನು ಸೂಚಿಸಿ ಮಾಯವಾಗುತ್ತಿತ್ತೇ ವಿನಃ ನನ್ನ ಆಂತರ್ಯದ ಒಳದನಿಗೆ ಸಮಾಧಾನಗಳಾಗಿರಲಿಲ್ಲ. ಹಲವು ಉತ್ತರಗಳು ಸಿಕ್ಕವು ಆದರೆ ಅವು ನನ್ನ ಮೂಲಪ್ರಶ್ನೆಗೆ ಸಂಬಂಧಿಸಿಯೇ ಇರಲಿಲ್ಲ. ಪ್ರಶ್ನೆಗಿದ್ದ ಅಧಿಕೃತತೆ ಉತ್ತರಗಳಿಗಿರಲಿಲ್ಲ. ಪ್ರಶ್ನೆ ಮತ್ತು ಉತ್ತರಗಳು ಎರಡು ಬೇರೆ ಬೇರೆ ಮೂಲಗಳಿಂದ ಬರುತ್ತಿದ್ದವಾದ್ದರಿಂದ ಅವುಗಳ ನಡುವೆ ಸಾಂಗತ್ಯ ಏರ್ಪಡಲಿಲ್ಲ. ಎರಡರಲ್ಲಿ ಒಂದು ಮೂಲವನ್ನು ಉಳಿಸಿಕೊಳ್ಳಬೇಕಾಯಿತು. ಹಾಗಾಗಿ ಉತ್ತರಗಳು ಹುಟ್ಟುತ್ತಿದ್ದ ಮೂಲವನ್ನು ಅಂದರೆ ನನ್ನ ಬುದ್ಧಿ, ಚಿತ್ತ, ಪ್ರಕೃತಿ, ಸಂಸ್ಕಾರಗಳನ್ನು ಸಂಪೂರ್ಣವಾಗಿ ಕೈಬಿಟ್ಟು ಪ್ರಶ್ನೆಯೊಂದನ್ನೇ ದೃಢವಾಗಿ ಉಳಿಸಿಕೊಂಡೆ. ಆಗ ಪ್ರಶ್ನೆಯ ರೂಪದಲ್ಲಿದ್ದ ಒಳಗಿನ ಯಾವುದೋ ಚೈತನ್ಯ ಬೀಜದೊಳಗಣ ವೃಕ್ಷದಂತೆ ಹೊರಬಂದಿತು. ಉತ್ತರದ ರೂಪದಲ್ಲಿದ್ದ ನನ್ನ ಪ್ರಕೃತಿಯೇ ಆ ಚೈತನ್ಯಕ್ಕೆ ದೊಡ್ಡ ಅಡಚಣೆಯಾಗಿತ್ತು ಎಂದು ಆಗ ತಿಳಿಯಿತು. ಮರುಗಳಿಗೆಯೇ ಈ ’ನಾನು ಯಾರು’ ಎಂಬ ಬರೀ ಪ್ರಶ್ನೆಯಾಗಿ ಉಳಿಯದೇ ಒಂದು ಚಂಡಮಾರುತದ ತೀವ್ರತೆಯನ್ನು ಪಡೆದುಕೊಂಡಿತು. ಒಂದು ಗುರಿಯಿಟ್ಟ ಬಾಣದಂತೆ ಅದು ನನ್ನ ಪ್ರಕೃತಿ, ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ, ಸಂಸ್ಕಾರ ಹೀಗೆ ನನ್ನದೆಂಬ ಪ್ರತಿಯೊಂದನ್ನೂ ಭೇದಿಸಿಕೊಂಡು ಒಳನುಗ್ಗಿತು. ಆ ಪ್ರಶ್ನೆ ಬೆಂಕಿಯ ಜ್ವಾಲೆಯಂತೆ ತನ್ನ ಕೆನ್ನಾಲಗೆಯನ್ನು ಚಾಚಿ ಪ್ರತಿಯೊಂದನ್ನೂ ಸುಟ್ಟು ದಾಹವನ್ನಿನ್ನೂ ಹೆಚ್ಚಿಸಿಕೊಳ್ಳುತ್ತಿತ್ತು. ಏನೇ ಸಂಭವಿಸಿದರೂ ಸಾಕ್ಷಿರೂಪದ ನಾನು ಮಾತ್ರ ಅಸ್ಪರ್ಶನಾಗಿಯೇ ಉಳಿದು ಇದನ್ನೆಲ್ಲ ನೋಡುತ್ತಿದ್ದೆ. ಆಗ ಪ್ರಶ್ನೆಯ ಹಾಗು ನನ್ನ ನಡುವಣ ಭೇದವೂ ಬಿದ್ದುಹೋಯಿತು. ಪ್ರಶ್ನೆ ಕೇಳುತ್ತಿದ್ದ ನಾನು ಆ ಪ್ರಶ್ನೆಗಿಂತ ಬೇರೆಯಲ್ಲ, ನಾನೇ ಆ ಪ್ರಶ್ನೆಯಾಗಿದ್ದೆ. ಶಬ್ದಗಳಲ್ಲ, ಆ ಶಬ್ದಗಳ ಹಿಂದಣ ಹಾಗು ಮುಂದಣ ಮೌನ ಆ ಉತ್ತರಕ್ಕೆ ಸಮೀಪವಾದುದು, ಉತ್ತರಗಳಲ್ಲ, ಉತ್ತರಗಳಿಲ್ಲದ ಅನಾಥಸ್ಥಿತಿ ಆ ಸತ್ಯಕ್ಕೆ ಸಮೀಪವಾದುದು.
ಆತ್ಮಜ್ಞಾನಕ್ಕಾಗಿ ನಾನು ಹಲವು ಜನ್ಮಗಳಲ್ಲಿ ಸಾಧನೆ ಮಾಡಿದ್ದೆ, ಘೋರವಾದ ತಪಸ್ಸುಗಳನ್ನಾಚರಿಸಿದ್ದೆ. ಆದರೆ ಆ ಪ್ರಯತ್ನಗಳೆಲ್ಲ ಬರೀ ವ್ಯರ್ಥ; ಪ್ರತಿ ಜನ್ಮದಲ್ಲೂ ನಾನು ಆತ್ಮಜ್ಞಾನಿಯಾಗಿಯೇ ಹುಟ್ಟುತ್ತಿದ್ದೆ. ಅದು ನನ್ನ ಸ್ವಭಾವವೇ ವಿನಃ ನನ್ನ ಸಂಪಾದನೆಯಲ್ಲ; ಇಷ್ಟು ಜನ್ಮಗಳ ಕಾಲ ಮೋಸಹೋದೆನಲ್ಲ, ಇನ್ನೂ ಉತ್ತಮವಾದುದಕ್ಕೆ ಹವಣಿಸುತ್ತ ಸಾಧನೆಯ ಹೆಸರಿನಲ್ಲಿ ಎಂತೆಂತಹ ಮೂರ್ಖತನ ಮಾಡುತ್ತಿದ್ದೆನಲ್ಲ ಎಂದು ಆತ್ಮಜ್ಞಾನ ಘಟಿಸಿದ ತರುವಾಯ ನನಗೆ ತಿಳಿಯಿತು. ’ನಾನು ಆತ್ಮಜ್ಞಾನಿಯಾದ ದಿನ’ ಎಂದು ಹೇಳುವುದು ಆಭಾಸವಾಗುತ್ತದೆ. ಈ ವ್ಯರ್ಥತೆಯ ಅರಿವು ಉಂಟಾದ ಮೇಲೆ ಏಳು ದಿನಗಳ ಕಾಲ ಅತ್ಯಂತ ಸಾಧಾರಣವಾಗಿ ಬದುಕಲು ಪ್ರಯತ್ನಿಸಿದೆ. ಅದಕ್ಕೆ ಮುನ್ನ ತುಂಬ ಕಟ್ಟುನಿಟ್ಟಿನ ಜೀವನ ಪದ್ಧತಿಯನ್ನು ಇರಿಸಿಕೊಂಡಿದ್ದ ನನ್ನ ಈ ಹೊಸವರ್ತನೆ ಮನೆಯವರಿಗೆ ಅರ್ಥವಾಗಲಿಲ್ಲ. ಪ್ರತಿದಿನ ಬೆಳಗಿನ ಜಾವ ಮೂರು ಗಂಟೆಗೆ ಏಳುತ್ತಿದ್ದೆ, ಏಳೆಂಟು ಮೈಲಿ ಓಡುತ್ತಿದ್ದೆ, ನದಿಯಲ್ಲಿ ಈಜುತ್ತಿದ್ದೆ. ಎಂಥ ಜ್ವರದಲ್ಲೂ ಈ ಅಭ್ಯಾಸ ಬಿಟ್ಟಿರಲಿಲ್ಲ. ಗಂಟೆಗಟ್ಟಲೆ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದೆ. ಊಟ ತಿಂಡಿಯ ವಿಷಯದಲ್ಲೂ ಅಷ್ಟೇ ಕಾಫೀ ಟೀ ಕುಡಿಯುತ್ತಿರಲಿಲ್ಲ. ರಾತ್ರಿ ಒಂಬತ್ತು ಗಂಟೆಯಾದೊಡನೆ ಎದುರಿಗೆ ಯಾರೇ ಇದ್ದರೂ ಲೆಕ್ಕಿಸದೆ ಇದು ನನ್ನ ಮಲಗುವ ಸಮಯ ಎಂದು ಹೇಳಿ ನನ್ನ ಚಾಪೆ ಹಾಸಿಕೊಂಡು ಮಲಗುತ್ತಿದ್ದೆ. ಎಲ್ಲಕಾಲದಲ್ಲೂ ಒಂದು ತುಂಡು ಬಟ್ಟೆಯನ್ನು ಮಾತ್ರ ಉಪಯೋಗಿಸುತ್ತಿದ್ದೆ. ಆದರೆ ಈ ಘಟನೆ ಸಂಭವಿಸುವ ಮುನ್ನ ಏಳು ದಿನಗಳ ಕಾಲ ನನ್ನ ಎಲ್ಲ ಕಾರ್ಯಚಟುವಟಿಕೆಗಳನ್ನೂ ನಿಲ್ಲಿಸಿಬಿಟ್ಟೆ. ನನ್ನನ್ನು ಯೋಗಿ ಎಂದು ಭಾವಿಸಿದ್ದ ಮನೆಯವರೆಲ್ಲ ನಾನು ಕಾಫೀ ಟೀ ಕುಡಿಯುವುದನ್ನು ಕಂಡು ಇವನು ಹಾಳಾದ ಎಂದುಕೊಂಡರು. ಹೀಗೆ ಏಳು ದಿನಗಳನ್ನು ಕಳೆದೆ.
ಏಳನೆಯ ದಿನ ಅಂದರೆ ಮಾರ್ಚ್ ೨೧, ೧೯೫೩ ನನ್ನ ಹಲವು ಜನ್ಮಗಳ ಸಾಧನೆ ಫಲಿಸಿತು. ಮನುಷ್ಯ ಪ್ರಯತ್ನಕ್ಕೆ ನಿಲುಕುವ ಪ್ರತಿಯೊಂದು ಸಾಧನೆಯನ್ನೂ ಮಾಡಿ ಮುಗಿಸಿ ಕೈಚೆಲ್ಲಿದ್ದೆ. ಆ ದಿನ ಏನನ್ನೂ ನಿರೀಕ್ಷಿಸದೆ ಸುಮ್ಮನೆ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಒಂದು ಹೊಸ ಶಕ್ತಿ ಆವಿರ್ಭವಿಸತೊಡಗಿತು. ಅದು ನನ್ನೊಳಗಿನಿಂದ ಬರುತ್ತಿತ್ತೇ ಅಥವ ಹೊರಗಿನಿಂದಲೇ ಹೇಳಲಾರೆ. ಎಲ್ಲ ಕಡೆಗಳಿಂದಲೂ ಏಕಕಾಲಕ್ಕೆ ಆವಿರ್ಭವಿಸತೊಡಗಿತ್ತು. ಮರಗಿಡಗಳಲ್ಲಿ, ಕಲ್ಲು ಬಂಡೆಗಳಲ್ಲಿ, ಬೀಸುವಗಾಳಿ, ಉರಿಯುವ ಸೂರ್ಯ ಎಲ್ಲದರಿಂದಲೂ ಆ ಶಕ್ತಿ ಪ್ರತೀತವಾಗುತ್ತಿತ್ತು. ನನ್ನ ಸಾಧನೆಯ ವಸ್ತು ಎಲ್ಲೋ ದೂರದಲ್ಲಿದೆ ಎಂದು ಭಾವಿಸಿ ಸಾಧನೆ ಮಾಡುತ್ತಿದ್ದ ನನಗೆ ಅದು ಇಷ್ಟೊಂದು ಸಮೀಪದಲ್ಲಿ, ಇಷ್ಟೊಂದು ಸರ್ವವ್ಯಾಪಿಯಾಗಿ ನೆಲೆಸಿದೆ ಎಂದು ತಿಳಿಯಲಿಲ್ಲ. ನಿಜಕ್ಕೂ ಅದೊಂದು ವಿಧ್ವಂಸಕಾರೀ ಅನುಭವ. ಭೂತಕಾಲ ನನ್ನಿಂದ ಹಂತ ಹಂತವಾಗಿ ಲಯವಾಗತೊಡಗಿತು. ನನ್ನ ಚರಿತ್ರೆ, ಜನ್ಮಾಂತರಗಳ ನನ್ನ ಚಾರಿತ್ರ್ಯ ನನ್ನದಲ್ಲ ಇನ್ನಾರದೋ ಚರಿತ್ರೆ ಎಂಬಂತೆ ಭಾಸವಾಯಿತು. ನನ್ನ ಆತ್ಮಕಥೆ ಬುಡಮೇಲಾಯಿತು. ಈ ಘಟನೆಯನ್ನು ಬುದ್ಧ ’ಅನತ್ತಾ’ ಎಂದು ಕರೆಯುತ್ತಾನೆ. ಏನೋ ಅನಾಹುತ ಸಂಭವಿಸಲಿದೆ ಎಂದು ಒಳಮನಸ್ಸಿಗೆ ಅನ್ನಿಸುತ್ತಿತ್ತು. ಏನೆಂಬುದು ಸ್ಪಷ್ಟವಾಗಿರಲಿಲ್ಲ. ಬಹುಶಃ ನನ್ನ ಸಾವು ಸಂಭವಿಸಲಿದೆ ಎಂದುಕೊಂಡೆ. ಆದರೆ ಸಾಯುತ್ತೇನೆ ಎಂಬ ಭಯ ಕಿಂಚಿತ್ತೂ ಹುಟ್ಟಲಿಲ್ಲ. ಆ ದಿನಗಳಲ್ಲಿ ನಾನು ರಾತ್ರಿ ೧ ಗಂಟೆಗೆ ನಿದ್ರೆ ಮಾಡುತ್ತಿದ್ದೆ. ಆದರೆ ಆ ದಿನ ಎಷ್ಟು ಪ್ರಯತ್ನಿಸಿದರೂ ಕಣ್ಣುಬಿಟ್ಟು ಎಚ್ಚರವಾಗಿರಲು ಸಾಧ್ಯವಾಗಲಿಲ್ಲ. ಅಂದು ಸಂಜೆ ಎಂಟಕ್ಕೇ ಮಲಗಿದೆ. ಆದರೆ ಅದು ಎಂದಿನ ನಿದ್ರೆಯಾಗಿರಲಿಲ್ಲ. ದೇಹದ ಪ್ರತಿಯೊಂದು ನರನಾಡಿಯೂ ನಿದ್ರಾವಸ್ಥೆಗೆ ಸರಿಯಿತು, ಆದರೆ ದೇಹದೊಳಗಿನ ಯಾವುದೋ ಅರಿವು ಮಾತ್ರ ಬೆಳಕಿನಂತೆ ಉರಿಯುತ್ತ ಎಚ್ಚರವಾಗಿತ್ತು. ಒಳಗಿನ ಆ ಅರಿವು ದೀಪದಂತೆ ಉರಿಯುತ್ತಿದ್ದರೂ ದೇಹದ ವಿಶ್ರಾಂತಿಗೆ ಕಿಂಚಿತ್ತೂ ಬಾಧೆಯಾಗುತ್ತಿರಲಿಲ್ಲ. ದೇಹದಲ್ಲಿ ನಿದ್ರೆಯ ಸುಪ್ತಸ್ಥಿತಿ, ಅಂತರಂಗದಲ್ಲಿ ಎಚ್ಚರದ ಚರಮಸ್ಥಿತಿ ಎರಡೂ ಏಕಕಾಲಕ್ಕೆ ಸಂಭವಿಸಿತ್ತು. ಒಬ್ಬನೇ ವ್ಯಕ್ತಿ ಎರಡಾದಂತೆ, ಎರಡು ಧ್ರುವಗಳು, ಎರಡು ವೈರುದ್ಧ್ಯಗಳು ಒಂದಾದಂತೆ ಆಗಿತ್ತು. ಇಂಥ ವಿಚಿತ್ರ ನಿದ್ದೆಯನ್ನು ಮಾಡುತ್ತಿದ್ದ ನನಗೆ ರಾತ್ರಿ ೧೨ ಗಂಟೆಗೆ ಎಚ್ಚರವಾಯಿತು. ಎಚ್ಚರವಾದಾಗ ನಾನು ಮೊದಲಿನ ನಾನಾಗಿರಲಿಲ್ಲ. ನನ್ನ ಅಡಿಪಾಯವೇ ಅಲುಗಿದಂತೆ ಆಗಿತ್ತು. ನನ್ನ ಇರುವಿಕೆಯೇ ಹಿಗ್ಗಿ ಒಂದು ಅಗಾಧವಾದ ಗಾತ್ರವನ್ನು ಪಡೆದುಕೊಂಡಂತೆ, ನಾನು ಬೆಳಕಿನ ಚಂಡಮಾರುತದ ಸ್ವರೂಪವನ್ನು ಪಡೆದುಕೊಂಡಂತೆ ಅನುಭವವಾಯಿತು. ಇದು ಭ್ರಾಂತಿಯಲ್ಲ, ಇದರ ಮುಂದೆ ವಾಸ್ತವ ಎನಿಸಿಕೊಂಡ ಹೊರಗಿನ ಬದುಕು ಭ್ರಾಂತಿಯಂತೆ ತೋರಿತು. ಇದೊಂದೆ ನಿಜ, ಸ್ವತಃ ನನ್ನ ದೇಹವೂ ಭ್ರಾಂತಿ ಎಂಬಂತೆ ತೋರಿತು. ಬುದ್ಧ ಹಾಗು ಆದಿಶಂಕರರು ಬದುಕನ್ನು ಏಕೆ ಮಾಯೆಯೆಂದು, ಕನಸೆಂದು ಕರೆಯುತ್ತಾರೆ ಎಂಬುದು ಆಗ ನನಗೆ ಹೊಳೆದಿತು. ಈ ಅನುಭವವಾಗದೇ ಅವರನ್ನು ಅರ್ಥಮಾಡಿಕೊಳ್ಳ ಹೋದರೆ ಅದು ಬರೀ ಒಂದು ಸಿದ್ಧಾಂತ ಎಂದು ತೋರುತ್ತದೆ. ಆ ಅಗಾಧವಾದ ಘನವಸ್ತುವನ್ನು ಏನೆನ್ನುವುದು, ಅದನ್ನೇ ಬುದ್ಧ ’ಧಮ್ಮ’ ಎಂದು ಕರೆದದ್ದೇ, ಅದಕ್ಕೇನು ಹೆಸರು?..ನೋಡಿದರೆ ಕಾಣಬರುತ್ತಿದೆ, ಮುಟ್ಟಿದರೆ ಕೈಗೆ ಸಿಗುತ್ತಿಲ್ಲ. ಆ ಅಗಾಧವಾದ ಘನವಸ್ತುವಿನೊಂದಿಗೆ ನನ್ನ ಸಣ್ಣ ಕೋಣೆಯಲ್ಲಿ ನನಗೆ ಉಸಿರುಕಟ್ಟಿದಂತಾಯಿತು. ಹೊರಗೆ ಬಂದು ವಿಶಾಲವಾದ ಆಕಾಶದ ಕೆಳಗೆ, ನಕ್ಷತ್ರಗಳ ಮಧ್ಯೆ ನಿಲ್ಲಬೇಕು ಎನಿಸಿತು. ಆಕಾಶವೂ ಕಿರಿದಾದ ಅವಕಾಶ ಎನಿಸುವಷ್ಟು ಆ ಘನವಸ್ತು ನನ್ನೊಳಗೆ ಹಿಗ್ಗಿ ಸೃಷ್ಟಿ ಸಮಸ್ತವನ್ನು ವ್ಯಾಪಿಸಿಕೊಂಡಿತ್ತು. ಆಗ ಹತ್ತಿರದಲ್ಲೇ ಇದ್ದ ಒಂದು ತೋಟದ ಕಡೆಗೆ ಧಾವಿಸಿದೆ. ಅಂತಹ ನಡಿಗೆಯನ್ನು ನಾನು ಹಿಂದೆಂದೂ ನಡೆದಿರಲಿಲ್ಲ. ನಡೆಯುವಾಗ ಆಕಾಶದಲ್ಲಿ ಈಜುತ್ತಿದ್ದೇನೆ ಎನ್ನಿಸುತ್ತಿತ್ತು. ಭೂಮಿ ತನ್ನ ಗುರುತ್ವ ಬಲವನ್ನು ಕಳೆದುಕೊಂಡ ಅನುಭವವಾಯಿತು. ಮೊದಲ ಬಾರಿಗೆ ನಾನು ಏಕಾಂಗಿಯಲ್ಲ ಎಂಬ ಅನುಭವವಾಯಿತು. ಆದಿ ಅನಾದಿಗಳಿಲ್ಲದ ಇಡೀ ಸೃಷ್ಟಿಸಮಸ್ತವೇ ನನ್ನೊಳಗೆ ಹುದುಗಿರುವಂತೆ ಭಾಸವಾಗುತ್ತಿತ್ತು. ಈಗ ನಾನು ಏನು ಬೇಕಾದರೂ ಮಾಡಬಲ್ಲೆ ಎನ್ನುವಂತಹ ಅಗಾಧವಾದ ಶಕ್ತಿಯ ಸಂಚಲನ ನನ್ನೊಳಗಾಗಿತ್ತು. ಆ ಮಧ್ಯರಾತ್ರಿಯಲ್ಲಿ ಆ ಉದ್ಯಾನವನಕ್ಕೆ ಬೀಗ ಹಾಕಿದ್ದರಿಂದ ಕಳ್ಳನಂತೆ ಗೋಡೆ ಹಾರಿ ಉದ್ಯಾನವನವನ್ನು ಪ್ರವೇಶಿಸಿದೆ. ಇದನ್ನೆಲ್ಲ ನನ್ನ ಇಚ್ಛೆ, ನನ್ನ ಸಂಕಲ್ಪ ವಶದಿಂದ ಮಾಡುತ್ತಿರಲಿಲ್ಲ. ಇದೆಲ್ಲ ತನ್ನಿಂದ ತಾನೇ ಘಟಿಸುತ್ತಿತ್ತು, ನಾನು ಸುಮ್ಮನೆ ತೇಲುತ್ತಿದ್ದೆ. ಉದ್ಯಾನವನವನ್ನು ಪ್ರವೇಶಿಸಿದಾಗ ಅಲ್ಲಿನ ಪ್ರತಿಯೊಂದು ಗಿಡ ಮರವೂ, ಪ್ರತಿಯೊಂದು ವಸ್ತುವೂ ಜಾಜ್ವಲ್ಯಮಾನವಾಗಿ ಹೊಳೆಯುತ್ತಿರುವಂತೆ ತೋರಿತು. ಮೊದಲ ಬಾರಿಗೆ ಪ್ರತಿಯೊಂದು ವಸ್ತುವಿನೊಳಗೂ ತುಂಬಿರುವ ಜೀವಚೈತನ್ಯ ನನಗೆ ಗೋಚರವಾಗುತ್ತಿತ್ತು. ಅದರಲ್ಲೂ ಒಂದು ಮರವು ನನ್ನನ್ನು ತನ್ನತ್ತ ತೀವ್ರವಾಗಿ ಸೆಳೆಯುತ್ತಿತ್ತು. ನಾನು ಹೋಗಿ ಆ ಮರದಡಿ ಕುಳಿತೆ. ಸೃಷ್ಟಿ ಸಮಸ್ತವೂ ಒಂದು ಅನುಗ್ರಹದ ರೂಪದಲ್ಲಿ ಗೋಚರವಾಗುತ್ತಿತ್ತು. ಮೂರು ಗಂಟೆಗಳ ಕಾಲ ನಾನು ಅಲ್ಲಿ ಕುಳಿತಿದ್ದೆ. ಆ ಮೂರು ಘಂಟೆಗಳು ನನ್ನ ಪಾಲಿಗೆ ಶಾಶ್ವತತೆಯ ಅನುಭವ ನೀಡಿತ್ತು. ಆ ಕಾಲಾವಧಿಯಲ್ಲಿ ಒಂದು ಪವಾಡವೇ ಸಂಭವಿಸಿತ್ತು. ಆಗ ಸತ್ಯ ತನ್ನ ಶುದ್ಧಾಂಗ ರೂಪದಲ್ಲಿ ನನಗೆ ಸಾಕ್ಷಾತ್ಕಾರವಾಗಿತ್ತು. ಅಂದು ಘಟಿಸಿದ ಆ ಸಾಕ್ಷಾತ್ಕಾರ ಇಂದಿಗೂ ನನ್ನಲ್ಲಿ ಸಂಭವಿಸುತ್ತಲೇ ಇದೆ. ಅದೇ ಅನುಭವ ಇಂದಿನವರೆಗೂ ಮುಂದುವರೆಯುತ್ತಿದೆ ಎಂದಲ್ಲ, ಆ ಸಾಕ್ಷಾತ್ಕಾರ ಪ್ರತಿಕ್ಷಣವೂ ಜೀವಂತವಾಗಿ, ನನ್ನ ಉಸಿರಾಟದಂತೆ ನನ್ನೊಂದಿಗಿದೆ.
ಆ ರಾತ್ರಿ ನಾನು ಈ ದೇಹದಿಂದ ಮತ್ತೆ ಒಂದಾಗದ ಹಾಗೆ ಬೇರ್ಪಟ್ಟೆ. ಇದರ ಸಂಗಡವೇ ಇದ್ದರೂ ಮತ್ತೆ ಇದನ್ನು ನಾನು ಈತನಕ ಪ್ರವೇಶಿಸಿಯೇ ಇಲ್ಲ. ಆ ರಾತ್ರಿ ನಾನು ಕಠೋರನೂ ಹೌದು, ತುಂಬ ಮೃದುವೂ ಹೌದು ಎಂಬ ಅನುಭವವಾಯಿತು. ಆ ಕಠೋರತೆ ಎಂದರೆ ಬಂಡೆಯ ಕಲ್ಲಿನ ಕಾಠಿಣ್ಯ ಎಂಬರ್ಥದಲ್ಲಲ್ಲ ಹಾಗೆಯೇ ಮೃದುತ್ವ ಎಂದರೆ ಹೂವಿನ ಕೋಮಲತೆ ಎಂದಲ್ಲ. ಇದನ್ನೇ ನಾನು ಪವಾಡ ಎಂದು ಕರೆದದ್ದು. ಪ್ರತಿದಿನ ಎಚ್ಚರವಾದಾಗಲೂ ’ಅರೆ, ನಾನಿನ್ನೂ ಇಲ್ಲೇ ಇರುವೆನಲ್ಲ’ ಎಂದೆನಿಸುತ್ತದೆ. ಆಗ ಈ ಸೃಷ್ಟಿ ಸಮಸ್ತವು ಇನ್ನೂ ಈ ದೇಹದಲ್ಲಿ ನೆಲೆಸಿರಬೇಕು ಎಂದು ನಿರ್ಧರಿಸಿಕೊಂಡಿದೆ ಎಂದು ಕೊಳ್ಳುತ್ತೇನೆ. ಏಕೆಂದರೆ ನನ್ನ ಸ್ವ ಇಚ್ಛೆಯಿಂದ ನಾನು ಈ ದೇಹಕ್ಕೆ ಅಂಟಿಕೊಳ್ಳುವುದನ್ನು ಅಂದೇ ನಿಲ್ಲಿಸಿದ್ದೆ.

No comments:

Post a Comment